ಈ ಪುಟವನ್ನು ಪ್ರಕಟಿಸಲಾಗಿದೆ

ಆದಾದ ಮೇಲೆ ಮತ್ತೆ ಬೀದಿ. ಯಾವುದು ನನ್ನ ಮನೆ? ಯಾರು ನನ್ನವರು? ಎಲ್ಲಿಗೆ ನನ್ನ ಪಯಣ?.....ನಾನು ನಡೆಯು ತ್ತಲೇ ಇದ್ದೆ.ಇನ್ನು ಜನ ಸಂಚಾರ ಮತ್ತಷ್ಟು ನಿಬಿಡವಾಗುವುದು. ಆ ಮೇಲೆ, ಬೂದು ಕೋಟು ಹೊದ್ದುಕೊಂಡು. ಕೈ ದೊಣ್ಣೆಯಿಂದ ನೆಲವನ್ನು ಕುಟ್ಟಿ ಟಕ್ ಟಕ್ ಸದ್ದು ಮಾಡುತ್ತಾ ಸೀಟಿ ಊದಿ ಕೊಂಡು, ಪೋಲೀಸರು ಬರುವರು-ಗಸ್ತಿನ ಪೋಲೀಸರು.

ಇವರ ಬಗ್ಗೆ, ನಾನು ಯೋಚಿಸಬೇಕಾದ್ದಿರಲಿಲ್ಲ.ಆದರೆ, ಆ ಬಿ.ಎ.ಕಟ್ಟಿದ ಹುಡುಗನ ತಂದೆಯಾದ ಪೋಲೀಸು ಅಧಿಕಾರಿ, ಫೈಲು ಸಿದ್ದವಾಗುತ್ತಿದೆ ಎಂದಿದ್ದನಲ್ಲವೆ? ಆ ಫೈಲು.....ಇನ್ನು ನಾನು ಮಹತ್ವದ ವ್ಯಕ್ತಿ. ನಾನು ಎತ್ತ ತಿರುಗಿದರೂ ಏನ್ನು ಮಾಡಿ ದರೂ, ತಮ್ಮ ಡೈರಿಯಲ್ಲಿ ಅದನ್ನು ಅವರು ಬರೆದಿಡುವರು-ತಾವು ಕಂಡರೆ, ತಮಗೆ ಗೊತ್ತಾದರೆ ಬರೆದಿಡುವುದು. ನನ್ನ ಫೈಲು ದಪ್ಪ ದಪ್ಪನಾಗುತ್ತ ಹೋಗುವುದು.

ಇದೊಂದು ತಮಾಷೆ. ಆ ಫೈಲನ್ನು ಓದಿ ನೋಡಬೇಕೆಂಬ ಆಸೆ ನನಗೆ. ಬೇರೆಯವರು ನಮ್ಮನ್ನು ಕಾಣುವ ರೀತಿಯನ್ನು ತಿಳಿದು ಕೊಳ್ಳುವುದರಲ್ಲೂ ಸ್ವಾರಸ್ಯವಿರುತ್ತದೆಲ್ಲವೆ?........

ನಡೆಯುತ್ತಾ ನಾನು ಆ ಹೈಸ್ಕೂಲಿನತ್ತ ಬಂದೆ. ಅಜ್ಜಿಯ ಮರಣದಿಂದ ನಿನ್ನೆಯವರಿಗೆ, ಎಷ್ಟೋ ಕಾಲ ಕಳೆದಿತ್ತು. ಆದರೆ ಎಲ್ಲವೂ ಏಕ ಪ್ರಕಾರವಾದ ದಿನಗಳು. ಕಾಲ ಕಳೆದಿತ್ತು, ಆದರೆ ನನ್ನ ಜಗತ್ತು ಚಲಿಸಿರಲಿಲ್ಲ. ಈಗ ಮಾತ್ರ ನಾನು ಎಷ್ಟೊಂದು ದೂರ ಬಂದ ಹಾಗಾಯ್ತು-ಎಷ್ಟೊಂದು ದೂರ!

ನನಗೆ ಆಯಾಸವಾಗಿತ್ತು. ಆ ಹೈಸ್ಕೂಲಿನ ಆವರಣವನ್ನು ನಾನು ಹೊಕ್ಕೆ. ನಗರದ ಇನ್ನೊಂದು ಮೂಲೆಯಲ್ಲಿ, ಹಿಂದೆ ನಾನು ಓದುತ್ತಿದ್ದ ಹೈಸ್ಕೂಲಿತ್ತು. ಆದರೆ ಅಲ್ಲಿ ಓದು ಪೂರ್ಣವಾಗಿರಲ್ಲಿಲ. ಇಲ್ಲಿ ಈ ಹೈಸ್ಕೂಲಿನ ಜಗಲಿಯ ಮೇಲೆ, ಕೈ ತೋಳನ್ನೆ ದಿಂಬಾಗಿ ಮಾಡಿ ನಾನು ಮಲಗಿಕೊಂಡಾಗ, ಒಂದೊಂದು ತರಗತಿಯಲ್ಲೂ ಕಲಿತ, ವಿಧ ವಿಧದ ಪಾಠಗಳು ನೆನಪಿಗೆ ಬಂದವು. ಒಂದು ಕಾಲ