ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರತಿ ಕೊಂಡುಕೊಂಡೆ. ಮನೆ ಸೇರಿ ಆ ಕಥೆಯನ್ನೋದಿದೆ.

ಎಷ್ಟೊಂದು ಸರಳವಾಗಿ ಕಲಾತ್ಮಕವಾಗಿತ್ತು ಆ ಕಥೆ! 'ಸೋಲಿನ ಬಳಿಕ'.. ಹೌದು, ಏನು ಆ ಬಳಿಕ? ಕೆಲಸಗಾರರು ನಡೆ ಸಿದ ಹೋರಾಟದ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾಗಿ ಆ ಕಥಾ ವಸ್ತು ರೂಪುಗೊಂಡಿತ್ತು... ಮೊದಲು ವಿಜಯ, ಆ ಬಳಿಕ ಸೋಲು - ಅನಿವಾರ್ಯದ ಸೋಲು. ಆಮೇಲೆ ಮತ್ತೆ ಮುನ್ನಡೆ. ಕಥೆಯ ನಾಯಕನಾದ ಸಾಮಾನ್ಯ ಕೂಲಿಗಾರನೊಬ್ಬನ ಬಾಯಿಂದ ಕತೆಯ ಕೊನೆಯಲ್ಲಿ ಮಾತುಗಳು ಹೊರಡುತ್ತಿದ್ದವು:

"ಇಂಗೇ ಇರೋಕಾತದ? ಇಂಥ ನಾಯಿ ಬಾಳು ಬಾಳೋ ಕಾತದ? ಒಂದಿವ್ಸ-ಎರಡ್ದಿವ್ಸ ಇಂಗಿರ್ಬೋದು, ಆದರೆ ಯಾವಾಗ್ಲೂ ಇಂಗೇ ಇರೋಕಾತದ? ಗಿಡ ಕಡದ್ರೆ ತಿರ್ಗಾ ಚಿಗರ್ತೇತೆ. ಮರ ಕಡಿದ್ರೆ ಬುಡ ಚಿಗರ್ಕೋತದೆ. ಹೆಂಡ್ತಿ ಬಸಿರು ಕಳ್ದೋದ್ರೆ ಮತ್ತೆ ಮಗ ಆಗಕಿಲ್ವಾ.......... ಅಂಗೇ ಕಣ್ರಪ್ಪೋ...... ತಿರ್ಗ ಚಿಗತ್ಕೋತದೆ ಸಂಘ... ಬ್ಯಾಸ್ಗೇನೆ ಯಾವಗ್ಲೂ ಇದ್ದಾತಾ? ಮಳೆ ಬತ್ತದೆ ಕಣ್ರಪೋ. ಮಳೆ ಬತ್ತದೆ.... ಬರಾಕಿಲ್ಲಾ ಅನ್ನೋಕಾದಾತಾ? ಬತ್ತದೆ ಕಣ್ರಪೋ, ಬಂದೇ ಬತ್ತದೆ..."

ಓದುತ್ತ ನನ್ನ ಕಣ್ಣು ಮಂಜಾಯಿತು... ಒಂದು ಕತೆಗೆ ಈ ರೀತಿ ಹೃದಯವನ್ನು ಹಿಡಿದು ಅಲುಗಿಸುವ ಸಾಮರ್ಥ್ಯವಿತ್ತೆಂಬುದು ನನಗೆ ಗೊತ್ತಿರಲಿಲ್ಲ. ,

ಕೃಷ್ಣರಾಜರದೊಂದು ಕತೆ....

ಶ್ರೀಕಂಠನನ್ನು ಆ ಸಂಜೆ ಕಾಣಬೇಕಾಗಿದ್ದ ನಾನು ಅತ್ತ

ಹೋಗದೆ, ನಾರಾಯಣನನ್ನು ಹುಡುಕಿಕೊಂಡು ಹೋದೆ. ಹಗುರ ವಾಗಿದ್ದ ಹೃದಯ, ನನ್ನನ್ನು ತಿಳಿದುಕೊಳ್ಳುವ ಸಾಮರ್ಥ್ಯವಿದ್ದ ಇನ್ನೊಂದು ಹೃದಯದ ಸಾಮಿಪ್ಯಕ್ಕಾಗಿ ಹಾತೊರೆಯುತಿತ್ತು.

ಬಾಗಿಲು ತೆರೆದ ಕಮಲಾ ಕೇಳಿದಳು.

"ಇದಾರೆ, ಬನ್ನಿ. ಬಹಳ ದಿನಗಳ ಮೇಲೆ ಬಂದಿದೀರಿ."

"ಹೂನಮ್ಮ, ಬರೋಕಾಗಲೇ ಇಲ್ಲ."