ಈ ಪುಟವನ್ನು ಪ್ರಕಟಿಸಲಾಗಿದೆ

ಬರುತ್ತಿದ್ದೆ. ಅಜ್ಜಿಗೆ ವಯಸ್ಸಾಗುತ್ತಲಿತ್ತು. ಆದರೂ ಆಕೆ ನನ್ನ ಬದಲು ತಾನೇ ಸೆಗಣಿ ಎತ್ತತೊಡಗಿದರು. ಆಕೆ ಮಡಿಯಲ್ಲಿದ್ದಾಗ ನಾನು ಸಮೀಪ ಹೋಗುತ್ತಿರಲ್ಲಿಲ್ಲ. ಆದರೆ ಒಮ್ಮೊಮ್ಮೆ ಮಡಿಯನ್ನೂ ಮರೆತು ದೊಡ್ಡ ಮನುಷ್ಯನಾಗಲಿದ್ದ ನನ್ನನ್ನು ಗೇಲಿಮಾಡುತ್ತಾ ಮಾಡುತ್ತಾ ಮೈ ಮುಟ್ಟುತ್ತಿದ್ದರು. ಆಮೇಲೆ, "ಅಯ್ಯೊ ಪಾಪಿ ಮುಂಡೇಗಂಡ!" ಎಂದು ಪ್ರೀತಿಯಿಂದ ಶಪಿಸುತ್ತಾ, ಬಾವಿಯಿಂದ‌

ನೀರು ಸೇದಿ ತಲೆಗೆ ತಣ್ಣೀರು ಸುರಿದುಕೊಳ್ಳುತ್ತಿದ್ದರು.

ತಂದೆಯ ವಿದ್ಯಾಪಾಂಡಿತ್ಯದ ಮಟ್ಟವನ್ನು ಮೀರಿ ನಾನು ಹೋಗಿದ್ದೆ. ಆತನ ಪಾಲಿಗೆ. ನಾನು ಹೆಚ್ಚು ವಿದ್ಯಾವಂತ. ಈ ಪ್ರಪಂಚದಲ್ಲಿ ಆತನಿಗೆ ಮುಖ್ಯವಾಗಿ ತೋರುತ್ತಿದ್ದುದು-ಎರಡೇ ವಸ್ತುಗಳು. ಒಂದು ವಿದ್ಯೆ; ಇನ್ನೊಂದು ಹಣ. ವಿದ್ಯೆಗೆ 'ಅವನು ಗೌರವಕೊಡುತ್ತಿದ್ದ. ಹಣಕ್ಕೆ ಹೆದರುತ್ತಿದ್ದ. ಆತನನ್ನು ಕಂಡಾಗ ನನ್ನ ಮುಖ ಬಾಡುತ್ತಿತ್ತು. ಆತನ ಯಾತನೆಗೆಲ್ಲಾ ನಾನೇ ಕಾರಣ ನೆಂಬ ಗ್ರಹಿಕೆ ನನ್ನನ್ನು ಬಾಧಿಸುತ್ತಿತ್ತು. ಅವನು ಯಾವಾಗಲೂ ಒಳ್ಳೆಯವನೇ ಆಗಿದ್ದ, ಸತ್ಯವಾದಿಯಾಗಿದ್ದ. ಯಾರಿಗೂ ಬಾಗಿ ನಡೆಯುತ್ತಿರಲಿಲ್ಲ. ಆದರೆ ಅದು ಹಿಂದಿನ ಮಾತು. ಈಗಲೂ ಆತ ಒಳ್ಳೆಯವನಾಗಿದ್ದ ನಿಜ. ಆದರೆ ದಿನ ನಿತ್ಯದ ಕೆಲಸದ ನಡುವೆ ಸತ್ಯ ಹೇಳಿದರೆ ನಷ್ಟ ಉಂಟೆಂಬುದನ್ನು ಅವನು ಕಲಿತಿದ್ದ. ಅವನ ಬಡತನವನ್ನು ಕಂಡು ಅಣಕಿಸುತ್ತಿದ್ದ ಶಕ್ತಿಗಳಿಗೆ, ಅವನು ಬಾಗಿ ನಡೆ ಯಲೇಬೇಕಾಗಿತ್ತು. ಮಗನನ್ನು ವಿದ್ಯಾವಂತನಾಗಿ ಮಾಡುವ ಮಹಾ ಯಾಗದ ಅಗ್ನಿಕುಂಡದಲ್ಲಿ ಆತನ ಜೀವ ಸ್ವಲ್ಪ ಸ್ವಲ್ಪವಾಗಿ ಸುಟ್ಟು ಸುಣ್ಣವಾಗುತ್ತಿತ್ತು.

ಒಂದು ದಿನ ಸ್ವಲ್ಪ ಬೇಗನೆ ಶಾಲೆಗೆ ಹೋಗಿದ್ದೆ. ಹುಡುಗರು ಅದೇ ಆಗ ಒಬ್ಬೊಬ್ಬರಾಗಿ ಬರುತ್ತಿದ್ದರು. ನಾನು ಹೆಬ್ಬಾಗಿಲನ್ನು ಸಮೀಪಿಸುತ್ತಿದ್ದಂತೆ ದೊಡ್ಡಡೊಂದು ಕಾರು ಹಾರನ್ ಮಾಡುತ್ತಾ ಬಂತು. ಬೆಲೆ ಬಾಳುವ ಉಣ್ಣೆಯ ಪೋಷಾಕು ಧರಿಸಿ ಜರಿಯ ರುಮಾಲು ಸುತ್ತಿದ್ದ ದೊಡ್ಡಮನುಷ್ಯರೊಬ್ಬರು ಒಳಗೆ ಕುಳಿತಿದ್ದರು.