ಈ ಪುಟವನ್ನು ಪ್ರಕಟಿಸಲಾಗಿದೆ

ನಾನು ಅಜ್ಜಿಗೆ ಉದ್ದಂಡ ನಮಸ್ಕಾರ ಮಾಡಿದೆ. ಆಕೆಯ ಪಾದಗಳನ್ನು ಹಿಡಿದುಕೊಂಡೆ.

"ನನ್ನ ಕ್ಷಮಿಸ್ಬೇಕು ಅಜ್ಜಿ. ನಾನು ಬೊಂಬಾಯಿಗೆ ಹೋಗ್ತೀನಿ ಅಜ್ಜಿ. ಒಂದು ವರ್ಷದೊಳಗೆ ವಾಪಸ್ಸು ಬರ್ತೀನಜ್ಜಿ. ಆಮೇಲೆ ನಿಮ್ಮನ್ನ ಬಿಟ್ಟು ಎಲ್ಲಿಗೂ ಹೋಗೋದಿಲ್ಲ ಅಜ್ಜಿ."

ಅಜ್ಜಿ ಮೌನವಾಗಿದ್ದರು. ಆ ದಿನವೆಲ್ಲಾ ಆಕೆಯ ಹೃದಯ ಬುದ್ಧಿ ತಿಳಿಯದ ಮರಿಗಾಗಿ ಮಿಡಿದುಕೊಂಡಿರಬೇಕು.

ನಾನು ಹೊರಟು ನಿಂತಾಗ. ಚಿಲ್ಲರೆ ಖರ್ಚಿಗೆಂದು ಅಜ್ಜಿ ಹದಿನೈದು ರೂಪಾಯಿ ಕೊಟ್ಟರು. ರವೆ ಉಂಡೆ, ಕೋಡುಬಳೆ, ಚಕ್ಕುಲಿಗಳ ಗಂಟು ಕಟ್ಟಕೊಟ್ಟರು. ನನ್ನಿಂದ ಮಾತನಾಡುವುದಾಗಲೇ ಇಲ್ಲ. "ಎಂಥ ಕಟುಕ ನೀನು, ಪಾಪಿ ನೀನು" ಎನ್ನುತ್ತಿತ್ತು, ಮನಸ್ಸಿನೊಂದು ಭಾಗ.

ಅಜ್ಜಿ ನನಗೆ ಆಶೀರ್ವಾದ ಮಾಡಿದರು.

"ಏನಾದರೂ ಕೆಲಸ ನೋಡ್ಕೊಂಡು ಒಂದು ವರ್ಷ ಸುಖವಾಗಿರು ಚಂದ್ರು. ಆಮೇಲೆ ಬಂದ್ದಿಡು, ಖಂಡಿತ ಬಂದ್ದಿಡು."

"............ಹೂನಜ್ಜಿ."

"ಕಾಗದ ಬರೀತಾ ಇರು ಚಂದ್ರು..........ತಪ್ಪದೆ ಬರೀತಾಇರು."

"ತಪ್ಪದೆ ಬರೀತೀನಿ ಅಜ್ಜಿ."

ಮುಂದುವರೆಯಲು ನಿರಾಕರಿಸುತ್ತಿದ್ದೆ ಕಾಲುಗಳನ್ನು ಎಳೆದು ಕೊಂಡು ನಾನು ಬೀದಿಗಿಳಿದೆ. ಮುಂದೆ ನಡೆದು ರಸ್ತೆ ತಿರುಗುವಲ್ಲಿ ಹಿಂತಿರುಗಿ ನೋಡಿದೆ. ಕೆಂಪು ಸೀರೆಯುಟ್ಟದ್ದ ಅಜ್ಜಿ ಮನೆಯ ಮುಂದೆ ಬೀದಿಯ ಅಂಚಿನಲ್ಲಿ ನಿಂತು ನನ್ನನ್ನೇ ನೋಡುತ್ತಿದ್ದರು. ನನಗೆ ತಡೆಯಲಾಗಲಿಲ್ಲ. "ವಾಪಸ್ಸು ಓಡು, ತಪ್ಪಾಯಿತು ಎನ್ನು," ಎಂದಿತು ಅರ್ಧ ಮನಸ್ಸು. ಆದರೆ ಇನ್ನೊಂದರ್ಧ ಅದಕ್ಕಿಂತಲೂ ಹೆಚ್ಚು ಬಲವಾಗಿತ್ತು. ನಾನು ವೇಗವೇಗವಾಗಿ ಹೆಜ್ಜೆಯಿಟ್ಟು ರೈಲು ನಿಲ್ದಾಣ ಸೇರಿದೆ.