ಈ ಪುಟವನ್ನು ಪರಿಶೀಲಿಸಲಾಗಿಲ್ಲ.

18

ಇಲ್ಲ. ಆ ಮಟದ ಆಜೂಬಾಜೂನಲ್ಲಿ ನಾವೀಗ ಸುಳುದಾಡೋದು ಮುಕ್ಸ ಬಂದ್!... ಅದ್ಕೆ ಗೌಡ್ರು ನಿನ್ನ ಮದ್ಯಸ್ತಿಕೆ ಮಾಡಿಕಂಡವ್ರೆ... ಬಾ ಬಾ, ಕ್ವಡ್ತೀನಿ. ತಕಂಡೋಗೀವಂತೆ...” ಇಸ್ಪೀಟು ಎಲೆ ಎಸೆದು ಬೈಲಿಗೆ ರಂಗ ವೊಂಟ. ಲಕ್ಕ ಅವ್ನ ಹಿಂದುಗಟ್ಕೆ ವೋದ- ಊರ್ನ ಕೊನೀಕೆ ಅಗ್ನಿ ಮೂಲೇಲಿ ಅವ್ನ ಜೋಪಡಿ...ಜೋಪಡಿ ತಲುಪುತ್ಲೇಯ, ಬೈಲಿಗ ರಂಗ ಜೋರ್ನಿಂದ ಕದ ತಟ್ದ. ವಳುಗ್ನಿಂದ, “ಅಸ್ಸಿ ಯಾವೋನ ಅವ್ನು -ಬೆದೆ ಬಂದೋನ ತರ, ಒಂದೆ ಸಮಕೆ ಇಂಗೆ ಕದ ಕುಟ್ಟೋನು?” ಬೈತ ಬೈತ, ನಿದ್ದ ಕಣ್ಣ ಹ್ವಸಗ್ತ ಅವನ ಎಂಗಸು ಕದ ತಗಿಯಕ್ಕೆ ಸುಮಾರು ವ್ಯಾಳ್ಯವೇ ಇಡೀತು-ಗಂಡಯ್ನ ನ್ವಾಡಿಮ್ಯಾಲಂತೂ ಉರಿದುಪ್ಪಾಗಿ, “ಮಾರಿಗುಡಿ ಬುಟ್ಟು ಇಲ್ಯಾಕೆ ಬಂದಿದ್ದೀ-ನಿಂಗೆ ಎಡತಿ ಯಾಕೆ? ಹಕ್ಕಳ್ಯಾಕೆ? -ನಿನ್ನ ಆ ಬರಬಿಜ್ಜಾರು ಬಂದು ವೊತ್ತಗಂಡು ವೊಗಬಾರ್ದ!...ಆ ಮಟದಯ್ಯ ಒಬ್ಬ ಕೇಡಿಗ ಬಂದ ಊರ್ಗೆ-ಹಿಂದಿದ್ದ ಅಯ್ಯನೋರು ದ್ಯಾವರಂತ ಮನುಸ್ರು! ಈವಯ್ಯ ನಿಂಗೆ, ನಿನ್ನ ಪೋಲಿ ಪಟಾಲಂಗೆ ಎಲ್ಲಾರ್ಗೂವೆ ದುಡ್ಡು ಕ್ವಟ್ಟು ಕುಡುಸಿ, ನಿಮ್ಮ ಕೆಯ್ಲಿ ಮಾಡಬಾರದ್ದ ಮಾಡ್ಸಿ ಊರ್ನೆ ನಿಪಾತಗೊಳಸ್ತಾ ಅವ್ನೆ ಅಂತ ವಳುವಳಗೆ ವಸಿ ಜನ ಗುಸಗುಸಗುಟ್ತಾ ಅವ್ರೆ. ಇನ್ನೊಸಿ ಜನ ಇದ್ಕೆಲ್ಲ ಆ ನಂಜೇಗೌಡ್ನೆ ಕೇತು ಅಂತಾನು ಯೋಳೋದ ಕೇಳಿವ್ನಿ... ಯಾರು ಸಾಚವೊ ಯಾರು ಪಾಚವೊ- ಆ ಜಡೆಮುನೀಗೆ ಗ್ವತ್ತು... ಅದೆಂಗಾರು ಆಗ್ಲಿ ಕನ, ನೀ ಯಾಕೆ ಬಂದೆ ಇಲ್ಲಿ? ಆ ಮಾರಿಗುಡೀಲೇಯ ನಿಮ್ಮಪ್ಪನ ಚಪ್ಪೋಡು ಅಂತ ಬಿದ್ದುಕೋ ವೋಗು.” ಅರಳು ಸಿಡಿಯೋವಂಗೆ ಸಿಡುದ್ಲು. ಬೈಲಿಗ ರಂಗ ಕಿಲಾಡಿ. ಒಂದು ಮಾತ್ನೂ ಆಡದೆ ಆಯಿದು ರೂಪಾಯಿ ನೋಟ ವಳುಗಿಸೆಯಿಂದ ತಗ್ದು ಅವಳ ಕೈಯಾಗಿಟ್ಟ. “ಈ ರೂಪಾಯಿ ಯಾವ ಮುಂಡೆಗೆ ಬೇಕಾಗಿತ್ತು?” ಅಂತ ಅಂತಾನೆ ತನ್ನ ರವಿಕೆ ವಳೀಕೆ ಅದ್ನ ಇಳಿಬುಟ್ಟಲು... ಅಲ್ಲಿಂದ ಮುಂದ್ಕೆ ಮಾತ್ನೆಲ್ಲ ನಿಲ್ಲುಸಿ, ತನ್ನ ಗಂಡಯ್ಯ ಬೆಂಕಿಕಡ್ಡಿ ಕೀರಿ, ಸೀಮೆಯೆಣ್ಣೆ ಬುಡ್ಡಿ ಕತ್ತಿಸಿ, ವಳುಕ್ವಾಣೆ ಮೂಲೇಲಿ, ಗೋಣಿ ತಾಟ್ನಲ್ಲಿ ಸುತ್ತಿಟ್ಟಿದ್ದ ಅತ್ತು ಬಾಟ್ಲಿಗಳ ಎತ್ತ ಲಕ್ಕನ ಕಯ್ಯಿಗಿಡಾದ್ನೆ ಗುರುಕಾಯ್ಸಿ ನ್ವಾಡ್ತಿದ್ದು, ಲಕ್ಕ ಆ ಬಾಟ್ಲಿಗಳ ತಕ್ಕಂಡು ವೋರಿಕೊಂಡಿದ್ದೇ ತಡ, ತನ್ನ ಗಂಡನೂವೆ ಲಕ್ಕನ ಬಾಲಂಗಚ್ಯಾಗಿ ಕಾಲಿಟ್ಟಿದ್ದ ಕಂಡು, “ನೀಯೆಲ್ಲೀಗೆ ವೊಂಟಿದ್ದಿಯೊ ನನ್ನ ಅಳೇನ ಮಗನೆ?” –ಅರಚಿ, ಅವ್ನ