ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೭

ಯಶೋಧರ ಚರಿತೆ


ಅಭಯರುಚಿಕುಮಾರಂ ಮಾರಿದತ್ತಂಗೆ ಹಿಂಸಾ-

ರಭಸಮತಿಗೆ ಸಯ್ಪಂ ಪೇಳ್ದ ಧರ್ಮಕ್ಕೆ ತಂದೀ

ಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯ

ಪ್ರಭು ಸಭೆಗೆಸೆದಿರ್ಕುಂ ಮಂಗಳಂ ಶ್ರೀ ವಿಲಾಸಂ 85


ಶ್ರೀಗಿರಿದುರ್ಗಮಲ್ಲನೃಪರಾಜ್ಯದ ವತ್ಸರಮುತ್ತರೋತ್ತರ-

ಕ್ಕಾಗಿರೆ ಶುಕ್ಲದಾಶ್ವಯುಜಕೃಷ್ಣದ ಪಂಚಮಿ ಪುಷ್ಯತಾರೆ ಪೂ-

ರ್ಣಾ ಗುರುವಾಗೆ ಭೂಸತಳದೊಳೀ ಕೃತಿ ಪೆತ್ತುದು ಸುಪ್ರತಿಷ್ಠಯಂ

ಚಾಗದ ಭೋಗದಗ್ಗಳಿಕೆಯಂ ಮೆಳೆಂದಂ ಕವಿಭಾಳಲೋಚನಂ 86


ಪರಮಜಿನೇಂದ್ರ ಶಾಸನವಸಂತದೊಳೀ ಕೃತಿ ಕೋಕಿಲಸ್ವನಂ

ಪರೆಗಸಹಾಯಶೂರನ ಭುಜಕ್ಕೆ ಜಯಂ ಸಮಸಲ್ಗೆ ಸಂತತಂ

ಪರಿಮಳದಂತೆ ವಾಣಿ ನೆಲಸಿರ್ಕೆ ವಿಕಾಸವಿಲಾಸದಂತೆವೊಲ್

ಸಿರಿ ನೆರೆದಿರ್ಕೆ ನಾಳ್ಪ್ರಭು ಜನಾರ್ಧನದೇವನ ವಕ್ತ್ರಪದ್ಮದೊಳ್ 87

_____

85. ಹಿಂಸೆಯಲ್ಲೇ ಮನಸ್ಸು ಮುಂದಾಗುತ್ತಿದ್ದ ಮಾರಿದತ್ತನಿಗೆ ಅಭಯರುಚಿ ಕುಮಾರನು ಪುಣ್ಯದ ವಿಷಯವನ್ನು ಹೇಳಿ ಅವನನ್ನು ಧರ್ಮದ ದಾರಿಗೆ ತಂದನು. ಇಂತಹ ಈ ಮಂಗಲಕರವಾದ ಕಥೆಯನ್ನು ಅತ್ಯಾನಂದದಿಂದ ಕೇಳುವ ಭವ್ಯಪ್ರಭು ಸಭೆಗೆ ಮಂಗಲಕರವಾದ ಸಂಪದ್ವಿಲಾಸವು ಶೋಭಿಸುತ್ತದೆ. 86. ಶ್ರೀ ಗಿರಿದುರ್ಗ ಮಲ್ಲರಾಜನ ರಾಜ್ಯದ ವತ್ಸರವು ಉತ್ತರೋತ್ತರ ಉತ್ಕರ್ಷಕ್ಕಾಗಿ ಇರುವಾಗ ಶುಕ್ಲ ಸಂವತ್ಸರದ ಆಶ್ವೀಜ ಕೃಷ್ಣಪಂಚಮಿ ಪುಷ್ಯ ನಕ್ಷತ್ರದ ಗುರುವಾರ ಈ ಕೃತಿ ಒಳ್ಳೆಯ ಪ್ರತಿಷ್ಠೆಯನ್ನು ಪಡೆಯಿತು. ಈ ಲೋಕದಲ್ಲಿ ತ್ಯಾಗದ ಭೋಗದ ಅಗ್ಗಳಿಕೆಯನ್ನು ಕವಿಭಾಳಲೋಚನನು ಮೆರೆದನು. 87. ಶ್ರೇಷ್ಠನಾದ ಜಿನೇಂದ್ರನ ಶಾಸನ (ಧರ್ಮ)ವೆಂಬ ವಸಂತದಲ್ಲಿ ಈ ಕಾವ್ಯವೆಂಬ ಕೋಗಿಲೆಯ ಧ್ವನಿ ಪಸರಿಸಲಿ! ಅಸಹಾಯ ಶೂರನ(ಬಲ್ಲಾಳನ) ಬಾಹುವಿಗೆ ಜಯವೊದಗಲಿ! ನಾಡೊಡೆಯನಾದ ಜನಾರ್ದನ ದೇವ (ಜನ್ನ)ನ ಮುಖ ಕಮಲದಲ್ಲಿ ಯಾವಾಗಲೂ ಸರಸ್ವತಿಯು ಪರಿಮಳದಂತೆ ನೆಲಸಿರಲಿ! ವಿಕಾಸದ ಚೆಲುವಿನಂತೆ ಲಕ್ಷ್ಮಿ ಸೇರಿಕೊಂಡಿರಲಿ!