ಪ್ರಥಮದಲ್ಲಿ ವಸ್ತು ಅನಿರ್ವಾಚ್ಯವಾಗಿದ್ದಿತ್ತು.



Pages   (key to Page Status)   


ಪ್ರಥಮದಲ್ಲಿ ವಸ್ತು ಅನಿರ್ವಾಚ್ಯವಾಗಿದ್ದಿತ್ತು. ಆ ಅನಿರ್ವಾಚ್ಯವಾಗಿದ್ದ ಪರವಸ್ತು ತನ್ನ ಲೀಲೆಯಿಂದ ತಾನೇ ಪರಬ್ರಹ್ಮವೆಂಬ ನಾಮವಾಯಿತ್ತು ! ಆ ನಾಮವನೆಯ್ದಿ ಕುಳವಾಯಿತ್ತು
ಆ ಕುಳದಿಂದ ಆತ್ಮನೆಂಬ ಲಿಂಗಸ್ಥಲವಾಯಿತ್ತು. ಆ ಸ್ಥಳ ಕುಳದೊಳಗೆಯ್ದಿ ಸ್ಥಳಕುಳವೆಂಬ ಎರಡಿಲ್ಲದೆ ನಿಂದಿತ್ತು. ಅದೆಂತೆಂದಡೆ: ವಾಙ್ಮನಕ್ಕಗೋಚರವಾದ ಪ್ರರಬ್ರಹ್ಮದಿಂದಾಯಿತ್ತು ಭಾವ
ಭಾವದಿಂದಾಯಿತ್ತು ಜ್ಞಾನ
ಜ್ಞಾನದಿಂದಾಯಿತ್ತು ಮನ
ಮನದಿಂದಾಯಿತ್ತು ಬುದ್ಧಿ
ಬುದ್ಧಿಯಿಂದಾಯಿತ್ತು ಚಿತ್ತ
ಚಿತ್ತದಿಂದಾಯಿತ್ತು ಅಹಂಕಾರ. ಇಂತು_ಅಹಂಕಾರ ಚಿತ್ತ ಬುದ್ಧಿ ಮನ ಜ್ಞಾನ ಭಾವ ಎಂದು ಆರಾದವು. ಈ ಆರೂ ಕೆಟ್ಟಲ್ಲದೆ ವಾಙ್ಮನಕ್ಕಗೋಚರವಾದ ಪರಬ್ರಹ್ಮವಾಗಬಾರದು. ಇದ ಕೆಡಿಸುವುದಕ್ಕೆ ಆರು ಸ್ಥಲವಾದವು. ಅವಾವೆಂದಡೆ: ಅಹಂಕಾರ ಅಡಗಿದಾಗ ಭಕ್ತಸ್ಥಲ
ಚಿತ್ತದ ಗುಣ ಕೆಟ್ಟಾಗ ಮಾಹೇಶ್ವರಸ್ಥಲ ಬುದ್ಧಿಯ ಗುಣ ಕೆಟ್ಟಾಗ ಪ್ರಸಾದಿಸ್ಥಲ
ಮನೋಗುಣ ಅಳಿದಾಗ ಪ್ರಾಣಲಿಂಗಸ್ಥಲ
ಜೀವನ ಗುಣ ಸಂದಾಗ ಶರಣ ಸ್ಥಲ ಭಾವ ನಿರ್ಭಾವವಾದಾಗ ಐಕ್ಯಸ್ಥಲ. ಇಂತು ಷಟ್ಸ್ಥಲವಾಗಿ ವಾಙ್ಮನಕ್ಕೆ ಅಗೋಚರವಾದ ಬ್ರಹ್ಮವೆ ಆತ್ಮನು. ಆ ಆತ್ಮನಿಂದ ಆಕಾಶ ಹುಟ್ಟಿತ್ತು
ಆ ಆಕಾಶದಿಂದ ವಾಯು ಹುಟ್ಟಿತ್ತು. ಆ ವಾಯುವಿನಿಂದ ಅಗ್ನಿ ಹುಟ್ಟಿತ್ತು
ಆ ಅಗ್ನಿಯಿಂದ ಅಪ್ಪು ಹುಟ್ಟಿತ್ತು. ಆ ಅಪ್ಪುವಿನಿಂದ ಪೃಥ್ವಿ ಹುಟ್ಟಿತ್ತು. ಇಂತು_ಕುಳಸ್ಥಳವಾಗಿ ಸ್ಥಳಕುಳವಾದ ವಿವರವೆಂತೆಂದಡೆ: ಪೃಥ್ವಿ ಅಪ್ಪುವಿನೊಳಡಗಿ
ಅಪ್ಪು ಅಗ್ನಿಯೊಳಡಗಿ
ಅಗ್ನಿ ವಾಯುವಿನೊಳಡಗಿ
ವಾಯು ಆಕಾಶದೊಳಡಗಿ
ಆಕಾಶ ಆತ್ಮನೊಳಡಗಿತ್ತು
ಆತ್ಮ ಪರಶಿವನಲ್ಲಿ ಅಡಗಿತ್ತು ! ಇಂತು_ಷಡಂಗವಡಗಿದ ಪರಿ ಎಂತೆಂದಡೆ: ``ಪೃಥ್ವೀ ಭವೇತ್ ಜಲೇ
ಜಲೇ ಮಗ್ನಾಜಲಂ ಗ್ರಸ್ತಂ ಮಹಾಗ್ನಿನಾ ವಾಯೋರಸ್ತಮಿತಂ ತೇಜೋ ವ್ಯೋಮ್ನಿ ವಾತೋ ವಿಲೀಯತೇ ವ್ಯೋಮ್ಯೋತ್ಮನಿ ವಿಲೀನಂ ಸ್ಯಾತ್ ಆತ್ಮಾ ಪರಶಿವೇ ಪದೇ _ ಎಂದುದಾಗಿ ಆತ್ಮನು ಪರಬ್ರಹ್ಮದೊಳಡಗಿ ನಿಂದಿತ್ತು ಗುಹೇಶ್ವರಾ.