ಬಂದುದನತಿಗಳೆದು ಬಾರದುದ ಬಯಸೆನೆಂಬುದು



Pages   (key to Page Status)   


ಬಂದುದನತಿಗಳೆದು ಬಾರದುದ ಬಯಸೆನೆಂಬುದು ಒಡಲ ಗುಣಧರ್ಮರಹಿತಂಗಲ್ಲದೆ
ಒಡಲ ಗುಣಧರ್ಮ ಉಳ್ಳವಂಗೆ ಆಗದು ನೋಡಾ. ಅದೆಂತೆಂದಡೆ: ರಾಜಭಯ ಚೋರಭಯ ಮೃಗಭಯ ದೆಸೆಭಯ ಸ್ತ್ರೀಭಯ ಬಂದು ಸೋಂಕಿದಲ್ಲಿ ಹೆಚ್ಚು ಕುಂದಿಲ್ಲದೆ ಒಂದೆ ಸಮವಾಗಿ ಕಾಣಬೇಕು. ಕ್ಷೀರ ಘೃತ ನವರತ್ನ ಆಭರಣ ಮನೆ ಮಂಚ ಹಸು ಧನ ವನಿತೆಯರ ಭೋಗಂಗಳು
ಲಿಂಗದಾಣತಿಯಿಂದ ಬಂದವೆಂದು
ಬಿಡದೆ ಭೋಗಿಸುವ ಅಣ್ಣಗಳು ನೀವು ಕೇಳಿರೊ
ಮದಸೊಕ್ಕಿದಾನೆ ಪೆರ್ಬುಲಿ ಕಾಳೋರಗ ಮಹಾಜ್ವಾಲೆ ಅಪ್ರಯತ್ನದಿಂದ ಬಂದು ಸಂಧಿಸೆ
ಸಂದು ಸಂಶಯವಿಲ್ಲದೆ `ಲಿಂಗದಾಣತಿ' ಎನ್ನದಿದ್ದಡೆ ಸ್ವಯವಚನ ವಿರುದ್ಧ ನೋಡಾ. ಇದು ಜೀವಜಾಲಂಗಳ ಉಪಾಧಿಕೆಯಲ್ಲದೆ ನಿರುಪಾಧಿಕೆಯಲ್ಲ. ಪೇಯಾಪೇಯವನರಿದು ಭೋಗಿಸಬೇಕು. ಭಯ ಲಜ್ಜೆ ಮೋಹ ಉಳ್ಳನ್ನಕ್ಕರ ಎಂತಪ್ಪುದೊ ? ಇದು ಕಾರಣ_ಅಂಗಕ್ಕಾಚಾರ
ಭಾವಕ್ಕೆ ಕೇವಲ ಜ್ಞಾನ. ಬಂದಿತ್ತು ಬಾರದು ಎಂಬ ತಥ್ಯಮಿಥ್ಯ ರಾಗದ್ವೇಷವನಳಿದು ತನ್ನ ನಿಜದಲ್ಲಿ ತಾನೆ ಪರಿಣಾಮಿಯಾಗಿಪ್ಪ[ನು] ಗುಹೇಶ್ವರಾ ನಿಮ್ಮ ಶರಣ.