ಬಚ್ಚಬರಿಯ ಆ ಬಯಲೊಳಗೊಂದು


Title vachana saahitya
Author ಷಣ್ಮುಖಸ್ವಾಮಿ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಬಚ್ಚಬರಿಯ ಬಯಲೊಳಗೊಂದು ಅಚ್ಚ ಅಂಕುರ ಹುಟ್ಟಿ ಅಣುಚಕ್ರವೆನಿಸಿತ್ತು. ಆ ಅಣುಚಕ್ರದಿಂದಾಯಿತ್ತು ಪಶ್ಚಿಮಚಕ್ರ. ಆ ಪಶ್ಚಿಮಚಕ್ರದಿಂದಾಯಿತ್ತು ಶಿಖಾಚಕ್ರ. ಆ ಶಿಖಾಚಕ್ರದಿಂದಾಯಿತ್ತು ಬ್ರಹ್ಮಚಕ್ರ. ಆ ಬ್ರಹ್ಮಚಕ್ರದಿಂದಾಯಿತ್ತು ಆಜ್ಞಾಚಕ್ರ. ಆ ಆಜ್ಞಾಚಕ್ರದಿಂದಾಯಿತ್ತು ವಿಶುದ್ಧಿಚಕ್ರ. ಆ ವಿಶುದ್ಧಿಚಕ್ರದಿಂದಾಯಿತ್ತು ಅನಾಹತಚಕ್ರ. ಆ ಅನಾಹತಚಕ್ರದಿಂದಾಯಿತ್ತು ಮಣಿಪೂರಕಚಕ್ರ. ಆ ಮಣಿಪೂರಕಚಕ್ರದಿಂದಾಯಿತ್ತು ಸ್ವಾದ್ಥಿಷ್ಠಾನಚಕ್ರ. ಆ ಸ್ವಾದ್ಥಿಷ್ಠಾನಚಕ್ರದಿಂದಾಯಿತ್ತು ಆಧಾರಚಕ್ರ. ಆ ಆಧಾರಚಕ್ರಕ್ಕೆ ಚತುರ್ದಳ. ಆ ಚತುರ್ದಳದಲ್ಲಿ ಚತುರಕ್ಷರಂಗಳು. ಆ ಚತುರಕ್ಷರಂಗಳ ಮಧ್ಯ ಬೀಜಾಕ್ಷರವೇ ನಕಾರಪ್ರಣವ. ಆ ನಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಆಚಾರಲಿಂಗ. ಅದರಿಂದ ಮೇಲೆ ಸ್ವಾದ್ಥಿಷ್ಠಾನಚಕ್ರವಿರ್ಪುದು. ಆ ಚಕ್ರಕ್ಕೆ ಷಡುದಳ. ಆ ಷಡುದಳಂಗಳಲ್ಲಿ ಷಡಕ್ಷರಂಗಳು. ಆ ಷಡಕ್ಷರಂಗಳ ಮಧ್ಯ ಬೀಜಾಕ್ಷರವೇ ಮಕಾರಪ್ರಣವ. ಆ ಮಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಗುರುಲಿಂಗ. ಅದರಿಂದ ಮೇಲೆ ಮಣಿಪೂರಕಚಕ್ರವಿರ್ಪುದು. ಆ ಚಕ್ರಕ್ಕೆ ದಶದಳ. ಆ ದಶದಳಂಗಳಲ್ಲಿ ದಶಾಕ್ಷರಂಗಳು. ಆ ದಶಾಕ್ಷರಂಗಳ ಮಧ್ಯ ಬೀಜಾಕ್ಷರವೇ ಶಿಕಾರಪ್ರಣವ. ಆ ಶಿಕಾರ ಪ್ರಣವ ಪೀಠದ ಮೇಲೆ ಬೆಳಗುತಿರ್ಪುದು ಶಿವಲಿಂಗ. ಅದರಿಂದ ಮೇಲೆ ಅನಾಹತಚಕ್ರವಿರ್ಪುದು. ಆ ಚಕ್ರಕ್ಕೆ ದ್ವಾದಶದಳ. ಆ ದ್ವಾದಶದಳಂಗಳಲ್ಲಿ ದ್ವಾದಶಾಕ್ಷರಂಗಳು. ಆ ದ್ವಾದಶಾಕ್ಷರಂಗಳ ಮಧ್ಯ ಬೀಜಾಕ್ಷರವೇ ವಕಾರಪ್ರಣವ. ಆ ವಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಜಂಗಮಲಿಂಗ. ಅದರಿಂದ ಮೇಲೆ ವಿಶುದ್ಧಿಚಕ್ರವಿರ್ಪುದು. ಆ ಚಕ್ರಕ್ಕೆ ಷೋಡಶದಳ. ಆ ಷೋಡಶದಳಂಗಳಲ್ಲಿ ಷೋಡಶಾಕ್ಷರಂಗಳು. ಆ ಷೋಡಶಾಕ್ಷರಂಗಳ ಮಧ್ಯ ಬೀಜಾಕ್ಷರವೇ ಯಕಾರಪ್ರಣವ. ಆ ಯಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಪ್ರಸಾದಲಿಂಗ. ಅದರಿಂದ ಮೇಲೆ ಆಜ್ಞಾಚಕ್ರವಿರ್ಪುದು. ಆ ಚಕ್ರಕ್ಕೆ ದ್ವಿದಳ. ಆ ದ್ವಿದಳಂಗಳಲ್ಲಿ ದ್ವಯಾಕ್ಷರಂಗಳು. ಆ ದ್ವಯಾಕ್ಷರಂಗಳ ಮಧ್ಯ ಬೀಜಾಕ್ಷರವೇ ಒಂಕಾರಪ್ರಣವ. ಆ ಓಂಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಮಹಾಲಿಂಗ. ಅದರಿಂದ ಮೇಲೆ ಬ್ರಹ್ಮಚಕ್ರವಿರ್ಪುದು. ಆ ಚಕ್ರಕ್ಕೆ ಸಹಸ್ರದಳ. ಆ ಸಹಸ್ರದಳಂಗಳಲ್ಲಿ ಸಹಸ್ರಾಕ್ಷರಂಗಳು. ಆ ಸಹಸ್ರಾಕ್ಷರಂಗಳ ಮಧ್ಯ ಬೀಜಾಕ್ಷರವೇ ನಿಷ್ಕಲಪ್ರಣವ. ಆ ನಿಷ್ಕಲಪ್ರಣವಪೀಠದ ಮೇಲೆ ಬೆಳಗುತಿರ್ಪುದು ನಿಷ್ಕಲಲಿಂಗ. ಅದರಿಂದ ಮೇಲೆ ಶಿಖಾಚಕ್ರವಿರ್ಪುದು. ಆ ಚಕ್ರಕ್ಕೆ ತ್ರಿದಳ. ಆ ತ್ರಿದಳಂಗಳಲ್ಲಿ ತ್ರಯಾಕ್ಷರಂಗಳು. ಆ ತ್ರಯಾಕ್ಷರಂಗಳ ಮಧ್ಯ ಬೀಜಾಕ್ಷರವೇ ಶೂನ್ಯಪ್ರಣವ. ಆ ಶೂನ್ಯಪ್ರಣವಪೀಠದ ಮೇಲೆ ಬೆಳಗುತಿರ್ಪುದು ಶೂನ್ಯಲಿಂಗ. ಅದರಿಂದ ಮೇಲೆ ಪಶ್ಚಿಮಚಕ್ರವಿರ್ಪುದು. ಆ ಚಕ್ರಕ್ಕೆ ಏಕದಳ. ಆ ಏಕದಳದಲ್ಲಿ ಸರ್ವರಂಜನೆಯನೊಳಕೊಂಡು ವಾಚಾತೀತವೆನಿಸುವ ನಿರಂಜನಪ್ರಣವ. ಆ ನಿರಂಜನ ಪ್ರಣವಪೀಠದ ಮೇಲೆ ಬೆಳಗುತಿರ್ಪುದು ನಿರಂಜನಲಿಂಗ. ಇಂತೀ ತರುವಾಯದಿಂದೆ ಆಧಾರ ಸ್ವಾದ್ಥಿಷ್ಠಾನದಲ್ಲಿ ಲಯ
ಆ ಸ್ವಾದ್ಥಿಷ್ಠಾನ ಮಣಿಪೂರಕದಲ್ಲಿ ಲಯ. ಆ ಮಣಿಪೂರಕ ಅನಾಹತದಲ್ಲಿ ಲಯ. ಆ ಅನಾಹತ ವಿಶುದ್ಧಿಯಲ್ಲಿ ಲಯ. ಆ ವಿಶುದ್ಧಿ ಆಜ್ಞೆಯಲ್ಲಿ ಲಯ. ಆ ಆಜ್ಞೆ ಬ್ರಹ್ಮಚಕ್ರದಲ್ಲಿ ಲಯ. ಆ ಬ್ರಹ್ಮಚಕ್ರ ಶಿಖಾಚಕ್ರದಲ್ಲಿ ಲಯ. ಆ ಶಿಖಾಚಕ್ರ ಪಶ್ಚಿಮಚಕ್ರದಲ್ಲಿ ಲಯ. ಆ ಪಶ್ಚಿಮಚಕ್ರ ಅಣುಚಕ್ರದಲ್ಲಿ ಲಯ. ಆ ಅಣುಚಕ್ರ ನಿರವಯಲಲ್ಲಿ ಲಯ. ಆ ನಿರವಯಲು ನಿಜವ ಕೂಡಿ ಸಹಜವಾದಲ್ಲಿ ಅಖಂಡೇಶ್ವರನೆಂಬ ಶಬ್ದ ಮುಗ್ಧವಾಯಿತ್ತು.