ಬ್ರಹ್ಮ ನಿಮ್ಮ ಬಲ್ಲಡೆ ನಿರ್ಮಾಲ್ಯವಹನೆ ? ವಿಷ್ಣು ನಿಮ್ಮ ಬಲ್ಲಡೆ ಭುಜವ ಸುಡಿಸಿಕೊಂಬನೆ ? ಶ್ರವಣ ನಿಮ್ಮ ಬಲ್ಲಡೆ ಬತ್ತಲೆಯಾಗಿ ತಲೆಯ ತರಿಸಿಕೊಂಬನೆ ? ಕೃತಯುಗದಲ್ಲಿ ಶಿವನ ಹೊಗಳುವ ವೇದವನೋದಿ ಗಜಯಾಗವ ಮಾಡಿ ಆನೆಯ ತಿನ್ನ ಹೇಳಿತ್ತೆ ನಿಮ್ಮ ವೇದ ? ತ್ರೇತಾಯುಗದಲ್ಲಿ ಶಿವನ ಹೊಗಳುವ ವೇದವನೋದಿ ಅಶ್ವಯಾಗವ ಮಾಡಿ ಕುದುರೆಯ ಕೊಂದು ತಿನ್ನ ಹೇಳಿತ್ತೆ ನಿಮ್ಮ ವೇದ ? ದ್ವಾಪರಯುಗದಲ್ಲಿ ಶಿವನ ಹೊಗಳುವ ವೇದವನೋದಿ ಮಹಿಷಹೋಮವ ಮಾಡಿ ಕೋಣನ ಕೊಂದು ತಿನ್ನ ಹೇಳಿತ್ತೆ ನಿಮ್ಮ ವೇದ ? ಕಲಿಯುಗದಲ್ಲಿ ಶಿವನ ಹೊಗಳುವ ವೇದವನೋದಿ ಅಜಯಾಗವ ಮಾಡಿ ಹೋತನ ಕೊಂದು ತಿನ್ನ ಹೇಳಿತ್ತೆ ನಿಮ್ಮ ವೇದ ? ಬ್ರಾಹ್ಮಣನೆ ದೈವವೆಂದಾರಾಧಿಸಿ Uõ್ಞತಮ ಗೋಹಂತೃವಾದುದಿಲ್ಲವೆ ? ಬ್ರಾಹ್ಮಣನೆ ದೈವವೆಂದಾರಾಧಿಸಿ ಪಂಚಪಾಂಡವರು ದೇಶಭ್ರಷ್ಟರಾಗರೆ ? ಬ್ರಾಹ್ಮಣನೆ ದೈವವೆಂದಾರಾಧಿಸಿ ಹರಿಶ್ಚಂದ್ರ ಚಂಡಾಲಗೆ ಮಾರಿಸಿಕೊಳ್ಳನೆ ? ಬ್ರಾಹ್ಮಣನೆ ದೈವವೆಂದಾರಾಧಿಸಿ ಬಲಿಚಕ್ರವರ್ತಿ ಬಂಧನಕ್ಕೊಳಗಾಗನೆ ? ಬ್ರಾಹ್ಮಣನೆ ದೈವವೆಂದಾರಾಧಿಸಿ ಮುಕ್ತಿಗೆ ಸಂದವರಿಲ್ಲ. ಬಲ್ಲಡೆ ನೀವು ಹೇಳಿರೊ
ಅರಿಯದಿದ್ದರೆ ನೀವು ಕೇಳಿರೊ: ನಮ್ಮ ಜಂಗಮಲಿಂಗವ ದೈವವೆಂದಾರಾಧಿಸಿ; ಬಾಹೂರ ಬೊಮ್ಮಯ್ಯಗಳು ಕಲ್ಲ ನಂದಿಗೆ ಕಬ್ಬು ಮೇಯಿಸಿದ್ದಲ್ಲವೆ ? ನಮ್ಮ ಜಂಗಮಲಿಂಗವ ದೈವವೆಂದಾರಾಧಿಸಿ ಗೊಬ್ಬೂರ ಬಿಬ್ಬಿಬಾಚಯ್ಯಗಳು ಪ್ರಸಾದದಿಂದ ಗೊಬ್ಬೂರ ಸುಟ್ಟುದಿಲ್ಲವೆ ? ನಮ್ಮ ಜಂಗಮಲಿಂಗವ ದೈವವೆಂದಾರಾಧಿಸಿ ಶಂಕರ ದಾಸಿಮಯ್ಯಗಳು ಸರ್ವಭೂತಂಗಳ ಕೈಯಲ್ಲಿ ಕೊಟ್ಟಣವ ಕುಟ್ಟಿಸಲಿಲ್ಲವೆ ? ನಮ್ಮ ಜಂಗಮಲಿಂಗವ ದೈವವೆಂದಾರಾಧಿಸಿ ಹಾವಿನಹಾಳ ಕಲ್ಲಯ್ಯಗಳು ಶ್ವಾನನ ಬಾಯಿಂದ ವೇದವನೋದಿಸಲಿಲ್ಲವೆ ? ನಮ್ಮ ಜಂಗಮಲಿಂಗವ ದೈವವೆಂದಾರಾಧಿಸಿ ಸಿಂಧುಬಲ್ಲಾಳ ಸ್ವಯಲಿಂಗಿಯಾಗಲಿಲ್ಲವೆ ? ಅಯ್ಯಾ ನಮ್ಮ ಜಂಗಮಲಿಂಗವ ದೈವವೆಂದಾರಾಧಿಸಿ ಸಿರಿಯಾಳಸೆಟ್ಟಿ ಕಂಚಿಪುರವ ಕೈಲಾಸಕ್ಕೆ ಕೊಂಡೊಯ್ಯಲಿಲ್ಲವೆ ? ಅಯ್ಯಾ ನಮ್ಮ ಜಂಗಮಲಿಂಗವ ದೈವವೆಂದಾರಾಧಿಸಿ ಮುಂದೆ ನುತಿಸಿ ಹಿಂದೆ ಆಡಿಕೊಂಬ ಪರವಾದಿ ಹೊಲೆಯರ ಬಾಯಲ್ಲಿ ನಮ್ಮ ಪಡಿಹಾರಿ ಉತ್ತಣ್ಣಗಳ ಎಡದ ಪಾದರಕ್ಷೆಯ ಅಂಗುಳವ ಮೆಟ್ಟಿಕ್ಕುವನೆಂದ ಕೂಡಲಚೆನ್ನಸಂಗಮದೇವ