೩.ಅನರ್ಥ ಬೀಜ
ಸಂಪಾದಿಸಿಅಮರರಿಗೂ ಅಸುರರಿಗೂ ಅಲ್ಲಲ್ಲಿ ಕೈ ಕೈ ಸೇರುತ್ತಿದೆ. ಅಮರರ ಏಟು ಬಲವಾಗಿದ್ದರೂ ವಿಜಯವು ಅಸುರರ ಪಾಲಾಗುತ್ತಿದೆ. ಎಲ್ಲಿ ಯಾವ ಲೋಕಪಾಲನ ಮೇಲೆ ಅಸುರರು ಧಾಳಿಯಿಡಿಯುವರೋ ಎಂಬ ಸಂಶಯವು ಅಮರರಿಗೆ ತಾನೇ ತಾನಾಗುತ್ತಿದೆ.
ಅಸುರ ವಿಜಯದ ಸುದ್ದಿಗಳೂ ಅಮರೇಂದ್ರನಿಗೆ ಗುಚ್ಛ ಗುಚ್ಛವಾಗಿ ಬರುತ್ತಿವೆ. ಇದುವರೆಗೆ ರಾಕ್ಷಸರೆಂದರೆ ಲಕ್ಷ್ಯವಿಲ್ಲದೆ ಇದ್ದ ದೇವರಾಜನಿಗೆ ಈಗ ಏಕೋ ಹೆದರಿಕೆಯಾಗುತ್ತಿದೆ. ಸಮುದ್ರದ ಹೃದಯದಂತೆ ಗಂಭೀರವಾಗಿದ್ದ ಮನವು ಸಮುದ್ರದ ಮೇಲ್ಮೈಯಂತೆ ಕ್ಷುಬ್ಧವಾಗುತ್ತಿದೆ. ಈ ಸಲವೇನಾದರೂ ತನಗೂ ರಾಕ್ಷಸರಿಗೂ ಪ್ರತ್ಯಕ್ಷವಾಗಿ ಯುದ್ಧವಾದರೆ ತನ್ನ ಗತಿಯೇನಾದಿತೋ ಎಂದು ಹೆದರಿಕೆಯಾಗುತ್ತಿದೆ. ಈ ಸಂದಿಗ್ಧಸ್ಥಿತಿಯಲ್ಲಿಯೇ ಒದ್ದಾಡುತ್ತಿರುವುದೋ? ಅಥವಾ ಅದಕ್ಕೆ ಏನಾದರೂ ಪ್ರತೀಕಾರ ಮಾಡುವುದೋ?
ಒಂದು ದಿನ ಸುರೇಂದ್ರನು ಏಕಾಂತದಲ್ಲಿ ಶಚಿಯೊಡನೆ ಆಲೋಚಿಸಿದನು. “ಇಂದ್ರಾಣಿ, ನನ್ನ ಪ್ರಭಾವವು ಲೋಪವಾಯಿತೇನೋ ಎನ್ನಿಸುತ್ತಿದೆ. ನಾನು ಅಕಾರ್ಯಗಳನ್ನು ಮಾಡಲಿಲ್ಲ. ಆದರೂ ಏಕೋ ಏನೋ ಎದೆಯು ನಡುಗುತ್ತಿದೆ. ಶತ್ರುಗಳನ್ನು ಎದುರಿಸಲಾರೆನೆನ್ನುತ್ತಿದೆ. ಏನು ಮಾಡಿದರೆ ಇದು ಸರಿಹೋದೀತು.”
ಇಂದ್ರಾಣಿಯು ಗಂಡನ ಕಾಲು ಒತ್ತುತ್ತಾ ಹೇಳಿದಳು : “ದೇವ, ಆ ದಿನ ಧರ್ಮಾಚಾರ್ಯರು ಮರೆಯಾದರಲ್ಲ ಅಂದಿನಿಂದ ದೇವಲೋಕಕ್ಕೇ ಒಂದು ಮೋಹವು ಮುಚ್ಚಿದಂತಿದೆ. ನಾನೂ ಈ ವಿಚಾರವನ್ನು ನಿನ್ನ ಬಳಿ ಎತ್ತಬೇಕು ಎಂದಿದ್ದೆ. ಅಲ್ಲದೆ, ನಿನಗೆ ತಿಳಿದಂತೆ ಅಲ್ಲಲ್ಲಿ ನಡೆಯುತ್ತಿರುವ ಕಾಳಗಗಳಲ್ಲಿ ಅಮರರ ಪ್ರತಾಪವು ಹೆಚ್ಚಿದ್ದರೂ ವಿಜಯಮಾಲೆಯು ಅಸುರರಿಗೆ ತಪ್ಪಿದ್ದಲ್ಲ. ಅದರಿಂದ ನಮ್ಮಲ್ಲಿಯೇ ಏನೋ ಲೋಪವಿರಬೇಕು. ಆ ಲೋಪವು ಧರ್ಮಾಚಾರ್ಯರ ಅಭಾವದಿಂದ ಆಗಿರಬೇಕು ಎಂದು ನನಗನ್ನಿಸುತ್ತಿದೆ.”
“ನಿಜ. ಧರ್ಮಲೋಪವಾದರೆ ಏನೇನು ಅನರ್ಥಗಳಾಗುವುವು ಎನ್ನುವುದು ನನಗೆ ಚೆನ್ನಾಗಿ ಗೊತ್ತು. ಅಲ್ಲದೆ, ನಾವು ಕೆಡಿಸಬೇಕೆಂದಿರುವ ಮಾನವರಿಗೆ ಮೊದಲು ಧರ್ಮಲೋಪವಾಗುವಂತೆ ಮಾಡುವೆವು. ಉಚ್ಛ್ರಯವೂ ಧರ್ಮವೂ ಜೊತೆ ಜೊತೆಯಲ್ಲಿರುವವು. ಅದರಿಂದ, ನೀನು ಹೇಳಿದಂತೆ, ಈ ನಮ್ಮ ಪ್ರಭಾವಲೋಪವು ಧರ್ಮಲೋಪದಿಂದ ಆಗಿರಬೇಕು. ಆಗಲಿ ಆದಷ್ಟು ಬೇಗ ಪ್ರಜಾಪತಿಯ ಬಳಿಗೆ ಹೋಗಿ ಈ ಲೋಪವನ್ನು ಸರಿಪಡಿಸಿಕೊಂಡು ಬರುವೆನು.”
ಶಚಿಯು ಕೇಳಿದಳು - “ದೇವತೆಗಳಾದ ನಿಮಗೆ ಆಗಾಗ ಪ್ರಭಾವ ಲೋಪವಾಗುವುದಲ್ಲಾ ಏಕೆ ?” ಇಂದ್ರನು ಹೇಳಿದನು : “ದೇವಿ ಲೋಕದಲ್ಲಿ ಎಲ್ಲವೂ ನಮ್ಮ ನಮ್ಮ ಪೌರುಷದಿಂದಲೇ ನಡೆಯುವುದು ಎಂದು ಎಲ್ಲರ ನಂಬಿಕೆ. ಆದರೆ ನಿಜವಾಗಿ ಹೇಳುವೆನು. ಮತರ್ಯ್‌ಪಾತಾಳಗಳು ದೇವತೆಗಳ ಕೈಯಲ್ಲಿರುವುವು ; ದೇವಲೋಕವು ಕಾಲನ ಕೈಯಲ್ಲಿರುವುದು. ದೇವತೆಗಳಾದ ನಾವು ಕಾಲದ ಸ್ವರೂಪವನ್ನು ಇತರರಿಗಿಂತ ಕೊಂಚ ಹೆಚ್ಚಾಗಿ ಬಲ್ಲೆವು. ಆದರೆ ಕಾಲಸ್ವರೂಪವನ್ನು ಕಂಡವರಿಲ್ಲ. ಆ ಕಾಲದ ಪ್ರಭಾವವೆಂದರೆ ಮೊದಲು ಕೊನೆಯಾಗುವುದು. ಕೊನೆಯು ಮೊದಲಾಗುವುದು. ಅದನ್ನು ಕಾಲಸ್ವರೂಪನಾದ ಮಹಾವಿಷ್ಣುವೊಬ್ಬನು, ಆ ಕಾಲವನ್ನು ಗೆದ್ದಿರುವ ಮಹಾದೇವನು ಇಬ್ಬರಲ್ಲದೆ ಇನ್ನೂ ಯಾರೂ ಕಾಣರು. ಇವರಿಬ್ಬರ ಅನುಗ್ರಹದಿಂದ ಚತುರ್ಮುಖನು ಬಲ್ಲನು. ಅದರಿಂದ ನಾವು ಎಚ್ಚರವಾಗಿದ್ದೂ ತಪ್ಪÅವುದು ಕಾಲದ ಮಹಿಮೆ.
ಶಚಿಯು ಇನ್ನೂ ಏನೋ ಕೇಳಬೇಕು ಎಂದಿದ್ದಳು. ಅಷ್ಟರೊಳಗೆ ಮತ್ತೆ ಗೂಢಚಾರನು ಬಂದು ಅರಿಕೆಮಾಡಿದನು : “ಮಹೇಂದ್ರನಿಗೆ ವಿಜಯವಾಗಲಿ. ಪಾತಾಳಲೋಕದಿಂದ ದಾನವಸೇನೆಯು ಹೊರಟಿರುವುದು. ಯಮಧರ್ಮರಾಜನ ಸಂಯವಿನೀಪುರದತ್ತ ಹೋಗಬಹುದು.”
ಇಂದ್ರನು, “ಇನ್ನು ತಡೆಯಕೂಡದು. ಯಮಧರ್ಮರಾಜನ ಸಹಾಯಾರ್ಥವಾಗಿ ಒಂದು ಕೋಟಿ ದೇವಸೇನೆಯು ಹೋಗಬೇಕು ಎಂದು ಈ ಕೂಡಲೆ ಚಿತ್ರರಥನಿಗೆ ಅಪ್ಪಣೆಯನ್ನು ಕಳುಹಿಸು, ಉಚ್ಛ್ರೆಶ್ರವವು ಸಿದ್ಧವಾಗಲಿ, ನಾನು ಚತುರ್ಮುಖನನ್ನು ಕಂಡುಬರುವೆನು.” ಇಂದ್ರನು ಅವಸರವಾಗಿ ಹೊರಟನು. ಉಚ್ಛೈಶ್ರವವು ಅರಮನೆಯೊಳಕ್ಕೆ ಬಂದಿತು. ಇನ್ನೊಂದು ಗಳಿಗೆಯೊಳಗಾಗಿ ಇಂದ್ರನು ಬ್ರಹ್ಮಲೋಕದ ಹಾದಿಯಲ್ಲಿ ಇದ್ದನು.
ಚತುರ್ಮುಖನು ಶ್ವಾಸವನ್ನು ಅನುಸಂಧಾನ ಮಾಡಿ ನೋಡಿದನು. ಶ್ವಾಸವು “ಅಸುರರು ಗೆದ್ದರೂ ಗೆಲ್ಲಬಹುದು. ಆದರೆ ದೇವರಾಜನು ಬರುತ್ತಿದ್ದಾನೆ. ಆತನ ಪ್ರಯತ್ನದಿಂದ ಅಸುರರಿಗೆ ಪರಾಜಯವಾದರೂ ಆಗಬಹುದು” ಎಂದು ಹೇಳಿತು. ಚತುರ್ಮುಖನು ಎಲ್ಲ ಕೆಲಸವನ್ನೂ ಬಿಟ್ಟು ಕಾಲವನ್ನು ಕುರಿತು ಚಿಂತಿಸಿದನು. “ದೇವತೆಗಳಿಗೆ ಪ್ರಭಾವಲೋಪವಾಗಿದೆಯಾದರೂ ಅಸುರರು ಲೋಕತ್ರಯಾಧಿಪತ್ಯವನ್ನು ವಹಿಸುವ ಕಾಲವು ಇನ್ನೂ ಬಂದಿಲ್ಲ” ಎಂದು ತಿಳಿಯಿತು. ಪ್ರಭಾವಲೋಪವಾಗಿರುವುದು ಏಕೆ ಎಂಬುದನ್ನೂ ವಿಚಾರಮಾಡಿ ನೋಡಿದನು. ‘ಧರ್ಮಾಚಾರ್ಯನಾದ ಬೃಹಸ್ಪತಿಯು ಮರೆಯಾಗಿದ್ದಾನೆ’ ಎಂದು ತಿಳಿಯಿತು. ಬ್ರಹ್ಮನು ತನ್ನ ಪ್ರಭಾವದಿಂದ ಬೃಹಸ್ಪತಿಯನ್ನು ಕರೆದನು. ಬೃಹಸ್ಪತಿಯು ಬಂದು ವಿನಯದಿಂದ “ನನಗೆ ಇನ್ನು ಒಂದು ವರುಷ ಅವಕಾಶ ಕೊಡಬೇಕು, ಅದುವರೆಗೆ ಒಂದು ತಪಸ್ಸು ಮಾಡಬೇಕಾಗಿದೆ” ಎಂದನು. ಬ್ರಹ್ಮನು ನಕ್ಕು ‘ತಪ್ಪಿಸಿಕೊಳ್ಳುವುದಕ್ಕೆ ಕಾರಣವು ಚೆನ್ನಾಗಿದೆ” ಎಂದು ಆತನನ್ನು ಬೀಳ್ಕೊಟ್ಟು ಮುಂದೇನು ಮಾಡಬೇಕು ಎಂದು ಆಲೋಚಿಸಿದನು. ಆತನಿಗೆ ಇಂದ್ರನು ತನಗೊಬ್ಬ ಧರ್ಮಾಚಾರ್ಯನನ್ನು ಹುಡುಕಿಕೊಡು ಎಂದು ಕೇಳಲು ಬರುವನೆಂದು ಗೊತ್ತು.
ಆತನ ಮನಸ್ಸು ಹುಡುಕಿತು : “ಧರ್ಮಾಚಾರ್ಯನಿಗೆ ಇರಬೇಕಾದ ಗುಣಗಳೆಲ್ಲವೂ ಯಾರಲ್ಲಿ ಉಂಟು ? ನವಬ್ರಹ್ಮರು ಸಂತಾನಾರ್ಥವಾಗಿ ತಪಸ್ಸು ಮಾಡುತ್ತಿರುವರು. ಕಶ್ಯಪನ ಮಕ್ಕಳು ಬೇರೆ ಬೇರೆ ಕಾರ್ಯದಲ್ಲಿ ನಿಯೋಜಿತರಾಗಿರುವರು. ದಕ್ಷನ ಮಕ್ಕಳು ಆಗುವುದಿಲ್ಲ ಹೀಗೆ ಚಿಂತಿಸುತ್ತಾ ತ್ವಷ್ಟುೃಬ್ರಹ್ಮನ ಮಗನಾದರೆ ಆಗಬಹುದು” ಎಂದುಕೊಂಡನು. ಆ ವೇಳೆಗೆ ‘ಇಂದ್ರನು ದರ್ಶನಾರ್ಥವಾಗಿ ಬಂದಿರುವನು’ ಎಂದು ಪ್ರಹರಿಯು ಬಂದು ಸೂಚಿಸಿದನು.
ಬ್ರಹ್ಮನು ಇಂದ್ರನನ್ನು ಬರಮಾಡಿಕೊಂಡನು. ಆತನ ಮುಖವನ್ನು ನೋಡುತ್ತಿದ್ದ ಹಾಗೆಯೇ ಆತನಿಗೆ ಆಗಿರುವ ತೇಜೋಹಾನಿಯನ್ನು ಕಂಡುಕೊಂಡು “ಏನು ಸಮಾಚಾರ? ಎಲ್ಲೂ ಇಲ್ಲದ ಅವಸರದಲ್ಲಿ ಬಂದಂತಿದೆ ?” ಎಂದು ಆದರದಿಂದ ವಿಚಾರಿಸಿದನು. ಇಂದ್ರನು ಒಂದು ಗಳಿಗೆ ತಲೆಯನ್ನು ಬಗ್ಗಿಸಿಕೊಂಡಿದ್ದು, “ದೇವಾ, ಎಲ್ಲವನ್ನೂ ಬಲ್ಲೆಯಾದರೂ ಏನೂ ತಿಳಿಯದವನಂತೆ ವಿಚಾರಿಸುತ್ತಿರುವೆ. ಆಗಲಿ, ಅರಿಕೆಮಾಡುವೆನು. ನಮ್ಮ ಧರ್ಮಾಚಾರ್ಯನಾದ ಬೃಹಸ್ಪತಿಯು ಎಲ್ಲಿಯೋ ಅಡಗಿಕೊಂಡಿರುವನು. ನಾವು ಮಾಡಬೇಕಾದ ಕರ್ಮವು ಲೋಪವಾಗಿ ನಮಗೆ ತೇಜೋಹಾನಿಯಗಿರುವುದು. ನಮ್ಮ ತೇಜೋಹಾನಿಯಿಂದ ದೈತ್ಯದಾನವರು ಪ್ರಬಲವಾಗಿ ನಮ್ಮ ಮೇಲೆ ದಾಳಿಯಿಡಬೇಕು ಎಂದಿರುವರು. ಅದರಿಂದ ಅನರ್ಥವಾಗುವ ಮೊದಲೇ ನಮಗೊಬ್ಬ ಧರ್ಮಾಚಾರ್ಯನನ್ನು ಕರುಣಿಸಬೇಕು” ಎಂದು ಬಿನ್ನವಿಸಿಕೊಂಡನು.
ಬ್ರಹ್ಮನು ನಿಟ್ಟುಸಿರು ಬಿಟ್ಟು ಹೇಳಿದನು. “ಇಂದ್ರ, ಕಾರ್ಯವು ಮಿಂಚಿತು. ನೀನು ಸ್ಥಲಾಸ್ಥಲ ಪರಿಗಣವಿಲ್ಲದೆ ನಡೆಸಿದ ಪ್ರಶ್ನೋತ್ತರಗಳ ಫಲವನ್ನು ಅನುಭವಿಸಬೇಕಾಗಿದೆ. ನಾನೇನೋ ನಿನಗೊಬ್ಬ ಧರ್ಮಾಚಾರ್ಯನನ್ನು ಕೊಡುವೆನು. ಆದರೆ ಅದರಿಂದ ಅನರ್ಥವಾಗದಂತೆ ನೋಡಿಕೊಳ್ಳುವುದು ನಿನ್ನ ಕಾರ್ಯ.”
ಇಂದ್ರನು ಬ್ರಹ್ಮದೇವನ ಮಾತಿನ ಅರ್ಥವನ್ನು ಪರಿಗ್ರಹಿಸಿದನು. ಆಗುವ ಕಾರ್ಯದಲ್ಲಿ ಏನೋ ವಿಷಾದಬೀಜವಿದೆಯೆನ್ನಿಸಿತು. ಆದರೂ ಅಧಿಕಾರಸಹಜವಾದ ದರ್ಪದಿಂದ “ಇದನ್ನು ಬ್ರಹ್ಮದೇವನ ಪ್ರಸಾದವೆಂದು ಅಂಗೀಕರಿಸುವೆನು. ಇದರಿಂದ ದೇವಕುಲಕ್ಕೆ ಯಶಸ್ಸಾಗಲಿ ಎಂದು ಸ್ವೀಕರಿಸುವೆನು” ಎಂದು ಕೈ ಮುಗಿದನು. ಬ್ರಹ್ಮನು “ಹಾಗೇ ಆಗಲಿ, ನಿನಗೆ ಈ ಭಾವವಿರುವವರೆಗೂ ಏನೂ ಅನರ್ಥವಾಗದಿರಲಿ” ಎಂದು ಆಶೀರ್ವಾದ ಮಾಡಿ, ಮುಂದಿನ ಧರ್ಮಾಚಾರ್ಯನನ್ನು ಸೂಚಿಸಿದನು; “ತ್ವಷ್ಷೃಬ್ರಹ್ಮನ ಮಗನಾದ ವಿಶ್ವರೂಪಾಚಾರ್ಯನುಂಟಲ್ಲ. ಆತನು ಬೃಹಸ್ಪತಿ ಸಮನು. ಮಹಾತೇಜಸ್ವಿಯು. ಸಾಂಗವಾಗಿ ವೇದಗಳನ್ನು ಬಲ್ಲವನು. ಜೊತೆಗೆ ಶಾಂತ ಘೋರಕ್ರಿಯೆಗಳೆರಡನ್ನೂ ಬಲ್ಲವನು. ಶಾಪಾನುಗ್ರಹಶಕ್ತನು. ಆತನಿಗೆ ಮೂರು ಮುಖಗಳು. ಒಂದರಿಂದ ಯಾವಾಗಲೂ ವೇದಪಾರಾಯಣವನ್ನು ಮಾಡುತ್ತಿರುವನು. ಇನ್ನೊಂದರಿಂದ ಮಾತೃವಂಶದವರಿಂದ ಕಲಿತಿರುವ ಸುರಾಪಾನವನ್ನು ಮಾಡುವನು. ಮತ್ತೊಂದರಿಂದ ನಿನಗೆ ಪೌರೋಹಿತ್ಯವನ್ನು ಮಾಡಿಸುವನು. ನೀನು ಹೋಗಿ ಪ್ರಾರ್ಥಿಸಿದರೆ ದೇವತೆಗಳು ತನಗೆ ಪಿತೃಗಳು ಎಂದು ಗೌರವಿಸಿ ನಿಮ್ಮ ಯಾಜನವನ್ನು ಅಂಗೀಕರಿಸುವನು. ಆತನಲ್ಲಿ ತಪ್ಪಿ ನಡೆದರೆ ನಿನಗೆ ಅನರ್ಥವು ತಪ್ಪದು. ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಆತನನ್ನು ದೇವಾಚಾರ್ಯನಾಗುವಂತೆ ಪ್ರಾರ್ಥಿಸಿ ಒಪ್ಪಿಸು” ಎಂದನು.
ಇಂದ್ರನು ಬ್ರಹ್ಮದೇವನಿಗೆ ಯಥೋಚಿತವಾಗಿ ಸಮರ್ಚನವನ್ನು ಒಪ್ಪಿಸಿ, ಆತನ ಅಪ್ಪಣೆಯನ್ನು ಪಡೆದು ವಿಶ್ವರೂಪನಲ್ಲಿಗೆ ಹೊರಟನು. ಆತನು ಎಲ್ಲವನ್ನೂ ಕೇಳಿ “ಬ್ರಹ್ಮನಪ್ಪಣೆಯೆಂದು, ಪಿತೃಗಳ ಸೇವೆಯೆಂದು ನಾನು ಈ ಕಾರ್ಯವನ್ನು ನನಗೆ ಇಷ್ಟವಿಲ್ಲದಿದ್ದರೂ ವಹಿಸಿಕೊಳ್ಳುವೆನು. ಅದರೆ, ನಾನು ಯಾವಾಗಲೂ ನನಗೆ ತೋರಿದಂತೆ ನಡೆಯುವವನು. ಒಬ್ಬರ ಅಂಕೆ ಸಂಕೆಗಳಿಗೆ ಬಗ್ಗುವವನಲ್ಲ” ಎಂದು ಹೇಳಿ ಧರ್ಮಾಚಾರ್ಯತ್ವವನ್ನು ಒಪ್ಪಿಕೊಂಡನು. ಇಂದ್ರನು ಆತನ ಸತತ ಸುರಾಪಾನದಲ್ಲಿ ಅಭಿರುಚಿಯಿಲ್ಲದವನಾದರೂ ದೇವಲೋಕದಲ್ಲಿ ವಿಶ್ವರೂಪನು ಸರಿಹೋಗಬಹುದು ಎಂದು ಆತನ ನಿಯಮಗಳೊಡನೆ ಆತನನ್ನು ಒಪ್ಪಿಕೊಂಡನು.