ಇಂದ್ರನಾದನು
ನಹುಷ ಚಕ್ರವರ್ತಿಯು ಸತೀದ್ವಿತೀಯನಾಗಿ ಹಂಸತೂಲಿಕಾತಲ್ಪದಲ್ಲಿ ಮಲಗಿದ್ದಾನೆ. ಶಯ್ಯಾಮಂದಿರದ ನಾಲ್ಕು ಮೂಲೆಗಳಲ್ಲಿ ರತ್ನಖಚಿತವಾಗಿ ಸುವರ್ಣಮಯವಾದ ದೀಪದ ಮಲ್ಲಿಗಳು ಸುವಾಸಿತಘೃತತೈಲಗಳ ದೀಪಗಳನ್ನು ಹೊತ್ತು ನಿಂತಿವೆ. ಗೋಡೆಗಳಲ್ಲಿರುವ ಜೀವರತ್ನಗಳು ಆ ದೀಪಗಳ ಕಾಂತಿಯ ಕಿರಣಗಳನ್ನು ಪ್ರತಿಫಲಿಸಿ ಮಂದಿರವೆಲ್ಲವೂ ಮಂದಪ್ರಭಾಸುಂದರವಾಗುವಂತೆ ಮಾಡಿವೆ. ಆ ಗೋಡೆಗಳ ಮೇಲೆ ಇರುವ ತೈಲಚಿತ್ರಗಳ ಮುಂದೆ ಮಂದಾಸನಗಳಲ್ಲಿ ಇಟ್ಟಿರುವ ಪುಷ್ಟಕರಂಡಗಳು ಹರಡಿರುವ ತೈಲಘೃತಗಳ ಸುವಾಸನೆಗೆ ತಮ್ಮ ಸುವಾಸನೆಯನ್ನೂ ಕೊಟ್ಟು ಇಲ್ಲಿ ಪುಷ್ಟೋದ್ಯಾನದ ಭ್ರಾಂತಿಯನ್ನು ತರುವಂತಿವೆ. ತಲ್ಪದ ಮೇಲಿರುವ ಛತ್ತಿನಲ್ಲಿ ಕೆತ್ತಿರುವ ವಜ್ರಾದಿಗಳು ತಮ್ಮ ಹೊಳಪಿನಿಂದ ನೀಲಾಕಾಶವನ್ನು ನೆನಪಿಗೆ ತಂದರೇ ಆ ಮಂದಿರದ ಮೇಲ್ಛಾವಣಿಯ ಗೋಡೆಗಳು ತಮ್ಮ ನಕ್ಷತ್ರ ಚಿತ್ರಗಳಿಂದ ಈ ಭಾವನೆಯನ್ನು ಸ್ಥಿರಗೊಳಿಸುತ್ತಿವೆ. ಮಂದಿರದಲ್ಲಿ ಹಾಸಿರುವ ರತ್ನಗಂಬಳಿಯು ಮೃದುವಾಗಿ, ಪ್ರಿಯವಾಗಿ, ತನ್ನ ಕೆಳಗೆ ನೆಲವೇ ಇಲ್ಲವೇನೋ, ಇದು ಯಾವುದೋ ಪುಷ್ಟಮೇಘಗಳ ಲೋಕದ ನೆಲವೇನೋ ಎಂಬಂತೆ ಇದೆ.
ಬೆಳಗಿನ ಝಾವ, ಮೂರನೆಯ ಪ್ರಹರವು ಮುಗಿದು ನಾಲ್ಕನೆಯ ಪ್ರಹರವು ಆರಂಭವಾಗುವ ಕಾಲ. ಅರಸನನ್ನು ಎಚ್ಚರಿಸಲು ಎದುರಿನ ಮಹಡಿಯ ಮೇಲೆ ವಾದ್ಯಗಳೆಲ್ಲವೂ ಮೃದುವಾಗಿ ನುಡಿಯುವುದಕ್ಕೆ ಸಿದ್ಧವಾಗಿವೆ. ವಾದ್ಯಗಾರರು ಬಂದು ಕುಳಿತುಕೊಂಡು ವಾದ್ಯಗೋಷ್ಠಿಗೆ ಅಣಿಮಾಡಿಕೊಳ್ಳುತ್ತಿದ್ದಾರೆ.ಆ ಸಮಯದಲ್ಲಿ ಅರಸನಿಗೆ ಒಂದು ಕನಸಾಯಿತು.
ಅರಸನು ಉದ್ಯಾನದಲ್ಲಿ ವಿರಜಾದೇವಿಯೊಡನೆ ಕಮಲಪುಷ್ಟದ ಕೊಳದಲ್ಲಿ ಆಟವಾಡಬೇಕೆಂದು ಇಳಿಯುತ್ತಿದ್ದಾನೆ. ಮಗ್ಗುಲಲ್ಲಿದ್ದ ಮೃಗಾಲಯದಿಂದ ಸಿಂಹವೊಂದು ತಪ್ಪಿಸಿಕೊಂಡು ಅರಸನ ಹತ್ತಿರಕ್ಕೆ ಓಡೋಡಿ ಬರುತ್ತದೆ. ವಿರಜಾದೇವಿಯು ಭಯದಿಂದ ಅದನ್ನು ತೋರಿಸುತ್ತಾಳೆ. ಅರಸನು ವಿಶ್ವಾಸದಿಂದ ಅದನ್ನು ಹಿಡಿದು ಅದರ ಮೇಲೆ ಕುಳಿತುಕೊಳ್ಳುತ್ತಾನೆ. ಅದು ಆಕಾಶಕ್ಕೆ ಹಾರುತ್ತದೆ. ಅಲ್ಲಿ ಸುಧಾಕಲಶದಂತಿರುವ ಚಂದ್ರನ ಬಳಿಗೆ ಹೋಗುತ್ತದೆ. ಚಂದ್ರನು ಸಶರೀರವಾಗಿ ಘನವಾಗಿ ನೀರ್ಗಲ್ಲಿನಂತೆ ಮೆರೆಯುತ್ತಾ “ನಾನೇ ಬರಬೇಕೆಂದಿದ್ದೆ. ನೀನೇ ಬಂದೆ. ಒಳ್ಳೆಯದಾಯಿತು” ಎನ್ನುತ್ತಾ “ಒಂದು ರಹಸ್ಯವನ್ನು ಕೇಳು. ಇಂದು ದೇವಋಷಿಪಿತೃಗಣಗಳು ಬಂದು ನಿನಗೆ ಇಂದ್ರಪಟ್ಟವನ್ನು ಒಪ್ಪಿಸುವರು. ಅದರಲ್ಲಿ ಮೋಸಹೋಗದಂತೆ ನೋಡಿಕೊ” ಎನ್ನುವನು. ಅಷ್ಟರಲ್ಲಿ ವಾದ್ಯಗಳ ಮೊಳಗುವಿಕೆಯಿಂದ ಎಚ್ಚರವಾಯಿತು.
ಅರಸನು ವಿರಜಾದೇವಿಯನ್ನು ಆಲಂಗಿಸಿಕೊಂಡು ಇನ್ನೂ ಒಂದುಗಳಿಗೆ ಇದ್ದನು. ಆಕೆಯು ಎಚ್ಚೆತ್ತಿರುವುದನ್ನು ಅರಿತು ಆಕೆಗೆ ಆ ಶುಭಸ್ವಪ್ನವೃತ್ತಾಂತವನ್ನು ಹೇಳಿ, ಆಕೆಯು “ಕನಸು ನಿಜವಾಗಲಿ. ನನ್ನೊಡೆಯನನ್ನು ಇಂದ್ರನನ್ನಾಗಿ ಪಡೆಯುವ ಭಾಗ್ಯವು ಮೂರು ಲೋಕಗಳಿಗೂ ಬರಲಿ !” ಎಂದು ಹಾರೈಸಿ ಕೈಮುಗಿಯುತ್ತಿರಲು ಎದ್ದನು.
ಅಂದು ಆತನು ದೇವಗೃಹದಲ್ಲಿ ಆರಾಧನೆಯನ್ನು ಮುಗಿಸಿಕೊಂಡು ಅಗ್ನಿಗೇಹಕ್ಕೆ ಬಂದು ಅಗ್ನಿಪೂಜೆಯನ್ನು ನೆರೆವೇರಿಸುತ್ತಿರುವಾಗ, ಯಜ್ಞೇಶ್ವರನು ದರ್ಶನಕೊಟ್ಟನು. ಮೇಷರೂಢನಾಗಿ ಜಟಾಬದ್ಧನಾಗಿರುವ ಆ ಮೂರ್ತಿಯನ್ನು ಕಂಡು ನಹುಷದಂಪತಿಗಳು ವಿಶೇಷ ಪೂಜೆಯನ್ನೊಪ್ಪಿಸಿದರು. ಯಜ್ಞೇಶ್ವರನು “ಅರಸಾ, ದೇವಋಷಿಪಿತೃಗಳ ಪ್ರತಿನಿಧಿಗಳು ನಿನ್ನನ್ನು ಕಾಣಲು ಬರುವರು. ಧರ್ಮಾಂಗಣದಲ್ಲಿ ಪ್ರತೀಕ್ಷಿಸುತ್ತಿರು” ಎಂದು ಹೇಳಿ ಮರೆಯಾದನು.
ಅರಸನು ಪತ್ನಿಸಮೇತನಾಗಿ ಧರ್ಮಾಂಗಣಕ್ಕೆ ಬಂದನು. ಅರಸನಪ್ಪಣೆಯಿಂದ ಪುರೋಹಿತನು ಮಧುಪರ್ಕ ಪೂಜಾಸಾಮಗ್ರಿಗಳೊಡನೆ ಬಂದು ಕಾದಿದ್ದನು. ಆಸನಗಳು ಸಿದ್ಧವಾಗಿದ್ದವು.
ಗಾಳಿಯು ಒಂದು ಸಲ ಮೃದುವಾಗಿ ಬೀಸಿತು. ಆ ಮಂದಿರವೆಲ್ಲವೂ ದಿವ್ಯ ಪರಿಮಳದಿಂದ ತುಂಬಿತು. ಮತ್ತೊಂದು ಗಳಿಗೆಯೊಳಗಾಗಿ ಪ್ರಭಾಮಂಡಲವಂತರಾದ ದಿವ್ಯಮೂರ್ತಿಗಳು ಗೋಚರವಾದವು. ರಾಜದಂಪತಿಗಳು ಸಪರಿವಾರರಾಗಿ ನಮಸ್ಕಾರಮಾಡಿ ಅವರನ್ನೆಲ್ಲಾ ಆಸನಗಳಲ್ಲಿ ಕುಳ್ಳಿರಿಸಿ, ಅವರಿಗೆ ಸಮರ್ಚನವನ್ನು ಒಪ್ಪಿಸಿದರು. ಅರಸನೇ ಮೊದಲು ಮಾತನಾಡಿದನು : “ತಮ್ಮ ದರ್ಶನಕ್ಕಾಗಿ ಮಾನವರು ಹಗಲಿರುಳು ಶ್ರಮಪಡುವರು. ನಮ್ಮ ಪೂರ್ವಜರ ಪುಣ್ಯ. ನಮ್ಮ ಪೂರ್ವಾರ್ಜಿತ ಪುಣ್ಯ. ತಾವೇ ನಮಗೆ ದರ್ಶನ ಕೊಟ್ಟಿರಿ.”
ಜೊತೆಯಲ್ಲಿದ್ದವರೆಲ್ಲರ ಅಪ್ಪಣೆಯನ್ನು ಪಡೆದು ಸುರಾಚಾರ್ಯನು ಮಾತನಾಡಿದನು : “ಚಕ್ರವರ್ತಿ, ನೀನು ಚಂದ್ರವಂಶದ ರಾಜೇಂದ್ರನು. ಚಂದ್ರನಿಂದ ಐದನೆಯವನು. ನಿನ್ನ ಪುಣ್ಯಬಲದಿಂದ ಮೂರು ಲೋಕಗಳಿಗೂ ಅರಸನಾಗಲು ಅರ್ಹನಾದವನು. ಅದರಿಂದಲೇ ನಾವು ನಿನ್ನ ದರ್ಶನಕ್ಕೆ ಬಂದಿರುವೆವು. ಬಂದ ಕೆಲಸವಿರಲಿ. ನಿನ್ನ ರಾಜ್ಯವು ಚೆನ್ನಾಗಿದೆಯೆ? ನಿನ್ನ ಪ್ರಜೆಗಳೆಲ್ಲರೂ ಸೌಖ್ಯದಿಂದಿರುವರೋ? ನಿನ್ನ ಧರ್ಮವು ಅಧ್ಯಯನ, ಆಚರಣೆಗಳಿಂದ ಪರಿವರ್ಧಿತವಾಗುತ್ತಿದೆಯೋ? ನಿನ್ನ ಅರಮನೆಯವರೆಲ್ಲರೂ ಕುಶಲಿಗಳಷ್ಟೇ?”
ನಹುಷನು ಸಂತೋಷದಿಂದ ಬಿನ್ನವಿಸಿದನು : “ದೇವ, ನೀವು, ದೇವತೆಗಳು, ಸೂತ್ರಧಾರರು. ನೀವು ಸೂತ್ರವನ್ನೆಳೆದತ್ತ ಕುಣಿಯುವ ಬೊಂಬೆಗಳು ನಾವಾದರೂ, ಆಹಂಕಾರದಿಂದ ನಾವು ನಾವು ಎಂದು ಎದೆ ತಟ್ಟಿಕೊಳ್ಳುವೆವು. ತಮ್ಮ ಕೃಪೆಯಿಂದ ಧರ್ಮಾರಾಧನವು ಕ್ರಮವಾಗಿದೆ. ರಾಜ್ಯಸೂತ್ರಗಳು ಭದ್ರವಾಗಿವೆ. ಪ್ರಜೆಗಳೆಲ್ಲರೂ ಸುಖಿಗಳಾಗಿ ವರ್ಧಿಷ್ಣುಗಳಾಗಿದ್ದಾರೆ. ನಾನೂ ಸಕುಟುಂಬವಾಗಿ ಸಪರಿವಾರನಾಗಿ ಕ್ಷೇಮವಾಗಿದ್ದೇನೆ.”
ದೇವಗುರುವು ಒಂದು ಗಳಿಗೆ ತಡೆದು, “ನೀನು ಹೇಳುವುದಕ್ಕೆ ತಮ್ಮೆಲ್ಲರ ಸಮ್ಮತಿಯುಂಟಷ್ಟೇ’ ಎಂದು ಕೇಳುವವನಂತೆ ತನ್ನ ಜೊತೆಯಲ್ಲಿದ್ದವರ ಮುಖವನ್ನು ನೋಡಿ ಹೇಳಿದನು ; “ಅರಸಾ, ನಾವು ನಿನ್ನ ಬಳಿಗೆ ವಿಚಿತ್ರವಾದ ಪ್ರಾರ್ಥನೆಯೊಂದನ್ನು ಮಾಡಿಕೊಳ್ಳಲು ಬಂದಿದ್ದೇವೆ. ನೀನು ಅನುಕೂಲನಾಗಿ ಅದನ್ನು ಒಪ್ಪಿಕೊಳ್ಳಬೇಕು.”
ನಹುಷನು ಸಣ್ಣಗೆ ನಕ್ಕು ಹೇಳಿದನು ; “ದೇವ, ಆ ಪ್ರಾರ್ಥನೆಯಾದರೂ ಎಂಥದು ? ಸಾಮಾನ್ಯವಾಗಿ ತಾವು ಹೇಳುವುದು ನಾವು ಕೇಳುವುದು ಆಗಿರಲು, ನಮ್ಮನ್ನು ಕೇಳಿ ನಾವು ಅನುಕೂಲರಾಗಿ ನಡೆಸಿಕೊಡಬೇಕಾದ ಆ ಮಹತ್ಕಾರ್ಯವಾದರೂ ಏನು ?”
“ಮಧ್ಯಮಲೋಕಚಕ್ರವರ್ತಿ, ಈಗ ಕಾರಣಾಂತರಗಳಿಂದ ಇಂದ್ರಪದವಿಯು ಶೂನ್ಯವಾಗಿರುವುದು. ಅದನ್ನು ನೀನು ಅಲಂಕರಿಸಬೇಕೆಂದು ಕೇಳಲು ನಾವು ಬಂದಿರುವೆವು. ಇವರು ಋಷಿಗಣದ ಪ್ರತಿನಿಧಿಗಳು. ಇವರು ಪಿತೃಗಣದ ಪ್ರತಿನಿಧಿಗಳು. ಈತನು ದೇವಾಗ್ರಗಣ್ಯರಲ್ಲಿ ಒಬ್ಬನಾದ ಜಾತವೇದನು. ನನ್ನನ್ನಂತೂ ಬಲ್ಲೆ.”
ನಹುಷನು ಪತ್ನಿಯ ಮುಖವನ್ನು ನೋಡಿದನು. ಆ ನೋಟದಲ್ಲಿ ಬೆಳಗಿನ ಕನಸು ನಿಜವಾಯಿತಲ್ಲಾ ಎಂಬರ್ಥವಿತ್ತು. ಗಂಭೀರವಾಗಿ ಕೇಳಿದನು : “ಈ ಅರ್ಥದಲ್ಲಿ ನಾವು ಸ್ವತಂತ್ರರೋ ? ಅಥವಾ ತಾವು ಹೇಳಿದಂತೆ ಕೇಳಲೇಬೇಕೋ?”
“ಈ ಅರ್ಥದಲ್ಲಿ ನೀನು ಸ್ವತಂತ್ರನು.”
“ಸಂತೋಷ. ತಾವು ಇಂದ್ರಪದವಿಯು ಶೂನ್ಯವಾಗಿದೆಯೆಂದಿರಿ. ನಾವು ಮಧ್ಯಲೋಕದವರು. ನಮಗೆ ಏನೂ ತಿಳಿಯದು. ಅದರಿಂದ ಕೇಳುವೆನು. ಆ ವಿಚಾರವನ್ನು ವಿಸ್ತಾರವಾಗಿ ಕೇಳಬಹುದೆ ?”
ಬೃಹಸ್ಪತಿಯು ನಡೆದುದೆಲ್ಲವನ್ನೂ ಹೇಳಿ, “ವೃತ್ರಹತ್ಯೆಗಾಗಿ ಇಂದ್ರನು ದೇವಲೋಕವನ್ನು ಬಿಡಬೇಕಾಯಿತು” ಎಂದು ಹೇಳಿದನು. ಹಾಗೆಯೇ ಇಂದ್ರನಾಗುವವನಿಗೆ ಅವನು ಅಪೇಕ್ಷಿಸಿದುದನ್ನು ಕೊಡುವುದಾಗಿಯೂ ಹೇಳಿದನು.
ನಹುಷನು ಸಾವಧಾನವಾಗಿ ಯೋಚಿಸಿ ಹೇಳಿದನು: “ಬಂದಿರುವ ತಾವೆಲ್ಲರು ಪೂಜ್ಯರು. ನನಗಿಂತ ದೊಡ್ಡವರು. ಅದರಿಂದ ನಾನು ಹೇಳುವುದನ್ನು ತಾವು ಸಾವಧಾನವಾಗಿ ಪರ್ಯಾಲೋಚಿಸಬೇಕು. ನಾವು ಮನುಷ್ಯವರ್ಗದವರು. ದೇವಋಷಿ ಪಿತೃಗಣಗಳಿಗಿಂತ ಕೀಳಾದವರು. ನಾವು ತಮ್ಮ ಮೇಲಿನ ಅಧಿಕಾರವನ್ನು ವಹಿಸಿಕೊಳ್ಳುವುದೆಂತು ? ತಾವು ನಮಗೆ ವರಪ್ರದಾನ ಮಾಡುವವರು. ತಮ್ಮನ್ನು ಕಂಡರೆ ನಾವು ಅಂಜುವೆವು. ತಾವು ಅನುಗ್ರಾಹಕರು. ನಾವು ಅನುಗ್ರಾಹ್ಯರು. ಹೀಗಿರುವಲ್ಲಿ ನಾವು ತಮ್ಮ ಮೇಲೆ ಅಧಿಕಾರವನ್ನು ಚಲಾಯಿಸಲು ಸಾಧ್ಯವೇ ? ತಾವೇ ಯೋಚಿಸಿ ನೋಡಿ.”
ದೇವಋಷಿಪಿತೃಗಳು ಒಬ್ಬರನ್ನೊಬ್ಬರು ನೋಡಿಕೊಂಡರು. ನಹುಷನು ಹೇಳುವುದು ಸರಿ. ಏನು ಮಾಡಬೇಕು ?
ಪಿತೃಗಣದ ಪ್ರತಿನಿಧಿಯು ಹೇಳಿದನು : “ಮಾನವೇಂದ್ರ, ನೀನು ಹೇಳುವುದು ಸರಿ. ಪ್ರತಿಯೊಂದು ಜಂತುವಿಗೂ ಅದರದರ ಅಧಿಕಾರವ್ಯಾಪ್ತಿಯಿಷ್ಟು ಎಂದು ಮಿತಿಯಿರುವುದು. ಮಿತಿಯ ಎರಡು ಕೊನೆಗಳಲ್ಲಿ ಒಂದು ಕನಿಷ್ಠಾವಧಿ, ಇನ್ನೊಂದು ಪರಮಾವಧಿ ; ಅದು ಸಹಜವಾದುದು. ಅದಕ್ಕೆ ಯಾರೇನು ಮಾಡುವುದು ?”
“ತಾವು ನನಗಿಂತ ಶ್ರೇಷ್ಠರು ಎಂಬುದನ್ನು, ಸಮಸ್ಯೆಯನ್ನು ಸರಿಯಾಗಿ ನಿರ್ವಚಿಸಿ ತೋರಿಸಿಕೊಂಡಿರಿ. ನಾನು ಹೇಳುವುದೂ ಅದೆ! ನಮ್ಮ ಪರಮಾವಧಿಯ ಮಿತಿಯಲ್ಲಿ ತಾವು ಸೇರಿದವರಲ್ಲ. ಅದರಿಂದ ಅಧಿಕಾರವು ಸಾಧ್ಯವಲ್ಲ.”
ಮತ್ತೆ ಸುರಾಚಾರ್ಯನು ಹೇಳಿದನು ; ಚಕ್ರವರ್ತಿ, ನಿನ್ನ ಆಕ್ಷೇಪಣೆಯು ಸಾಧುವಾದುದು. ಯಾವ ಪ್ರಾಣಿಯ ಇತಿಮಿತಿಯನ್ನು ಬೇಕಾದರೂ ಪಿತೃಗಳು ಬದಲಾಯಿಸಬಲ್ಲರು. ಪಿತೃಗಳು ನಿನ್ನ ಮಾನವತ್ವವನ್ನು ತೆಗೆದು ಅಲ್ಲಿ ದೇವತ್ವವನ್ನು ಸ್ಥಾಪಿಸುವರು.
“ದೇವತ್ವವನ್ನು ಪಡೆದೆನೆನ್ನುವುದು ನನಗೆ ಹೇಗೆ ತಿಳಿಯುವುದು ?”
“ನಿನ್ನ ಅಧಿಕಾರದಿಂದ ಮತ್ತು ಆನಂದಭೋಗದಿಂದ. ಎಂದರೆ, ನಿನ್ನ ಕಣ್ಣಿಗೆ ಬಿದ್ದವರು ತಾವಾಗಿ ನಿನಗೆ ಹೆದರುವರು. ಅದು ಅಧಿಕಾರ ಲಕ್ಷಣ. ಎರಡನೆಯದು ನಿನ್ನ ಆನಂದಾನುಭವಶಕ್ತಿಯು ಬದಲಾಗುವುದು. ಅದೇ ಜಂತುವನ್ನು ಅಳೆಯುವ ಶಕ್ತಿಯು. ಮನುಷ್ಯನಾಗಿ, ಸಾಮ್ರಾಟನಾಗಿ, ಬಲಿಷ್ಠನಾಗಿ, ಯವಿಷ್ಟನಾಗಿ, ಸರ್ವವಸ್ತು ಸಂಪನ್ನನಾಗಿರುವವನು ಅನುಭವಿಸುವ ಆನಂದವು ಮಾನದಂಡವು. ಈ ಆನಂದವು ಅಂತಃಕರಣದಲ್ಲಿ ತೋರುವ ವಿಶೇಷವೃತ್ತಿಯು. ನಾವು ಆನಂದಾನುಭವ ಶಕ್ತಿಯನ್ನು ಬೆಳೆಸುವೆವು, ಎಂದರೆ ಆ ಅಂತಃಕರಣವು ಆನಂದವನ್ನು ಅಷ್ಟರವರೆಗೆ ಪ್ರಕಟಿಸಬಲ್ಲದು ಎಂದು. ಅದರಿಂದ, ಮಾನವೇಂದ್ರ, ನಿನ್ನ ಕರ್ಮ ಕಲಾಪಗಳಿಂದ, ಯಜ್ಞಯಾಜನಾದಿಗಳಿಂದ, ಇಷ್ಟಾಪೂರ್ತ ಕರ್ಮಗಳಿಂದ ನೀನು ಹೊಂದುವ ಪರಮವಾದ ಆನಂದವೆಷ್ಟು ಬಲ್ಲೆಯಾ ? ನೀನು ಯಾವುದೋ ಒಂದು ದೇವತೆಯಲ್ಲಿ ನಿನ್ನ ಕರ್ಮಾನುಷ್ಠಾನಬಲದಿಂದ, ನಿನ್ನ ವಿದ್ಯಾಪ್ರಭಾವದಿಂದ ಅಪ್ಯಾಯನಾಗುವೆ. ಆಗ ಆ ದೇವತೆಯ ಆನಂದವನ್ನು ಪಡೆಯುವೆ. ಅದು ದೇವಾನಂದವು. ನೀನು ನಾವು ಹೇಳುವಂತೆ ಇಂದ್ರನಾಗುವುದಾದರೆ, ಆ ದೇವಾನಂದದ ನೂರರಷ್ಟು ಆನಂದವನ್ನು ಪಡೆಯುವೆ. ಈಗ ಇಲ್ಲಿರುವ ನಮ್ಮಲ್ಲಿ ಪಿತೃಗಳೂ ನಿನ್ನ ಆನಂದಾನುಭವಶಕ್ತಿಯನ್ನು ಕೊಡುವರು. ಎಂದರೆ ನಿನ್ನ ಯೋನಿಯನ್ನು ಬದಲಾಯಿಸುವರು. ಯೋನಿ ಎನ್ನುವುದು ಒಂದು ಅಚ್ಟು. ಅಚ್ಚಿಗೆ ಆಳ ಉದ್ದ ಅಗಲಗಳ ಮೇಲಲ್ಲವೆ ಅದರ ಪ್ರಮಾಣವು? ಹಾಗೆ ಮನುಷ್ಯ ಯೋನಿಯಾದ ನಿನ್ನನ್ನು ದೇವಯೋನಿಯನ್ನಾಗಿ ಮಾಡುವರು. ಆ ಪ್ರಮಾಣದ ಆನಂದವನ್ನು ಪಡೆಯುವುದಕ್ಕೆ ಬೇಕಾದ ಜ್ಞಾನವನ್ನು ಋಷಿಗಳು ಕೊಡುವರು. ಅಂದರೆ, ಈಗ ಪ್ರತಿಯೊಂದು ಪ್ರಾಣಿಯೂ ನಿದ್ದೆಯಲ್ಲಿ ಆನಂದದ ಪರಾಕಾಷ್ಠತೆಯನ್ನು ಪಡೆಯುವುದು ಆದರೆ, ಆಗ ಅದು ಆನಂದ ಎಂದು ತಿಳಿಯುವ ಜ್ಞಾನವಿರುವುದಿಲ್ಲ. ಅಲ್ಲಿ ಪಡೆಯುವ ಆನಂದವು ಆನಂದವೇ ಎಂದು ತಿಳಿಯುವುದೇ ಆ ಜ್ಞಾನವು. ನಾವು ದೇವತೆಗಳು ಆ ಆನಂದವನ್ನು ಕೊಡುವೆವು. ಹೀಗೆ, ಅಧಿಕಾರ, ಆನಂದ ಎರಡನ್ನೂ ನಾವು ಕೊಟ್ಟು ನಿನ್ನನ್ನು ಇಂದ್ರನನ್ನು ಮಾಡುವೆವು.”
ನಹುಷನು ಎಲ್ಲವನ್ನೂ ಸಾವಧಾನವಾಗಿ ಕೇಳಿ ವಿನಯದಿಂದ ಕೈ ಮುಗಿದು ಹೇಳಿದನು : “ದೇವ, ತಾವು ಹೇಳುತ್ತಿರುವಾಗ ಬೇಡವೆನ್ನಲು ಸಾಧ್ಯವಿಲ್ಲ. ಅಲ್ಲದೆ, ಮನುಷ್ಯಲೋಕದಲ್ಲಿ ನ್ಯಾಯವಾಗಿ ರಾಜ್ಯಭಾರ ಮಾಡಿದವರಿಗೆ ಇಂದ್ರಸಿಂಹಾಸನದಲ್ಲಿ ಅರ್ಧಸಿಕ್ಕುವುದು ಎಂದು ಬಲ್ಲವರು ಹೇಳುವರು. ತಾವು ಇಂದ್ರತ್ವವನ್ನೇ ಕೊಡುವೆವು ಎನ್ನುವಿರಿ. ಆಗಲಿ. ಆದರೆ, ನನ್ನ ಪ್ರಾರ್ಥನೆಯನ್ನೂ ಮನ್ನಿಸುವಿರಾ ? ನಾನು ಎರಡು ನಿಬಂಧಗಳನ್ನು ತಮ್ಮ ಮುಂದಿಡಬಹುದೆ ?”
ದೇವಗುರುವು ‘ಆಗಬಹುದು’ ಎಂದನು. ನಹುಷನು ಹೇಳಿದನು ; “ಅಲ್ಲಿಯೂ ವಿರಜಾದೇವಿಯು ನನ್ನ ಪತ್ನಿಯಾಗಿದ್ದು, ಈಗ ಇಲ್ಲಿ ಅರಮನೆಯಲ್ಲಿ ನಾವು ನಡೆಸುವ ಧರ್ಮಗಳನ್ನು ದಿನವೂ ನಡೆಸುತ್ತಿರಲು ಅನುಕೂಲವಿರಬೇಕು ಎಂಬುದೊಂದು. ಜೊತೆಗೆ ಅಲ್ಲಿ ನಾನು ಏನು ಕೇಳಿದರೂ ಅದನ್ನು ರಹಸ್ಯವೆನ್ನದೆ ನನಗೆ ಹೇಳಬೇಕು ಎನ್ನುವುದು ಎರಡನೆಯದು. ಈ ಎರಡು ನಿಯಮಗಳನ್ನು ತಾವು ಒಪ್ಪಿಕೊಳ್ಳಬೇಕು.”
“ಈ ಎರಡು ನಿಯಮಗಳನ್ನು ಒಪ್ಪಿಕೊಳ್ಳಲೇಬೇಕೆ ?”
“ಹಾಗೆಂದು ನಾನು ತಮ್ಮನ್ನು ಪ್ರಾರ್ಥಿಸುವೆನು.”
“ಯೋಚಿಸಿ ನೋಡು. ಒಪ್ಪಿಕೊಂಡುದರಿಂದ ನಮಗೆ ಹಾನಿಯಿಲ್ಲ”
“ಹಾಗಾದರೆ ಒಪ್ಪಿಕೊಳ್ಳಬಹುದಲ್ಲ ?”
“ಒಪ್ಪಿಕೊಂಡಿರುವೆವು. ಇವೆರಡರಿಂದ ಆಗುವ ಹಾನಿಗೆ ನಾವು ಹೊಣೆಯಲ್ಲ. ನೀನೇ ಹೊಣೆ.”
“ಆಗಬಹುದು ದೇವ, ನಾನು ಹೊಣೆಯನ್ನು ಒಪ್ಪಿಕೊಳ್ಳುವೆನು. ಆ ಹೊಣೆಯಲ್ಲಿ ಏನು ವಿಷಯವಿದೆಯೆಂದು ತಿಳಿಯಲಿಲ್ಲ ಅಪ್ಪಣೆಯಾಗಬೇಕು.”
“ನೀನು ಇಂದ್ರತ್ವವನ್ನು ಒಪ್ಪಿಕೊಂಡಿರುವೆ ತಾನೆ ?”
“ಹೌದು ಒಪ್ಪಿಕೊಂಡಿರುವೆನು.”
“ಸರಿ, ಹಾಗಾದರೆ ಹೇಳುವೆನು. ನೀನು ಧರ್ಮಮಾಡುತ್ತಿರಬೇಕು ಎಂದೆ ಅದರರ್ಥವೇನಾಯಿತು ಬಲ್ಲೆಯಾ? ‘ನಾನು ಇಂದ್ರನಾದರೂ ಮನುಷ್ಯ ಧರ್ಮವನ್ನು ಬಿಡುವುದಿಲ್ಲ’ ಎಂದಾಯಿತು. ಎಂದರೆ, ಮನುಷ್ಯರು ಮತರ್ಯ್‌ರು, ಎಂದರೆ ಮರಣಧರ್ಮವುಳ್ಳವರು. ನೀನೂ ಆ ಧರ್ಮವನ್ನು ಒಪ್ಪಿಕೊಂಡಂತಾಯಿತು. ನಾವು ನಿನ್ನನ್ನು ಅಜರ ಅಮರಧರ್ಮಿಯಾಗಿ ಮಾಡಬೇಕೆಂದಿದ್ದೆವು. ನೀನು ಒಂದನ್ನೊಪ್ಪಿಕೊಂಡು ಇನ್ನೊಂದು ಬೇಡವೆಂದ ಹಾಗಾಯಿತು.
ನಹುಷನು ಅದನ್ನು ಕೇಳಿ ನಿಟ್ಟುಸಿರುಬಿಟ್ಟನು. ದಂಪತಿಗಳು ಒಬ್ಬರ ಮುಖವನ್ನೊಬ್ಬರು ನೋಡಿಕೊಂಡು ಒಂದುಗಳಿಗೆ ವಿಷಾದಪಟ್ಟರು. ನಿಟ್ಟುಸಿರುಬಿಟ್ಟರು. ನಹುಷನು ಕೇಳಿದನು : “ಇನ್ನೊಂದು”
“ಅದೇ ? ದೇವಲೋಕದಲ್ಲಿ, ಇಂದ್ರನಾದ ಮೇಲೆ, ನಿನಗೆ ತಿಳಿಯದ ರಹಸ್ಯಗಳೇನಿದ್ದಾವು ? ಆದರೆ, ಈಗ ನೀನು ಚಾಪಲ್ಯದಿಂದ ದೇವರಹಸ್ಯಗಳನ್ನು ತಿಳಿಯಬೇಕೆಂಬ ಕುತೂಹಲವನ್ನು ಪ್ರಕಟಿಸಿದೆ. ಅದರ ಫಲವಾಗಿ ನೀನು ನಿನಗೆಟುಕದ ರಹಸ್ಯಗಳನ್ನು ತಿಳಿಯಲು ಯತ್ನಿಸುವೆ. ರಹಸ್ಯವು ತಾನಾಗಿ ತಿಳಿದರೆ ವರ. ನಿನಗಾಗಿ ಭೇದಿಸಿದರೆ ಶಾಪ. ಅದರಿಂದ ಏನು ಬೇಕಾದರೂ ಆಗಬಹುದು.
ನಹುಷನು ಅದಕ್ಕಾಗಿ ಅಷ್ಟು ವಿಷಾದಪಡಲಿಲ್ಲ. “ಆಗಲಿ, ಅದು ನನ್ನ ಕೈಯಲ್ಲಿದೆ. ಹೆಚ್ಚು ಕುತೂಹಲ ಪಡದಿದ್ದರೆ ಆಯಿತು” ಎಂದುಕೊಂಡನು.
ದೇವಾಚಾರ್ಯಾದಿಗಳು ನಹುಷನನ್ನು ಪತ್ನೀಸಮೇತನಾಗಿ ದೇವಲೋಕಕ್ಕೆ ಕರೆದುಕೊಂಡು ಹೋಗಿ ಇಂದ್ರಪಟ್ಟಾಭಿಷೇಕ ಮಾಡಿದರು. ಮಾನವೇಂದ್ರನು ಮಹೇಂದ್ರನಾದನು.
* * * *