==೩೧.ಗಂಡಹೆಂಡಿರು==

ಶಚೀದೇವಿಯು ಗುರುವು ಅನುಗ್ರಹಿಸಿದ ತಿರಸ್ಕರಣಿಯನ್ನು ತೆಗೆದುಕೊಂಡು ಪತಿದರ್ಶನಾರ್ಥವಾಗಿ ಮಾನಸ ಸರೋವರಕ್ಕೆ ಹೋದಳು. ಅಗ್ನಿ ವಾಯುಗಳು ಆಕೆಯ ರಕ್ಷಕರಾಗಿ ಹೋದರು. ಅಗ್ನಿಯು ಹೋಗುತ್ತಾ ದಾರಿಯಲ್ಲಿ ವಾಯುವಿಗೆ ಹೇಳಿದನು ; “ವಾಯು ನನಗೆ ಆ ಹತ್ಯೆಯನ್ನು ಮಾತನಾಡಿಸಬೇಕು ಎನ್ನಿಸುತ್ತದೆ.” ವಾಯುವು ನಗುತ್ತಾ ಹೇಳಿದನು : “ನೀನು ಪ್ರತಿಫಲವನ್ನು ಅನುಭವಿಸಲು ಸಿದ್ಧನಾದರೆ ಯಾವ ಕೆಲಸವನ್ನಾದರೂ ಮಾಡಬಹುದು. ಅದರಲ್ಲಿ ಏನೂ ತಪ್ಪಿಲ್ಲ.”

ಸರಿ, ನಿನ್ನ ಅನುಮತಿಯು ಸಿಕ್ಕಿತು. ಇನ್ನು ದೇವಿಯನ್ನು ಕೇಳುವೆನು: ಎಂದು ಶಚಿಯ ಬಳಿಗೈದು ಕೇಳಿದನು : “ಇಂದ್ರನನ್ನು ಕಾಡುತ್ತಿರುವ ಹತ್ಯೆಯನ್ನು ನೋಡಿ ಬರುವೆನು.”

ಶಚಿಯು ಯೋಚನೆ ಮಾಡಿದಳು : “ಆಗಬಹುದು. ಆದರೆ ನಿನ್ನನ್ನೂ ಅದು ಕಾಡಿದರೆ ?”

“ನಾನು ತಿಳಿದುಕೊಂಡಿರುವುದು ಸರಿಯಾದರೆ, ಅದಕ್ಕೆ ಇರುವ ಕಾಡುವ ಶಕ್ತಿಯು ನಿಯತವಾಗಿರಬೇಕು. ಅದರಲ್ಲಿ ನನ್ನ ಕಡೆಗಷ್ಟು ತಳ್ಳಿದರೆ, ಅದು ಇಂದ್ರನನ್ನು ಕಾಡುವ ಶಕ್ತಿಯು ಕಡಿಮೆಯಾಗುವುದು.”

ವಾಯುವು ಜೊತೆಯಲ್ಲೇ ಹೇಳಿದನು : “ಹಾಗೆ ಇಂದ್ರನಿಗೆ ಕಾಟವು ತಪ್ಪುವಂತಿದ್ದರೆ ನಾನೂ ನಿನ್ನ ಜೊತೆಯಲ್ಲಿ ಬರುತ್ತೇನೆ.”

ಶಚಿಯಪ್ಪಣೆಯನ್ನು ಪಡೆದು ಆಕೆಯ ರಕ್ಷಣೆಗೆ ವಾಯುವನ್ನು ಇಟ್ಟು ಅಗ್ನಿಯು ತಾನು ಆ ಹತ್ಯೆಯನ್ನು ಹುಡುಕಿಕೊಂಡು ಹೋದನು.

ಮಾನಸ ಸರೋವರಕ್ಕೆ ನೈಋತ್ಯದಲ್ಲಿ ಒಂದು ವಿಶಾಲವಾದ ಊಷರಕ್ಷೇತ್ರದಲ್ಲಿ ಎಲ್ಲೋ ಒಂದು ಮುಳ್ಳುಕಂಟೆಯ ಮರೆಯಲ್ಲಿ ಗಾಳಿಯಲ್ಲಿ ಗಾಳಿಯಾಗಿ, ಆ ಹತ್ಯೆಯು ಹಿಮಾಲಯದ ಶೀತವಾತದಲ್ಲಿ ಗಡಗಡನೆ ನಡುಗುತ್ತಾ, ಮೈಯೆಲ್ಲ ಗಾಳಿಯ ತುಂಡಾದಂತೆ ಬಿದ್ದಿದೆ. ಬಳಿಯಲ್ಲಿ ಅಗ್ನಿಯು ಸುಳಿಯಲು ಅದು ಹಾವಿನಂತೆ ಬುಸುಗರೆಯಿತು. ಅಗ್ನಿಯು ವಾಕ್ಕರಣೆಯನ್ನು ಕೊಟ್ಟನು. ಹತ್ಯೆಯು ಮಾತನಾಡಿತು. ಅದು ಗಾಳಿಯಲ್ಲಿರುವ ಶಬ್ದವರ್ಣವಾದಂತೆ.

“ಇಂದ್ರ ! ಇಂದ್ರನಿಗಾಗಿ ಇನ್ನು ಎಷ್ಟು ದಿನ ಕಾಯಬೇಕೋ?”

“ನಾನು ಬಂದಿರುವವನು ಇಂದ್ರನಲ್ಲ”

“ಹೌದು ನಿನ್ನ ಸ್ಪರ್ಶದಿಂದ ಗೊತ್ತಾಯಿತು”

“ನಿನಗೆ ಸ್ಪರ್ಶವಲ್ಲದೆ ಇನ್ನೇನೂ ಗೊತ್ತಾಗುವುದಿಲ್ಲವೇನು?”

“ಇಲ್ಲ”

“ಹಾಗಾದರೆ, ಇಂದ್ರನನ್ನು ಹೇಗೆ ಗೊತ್ತುಮಾಡಿಕೊಳ್ಳುವೆ?”

“ಇಂದ್ರನು ಬಂದರೆ ನನಗೆ ತಿಳಿಯುತ್ತದೆ. ನಾನು ಹೋಗಿ ಹಿಡಿದು ಬಿಡುತ್ತೇನೆ.”

“ಇಂದ್ರನಿರುವುದು ಸ್ವರ್ಗದಲ್ಲಿ. ಇದು ಹಿಮಾಲಯ ಪ್ರಾಂತ. ಮನುಷ್ಯ ಭೂಮಿ. ಇಲ್ಲಿ ಕಾದು ಏನು ಫಲ?”

“ಇದು ಮನುಷ್ಯ ಭೂಮಿಯಲ್ಲ. ದೇವಿಭೂಮಿ. ಇಲ್ಲದಿದ್ದರೆ ನನ್ನನ್ನು ಹೀಗೆ ಸುಡುತ್ತಿರಲಿಲ್ಲ. ಇಂದ್ರನು ಇಲ್ಲಿಗೆ ಓಡಿಬಂದ. ಅವನನ್ನು ಬೆನ್ನಟ್ಟಿ ನಾನು ಬಂದೆ.”

“ಆತನೀಗ ಎಲ್ಲಿದ್ದಾನೆ?”

“ಅದೂ ನನಗೆ ಗೊತ್ತಿಲ್ಲ. ಅವರು ಬಂದರೇ ನನಗೆ ಗೊತ್ತಾಗುವುದು. ಹಿಡಿದುಬಿಡುವೆ. ಹುಂ. ಹೇಳಿಕೊಂಡು ಏನು ಫಲ? ಎರಡು ಹೆಜ್ಜೆಯಲ್ಲಿ ತಪ್ಪಿಸಿಕೊಂಡ. ಎಲ್ಲಿಗೆ ಹೋದಾನು? ಇಲ್ಲಿಯೇ ಎಲ್ಲಿಯೋ ಸೇರಿಕೊಂಡಿದ್ದಾನೆ. ಬರಲಿ ಈಚೆಗೆ,”

“ಬಂದರೇನು ಮಾಡುವೆ? ನಿನಗೆ ಅಂಗಾಗಗಳೇ ಇಲ್ಲವಲ್ಲ?”

“ಏನು ಮಾಡುವುದೆ? ನಾನು ಮುಟ್ಟಿದಲ್ಲಿ ಹುಣ್ಣಾಗುವುದು. ಕೊಳಕು ಮಂಡಲದ ಹುಣ್ಣಿನಂತೆ ತೀವ್ರವಾಗಿ ಒಂದೇ ಗಳಿಗೆಯೊಳಗೆ ಮೈಯೆಲ್ಲಾ ಹುಣ್ಣೇ ಹುಣ್ಣಾಗುವುದು.”

“ಧನ್ವಂತರಿಯು ಅಮೃತಸೇಚನದಿಂದ ಅದನ್ನು ಗುಣಪಡಿಸುವನು.”

“ಉಹುಂ, ಸಾಧ್ಯವಿಲ್ಲ. ಇದು ಪಾಪದಿಂದ ಆದುದು. ಇದಕ್ಕೆ ಸಾವೇ ಕೊನೆ.”

“ಇಂದ್ರನು ಅಮರನೆಂಬುದನ್ನು ಮರೆತು ಮಾತನಾಡುತ್ತಿರುವೆ.”

“ಹಾಗಾದರೆ ಅನುಭವಿಸಿ ಅನುಭವಿಸಿ ಕೊನೆಗೆ ಸತ್ತಂತೆ ಬೀಳುವನು.”

“ನೀನು ಕುರಿತು ಹೇಳುತ್ತಿರುವುದು ದೇವರಾಜನನ್ನು! ಬೀದಿಯ ಭಿಕಾರಿಯನ್ನಲ್ಲ.”

“ಹೌದು, ಹೌದು, ದೇವರಾಜನಾದರೂ ಪಾಪ ಮಾಡಿದಾಗ ಬೀದಿಯ ಭಿಕಾರಿಗಿಂತ ಕಡೆ.”

“ಆಯಿತು ಏನು ಮಾಡಿದರೆ ನಿನಗೆ ತೃಪ್ತಿಯಾಗುವುದು?”

“ನನಗೆ? ತೃಪ್ತಿ? ಉಹುಂ. ಇಲ್ಲ ನಾನು ಹುಟ್ಟಿರುವುದು ಇಂದ್ರನನ್ನು ತಿನ್ನುವುದಕ್ಕೆ. ಯಾರೂ ಅವನನ್ನು ಬಿಡಿಸಿಕೊಳ್ಳಲಾರರು.”

“ಆತನು ನಿನಗೆ ಸಿಕ್ಕದೆ ಹೋದರೆ ಏನು ಮಾಡುವೆ?”

“ಅದನ್ನು ನಾನು ಯೋಚಿಸಿಯೂ ಇಲ್ಲ, ಯೋಚಿಸುವುದೂ ಇಲ್ಲ.”

“ನಿನಗೆ ಕೊನೆ ಯಾವಾಗ?”

“ನನಗೆ ಕೊನೆ? ಇದ್ದಂತಿಲ್ಲ. ಆದರೆ, ಈ ದೇವಭೂಮಿಯಲ್ಲಿ ಈ ಚಳಿಗಾಳಿಯಲ್ಲಿ ಅದೂ ಈ ಸರೋವರದಿಂದ ಬೀಳುವ ಕುಳಿರ್ಗಾಳಿಯಲ್ಲಿ ನಾನು ಕೊರಗುತ್ತಿದ್ದೇನೆ. ಹೀಗೇ ಇದ್ದರೆ ಕರಗಿಯೂ ಹೋಗುವೆನೋ ಏನೋ?”

“ಹತ್ಯೆ ! ನಾನು ಹೇಳುವೆನು. ನಿನ್ನ ಕೈಗೆ ಇಂದ್ರನು ಸಿಕ್ಕುವುದಿಲ್ಲ ದೇವತೆಗಳೆಲ್ಲರೂ ಸೇರಿ ಆತನನ್ನು ಕೈಗೆ ಸಿಕ್ಕದಂತೆ ಮಾಡಬಲ್ಲರು.”

“ಇಲ್ಲ ಸಾಧ್ಯವಿಲ್ಲ”.

“ಹಾಗಾದರೆ, ನಿನಗೆ ಈ ಚಳಿಗಾಳಿಯಲ್ಲಿ ಕೊರಗಿ ಕರಗುವುದೇ ಗತಿ !”

“ನೀನು ನನ್ನ ಶಕ್ತಿಯನ್ನು ಕಾಣೆ. ನಾನು ಹುಟ್ಟಿರುವ ಕೆಲಸ ಮುಗಿಯುವವರೆಗೂ ನಾನು ಸಾಯುವುದಿಲ್ಲ.”

“ನಾನು ನಿನ್ನನ್ನು ಸುಟ್ಟುಬಿಡುವೆ.”

“ಸಾಧ್ಯವಿಲ್ಲ”

“ವಾಯುವು ನಿನ್ನನ್ನು ಶೋಷಿಸಿಬಿಡುವನು. ನೀನು ಆತನ ಕೈಗೆ ಸಿಕ್ಕಿದರೆ ತರಗೆಲೆಯಂತೆ ಜೀರ್ಣವಾಗಿ ಹೋಗುವೆ.”

“ನಾನು ಹುಟ್ಟಿರುವುದು ಇಂದ್ರನಿಗಾಗಿ. ಇಂದ್ರನನ್ನು ಆಹುತಿ ತೆಗೆದುಕೊಂಡೇ ಮುಂದಿನ ಮಾತು. ನಾನಿನ್ನು ಮಾತನಾಡುವುದಿಲ್ಲ ನನ್ನನ್ನು ಬಿಡು.”

ಅಗ್ನಿಯು ಏನು ಮಾಡಬೇಕೋ ತಿಳಿಯದಾದನು. “ಒಂದು ವೇಳೆ ಬೃಹಸ್ಪತಿಯೇ ಬಂದರೂ ಈ ಹತ್ಯೆಯು ಸಾಧ್ಯವಾಗುವುದೋ ಇಲ್ಲವೋ ಅಂದು ಇಂದ್ರನು ಓಡಿಹೋದಾಗ ಆತನು ಪಟ್ಟ ಗಾಬರಿಯನ್ನು ನೋಡಿದರೆ ಆತನು ನಿಜವಾಗಿಯು ಈ ಹತ್ಯೆಗೆ ಹೆದರಿರಬೇಕು. ಏನು ಮಾಡಬೇಕು?” ಅಗ್ನಿಯ ಯೋಚನೆಯನ್ನು ಕೇಳಿ ವಾಯುವೂ ಚಿಂತಾಪರನಾದನು.

ಇಬ್ಬರೂ ಯೋಚಿಸಿ ತಿರಸ್ಕರಣಿಯ ಸಹಾಯದಿಂದ ನಿರ್ವಾತ ಸ್ಥಳವನ್ನು ಸೃಷ್ಟಿಮಾಡಿ, ಅಲ್ಲಿ ಶಚೀದೇವಿಯ ಪೂಜೆಗೆ ಬೇಕಾದುದನ್ನೆಲ್ಲ ಸಿದ್ಧಮಾಡಿಕೊಟ್ಟು ತಾವು ಇಬ್ಬರೂ ಕೋಟೆ ಕಟ್ಟಿಕೊಂಡು ರಕ್ಷಣೆಗೆ ಕುಳಿತರು.

ಶಚಿಯು ಪೂಜೆಗೆ ಕುಳಿತಳು. ಆಕೆಯು ಮಾನವಸೃಷ್ಟಿಯಿಂದ ಬೇಕಾದುದನ್ನು ಮಾಡಬಲ್ಲಳು. ಜೊತೆಗೆ ಅಗ್ನಿ ವಾಯುಗಳ ಸಹಾಯವೂ ಇದೆ. ಕಲಶವನ್ನು ಇಟ್ಟು ಅದರಲ್ಲಿ ಇಂದ್ರನನ್ನು ಆವಾಹಿಸಿದಳು. ಇಂದ್ರ ಮಂತ್ರಗಳಿಂದ ಕಲಶಕ್ಕೆ ಪೂಜೆಮಾಡಿ, ತನ್ನ ಪ್ರಾಣಗಳನ್ನೂ ತನ್ನಿಂದ್ರಿಯಗಳನ್ನೂ ಕೊಟ್ಟು ಕಲಶದಲ್ಲಿರುವ ಆವಾಹಿತ ದೇವತೆಯು ರೂಪುಗೊಳ್ಳುವಂತೆ ಮಾಡಿದಳು. ಜೊತೆಗೆ ಋಕ್ಕಿನಿಂದ ಆವಾಹನೆ ಮಾಡಿ ಸಾಮಗಾನದಿಂದ ಆ ಕಲೆಯನ್ನು ವೃದ್ಧಿಗೊಳಿಸಿದಳು. ಕೊನಗೆ ಇಂದ್ರನು ಸೂಕ್ಷ್ಮರೂಪದಿಂದ ಕಾಣಿಸಿಕೊಂಡು “ಯಾರು ನನ್ನನ್ನು ಕರೆದವರು?” ಎಂದು ಸಣ್ಣ ಧ್ವನಿಯಲ್ಲಿ ಕೇಳಿದನು.

“ನಾನು ಶಚಿ. ತಿರಸ್ಕರಣಿಯು ಸುತ್ತಲೂ ವ್ಯಾಪಿಸಿರುವುದು. ನನ್ನೊಡನೆ ಮಾತನಾಡು. ನೀನು ಹತ್ಯೆಗೆ ದಿಗಿಲುಪಡಬೇಕಾಗಿಲ್ಲ. ಅಗ್ನಿ ವಾಯುಗಳು ಕಾವಲಾಗಿರುವರು.”

ಇಂದ್ರನು ನಿಟ್ಟುಸಿರುಬಿಟ್ಟು ಹೇಳಿದನು : “ದೇವಿ, ಕ್ಷಮಿಸು. ನಿನಗೆ ಹೇಳಿ ಬರಲೂ ಅವಕಾಶವಿರಲಿಲ್ಲ. ಆ ಹತ್ಯೆಯ ದರ್ಶನದಿಂದಲೇ ನನಗೆ ಮೈಯಾದ ಮೈಯ್ಯೆಲ್ಲ ಉರಿಯಲಾರಂಭಿಸಿತು. ಬೃಹಸ್ಪತಿಗೋ ಧನ್ವಂತರಿಗೋ ಅಶ್ವಿನಿ ದೇವತೆಗಳಿಗೋ ಇದಕ್ಕೆ ತಕ್ಕ ಪ್ರತಿಕ್ರಿಯೆ ತಿಳಿದಿತ್ತೋ ಏನೋ ? ಅಂತೂ, ನನಗೆ ಕಾಲವು ಚೆನ್ನಾಗಿಲ್ಲ. ಈ ಕಮಲನಾಳದ ಒಳಗೆ ಕುಳಿತು ತಪಸ್ಸು ಮಾಡುತ್ತಿದ್ದೇನೆ. ನನ್ನ ತಪಸ್ಸು ಪೂರ್ಣವಾಗುತ್ತಲೇ ನನಗೆ ಆಯುಧಗಳೆಲ್ಲ ದೊರೆಯುವುವು. ಈಗ ಆಯುಧಗಳು ಬಂದರೂ ಅವನ್ನು ಹಿಡಿದು ಪ್ರಯೋಗಿಸಲು ಶಕ್ತಿಯೂ ಇಲ್ಲ. ಧೈರ್ಯವೂ ಇಲ್ಲ ಇದು ಆಗಿರುವ ಅನರ್ಥ.”

“ಇನ್ನೆಷ್ಟು ದಿವಸ ಹೀಗಿರಬೇಕು ದೇವ ?”

“ನಿನ್ನ ಸನ್ನಿಧಿಯಿಂದ ಮನಸ್ಸು ಶುದ್ಧವಾಗುತ್ತಿದೆ. ಶಚಿ, ನೀನು ಇನ್ನು ಅಷ್ಟು ಹೊತ್ತು ಇಲ್ಲಿ ಇರಬಲ್ಲೆಯಾದರೆ, ನನ್ನ ಮನಸ್ಸು ಇನ್ನೂ ತಿಳಿಯಾಗಿ ನಾನು ಭವಿಷ್ಯವನ್ನು ನೋಡಬಲ್ಲವನಾಗುವೆನು.”

“ಆಗಲಿ ದೇವ, ಅಗ್ನಿ ವಾಯುಗಳನ್ನು ಕರೆಯಲೇ ?”

“ಕರೆ”

ನೆನೆಯುತ್ತಿದ್ದಂತೆಯೇ ಅಗ್ನಿವಾಯುಗಳು ಬಂದರು. ಇಂದ್ರನ ಆಕಾರವಿರುವ ತೇಜೋಮಂಡಲ, ಅದೂ ಮಲಿನವಾಗಿದೆ. ಅವರಿಬ್ಬರೂ ಕಣ್ಣಲ್ಲಿ ನೀರಿಟ್ಟುಕೊಂಡು,

“ಸ್ವಾಮಿ, ನಾವು ಏನೂ ಮಾಡಲಾಗುವುದಿಲ್ಲವೆ “ ಎಂದು ಕೇಳಿದರು.

ನೋಡುನೋಡುತ್ತಿದ್ದ ಹಾಗೆಯೇ ಇಂದ್ರಮಂಡಲವು ಪರಿಶುದ್ಧವಾಗುತ್ತ ಬಂತು. ಅದರ ಮಾಲಿನ್ಯವು ಕಳೆಯುತ್ತಾ ಬಂತು. ಇಂದ್ರನು ಈಗ ಸುಖಾಸನದಲ್ಲಿ ಸಮಾಹಿತನಾಗಿ ಕುಳಿತನು. ಕೇಳಿದನು : “ಅಲ್ಲಿ ಏನು ನಡೆದಿದೆ ? ಹೇಳಿ.”

ಅಗ್ನಿ ವಾಯುಗಳು ಹೊಸ ಇಂದ್ರನು ಬಂದಿರುವುದು, ಆತನು ಅಧಿಕಾರ ಪೂರ್ಣತೆಯನ್ನು ಬಯಸಿದುದು, ದೇವಸಭೆಯು ಮಾಡಿದ ನಿರ್ಣಯ, ಹೊಸ ಇಂದ್ರನು ಶಚಿಗೆ ಅವಧಿಯನ್ನು ಕೊಟ್ಟಿರುವುದು, ದೇವಗುರುವು ಮಹಾವಿಷ್ಣುವಿನ ಬಳಿಗೆ ಹೋಗಿರುವುದು, ಎಲ್ಲವನ್ನೂ ಹೇಳಿದರು. ಅದೆಲ್ಲವನ್ನೂ ಕೇಳಿ ಇಂದ್ರನಿಗೆ ಸಮಾಧಾನವಾಯಿತು.

ಇಂದ್ರನು ಹೇಳಿದನು : “ಮಹಾವಿಷ್ಣುವಿನ ಬಳಿಗೆ ದೇವಗುರುವು ಹೋಗಿರುವುದು ಬಹಳ ಸರಿಯಾಯಿತು. ಆತನು ಬರುವವರೆಗೆ ಕೊಂಚ ತಡೆದುಕೊಂಡಿರಿ. ನಾನು ನಹುಷನನ್ನು ಬಲ್ಲೆ. ಧರ್ಮಿಷ್ಠರಲ್ಲಿ ಅಗ್ರಗಣ್ಯರಲ್ಲಿ ಅಗ್ರಗಣ್ಯನು ಆತನು. ನಮ್ಮ ದುರದೃಷ್ಟದಿಂದ ಆತನಿಗೆ ದುರ್ಬುದ್ಧಿಯು ಬರಬೇಕಲ್ಲದೆ, ಅನ್ಯಥಾ ಇಲ್ಲ. ಆದರೂ ನಾವು ಎಚ್ಚರವಾಗಿರಬೇಕು. ನೀವು ಹೋಗಿ ಬನ್ನಿ.”

ಶಚಿಯು ಕೇಳಿದಳು : “ದೇವ, ಮತ್ತೆ ನಿನ್ನನ್ನು ಬಂದು ನೋಡಲು ಅಪ್ಪಣೆ ಕೊಡು.”

“ನನ್ನನ್ನು ನೋಡಬೇಕಾದರೆ ನಿನಗೆಷ್ಟು ಕಷ್ಟ ! ತಿರಸ್ಕರಿಣಿಯಿಲ್ಲದೆ ನನ್ನನ್ನು ನೋಡುವಂತಿಲ್ಲ. ನಾನು ಈಚೆಗೆ ಬರಬೇಕಾದರೆ ನನಗಿನ್ನೂ ಹತ್ಯೆಯ ಭೀತಿಯು ತಪ್ಪಿಲ್ಲ.”

“ವಜ್ರವನ್ನು ಪ್ರಾರ್ಥಿಸಿಕೊಂಡರೋ?”

“ನನಗೇನೋ ಪಾಪವು ಸಂಭವಿಸಿದೆ. ವಜ್ರವನ್ನು ಕುರಿತು ಧ್ಯಾನಿಸಲೂ ನನಗೆ ಧೈರ್ಯವಿಲ್ಲ. ಇರಲಿ, ದೇವಗುರುಗಳು ವೈಕುಂಠದಿಂದ ಬಂದ ಮೇಲೆ ಮತ್ತೆ ಬಾ. ನನಗೂ ನಿನ್ನ ಸಹವಾಸದಲ್ಲಿದ್ದರೆ ಏನೋ ಸುಖ.”

ಶಚಿಯು ನಾಚಿಕೊಂಡು ನಮಸ್ಕಾರ ಮಾಡಿ ಹೊರಟಳು. ಅಗ್ನಿ ವಾಯುಗಳೂ ಬೀಳ್ಕೊಂಡರು. ಇಂದ್ರನು ಎಲ್ಲರನ್ನೂ ಬೀಳ್ಕೊಟ್ಟು ತಾನು ಸೂಕ್ಷ್ಮರೂಪವನ್ನು ಧರಿಸಿ ಮೊದಲಿನಂತೆ ಕಮಲನಾಳದಲ್ಲಿ ಕುಳಿತನು. ಮಾನಸಸರೋವರದ ವಕ್ಷಸ್ಸಿನ ಮೇಲೆ ತೇಲುತ್ತಿದ್ದ ಬಾಷ್ಪಮೇಘವೊಂದು ಮರೆಯಾಯಿತು.