==೧೭.ಗೆಲುವೇ ಸೋಲು==
ಇನ್ನು ಅಷ್ಟು ಹೊತ್ತಿನೊಳಗೆ ವೃತ್ರನು ಗಾಬರಿಗೊಂಡು ಎದ್ದನು. ಮುಖ, ಕಣ್ಣು ಎಲ್ಲವೂ ಗಾಬರಿಯನ್ನು ಸೂಚಿಸುತ್ತ ಇತ್ತು. ಕಣ್ಣು ಬಿಟ್ಟು ನೋಡುತ್ತಾನೆ. ಇಂದ್ರನು ಅತಿ ವಿನಯದಿಂದ ಕುಳಿತಿದ್ದಾನೆ. ತನ್ನ ಪರಿವಾರದ ದಾನವೇಂದ್ರರೆಲ್ಲರೂ ಎಲ್ಲೆಲ್ಲಿದ್ದವರು ಅಲ್ಲಲ್ಲಿಯೇ ಒರಗಿದ್ದಾರೆ. ಒಂದೇ ಗಳಿಗೆಯೊಳಗಾಗಿ ಸುತ್ತಲೂ ನೋಡಿ, ಎಲ್ಲವೂ ಸಹಜವಾಗಿರುವುದನ್ನು ಕಂಡು ವೃತ್ರನು ನಗುತ್ತ “ಇಂದ್ರ, ನನಗೊಂದು ಕನಸಾಯಿತು. ಕನಸು ನಿಜವಾಗಿಯೇ ಇದ್ದಂತೆ ತೋರಿತಲ್ಲ ! ನೋಡಿದೆಯೋ ?” ಎಂದನು.
ಇಂದ್ರನು ತನ್ನನ್ನು ವೃತ್ರನು ಇಂದ್ರನೆಂದು ಸಂಬೋಧಿಸಿದುದನ್ನು ಗಮನಿಸದಂತೆ ಇದ್ದು “ಹೌದು ಪ್ರಭು.ಕನಸಿನ ವೈಭವವೇ ಅದು. ನಿಜದ ತಲೆಯನ್ನು ಮೆಟ್ಟಿಹಾಕಿದಂತೆ ಇರುತ್ತದೆ. ಅದೇನೆಂದು ಕೇಳಬಹುದೇ ?” ಎಂದನು.
ವೃತ್ರನು ಗಟ್ಟಿಯಾಗಿ ನಗುತ್ತ “ಕನಸಿನಲ್ಲಿ ನಾವಿಬ್ಬರೂ ಯುದ್ಧಮಾಡುತ್ತೇವೆ. ನೀನು ನನ್ನನ್ನು ಎದುರಿಸಿ ಹೊಡೆಯಲು ಬರುತ್ತೀಯೆ. ನನಗೇಕೋ ದಿಗಿಲಾಗುತ್ತಿದೆ. ನಾನು ಕಿರುಚಿಕೊಂಡು ಓಡುತ್ತೇನೆ. ನೀನು ಬಂದು ನನ್ನ ಕತ್ತು ಕಡಿಯುತ್ತೀಯೆ. ನಾನು ಯತ್ನವಿಲ್ಲದೆ ಕತ್ತು ಹೋದ ಮೇಲೂ ‘ಮರೆತೆಯಾ ? ವೃತ್ರನು ಸದೇಹನಾಗಿರುವುದಕ್ಕಿಂತ ವಿದೇಹನಾಗಿ ಹೆಚ್ಚು ಬಲಿಷ್ಠನು’ ಎಂದು ನಿನ್ನನ್ನು ಹಿಡಿದುಕೊಳ್ಳುತ್ತೇನೆ. ಆದರೂ ದಿಗಿಲಾಗಿ ಎಚ್ಚರವಾಯಿತು” ಎಂದು ನಗುತ್ತಾ “ನಿನಗೆ ನನ್ನನ್ನು ಕೊಲ್ಲುವ ಬುದ್ಧಿಯಿಲ್ಲವಲ್ಲಾ ?” ಎಂದು ಹೇಳುತ್ತಾನೆ ಇಂದ್ರನು, “ನನಗಂತಹ ಬುದ್ಧಿಯೇ ? ಚೆನ್ನಾಯಿತು’ ಎಂದು ನಗುತ್ತಾ ಒಳಗೊಳಗೆ “ದೇವ, ಈ ಕನಸು ನಿಜವಾಗಲಿ. ಈ ಭೂತವಿಂದು ಸಾಯಲಿ” ಎಂದು ನಾರಾಯಣನಿಗೆ ಕೈಮುಗಿಯುತ್ತಾನೆ.
ವೃತ್ರ ಹಾಗೆಯೇ ಅರೆಗಣ್ಣು ಮುಚ್ಚಿ ನಿದ್ದೆಯ ಜೋಂಪನ್ನು ಅನುಭವಿಸುತ್ತಾ ಒಂದಷ್ಟು ಹೊತ್ತು ಇದ್ದು, ಮೈಮುರಿದು ಎಚ್ಚರಮಾಡಿಕೊಂಡು, ಸುತ್ತಲೂ ಬಿದ್ದಿದ್ದ ದಾನವೇಂದ್ರರನ್ನು ತಿರಸ್ಕಾರವಾಗಿ ನೋಡುತ್ತಾ “ನೋಡು, ನಾವು ನಾಳೆಯ ಬೆಳಿಗ್ಗೆಯವರೆಗೆ ಹೀಗೇ ಬಿದ್ದಿರುವೆವೋ ಏನೋ ? ಹುಂ” ಎಂದು ಮೇಲಕ್ಕೆದ್ದು “ಇದು ಅಪ್ಪಣೆಯಲ್ಲ ವಿಶ್ವಾಸದ ಪ್ರಾರ್ಥನೆ. ಹಾಗೆಯೇ ಸಮುದ್ರತೀರಕ್ಕೆ ಹೋಗಿ ಬರೋಣ, ರಥವನ್ನು ತರಿಸುವೆಯಾ ?” ಎಂದನು.
ಇಂದ್ರನು “ಪ್ರಾರ್ಥನೆಯೆನ್ನುವಷ್ಟು ಗೌರವವೇಕೆ ? ತರಿಸುವೆನು” ಎಂದು ಹೇಳಿ ಹೋಗಿ ಪ್ರಹರಿಗೆ ಹೇಳಿದನು. ಇನ್ನೊಂದು ಗಳಿಗೆಯೊಳಗಾಗಿ ರಥವು ಬಂತು. ಇಂದ್ರ ವೃತ್ರರಿಬ್ಬರೇ ರಥದಲ್ಲಿ ಕುಳಿತು ಸಮುದ್ರತೀರಕ್ಕೆ ಹೊದರು. ಇಂದ್ರನಿಗೆ ಆಶ್ಚರ್ಯ ! ವೃತ್ರನು ಯಾವ ಕವಚವನ್ನೂ ಧರಿಸಿಲ್ಲ. ತಾನೂ ಯಾವ ಕವಚವನ್ನೂ ಧರಿಸಿಲ್ಲ. ಮೈಮೇಲೆ ಅಷ್ಟು ಆಭರಣಗಳಿವೆ. ಅಂದು ವೃತ್ರ ತನ್ನ ಗುರುಕಿರೀಟವನ್ನೂ ಧರಿಸಿಲ್ಲ !
ಸಮುದ್ರ ತೀರದಲ್ಲಿ ಯಾವುದ್ಯಾವುದೋ ಮಾತುಗಳನ್ನು ಆಡುತ್ತ ಆಡುತ್ತ ಇಬ್ಬರೂ ಸಂತೋಷವಾಗಿ ಹೊತ್ತು ಕಳೆಯುತ್ತಿದ್ದಾರೆ. ಇಂದ್ರನ ಮನಸ್ಸು ಮಾತ್ರ ಯಾವುದೋ ಮಹತ್ತರವಾದ ಕಾರ್ಯವನ್ನು ಸಾಧಿಸಬೇಕಾದ ಕಾಲದಲ್ಲಿ ಇರುವಂತೆ ಪೂರ್ಣವಾಗಿ ಜಾಗ್ರತವಾಗಿದೆ. ವೃತ್ರನು ತನ್ನ ದುಃಖವನ್ನು ಹೇಳಿಕೊಳ್ಳುತ್ತಾನೆ. “ನೋಡು ಇಂದ್ರ, ಬೇಕೆಂದರೂ ನಾನು ಯಾರೊಡನೆಯೂ ಯುದ್ಧಮಾಡುವಂತಿಲ್ಲವೋ? ನನಗೆ ಮಲ್ಲಯುದ್ಧ ಮಾಡಬೇಕೆಂದು ಆಸೆ. ನೀನು ಬೇಕೆಂದರೆ ಪರ್ವತದಷ್ಟು ಆಗಬಲ್ಲೆಯಂತೆ ! ಏಕೆ ನೀನು ನನ್ನ ಪ್ರಮಾಣಕ್ಕೆ ಸರಿಯಾದ ಪ್ರಮಾಣವುಳ್ಳವನಾಗಿ ನನ್ನೊಡನೆ ಒಮ್ಮೆ ಮಲ್ಲಯುದ್ಧ ಮಾಡಬಾರದು?” ಎನ್ನುತ್ತಾನೆ.
ಇಂದ್ರನು “ಅದೇನೂ ಅಂತಹ ಅಸಾಧ್ಯವಲ್ಲ. ಆದರೂ ನಿಜ ಹೇಳಬೇಕೆಂದರೆ ನಿನ್ನೆದುರಿನಲ್ಲಿ ನನ್ನ ಯಾವ ಪ್ರಭಾವವೂ ನಡೆಯುವುದಿಲ್ಲ. ನಿನ್ನನ್ನು ಕಂಡು ನನ್ನ ಸಿದ್ಧಿಗಳೇಲ್ಲ ಹೆದರಿ, ಎಲ್ಲಿಯೋ ಅವಿತುಕೊಂಡಂತಿವೆ” ಎಂದು ನಗುತ್ತಾನೆ.
“ಇಲ್ಲ ಇಂದ್ರ, ನಿನ್ನ ಸಿದ್ಧಿಗಳು ನಿನಗೆ ಹಿಂತಿರುಗಲಿ. ಜೊತೆಗೆ ನಾನೇ ಕೊನೆಗೆ ಸೋಲುತ್ತೇನೆ. ಇನ್ನಾದರೂ ಮನಸ್ಸು ಮಾಡು.”
“ನನ್ನ ಸಿದ್ಧಿಗಳೆಲ್ಲ ನನಗೆ ಹಿಂತಿರುಗಿ ಬಂದರೂ ನಾನೂ ನೀನೂ ಸ್ನೇಹಿತರಾಗಿರುವುದಾಗಿ ಪ್ರಮಾಣ ಮಾಡಿಕೊಂಡಿದ್ದೇವೆ. ಮಲ್ಲಯುದ್ಧವು ಏನಿದ್ದರೂ ಪ್ರಾಣವನ್ನು ಪಣವಾಗಿಟ್ಟು ಮಾಡಿದರೆ ಚೆನ್ನ ನಾನು ನಿನ್ನ ದ್ವೇಷಿಯಲ್ಲ. ಅದರಿಂದ ಸಾಧ್ಯವಿಲ್ಲ.”
“ಹಾಗಲ್ಲ ಇಂದ್ರ, ನಾನೇ ಅಪ್ಪಣೆ ಕೊಡುತ್ತೇನೆ. ನಿನಗೆ ವಿಶ್ವಾಸಘಾತುಕತ್ವವು ಬರದಿರಲಿ. ನಾನು ವರವನ್ನು ಕೊಡುತ್ತೇನೆ. ಬಾ, ಒಮ್ಮೆ ಮಲ್ಲಯುದ್ಧ ಮಾಡೋಣ.
ಈ ತೋಳುಗಳ ತೀಟೆ ತೀರಲಿ.”
“ಆಗಲಿ, ನೋಡೋಣ”
“ನನಗೆ ಬೇಕಾದುದು ಈಗ. ನೀನು ಏನೋ ಸಾವಧಾನವಾಗಿ ‘ಆಗಲಿ, ನೋಡೋಣ’ ಎನ್ನುತ್ತೀಯೆ.”
ಈ ವೇಳೆಗೆ ಸಂಜೆಯಾಯಿತು. ವೃತ್ರನು ಹೇಳಿದನು ; “ಇಂದ್ರ, ನೋಡು ಸೂರ್ಯನು ಪಶ್ಚಿಮದಲ್ಲಿ ಮುಳುಗುತ್ತಿದ್ದಾನೆ. ಸಂಜೆಯಾಗುತ್ತಿದೆ. ಈಗ ನನಗೆಷ್ಟು ಬಲ ಬಲ್ಲೆಯಾ ? ಬೇಕಾದರೆ, ಸಮುದ್ರವನ್ನೆಲ್ಲ ಅಂಗೈಯಲ್ಲಿ ಹಿಂದಕ್ಕೆ ತಳ್ಳಿಬಿಡುತ್ತೇನೆ. ನೋಡುವೆಯಾ ನನ್ನ ಪೌರುಷವನ್ನು ?”
“ಹೌದು, ನೀನಂತಹ ಬಲಶಾಲಿಯೆಂದೇ ನಾನು ನಿನ್ನ ಮೇಲೆ ಯುದ್ಧ ಮಾಡಲು ಹಿಂತೆಗೆದುದು.”
“ನೀನು ಯುದ್ಧ ಮಾಡುವುದಾದರೆ, ಅದನ್ನೆಲ್ಲ ಅತ್ತಿಡುವೆನು, ಆಯಿತು. ನಾನು ಎಷ್ಟು ಹೇಳಿದರೂ ನೀನೊಪ್ಪÅವುದಿಲ್ಲ. ಅದಿರಲಿ. ಹೋಗಲಿ, ಇಲ್ಲಿ ಬಂಡೆಗಳಂತೆ ತೇಲಿಬರುತ್ತಿರುವ ಈ ನೊರೆಯನ್ನು ನೋಡು. ಇದರಿಂದ ಹೊಡೆದು ಯಾರನ್ನಾದರೂ ಕೊಲ್ಲಲಾದೀತೆ ?”
“ನಿನ್ನಂತಹ ಪರಾಕ್ರಮಿಗೆ ಯಾವುದು ತಾನೇ ಸಾಧ್ಯವಿಲ್ಲ ? ಹೊಡೆಯಲು ಸಾಧನವಲ್ಲ ಮುಖ್ಯ. ಹೊಡೆಯುವ ಕೈ ಎಷ್ಟು ಬಲವನ್ನು ಆ ಸಾಧನಕ್ಕೆ ಕೊಡಬಲ್ಲುದು ಎಂಬುದು ಮುಖ್ಯ.”
“ನೀನು ಯಾರನ್ನಾದರೂ ಹಿಂದೆ ನೊರೆಯಿಂದ ಹೊಡೆದು ಕೊಂದಿದ್ದೀಯಾ?”
“ನನಗೆ ಇದನ್ನು ಆಯುಧವಾಗಿ ಉಪಯೋಗಿಸಬಹುದು ಎಂದು ಹೊಳೆದೇ ಇಲ್ಲ. ನನಗೆ ಬೇಕಾದಷ್ಟು ಆಯುಧಗಳಿರುವಾಗ ಈ ನೊರೆಯನ್ನೇಕೆ ಆಯುಧವಾಗಿ ಉಪಯೋಗಿಸಲಿ ?”
“ಈಗ ನಾನು ಹೇಳುವೆನು. ಎಲ್ಲಿ ಇದನ್ನು ಎತ್ತಿ ಹೊಡೆ, ನೋಡೋಣ.”
“ಯಾರನ್ನು ಹೊಡೆಯಲಿ ?”
“ನನ್ನನ್ನೇ ಹೊಡೆ.”
ಇಂದ್ರನು ಎಚ್ಚರವಾದನು. ಇನ್ನೂ ಮಹಾವಿಷ್ಣುವಿನ ಅಪ್ಪಣೆಯಿಲ್ಲ ಅದರಿಂದ ನಕ್ಕನು. “ನೀನು ಮಾಡುವ ಕೆಲಸವನ್ನು ನೋಡು ವೃತ್ರೇಂದ್ರ. ನಾನು ಇದನ್ನು ಎತ್ತಿ ಹೊಡೆದೆನೆಂದಿಟ್ಟುಕೋ. ನೀನು ಯಾವ ಆಯುಧಕ್ಕೂ ಜಗ್ಗದವನು. ಇನ್ನು ಈ ನೊರೆಗೆ ಜಗ್ಗುವೆಯಾ ? ನಿನಗೆ ನಾನು ಹೊಡೆದರೂ ನೀನು ಸಾಯುವುದಿಲ್ಲ. ನನಗೆ ಅದರಿಂದ ಅಪಪ್ರಥೆ. ನೀನು ಸತ್ತರೆ, ಏಕಾಂತದಲ್ಲಿ ಮಿತ್ರನನ್ನು ಹೊಡೆದು ಕೊಂದೆಯೆಂದು ನನಗೆ ಕೆಟ್ಟ ಹೆಸರು. ಹೀಗೆ ನೀನು ಮಾಡಬಹುದೇ? ಹಾಗೂ ಕೆಟ್ಟ ಹೆಸರು. ಅದರಿಂದ ಈ ಕಾರ್ಯ ನನಗೆ ಬೇಡ.”
“ನಿನ್ನ ಪೌರುಷವನ್ನಾದರೂ ನೋಡೋಣ, ಹೊಡೆ ನಿನಗೆ ಕೆಟ್ಟ ಹೆಸರು ಬರದಿರಲಿ.”
ಮತ್ತೆ ಇಂದ್ರನು ಒಳಗೆ ಮಹಾವಿಷ್ಣುವಿನ ಪ್ರಾರ್ಥನೆಯನ್ನು ಮಾಡಿದನು. ನಾರಾಯಣನು ಅಂತರ್ಹೃದಯದಲ್ಲಿ ಗೋಚರನಾಗಿ, “ಹೊಡೆ, ಸಾಯಲೆಂದೇ ಹೊಡೆ, ಅದರಲ್ಲಿ ನಿನ್ನ ವಜ್ರಾಯುಧವನ್ನು ಅಭಿಮಂತ್ರಿಸಿ ಹೊಡೆ. ಶತ್ರುನಾಶವಾಗಲಿ” ಎಂದನು. ವೃತ್ರನೂ ಮತ್ತೆಯೂ ಬಲವಂತ ಮಾಡಿದನು.
ಇಂದ್ರನು ಯೋಚಿಸುವವನಂತೆ ಹೊರಗೆ ವಿಮುಖನಾಗಿದ್ದು ಒಳಗೆ ಚಿಂತಿಸಿದನು. “ಹೌದು. ಕಾಲವು ಹಗಲಲ್ಲ. ರಾತ್ರಿಯಲ್ಲ ಸಂಜೆ. ನೊರೆಯು ಒಣಗಿದುದಲ್ಲ ಹಸಿಯದಲ್ಲ. ಯಾವ ಆಯುಧವೂ ಇಲ್ಲ. ಭೂತವೂ ಸಾಯಲು ಸಿದ್ಧವಾಗಿದೆ. ಸರಿ” ಎಂದು ವಜ್ರವನ್ನು ಆ ನೊರೆಯಲ್ಲಿ ಆರೋಪಿಸಿ, “ಇದೋ ವೃತ್ರ, ನನ್ನ ಸರ್ವಶಕ್ತಿಯನ್ನೂ ಪ್ರಯೋಗಿಸಿ, ಈ ನೊರೆಯಿಂದ ನಿನ್ನನ್ನು ಹೊಡೆಯುವೆನು. ನನಗೆ ಮಿತ್ರದ್ರೋಹವು ಬರದಿರಲಿ. ಇದರಿಂದ ನೀನು ಸಾಯಬೇಕು” ಎಂದು ಅವನನ್ನು ಹೊಡೆದನು.
ನೊರೆಯು ಅವನ ಮೈಗೆ ತಾಕಿತೋ ಇಲ್ಲವೋ, ವಜ್ರಾಯುಧವು ತನ್ನ ಕೆಲಸವನ್ನು ಮಾಡಿತು. ಆ ಪರ್ವತಾಕಾರದ ದೇಹದಲ್ಲಿ ಒಂದು ಪರ್ವತಶೃಂಗದ ಮೇಲೆ ನಿಂತಿದ್ದ ಮತ್ತೊಂದು ಗಿರಿಯಂತಿದ್ದ ತಲೆಯು ಥಟ್ಟನೆ ಕತ್ತರಿಸಿಬಿತ್ತು. ಪರ್ವತಾಕಾರದ ಆ ದೇಹವು ಉರುಳಿ ಬಿತ್ತು.
ಇಂದ್ರನು ತಟ್ಟನೆ ತನ್ನ ಶಚಿಪತಿತ್ವವನ್ನೂ, ದೇವರಾಜತ್ವವನ್ನು ಧಾರಣ ಮಾಡಿಕೊಂಡು, “ಇದೊ ! ದೇವರಾಜನಾಗಿ, ಶಚಿಪತಿಯಾಗಿ ಅಪ್ಪಣೆಮಾಡುತ್ತಿರುವೆನು. ಈ ಪರ್ವತಾಕಾರದ ಶರೀರವನ್ನು ಹೊತ್ತು ನಿಂತಿದ್ದ ಪ್ರಾಣವು ಈಚೆಗೆ ಬರಲಿ ! ಶರೀರವನ್ನು ರಚಿಸಿರುವ ಪಂಚಭೂತಗಳೆಲ್ಲವೂ ಈ ಕ್ಷಣದಲ್ಲಿ ವಿಘಟಿತವಾಗಿ ಭೂತಗಳೊಡನೆ ಸೇರಿಹೋಗಲಿ.......” ಎಂದನು.
ಇನ್ನೂ ಏನು ಹೇಳಬೇಕೆಂದಿದ್ದನೋ, ಅಷ್ಟರಲ್ಲಿ ನೀರಿನಲ್ಲಿ ತೊಯ್ದು ಹೋಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಬಟ್ಟೆಯು ಮುದ್ದೆಯಾಗಿ ಬೀಳುವಂತೆ, ಶುದ್ಧವಾಗಿ ನಿಶ್ಯಕ್ತನಾಗಿ ‘ಅಯ್ಯೋ !’ ಎಂದು ಬಿದ್ದುಬಿಟ್ಟನು.
ಅಗ್ನಿ, ವಾಯು, ಶಚೀ, ಬೃಹಸ್ಪತಿಗಳು ಕೂಡಲೇ ಅಲ್ಲಿಗೆ ಬಂದು ಇಂದ್ರನನ್ನು ಬೀಳದಂತೆ ಹಿಡಿದುಕೊಂಡರು. ಆತನ ಆಯುಧಗಳೆಲ್ಲವೂ ಸಾಂಗೋಪಾಂಗವಾಗಿ ಬಂದು ಆತನ ಸುತ್ತಲೂ ರಕ್ಷಣೆಗೆ ನಿಂತವು.
ಇತ್ತ ವೃತ್ರನ ದೇಹದಲ್ಲಿದ್ದ ಪ್ರಾಣವಾಯುವು ಹಾರಿಹೋಯಿತು. ಸ್ಥೂಲ ಭೂತಗಳೆಲ್ಲವೂ ಒಂದೇ ರೆಪ್ಪೆಮುಚ್ಚಿನೊಳಗೆ ಆ ದೇಹವನ್ನು ಬಿಟ್ಟು ತಮ್ಮ ತಮ್ಮ ಮೂಲಸ್ಥಾನದಲ್ಲಿ ಐಕ್ಯವಾದುವು. ವೃತ್ರನ ಅಂತಃಕರಣವು ಮಾತ್ರ ಅಲ್ಲಿಯೇ ಏನು ಮಾಡಬೇಕೋ ತಿಳಿಯದೆ ಒದ್ದಾಡುತ್ತಿತ್ತು.
* * * *