ಮಹಾಕ್ಷತ್ರಿಯ/ತುಂಟ ಕುದುರೆಯ ಸವಾರಿ

೬.ತುಂಟ ಕುದುರೆಯ ಸವಾರಿಸಂಪಾದಿಸಿ

ವಿಶ್ವರೂಪಾಚಾರ್ಯನು ದಿನದಿನವೂ ಮಾಡುವ ಹವಿರ್ದಾನಾದಿಗಳನ್ನು ಮುಗಿಸಿಕೊಂಡು ಎಂದಿನಂತೆ ವೇದಾಧ್ಯಯನ ಮಾಡುತ್ತ ನಡುಮನೆಯಲ್ಲಿ ಕುಳಿತಿದ್ದಾನೆ. ಪ್ರಹರಿಯು ಬಂದು “ದೇವರಾಜನು ದರ್ಶನವನ್ನು ಬಯಸಿ ತಮ್ಮ ಸಮಯವನ್ನು ನೋಡಿಕೊಂಡು ಬರಲು ಹೇಳಿಕಳುಹಿಸಿದ್ದಾನೆ” ಎಂದು ಅರಿಕೆ ಮಾಡಿದನು. ಆಚಾರ್ಯನು ‘ಇಂದ್ರನನ್ನು ಬರಹೇಳು’ ಎಂದು ಹೇಳಿಕಳುಹಿಸಿ, ತಾನೂ ಇಂದ್ರನನ್ನು ಸ್ವಾಗತ ಮಡಲು ತಕ್ಕ ವೇಷಭೂಷಣಗಳನ್ನು ಧರಿಸಿ ಕುಳಿತುಕೊಂಡನು. ತಲೆಯ ಮೇಲೆ ಮೂರು ತಲೆಗಳಿಗೂ ಹೊಂದಿಕೊಂಡು ಜಟೆಗಳನ್ನು ಮುಚ್ಚುತ್ತ ರತ್ನಕಿರೀಟವು ಶೋಭಿಸುತ್ತಿದೆ. ಕಿವಿಯಲ್ಲಿ ದೇದೀಪ್ಯಮಾನವದ ಜೀವರತ್ನಗಳ ಕುಂಡಲಗಳು ಉಜ್ವಲವಾಗಿವೆ. ದಿವ್ಯಸುಂಗಧವನ್ನು ಹೀರುತ್ತಿರುವ ದಿವ್ಯಪುಷ್ಪಮಾಲೆಗಳು ಕಂಠದಲ್ಲಿ ಮನೋಹರವಾಗಿವೆ. ಅವುಗಳೊಡನೆ ಸ್ಪರ್ಧೆ ಮಾಡುತ್ತಿರುವಂತೆ ಜೀವರತ್ನಗಳ ಮಾಲೆಗಳು ತೇಜೋಮಂಡಲ ವಿರಾಜಿತವಾಗಿ ರಾರಾಜಿಸುತ್ತಿವೆ. ತೋಳುಗಳಲ್ಲಿ ಅಂಗದಗಳು, ಮುಂಗೈಗಳಲ್ಲಿ ಕಟಕಗಳು, ಬೆರಳುಗಳಲ್ಲಿ ಉಂಗುರಗಳೂ ವಿರಾಜಿಸುತ್ತಿವೆ. ಹಾಗೆಯೇ ದಿವ್ಯವಾದ ಪೀತಾಂಬರವನ್ನಟ್ಟು ಅದಕ್ಕೆ ತಕ್ಕ ಉತ್ತರೀಯವನ್ನು ಧರಿಸಿದ್ದಾನೆ. ಕುಳಿತಿರುವ ಭದ್ರಾಸನವು ತಾನು ಹೇಮಮಯವಾಗಿದ್ದರೂ ಕುಳಿತವರಿಗೆ ಮೃದುಪೀಠವಾಗಿರುವೆನೆಂದು ಹೆಮ್ಮೆ ಕೊಚ್ಚಿಕೊಳ್ಳುವಂತೆ ಮೆರೆಯುತ್ತಿದೆ. ಮುಗ್ಗುಲುಗಳಲ್ಲಿ ಎದುರಿಗೆ ಬಂದವರಿಗೆಂದು ರತ್ನಾಸನಗಳು ಸಿದ್ಧವಾಗಿವೆ. ನೆಲವು ಇದೆಯೋ ಇಲ್ಲವೊ ಎಂಬಂತೆ ಸೂಕ್ಷ್ಮವಾಗಿ ಆಸನದ ಪಾದಗಳೆಲ್ಲ ಆಕಾಶದಲ್ಲಿದ್ದಂತೆ ಇವೆ. ಎಲ್ಲೆಲ್ಲಿಯೂ ತೇಜಸ್ಸೇ ತೇಜಸ್ಸಾಗಿ ಸರ್ವವೂ ಪ್ರಕಾಶಮಾನವಾದರೂ ಕಣ್ಣುಕುಕ್ಕುವಷ್ಟು ತೀವ್ರವಲ್ಲದ ಒಂದು ಮನೋಹರ ತೇಜೋಮಂಡಲವಾಗಿ ಸೌಮ್ಯವಾಗಿ ವಿರಾಜಿಸುತ್ತಿವೆ.

ಆಚಾರ್ಯನು ಯೋಚಿಸಿದನು : “ದೇವರಾಜನು ಇಂದು ಬರಲು ಕಾರಣವೇನಿರಬೇಕು? ಅವಸರದಲ್ಲಿ ಬಂದಂತಿಲ್ಲವಾಗಿ ಈ ಕೂಡಲೇ ಮಾಡಬೇಕಾದ ಕಾರ್ಯವೇನೂ ಇರಲಾರದು. ನಾವು ಮಾತಾಮಹರಿಗೆ ಕೊಡುವ ಗುಪ್ತ ಹವಿರ್ಭಾಗದ ವಿಚಾರವಿರಬೇಕು. ಹೌದು. ದೇವಾಚಾರ್ಯನಾಗಿ ದಾನವರಿಗೆ ಆಹುತಿಕೊಡುವುದು ಸರಿಯಲ್ಲ. ಆದರೆ, ನಾವು ದ್ವಾಮುಷ್ಯಾಯಣರು. ನಾವು ದೇವತೆಗಳ ಪುತ್ರರು ಹೇಗೋ ಹಾಗೆಯೇ ದಾನವರಿಗೂ ಪುತ್ರವರ್ಗ. ನಾವು ಇಬ್ಬರಿಗೂ ಸೇರಿದವರು. ಅದರಿಂದ ಆ ಮಾತು ಎತ್ತುವಂತಿಲ್ಲ. ಇನ್ನು ಉಳಿದುದು ನಮ್ಮ ಸ್ವಂತ ವಿಚಾರ. ನಮ್ಮ ಸ್ವಂತ ವಿಚಾರ ನಮ್ಮಲ್ಲಿ ಆಕ್ಷೇಪಣೀಯವಾಗಿ, ದೇವಾಚಾರ್ಯ ಪದವಿಗೆ ಒಪ್ಪದಂತಹ ಆಚಾರವು ಯಾವುದೂ ಇಲ್ಲ. ಸುರಾಪಾನದ ಮಾತು : ಅದು ತೀರ ನಮ್ಮ ಸ್ವಂತದ ವಿಚಾರ. ಅದು ಇಲ್ಲಿಗೆ ಬಂದ ಮೇಲೆ ಆರಂಭಿಸಿದುದಲ್ಲ ನಮಗೆ ಅದು ಬಹುದಿನದಿಂದ ಬಂದಿರುವ ವಿಷಯ. ನಾವು ಇಲ್ಲಿಗೆ ಬರುವಾಗ ಇದ್ದುದು. ಅದು ಇಂದ್ರನಿಗೂ ತಿಳಿದೇ ಇದೆ. ಅದರಿಂದ ಅದರ ವಿಚಾರವೂ ಇರಲಾರದು. ಹುಂ ಆತನೇ ಇಂದು ಹೇಳುವನಲ್ಲ ! ನಾವೇಕೆ ಬರಿದೆ ಚಿಂತಿಸಿ ತಲೆ ಕೆಡಿಸಿಕೊಳ್ಳಬೇಕು ?” ಎಂದು ನಿಶ್ಚಿಂತನಾಗಿ ವೇದಾಧ್ಯಯನ ಮಾಡುತ್ತ ಕುಳಿತನು.

ಇನ್ನೊಂದು ಗಳಿಗೆಯೊಳಗಾಗಿ ಇಂದ್ರನು ಬಂದನು. ಹಸುರು ಕುದುರೆಗಳು ಕಟ್ಟಿರುವ, ನವರತ್ನ ಖಚಿತವಾದ ರಥದಲ್ಲಿ ಬಂದು, ಮಾತಲಿಯ ಹಸ್ತ ಲಾಘವದಿಂದ ಕೆಳಕ್ಕಿಳಿದು ಆತನ ಹಿಂದೆಯೇ ದೇವಾಚಾರ್ಯನ ಸಮ್ಮುಖಕ್ಕೆ ಬಂದನು. ದೇವಾಚಾರ್ಯನು ‘ವಿಜಯೀಭವ’ ಎಂದು ಆಶೀರ್ವಾದ ಮಾಡುತ್ತಾ ತನಗೆ ಕೈಮುಗಿದ ದೇವರಾಜನನ್ನು ರತ್ನಾಸನಗಳೊಂದರಲ್ಲಿ ಕುಳ್ಳಿರಿಸಿದನು. ದೇವಾಧಿಪತಿಯು ದೊಡ್ಡವರಿಗೆ ಸಹಜವಾದ ಮಂದಹಾಸದಿಂದ ಶೋಭಿಸುತ್ತ “ಆಚಾರ್ಯರಿಗೆ ಸರ್ವಥಾ ಕುಶಲವಷ್ಟೇ” ಎಂದು ವಿಚಾರಿಸಿದನು. ಆಚಾರ್ಯನೂ ನಸುನಗುತ್ತಾ “ಶಚೀಪತಿಯ ಅನುಗ್ರಹವು ತಾನೇತಾನಾಗಿರಲು ನಮಗೆ ಯಾವ ರೂಪದಲ್ಲಿ ತಾನೇ ಕೊರತೆಯು ಕಾಣಿಸಿಕೊಳ್ಳಬಲ್ಲದು? ಎಂದನು.

ಇಂದ್ರನು ಸಮಾಧಾನವನ್ನು ಸೂಚಿಸುವ ನಗೆಯನ್ನು ನಕ್ಕು, “ಆಚಾರ್ಯರಲ್ಲಿ ದೇವಕುಲದ ಪ್ರಾರ್ಥನೆಯೊಂದನ್ನು ಸಲ್ಲಿಸಲು ಬಂದಿದ್ದೇನೆ. ವರವೆಂದು ಅದನ್ನು ಅನುಗ್ರಹಿಸಿ ನಮ್ಮನ್ನು ಕಾಪಾಡಬೇಕು” ಎಂದು ಕೈಮುಗಿದನು.

ಆಚಾರ್ಯನು “ನಮ್ಮನ್ನು ತಮಗೆ ಒಪ್ಪಿಸಿಕೊಂಡಿದ್ದೇನೆ. ಅದರಿಂದ ನಮ್ಮ ಅಸ್ತಿತ್ವಕ್ಕೆ ಲೋಪ ಬರದಂತಹ ಏನನ್ನು ಬೇಕಾದರೂ ಕೇಳಬಹುದು. ಸಂಕೋಚವು ಬೇಕೇ ಇಲ್ಲ” ಎಂದನು.

“ದೇವಾ, ತಾವು ಗುಪ್ತವಾಗಿ ಹವಿರ್ಭಾಗಗಳನ್ನು ಸಲ್ಲಿಸುತ್ತಿರುವುದಾಗಿ ವದಂತಿ ಬಂತು. ದಾನವರು ದೇವತೆಗಳ ಶತ್ರುಗಳು. ತಾವು ದೇವಾಚಾರ್ಯರು. ಅದರಿಂದ ಶತ್ರುವೃದ್ಧಿಯನ್ನು ಬಯಸಬಾರದು ಎಂದು ದೇವತೆಗಳು ತಮ್ಮನ್ನು ಪ್ರಾರ್ಥಿಸುವರು.”

“ದೇವಪತಿ, ತಾವು ಹೇಳುವುದು ಸಹಜವಾದುದು. ಆದರೆ ಒಂದನ್ನು ತಾವು ಗಮನಿಸಿದಂತಿಲ್ಲ. ನಾವು ದ್ವಾಮುಷ್ಯಾಯಣರು. ಮಾತಾಪಿತೃಗಳು ಇಬ್ಬರ ಕುಲದವರಲ್ಲಿಯೂ ಭಕ್ತರಾಗಿ ಅವರವರ ಶ್ರೇಯಸ್ಸನ್ನು ಬಯಸತಕ್ಕವರು. ಅದರಿಂದ, ನಾವು ದೇವಾಚಾರ್ಯತ್ವವನ್ನು ವಹಿಸಿಕೊಂಡಿದ್ದರೂ ದೇವಸಹಜವಾದ ದಾನವದ್ವೇಷವನ್ನು ಅಂಗೀಕರಿಸಿದವರಲ್ಲ. ಹಾಗೆ, ಅಂಗೀಕರಿಸಲೂ ಸಾಧ್ಯವಿಲ್ಲದ ಆ ದ್ವೇಷದ ಮಾತನ್ನೇ ಎತ್ತದೆ, ನಾವು ‘ದೇವಾನಾಂ ಸ್ವಸ್ತಿ, ದಾನವಾನಾಂಚ’ ಎಂದೇ ಹೇಳುವವರು. ಆದರೂ, ದೇವರಾಜರ ಮುಖಾಂತರ ಸಲ್ಲಿಸಿದ ದೇವತೆಗಳ ಪ್ರಾರ್ಥನೆಯು ವಿಫಲವಾಗಬಾರದೆಂದು ನಾವು ಹೀಗೆ ವರವನ್ನು ಕೊಡುವೆವು. ನಾವು ಮಾಡುತ್ತಿರುವ ಹವ್ಯದಾನದಿಂದ ಲಭಿಸುವ ದಾನದ ತೇಜಸ್ಸು ಏನಿದ್ದರೂ ನಮ್ಮ ಅನಂತರ ಫಲಿಸುವುದು. ಇನ್ನು ತಾವು ಆ ವಿಚಾರವನ್ನು ಅಷ್ಟಕ್ಕೇ ಬಿಡಬೇಕು. ಅದನ್ನು ಒತ್ತಬಾರದು. ಅಲ್ಲದೆ, ನಾವು ನಮ್ಮ ಕರ್ತವ್ಯವನ್ನು ಮಾಡಿಕೊಂಡು ಹೋಗುವುದರಲ್ಲಿ ಅಡ್ಡಿಯಾಗಿ ವ್ಯಥೆಗೆ ಗುರಿಯಾಗಬಾರದು.”

ಇಂದ್ರನು ಆಚಾರ್ಯನ ಭಾವವನ್ನು ಪೂರ್ಣವಾಗಿ ಗ್ರಹಿಸಿದನು. ಆತನು ಮಾಡುವ ಕಾರ್ಯಕ್ಕೆ ಯಾರೂ ಅಡ್ಡಿ ಬರಬಾರದು. ಅದು ಪ್ರಾರ್ಥನೆಯಲ್ಲ ಆಜ್ಞೆ, ಯಾರಾದರೂ ಅಡ್ಡಿಬಂದರೆ, ಅವರನ್ನು ತಾನು ನಿಗ್ರಹಿಸದೆ ಇರುವುದಿಲ್ಲ. ಆ ನಿಗ್ರಹದಿಂದ ವ್ಯಥೆಗೆ ಗುರಿಯಾದರೆ, ಅದಕ್ಕೆ ತಾನು ಹೊಣೆಯಲ್ಲ. ಇದಿಷ್ಟನ್ನೂ ಕೊಂಚವೂ ಒರಟುತನವಿಲ್ಲದೆ, ಸಹಜವಾಗಿ, ಸರಳವಾಗಿ, ದೃಢವಾಗಿ ಹೇಳಿರುವ ಆಚಾರ್ಯನ ಭಂಗಿಯನ್ನು ನೋಡಿ ಕಡ್ಡಿಯನ್ನು ತುಂಡುಮಾಡುವಂತೆ ಖಡಾಖಡಿಯಾಗಿಯಾದರೂ ವಿರಸವಾಗದಂತೆ ಹೇಳಿದ ಆತನ ಮನೋದಾಢರ್ಯ್‌ವನ್ನು ಕಂಡು, ಇಂದ್ರನು ಸಂತೋಷಪಟ್ಟನು. ಅದರ ಜೊತೆಯಲ್ಲಿಯೇ ಇರುವ ವರಪ್ರಸಾದವನ್ನು ಭಕ್ತಿಯಿಂದ ಸ್ವೀಕರಿಸಿ, ಅದನ್ನು ಮಾತಿನಲ್ಲೂ ಹೇಳುತ್ತ “ತಾವು ಕೊಟ್ಟ ವರಪ್ರದಾನದಿಂದ ದೇವತೆಗಳು ತೃಪ್ತರಾಗಿ, ತಮಗೆ ಕೃತಜ್ಞತೆಯನ್ನು ಒಪ್ಪಿಸುವರು. ಆದರೂ ವಿಷಾದ ಬೀಜವು ಅಳಿಯಲಿಲ್ಲ” ಎಂದನು.

ವಿಶ್ವರೂಪನು ನಗುತ್ತ “ದೇವತೆಗಳು ಅಜರ ಅಮರರು ಎಂದು ಪ್ರಖ್ಯಾತಿ. ಬಹುಶಃ ಆ ಖ್ಯಾತಿಯು ದೇವಾಚಾರ್ಯರಾಗಿರುವ ನಮಗೂ ಅನ್ವಯಿಸಿದರೆ ವಿಷಾದ ಬೀಜವು ಇದ್ದರೂ ಇಲ್ಲದಂತೆಯೇ ತಾನೇ? ಅಲ್ಲದೆ, ದೇವತೆಗಳು ಹೂಡುವ ಯಾವ ಆಟದಲ್ಲಿ ತಾನೇ ವಿಷಾದಬೀಜವಿಲ್ಲ ? ಅದರಿಂದ ನಾವಾಡಿದ ಮಾತು ಸಹಜವೇ ಆದಂತಾಯಿತು ತಾನೇ ?” ಎಂದನು.

ದೇವೇಂದ್ರನು ಅದನ್ನೊಪ್ಪಿಕೊಳ್ಳುತ್ತ “ದೇವಾಚಾರ್ಯರು ಕೊಟ್ಟ ವರ ದೇವತೆಗಳ ವರದಂತೆಯೇ ಸಗರ್ಭವಾಗಿದೆ. ಅದರಿಂದ ಏನೂ ಹೇಳುವಂತಿಲ್ಲ ಆಯಿತು. ಇನ್ನೊಂದು ವಿಚಾರ. ಅಪ್ಪಣೆಯಾದರೆ ಬಿನ್ನವಿಸುವೆನು.” ಎಂದನು.

ವಿಶ್ವರೂಪಾಚಾರ್ಯನು ದೇವರಾಜನ ವಿನಯವನ್ನು ನೋಡಿ ಕರಗಿ ಹೋದನು. ಆ ವಿನಯವರ್ತನವನ್ನು ನೋಡಿ, ಅದಕ್ಕೆ ವಶನಾಗಿ ತಾನೂ ಅಷ್ಟೇ ವಿನಯದಿಂದ, “ಆಗಬಹುದು ಸಿದ್ಧವಾಗಿದ್ದೇನೆ” ಎಂದನು.

ಇಂದ್ರನು ಬಹುಗಂಭೀರವಾಗಿ, ಮರ್ಯಾದೆಯಿಂದ, ವಿನಯದಿಂದ, ಪ್ರಸ್ತಾಪಿಸಿದನು. “ಇದೂ ದೇವಗಣಗಳ ಪ್ರಾರ್ಥನೆ. ದೇವಾಚಾರ್ಯರಾದ ತಾವು ಸತತವಾಗಿ ಸುರಾಪಾನ ಮಾಡುತ್ತಿರುವುದು ದೇವಗಣಕ್ಕೆ ಸಮ್ಮತವಿಲ್ಲ. ಅದರಿಂದ ಅವರೆಲ್ಲರೂ ಬೇಕೆಂದರೆ ಸೋಮರಾಜನನ್ನು ಪ್ರಾರ್ಥಿಸಿ, ತಮಗೆ ಯಥೇಚ್ಛವಾಗಿ ಸೋಮವು ಯಾವಾಗಲೂ ಸಿದ್ಧವಾಗಿರುವಂತೆ ಮಾಡಿಕೊಡಲು ಸಿದ್ಧರಾಗಿರುವರು. ತಾವು ಅದನ್ನು ಪರಿಗ್ರಹಿಸಿ ಇದನ್ನು ತ್ಯಜಿಸಬೇಕು.”

ಆಡಿದ ಮಾತಿನಲ್ಲಿ ತಾನು ದೇವಪತಿಯೆಂಬ ಅಹಂಕಾರವಿರಲಿಲ್ಲ. ತನ್ನಪ್ಪಣೆ, ಇದನ್ನು ನಿರಾಕರಿಸಿದರೆ ಶಿಕ್ಷೆಗೆ ಗುರಿಯಾಗಬೇಕೆಂಬ ಭಯವ್ಯಂಜನವಿರಲಿಲ್ಲ. ಮಾತು ಸಹಜವಾಗಿತ್ತು. ಚಿಕ್ಕವರು ದೊಡ್ಡವರಲ್ಲಿ ಬಿನ್ನವಿಸಿಕೊಳ್ಳುವ ರೀತಿಯಿತ್ತು. ಆದರೂ ವಿಶ್ವರೂಪನು ವ್ಯಗ್ರನಾದನು : “ದೇವರಾಜ, ಇವೆಲ್ಲವೂ ಸಹಜವಾಗಿ ದೇವಗುರುಗಳಾದ ಬೃಹಸ್ಪತ್ಯಾಚಾರ್ಯರಲ್ಲಿ ಇರಬೇಕಾದ ಗುಣಗಳು. ದೇವತೆಗಳಿಗೆ ಹೇಳಿ, ‘ವಿಶ್ವರೂಪನು ಏನಿದ್ದರೂ ತಾತ್ಕಾಲಿಕವಾಗಿ ದೇವಾಚಾರ್ಯನಾದವನು. ಆತನು ತಾನಾಗಿ ಬೇಡವೆಂದರೂ ಆಯಿತು. ದೇವರಾಜರಾದ ತಾವು ಬೇಡವೆಂದರೂ ಆಯಿತು, ಹೀಗಿರುವಾಗ, ಮಲ್ಲಿಗೆಯಲ್ಲಿ ಪಾರಿಜಾತದ ಸೌರಭವನ್ನು ಬಯಸುವ ಈ ಬಯಕೆಗಳಿಂದ ಫಲವಿಲ್ಲ” ಎಂದು ಹೇಳಿಬಿಡಿ.

“ಆಚಾರ್ಯ, ಸುರಾಪಾನವು ತಮೋಗುಣವನ್ನು ಬೆಳೆಸುವುದು ; ಸೋಮಪಾನವು ಸತ್ವವಾಗುವ ರಜೋಗುಣವನ್ನು ಬೆಳೆಸುವುದು. ಅದರಿಂದ ದೇವತೆಗಳು ಸೋಮಪಾನವನ್ನು ಬಯಸುವರು.”

ವಿಶ್ವರೂಪನು ಬದ್ಧಭೃಕುಟಿಯಾದನು. “ಇದನ್ನು ನಾನು ತಿಳಿಯೆನೆನ್ನುವೆಯಾ? ದೇವರಾಜ, ಇದೆಲ್ಲವನ್ನೂ ನಾನು ಬಲ್ಲೆ, ಅಷ್ಟೆ ಅಲ್ಲದೆ ಸುರೆಯು ಸೋಮಕ್ಕಿಂತ ಬಲವಾದುದು. ಅದು ಪ್ರಾರ್ಥಿಸಿಕೊಳ್ಳದಿದ್ದರೆ ಸೋಮನನ್ನು ತನ್ನಂತೆ ಮಾಡಿಕೊಳ್ಳಬಲ್ಲದು. ಅದನ್ನೂ ಬಲ್ಲೆ. ಆದರೂ ಆ ತಮೋಗುಣವನ್ನು ಸತ್ವರಜಸ್ಸುಗಳಾಗಿ ಮತ್ತೆ ಯಾರೂ ಏನು ಹೇಳಬೇಕಾಗಿಲ್ಲ. ಬೇಕಾಗಿದ್ದರೆ ನಮ್ಮನ್ನು ಆಚಾರ್ಯರನ್ನಾಗಿ ಇಟ್ಟುಕೊಳ್ಳಬಹುದು. ಇಲ್ಲದಿದ್ದರೆ ಬೇಕಾಗಿಲ್ಲ” ಎಂದನು.

ದೇವರಾಜನು ಹಾಗೆ ತಿರಸ್ಕೃತನಾದರೂ ತನ್ನ ಸೌಜನ್ಯವನ್ನು ಬಿಡದೆ ಹೇಳಿದನು : “ದೇವ, ಆ ಸುರಾಪಾನವೇ ತಮ್ಮನ್ನು ದಾನವಪ್ರೇಮಿಗಳನ್ನಾಗಿ ಮಾಡಿರುವುದು. ಅದು ತಮೋಗುಣವನ್ನು ವರ್ಧಿಸಿ ತಾವೂ ತಮ್ಮ ಪಕ್ಷಪಾತಿಗಳಾಗಿರುವಂತೆ ಮಾಡಿದೆಯೆಂದು ದೇವಗಣದ ಅಭಿಪ್ರಾಯ.”

ವಿಶ್ವರೂಪನು ಹೇಳಿದನು : “ದೇವರಾಜಾ, ಆಗಲೇ ಹೇಳಿದೆನು. ಇದು ನಮ್ಮ ಸ್ವಂತ ವಿಚಾರ. ಇದನ್ನು ನಾವು ಅಂಗೀಕರಿಸಿದ್ದೇವೆ. ಹಸುವನ್ನು ಒಪ್ಪಿಕೊಂಡಾಗ, ಅದರ ಕೊಂಬು, ಬಾಲಗಳನ್ನೂ ಒಪ್ಪಿಕೊಂಡಂತೆ, ನಮ್ಮನ್ನು ಅಂಗೀಕರಿಸಿದವರು ನಮ್ಮ ಕೆಟ್ಟ ಚಾಳಿಗಳನ್ನು ದುರ್ಗುಣಗಳನ್ನು ಅಂಗೀಕರಿಸಬೇಕು. ನಾವು ಪ್ರಾಣವನ್ನಾದರೂ ಬಿಟ್ಟೇವು, ಇದನ್ನು ಬಿಡುವುದಿಲ್ಲ. ಅದರಿಂದ ಇದರಲ್ಲಿ ನಮಗೆ ಸೌಖ್ಯವಿದೆ. ಅದರಿಂದ ಇದರಲ್ಲಿ ನಮಗೆ ವಿಶ್ವಾಸವಿದೆ. ಇನ್ನೂ ಒಂದು ಸಲ ಹೇಳುವೆನು. ನಾವು ಪ್ರಾಣವನ್ನಾದರೂ ಬಿಟ್ಟೇವು, ಸುರಾಪಾನವನ್ನು ಬಿಡುವುದಿಲ್ಲ.

ದೇವರಾಜನಿಗೆ ಸಹಜವಾಗಿ ಕೋಪ ಬಂತು. ಆಚಾರ್ಯನಲ್ಲದೆ ಇನ್ನು ಯಾರೇ ಆಗಿದ್ದರೂ ಅಲ್ಲಿಯೇ ಶಿಕ್ಷಿಸಿ ಬುದ್ಧಿ ಕಲಿಸುತ್ತಿದ್ದನು. ಆದರೆ ಆಚಾರ್ಯನಷ್ಟೇ ಅಲ್ಲ, ತಾನೇ ಹೋಗಿ ಬ್ರಹ್ಮನಾಜ್ಞೆಯೆಂದು ಗೌರವದಿಂದ ವರಿಸಿರುವ ಆಚಾರ್ಯ. ಅದರಿಂದ ಬಂದ ಕೋಪವನ್ನೆಲ್ಲ ನುಂಗಿಕೊಂಡು, “ದೇವಾ, ತಾವು ದೊಡ್ಡವರು. ನಿಯತಿಗೆ ಭಂಗ ತರಬಾರದು. ಆಚಾರ್ಯರಾಗುವ ಮುಂಚೆ ಯಥೇಚ್ಛಾಚಾರವು ಶೋಭಿಸುತ್ತಿತ್ತು. ಈಗ ನಿಯತಾಚಾರವು ಮಾತ್ರ ಶೋಭಿಸುವುದು” ಎಂದನು.

ವಿಶ್ವರೂಪನು ಗಹಗಹಿಸಿ ನಕ್ಕು ಹೇಳಿದನು : “ಈ ಪ್ರಶ್ನಕ್ಕೆ ಆಗಲೇ ಉತ್ತರ ಕೊಟ್ಟಾಗಿದೆ. ಸ್ವೇಚ್ಛೆಯಿಂದ, ಬಯಸಿ ಬಯಸಿ, ಪಡೆದ ಪದವಿಗಾಗಿ ಯಥೇಚ್ಛಾಚಾರವನ್ನು ಬಿಡಬೇಕು. ಯಾದೃಚ್ಛಿಕವಾಗಿ ನಮಗೆ ಬಂದಿರುವ ಪದವಿಯ ಮೋಹ ನಮಗೆ ಇಲ್ಲ ಅದರಿಂದ ನಾವು ನಿಯಂತ್ರಿತರಾಗುವುದಿಲ್ಲ!”

“ನಿಯತಿಯ ನಿಯಮ, ತಿರಸ್ಕಾರವನ್ನು ಸಹಿಸುವುದಿಲ್ಲ ಆಚಾರ್ಯ !”

“ಈ ಬೆದರಿಕೆ ನಮಗಲ್ಲ,ನಿಯತಿಯ ನಿಯಮ ನಮಗಿಲ್ಲ.ಅಲ್ಲದೆ ಶಿಕ್ಷೆಯು ಯಾರಿಗೆ ? ರಕ್ಷಾರಹಿತರಿಗೆ. ಇತರರಿಗೆ ರಕ್ಷೆಯನ್ನು ಕೊಡಬಲ್ಲವರು, ಆತ್ಮರಕ್ಷೆಯನ್ನೂ ಮಾಡಿಕೊಳ್ಳಬಲ್ಲರು ಎಂಬುದೂ ವಿದಿತವಷ್ಟೆ ?”

“ಹೀಗೆ ಮಾಡಬಾರದುದನ್ನು ಮಾಡಿ ಅನರ್ಥಪರಂಪರೆಗೆ ಕಾರಣವಾಗುವುದು ಸರಿಯಲ್ಲ.”

“ಹೌದು. ಅನರ್ಥವಾಗುವುದು. ಆದರೆ, ಅದು ನಮಗಲ್ಲ ಅನರ್ಥವೆಂದವರು ಯಾರಿಗೆ ಎಂದು ತಿಳಿದುಕೊಂಡಿದ್ದರೆ ಒಳ್ಳೆಯದು.”

ತುಂಟಕುದುರೆಯಂತೆ ಯಾವುದಕ್ಕೂ ಸಗ್ಗದ ಆಚಾರ್ಯನಿಂದ ಅವಮಾನಿತನಾಗಿ ಅದರಿಂದ ಖೇದಪಡುತ್ತ ದೇವರಾಜನು ಸಭ್ಯತನವನ್ನು ತಿರಸ್ಕರಿಸಲಾಗದೆ, ಯಥೋಚಿತವಾಗಿ ಗೌರವಿಸಿ, ಬೀಳ್ಕೊಂಡು ಹೊರಟು ಹೋದನು.

* * * *