==೩೨.ಪರಿಗ್ರಹಕ್ಕಿಂತ ತ್ಯಾಗ ಹೆಚ್ಚು==
ನಹುಷೇಂದ್ರನು ವಿರಜಾದೇವಿಯೊಡನೆ ತನ್ನ ವಿಲಾಸಮಂದಿರದಲ್ಲಿ ವಿಶ್ರಮಿಸಿ ಕೊಳ್ಳುತ್ತಿದ್ದಾನೆ. ವಿಲಾಸಮಂದಿರದಲ್ಲಿದ್ದರೂ ಆತನಿಗೆ ಇಂದು ಏಕೋ ವಿಲಾಸವಿಲ್ಲ. ಲೋಕಾಂತರದಿಂದ ದೈತ್ಯದಾನವಗಣಗಳಿಗೆ ಯುದ್ಧವಾಗುತ್ತಿದೆಯೆಂದು ಸುದ್ದಿ ಬಂದಿರುವುದರಿಂದ ಹೀಗಾಗಿರುವುದೆಂದರೆ, ಆತನೇ ಇತ್ಯರ್ಥವನ್ನು ಹೇಳಿದ್ದಾನೆ. ದುಷ್ಟರು ಪರಸ್ಪರ ಕಾದಾಡುತ್ತಿರುವುದರಿಂದ ಲೋಕಕ್ಷೇಮವೆಂದು ಅನ್ಯಮನಸ್ಕನಾಗಿ ಅಪ್ಸರೋಗಣದ ನರ್ತನಸೇವೆಯನ್ನು ಒಪ್ಪಿಸಿಕೊಂಡಿದ್ದಾನೆ. ಹಾಗೆಯೇ ಗಂಧರ್ವಗಣದ ಸಂಗೀತಸೇವೆಯನ್ನೂ ಅಮನಃಪೂರ್ವಕವಾಗಿ ಸವೀಕರಿಸಿದ್ದಾನೆ. ಗಂಧರ್ವಾಪ್ಸರೆಯರು ಬೀಳ್ಕೊಂಡು ತೆರಳುವುದರಲ್ಲಿದ್ದಾಗ, ಚಿತ್ರರಥನಿಗೆ ಸನ್ನಿಧಾನದ ಅಪ್ಪಣೆಯಾಗಿದೆ, ಕೊಂಚ ಕಾದಿರಬೇಕೆಂದು. ವಿರಜಾದೇವಿಗೂ ಆತನ ಸ್ಥಿತಿಯು ಮನವರಿಕೆಯಾಗಿದೆ. ಆಕೆಗೆ ಕಾರಣವೂ ಗೊತ್ತಿರಬಹುದು. ಅದರಿಂದ ಸಾವಧಾನವಾಗಿ ಕಾಯುತ್ತಿದ್ದಾಳೆ.
ಅರಸನು ಒಂದು ಗಳಿಗೆಯಾದ ಮೇಲೆ ಮಾತನಾಡಿದನು. ಈಗ ವಿಷಾದ ವಿರಲಿಲ್ಲ. ಅದಕ್ಕೆ ಪ್ರತಿಯಾಗಿ ಗಂಭೀರವಾದ ಚಿತ್ತವೃತ್ತಿಯಿದ್ದಂತೆ ತೋರಿತು : “ದೇವಿ, ದೀಪದ ಪ್ರಕಾಶವು ಹೆಚ್ಚಾದಂತೆಲ್ಲ ನೆರಳೂ ದಪ್ಪವಾಗಿ ಕತ್ತಲೆಯು ದಟ್ಟವಾಗುವುದು. ಅದರಂತೆ ಆಯಿತು ನಾವು ಇಂದ್ರಪದವಿಗೆ ಒಪ್ಪಿದುದು. ಆನಂದವು ಲಭಿಸಿದರೂ ಅದರಲ್ಲಿ ದುಃಖಾನುಭಾವವು ಬರಲಿಲ್ಲ. ಬರುವುದೂ ಇಲ್ಲ. ಈ ದೇವತೆಗಳು ನಮ್ಮನ್ನು ಇಲ್ಲಿ ಉಳಿಸುವುದಿಲ್ಲ. ಏನಾದರೂ ಮಾಡಿ ಉರುಳಿಸಿಯೇ ಉರುಳಿಸುವರು. ಅಷ್ಟರೊಳಗೆ ಹಿಂದಿನ ಇಂದ್ರನು ಮಾಡದಿದ್ದುದು ಏನಾದರೂ ಮಾಡಿ ನಾವೇ ಈ ಇಂದ್ರಪದವಿಯನ್ನು ಬಿಟ್ಟು ಬಿಡೋಣ. ಈ ಹಾವಿನ ಹೆಡೆಯ ನೆರಳಲ್ಲಿ ವಾಸ ಸಾಕು. ನೀನೇನೆನ್ನುವೆ ?”
ವಿರಜಾದೇವಿಯು ನಕ್ಕು ಹೇಳಿದಳು : “ದೇವಾ, ತಮ್ಮ ಕೈಹಿಡಿದು ನಾನು ಇಂದು ಸುಖವಾಗಿದ್ದೇನೆ. ನನಗೂ ತಮಗೆ ಎನ್ನಿಸಿದಂತೆಯೇ ಎನ್ನಿಸುತ್ತದೆ. ನಮಗೆ ಆನಂದಾನುಭವಶಕ್ತಿಯು ಹೆಚ್ಚಾಗಿದೆ. ನಿಜ ಆದರೂ ನಾನು ಯೋಚಿಸಿದ್ದೇನೆ. ಈ ಆನಂದವು ಪದವೀಭಾಗ್ಯ ಸಂಪನ್ನತೆಗಳನ್ನು ಅವಲಂಬಿಸಿಲ್ಲ. ಅದೊಂದು ಆಂತರೀಯಕವಾದ ಶಕ್ತಿ. ಅದು ನಮಗೆ ಬಂತು. ಒಂದೇ ದಿನವಾಗಲಿ ಇಂದ್ರಭೋಗವನ್ನು ಅನುಭವಿಸಿಯಾಯಿತು. ಇದರಲ್ಲಿ ಸಂಪತ್ತಿಗಿಂತ ವಿಪತ್ತೇ ಹೆಚ್ಚು. ನನಗೆ ತಮ್ಮ ಪಾದಸೇವೆ ಭಾಗ್ಯವಿದ್ದರೆ ಸಾಕು. ನನ್ನ ಪತಿದೇವನು ಇಂದ್ರನಾದರೆ ಪಡುವ ಆನಂದವನ್ನು ಆತನು ಯಃಕಶ್ಚಿತ್ತನಾದರೂ ನಾನು ಪಡೆವೆನೆಂಬ ಭಾಗ್ಯವು ನನಗೆ ಯಾವಾಗಲೂ ಉಂಟೆಂಬ ನಂಬಿಕೆ ಇದೆ. ಅದರಿಂದ ತಾವು ಯೋಚಿಸಿರುವುದು ಸರಿ.”
ನಹುಷನು ತಲೆದೂಗಿದನು “ಹೌದು, ಸಾಮ್ರಾಜ್ಞಿ ನೀನೂ ಸಹ ನನ್ನಂತೆಯೇ ಯೋಚಿಸುವೆಯೆಂಬುದನ್ನು ನಾನು ಬಲ್ಲೆ. ಅಷ್ಟೇ ಅಲ್ಲ. ನಾನು ಮಾಡಿದುದನ್ನು ಒಪ್ಪಿಕೊಳ್ಳುವೆಯೆಂಬುದನ್ನೂ ಬಲ್ಲೆ. ಅದರೂ ಅರ್ಧಾಂಗಿಯಾದ ನಿನ್ನನ್ನು ಕೇಳದೆ ಮಾಡುವುದು ವಿಹಿತವಲ್ಲವೆಂದು ಕೇಳುತ್ತಿದ್ದೇನೆ. ಹಿಂದಿನ ಇಂದ್ರನು ಮಾಡಲು ಹಿಂತೆಗೆಯುತ್ತಿದ್ದುದನ್ನು ಮಾಡೋಣ. ಅಂದು ಭೂಲೋಕದಿಂದ ನಮ್ಮ ಮಕ್ಕಳು ಮೊಮ್ಮಕ್ಕಳು ಎಲ್ಲರನ್ನೂ ಬರಮಾಡಿಕೊಳ್ಳೋಣ. ಆ ಕಾರ್ಯವಾದ ಮೇಲೆ ಈ ಇಂದ್ರಪದವಿಯನ್ನು ನಾವಾಗಿ ಬಿಟ್ಟುಬಿಡೋಣ, ಏನೆನ್ನುವೆ ?”
“ಆಗಬಹುದು. ಆಯಿತು ದೇವ. ತಾವು ಭೂಲೋಕದ ಅಧಿಪತ್ಯವನ್ನು ಮಗನಿಗೆ ಕೊಟ್ಟಿರಿ. ಇಂದ್ರಪದವಿಯನ್ನು ಬಿಟ್ಟುಕೊಡುವಿರಿ. ಆಮೇಲೇನಾಗುವಿರಿ?”
“ವಾನಪ್ರಸ್ಥರಾಗೋಣ. ದೈವಕೃಪೆಯಿಂದ ನಾವಿನ್ನೂ ಮಾನುಷತ್ವವನ್ನುಉಳಿಸಿಕೊಂಡಿದ್ದೇವೆ. ಈ ಗದ್ದಲವನ್ನೆಲ್ಲಾ ಬಿಟ್ಟು ಶಾಂತವಾಗಿ ತಪಸ್ಸು ಮಾಡಿಕೊಂಡು ಇರೋಣ.”
ವಿರಜಾದೇವಿಯು ಅದನ್ನು ಕೇಳಿ ಮೆಚ್ಚಿಕೊಂಡಳು. “ಹೌದು ದೇವ ಬೆಟ್ಟಗಳನ್ನು ಅಲ್ಲಾಡಿಸಿದ ಈ ಗದ್ದಲವನ್ನೆಲ್ಲಾ ಬಿಟ್ಟು ಶಾಂತವಾಗಿ ತಪಸ್ಸು ಮಾಡಿಕೊಂಡು ಇರೋಣ.”
ನಹುಷನು ಸಂತೋಷದಿಂದ ಸಮ್ಮತಿಯನ್ನು ನೀಡಿದ ಸಾಮ್ರಾಜ್ಞಿಯನ್ನು ಅಭಿನಂದಿಸುತ್ತ, ಕೈತಟ್ಟಿ ಪ್ರಹರಿಯನ್ನು ಕರೆದು “ಚಿತ್ರರಥನಿದ್ದರೆ ಬರಹೇಳು” ಎಂದನು. ಉತ್ತರ ಕ್ಷಣದಲ್ಲಿಯೇ ಆತನು ಬಂದು ಕೈಕಟ್ಟಿಕೊಂಡು ನಿಂತು ``ಅಪ್ಪಣೆಗೆ ಕಾದಿದ್ದೇನೆ” ಎಂದನು. ಅರಸನು “ಮಿತ್ರ, ನಿನಗೆ ತೊಂದರೆಯಿಲ್ಲದಿದ್ದರೆ ಇಂದ್ರಪತ್ನಿಯನ್ನು ನಾನು ನೋಡಬೇಕು ಎಂದು ಹೇಳಿ ಬಾ. ಸಾಧ್ಯವಷ್ಟೆ ?” ಎಂದನು. ಚಿತ್ರರಥನು ಅರಸನ ಗೌರವದಿಂದ ಸನ್ಮಾನಿತನಾದುದನ್ನು ಆತನ ಹಸನ್ಮುಖವು ಸೂಚಿಸುತ್ತಿರಲು ‘ಅಪ್ಪಣೆ’ ಎಂದು ಹೊರಟನು. ಅರಸನು ಮತ್ತೊಮ್ಮೆ “ಇಂದ್ರಪತ್ನಿಯನ್ನು ಶಚೀದೇವಿಯನ್ನಲ್ಲ” ಎಂದನು. ಚಿತ್ರರಥನು ತನಗದು ಅರ್ಥವಾಯಿತು ಎಂದು ತಲೆಯನ್ನಾಡಿಸುತ್ತ ಹೊರಟು ಹೋದನು.
ಅರಸನು ಇಂದ್ರಪತ್ನಿಯನ್ನು ಅಲ್ಲಿ ನೋಡುವುದು ಸರಿಯಲ್ಲವೆಂದು ಅರಸಿಯೊಡನೆ ದರ್ಶನಮಂದಿರಕ್ಕೆ ಬಂದನು. ನಾತಿಭರಣಭೂಷಿತಳಾಗಿ ಶಚೀದೇವಿಯು ಬಂದು ಅರಸನನ್ನು ಕಾಣಿಸಿಕೊಂಡಳು. ಅರಸನು ಸತೀಮುಖವಾಗಿ ಆಕೆಯನ್ನು ಬರಮಾಡಿಕೊಂಡನು. ಶಚಿಯು ವಿರಜಾದೇವಿಯೊಡನೆ ಆಸನದಲ್ಲಿ ಕುಳಿತ ಮೇಲೆ ಅರಸನು ಕೇಳಿದನು : “ತಮ್ಮ ಪತಿಮಾರ್ಗವು ಸಫಲವಾಯಿತೆ ?” ಮಾತಿನಲ್ಲಿ ಸರಳತೆಯಿತ್ತು. ಏನೂ ಕೊಂಕುತನವಿರಲಿಲ್ಲ. ಶಚೀದುಃಖದಲ್ಲಿ ಭಾಗಿಯಾದವನ ಸ್ನೇಹಭಾವವಿತ್ತು. ಮೊದಲ ದಿನದ ಏಕವಚನ ಇಂದು ಬಹುವಚನವಾಗಿದ್ದುದು ಆಕೆಗೆ ಹಿಡಿಯಿತು.
ಶಚಿಯು ಗಂಭೀರವಾಗಿ ಚಿರಪರಿಚಿತನಾದ ಸೋದರನೊಡನೆ ಮಾತನಾಡುವ ಸ್ನೇಹದಿಂದ ಹೇಳಿದಳು. ಆದರವಿದ್ದರೂ ಸಲುಗೆಯಿರಲಿಲ್ಲ. “ದೇವರಾಜ, ಆತನು ಹತ್ಯಾಭೀತನಾಗಿ ತಲೆಮರೆಸಿಕೊಂಡಿರುವನೆಂಬುದು ತಿಳಿಯಿತು. ಏನು ಮಾಡಿದರೆ ಆ ಭೀತಿಯು ನಾಶವಾಗುವುದೆಂದು ತಿಳಿದುಬರಲು ದೇವಾಚಾರ್ಯನು ಮಹಾವಿಷ್ಣುವಿನ ಸನ್ನಿಧಿಗೆ ಹೋಗಿಬಂದನು.”
“ನಮ್ಮಿಂದ ಆಗಬೇಕಾಗಿರುವುದು ಏನಾದರೂ ಇದ್ದರೆ ಸಂಕೋಚವಿಲ್ಲದೆ ಹೇಳಬೇಕು.”
“ದೇವ, ತಾವು ಕೇಳುತ್ತಿರುವುದು ನನಗೆ ನಿಜವಾಗಿಯೂ ಸಂಕಟವಾಗಿದೆ. ತಾವು ಧರ್ಮಸೀಮಾಪುರುಷರು. ಬೇಕೆಂದರೆ ನನ್ನ ಇಂದ್ರನು ಹಿಂತಿರುಗಿ ಬರುವುದಾದರೆ ಇಂದ್ರಪದವಿಯನ್ನು ಆತನಿಗೆ ಬಿಟ್ಟುಕೊಡುವುದಕ್ಕೂ ಸಿದ್ಧರಾಗಿರುವಿರಿ. ಅದನ್ನು ನಾನು ಬಲ್ಲೆ. ಆದರೂ, ಆತನು ಈಗಲೇ ಬರುವಂತಿಲ್ಲ. ತಮಗೆ ಈಗ ದೇವಸಭೆಯು ಕೊಟ್ಟಿರುವ ಪದವಿಯು ಇಷ್ಟುಕಾಲವಾದರೂ ನಡೆಯಲೇಬೇಕೆಂಬ ನಿಯಮವುಂಟಾಗಿ ಅದುವರೆಗೂ ಯಾರೂ ತಮ್ಮನ್ನು ಏನೂ ಮಾಡಲಾಗುವುದಿಲ್ಲ. ಅದರಿಂದ ಕಾಲಯಾಪನೆ ಮಾಡಬೇಕು.”
“ನಾನು ಈಗ ತಮಗೆ ಹೇಳಿದುದರ ಉದ್ದೇಶವು ಸಫಲವಾದರೆ ತಾವು ಕಾಲಯಾಪನೆ ಮಾಡಬೇಕಾಗಿಲ್ಲ. ನಾನಾಗಿ ಇಂದ್ರಪದವಿಯನ್ನು ಬಿಟ್ಟುಕೊಡಲು ಸಿದ್ಧನಾಗಿದ್ದೇನೆ.”
ಶಚಿಗೆ ಆಶ್ಚರ್ಯವಾಯಿತು. ಆಕೆಯು ತನ್ನ ಕಿವಿಯನ್ನು ತಾನೇ ನಂಬಲಾರದೆ ಹೋದಳು. ಆಕೆಯ ಕಣ್ಣು ಬಾಯಿ ಮುಖಗಳು ಆಶ್ಚರ್ಯವನ್ನು ತೋರಿಸುತ್ತಿರಲು, ನಿಜವೇ ಎಂದು ಆ ಭಾವವೇ ಕೇಳುತ್ತಿರಲು, ಅರಸನು ಅದುವರೆಗೂ ಬಗ್ಗಿಸಿದ್ದ ಕತ್ತನ್ನು ಮೇಲಕ್ಕೆತ್ತಿ, ಆಕೆಯ ಮುಖವನ್ನು ಪ್ರಸನ್ನವಾಗಿ, ನೇರವಾಗಿ, ನೋಡುತ್ತ “ಹೌದು, ಇದರಲ್ಲಿ ಸಂದೇಹವಿಲ್ಲ. ನನ್ನದೊಂದು ಕೋರಿಕೆಯಿದೆ. ಅದು ಪೂರೈಸಿದರೆ, ನಾನು ಇಂದ್ರಪಟ್ಟವನ್ನು ಬಿಟ್ಟುಕೊಡಲು ಸಿದ್ಧವಾಗಿದ್ದೇನೆ” ಎಂದನು.
ಶಚಿಗೆ ಏನೂ ಅರ್ಥವಾಗಲಿಲ್ಲ. ‘ಇಂದ್ರಪತ್ನಿಯೆಂದು ತನಗೆ ಕೇಳಿಕಳುಹಿಸಿದ್ದಾನೆಯಾಗಿ ಅತನಲ್ಲಿ ಸಂಶಯಪಡಬೇಕಾಗಿಲ್ಲ. ಶಚೀಪತಿಯಾಗಬೇಕೆಂದು ಕೋರಿದ್ದುಂಟು. ಈಗಿನ ಕೋರಿಕೆ ಅದಿರಲಾರದು. ಆ ಕೋರಿಕೆಯು ನೆರವೇರಿದರೆ ಇಂದ್ರಪದವಿಯನ್ನು ಬಿಟ್ಟುಕೊಡುವುದಾದರೆ, ಅದೆಂತಹ ಕೋರಿಕೆಯಿರಬಹುದು?’ ಎಂದು, ಮೆಲ್ಲಮೆಲ್ಲನೆ “ಆ ಕೋರಿಕೆಯನ್ನು ಕೇಳಬಹುದೆ?” ಎಂದಳು.
ಅರಸನು ನಗುತ್ತಾ, ಆಕೆಯ ಸಂಶಯವನ್ನು ಪೂರ್ಣವಾಗಿ ನಿವಾರಿಸಲು “ಇಂದ್ರಪತ್ನಿ” ಎಂದು ಮನಃಪೂರ್ವಕವಾಗಿ ಸಂಬೋಧಿಸಿ ಹೇಳಿದನು. ಇಂದ್ರ ಪತ್ನಿ ಹಿಂದಿನ ಇಂದ್ರನು ಮಾಡದೆ ಬಿಟ್ಟಿದ್ದ ಕೆಲಸವೇನು ಹೇಳಿ ಅದನ್ನು ನಾನು ಮಾಡಿ ‘ನ ಭೂತೋ ನ ಭವಿಷ್ಯತಿ’ ಎನ್ನಿಸಿಕೊಂಡು, ಇಂದ್ರತ್ವವನ್ನು ಬಿಟ್ಟು ವಾನಪ್ರಸ್ತನಾಗುವೆನು”
ಶಚಿಯು ಬೆಚ್ಚಿದಳು, ತಾನು ಕೇಳುತ್ತಿರುವುದು ನಿಜವೇ? ಎನ್ನಿಸಿತು. ಆದರೆ ಧರ್ಮಪ್ರಭುವಾದ ನಹುಷನು ಮೂರನೆಯಾಶ್ರಮವನ್ನು ಪಡೆಯುವುದಾದರೆ, ವಿರಜಾದೇವಿಯು ಒಪ್ಪುವಳೇ? ಎನ್ನಿಸಿ ಆಕೆಯ ಮುಖವನ್ನು ನೋಡಿದಳು. ಆಕೆಯು ಮುಗುಳುನಗೆಯಿಂದ, “ಹೌದು, ನೀವು ಬರುವವರೆಗೂ ಅದೇ ವಿಚಾರದಲ್ಲಿದ್ದೆವು. ಅವರು ಮಾಡಿದುದು ನನಗೂ ಒಪ್ಪಿಗೆ” ಎಂದಳು.
ಶಚೀದೇವಿಯು ಯೋಚನಾಮಗ್ನಳಾದಳು. “ಇಂದ್ರನು ಮಾಡಲಾರದೆ ಬಿಟ್ಟಿದ್ದ ಕೆಲಸವಾವುದು?” ಅಷ್ಟು ಹೊತ್ತು ಯೋಚಿಸಿದಳು. ಸಿಕ್ಕಿತು. ಆದರೆ ಅದನ್ನು ಹೇಳುವುದು ಹೇಗೆ? ನಹುಷನು ಆಕೆಯ ಮುಖಭಾವದಿಂದಲೇ ಅನಿಷ್ಟ ಸಂಗತಿಯನ್ನು ಹೇಳಲು ಆಕೆಯು ಸಂಕೋಚಪಡುತ್ತಿರುವಳೆಂದು ತಿಳಿದುಕೊಂಡು “ತಾವೇನೂ ಶಂಕಿಸಬೇಕಾಗಿಲ್ಲ, ತಮಗೆ ಕೆಟ್ಟ ಹೆಸರು ಬರುವುದಿಲ್ಲ” ಎಂದನು.
ಆದರೂ ಶಚಿಯು ಹೆದರಿಕೊಂಡು ಮೆಲ್ಲಮೆಲ್ಲಗೆ ಹೇಳಿದಳು “ಸಪ್ತರ್ಶಿಶಿಬಿಕಾ ಎಂದು ಒಂದುಂಟು. ಅದು ಇಂದ್ರನಿಗೆ ಮಾತ್ರ ಸಲ್ಲುವ ಮರ್ಯಾದೆ. ಅದರಲ್ಲಿ ವಿಶೇಷವೆಂದರೆ, ಮನ್ವಂತರದವರೆಗೂ ವೇದರಕ್ಷಣಕ್ಕಾಗಿ ದೀಕ್ಷಿತರಾಗಿರುವ ಸಪ್ತರ್ಷಿಗಳು ಬಂದು ಒಂದು ಪಲ್ಲಕ್ಕಿಯಲ್ಲಿ ಇಂದ್ರನನ್ನು ಕುಳ್ಳಿರಿಸಿ ತಾವು ಅದರ ವಾಹಕರಾಗುವರು. ಆದರೆ ಇಂದ್ರನು ಸಪ್ತರ್ಷಿಗಳ ಯೋಗ್ಯತೆಯನ್ನೂ ಗೌರವವನ್ನೂ ಪೂಜಿಸಿ, ಆ ಪಲ್ಲಕ್ಕಿಯನ್ನು ಏರಿದಂತೆ ಮಾಡಿ, ಅಲ್ಲಿಗೇ ಬಿಡುವನು. ಅದಕ್ಕಿಂತ ಹೆಚ್ಚಿನ ಗೌರವವು ಇಂದ್ರನಿಗಿಲ್ಲ !”
“ಎಂದರೆ, ಐರಾವತ, ಉಚ್ಚೈಃಶ್ರವ, ಇವುಗಳಿಗಿಂತ ಇಂದ್ರಸಿಂಹಾಸನಕ್ಕಿಂತ ಅದು ಹೆಚ್ಚಿನ ಮರ್ಯಾದೆಯೆಂದು ತಮ್ಮಭಿಪ್ರಾಯವೆ ?”
“ಹೌದು, ಸಂದೇಹವಿಲ್ಲ. ಆದರೆ, ಇಂದ್ರನು ಅದನ್ನು ಉಪಯೋಗಿಸದೆಯೇ ಗೌರವಿಸುತ್ತಿದ್ದನು.”
“ಕಾರಣವೇನು ?”
“ದೇವ, ತಾವು ತಿಳಿಯದ್ದು ಏನುಂಟು ? ಭೋಗ ಭೋಗವೂ ಅನುಭವಿಸಿದಂತೆಲ್ಲ ಕರ್ತನ ತೇಜಸ್ಸನ್ನು ತಿನ್ನುವುದು. ಅದರೊಳಗೂ ದೇವಲೋಕದಲ್ಲಂತೂ ಆ ದೇವತೆಗಳಿಗೆ ಅದು ತಪ್ಪಿದ್ದೇ ಅಲ್ಲ. ಈ ಸಪ್ತರ್ಷಿಶಿಬಿಕವು ಇತರ ಭೋಗಗಳಂತೆ ದೇವತೆಗಳಿಗೂ ತೇಜೋಹಾನಿಯನ್ನುಂಟು ಮಾಡುವುದು. ಅದರಿಂದ, ಇಂದ್ರನೂ ಅದಕ್ಕೆ ಹೆದರುವನು.”
“ದೇವಿ, ತಾವು ದೇವಸಾಮ್ರಾಜ್ಞಿಯರು. ಅದರಿಂದ ಕೇಳುವೆನು. ನನಗೆ ತಿಳಿಯುವಂತೆ ಹೇಳಿ, ಪ್ರತಿಯೊಂದು ಕರ್ಮವೂ ಅಧಿಯಜ್ಞ ಅಧಿದೈವ ಆದಾಗ, ತೇಜೋಹಾನಿಯಾಗದೆ ತೇಜೋವೃದ್ಧಿಯಾಗುವುದಲ್ಲವೆ ?”
“ಮಿಕ್ಕೆಲ್ಲ ಕರ್ಮಗಳೂ, ಇಂದ್ರಿಯ ಕರ್ಮಗಳೂ ಸಹ, ಹಾಗೆ ಆಗುವುದನ್ನು ಬಲ್ಲೆ. ಆದರೆ ಸಪ್ತರ್ಷಿಶಿಬಿಕಾರೋಹಣವು ಹಾಗಾಗುವುದೋ ಇಲ್ಲವೋ ! ನಾನರಿಯೆ”
“ಕಾರಣ ?”
“ದೇವ ನಾನು ನನ್ನ ಪತಿಯಾದ ಇಂದ್ರನು ಎಳೆದ ಗೆರೆಯಿಂದಾಚೆಗೆ ಹೋಗುವುದಿಲ್ಲ. ಆತನು ಬೇಡವೆಂದರೆ ಏಕೆ ಎಂದು ಕೇಳದೆ ಅದನ್ನು ಬೇಡ ಎನ್ನುವವಳು ನಾನು. ಅದರಿಂದ ಈ ವಿಚಾರದಲ್ಲಿ ನಾನು ಏನೂ ಹೇಳಲೂ ದಕ್ಷಳಲ್ಲ.”
“ಹಾಗಾದರೆ ಇಂತಹ ವಿಷಯಗಳಲ್ಲಿ ತಮ್ಮ ವಿಚಾರವು ಕುಂಟು ಎಂದು ಕೊಳ್ಳೋಣವೆ ?”
ಶಚಿಯು ನಕ್ಕಳು “ತಾವು ಧರ್ಮಜ್ಞರು, ಧರ್ಮಿಷ್ಠರು ಎಂದು ಇಂದ್ರನೂ ಒಪ್ಪಿಕೊಂಡಿರುವನು. ಅದರಿಂದ ಎರಡು ಮಾತು ಹೆಚ್ಚಾದರೂ ತಾವು ಕ್ಷಮಿಸಬೇಕು. ಧರ್ಮವಿಷಯದಲ್ಲಿ ವಿಚಾರವು ಒಂದು ವಸ್ತುವನ್ನು ಅಂಗೀಕರಿಸುವುದಕ್ಕಿಂತ ಮುಂಚೆ, ಅಂಗೀಕರಿಸಿದ ಮೇಲೆ ದೊಡ್ಡದು ದೊಡ್ಡದೇ ; ಚಿಕ್ಕದು ಚಿಕ್ಕದೆ ಅಲ್ಲವೇ ?”
“ಸರಿ, ತಮ್ಮ ನಿರ್ಣಯವು ಧರ್ಮಸಮ್ಮತವಾದುದು. ಹಾಗಾದರೆ ಈ ವಿಚಾರವು ಸಪ್ತರ್ಷಿಗಳಲ್ಲಿಯೇ ಜಿಜ್ಞಾಸೆ ಮಾಡಬೇಕೇ ?”
“ಹೌದು, ಆಯಿತು. ಇದುವರೆಗೂ ತಾವು ತಮ್ಮ ವಿಷಯವನ್ನು ಹೇಳಿ ಕೇಳಿದ್ದಾಯಿತು. ನಮ್ಮ ವಿಚಾರವನ್ನು ಕೇಳುವುದಿಲ್ಲವೆ ?”
“ತಾವೇ ಹೇಳಿದಿರಲ್ಲ ಅಂಗೀಕರಿಸುವುದಕ್ಕಿಂತ ಮುಂಚೆ ವಿಚಾರ. ನಾವು ತಮ್ಮನ್ನೂ ಇಂದ್ರನನ್ನೂ ನಮಗಿಂತ ದೊಡ್ಡವರೆಂದು ಒಪ್ಪಿದ್ದೇನೆ. ಅದರಿಂದ ತಮಗಿಂತ ದೊಡ್ಡವರಾಗುವ ವಿಷಯವನ್ನು ಮಾತ್ರ ಕುರಿತು ವಿಚಾರಿಸಿದೆವು. ತಾವಾಗಿ ಏನು ಹೇಳಿದ್ದರೂ ನಾವು ಕೇಳಲು ಸಿದ್ಧರಾಗಿರುವೆವು.”
“ಸಂತೋಷ. ಸಹೃದಯರೊಡನೆ ಹೇಳಿಕೊಂಡ ಸುಖವು ಅಭಿವೃದ್ಧಿಯಾಗುವುದು, ದುಃಖವು ಹ್ರಾಸವಾಗುವುದು. ಅದರಿಂದಲೇ ಲೋಕವು ತನ್ನ ಸುಖದುಃಖಗಳನ್ನು ತನಗೆ ಬೇಕಾದವರೊಡನೆ ಹೇಳಿಕೊಳ್ಳುವುದು. ಈಗಲೂ ಹಾಗಾಗಲೆಂದು ತಮ್ಮೊಡನೆ ನನ್ನ ವಿಚಾರಗಳನ್ನು ಹೇಳಿಕೊಳ್ಳುವೆನು. ದೇವಾಚಾರ್ಯರು ಇಂದ್ರ ವಿಷಯವಾಗಿ ಮಹಾವಿಷ್ಣುವನ್ನು ಕಂಡಿದ್ದರು, ಆತನು ಇಂದ್ರನದೇ ತಪ್ಪು. ಹತ್ಯೆಯು ಗೋಚರವಾಗುತ್ತಲೂ ಹೆದರಿ ಓಡಿಹೋಗದೆ, ‘ಏನು ಮಾಡುವೆಯೋ ಮಾಡು’ ಎಂದು ತನ್ನ ಒಂದು ರೂಪವನ್ನು ಅದಕ್ಕೆ ಕೊಟ್ಟು ಇನ್ನೊಂದು ರೂಪದಿಂದ ಅದಕ್ಕೆ ಪ್ರತಿಕ್ರಿಯೆಯನ್ನು ಮಾಡಬೇಕಾಗಿತ್ತು.
ವಿಶ್ವರೂಪವಧಕ್ಕಿಂತ ಪೂರ್ವವಾಗಿ ಬರುವ ಹತ್ಯೆಯನ್ನು ಪ್ರತಿಬಂಧಿಸುವ ವಿಚಾರವನ್ನು ಯೋಚಿಸಿ ಅದನ್ನು ಹಂಚಿಹಾಕಿದಂತೆ, ವೃತ್ರವಧಕ್ಕಿಂತ ಮುಂಚೆ ಹತ್ಯೆಯನ್ನು ಕಳೆದುಕೊಳ್ಳುವ ವಿಚಾರವನ್ನು ಪೂರ್ವಭಾವಿಯಾಗಿಯೇ ಮಾಡಬೇಕಾಗಿತ್ತು. ವಿಶ್ವರೂಪ ಹತ್ಯೆಯನ್ನು ಹಂಚಿ ಹಾಕಿದವನು ವೃತ್ರಹತ್ಯೆಯನ್ನು ನಿವಾರಿಸಲು ತಾನು ಹಂಚಿಕೊಳ್ಳಬೇಕಾಗಿತ್ತು. ಈಗಲೂ ಆತನ ಶುದ್ಧಿಗಿರುವುದು ಅದೊಂದೇ ದಾರಿ. ಆತನು ಒಂದು ರೂಪದಿಂದ ಅದನ್ನು ಅನುಭವಿಸಲಿ. ಹತ್ಯೆಯಿಂದಾಗುವ ಹಾನಿಯನ್ನು ಕಳೆದುಕೊಳ್ಳಲು ಹಲವು ರೂಪದಿಂದ ತಪಸ್ಸು ಮಾಡಲಿ. ಹಿಂದೆ ಸಹಸ್ರ ಕವಚ ಸಂಹಾರಕ್ಕಾಗಿ ನಾನು ನರನಾರಾಯಣನಾಗಿರಲಿಲ್ಲವೆ ? ಹಾಗೆ ಎಂದನಂತೆ.”
style="text-indent: 1cm;">“ಹಾಗಾದರೆ, ಆ ಇಂದ್ರನು ಪರಿಶುದ್ಧನಾದ ಹಾಗೆಯೇ ! ನಾವು ಇಂದ್ರ ಪದವಿಯನ್ನು ಬಿಟ್ಟು ಸುಖವಾಗಿರಬಹುದು.” “ಆ ವಿಚಾರವಾಗಿಯೂ ಮಹಾವಿಷ್ಣುವಿನ ಅಪ್ಪಣೆಯಾಗಿದೆ. ತಾವಾಗಿ ಬಿಡುವವರೆಗೆ ಯಾರೂ ತಮ್ಮನ್ನು ಬಲವಂತ ಮಾಡುವಂತಿಲ್ಲ.”
ಅರಸನು ಯೋಚಿಸಿದನು : “ಆಯಿತು. ದೇವಿ, ತಾವು ಹೇಳುವ ಈ ಶಿಬಿಕಾ ಪೂಜೆಯು ನಡೆಯುವುದು ಯಾವಾಗ ?”
“ಉತ್ತರಾಯಣ ಸಂಕ್ರಮಣದ ಮರುದಿನ ?”
“ಸರಿ. ಈಗಿನ್ನೂ ದಕ್ಷಿಣಾಯನವು ನಡೆಯುತ್ತಿದೆ. ಉತ್ತರಾಯಣದಲ್ಲಿ ನಾವು ಶಿಬಿಕಾಪೂಜೆ ಮಾಡಿ ಶಿಬಿಕಾರೋಹಣ ಮಾಡುವೆವು. ಆ ವೇಳೆಗೆ ಇಂದ್ರನು ಪರಿಶುದ್ಧನಾಗಿ ಬರಲಿ. ಸಾಧ್ಯವಾದರೆ, ನಾವು ಇಂದ್ರಾಭಿಷೇಕದಲ್ಲಿ ಭಾಗಿಗಳಾಗುವೆವು.”
ಶಚಿಯು ಏನು ಉತ್ತರ ಕೊಡಲಾರದೆ ಹೋದಳು. ಆದರೆ ಸುಮ್ಮನಿರುವುದೆಂತು ? ಪೆಚ್ಚುನಗೆ ನಗುತ್ತ ಹೇಳಿದಳು : “ದೇವತ್ವಕ್ಕಿಂತ ಮನುಷ್ಯತ್ವವು ಇಂದು ಶ್ರೇಷ್ಠವಾಯಿತು.”
ನಹುಷನು, ಸಂತೋಷದಿಂದ ಮುಖವು ಒಂದು ಹರಿವಾಣದಷ್ಟಾಗುತ್ತಿರಲು “ಏನು ? ಏನು ?” ಎಂದು ಕೇಳಿದನು.
ಶಚಿಯು ಸಹಜವಾಗಿ ಸತ್ಯವನ್ನಾಡುವ ಮಗುವಿನಂತೆ ನುಡಿದಳು : “ದೇವ, ಇದುವರೆಗೂ ದೇವತೆಗಳು ಮಾನವರಿಗೆ ವರಗಳನ್ನು ಕೊಡುತ್ತಿದ್ದರು. ಈಗ ಮಾನವರು ದೇವತೆಗಳಿಗೆ, ಅದೂ ಇಂದ್ರದಂಪತಿಗಳಿಗೆ ವರವನ್ನು ಕೊಡುವಂತಾಯಿತು. ಅರ್ಥಾತ್ ತಾವು ನಮಗೆ ಪೂಜ್ಯರಾದಿರಿ.”
ಅರಸನು ಇನ್ನು ಏನೋ ಅರ್ಥಾಂತರ ಮಾಡಿಕೊಂಡಿದ್ದವನಂತೆ, “ಹಾಗೆಯೇ? ದೇವಿ, ನಮಗೆ ಬೇಡವಾದುದನ್ನು ಬಿಡುವುದು, ಇತರರಿಗೆ ಕೊಟ್ಟ ವರವಾದೀತೆ ?” ಎಂದು ಕೇಳಿದನು.
ಶಚಿಯು ಅರಸನ ಅರ್ಥವನ್ನು ಪೂರ್ಣವಾಗಿ ಗ್ರಹಿಸಲಾರದೆ “ಹಾಗೆಂದರೆ?” ಎಂದು ಕೇಳಿದಳು.
ಅರಸನು ಗಂಭೀರವಾಗಿ ಉತ್ತರ ಕೊಟ್ಟನು : “ಶಾಸ್ತ್ರಗಳಲ್ಲಿ ಗಾರ್ಹಸ್ಥ್ಯಕ್ಕಿಂತ ವಾನಪ್ರಸ್ಥವು ಹೆಚ್ಚು ಎಂದು ಹೇಳುತ್ತದೆ. ನಮ್ಮ ಶಾಸ್ತ್ರಗಳು ನಿಜವಾದರೆ ಪರಿಗ್ರಹಕ್ಕಿಂತ ತ್ಯಾಗವು ಹೆಚ್ಚು. ಪದವಿಗಳಲ್ಲೆಲ್ಲಾ ಅನಧಿಕವಾದ ಇಂದ್ರ ಪದವಿಯು ಲಭಿಸಿತು. ಅದರಲ್ಲಿಯೂ ಇಂದ್ರನಿಗಿಂತ ಹೆಚ್ಚಾಗುವ ಉಪಾಯವನ್ನು ತಾವು ತಿಳಿಸಿಕೊಟ್ಟಿರಿ. ಅಲ್ಲಿಗೆ ಪರಿಗ್ರಹವು ಪರಿಪೂರ್ಣವಾಯಿತು. ಇನ್ನು ಉಳಿದಿರುವುದು ತ್ಯಾಗ. ಅಷ್ಟೇ ತಾನೇ ?”
ಶಚಿಯ ಆ ಅಪಿಶುನತ್ವವನ್ನು ಕಂಡು ಚಕಿತಳಾದಳು : “ಭೋಗವೆಂದರೆ ಅಂಟಿಗಿಂತಲೂ ಹೆಚ್ಚಾಗಿ ಅಂಟಿಕೊಳ್ಳುವ ದೇವತ್ವಕ್ಕಿಂತಲೂ ತ್ಯಾಗವನ್ನು ಆರಾಧಿಸುವ ಮನುಷ್ಯತ್ವವು ಹೆಚ್ಚು ಎನ್ನಬೇಕು. ಅಥವಾ ಇದು ಈತನ ಧರ್ಮಾಸಕ್ತಿಯ ಫಲವೋ? ಧರ್ಮವೃಕ್ಷವು ಸಾಕಲ್ಯವಾಗಿ ಬೆಳೆದರೆ ತ್ಯಾಗವೆನ್ನುವ ಮಹಾಫಲವನ್ನು ಕಾಯುವುದೇನು? ಬಹುಶಃ ಆ ಮಾತನ್ನು ಒಪ್ಪಿಕೊಳ್ಳಲು ಭೋಗಕ್ಕಿಂತ ತ್ಯಾಗವು ಹೆಚ್ಚೆಂದು ಒಪ್ಪಿಕೊಳ್ಳುವುದಕ್ಕೂ ಚಿತ್ತಶುದ್ಧಿಯು ಬೇಕೋ ಏನೋ?” ಎಂದು ವಿಸ್ಮಯದಿಂದ ಚಿಂತಿಸುತ್ತಿದ್ದು ಎದ್ದು ಆತನಿಗೆ ಭಕ್ತಿಪೂರ್ವಕವಾಗಿ ನಮಸ್ಕಾರ ಮಾಡಿ, ವಿರಜಾದೇವಿಯು ಕೊಟ್ಟ ಮಂಗಳ ವಸ್ತ್ರಗಳನ್ನು ಸ್ವೀಕರಿಸಿ ಬೀಳ್ಕೊಂಡು ಹೊರಟು ಬಂದಳು.
* * * *