ಮಹಾಕ್ಷತ್ರಿಯ/ಭಾರ್ಗವೋಪದೇಶ

==೨೧.ಭಾರ್ಗವೋಪದೇಶ==

ಚ್ಯವನಮಹರ್ಷಿಯ ಅಪಾರ ಶಾಸ್ತ್ರಜ್ಞಾನವನ್ನೂ ಅನುಭವವನ್ನೂ ಕೇಳಿ ಎಲ್ಲರೂ ಮುಗ್ಧರಾಗಿದ್ದಾರೆ. ಜ್ಞಾನವಿಜ್ಞಾನಸಂಪನ್ನರಾದ ಆತನನ್ನು ಎಲ್ಲರೂ ‘ಭಗವಾನರು’ ಎಂದು ಗೌರವದಿಂದ ಸಂಬೋಧಿಸುತ್ತಾರೆ. ರಾಜಪುರೋಹಿತನಾದಿಯಾಗಿ ಅರಮನೆಯ ವಿದ್ವದ್ಗಣವೆಲ್ಲ ದಿನವು ಬಂದು ಆತನ ಧರ್ಮಬ್ರಹ್ಮಪ್ರವಚನವನ್ನು ಕೇಳಿ ಆಶ್ಚರ್ಯಮಗ್ನರಾಗಿರುತ್ತಾರೆ. ಆತನ ವಾಚೋವೈಖರಿಯಿರಲಿ, ಆ ಪ್ರವಚನವನ್ನು ಆಲಿಸುವವರ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳು, ಮುಂಗಾರುಮಳೆಯಲ್ಲಿ ನೆನೆದು ನೆಲದಿಂದ ಎದ್ದ ಬಿಸಿಯು ಅದೇ ಮಳೆಯಿಂದ ಇಂಗುವಂತೆ, ಹುಟ್ಟುಹುಟ್ಟುತ್ತಿದ್ದ ಹಾಗೆಯೇ ಅಲ್ಲಿಯೇ ಸಮಾಧಾನವನ್ನು ಹೊಂದುತ್ತವೆ.

ಆರ್ಯಾವರ್ತದ ಋಷೀಂದ್ರರೆಲ್ಲರೂ ಪ್ರತಿಷ್ಠಾನ ನಗರಕ್ಕೆ ಭಗವಾನರ ದರ್ಶನಕ್ಕೆ ಬರುತ್ತಿದ್ದಾರೆ. ಚಕ್ರವರ್ತಿಗೆ ಅದೇ ಒಂದು ಸಂತೋಷ. ನಾನು ಸರ್ವಸ್ವವನ್ನು ಕೊಡುತ್ತೇನೆಂದರೂ ಯಾರು ನಗರಪ್ರವೇಶ ಮಾಡಲೂ ಹಿಂದೆಗೆಯವರೋ ಅವರೆಲ್ಲಾ ಇಂದು ಭಗವಾನರ ದರ್ಶನಕ್ಕೆಂದು ಬಂದು ಒಂದೆರೆಡು ದಿನ ನಿಂತಿದ್ದು, ಅವರ ದರ್ಶನಸಲ್ಲಾಪಾದಿಗಳಿಂದಲೂ, ಅರಸನ ಆತಿಥ್ಯದಿಂದಲೂ ತೃಪ್ತರಾಗಿ ಅರಸನನ್ನು ಆಶೀರ್ವಾದ ಮಾಡಿ ಹೋಗುತ್ತಿದ್ದಾರೆ.

ಭಗವಾನರಿಗಾಗಿ ಅರಮನೆಯ ನಂದನೋದ್ಯಾನದಲ್ಲಿ ಒಂದು ವಿಶಾಲವಾದ ಪರ್ಣಕುಟಿಯು ಸಿದ್ಧವಾಗಿದೆ. ಅದರ ಮಗ್ಗುಲಲ್ಲಿಯೇ ಅತಿಥಿಗೃಹ. ಭಗವಾನರು ಬೆಳಗಿನ ಹೊತ್ತು, ಋಷೀಂದ್ರರು, ತಪೋಧನರು, ವಿದ್ವಾಂಸರು ಇವರಿಗೆ ದರ್ಶನ ಕೊಡುತ್ತಾರೆ. ಮಧ್ಯಾಹ್ನದ ಇಳಿಹೊತ್ತಿನಲ್ಲಿ ಚಕ್ರವರ್ತಿಯು ಬಂದು ಒಂದು ಝಾವದ ಹೊತ್ತು ಧರ್ಮಬ್ರಹ್ಮವಿಚಾರಗಳಲ್ಲಿ ಮಗ್ನನಾಗಿದ್ದು ಬೆಳಗಿನಿಂದ ರಾಜಕಾರ್ಯಗಳಲ್ಲಿದ್ದು ಪಟ್ಟಿದ್ದ ಆಯಾಸವನ್ನೆಲ್ಲಾ ಪರಿಹಾರ ಮಾಡಿಕೊಳ್ಳುತ್ತಾನೆ. ಅರಸನಿಗೆ ಭಗವಾನರಲ್ಲಿ ಎರಡು ಮೂರು ವಿಚಾರಗಳನ್ನು ಕೇಳಬೇಕೆಂದು ಬಲು ಆಸೆ. ಆದರೆ ಆತನು ಬರುವ ವೇಳೆಗೆ ಭಗವಾನರೇ ಸ್ವಯಂ ಯಾವುದಾದರೂ ಒಂದು ವಿಚಾರ ಆರಂಭಿಸುತ್ತಾರೆ. ಅದನ್ನು ಕೇಳುಕೇಳುತ್ತ ಆನಂದಪರವಶನಾಗಿ ಅರಸನು ತನ್ನ ಪ್ರಶ್ನೆಗಳನ್ನು ಮರುದಿನ ಕೇಳುವುದು ಎಂದುಕೊಳ್ಳುತ್ತಾನೆ. ಹೀಗೆಯೇ ದಿನವೂ ಆಗುತ್ತಿದೆ.

ಒಂದು ದಿನ ಭಗವಾನರು ಸುಖಾಸನಾಸೀನರಾಗಿ ಅಂತರ್ದೃಷ್ಟಿಗಳಾಗಿ ಆತ್ಮಾರಾಮರಾಗಿದ್ದಾರೆ. ಚಕ್ರವರ್ತಿಯು ರಾಜದೂತನನ್ನು ಹಿಂದಿಟ್ಟುಕೊಂಡು ಏಕಾಕಿಯಾಗಿ ಬಂದು ಪರ್ಣಕುಟಿಯ ಬಾಗಿಲಲ್ಲಿ ನಿಂತಿದ್ದಾನೆ. ಅವರಿರುವ ಸ್ಥಿತಿಯನ್ನು ಕಂಡು ಅವರ ಆ ಸಮಾಧಿಯನ್ನು ಭಂಗಪಡಿಸಲು ಇಷ್ಟವಿಲ್ಲದೆ ದೂರದಿಂದಲೇ ನಮಸ್ಕಾರ ಮಾಡಿ ಕೊಂಚ ಮರೆಯಾಗಿ ತೃಣಾಸನದಲ್ಲಿ ಕುಳಿತಿದ್ದಾನೆ. ಸಭಾಕಾಲವು ಇನ್ನೂ ಬಂದಿಲ್ಲ.

ಅಷ್ಟು ಹೊತ್ತಾಯಿತು. ಸೂರ್ಯನು ಪಶ್ಚಿಮದಲ್ಲಿ ಇಳಿಯುತ್ತಾ ಪ್ರಸರಿಸಿದ್ದ ಕಿರಣಗಳನ್ನ ಉಪಸಂಹಾರಮಾಡುವ ಕಾಲವಾಯಿತು. ಬಿಸಿಲು ತಂಪಿತು. ಇನ್ನಷ್ಟು ಹೊತ್ತಾದರೆ ಋತ್ವಿಕ್ಪುರೋಹಿತರು ಭಗವಾನರನ್ನು ಧರ್ಮಸಭೆಗೆ ಕರೆದುಕೊಂಡು ಹೋಗಲು ಬರುತ್ತಾರೆ. ಅವರೂ ಬಹಿರ್ಮುಖಿಗಳಾದರು. ಶುದ್ಧಾಚಮನಮಾಡಿ ಚಕ್ರವರ್ತಿಯನ್ನು ಸಮ್ಮುಖಕ್ಕೆ ಕರೆದರು. ಆತನೂ ಬಂದು ನಮಸ್ಕಾರ ಮಾಡಿ ಕುಳಿತನು. ಬ್ರಹ್ಮರ್ಷಿಗಳು ತಾವೇ ಮಾತನಾಡುತ್ತಾ. “ಏನು ಮಹಾರಾಜ, ನೀನೇ ಬರಬೇಕಾಗಿತ್ತೇ ? ಈ ದಿನ, ನಿನ್ನನ್ನು ಕೇಳಿ, ನಿನ್ನ ಮನಸ್ಸಿನಲ್ಲಿರುವ ವಿಚಾರವನ್ನೇ ಆರಂಭಿಸಬೇಕು ಎಂದಿದ್ದೇನೆ, ಸರಿ ತಾನೇ ?” ಎಂದು ಕೇಳಿದರು.

ಅರಸನು ವಿನಯದಿಂದ “ಅದು ನನ್ನ ಭಾಗ್ಯ !” ಎಂದನು.

“ಇನ್ನು ನಾನು ಇಲ್ಲಿಂದ ಹೊರಡುವ ಕಾಲ ಬಂದಿದೆ. ಬ್ರಾಹ್ಮಣನು ಭೋಗಗಳಿಗೆ ವಶನಾಗಬಾರದು. ಭೋಗಲಾಲಸೆಯು ಇಂದ್ರಿಯಗಳಲ್ಲಿ ಬೇರೂರಿದರೆ, ಅವು ದುಷ್ಟಾಶ್ವಗಳಂತೆ ಕೈಮೀರುವುವು. ಇಂದ್ರಿಯಗಳನ್ನು ಅಧೀನದಲ್ಲಿಟ್ಟುಕೊಳ್ಳದೆ ಅವುಗಳ ಅಧೀನನಾದವನ ತೇಜಸ್ಸು ಹಸಿಯ ಮಡಕೆಯಲ್ಲಿಟ್ಟ ನೀರಿನಂತೆ ಜಾರಿಹೋಗುವುದು. ಹಾಗೆ ಆಗಬಾರದು. ಬ್ರಾಹ್ಮಣನು ಯಾವಾಗಲೂ ಆತ್ಮತೇಜಸ್ಸನ್ನು ವಿವೃದ್ಧಿ ಮಾಡುತ್ತಿರಬೇಕು.

“ಇಲ್ಲಿಯೂ ತಾವು ತಪೋವನದಲ್ಲಿರುವಂತೆಯೇ ಇರುವಿರಲ್ಲವೇ ?”

“ಆದರೂ ಇದು ನಿನ್ನ ಕ್ಷೇತ್ರ. ನೀನು ಸತ್ತ್ವಗುಣಸಂಪನ್ನನಾದರೂ ನಿನ್ನ ಅಧಿಷ್ಠಾನಾದಿಗಳೆಲ್ಲವೂ ರಜೋಗುಣದವು. ಅದರಿಂದ ಇಲ್ಲಿ ಇರುವವರೆಗೂ ಸತ್ತ್ವಲಕ್ಷಣವಾದ ಶಾಂತಿದಾಂತಿಗಳು ಒಂದು ಪಾದ ಹಿಂದಿರುವುವು. ನಿನ್ನ ಇಷ್ಟದಂತೆ ಇಲ್ಲಿದ್ದು ಧರ್ಮಕಥಾಲಾಪ ನಡೆಸಿಯಾಯಿತು. ಇನ್ನು ಬರುವ ಪ್ರತಿಪದೆಯ ಸ್ಥಾಲೀಪಾಕವಾದ ಮೇಲೆ ಇಲ್ಲಿಂದ ಹೊರಡುವೆನು.”

ಅರಸನಿಗೆ ದೇಹದಲ್ಲಿದ್ದ ದೊಡ್ಡ ಜೀವವು ಮೇಲಕ್ಕೆ ಎದ್ದಂತಾಯಿತು. ಕಣ್ಣಲ್ಲಿ ಒಳಗಿನ ನೋವೆಲ್ಲ ಪ್ರತಿಫಲಿಸಿ ಎರಡು ತೊಟ್ಟಿನ ರೂಪವಾಗಿ ಉಕ್ಕಿತು. ಅದನ್ನು ಕಂಡು ಮಹರ್ಷಿಯು ನಕ್ಕು, “ಕೊನೆಯವರೆಗೂ ಇಲ್ಲಿರುವುದು ಸಾಧ್ಯವಿಲ್ಲವೆಂದು ಬಲ್ಲ ನೀನೂ ಹೀಗೆ ವ್ಯಥೆಪಟ್ಟರೆ, ಅದು ಅಭಿಮಾನದ ಗುರುತಾಯಿತೇ ಹೊರತು ವಿವೇಕದ ಲಕ್ಷಣವಾಗಲಿಲ್ಲ. ಜಗತ್ತೆಂದರೆ ಓಡುವ ನದಿಯೆಂಬುದನ್ನು ನಾವು ಮರೆಯಬಾರದು. ಬಂದುದನ್ನೆಲ್ಲ ಕಳುಹಿಸಿಕೊಟ್ಟು ಬರುವುದನ್ನು ಪ್ರತೀಕ್ಷಿಸುತ್ತಾ ನಿಂತಿರುವುದೇ ವಿವೇಕ. ಜಗತ್ತು ಗಳಿಗೆಗೊಂದು ಬಣ್ಣವಾಗದಿದ್ದರೆ ಇನ್ನು ಅದಕ್ಕೆ ಜಗತ್ತು ಎನ್ನುವದೇನು ? ಈ ಜಗತ್ ಎನ್ನುವ ಅರ್ಥವೇ ಅದಲ್ಲವೇ ? ಉದುರುವ ಎಲೆಗಳನ್ನು ಕಂಡವರಿಗೆ ಅದರ ಹಿಂದಿರುವ ಮರವನ್ನು ಕಂಡರೆ ಎಲೆ ಉದುರಿತು ಎಂಬ ದುಃಖವಿಲ್ಲದೆ ಹೊಸ ಎಲೆಯು ಹುಟ್ಟುವುದು ಎಂಬ ನಿರೀಕ್ಷೆಯು ಬಂದು ಆನಂದವಾಗುವುದು. ನಿನ್ನ ಅಭಿಮಾನವನ್ನು ಕಂಡು ನಾನು ಬಲ್ಲೆನೆಂಬ ಅಹಂಭಾವಕ್ಕೆ ವಶನಾಗದಿರುವುದರಿಂದ ನೀನು ವಜ್ರದ ವರ್ತಿಕೊಟ್ಟ ವಜ್ರದಂತಿರುವೆ. ಅರಸಾ, ನಿನಗೆ ನಾನೊಂದು ವರವನ್ನು ಕೊಡುವೆನು. ಕೇಳು” ಎಂದನು.

ಅರಸನು ವಿನಯದಿಂದ ಎದ್ದು ನಿಂತು “ಭಗವನ್, ತಾವು ಗಿಡದ ಸಾಮ್ಯವನ್ನು ತೋರಿಸಿ ಬಂದ ದುಃಖವೆಲ್ಲ ಆನಂದವಾಗುವ ವಿಧಾನವನ್ನು ಉಪದೇಶಿಸಿದಿರಿ. ಇದಕ್ಕಿಂತಲೂ ಇನ್ನು ಯಾವ ವರವನ್ನು ಕೇಳಲಿ ? ಆದರೂ ತಮ್ಮ ಅಪ್ಪಣೆಯೆಂದು ಕೇಳುವೆನು. ನನಗೆ ಯಾವಾಗಲೂ ಧರ್ಮದಲ್ಲಿ ಬುದ್ಧಿಯು ಸ್ಥಿರವಾಗಿರಲಿ” ಎಂದು ನಮಸ್ಕಾರ ಮಾಡಿದನು.

ಚ್ಯವನ ಮಹರ್ಷಿಯು ಸಂತುಷ್ಟನಾಗಿ “ಹಾಗೆಯೇ ಆಗಲಿ, ನಿನ್ನ ಬುದ್ಧಿಗೆ ಯಾವಾಗಲೂ ಧರ್ಮವು ಗೋಚರವಾಗುತ್ತಿರಲಿ. ಆದರೆ ಇತರರಿಗೆ ಹೇಳಬೇಕಾಗಿ ಬಂದಲ್ಲಿ ಅವರು ಕೇಳಿದಾಗ ಸಕಾರಣವಾಗಿ ಅವರ ಮನಸ್ಸಿಗೊಪ್ಪುವಂತೆ ವಿಶದವಾಗಿ ಹೇಳಬೇಕು. ಇಲ್ಲವಾದರೆ ಅದನ್ನು ಧರ್ಮದೇವನು ಒಪ್ಪುವುದಿಲ್ಲ. ಅದು ನೆನಪಿರಲಿ” ಎಂದು ಅನುಗ್ರಹ ಮಾಡಿದನು. ಆ ವೇಳೆಗೆ ವಾಲಗದ ಸದ್ದು ಆಗಿ, ಅದು ಮೃದಂಗದ ನಾದದೊಡನೆ ಸೇರಿ ಪರ್ಣಶಾಲೆಯವರೆಗೂ ಬಂದು ಬ್ರಹ್ಮರ್ಷಿ ರಾಜರ್ಷಿಗಳಿಬ್ಬರನ್ನೂ ಎಚ್ಚರಗೊಳಿಸಿತು. ಮಂಗಳವಾದ್ಯಶ್ರವಣದಿಂದ ಜಾಗ್ರತವಾದ ಲೋಕವಾಸನೆಯನ್ನು ಅನುಸರಿಸಿ ಅವರು ಮುಂದಿನ ಕಾರ್ಯಕ್ಕೆ ಸಿದ್ಧರಾದರು. ಋತ್ವಿಕ್ಪುರೋಹಿತರು ಬಂದು ಯಥಾವಿಹಿತವಾಗಿ ದರ್ಶನಮಾಡಿ ಇಬ್ಬರನ್ನೂ ಸಭಾಮಂಟಪಕ್ಕೆ ಕರೆದುಕೊಂಡು ಹೋದರು.

ಸಭೆಯ ಮಧ್ಯದಲ್ಲಿ ವಿರಚಿತವಾಗಿದ್ದ ಕಮಲಾಸನದ ಮೇಲೆ ಪದ್ಮಾಸನದಲ್ಲಿ ಚ್ಯವನ ಭಗವಾನರು ಕುಳಿತರು. ಅವರ ಬಲಗಡೆ ಬೆಳ್ಳಿಯ ಭದ್ರಾಸನದಲ್ಲಿ ವೀರಾಸನದಲ್ಲಿ ಅರಸನು ಕುಳಿತನು. ಮಂತ್ರಿ ಪುರೋಹಿತರಾದಿಯಾಗಿ ಸಭಿಕರೆಲ್ಲರೂ ಎಂದಿನಂತೆ ತಮ್ಮ ತಮ್ಮ ಆಸನಗಳಲ್ಲಿ ಕುಳಿತರು. ರಾಜಸ್ತ್ರೀಯರೂ ರಾಜಾಧಿಕಾರಿಗಳೂ ಧರಿಸಿರುವ ಜೀವರತ್ನಾಭರಣಗಳ ಕಾಂತಿಯು ಇಳಿಯುತ್ತಿರುವ ಸೂರ್ಯನ ಬಿಸಿಲನ್ನು ಹಿಡಿದು ತಂದು ಶೇಖರಿಸಿಟ್ಟಿರುವ ಕಿರಣಕೆಂಡಗಳೋ ಎಂಬಂತೆ ಪ್ರಜ್ವಲಿಸುತ್ತಿದ್ದುವು. ಸಭಿಕರು ಧರಿಸಿರುವ ಪುಷ್ಪಮಾಲೆಗಳ ಸುಗಂಧವು ಸಜ್ಜನರ ಮನಸ್ಸಿನ ನಿರ್ವಿಷಯಾನಂದದಂತೆ ಸರ್ವವ್ಯಾಪಿಯಾಗಿ ಎಲ್ಲರನ್ನೂ ದೇವಲೋಕಕ್ಕೆ ಕರೆದೊಯ್ಯುವ ವಿಮಾನವೋ ಎಂಬಂತೆ ಮೇಲಕ್ಕೆ ಚಿಮ್ಮುತ್ತಿತ್ತು.

ತೇಜಸ್ವಿಯಾದ ಅರಸನ ಪ್ರಭಾವದ ಮುಂದೆ ನಿಷ್ಪ್ರಭರಾಗಿ ವಿನೀತರಾಗಿ ನ್ಯಾಯಬದ್ಧರಾಗುವ ಸಾಹಸಿಗಳಂತೆ ಆಚಾರದಂತೆ ಇಟ್ಟಿದ್ದ ತುಪ್ಪದ ದೀಪಗಳು ರತ್ನಾಭರಣಗಳ ಕಾಂತಿಗೆ ಸೋತಂತೆ ಮಂಕಾಗಿ ಪಂಜರ ಬದ್ಧವಾಗಿ ಉರಿಯುತ್ತಿದ್ದವು. ಧೂಪದಾನಿಗಳು ನಡೆಯಲಿರುವ ಧರ್ಮಕಥಾ ಶ್ರವಣದಿಂದ ತೃಪ್ತವಾಗಿವೆಯೋ ಎಂಬಂತೆ ಸಂತೋಷದಿಂದ ಧೂಪಮೇಘಗಳನ್ನು ಸೃಜಿಸುತ್ತಿದ್ದವು. ಕೈವಾರಿಗಳು ತಮ್ಮ ದೃಢತಾರಸ್ವರದಿಂದ ಸಭೆಯನ್ನು ಎಚ್ಚರಿಸಿದ ಮೇಲೆ ಬ್ರಹ್ಮರ್ಷಿಗಳ ಘಂಟಾನಾದದಂತಹ ಗಂಭೀರ ಮನೋಹರವಾದ ಕಂಠವು ಕೇಳಿಸಿತು. ಪ್ರವಚನವು ಆರಂಭಿಸಿತು.

ಭಗವಾನರು ಆರಂಭಿಸಿದರು : “ನಾವು ಇಲ್ಲಿಂದ ಹೊರಡುವ ಕಾಲವು ಸನ್ನಿಹಿತವಾಗಿದೆ. ಆದ್ದರಿಂದ ನಾವಾಗಿ ಹೇಳುವುದನ್ನು ಕಡಿಮೆ ಮಾಡಿ, ಇತರರ ಮನಸ್ಸಿನಲ್ಲಿ ಇರಬಹುದಾದ ಸಂದೇಹಗಳನ್ನು ವಿಮರ್ಶಿಸಿ ಸಾಧ್ಯವಾದರೆ ನಿವಾರಿಸಲು ಪ್ರಯತ್ನಿಸೋಣ ಎಂದುಕೊಂಡಿದ್ದೇನೆ. ಆದ್ದರಿಂದ, ಈ ಸಭೆಯಲ್ಲಿ ಯಾರಾದರೂ ಮುಂದೆ ಬಂದು ತಮ್ಮ ತಮ್ಮ ಸಂದೇಹಗಳನ್ನು ಕೇಳಬಹುದು.”

ರಾಜನು ಪುರೋಹಿತನ ಮುಖವನ್ನು ನೋಡಿದನು. ಆತನು ಅದನ್ನು ಅರ್ಥಮಾಡಿಕೊಂಡು ಎದ್ದು ನಿಂತನು. ಆಡಂಬರವಿಲ್ಲದ ಸುಲಭವಾದ ಹಗುರವಾದ ಆತನ ಉಡುಪಿನಂತೆಯೇ ಆತನೂ ಸರಳವಾಗಿ ಸಹಜವಾಗಿ ಪ್ರಶ್ನೆ ಮಾಡಿದನು : “ಭಗವಾನ್, ಧರ್ಮಕ್ಕೆ ಜಯವಾಗಲಿ, ಕೇಳುವ ನಮಗೂ ಹೇಳುವ ತಮಗೂ ಈ ವಿಷಯವನ್ನು ಆಲಿಸುವ ಈ ಸಭೆಯವರಿಗೂ ಮಂಗಳವಾಗಲಿ. ತಾವು ಹೇಳುವುದು ನಮಗೆ ಅರ್ಥವಾಗಲಿ. ದೇವ, ಸಂದೇಹಗಳು ಬರುವುದೇಕೆ ?”

ಭಗವಾನರು ನಕ್ಕರು : “ಬ್ರಹ್ಮನ್, ನೀರಿನ ಸ್ವಭಾವ ಅಲೆಯುತ್ತಿರುವುದು. ನೀರು ಅಲೆಗಳನ್ನು ಸೃಷ್ಟಿಸಬೇಕೆಂದು ಪ್ರಯತ್ನಮಾಡಿ ಅಲೆಗಳನ್ನು ಎಸೆಯುವುದಿಲ್ಲ. ಅದರ ಚಂಚಲಸ್ವಭಾವವೇ ಅಲೆಗಳಾಗಿ ತೋರುತ್ತದೆ. ನೀರಿನ ಮೇಲ್ಮೈಯೆಲ್ಲಾ ಅಲೆಯೇ ! ಆದರೆ ಕೆಳಗಿಳಿದು ನೋಡಿದರೆ, ಒಂದೆರಡು ಮಟ್ಟು ಮುಳುಗಿ ನೋಡಿದರೆ, ಅಲ್ಲಿ ನೀರು ಘನವಾಗಿ ಒಂದೇ ಮುದ್ದೆಯಾಗಿ ನಿಂತಿರುವಂತೆ ತೋರುತ್ತದೆ. ಜಲಚರಗಳ ಸಂಚಾರದಿಂದ ಅಲ್ಲಾಡಿದಂತೆ ಕಂಡರೂ ನಿಶ್ಚಲವಾಗಿರುತ್ತದೆ. ಹಾಗೆ ಜ್ಞಾನವು ಪ್ರಜ್ಞಾನವಾಗಿ ಘನವಾಗಿ ಸ್ಥಿರವಾಗುವವರೆಗೂ ಸಂದೇಹಗಳು ಬಂದೇ ಬರುತ್ತಿರುವುವು. ಜ್ಞಾನ ಪ್ರಜ್ಞಾನವಾಗಿ ಘನವಾಗುವುದು ಎಂದರೇನು ಎನ್ನುವಿರೇನೋ ? ತನಗಿಂತ ದೊಡ್ಡದೊಂದು ವಸ್ತುವಿದೆ. ಅದು ತನ್ನ ಒಳಗೂ ಹೊರಗೂ ತುಂಬಿದೆ. ಅದು ಮಡುವಿನಂತೆ ಇದ್ದರೆ ತಾನು. ‘ನಾನು’ ಎನ್ನುವುದು ಅದರಲ್ಲಿ ಒಂದು ಮಡಕೆಯಂತೆ. ನೀರಿನಲ್ಲಿ ಮುಳುಗಿದ ಮಡಕೆಯಲ್ಲಿರುವ ನೀರೂ ಅದರ ಹೊರಗಿರುವ ನೀರೂ ಏಕರಸವೆಂಬ ಅರಿವೇ ಜ್ಞಾನ. ಆ ಅರಿವು ಬಲಿತು ನೀರನ್ನು ತುಂಬಿಕೊಂಡಿರುವ ಮಡಕೆಯೂ ಅದರಲ್ಲಿರುವ ನೀರೂ ಬೇರೆಬೇರೆಯೆಂಬುದನ್ನು ತಿಳಿದುಕೊಳ್ಳುವುದು ವಿಜ್ಞಾನ. ಬಾಯಲ್ಲಿ ಒತ್ತರಿಸಿಕೊಂಡಿರುವ ತಂಬುಲವು ತನ್ನ ಇರುವಿಕೆಯನ್ನು ಮರೆಯಲು ಎಡೆಯನ್ನೇ ಕೊಡದೆ ಇರುವಂತೆ ವಿಜ್ಞಾನವು ಮರೆಯದೆ ಅರಿವೇ ಆಗಿ ಘಟವು ಬೇರೆ, ಅದರಲ್ಲಿರುವ ಚೇತನವೇ ಬೇರೆ, ಎಂಬ ನಿಶ್ಚಯಜ್ಞಾನವು ಸಂತತವಾಗಿ ಉರಿಯುತ್ತಿರುವ ದೀಪದ ಬೆಳಕಿನಂತೆ ಅವಕಾಶವಿದ್ದೆಡೆಯಲ್ಲೆಲ್ಲಾ ತುಂಬಿರುವುದೇ ಪ್ರಜ್ಞಾನ. ಅದನ್ನು ಮರೆಯದೆ ವ್ಯವಹಾರ ಮಾಡುತ್ತಿರುವುದೇ ಪ್ರಜ್ಞಾನಘನದಲ್ಲಿರುವುದು. ಅಂತಹ ಪ್ರಜ್ಞಾನ ಘನದಲ್ಲಿ ಪ್ರವೇಶವಾಗುವವರೆಗೂ ಸಂದೇಹಗಳು ಬಿಡುವುದಿಲ್ಲ. ತುಂಬಿದ ಕತ್ತಲಿನಲ್ಲಿ ಕಣ್ಣು ಕಾಣದೆ ಹೋದಾಗಲೂ ಸಂದೇಹಗಳಿಲ್ಲ : ನಡುಹಗಲಿನಲ್ಲಿ ಬೆಳಕು ತಾನೇ ತಾನಾಗಿರುವಾಗಲೂ ಸಂದೇಹವಿಲ್ಲ. ಬೆಳಕು - ಕತ್ತಲುಗಳು ಒಂದರಲ್ಲಿ ಒಂದು ವ್ಯಾಪ್ತವಾದಾಗ, ಸಂದೇಹಗಳು. ಹಾವೋ ಹುಲ್ಲಿನ ಹರವಿಯೋ ಎಂದು ಸಂದೇಹಪಡುವುದು ಸಂಜೆಯ ಕಾಳವಳದಲ್ಲಿ ಮಾತ್ರ. ಹಾಗೆ ಅರಿವು ಬಂದು ಬಲಿತು ಹೆಪ್ಪುಗಟ್ಟಿ ಮುದ್ದೆಯಾಗುವವರೆಗೂ ಸಂದೇಹವು ತಪ್ಪುವುದಿಲ್ಲ. ಮನಸ್ಸಿನ ಅಪೂರ್ಣತೆಯೇ ಜ್ಞಾನದ ದೌರ್ಬಲ್ಯವೇ ಸಂದೇಹ. ಅಲ್ಲದೆ ಸಂದೇಹವು ಬಂದರೆ ಏಕೆ ಒದ್ದಾಡಬೇಕು? ಆ ಸಂದೇಹದ ಹಿಂದೆಯೇ ಸಿದ್ಧಾಂತವೂ ಇದ್ದೇ ಇರುತ್ತದೆ.”

“ಹಾಗಾದರೆ ಅರ್ಥವಾಗಲಿಲ್ಲ. ಭಗವಾನರು ದಯಮಾಡಿ ಅದನ್ನು ಇನ್ನೂ ವಿಶದವಾಗಿ ಹೇಳಬೇಕು.”

“ಆಗಲಿ, ಮನಸ್ಸಿಗೆ ಅರಿವು ಮರೆವು ಎಂದು ಎರಡು ಮುಖ. ನಕ್ಷತ್ರಗಳಲ್ಲಿ ಕೆಲವು ಕೆಂಪು ನೀಲಿ ಬೆಳಕುಗಳನ್ನು ಚೆಲ್ಲುತ್ತ ಒಂದು ಘಳಿಗೆ ಹಾಗೆ, ಒಂದು ಘಳಿಗೆ ಹೀಗೆ ಕಾಣುವಂತೆ, ಮನಸ್ಸೂ ಈ ಎರಡು ಮುಖಗಳಲ್ಲಿ ಒಂದೊಂದನ್ನು ತೋರುತ್ತಿರುತ್ತದೆ. ಅರಿವಿನ ಮುಖ ಕಂಡಾಗ ಅರಿತೆವು ಎನ್ನುತ್ತೇವೆ. ಮರೆವಿನ ಮುಖ ಕಂಡಾಗ ಮರೆತೆವು ಎಂದುಕೊಳ್ಳುತ್ತೇವೆ. ಮರೆವು ಅರಿವುಗಳು ಒಂದರಲ್ಲಿ ಒಂದು ವ್ಯಾಪಿಸಿದಾಗ, ಮರೆವೋ ಅರಿವೋ ಎಂಬ ನಿಶ್ಚಯವಿಲ್ಲದಾಗ ಸಂದೇಹ. ನೀರಲ್ಲಿ ಬಿದ್ದ ಪ್ರಾಣಿಯು ಸುಮ್ಮನೆ ಕೈಕಾಲು ಬಡಿಯುತ್ತಿದ್ದರೆ ತಪ್ಪದೆ ದಡಕ್ಕೆ ಬಂದು ಸೇರಿಕೊಳ್ಳುವಂತೆ, ತಲೆದೋರಿದ ಸಂದೇಹವನ್ನು ಮಥಿಸುತ್ತಿದ್ದರೆ, ಮರೆವಿನ ಮುಖವು ತಿರುಗಿ ಅರಿವಿನ ಮುಖವು ಕಾಣಿಸುವುದು.”

“ಮರೆವೇ ಅರಿವಾಗುವುದಾದರೆ ಗುರುವಿನ ಉಪದೇಶ ಬೇಕು ಎನ್ನುವುದೇಕೆ?”

“ಮರಿಗೆ ಹಾರುವುದನ್ನು ತಾಯಿಹಕ್ಕಿ ಕಲಿಸಿಕೊಡುವಂತೆ ಗುರುವು ಉಪದೇಶಮಾಡಿ ಉದ್ಧರಿಸುವನು. ಆದರೆ ಅದೇ ಹಕ್ಕಿಯು ಹಸುವಿಗೊ ಹುಡುಗನಿಗೋ ಹಾರುವುದನ್ನು ಕಲಿಸಲು ಸಾಧ್ಯವೇನು ? ಅದರಂತೆ, ಉಪದೇಶವು ಮನಸ್ಸಿನಲ್ಲಿ ಅವ್ಯಕ್ತವಾಗಿರುವುದನ್ನು ವ್ಯಕ್ತಪಡಿಸುವುದು. ಭಾವಿಯಲ್ಲಿರುವ ನೀರನ್ನು ಸೇದಿ ಹೊಯ್ದು ತಾಪವನ್ನು ಆರಿಸುವಂತೆ, ಶಿಷ್ಯನ ಮರೆವಿನ ಮೇಲೆ ತನ್ನ ಅರಿವಿನ ಬೆಳಕನ್ನು ಚೆಲ್ಲಿ, ಅದನ್ನೇ ಅರಿವು ಮಾಡಿ ತೋರಿಸುವವನು ಗುರುವು. ಅಲ್ಲಿ ಇಲ್ಲದ ಅರಿವನ್ನು ಆತನು ತಂದು ತುಂಬುವುದಿಲ್ಲ. ಈ ದೃಷ್ಟಿಯಿಂದ ನೋಡಿದರೆ, ಆಗ ಸಂದೇಹವು ಅರಿವು-ಮರೆವುಗಳ ಸಂಧಿಸ್ಥಾನ. ಶ್ರದ್ಧಾವಂತನು ಮರೆವಿನ ಮೇರೆಯನ್ನು ಮೀರಿ ಅರಿವನ್ನು ತಟ್ಟುವನು. ಉಯ್ಯಾಲೆಯು ತೂಗುತ್ತಿರುವಾಗ ತನಗೆ ಬೇಕಾದ ಕಡೆಗೆ ಹಾರಬಹುದು ಹೇಗೋ ಹಾಗೆ ಇಲ್ಲಿಯೂ, ಸಂದೇಹದಲ್ಲಿಯೂ ಹಾಗೂ ಆಗಬಹುದು, ಹೀಗೂ ಆಗಬಹುದು. ಗುರುವನ್ನು ಪಡೆದವನು ತಪ್ಪದೆ ಅರಿವಿನ ಕಡೆಗೇ ತಿರುಗುವನು. ಹಾದಿ ಬಲ್ಲವನ ಹಿಂದೆ ಹೋದವನಿಗೆ ಹಾದಿ ತಪ್ಪುವ ಭೀತಿಯುಂಟೆ ? ಅದರಂತೆ.”

ಪುರೋಹಿತನು ಕೈಮುಗಿದು ತನ್ನ ಆಸನದಲ್ಲಿ ಕುಳಿತನು.

ರಾಜಗುರುವು ಚಕ್ರವರ್ತಿಯ ಅಪ್ಪಣೆ ಪಡೆದು ಎದ್ದುನಿಂತನು. ಕೇಳಿದನು: “ಭಗವಾನ್, ನಾವು ಮನುಷ್ಯರು. ನಮಗೆ ಸತ್ಯದರ್ಶನವು ಆಗುವುದು ಹೇಗೆ ? ಅಪ್ಪಣೆಯಾಗಬೇಕು.”

ಭಗವಾನರು ಮಂದಸ್ಮಿತವದನರಾಗಿ ಮತ್ತೆ ಹೇಳಿದರು : “ರಾಜಗುರುಗಳ ಪ್ರಶ್ನವು ಚೆನ್ನಾಗಿದೆ. ಸತ್ಯದರ್ಶನವು ಎಲ್ಲರಿಗಿಂತ ಹೆಚ್ಚಾಗಿ ದಂಡ್ಯರನ್ನ ದಂಡಿಸುವ ರಾಜನಿಗೂ, ಆ ರಾಜನಿಗೆ ಮಾರ್ಗದರ್ಶಿಯಾದ ರಾಜಗುರುವಿಗೂ ಬೇಕಾದುದು. ಆದುದರಿಂದ ತಾವು ಈ ಪ್ರಶ್ನವನ್ನು ಕೇಳಿದುದು ಪರಮಸಾಧುವಾಯಿತು. ಆಗಲಿ, ಹೇಳೋಣ.”

“ಸತ್ಯಕ್ಕೆ ಎರಡು ರೂಪ. ಇಂದ್ರಿಯಗೋಚರವಾಗುವ ರೂಪವೊಂದು, ಅದು ಚರರೂಪ. ಇಂದ್ರಿಯಗೋಚರವಾಗದ ಸ್ಥಿರರೂಪವೊಂದು. ಚರರೂಪವು ಸ್ಥಿರ ರೂಪದ ಪ್ರತಿಬಿಂಬ. ಲೋಕವೆಲ್ಲವೂ ಅರಿತಿರುವುದು ಈ ಚರರೂಪವನ್ನು. ಅಲೆಗಳಂತೆ ಚಂಚಲವಾದುದು ಇದು. ಹೊತ್ತು ಹೊತ್ತಿಗೆ ಹೊಸತಾಗುತ್ತಿರುವುದು ಇದರ ಸ್ವಭಾವ. ಇದು ದೇಶದೇಶಕ್ಕೂ ಬೇರೆಯಾಗುತ್ತಿರುವುದು. ಅಷ್ಟೇನು? ಸಂಗೀತದಂತೆ ಎನ್ನಿ, ನಿಮ್ಮ ರುಚಿಯಿಂದ ಸಂಗೀತಕ್ಕೆ ಬೆಲೆ. ನಿಮ್ಮ ಜ್ಞಾನ ಸಂಸ್ಕಾರಗಳಿಂದ ರುಚಿಯೂ ಭಿನ್ನೈಸುವುದು. ಹಾಗೆ, ಹುಡುಗನಿಗೆ, ತರುಣನಿಗೆ, ವೃದ್ಧನಿಗೆ ಸತ್ಯವು ಬೇರೆ ಬೇರೆಯಾಗುವುದು. ಆದರೆ, ಆ ಸ್ಥಿರರೂಪವಾದ ಸತ್ಯವಿದೆಯಲ್ಲ ಅದು ಬೇರೆ. ಅದು ಎಲ್ಲರಿಗೂ ಎಲ್ಲ ದೇಶಗಳಲ್ಲಿಯೂ ಎಲ್ಲ ಕಾಲಗಳಲ್ಲಿಯೂ ಒಂದೇ.

style="text-indent: 1cm;">ಈ ಲೋಕದಲ್ಲಿ ಅದು ಧರ್ಮವಾಗಿ ಗೋಚರವಾಗುವುದು. ಧರ್ಮವು ಸತ್ಯದ ಚರರೂಪದಲ್ಲಿ ಸ್ಥಿರರೂಪವನ್ನು ಆರಾಧಿಸುವಿಕೆ. ಅದಕ್ಕೆ ಚರರೂಪಕ್ಕಿರುವಷ್ಟೂ ಮುಖಗಳುಂಟು. ಅದರಿಂದಲೇ ಧರ್ಮವು ವ್ಯಕ್ತಿಗಳಿಗೆ, ಕಾಲಗಳಿಗೆ, ದೇಶಗಳಿಗೆ ಬೇರೆಬೇರೆಯಾದರೂ, ಎಲ್ಲರಿಗೂ ಅನ್ವಯಿಸುವುದು. ಸಾಮಾನ್ಯರೂಪದಿಂದ ಸಾಧಾರಣವಾಗಿ ಎಲ್ಲರಿಗೂ ಅನ್ವಯಿಸಿದರೂ ವಿಶೇಷರೂಪದಿಂದ ಭಿನ್ನೈಸುವುದೇ ಅದರ ಸ್ವಭಾವ ಎಂದು ಅದಕ್ಕೆ ಗೌರವ. ಅನ್ನವು ಯಾರಿಗೆ ಬೇಡ ? ಹಾಗೆಂದು ಅದಕ್ಕೆ ಒಂದೇ ರೂಪವೇನು ? ಹಾಗೆ ಅನ್ನವು ಒಬ್ಬೊಬ್ಬರಿಗೆ ಒಂದೊಂದು ರೂಪವಾಗಿದ್ದರೂ ತಿಂದವರಿಗೆ ತೃಪ್ತಿಯನ್ನು ಕೊಡುವುದೆಂದು ಅದಕ್ಕೆ ಗೌರವ. ಅದು ಎಲ್ಲರಿಗೂ ಬೇಕಾಗಿರುವುದೂ ಅದೇ ಕಾರಣದಿಂದಲೇ. ಕೆಲವು ಪ್ರಾಣಿಗಳಿಗೆ ಮಾಂಸವು ಅನ್ನ, ಕೆಲವಕ್ಕೆ ಹುಲ್ಲು ಅನ್ನ ಕೆಲವರಿಗೆ ಗೋಧಿಯು ಅನ್ನ. ಇನ್ನು ಕೆಲವರಿಗೆ ಹಣ್ಣುಗಳು ಅನ್ನ. ಹೀಗೆ ರೂಪದಿಂದ ಬೇರೆಬೇರೆಯಾದರೂ ಎಲ್ಲರಿಗೂ ಅನ್ನವು ಒಂದೇ ಹೇಗೆಯೋ, ಹಾಗೆಯೇ ಧರ್ಮವು ಆಚಾರದಲ್ಲಿ ಬೇರೆಬೇರೆಯಾದರೂ ಮೇಲಕ್ಕೆ ಏರಲು ಬೇಕಾಗುವ ಏಣಿಯೆಂದು ಎಲ್ಲರಿಗೂ ಬೇಕಾಗುವುದು. ಹೀಗೆ ವ್ಯವಹಾರದಲ್ಲಿ ಕಾಣುವ ಸತ್ಯವು ಧರ್ಮದ ಅನುಷ್ಠಾನದಿಂದ ಕಾಣುವುದು.

ಈ ಧರ್ಮವು ಚೋದನಾತ್ಮಕವಾದುದು ; ಎಂದರೆ ಇದೇ ಎಲ್ಲರನ್ನೂ ಕಾರ್ಯಪರರನ್ನಾಗಿ ಮಾಡುವುದು. ತಾನು ಮಾಡಬೇಕಾದ ಕಾರ್ಯವೊಂದುಂಟು ಎಂದು ಮಾನವನಿಗೆ ತೋರುವುದು ಇದೆಯಲ್ಲವೆ ? ಇದೇ ಚೋದನೆಯು.

ಲೋಕದಲ್ಲಿರುವ ನೀರೆಲ್ಲವೂ ಮಳೆಯಿಂದಲೇ ಬಂದುದು. ಹಾಗೆಯೇ ಒಳ್ಳೆಯದಾಗಲಿ, ಕೆಟ್ಟುದಾಗಲಿ, ಎಲ್ಲಕ್ಕೂ ಧರ್ಮವೇ ಚೋದಕವು. ನೀರು ಮೇಲಿನಿಂದ ಇಳಿಯುವಾಗ ಅದರಲ್ಲಿ ವಾಸನೆಯಾಗಲಿ ರುಚಿಯಾಗಲಿ ಇಲ್ಲದಿದ್ದರೂ, ಭೂಮಿಯಲ್ಲಿ ರುಚಿಯೂ ವಾಸನೆಯೂ ಇಲ್ಲದಿರುವ ನೀರೂ ಉಂಟೇನು! ಹಾಗೆ ಧರ್ಮವೇ ಪ್ರೇರಿಸಿದ್ದರೂ ಕಾರ್ಯವು ಆಗುವಾಗ ಕಾರ್ಯಕರ್ತನಲ್ಲಿರುವ ಸತ್ತ್ವರಜಸ್ತಮೋಗುಣಗಳ ಸಂಸರ್ಗದಿಂದ ಧರ್ಮಾಧರ್ಮಗಳು ಏರ್ಪಡುವುದು. ಲೋಕದ ಸುಸ್ಥಿತಿಯನ್ನು ಕಾಪಾಡಲು ಶಕ್ತವಾದುದು, ಕರ್ತೃವಿನ ಅಂಶವು ಆದಷ್ಟು ಕಡಿಮೆಯಾಗಿರುವುದು, ಪುಣ್ಯಫಲಪ್ರದವಾಗಿದ್ದು, ಇತರರಿಗೂ ತನಗೂ ಸಂತೋಷವನ್ನು ಕೊಡುವುದು ಯಾವುದೋ ಅದೆಲ್ಲವೂ ಧರ್ಮವು. ಇದಕ್ಕೆ ವಿರುದ್ಧವಾದುದೆಲ್ಲ ಅಧರ್ಮವು.

ಧರ್ಮವು ಬೇಕು ಎನ್ನುವವನು ಮೊದಲು ಅಂತರಂಗಶುದ್ಧಿಯನ್ನು ಸಂಪಾದಿಸಬೇಕು. ಶುದ್ಧವಲ್ಲದ ಅಂತರಂಗದಲ್ಲಿ ತೋರುವುದೆಲ್ಲ ಅಧರ್ಮವೇ. ಅಂತರಂಗ ಶುದ್ಧಿಯು ದೇಹವೂ ಮನಸ್ಸೂ ಸರಿಯಾಗಿರುವಾಗ ಮಾತ್ರ ಸಾಧ್ಯವು. ಆದುದರಿಂದ ಆಹಾರ, ವಿಹಾರ, ವಿಚಾರ, ವ್ಯವಹಾರ, ನಾಲ್ಕೂ ಶುದ್ಧಿಯಾಗಿದ್ದರೆ ಮಾತ್ರ ಅಂತರಂಗಶುದ್ಧಿಯು. ಅದರಿಂದ ಧರ್ಮಕಾಮನಾದವನು ಈ ನಾಲ್ಕರಲ್ಲೂ ವಿವೇಕವುಳ್ಳವನಾಗಬೇಕು. ವಿವೇಕವೆಂದರೆ ಸತ್ತ್ವಗುಣವನ್ನು ಪೋಷಿಸಿ ಮಿಕ್ಕೆರಡನ್ನೂ ತುಳಿಯುವಂತಹ ಬೇಕುಬೇಡಗಳ ಜ್ಞಾನ. ಇದನ್ನು ಸಂಪಾದಿಸಿಕೊಳ್ಳಲು ಎರಡು ಹಾದಿ; ಒಂದು ತನ್ನ ಅನುಭವವೆಂಬ ಕಷ್ಟದ ಹಾದಿ. ಇನ್ನೊಂದು ಬಲ್ಲವರ ಉಪದೇಶವೆಂಬ ಸುಲಭದ ಹಾದಿ. ಆ ಉಪದೇಶವೂ ಸ್ವಾರ್ಥವಿಲ್ಲದೆ ರೋಗನಿವಾರಕವಾದ ಔಷಧದಂತೆ ಅನುಭವಸಿದ್ಧವಾಗಿದ್ದರೆ ಮಾತ್ರ ಶಾಸ್ತ್ರವಾಗುವುದು.

ಈ ಧರ್ಮವನ್ನು ಆಚರಿಸುತ್ತಿರುವವರಿಗೆ ಸತ್ಯದ ಸ್ಥಿರರೂಪವು ಗೋಚರವಾಗುವುದು.

ಸತ್ಯವು ನೇರವಾಗಿ ಏಕೆ ತಿಳಿಯಬಾರದು ಎನ್ನುವಿರೇನೋ ? ಹಾಲು ಇಟ್ಟಿದ್ದ ಕಡೆಯೇ ಕೆನೆಕಟ್ಟುವಂತೆ ಮನಸ್ಸು ಬುದ್ಧಿಗಳು ತಮ್ಮ ಅಲ್ಪತ್ವದಿಂದ ಅಜ್ಞಾನದ ಮುಸುಕನ್ನು ಎಳೆದುಕೊಳ್ಳುತ್ತಿರುವುವು. ಆಗ ಸತ್ಯವು ಎದುರು ನಿಂತರೂ ಮುಚ್ಚಿದ ಕಣ್ಣಿಗೆ ಕಂಡ ರೂಪದಂತೆ ಆಗುವುದು. ಅಲ್ಲದೆ, ಸತ್ಯವು ಕೂಡ ದೇಶಕಾಲಾತ್ಮಕವಾದ ಜಗತ್ತಿನಲ್ಲಿ ಕಾಣುವಾಗ ಯೋಗಮಾಯೆಯ ಛಾಯೆಗೆ ಒಳಪಟ್ಟಿರುವುದರಿಂದ ಅದು ಥಟ್ಟನೆ ಕಾಣದಾಗುವುದು. ಅದರಿಂದಲೇ ಸತ್ಯಧರ್ಮಗಳಿಗೆ ಚಿನ್ನದ ಪಾತ್ರೆಯನ್ನು ಮುಚ್ಚಿದೆಯೆಂದು ವೇದಗಳಲ್ಲಿ ಹೇಳಿರುವುದು. ಅದನ್ನು ಆ ಪಾತ್ರೆಯನ್ನು, ಪೂಷಾದೇವನೊಬ್ಬನು ತೆಗೆಯಬಲ್ಲನು. ಒಮ್ಮೆ ಆತನ ದಯೆಯಿಂದ ಸತ್ಯಧರ್ಮಗಳ ದರ್ಶನವಾದರೆ, ಅದು ಎಂದಿಗೂ ಮರೆಯುವುದಿಲ್ಲ.

ಅಲ್ಲದೆ, ಸತ್ಯವು ಬುದ್ಧಿಗೆ ಗೋಚರವಾದಾಗ, ವ್ಯಕ್ತಿ ಕಾಲದೇಶಾನುಗುಣವಾಗಿ ವ್ಯತ್ಯಾಸವನ್ನು ಹೊಂದಿ, ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬವು ಗಾಜಿನ ಹಿಂದಿನ ರಸದ ಪ್ರಾಬಲ್ಯ - ಅಪ್ರಾಬಲ್ಯಗಳಿಂದ ಹೆಚ್ಚು ಕಡಿಮೆಯಾಗುವಂತೆ ಹೆಚ್ಚು ಕಡಿಮೆಯಾಗುವುದು. ಅದನ್ನು ಸ್ಪಷ್ಟವಾಗಿ ದೃಷ್ಟಿದೋಷವಿಲ್ಲದಂತೆ ಕಾಣಬೇಕಾದರೆ ಬ್ರಹ್ಮಲೋಕಕ್ಕೆ ಹೋಗಬೇಕು. ಅಥವಾ ತಾನಿರುವಲ್ಲಿಗೆ ಬ್ರಹ್ಮಲೋಕವು ಬರುವಂತೆ ಮಾಡಿಕೊಳ್ಳಬೇಕು. ಅಲ್ಲಿ ಆ ಸತ್ಯವು ಹಗಲಿನಲ್ಲಿ ಕಂಡಂತೆ ಕಾಣುವುದು. ಅಂತರಂಗಶುದ್ಧಿಯನ್ನು ಸಂಪಾದಿಸಿಕೊಳ್ಳುವುದೇ ಬ್ರಹ್ಮಲೋಕವನ್ನು ಸಾಧಿಸುವುದು. ಅದರಿಂದ, ತಿಳಿದವರು ತಾವು ಅಂತರಂಗಶುದ್ಧಿಯನ್ನು ಸಂಪಾದಿಸಿಕೊಂಡು ಸತ್ಯದರ್ಶನ ಮಾಡುವರು. ತಾವು ಕಂಡುದು ಸರಿಯೆಂದು ನಿಶ್ಚಯಿಸಿಕೊಳ್ಳಲು ಹಿಂದಿನ ಶಾಸ್ತ್ರಜ್ಞರ ವಾಣಿಯನ್ನು ನೆನೆಸಿಕೊಳ್ಳುವರು. ಇವೆರಡಕ್ಕೂ, ಎಂದರೆ ತಮ್ಮ ದರ್ಶನಕ್ಕೂ ಹಿಂದಿನವರ ಶಾಸ್ತ್ರಕ್ಕೂ ಆಧಾರವು ವೇದವೆಂದು ಅದನ್ನು ಪ್ರಮಾಣಿಸುವರು. ಹೀಗೆ ಶ್ರುತಿ. ಅದನ್ನು ಅನುಸರಿಸಿದವರ ಸ್ಮೃತಿಶಾಸ್ತ್ರ-ತಾನು ಪಡೆದ ಅನುಭವ ಎಂಬ ಮೂರೂ ಏಕತಾನವಾಗುವುದೇ ಸತ್ಯದರ್ಶನವು.

ಶ್ರುತಿಯೇ ಪ್ರಮಾಣವೆಂದು ಮಿಕ್ಕವನ್ನು ತಿರಸ್ಕರಿಸಬಾರದು. ಹಾಗೆಯೇ ಈ ಮೂರರಲ್ಲಿ ಒಂದೇ ಸರಿಯೆಂದು ಮಿಕ್ಕವನ್ನು ಕಡೆಗಾಣಬಾರದು. ವೇದಾರ್ಥವನ್ನು ಇತಿಹಾಸಪುರಾಣಗಳಲ್ಲಿ ವಿಸ್ತಾರವಾಗಿ ಹೇಳಿರುವುದನ್ನು ತನ್ನ ಅನುಭವದಿಂದ ಗೋಚರವಾದುದನ್ನು ಒಂದೇ ಎಂದು ತಿಳಿದವನು ಸತ್ಯದರ್ಶನವನ್ನು ಪಡೆದವನು.

ಹಾಗೆ ತಾನು ಕಂಡಿದ್ದರೂ, ಆ ಅರ್ಥವನ್ನು ಇತರರಿಗೆ ಹೇಳುವಾಗ, ಕೇಳುವವನಿಗೆ ಅರ್ಥವಾಗುವಂತೆ, ಸಮಂಜಸವಾಗಿ, ಸಕಾರಣವಾಗಿ, ನ್ಯಾಯವಾಗಿ ಹೇಳಬೇಕು. ಹಾಗಿಲ್ಲದೆ ತನಗೆ ತೋರಿದಂತೆ ಮಾಡಿದರೆ ನಿಮ್ಮ ಹಿಂದಿನ ಚಕ್ರವರ್ತಿ ಪುರೂರವನು ಮಾಡಿದಂತಾಯಿತು.”

ನಹುಷನೇ ಎದ್ದು ಕೈಮುಗಿದು ಕೇಳಿದನು ; “ಭಗವಾನ್, ಪುರೂರವನು ನಮ್ಮ ಪಿತಾಮಹನು. ಧರ್ಮಕಥಾಸಂದರ್ಭದಲ್ಲಿ ಬಂದಿರುವ ಚರಿತ್ರೆಯನ್ನು ಕೃಪೆಮಾಡಿ ನಿರೂಪಿಸಬೇಕು.”

ಆಗಲಿ, ನಿಮಗೆಲ್ಲಾ ತಿಳಿದ ಕಥೆಯೆಂದು ನಾವು ಸಂಕ್ಷೇಪವಾಗಿ ಹೇಳುವೆವು. ಪುರೂರವ ಚಕ್ರವರ್ತಿಯು ಒಬ್ಬರ ಕರ್ಮಾಚರಣದಿಂದ ಇನ್ನೊಬ್ಬರಿಗೆ ತೊಂದರೆಯಾಗದಂತೆ ಲೋಕವ್ಯವಸ್ಥೆಯನ್ನು ಕಾಪಾಡಿದ ಮಹಾನುಭಾವನು. ಬಲಿಷ್ಠನಾದ ರಾಜನಿಲ್ಲದಿದ್ದರೆ ಮತ್ಸ್ಯಗಳಂತೆ ಮನುಷ್ಯರು ಒಬ್ಬರನ್ನೊಬ್ಬರು ಕಿತ್ತು ತಿನ್ನುವರು. ಹಾಗಾಗದೆ ಎಲ್ಲರೂ ತಮ್ಮ ತಮ್ಮ ಇತಿಮಿತಿಗಳನ್ನು ಅರಿತು ನಡೆಯುವಂತೆ ಮಾಡುವುದಕ್ಕೇ ರಾಜನಿರುವುದು. ಅದೇ ರಾಜಧರ್ಮವು. ಅಂತಹ ರಾಜಧರ್ಮವನ್ನು ಚೆನ್ನಾಗಿ ಪಾಲಿಸಿದನೆಂದು ಆತನಿಗೆ ಲೋಕಾಂತರಾಗಮನ ಸಾಮಥರ್ಯ್‌ವು ಲಭಿಸಿತು.

ಒಂದು ದಿನ ಆತನು ಇಂದ್ರಲೋಕಕ್ಕೆ ಹೋದನು. ಅಲ್ಲಿ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮಗಳು ದರ್ಶನ ಕೊಟ್ಟವು. ಧರ್ಮಪರನಾದ ರಾಜನು ಅಣ್ಣನಾದ ಧರ್ಮನಿಗೆ ಸಲ್ಲಿಸಿದ ಪೂಜೆಯಿಂದ ಕಿರಿಯರು ತೃಪ್ತರಾಗುವರೆಂದು ಧರ್ಮವನ್ನು ಮಾತ್ರ ಆರಾಧಿಸಿದನು. ಅದರಿಂದ ಕಾಮಾರ್ಥಗಳು ‘ಮೂವರಿಗೂ ಪೂಜೆಯು ಸಲ್ಲಬೇಕು. ಅಥವಾ ಉಳಿದವರ ಅನುಮತಿಯಿಂದ ಜ್ಯೇಷ್ಠನಿಗೆ ಪೂಜೆಯಾಗಬೇಕು’ ಎನ್ನುವ ಮರ್ಯಾದೆಯನ್ನು ಆತನು ಗಮನಿಸಲಿಲ್ಲವೆಂದು ಕೋಪಗೊಂಡು ಶಾಪವನ್ನು ಕೊಟ್ಟರು. ಆತನು ಕಾಮಶಾಪದಿಂದ ವಿರಹದಿಂದ ಕಂದಿ, ಅರ್ಥಶಾಪದಿಂದ ಲೋಭದಿಂದ ಕಂಗೆಟ್ಟು ಒದ್ದಾಡಿದ ಕಥೆಯನ್ನು ನೀವೆಲ್ಲ ಬಲ್ಲಿರಿ.

ಅದರಂತೆ ಮರ್ಯಾದೆಯನ್ನು ಮೀರದೆ, ಪ್ರೇಯಸ್ಸಿಗೆ ಲೋಪ ಬರದಂತೆ ಶ್ರೇಯಸ್ಸನ್ನು ಆರಾಧಿಸುತ್ತ ವ್ಯವಹಾರದಲ್ಲಿ ತನ್ನ ಮತ್ತು ಇತರರ ಯೋಗಕ್ಷೇಮಗಳನ್ನು ನಿರ್ವಹಿಸುವುದೇ ಧರ್ಮವು ; ಅದೆ ಸತ್ಯದರ್ಶನದ ಸಾಧನವು.”

ಭಗವಾನರ ವಚನವನ್ನು ಕೇಳಿ ಎಲ್ಲರೂ ಸಂತುಷ್ಟರಾದರು. ಸಭೆಯು ಅವರಿಗೆ ಸಲ್ಲಬೇಕಾದ ಸಮರ್ಚನೆಯನ್ನು ಸಾಂಗವಾಗಿ ಸಲ್ಲಿಸಿ ಕೃತಾರ್ಥವಾಯಿತು.

* * * *