==೧೮.ವರವೋ? ಶಾಪವೋ?==

ವೃತ್ರನು ಹೋದನೆಂಬ ಸುದ್ದಿಯು ಅಮರಾವತಿಯಲ್ಲೆಲ್ಲ ಇರಲಿ, ಸ್ವರ್ಗಲೋಕದಲ್ಲೆಲ್ಲಾ ಮಿಂಚಿನ ವೇಗದಲ್ಲಿ ಹರಡಿತು. ಬರಿಯ ತರಗೆಲೆಗಳು ತುಂಬಿರುವ ಕಾಡಿನಲ್ಲಿ ಬೆಂಕಿಯು ಹರಡುವಂತೆ, ಒಣಗಿ ನಿಂತಿರುವ ಹುಲ್ಲಿನ ಕಾವಲು ಹೊತ್ತುಕೊಳ್ಳುವಷ್ಟು ವೇಗವಾಗಿ ಹರಡಿತು. ದಾನವರು ಹಾ ಹಾ ಎನ್ನುತ್ತ ಎದ್ದರು. ಅವರಿಗೆ ಅಮಲು ಇಳಿಯುವುದರಲ್ಲಿ, ಅನಿರೀಕ್ಷಿತವಾಗಿ, ಅಕಾರಣವಾಗಿ ಅವರು ತೇಜೋಹೀನರಾಗಿದ್ದಾರೆ. ಪಕ್ಕದಲ್ಲಿದ್ದ ಅಪ್ಸರೆಯರು ಕಾಣದಾಗಿದ್ದಾರೆ. ತೆರೆಯ ಹಿಂದೆ ಕುಳಿತು ಗಾನ ಮಾಡುತ್ತಿದ್ದ ಗಂಧರ್ವಗಣವು ಯಾವಾಗಲೋ ಓಡಿಹೋಗಿದೆ. ದಾನವೇಂದ್ರರಿದ್ದ ಅರಮನೆಗಳು ಏನೋ ಶೂನ್ಯವಾಗಿ, ಏನೋ ಬಿಕೋ ಎನ್ನುತ್ತ ಅವರನ್ನು ನೋಡಿ ಹಾಸ್ಯಮಾಡುವಂತೆ, ವಿಕಟವಾಗಿ ನಗುತ್ತಿರುವಂತೆ ಕಾಣುತ್ತಿವೆ. ಅವರ ವೃತ್ರನು ಸತ್ತನೆಂದು ನಂಬಲು ಹೊರಗಿನ ಸಾಕ್ಷ್ಯವೇನೂ ಬೇಕಿಲ್ಲ. ಅವರ ಹೃದಯವನ್ನು ಆವರಿಸಿರುವ ಶೂನ್ಯತೆ, ಅವರಿಗೆ ಹುಟ್ಟಿರುವ ಗಾಬರಿ, ಅದೇ ಹೇಳುತ್ತಿದೆ. ದಾನವೇಂದ್ರರಿಗೆ ದಿಗಿಲಾಗಿ, ಆದಷ್ಟು ಬೇಗ ಅಮರಾವತಿಯಿಂದ ಹೊರಟುಹೋಗಬೇಕು ಎನ್ನಿಸಿದೆ. ನಿಂತಿದ್ದವರು ಕುಳಿತು ಬಿದ್ದುಕೊಳ್ಳುವುದಿರಲಿ ನಿಂತಂತೆಯೇ ಕುಸಿದು ಬಿದ್ದಂತಾಗಿದೆ. ಕೆಟ್ಟ ಕನಸಾಗಿ ಯಾವುದೋ ಪಿಶಾಚವು ಓಡಿಸಿಕೊಂಡು ಬರುತ್ತಿದ್ದರೆ, ಓಡುವುದಕ್ಕೆ ಕಾಲೂ ಬರದೆ ಇದ್ದಾಗ ಆಗುವಷ್ಟು ಭೀತಿಯಾಗಿ, ಅವರು ಅಲ್ಲಿಂದ ಏಳಲೂಲಾರರು, ಅಲ್ಲಿ ಇರಲೂಲಾರರು ಎನ್ನುವಂತಾಗಿದೆ.

ದೇವತೆಗಳು ಕುಣಿಯುತ್ತಿದ್ದಾರೆ. ಅವರ ಉತ್ಸಾಹವು ಏನು ! ಅಖಂಡವಾಗಿ ವೃಷ್ಟಿಯಾಯಿತೋ ಎನ್ನುವಂತೆ ಗಳಿಗೆಗಳಿಗೆಗೂ ಹೆಚ್ಚುತ್ತಿದೆ. ಎಲ್ಲರೂ, ಅಪ್ಸರೋಗಣಗಳು, ಗಂಧರ್ವರ ಗುಂಪುಗಳು, ಚಾರಣರ ತಂಡಗಳು, ಎಲ್ಲರೂ ಸೇರಿ ಇಂದ್ರವಿಜಯವನ್ನು ಹಾಡುತ್ತಿದ್ದಾರೆ. ಯಾವ ಯಾವ ದಾನವೇಂದ್ರರ ಅರಮನೆಯ ಮುಂದೆ ದೇವತೆಗಳು ಸುಳಿಯುವುದಕ್ಕೂ ಭೀತಿಪಡುತ್ತಿದ್ದರೋ, ಅಲ್ಲಿ ದೇವತೆಗಳು ಹಾವಳಿ ಮಾಡುತ್ತಿದ್ದಾರೆ. ವೃತ್ರೋತ್ಸವವೆಂದು ಬೆಳಗ್ಗೆ ದಾನವರು ಹಾರಾಡಿದ್ದುದನ್ನೆಲ್ಲ ನೆನೆಸಿಕೊಂಡು, ಅವರನ್ನು ಅಣಕಿಸುವಂತೆ ದೇವತೆಗಳು ಕುಣಿಯುತ್ತಿದ್ದಾರೆ. ಅಷ್ಟೇನು? ಸ್ವರ್ಗಲೋಕದ ಜಡಭೂಮಿಯೆಲ್ಲ ಸಂತೋಷದಿಂದೆದ್ದು ಕುಣಿಯುತ್ತಿರುವಂತೆ, ಆ ಸಂತೋಷವನ್ನು ಹುಲ್ಲಿನಿಂದ ಹಿಡಿದು ಕಲ್ಪವೃಕ್ಷದವರೆಗೆ, ಸಸ್ಯವರ್ಗವೆಲ್ಲವೂ ಅನುಮೋದಿಸಿ ತಾನೂ ನರ್ತನ ಭಾಗಿಯಾಗಿರುವಂತೆ ಆಗಿದೆ. ಅಷ್ಟೇನು? ಅರಮನೆಗಳಲ್ಲಿರಲಿ, ಇತರ ದೇವಮಂದಿರಗಳಲ್ಲಿಯೂ, ಗೋಡೆ, ಕಿಟಕಿ, ಕಂಬ, ಬಾಗಿಲುಗಳು ಮೊದಲುಗೊಂಡು ಆ ಉತ್ಸವದಲ್ಲಿ ಉತ್ಸಾಹದಿಂದ ಭಾಗವಹಿಸಿದಂತಿವೆ.

ಶುಕ್ರಾಚಾರ್ಯನು ಉತ್ತಮೋತ್ತಮವಾದ ಸುರೆಯನ್ನು ಪಾನಮಾಡಿ ಮತ್ತನೋ ಮತ್ತನಾಗಿ ಮಂಚದ ಮೇಲೆ ಮಲಗಿದ್ದನು. ಏಕೋ ಏನೋ ಥಟ್ಟನೆ ಎಚ್ಚರವಾಯಿತು. ಏನೋ ಸರ್ವನಾಶವಾದ ಒಂದು ಭಾವವು ಆ ಮಂದಿರವನ್ನೆಲ್ಲ ತುಂಬಿ ಬಲವಂತವಾಗಿ ಆತನ ಹೃದಯವನ್ನು ಪ್ರವೇಶಿಸಿದಂತಿದೆ. ಪ್ರಹರಿಯನ್ನು ಕರೆದು ‘ಏನು ಸುದ್ದಿ?’ ಎನ್ನುತ್ತಾನೆ. ಪ್ರಹರಿಯು ಅಳುತ್ತ ಬಿಕ್ಕಳಿಸುತ್ತ ವೃತ್ರ ವಧದ ಸುದ್ದಿಯನ್ನು ತಿಳಿಸುತ್ತಾನೆ. ಶುಕ್ರಾಚಾರ್ಯನು ಎಚ್ಚರಕ್ಕಿಂತಲೂ ಎಚ್ಚರವಾಗಿ ‘ಏನು?’ ಎಂದು ಮಂಚದಿಂದ ಒಂದೇ ಹಾರಿಗೆ ಹಾರಿ ಕೆಳಕ್ಕೆ ಬಂದು, ಪ್ರಹರಿಯನ್ನು ಹಿಡಿದು ಕುಲುಕುತ್ತಾ. “ಏನಂದೆ? ಇನ್ನೊಂದು ಸಲ ಹೇಳು” ಎಂದು ಎಲ್ಲವನ್ನೂ ಮತ್ತೆ ಕೇಳುತ್ತಾನೆ.

ಶುಕ್ರಾಚಾರ್ಯನು ಅಲ್ಲಿಯೇ ಇದ್ದ ಅಸನದಲ್ಲಿ ಧೊಪ್ಪನೆ ಬಿದ್ದುಕೊಂಡು ಏನಾಗಿದೆ ಎಂಬುದನ್ನು ತನ್ನ ದಿವ್ಯದೃಷ್ಟಿಯಲ್ಲಿ ನೋಡುತ್ತಾನೆ. ಚಿತ್ರಪಟದಲ್ಲಿ ತೋರುವಂತೆ ನಡೆದುದೆಲ್ಲವೂ ಮತ್ತೆ ಕಾಣುತ್ತದೆ. “ಹಾಗಾದರೆ ಇಂದ್ರನದೇನು ತಪ್ಪಿಲ್ಲ. ನೀನಾಗಿ ಬಲವಂತ ಮಾಡಿ ಅವನಿಂದ ಏಟು ತಿಂದು ಸತ್ತಿದ್ದೀಯೆ. ಅಯ್ಯೋ ! ವೃತ್ರ, ನಿನಗೇಕೆ ಈ ದುರ್ಬುದ್ಧಿ ಬಂತು? ಅಥವಾ ಈ ದಿನ ಬೆಳಿಗ್ಗೆ ನಾನೇಕೆ ಏನಾಗಬಹುದು ಎಂಬುದನ್ನು ನೋಡಲಿಲ್ಲ? ಅಯ್ಯೋ, ಸುರಾ ಮೋಹವೇ ನೀನು ಎಂತಹ ಕೈಕೊಟ್ಟೆ ! ನಾನೇಕೆ ಇಂದು ಈ ಅಸುರಸ್ವಭಾವಕ್ಕೆ ವಶನಾದೆ? ಅಥವಾ ನನ್ನನ್ನು ಮೋಸಮಾಡಿ ನಿಯತಿಯು ಈ ಕಾರ್ಯವನ್ನು ಸಾಧಿಸಿತೋ? ಇರಬೇಕು. ಕಾಲಸ್ವರೂಪನಾದ ಆ ವಿಷ್ಣುವು ಇದನ್ನು ಸಾಧಿಸಿರಬೇಕು. ಹಿಂದೆ ನಮ್ಮ ಪಿತಾಮಹಿಯು ಶಾಪಕೊಟ್ಟಂತೆ ನಾನೂ ಶಾಪಕೊಡಲೇ? ಅಪರಾಧವಿಲ್ಲದೆ ಶಾಪವನ್ನೆಂತು ಕೊಡಲಿ?” ಎಂದು ಕಣ್ಣಿಂದ ನೀರು ಧಾರಾಳವಾಗಿ ಸುರಿಯುತ್ತಿರಲು, ಒಂದು ಗಳಿಗೆ ಮೌನವಾಗಿ ಕುಳಿತಿದ್ದನು.

ಮತ್ತೆ ತನ್ನಷ್ಟಕ್ಕೆ ತಾನೇ ನುಡಿದುಕೊಂಡನು : ಸಂಜೀವಿನಿ ವಿದ್ಯಾಬಲದಿಂದ ಅವನನ್ನು ಬದುಕಿಸೋಣವೆಂದರೆ, ಆ ಶರೀರವನ್ನು ರಚಿಸಿದ್ದ ಪಂಚಭೂತಗಳೆಲ್ಲ ವಿಘಟಿತವಾಗಿ ಹೋಗಿವೆ. ಇನ್ನು ಉಳಿದಿರುವುದು ಅಂತಃಕರಣ ವಿಶಿಷ್ಟವಾದ ಆ ವೃತ್ರನ ನಾಮವೊಂದು. ಅದಕ್ಕೆ ಬಲವನ್ನು ಕೊಟ್ಟರೂ ಅದು ವಿಕಾರವಾದ ರೂಪವನ್ನು ಮಾತ್ರ ಪಡೆಯಬಲ್ಲದು. ಮತ್ತೆ ತ್ವಷ್ಟೃವಿನ ಬಳಿ ಸಾರಬಾರದೇಕೆ ? ನಾನು ಹೋಗಬಾರದು. ಆತನೇ ಸೃಷ್ಟಿಸಿದ ಕೃತ್ಯವನ್ನೇ ಕಳುಹಿಸೋಣ, ಆತನು ಬೇಕೆಂದರೆ ಮತ್ತೆ ಅದಕ್ಕೆ ರೂಪವನ್ನು ಕೊಡಬಲ್ಲ” ಎಂದು ಮಂತ್ರಪುನಶ್ಚರಣ ಮಾಡಿ, ಆ ಪ್ರೇತವನ್ನು ಕರೆದನು. ಸೂಕ್ಷ್ಮವಾದ ರೂಪದಲ್ಲಿ ಪ್ರೇತವು ಬಂತು.

ಶುಕ್ರನೇ ಮೊದಲು ಮಾತನಾಡಿಸಿದನು ; “ಏನು ವೃತ್ರ ? ಏಕೆ ಹೀಗೆ ಮಾಡಿದೆ ?”

ಪ್ರೇತವು ನುಡಿಯಿತು ; “ಆಚಾರ್ಯ, ಅದೇಕೆ ಹೀಗೆ ಮಾಡಿದೆನೆಂದು ನನಗೂ ತಿಳಿಯದು, ಇಂದ್ರನು ಬೇಡಬೇಡವೆಂದರೂ ಬಿಡದೆ, ನಾನೇ ಬಲವಂತ ಮಾಡಿ ಅವನಿಂದ ಹೊಡೆಸಿಕೊಂಡೆ. ಆದರೆ, ಆಚಾರ್ಯ, ಇಂದ್ರನದೊಂದು ಅಪರಾಧವಿದೆ, ಒಂದು ದ್ರೋಹವಿದೆ. ಯಾವುದೋ ಅಜ್ಞಾತವಾದ ಆಯುಧವು ಅದರಲ್ಲಿತ್ತು. ನಾನು ನೊರೆಯಿಂದ ಹೊಡೆ ಎಂದೆ ದಿಟ. ಆದರೆ ಅದರಲ್ಲಿ ಆಯುಧವಿತ್ತು. ಅದೇ ನನ್ನನ್ನು ಕೊಂದುದು. ಮುಖ್ಯ ಎಲ್ಲವೂ ಸೇರಿತು. ನನಗೆ ಸೋಲಾಗಿ ಸಾಯುವ ಕಾಲ ಬಂದಿತು.”

ಶುಕ್ರಾಚಾರ್ಯನು ಕೇಳಿದನು ; “ಈಗ ಏನು ಮಾಡಬೇಕೆಂದಿರುವೆ ?”

“ಸಾಧ್ಯವಾದರೆ, ಆ ಇಂದ್ರನನ್ನು ಹಿಡಿದು ಬಾಯಿಗೆ ಹಾಕಿಕೊಂಡು ಅಗಿದು ಬಿಟ್ಟೇನು. ನಾನಿನ್ನೂ ಸತ್ತಿಲ್ಲ. ಆದರೆ, ಪಂಚಭೂತಗಳನ್ನು ಕೊಟ್ಟು ನನಗೆ ಶರೀರವನ್ನು ಕೊಡುವವರು ಬೇಕಲ್ಲ ? ಅದಿಲ್ಲದೆ, ನಾನು ಏನು ಮಾಡಲಿ? ಗಳಿಗೆ ಗಳಿಗೆಗೂ ಒಂದೊಂದು ರೂಪ ಮಾಡಿಕೊಂಡು ಅವನನ್ನು ಹೆದರಿಸಿ ಹೆದರಿಸಿ ಸಾಯಿಸಬೇಕು, ಅಷ್ಟೇ”

“ಹುಂ ! ದಾನವ ಸಾಮ್ರಾಜ್ಯವು ಕಲ್ಪಾಂತಸ್ಥಾಯಿಯಾಗುವುದೆಂದು ನಾನು ಹಿಗ್ಗುತ್ತಿದ್ದೆ, ಏನೋ ಮೋಸವಾಯಿತು. ಆಗಲಿ, ನನ್ನ ಉಪದೇಶದಿಂದ ನೀನಿನ್ನೂ ಕರಗದಿರುವೆ. ಈಗಲೂ ನನ್ನ ಮಾತು ಕೇಳು, ತ್ವಷ್ಟೃವನ್ನೇಕೆ ಹೋಗಿ ಕೇಳಬಾರದು! ನೀನೇ ಹೋಗಿ ಆತನನ್ನು `ನನಗೆ ಭೌತಿಕ ದೇಹವನ್ನು ಕೊಡು’ ಎನ್ನು”

ಶುಕ್ರಾಚಾರ್ಯನಿಗೆ ಎಡಗಣ್ಣು ಅದುರಿತು. ಕೂಡಲೇ ಹೇಳಿದನು : “ಶಕುನವು ಚೆನ್ನಾಗಿಲ್ಲ. ತಡೆ, ನಾನೇ ಸ್ವತಂತ್ರಿಸಿ ಸರಸ್ವತಿಯನ್ನು ಕರೆದು ಕೇಳುವೆನು. ನೀನು ಹೇಗೆ ಸತ್ತೆ ಎಂದು ತಿಳಿಯುವೆನು” ಶುಕ್ರನು ಧ್ಯಾನಸ್ಥನಾದನು, ಸರಸ್ವತಿಯು ಬಂದಳು. ಶುಕ್ರನು ಕೇಳಿದನು : “ದೇವಿ, ಇಂದ್ರಶತ್ರುವಾಗಬೇಕೆಂದಲ್ಲವೆ ತ್ವಷ್ಟೃವು ಯಾಗ ಮಾಡಿದುದು? ಹೀಗಿರಲು ವೃತ್ರವು ಇಂದ್ರನಿಂದ ಹತನಾದುದು ಹೇಗೆ?”

ದೇವಿಯು ನಕ್ಕು ಹೇಳಿದಳು : “ಅದೊಂದು ಸಣ್ಣ ವಿಷಯ. ವ್ಯಾಕರಣವು ವೇದಾಂಗ, ಅದರಲ್ಲಿ ಸ್ವರವು ಸಮಾಸವನ್ನು ಬೇರೆ ಮಾಡುವುದು ಎಂದು ಹೇಳಿರುವುದನ್ನೇಕೆ ಮರೆತೆ? ತ್ವಷ್ಟೃವು ಇಂದ್ರನಿಗೆ ಶತ್ರುವಾಗಬೇಕೆಂದು ಸಂಕಲ್ಪಿಸಿದನು. ನಾನು ಸ್ವರಭೇದವನ್ನು ಮಾಡಿ ಇಂದ್ರನ ಶತ್ರುವಾಗುವವನು ಹುಟ್ಟುವಂತೆ ಮಾಡಿದೆನು. ಅದೇಕೆ ಎನ್ನುವೆಯಾ? ಅದನ್ನು ಹೇಳುವೆನು ಕೇಳು. ಇಂದ್ರನು ಮನ್ವಂತರವೆಲ್ಲ ಇರಬೇಕಾದವನು. ಆತನಿಗೆ ಅಪಾಯ ಬಂದಾಗ ನಾವು ಯಾರೂ ಸುಮ್ಮನಿರುವುದು ಸಾಧ್ಯವಿಲ್ಲ. ಅದರಿಂದ ಹೀಗಾಯಿತು. ಇದು ನೀನು ಕೇಳಿದೆಯಾಗಿ ಹೇಳಿದೆ. ಇನ್ನು ಬಿಡು, ನಾನು ಹೋಗುವೆನು?” ಎಂದು ಆಕೆಯು ಹೊರಟುಹೋದಳು.

ಶುಕ್ರನು “ದೇವತೆಗಳ ಮೋಸ ! ಏನು ಮಾಡಬೇಕು ?” ಎಂದು ಯೋಚಿಸಿ “ವೃತ್ರ, ವ್ಯುತ್ಕೃಮವಾದರೂ ಚಿಂತೆಯಿಲ್ಲ. ಹೀಗೆ ಮಾಡು” ಎಂದು ಏನೋ ರಹಸ್ಯವಾಗಿ ಬೋಧಿಸಿ, “ನಾನು ಇನ್ನು ಇಲ್ಲಿರುವಂತಿಲ್ಲ” ಎಂದು ಅವಸರ ಅವಸರವಾಗಿ, ತನ್ನ ಪರಿಹಾರವನ್ನು ಕಟ್ಟಿಕೊಂಡು ಪಾತಾಳಕ್ಕೆ ಹೊರಟುಹೋದನು.

ಹೋಗುವಾಗ “ಇನ್ನು ಮುಂದೆ ಭಾರ್ಗವರ ಅನುಗ್ರಹವನ್ನು ಪಡೆಯದವನು ಎಂದು ಇಂದ್ರನಾಗುವನೋ ನೋಡೋಣ ಎಂದುಕೊಂಡು ಹೋದನು. ಅದು ದೇವತೆಗಳಲ್ಲಿ ಅನೇಕರಿಗೆ ಕೇಳಿಸಿತು. ಆದರೂ ಯಾರೂ ಅದನ್ನು ಗಮನಿಸಲಿಲ್ಲ.

ದಾನವರೂ ಆದಷ್ಟು ಬೇಗ ಅಮರಾವತಿಯಿಂದ ಸ್ವರ್ಗಲೋಕದಿಂದ ಪಾತಾಳಕ್ಕೆ ಹೊರಟುಹೋದರು. ಹೋಗುವವರನ್ನು ದೇವತೆಗಳು ಯಾವ ರೀತಿಯಿಂದಲೂ ಹಿಂಸೆಮಾಡಲಿಲ್ಲ. ದೇವರಾಜನ ಅಪ್ಪಣೆ ಹಾಗಿತ್ತು.

* * * *