ಮಹಾಕ್ಷತ್ರಿಯ/ವಿಕ್ರಯದ ವೈಖರಿ

==೧೯.ವಿಕ್ರಯದ ವೈಖರಿ==

ಗಂಗಾ-ಯಮುನಾ ಸಂಗಮದ ಪುಣ್ಯಕ್ಷೇತ್ರ. ಪ್ರತಿಷ್ಠಾನ ನಗರ ಲಕ್ಷ್ಮಿಯು ನೋಡಿಕೊಳ್ಳುವ ರನ್ನಗನ್ನಡಿಯೋ ಎಂಬಂತೆ, ಆ ಜಲರಾಶಿಯು ವಿಸ್ತಾರವಾಗಿ ನಿರ್ಮಲವಾಗಿ ಇದ್ದು ಆ ನಗರದ ಪ್ರತಿಬಿಂಬವನ್ನು ಧರಿಸಿದೆ. ಅತ್ತಲಿಂದ ಬಂದ ಶುದ್ಧ ನೀಲದಂತಿರುವ ಯಮುನಾಜಲವು ವಜ್ರದಂತೆ ಥಳಥಳಿಸುವ ಗಂಗಾಜಲದೊಡನೆ ಸೇರಿ, ರತ್ನಖಚಿತವಾದಂತೆ ಇರುವ ಆ ಜಲರಾಶಿಯ ಗರ್ಭವನ್ನು ಭೇದಿಸಿ ಮುಂದೆ ಹೋಗುತ್ತಿರುವುದನ್ನು ನೋಡುತ್ತಾ ಬೆಸ್ತರ ಗುಂಪು ದಡದಲ್ಲಿ ನಿಂತಿದೆ. ಯಜಮಾನನು ಮುಂದೆ ನಿಂತು ನೋಡುತ್ತಿದ್ದಾನೆ. ದೇಹವು ಭೂಮಿಯ ಮೇಲೆ ನಿಂತಿದ್ದರೂ ಮನಸ್ಸು ಆ ನೀರಿನೊಳಗೆ ವಿಹರಿಸಲು ಹೊರಟುಹೋಗಿರುವುದರ ಗುರುತೋ ಎಂಬಂತೆ ಕೈಗಳು ಬೆನ್ನಹಿಂದೆ ಒಂದನ್ನೊಂದು ಹಿಡಿದುಕೊಂಡು ನಿಶ್ಚಲವಾಗಿವೆ. ಕಣ್ಣು ನೊರೆತೆರೆಗಳನ್ನು ಭೇದಿಸಿಕೊಂಡು ಒಳನುಗ್ಗಿ ಅಲ್ಲೆಲ್ಲಾ ಅಲೆದಾಡಿಕೊಂಡು ಬರುತ್ತಿದೆ.

ಒಂದು ಗಳಿಗೆಯಾಯಿತು. ಯಜಮಾನನು ಮಾತನಾಡಿದನು : “ದಿಟ, ಮೀನುಗಳೆಲ್ಲ ಬಂದು ಸೇರಿವೆ. ನಾಳಿದ್ದು ಉಣ್ಣಿಮೆ. ತಾನಕ್ಕೆ ಬರುವವರ ಗದ್ದಲವೆಲ್ಲ ಮದ್ದಿನಕ್ಕೆ ಮುಗಿದು ಓಯ್ತದೆ. ನಾವು ಒತ್ತಾರೆ ಊಟ ಮಾಡ್ಕೊಂಡು ಒತ್ತು ನೆತ್ತಿ ಮೇಲೆ ಬರೋಕೆ ಮುನ್ನ ಇಲ್ಲಿ ಬಂದು ಬಿಡೋವಾ. ಬಲೆಗಳು ಮಾತ್ರ ಬಲವಾಗಿರಬೇಕು. ಈ ತುಯ್ತಾ ಬಂದಾಗ ಕಡೀಬಾರದು. ಅದೆಲ್ಲಾ ನೋಡಿಕೊಳ್ಳಿ. ಜೊತೆಗೆ ಅಂಬಿಗರಿಗೂ ಏಳಿಬುಡಿ. ಎರಡು ದೋಣಿ ಸಾಲದಾ?”

“ಇಲ್ಲ, ಮಾವಾ, ನಾಕು ದೋಣಿಯಿದ್ದರೆ ಚೆನ್ನಾ!”

“ಅಂಗೇ ಮಾಡಿ, ನಾನೂ ಬರಬೇಕಾ ?”

“ಇದೀಗ ಚೆನ್ನಾಯ್ತು. ನೀನಿಲ್ಲದಿದ್ದರೆ ನಾವು ನೀರಿಗಾದರೂ ಇಳಿದೇವಾ? ನೀನು ಬರಲೇಬೇಕು. ನಿಂಗೆ ಸರಣು ಮಾಡಲ್ಲವಾ ನಾವು ನೀರಿಗಿಳಿಯೋದು?”

“ಆಗಲಿ ಕಣಪ್ಪ ! ಗಂಗಮ್ಮನ ಬಲಿ ತಪ್ಪಿಸಬೇಡಿ ಕಣ್ರೋ ! ಒಂದು ಒಳ್ಳೇ ಕುರಿ, ನಾಕು ಬುದ್ದಲಿ ಎಂಡ. ಅರಿಸಿನ, ಕುಂಕುಮ, ಬಳೆ, ಬಿಚ್ಚೋಲೆ, ಕಾಯಿ, ಅಣ್ಣು, ಊವು, ದೂಪ, ದೀಪ, ಅಡಿಕೆಲೆ, ಕಾಣಿಕೆ ಎಲ್ಲಾ ತರಿಸಿ, ಅಂಗೇ ಒಂದೆರಡು ಮೂಟೆ ಪುರಿ, ಒಂದು ಮೂಟೆ ನೆನೆದವರೆಕಾಳು ಎಲ್ಲಾ ತಂದಿರಿ.”

“ಸರಿ ಕಣಪ್ಪಾ !”

“ಪೂಜೆ ಯಾರು ಮಾಡೋರು ?”

“ಯಜಮಾನ !”

“ಅದಕ್ಕಲ್ಲಾ ! ಪೂಜೆ ಮಾಡೋರು ಮಡಿಯಾಗಿ ಏನೂ ತಿನ್ನದೆ ಬರಬೇಕಲ್ಲಾ ಅದಕ್ಕೆ ಅಂಗಂದೆ !”

“ನೀನೂ ಅತ್ತೇ ಇಬ್ಬರೂ ಬನ್ನಿ ಇಲ್ಲೇ ತಾನಾಗೀನಾ ಮಾಡ್ಕೊಂಡು ಗಂಗಮ್ಮನ ಪೂಜೆ ಮಾಡಿ, ನಮ್ಮನ್ನೆಲ್ಲಾ ಅರಸಿ ಕಳಿಸಿಕೊಡಿ.”

“ಸರಿ, ದೋಣಿ, ಬಲೆ, ಪೂಜೆಗೆ ಬೇಕಾದ್ದು ಎಲ್ಲಾ ನೋಡ್ಕೊಂಡು ನಾಳೆಯೇ ಅಣಿ ಮಾಡ್ಕೊಳ್ಳಿ. ಅಣಗಿನ ಬೇಕೋ ? ಅದೆಯೋ ?”

“ನಾವೇ ನೋಡಿಕೋತೀವಿ. ಬುಡು ಮಾವಾ !”

“ನೋಡ್ದೆಯಾ ನಿಮ್ಮ ಬುದ್ದೀಯಾ ? ಮುದುಕ ಅವ್ನಲ್ಲಾ ಅನ್ನೋ ಮಾತೇ ಇಲ್ವಲ್ಲಾ ? ನೀವು ನೀವೇ ನೋಡ್ಕೋಂಡ್ರೆ ನಾಳೆ ಲೆಕ್ಕಾಚಾರದಲ್ಲಿ ಎಚ್ಚು ಕಡಿಮೆ ಆದ್ರೆ ? ಅದೆಲ್ಲಾ ಬೇಡ. ಮನೇಲಿ ಏಳಿಟ್ಟಿರ್ತಿನಿ. ಏಟು ಬೇಕಾಯ್ತದೋ ಓಟು ತಕೊಂಡೋಗಿ ಆಮೇಲೆ ಕೊಟ್ಟುಬಿಡಿ.”

“ಅಂಗೂ ಆಗಲಿ ಕಣಪ್ಪ”

ಬೆಸ್ತಪಡೆಯು ಯಜಮಾನನೊಡನೆ ಅಲ್ಲಿಂದ ಜಾರಿತು.

ಹುಣ್ಣಿಮೆಯ ದಿನ ಇನ್ನೇನು ಮಧ್ಯಾಹ್ನಕ್ಕೆ ಬಂದಿದೆ.ಬ್ರಾಹ್ಮಣರು ಆಗಲೇ ಮಾಧ್ಯಾಹ್ನಿಕವನ್ನು ಮಾಡುತ್ತಿದ್ದಾರೆ. ಎಷ್ಟೋ ಜನ ಕತ್ತೆತ್ತಿಕೊಂಡು ಸೂರ್ಯ ತೇಜಸ್ಸಿನಿಂದ ಲೋಕಾನುಗ್ರಹಾರ್ಥವಾಗಿ ಪ್ರಾಣಶಕ್ತಿಯನ್ನು ಸಂಗ್ರಹಿಸುತ್ತಿದ್ದಾರೆ. ಇನ್ನೆಷ್ಟೋ ಜನ ದೇವರ್ಷಿ ಪಿತೃತೃಪ್ತ್ಯರ್ಥವಾಗಿ ತರ್ಪಣಗಳನ್ನು ಬಿಡುತ್ತಿದ್ದಾರೆ. ಅಲ್ಲಲ್ಲಿ ಹೊತ್ತಾಗಿ ಬಂದ ಹೆಂಗಸರು ಗಂಗಾಪೂಜೆಯನ್ನು ಮಾಡಿ ಬಾಗಿನ ಕೊಟ್ಟು ಅವಸರವಸರವಾಗಿ ಹೊರಡುತ್ತಿದ್ದಾರೆ. ಬಿಸಿಲು ಬಲವಾಗಿದೆ.

ಬೆಸ್ತರ ಗುಂಪು ಯಜಮಾನನನ್ನು ಮುಂದುಮಾಡಿಕೊಂಡು ತಲೆಯ ಮೇಲೆ ಬುಟ್ಟಿಗಳನ್ನು ಹೊತ್ತು ಅಲ್ಲಿಗೆ ಬಂತು. ಯಜಮಾನನೂ ಹೆಂಡತಿಯೂ ಸ್ನಾನ ಮಾಡಿದರು, ಮಿಕ್ಕವರೂ ಮಾಡಿದರು. ಆ ದಂಪತಿಗಳು ಪೂಜೆಯನ್ನು ಸಾಂಗವಾಗಿ ಮಾಡಿ ಕುಲದವರು ತಂದಿದ್ದ ಬಲಿಗಳನ್ನೆಲ್ಲಾ ಗಂಗಾದೇವಿಗೆ ಸಮರ್ಪಣ ಮಾಡಿದರು. ಕುಲದವರೂ ತಾವು ತಾವು ತಂದಿದ್ದ ಬುತ್ತಿಗಳನ್ನು ಗಂಗಮ್ಮನಿಗೆ ನಿವೇದನ ಮಾಡಿ ಮೊದಲ ತುತ್ತು ಗಂಗಮ್ಮನಿಗೆಂದು ನೀರಿಗೆಸೆದು, ಎರಡನೆಯ ತುತ್ತು ಯಜಮಾನನಿಗೆ ಒಪ್ಪಿಸಿ, ಅವನ ಅಪ್ಪಣೆ ಪಡೆದು ತಾವೂ ತಿಂದರು. ಯಜಮಾನನು ಸೂರ್ಯನಿಗೆ ನಮಸ್ಕಾರ ಮಾಡಿ, ಗಂಗಮ್ಮನ ಅಪ್ಪಣೆ ಕೇಳಿ, ದೋಣಿಯನ್ನು ಮುಟ್ಟಿ ಕಣ್ಣಿಗೊತ್ತಿಕೊಂಡು ದೋಣಿಯನ್ನು ಹತ್ತಿದನು.

ದೋಣಿಯು ಅಷ್ಟು ದೂರ ಹೋಯಿತು. ಅದರ ಹಿಂದೆ ಮಿಕ್ಕ ಮೂರು ದೋಣಿಗಳು ಬಲೆಗಳನ್ನೂ ಕಾಳು ಪುರಿಮೂಟೆಗಳನ್ನೂ ಹೊತ್ತುಕೊಂಡು ಹೋದವು. ಕಾಳುಪುರಿಗಳನ್ನು ಚೆಲ್ಲಿ, ಮೀನುಗಳೆಲ್ಲಾ ಒಂದೆಡೆ ಸೇರುತ್ತಲೂ ಬಲೆಯನ್ನು ಹಾಕುವ ಕೆಲಸವು ಮೊದಲಾಯಿತು. ಯಜಮಾನನು ಬಂದು ದಡವನ್ನು ಸೇರುವುದರೊಳಗಾಗಿ ಬಲೆ ಹಾಕಿದುದು ಮುಗಿಯಿತು : ಬೇಕೆಂದರೆ ಒಂದೊಂದರಲ್ಲಿ ನಾಲ್ಕು ನಾಲ್ಕು ಕೋಣಗಳನ್ನು ಕಟ್ಟಬಹುದು. ಅಂಥಾ ಹುರಿಯ ನೂಲು ಹಗ್ಗಗಳು.

ಅಷ್ಟು ಹೊತ್ತಾದ ಮೇಲೆ ಬಲೆಗಳನ್ನು ಎಳೆಯುವ ಕೆಲಸವು ಮೊದಲಾಯಿತು. ತುಯ್ಯುವುದರಲ್ಲಿಯೇ ಬೆಸ್ತರಿಗೆ ಗೊತ್ತು ಬೇಟೆ ಬೇಕಾದ ಹಾಗೆ ಸಿಕ್ಕಿದೆಯೆಂದು. ಹಗ್ಗಗಳನ್ನು ಎಳೆದು ತಂದು ಎಡದಲ್ಲಿ ಭಾರಿಯ ಮರಕ್ಕೆ ಕಟ್ಟಿದರು. ಸುಮಾರು ಮಧ್ಯಾಹ್ನ ಒಂದು ಝಾವವಾಗಿರಬಹುದು, ಬಲೆಗಳು ದಡಕ್ಕೆ ಬಂದವು. ಆಳಾಳು ಉದ್ದದ ಮೀನುಗಳು, ಸಣ್ಣಪುಟ್ಟವೆಲ್ಲಾ ದೊಡ್ಡ ಕಣ್ಣಿನ ಬಲೆಯಲ್ಲಿ ತಪ್ಪಿಸಿಕೊಂಡು ಹೋಗಿವೆ. ಮೊಳದುದ್ದಕ್ಕೆ ಕಡಿಮೆಯಾದ ಮೀನೇ ಇಲ್ಲ. ಪುಳಪುಳನೆ ಒದ್ದಾಡುತ್ತವೆ. ಅವರಿಗಂತೂ ಅದನ್ನು ನೋಡುವುದಕ್ಕೇ ಒಂದು ಸಂತೋಷ.

ಬಲೆಗಳನ್ನು ದಡದ ಮೇಲಕ್ಕೆ ಎಳೆದು ತಂದುದೂ ಆಯಿತು. ಕೊಂಚ ಹೊತ್ತಿನಲ್ಲಿ ಮೀನುಗಳೆಲ್ಲಾ ಮಂಕಾಗುತ್ತ ಬಂದುವು. ಇನ್ನೂ ಅಷ್ಟು ಹೊತ್ತು ವಿಲವಿಲನೆ ಒದ್ದಾಡಿದವು. ಮಾರಣಹೋಮವು ಆರಂಭವಾಯಿತು. ಒಂದೊಂದನ್ನು ಹಿಡಿದು ಹಿಡಿದು ಗೋಣು ಮುರಿದು ರಾಶಿ ಹಾಕಿದರು.

ಕೊನೆಯಲ್ಲಿ ಒಂದು ವಿಚಿತ್ರದ ಮೀನು. ಅದಕ್ಕೆ ಮನುಷ್ಯರಿಗಿರುವಂತೆ ಕೈಕಾಲು ತಲೆಯಿರುವಂತಿದೆ. ಮೈಮೇಲೆ ಪಾಚಿಯು ಬೆಳೆದು ಹೋಗಿದೆ. ಹಿಡಿತ ಹಿಡಿಯುವುದೇ ಕಷ್ಟ ಕೊನೆಗೆ ಕಷ್ಟಪಟ್ಟು ನೀರಿನ ಹತ್ತಿರ ತೆಗೆದುಕೊಂಡು ಹೋಗಿ ತೊಳೆದರು. ಕೂದಲು ಬೆಳದು ಜಡೆಕಟ್ಟಿಹೋಗಿವೆ. ಆ ಜಡೆಗಳಲ್ಲೆಲ್ಲಾ ಶಂಖದ ಹುಳುಗಳು ಅಂಟಿಕೊಂಡಿವೆ. ಉಗುರುಗಳೂ ಗೇಣುಗೇಣುದ್ದ ಬೆಳೆದಿವೆ. ಅದರಲ್ಲಿ ನೀರಿನ ಹುಳುಹುಪ್ಪಟ್ಟಿಗಳು ಗೂಡುಮಾಡಿಕೊಂಡಿವೆ. ಮನುಷ್ಯ ಸಂದೇಹವಿಲ್ಲ ಅಂತೂ ತೊಳೆದರು. ದಡದ ಮೇಲಕ್ಕೆ ತಂದರು. ಬದುಕಿದ್ದಾನೆ. ಉಸಿರಿಲ್ಲದಿದ್ದರೂ ಬಿಸಿಯಿದೆ.

ಯಜಮಾನನಿಗೆ ವರದಿ ಹೋಯಿತು. ಅವನೂ ಓಡೋಡುತ್ತ ಬಂದನು. ಮರಳಿನ ಮೇಲೆ ಮಲಗಿಸಿದ್ದ ಮರಳಿನ ಬಿಸಿ ತಗುಲಿತೋ ? ಅಥವಾ ಸಂಜೆಯ ಬಿಸಿಲೇ ಆ ದೇಹದೊಳಕ್ಕೆ ಪ್ರಾಣಶಕ್ತಿಯನ್ನು ತುಂಬಿತೋ ? ಅಂತೂ ಉಸಿರಾಡಿತು. ಚೈತನ್ಯವು ಕೂಡಿಕೊಂಡಿತು. ಕಣ್ಣು ತೆರೆಯಿತು. ಇನ್ನೊಂದು ಗಳಿಗೆಯೊಳಗಾಗಿ ದೇಹವು ಎದ್ದು ಕುಳಿತುಕೊಂಡಿತು. ನಿದ್ದೆಯಿಂದ ಎದ್ದವನಂತೆ ಸಮಾಧಾನದಿಂದ ಸುತ್ತಲೂ ನೋಡಿ, ಎದಿರು ಬಿದ್ದಿದ್ದ ಗುಡ್ಡದಂತಹ ಮೀನಿನ ರಾಶಿಯನ್ನು ನೋಡಿ ತಲೆಯಲ್ಲಾಡಿಸಿ, ಎರಡು ಕಡೆಯೂ ಹರಿಯುತ್ತಿರುವ ಗಂಭೀರಪ್ರವಾಹಗಳಿಗೆ ಕೈ ಮುಗಿದು, ಎದ್ದುಹೋಗಿ ಆಚಮನ ಮಾಡಿ ಬಂದು ಪದ್ಮಾಸನದಲ್ಲಿ ಕುಳಿತನು. ಕುಳಿತುಕೊಳ್ಳುವ ರೀತಿಯಿಂದಲೇ ಯಜಮಾನನಿಗೆ ಈತನು ತಪಸ್ವಿ ಇರಬೇಕು ಎನ್ನಿಸಿತು. ತಾನು ಹೊದೆದಿದ್ದ ಕಂಬಳಿಯನ್ನು ಹಾಸಿ ಸಾಷ್ಟಾಂಗವಾಗಿ ಭೂಮಿಯಲ್ಲಿ ಮಲಗಿ ನಮಸ್ಕಾರ ಮಾಡಿ “ದಯಮಾಡಬೇಕು, ಈ ಕಂಬಳಿಯ ಮೇಲೆ ಮೂರ್ತಿಮಾಡಬೇಕು” ಎಂದನು. ಜಲವಾಸಿಯು ದರ್ಭೆಯನ್ನು ತೋರಿಸಲು ಎಲ್ಲರೂ ಓಡಿ ಹೋಗಿ ಒಂದು ಹೊರೆ ದರ್ಭೆಯನ್ನು ಕೊಯ್ದು ತಂದರು. ಅದರಲ್ಲಿ ಎರಡು ಗರಿಯನ್ನು ತೊಡೆಯ ಕೆಳಗೆ ಹಾಕಿಕೊಂಡು, ಎರಡನ್ನು ಬೆರಲಿಗೆ ಸಿಕ್ಕಿಸಿಕೊಂಡು ಆತನು ಆ ಹೊರೆಯನ್ನು ಒರಗಿಕೊಂಡು ಕುಳಿತನು. ಎಲ್ಲರೂ ಪದೇಪದೇ ನಮಸ್ಕಾರ ಮಾಡಿದರು. ಎಲ್ಲರೂ ಕಣ್ಣುತುಂಬಾ ನೀರಿಟ್ಟುಕೊಂಡಿದ್ದಾರೆ. ಒಬ್ಬರಿಗಾದರೂ ಮಾತನಾಡಲು ಧೈರ್ಯವಿಲ್ಲ. ಎಲ್ಲರೂ ಕೈಮುಗಿದುಕೊಂಡು ಸುತ್ತಲೂ ನಿಂತಿದ್ದಾರೆ.

ವ್ಯಕ್ತಿಯು ತೇಜೋಮಯವಾದ ಕಣ್ಣುಗಳನ್ನು ಅರಳಿಸಿ ಸಣ್ಣ ದನಿಯಲ್ಲಿ “ಈಗ ಇಲ್ಲಿ ಆಳುತ್ತಿರುವ ದೊರೆ ಯಾರು ?” ಎಂದು ಕೇಳಿದನು. ಯಜಮಾನನು ಭಯಭಕ್ತಿಗಳಿಂದ “ನಹುಷಚಕ್ರವರ್ತಿ” ಎಂದು ಅರಿಕೆ ಮಾಡಿದನು. ``ಆತನಿಗೆ ಸುದ್ದಿಯನ್ನು ತಿಳಿಸಿ” ಎಂದು ಹೇಳಿ ವ್ಯಕ್ತಿಯು ಮತ್ತೆ ಧ್ಯಾನಾಸಕ್ತವಾಯಿತು.

ಒಂದು ಗಳಿಗೆಯೊಳಗಾಗಿ ಚಕ್ರವರ್ತಿಯು ಸಪರಿವಾರನಾಗಿ ಬಂದನು. ಆತನ ಜೊತೆಯಲ್ಲಿಯೇ ಬಂದಿದ್ದ ರಾಜಪುರೋಹಿತನು ವಿಧ್ಯುಕ್ತವಾಗಿ ಪೂಜೆಯನ್ನು ಮಾಡಿ ಮಧುಪರ್ಕವನ್ನು ಒಪ್ಪಿಸಿದನು. ಚತುರ್ವೇದಗಳನ್ನೂ ಸಾಂಗವಾಗಿ ಅಧ್ಯಯನಮಾಡಿದ ಮಹಾಬ್ರಾಹ್ಮಣನಿಗೆ ಮಾತ್ರ ಸಲ್ಲುವ ಆ ಮರ್ಯಾದೆಯನ್ನು ಅದಕ್ಕೆ ಅರ್ಹನಾದವನಂತೆ, ಆ ಅಭ್ಯಾಸವಿರುವವನಂತೆ, ಆ ವ್ಯಕ್ತಿಯು ಅಂಗೀಕರಿಸಿದನು. ಅದೆಲ್ಲ ಆದಮೇಲೆ ನಹುಷನು ಪ್ರವರೋಚ್ಚಾರಣಪೂರ್ವಕವಾಗಿ ನಮಸ್ಕರಿಸಿ, “ದೇವಾ, ತಾವು ಯಾವ ಪಾವನ ವಂಶದವರು? ತಮ್ಮ ನಾಮಧೇಯವೇನು?” ಎಂದು ವಿನಯವಾಗಿ ವಿಚಾರಿಸಿದನು. ಆ ತಪಸ್ವಿಯು “ಭಾರ್ಗವನು ನಾನು. ಚ್ಯವನನೆಂದು ಕರೆಯುವರು. ನಾನು ಈ ಗಂಗಾಯಮುನಾ ಸಂಗಮದಲ್ಲಿ ಜಲಸ್ತಂಭನ ಮಾಡಿ ತಪಸ್ಸು ಮಾಡಿಕೊಂಡಿದ್ದೆನು. ದೈವಪ್ರೇರಿತರಾದ ಇವರು ಈ ದಿನ ಮೀನು ಹಿಡಿಯುವಾಗ ನನ್ನನ್ನು ದಡಕ್ಕೆ ಎಳೆದುಹಾಕಿದರು. ಅದರಿಂದ ಮೊದಲು ಇವರ ಋಣವನ್ನು ತೀರಿಸಿ, ಇವರಿಗೆ ಏನು ಸಲ್ಲಬೇಕೋ ಅದನ್ನು ಸಲ್ಲಿಸಿ ನನ್ನನ್ನು ಬಿಡಿಸಿಕೊ. ಬೆಲೆ ಎಷ್ಟು ಎಂಬುದನ್ನು ನಿನ್ನ ಸ್ವಬುದ್ಧಿಯಿಂದಲೇ ನಿಶ್ಚಯಿಸು” ಎಂದನು.

ತಪಸ್ಸು ಮಾಡುತ್ತಿದ್ದವನನ್ನು ತಾವು ಎಳೆದರು, ಎಂದು ಕೇಳಿದ ಕೂಡಲೇ ಅಲ್ಲಿ ನೆರೆದಿದ್ದ ಬೆಸ್ತರೆಲ್ಲಾ ನಡುಗಿ ಹೋದರು. ಚ್ಯವನ-ನಹುಷರಿಬ್ಬರಿಗೂ ನಮಸ್ಕಾರ ಮಾಡಿ, “ತಿಳಿಯದೆ ಮಾಡಿದ ತಪ್ಪು ಮನ್ನಿಸಬೇಕು” ಎಂದು ಗೋಗರೆದುಕೊಂಡರು. ಚ್ಯವನನು ನಗುನಗುತ್ತಾ ಅಭಯಪ್ರಧಾನ ಮಾಡಿದನು. ನಹುಷನು ತಾನುಳಿದುಕೊಂಡೆನೆಂದು ಸಂತೊಷಪಟ್ಟುಕೊಂಡು ‘ದೇವಾ, ತಮ್ಮ ಬೆಲೆಯಾಗಿ ಸಾವಿರ ಚಿನ್ನದ ನಾಣ್ಯಗಳನ್ನು ಕೊಡಲೇ?” ಎಂದು ಕೇಳಿದನು, ಚ್ಯವನನು “ನಿನ್ನ ಮಂತ್ರಿಗಳನ್ನು ಕೇಳು” ಎಂದನು. ಅರಸನು ಮಂತ್ರಿಗಳನ್ನು ವಿಚಾರಿಸಿ “ನೂರು ಸಾವಿರ” ಎಂದನು.

ಚ್ಯವನನಿಗೆ ಅಸಮಾಧಾನವಾಗಿ “ಬ್ರಾಹ್ಮಣರನ್ನು ವಿಚಾರಿಸು” ಎಂದನು. ಅರಸನು ರಾಜಪುರೋಹಿತನ ಮುಖವನ್ನು ನೋಡಲು, ಆತನು “ಪ್ರಭು, ಬ್ರಾಹ್ಮಣನ ಬೆಲೆಯಿಷ್ಟೆಂದು ಎಲ್ಲೂ ಹೇಳಿಲ್ಲ. ಶ್ರೋತ್ರೀಯನಾಗಿ, ಮಧುಪರ್ಕಕ್ಕೆ ಅರ್ಹನಾದ ಭಗವಂತನಿಗೆ ಏನು ಕೊಟ್ಟರೂ ಸಾಲದು” ಎಂದನು. ಅರಸನು “ಅರ್ಧ ರಾಜ್ಯವನ್ನು ಕೊಡಲೇ?” ಎಂದು ಕೇಳಿದನು. ಚ್ಯವನನು ಅಸಮಾಧಾನಪಡುತ್ತ ಸುತ್ತಲೂ ನೋಡಿ ಸಂಧ್ಯಾಘರ್ಯ್‌ವನ್ನು ಕೊಡುತ್ತಿರುವ ಋಷಿಯೊಬ್ಬನನ್ನು ದೂರದಲ್ಲಿ ಕಂಡು, “ಆತನನ್ನು ವಿಚಾರಿಸು” ಎಂದನು.

ಚಕ್ರವರ್ತಿಯು ತಾನೇ ಅಲ್ಲಿಗೆ ಹೋಗಿ ಆತನಿಗೆ ನಮಸ್ಕಾರ ಮಾಡಿ “ಭಗವಾನ್ ನನ್ನ ಧರ್ಮಸಂಕಟವನ್ನು ಪರಿಹರಿಸಿ ಕಾಪಾಡಬೇಕು?” ಎಂದನು. ಅತನು ಎಲ್ಲವನ್ನೂ ವಿಚಾರಿಸಿ “ಅರಸ, ಬೆಲೆಯಿಲ್ಲದ ವಸ್ತುವನ್ನು ಬೆಲೆಯಿಲ್ಲದ ವಸ್ತುವಿನಿಂದಲೇ ಕೊಂಡುಕೋ. ಮನುಷ್ಯರಲ್ಲಿ ಬ್ರಾಹ್ಮಣನಿಗೆ ಬೆಲೆಯಿಲ್ಲ. ಪ್ರಾಣಿಗಳಲ್ಲಿ ಗೋವಿಗೆ ಬೆಲೆಯಿಲ್ಲ. ಅದರಿಂದ ಬ್ರಾಹ್ಮಣನನ್ನು ತಿಳಿದವರು ಗೋವಿನಿಂದ ವಿಕ್ರಯಿಸುವರು” ಎಂದನು. ಅರಸನು ಅದನ್ನು ಅನುಮೋದಿಸಿ ಬಂದು “ಎಷ್ಟು ಹಸುಗಳನ್ನು ಕೊಡಲಿ ?” ಎಂದನು. ಚ್ಯವನನು ಅದನ್ನು ಅಂಗೀಕರಿಸಿ “ಅವರು ಕೇಳಿದಷ್ಟು” ಎಂದನು.

ಬೆಸ್ತರು ಅರಸನಿಗೆ ಕೈಮುಗಿದು ಹೇಳಿಕೊಂಡರು : “ಬುದ್ಧೀ, ತಪಸ್ಸು ಕೆಡಿಸಿದೋ ಅಂಥ ಇವಪ್ಪ ಸಾಪ ಕೊಡಲಿಲ್ಲವಲ್ಲ ಅದೇ, ನಮ್ಮ ಅದೃಷ್ಟ, ಇನ್ನು ನಮಗೆ ಬೆಲೆ ಕೊಡೋದಾ ? ಇವಪ್ಪ ಏನು ಮೀನು ಕೆಟ್ಟೋದನಾ ? ನಮಗೇನೂ ಬೇಡ ಬುದ್ಧಿ ನಿಮ್ಮ ಪಾದ.”

ಬ್ರಾಹ್ಮಣನು ಕೇಳಲಿಲ್ಲ : “ಬಹು ದಿನಗಳಿಂದ ಈ ಮೀನುಗಳ ಜೊತೆಯಲ್ಲಿದ್ದು ನಾನೂ ಮೀನೇ ಆಗಿಹೋಗಿದ್ದೇನೆ. ಇದೋ ಇಲ್ಲಿ ಬಿದ್ದಿರುವವರೆಲ್ಲಾ ನಿಮ್ಮ ಬಾಂಧವರೇ ! ನಾನೂ ಅವರ ಹಾಗೆಯೇ ! ಅವರು ಸತ್ತಿದ್ದಾರೆ. ನಾನು ಬದುಕಿದ್ದೇನೆ. ಅಷ್ಟೇ ! ಅವರಿಂದ ನೀನು ಕೊಂಡುಕೊಳ್ಳದಿದ್ದರೆ, ನಾನೂ ಈ ನಮ್ಮ ನೆಂಟರೊಡನೆ ಸಾಯಬೇಕಾಗುವುದು” ಎಂದು ಖಚಿತವಾಗಿ ನುಡಿದನು.

ಅರಸನಿಗೂ ಬೆಸ್ತರ ಯಜಮಾನನಿಗೂ ಎಷ್ಟೋ ಹೊತ್ತು ಮಾತು ನಡೆಯಿತು. ಬೆಲೆಯನ್ನು ತೆಗೆದುಕೊಳ್ಳಬೇಕೆಂದು ಅರಸು, ತೆಗೆದುಕೊಳ್ಳುವುದಿಲ್ಲವೆಂದು ಅವನು. ಕೊನೆಗೆ ಚ್ಯವನನ ಬೆಲೆಯಾಗಿ ಒಂದು ಹಸುವನ್ನು ತೆಗೆದುಕೊಳ್ಳಲು ಬೆಸ್ತರ ಯಜಮಾನನು ಒಪ್ಪಿದನು. ಅದನ್ನು ಅಲ್ಲಿಯೇ ಯಾರಿಗೋ ದಾನ ಮಾಡಿಯೂ ಬಿಟ್ಟನು.

ಅರಸನು ಚ್ಯವನನನ್ನು ಅರಮನೆಗೆ ಬರಬೇಕು ಎಂದು ಪ್ರಾರ್ಥಿಸಿದನು. ಆತನು ನಕ್ಕು “ಈಗಲೀಗ ಚೆನ್ನಾಯಿತು. ಈ ಮನುಷ್ಯರ ಕಾಟ ತಪ್ಪಿಸಿಕೊಂಡು ಏಕಾಂತದಲ್ಲಿ ಇರಬೇಕು ಎಂದು ನಾನು ನೀರಿನೊಳಗೆ ಇದ್ದುದು. ಇಂಥ ನನಗೆ ಅರಮನೆಯೇ? ಅರಮನೆಯು ಭೋಗಸ್ಥಾನ. ನಮಗೆ ಅದು ಬೇಕಿಲ್ಲ” ಎಂದನು. ಚಕ್ರವರ್ತಿಯು “ಮಹರ್ಷಿ, ಒಂದೆರಡು ದಿನ ನಮ್ಮಲ್ಲಿದ್ದು ನಮಗೆ ಧರ್ಮ ವಿಚಾರಗಳನ್ನು ತಿಳಿಯಹೇಳಿ ಅನುಗ್ರಹಮಾಡಬೇಕು” ಎಂದು ಬೇಡಿದನು. ಆತನು “ಕಾಮ ಲೋಭಗಳಿಲ್ಲದ ಮನಸ್ಸಿಗೆ ತೋರುವುದೆಲ್ಲವೂ ಧರ್ಮವೇ ! ಅದರೂ ನೀನು ಧರ್ಮಶ್ರವಣಾರ್ಥವಾಗಿ ನನ್ನನ್ನು ಕರೆಯುವುದರಿಂದ ಬರುವುದಿಲ್ಲವೆನ್ನುವಂತಿಲ್ಲ ಬರುತ್ತೇನೆ ನಡೆ” ಎಂದನು.

ಚ್ಯವನನು ಹೊರಡುತ್ತಿದ್ದ ಹಾಗೆಯೇ ಬೆಸ್ತರ ಯಜಮಾನನು ಬಂದು ಮತ್ತೆ ನಮಸ್ಕಾರ ಮಾಡಿದನು. ಆ ಮಹರ್ಷಿಯು ನಗುತ್ತಾ “ಏನು ಮತ್ತೆ ಬಂದೆ?” ಎಂದು ಕೇಳಿದನು. ಅವನು “ಸೋಮಿ, ತಮ್ಮಂಗೆ ತಿಳಿದೋರು ಹೇಳಿರೋದ ಕೇಳಿವ್ನಿ ಏಳೆಜ್ಜೆ ಒಟ್ಟಿಗೆ ನಡೆದರೆ, ಏಳು ಮಾತು ಆಡಿದರೆ ನಂಟತನ ಗಂಟು ಬೀಳ್ತದೆ ಅಂತ. ತಾವೂ ನಾವೂ ಎರಡೂ ಮಾಡಿದ್ದೀವಿ. ನಮಗೂ ತಮಗೂ ನಂಟತನ ಗಂಟುಬಿದ್ದದೆ. ಒಂದು ಸಲ ನಮ್ಮ ಅಟ್ಟೀವರೆಗೂ ತಾವು ಬಂದೂ ಆಲೂ ಅಣ್ಣು ಒಪ್ಪಸ್ಕೋಬೇಕು ನನ್ನೊಡೆಯ!” ಎಂದು ಅಡ್ಡಬಿದ್ದನು.

“ಆಯಿತು, ನಾನು ಯಾವಾಗ ಏಳು ಹೆಜ್ಜೆ ನಿಮ್ಮ ಜೊತೆಯಲ್ಲಿ ನಡೆದುದು?”

“ತಮ್ಮನ್ನ ನೀರಿಂದ ಎಳೆಯೋವಾಗ.”

ಚ್ಯವನನು ನಕ್ಕು ‘ಆಗಲಿ’ ಎಂದು, “ಅರಸ, ಇವರು ಕಾರಣಬಾಂಧವರು. ಮೊದಲು ಇವರ ಕೋರಿಕೆಯನ್ನು ನೆರವೇರಿಸಿ ಆನಂತರ ನಾನು ನಿನ್ನ ಅತಿಥಿಯಾಗ ತಕ್ಕವನು” ಎಂದನು.

ಅರಸನು ಮಹರ್ಷಿಯ ಜೊತೆಯಲ್ಲಿ ಬೆಸ್ತರ ಪಾಳ್ಯಕ್ಕೆ ಹೋದನು. ಮಹರ್ಷಿ ರಾಜರ್ಷಿಗಳಿಬ್ಬರೂ ಆ ಬೆಸ್ತರು ಸಲ್ಲಿಸಿದ ಗೌರವವನ್ನು ಸ್ವೀಕರಿಸಿ ಅರಮನೆಗೆ ಬಂದರು.

* * * *