==೩೪.ಸಂಪ್ರದಾಯಗಳು==

ಅಮರಾವತಿಯಲ್ಲಿ ಶಿಬಿಕೋತ್ಸವಕ್ಕಾಗಿ ಅದ್ಭುತವೂ ಅಪೂರ್ವವೂ ಆದ ಸಿದ್ಧತೆಗಳು ನಡೆಯುತ್ತಿವೆ. ದಾನವಗುರು ಶುಕ್ರಾಚಾರ್ಯರನ್ನು ಬರಮಾಡಿಕೊಂಡು ಇಂದ್ರನು ಆತನು ಹೇಳಿದವರಿಗೆಲ್ಲ ಆಹ್ವಾನಪತ್ರಿಕೆಗಳನ್ನು ಕಳುಹಿಸುತ್ತಿದ್ದಾನೆ. ಆತನೂ ಈ ಹೊಸ ಇಂದ್ರನ ಸೌಜನ್ಯವನ್ನು ಕಂಡು ಮಾರುಹೋಗಿದ್ದಾನೆ. ದೇವಗುರುವು ದೇವಹಿತವನ್ನು ಕೋರುವನಾದರೂ ಇಷ್ಟು ಸಜ್ಜನನೆಂದು ಆತನು ತಿಳಿದಿರಲಿಲ್ಲ. ಅವರ ಮೇಲೆ ವೈರವನ್ನು ಸಾಧಿಸುತ್ತಿದ್ದುದು ತಪೋ ಎಂದುಕೊಳ್ಳುತ್ತಾನೆ. ಆದರೂ, ‘ಇಲ್ಲಿ ಲೋಕಸ್ಥಿತಿಗೆ ನಾವಿಬ್ಬರೂ ದ್ವೇಷಿಗಳಾಗಿ ಒಬ್ಬೊಬ್ಬರು ಒಂದೊಂದು ಕಡೆಗೆ ಎಳೆಯುತ್ತಿರಬೇಕು ಎಂದು ತೋರುತ್ತದೆ. ಆದರೆ ದ್ವೇಷವೊಂದು ಮನೋವಿಕಾರ. ಆ ವಿಕಾರವಿಲ್ಲದೆ ಏಕೆ ದೇವದಾನವರು ಹೋರಾಡಬಾರದು’ ಎಂದೆನ್ನಿಸುತ್ತದೆ. ಮರುಕ್ಷಣದಲ್ಲಿಯೇ ‘ಸ್ವಭಾವ, ಸ್ವಭಾವ ! ಏನು ಮಾಡಿದರೂ ಸ್ವಭಾವವನ್ನು ಒಂದು ಗಳಿಗೆ ಬದಲಾಯಿಸಬಹುದಲ್ಲದೆ, ತಿದ್ದುವುದಕ್ಕಾದೀತೆ ? ಹೋಗಲಿ ಬಿಡು’ ಎನ್ನುತ್ತಾನೆ.

ಭೂಲೋಕದಿಂದ ಯಯಾತಿಯೂ ಆತನ ಮಕ್ಕಳು, ಮಡದಿಯರೂ, ಪರಿವಾರದಲ್ಲಿ ಮುಖ್ಯರಾದವರೂ ಬಂದಿದ್ದಾರೆ. ಅಮರಾವತಿಯು ಅತಿಥಿಗಳಿಂದ ಕಿಕ್ಕಿರಿಯುತ್ತಿದೆ. ಲೋಕಲೋಕಗಳಿಂದ ಬರುವವರೂ ಬರಬೇಕಾದವರೂ ತುಂಬುತ್ತಿದ್ದಾರೆ.

ಒಂದು ಪ್ರಾತಃಕಾಲ ದೇವಗುರುವು ಮಂದಿರದಲ್ಲಿ ಕುಳಿತಿರುವಾಗ ಯೋಚನೆಯು ಬಂತು. ಅವಸರ ಅವಸರವಾಗಿ ದೇವರಾಜನನ್ನು ನೋಡಲು ಹೋದನು. ಆತನೂ ದೇವಗುರುವನ್ನು ನೋಡಬೇಕು ಎಂದುಕೊಳ್ಳುತ್ತಿದ್ದನು. ದೇವಗುರುಗಳಿಗೆ ನಮಸ್ಕಾರಾದಿಗಳನ್ನು ಒಪ್ಪಿಸಿ ಕೈಮುಗಿದುಕೊಂಡು ನಿಂತು, “ಅನುಗ್ರಹ ಮಾಡಿ ಬಂದಿರಿ” ಎಂದನು. ದೇವಗುರುವು ನಗುತ್ತ “ದೇವರಾಜನಿಗೆ ತಿಳಿಯದ್ದು ಇಲ್ಲ. ಆದರೂ ನೆನಪು ಮಾಡಿಕೊಡುತ್ತೇನೆ. ತಪ್ಪಿಲ್ಲವಲ್ಲ ? ಸಪ್ತರ್ಷಿಗಳು ನಿರ್ವಿಕಲ್ಪ ಸಮಾಧಿಯಲ್ಲಿ ಶಿಬಿಕೆಯಲ್ಲಿ ಕುಳಿತಿರಬೇಕು ಎಂದು ಹೇಳಿದರು. ಅದನ್ನು ಪಡೆಯುವ ದಾರಿಯಲ್ಲಿ ಹೇಳಲಿಲ್ಲ ; ಅಲ್ಲವೆ ?”

“ನಮಗೇಕೆ ಆ ಯೋಚನೆ, ನಾವು ಸಿದ್ಧರಾಗಿದ್ದರೆ ಆಯಿತು. ಆರೊಹಣ ಮಾಡುವಾಗ ಅವರಿಗೆ ನಮಸ್ಕಾರ ಮಾಡುವುದು ; ದೇಹಭಾವವಳಿದು ಸೋಹಂಭಾವ ಬರುತ್ತದೆ. ಇಳಿಸಿದಾಗ ಮತ್ತೆ ದೇಹಭಾವ ಬರುತ್ತದೆ. ಆಗ ಇಳಿದು ನಮಸ್ಕಾರ ಮಾಡುವುದು.”

“ಅಹುದು. ತಾವು ಹೇಳಿದುದು ಸರಿ. ಆದರೂ ಶಾಸ್ತ್ರಾಭಿಮಾನವುಳ್ಳ ನಾವು ಇನ್ನಷ್ಟು ಅಪೇಕ್ಷಿಸಿದರೆ ತಪ್ಪಿಲ್ಲ. ಅದರಿಂದ ನಮ್ಮಲ್ಲಿ ಮೂವರು ಈ ವಿದ್ಯೆಯನ್ನು ಬಲ್ಲವರು. ಒಬ್ಬನು ಇಂದ್ರ, ಆತನು ಪ್ರಜಾಪತಿಯಿಂದ ಅವಸ್ಥಾತ್ರಯ ವಿಚಾರಪೂರ್ವಕವಾಗಿ ಬ್ರಹ್ಮವಿದ್ಯೆಯನ್ನು ಪಡೆದವನು. ಅಲ್ಲದೆ, ಬ್ರಹ್ಮವಿದ್ಯೆಯೇ ಉಮಾದೇವಿಯಾಗಿ ಆತನಿಗೆ ಅನುಗ್ರಹ ಮಾಡಿರುವಳು. ಮತ್ತೊಬ್ಬನು ಯಮ ಧರ್ಮ. ಆತನೊಂದು ಸಂಪ್ರದಾಯ ಕರ್ತೃ. ಆತನು ಹೃದಯಗ್ರಂಥಿವಿಚ್ಛೇದನ ರೂಪವಾದ ಬ್ರಹ್ಮವಿದ್ಯೆಯನ್ನು ಬಲ್ಲವನು. ಮೂರನೆಯವನು ವರುಣನು. ಆತನು ಪಂಚಕೋಶಾತ್ಯಯರೂಪವಾದ ಬ್ರಹ್ಮವಿದ್ಯೆಯನ್ನು ಬಲ್ಲವನು. ಇವರು ಮೂವರಲ್ಲಿ ಯಾರನ್ನಾದರೂ ಕರೆಯಿಸಿಕೊಂಡು ಬ್ರಹ್ಮವಿದ್ಯೆಯ ವಿಚಾರವಾದರೂ ಮಾಡಿದ್ದರೆ ಒಳ್ಳೆಯದು.”

ದೇವರಾಜನು ನಸುನಗುತ್ತಾ “ಆಗಬಹುದು. ಯಾರನ್ನು ಕರೆಯಿಸಬೇಕೆಂದು ತಮ್ಮ ಇಷ್ಟ ?” ಎಂದು ಕೇಳಿದನು.

ದೇವಗುರುವು ಆತನ ಅರ್ಥವನ್ನು ಗ್ರಹಣಮಾಡದೆ, “ಇಂದ್ರನು ಈಗ ಅಂತರ್ಧಾನವಾಗಿರುವನು. ಇನ್ನುಳಿದ ಇಬ್ಬರಲ್ಲಿ ಯಾರನ್ನು ಕರೆಯಿಸು ಎಂದರೆ ಅವರನ್ನು ಕರೆಯಿಸುತ್ತೇನೆ” ಎಂದನು.

“ಮೂವರನ್ನೂ ಕರೆಯಿಸಬೇಕೆಂದು ನಮ್ಮ ಕೋರಿಕೆಯಿದ್ದರೆ ?”

ಆಚಾರ್ಯನು ತಬ್ಬಿಬ್ಬಾದನು. ದೇವರಾಜನು ಹೇಳಿದನು ; “ಅಭಿಚಾರಾದಿ ಪ್ರಯೋಗಗಳಲ್ಲಿ ಕುಶಲರಾದ ಶುಕ್ರಾಚಾರ್ಯರು ದಯಮಾಡಿಸಿದ್ದಾರೆ. ಬ್ರಹ್ಮವಿದ್ಯಾ ಸಂಪನ್ನನಾದ ಮಹೇಂದ್ರನಿಗೆ ಹತ್ಯೆಯ ದಿಗಿಲು ಎಂದರೆ ಮೃತ್ಯುವಿಗೆ ಪಿಶಾಚ ಭಯವೆಂಬಂತೆ. ಅಲ್ಲದೆ, ಮಹಾವಿಷ್ಣುವಿನ ಅಪ್ಪಣೆಯಾಗಿರುವಂತೆ ಆತನು ಹಲವು ರೂಪಗಳನ್ನು ಧರಿಸಿ ನಿಲ್ಲಲಿ. ಅವಶ್ಯವಾದರೆ ಆ ಹತ್ಯೆಯು ಒಂದು ರೂಪವನ್ನು ಹಿಡಿಯಲಿ. ಕೆಲವು ರೂಪದಿಂದ ತಪಸ್ಸು ಮಾಡಿ ಶುದ್ಧಿಯನ್ನು ಸಂಪಾದಿಸಲಿ.”

“ಆಗಬಹುದು.... ಆದರೆ...”

“ಏನೂ ಇಲ್ಲ... ಆಚಾರ್ಯ. ಹತ್ಯೆಯು ಇದಕ್ಕೆ ಒಪ್ಪದಿದ್ದರೆ ಇಂದ್ರನಾದ ನಾನು ಅಪ್ಪಣೆ ಮಾಡುವೆನು. ಹತ್ಯೆಯು ಇಂದ್ರನನ್ನು ಬಿಟ್ಟರೆ ಸಮ. ಇಲ್ಲದಿದ್ದರೆ ನನಗಿರುವ ಸರ್ವಶಕ್ತಿಯನ್ನೂ ಪ್ರಯೋಗಿಸಿ ಅದನ್ನು, ಎಳೆತರಿಸಿ ಬಂಧನದಲ್ಲಿಡುವೆನು. ಇಂದ್ರನು ಇಲ್ಲಿಗೆ ಬರಬೇಕು, ಕರೆಯಿರಿ.”

“ಹತ್ಯೆ....”

“ಹತ್ಯೆಯೇ? ಯಾರಲ್ಲಿ? ಚಿತ್ರರಥನನ್ನೂ ಅಗ್ನಿ ವಾಯುಗಳನ್ನೂ ಬರಮಾಡು. ಹಾಗೆಯೇ ಶುಕ್ರಾಚಾರ್ಯರನ್ನು ಇಲ್ಲಿಗೆ ಬಂದು ನಮ್ಮನ್ನು ಅನುಗ್ರಹಿಸುವಂತೆ ಪ್ರಾರ್ಥಿಸು.”

ಉತ್ತರಕ್ಷಣದಲ್ಲಿಯೇ ಅವರೆಲ್ಲರೂ ಬಂದರು. ದೈತ್ಯಗುರುಗಳನ್ನು ದೇವರಾಜನು ನಮಸ್ಕಾರಾದಿಗಳಿಂದ ಗೌರವಿಸಿ, “ಆಚಾರ್ಯ, ತಮ್ಮ ಸನ್ನಿಧಿಯಲ್ಲಿ ಕೆಲವು ಅಪ್ಪಣೆಗಳನ್ನು ಮಾಡುವೆನು. ಅನುಗ್ರಹ ಮಾಡಬೇಕು” ಎಂದು ಆತನ ಅನುಜ್ಞೆಯನ್ನು ಪಡೆದು ಅಗ್ನಿ ವಾಯುಗಳನ್ನು ಕುರಿತು ಹೇಳಿದನು ; ‘ತಾವಿಬ್ಬರೂ ದೇವಮಂತ್ರಿಗಳು. ದೇವರಾಜನ ಅಪ್ಪಣೆಯನ್ನು ಪರಿಪಾಲಿಸುವವರು ಅಲ್ಲವೇ?”

ನಹುಷನು ಯಾವಾಗಲೂ ಹಾಗೆ ಕಡ್ಡಾಯವಾಗಿ ಮಾತನಾಡಿರಲ್ಲಿಲ್ಲ. ಅದನ್ನು ಕಂಡು ಅವರಿಗೆ ಆಶ್ಚರ್ಯವಾಯಿತು. ಯಾವಾಗಲೂ ಅವರನ್ನು ದೇವತೆಗಳು- ತನಗಿಂತ ಹೆಚ್ಚು ಎಂದು ಮಾತನಾಡುತ್ತಿದ್ದವನು ಇಂದೇಕೆ ಹೀಗೆ ನಿಷ್ಠುರವಾಗಿರುವನು ? ಎನ್ನಿಸಿತು. ಆದರೂ ಸ್ಥಾನಗೌರವವನ್ನು ಕಾಪಾಡುತ್ತ ಕೈಮುಗಿದು “ಹೌದು, ಅದಕ್ಕೇ ನಾವಿರುವುದು” ಎಂದರು.

ದೇವರಾಜನು ಆ ಪದವಿಗೆ ತಕ್ಕಂತೆ ಬಿಗಿದುಕೊಂಡು ನಿಷ್ಠುರವಾಗಿ ಆಜ್ಞೆ ಮಾಡುವಾಗ ಇರಬೇಕಾದ ಠೀವಿಯಿಂದ ಹೇಳಿದನು : “ಇಂದು ಮಹೇಂದ್ರನನ್ನು ಇಲ್ಲಿಗೆ ತರಬೇಕು. ಆತನಿಗೆ ಅಡ್ಡಿಯಾಗುವ ಹತ್ಯೆಯನ್ನು ಪುಣ್ಯಶಕ್ತಿಗಳನ್ನು ಬಿಟ್ಟು ಕಟ್ಟಿಸಿಬಿಡಿ. ಸಾಮಾನ್ಯ ಪುಣ್ಯಶಕ್ತಿಗಳಿಗೆ ಅದು ಸಾಧ್ಯವಾಗದಿದ್ದರೆ, ನಮಗೆ ಇದುವರೆಗೂ ಇರುವ, ಮುಂದೆ ಬರುವ ಪುಣ್ಯಗಳನ್ನೆಲ್ಲಾ ಸೇರಿಸಿ ಅದನ್ನು ಕಟ್ಟಿಹಾಕಿ. ಈ ಕೂಡಲೇ ಇದು ನಡೆಯಬೇಕು. ಯಜ್ಞೇಶ್ವರ, ಮಾತರಿಶ್ವ, ಆ ಹತ್ಯೆಯೇನಾದರೂ ಸಗ್ಗದಿದ್ದರೆ, ನೀವಿಬ್ಬರೂ ನಿಮ್ಮ ವಿಶ್ವರೂಪವನ್ನು ಧರಿಸಿ ಅದನ್ನು ಧ್ವಂಸಮಾಡಿಬಿಡಿ.”

ಅಗ್ನಿವಾಯುಗಳಿಗೆ ಈ ಮಾತನ್ನು ಕೇಳಿ ಮೈಯ್ಯುಬ್ಬಿತು. “ಹೀಗೆ ತಮಗೆ ಹಿಂದೆ ಅಪ್ಪಣೆಯಾಗಿದ್ದರೆ ಆ ಹತ್ಯೆಯು ಇದುವರೆಗೂ ಉಳಿಯುತ್ತಿರಲಿಲ್ಲ.” ಎನ್ನಿಸಿತು. “ಸರ್ವಪ್ರಕಾರದಿಂದಲೂ ಗೆದ್ದೆ ಬರುವೆವು” ಎಂದು ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆಯನ್ನು ಮಾಡಿಕೊಂಡರು. ಅದಷ್ಟೂ ಧ್ವನಿಯಲ್ಲಿಯೇ ತೋರುತ್ತಿರಲು ‘ಅಪ್ಪಣೆ’ಯೆಂದರು.

ಅರಸನು ಚಿತ್ರರಥನ ಕಡೆಗೆ ತಿರುಗಿದನು. “ಗಂಧರ್ವಪತಿ, ನೀನು ಸಕಲ ಸೈನ್ಯದೊಡನೆ, ಸಮರಾಂಗಣಕ್ಕೆ ನಡೆವಂತೆ, ವ್ಯೂಹಕ್ರಮದಿಂದ ಸನ್ನಾಹಮಾಡಿ ಕೊಂಡು ಈ ಮಹಾಪುರುಷರ ಜೊತೆಯಲ್ಲಿ ನಡೆಯತಕ್ಕದ್ದು. ದೇವರಾಜನ ಅಪ್ಪಣೆಯನ್ನು ಮಾನ್ಯ ಮಾಡದವರನ್ನು ಸರ್ವಥಾ ನಿಗ್ರಹಿಸತಕ್ಕದ್ದು.”

ಚಿತ್ರರಥನು ತನ್ನ ಜೀವಿತದ ಪರಮಪುರುಷಾರ್ಥವನ್ನು ಸಾಧಿಸುವವನಂತೆ, ಆನಂದದಿಂದ ಕೋಡಿಹರಿಯುತ್ತಿರುವ ಕಣ್ಣನ್ನು ಒರೆಸಿಕೊಳ್ಳುತ್ತ ನೆಲ ಮುಟ್ಟಿ ನಮಸ್ಕಾರ ಮಾಡಿ “ಅಪ್ಪಣೆ” ಎಂದನು.

ದೇವರಾಜನು ಗಂಭೀರನಾಗಿ ಕೈಮುಗಿದುಕೊಂಡು ಧ್ಯಾನಿಸಿದನು. ಇಂದ್ರಾಯುಧಗಳೆಲ್ಲವೂ ಎದುರಿಗೆ ಬಂದು ನಿಂತವು. ಅವುಗಳಿಗೆಲ್ಲಾ ಮಾನಸೋಪಚಾರ ಪೂಜೆಯನ್ನೊಪ್ಪಿಸಿ, “ಅಸ್ತ್ರಶ್ರೇಷ್ಠರೆ, ಅನುಜ್ಞೆಯನ್ನು ಕೊಡಿ. ನಿಮ್ಮ ದರ್ಶನಮಾತ್ರದಿಂದಲೇ ದೇವವೈರಿಗಳು ಹತತೇಜಸ್ಕರಾಗುವರು. ಇಂದು ನಾನು ತ್ರಿಲೋಕಾಧಿಪತಿಯಾಗಿ ತಮ್ಮನ್ನು ಪ್ರಾರ್ಥಿಸುವೆನು. ತಮ್ಮ ನಾಥನಾದ ಮಹೇಂದ್ರನನ್ನು ಯಾವುದೋ ಹತ್ಯೆಯು ಬಾಧಿಸುತ್ತಿರುವುದಂತೆ. ಚರಾಚರಗಳಿಗೆಲ್ಲ ನಾಥನಾದ ಮಹಾವಿಷ್ಣುವಿನ ಅಪ್ಪಣೆಯಿದು ಎಂದು ತಾವು ಇದನ್ನು ಪಾಲಿಸತಕ್ಕದ್ದು. ಆ ಮಹೇಂದ್ರನನ್ನು ಇಲ್ಲಿಗೆ ಕರೆತರಲು ಅಗ್ನಿವಾಯುಗಳು ಸಸೈನ್ಯರಾಗಿ ಹೊರಟಿರುವರು. ತಾವೆಲ್ಲರೂ ಅವರಿಗೆ ರಕ್ಷಣೆಯನ್ನು ಕೊಟ್ಟು ಆ ಮಹೇಂದ್ರನನ್ನು ಇಲ್ಲಿಗೆ ಕರೆತರಬೇಕು.”

ಆಯುಧಗಳೆಲ್ಲವೂ ಮಹೋತ್ಸಾಹದಿಂದ ಪ್ರಜ್ವಲಿಸುತ್ತಾ, “ದೇವರಾಜನ ಅಪ್ಪಣೆಯನ್ನು ಸರ್ವಥಾ ಪಾಲಿಸುವೆವು” ಎಂದು ಆಜ್ಞೆಯನ್ನು ಶಿರಸಾವಹಿಸಿ ನಡೆದುವು.

ದೇವಗುರುವು ಎಲ್ಲವನ್ನೂ ಕೇಳಿ ಆಶ್ಚರ್ಯಪಡುತ್ತ, “ಹೌದು, ಹೌದು. ಅಧಿಕಾರವಿರುವುದು ಹೆಚ್ಚಲ್ಲ. ಅದನ್ನು ವಿನಿಯೋಗಿಸುವ ಸಾಮಥರ್ಯ್‌ವೂ ಇರಬೇಕು” ಎಂದು ತಲೆದೂಗಿದನು. ಶುಕ್ರಾಚಾರ್ಯನು ‘ಭಲೆ, ಪ್ರಭುವೆಂದರೆ ಹೀಗಿರಬೇಕು. ನಮ್ಮ ಎದುರಿಗೆ ಆಜ್ಞೆಯನ್ನು ಮಾಡಿ, ನಾವು ಗುಪ್ತವಾಗಿಯಾಗಲಿ ಪ್ರಕಟವಾಗಿ ಯಾಗಲಿ ಅದನ್ನು ಪ್ರತಿಭಟಿಸದಂತೆ, ಅದಕ್ಕೆ ಅಡ್ಡಿಬರದಂತೆ, ಮಾಡಿಟ್ಟನಲ್ಲ ! ಭಲೆ ! ಈ ಪ್ರಭುವಿನ ಪ್ರತಾಪದ ಮುಂದೆ ಆ ಹತ್ಯೆಯು ಉಳಿಯುವುದೆಂತು ?’ ಎಂದು ತಲೆದೂಗಿದನು.

ಇಂದ್ರನು ಮತ್ತೆ ಪ್ರಹರಿಯನ್ನು ಕರೆದು ಅಪ್ಪಣೆ ಮಾಡಿದನು : “ಮಹೇಂದ್ರನು ಅಮರಾವತಿಯ ಬಾಗಿಲಿಗೆ ಬರುವ ವೇಳೆಗೆ, ಆತನಿಗೆ ಸಲ್ಲಬೇಕಾದ ಗೌರವಗಳೆಲ್ಲ ಬಾಗಿಲಲ್ಲಿ ಸಂದು ಆತನನ್ನು ಮಹೇಂದ್ರವೈಭವದಿಂದ ಶಚೀದೇವಿಯರ ಅರಮನೆಗೆ ಕರೆದೊಯ್ಯಬೇಕು. ಇದು ನಮ್ಮಾಜ್ಞೆ” ಎಂದನು. ಪ್ರಹರಿಯು ಕೈಮುಗಿದು ಹೋದನು.

ಇಂದ್ರನು ಮತ್ತೆ ಆಚಾರ್ಯರಿಬ್ಬರ ಕಡೆಗೆ ತಿರುಗಿ, ಕಠಿಣವಾದ ಉಕ್ಕು ಪುಷ್ಪದಂತೆ ಮೃದುವಾದ ಹಾಗೆ, “ಆಚಾರ್ಯರ ಸನ್ನಿಧಾನದಲಿಯೂ ಗಡುಸಾಗಬೇಕಾಗಿ ಬಂತು. ಮನ್ನಿಸಬೇಕು, ನಮ್ಮ ಅಪ್ಪಣೆಗಳೆಲ್ಲವೂ ನೆರವೇರುವಂತೆ ಅನುಗ್ರಹ ಮಾಡಬೇಕು” ಎಂದು ನಮಸ್ಕರಿಸಿದನು.

ಆಚಾರ್ಯರಿಬ್ಬರೂ ಮನಃಪೂರ್ವಕವಾಗಿ ಆಶೀರ್ವದಿಸಿದರು. ಬಾಯಿ ತುಂಬಾ ‘ತಥಾಸ್ತು’ ಎಂದು ಹರಸಿದರು. ಎದ್ದುನಿಂತು ವೇದೋಕ್ತ ಆಶೀರ್ವಾದಗಳನ್ನು ಮಾಡುತ್ತ, ಇಬ್ಬರೂ ‘ನಹುಷ, ನೀನು ಇಂದ್ರನಲ್ಲ ಅತೀಂದ್ರ, ಪ್ರಭುತ್ವವು ಒಂದು ತೂಕವಾದರೆ, ಅದನ್ನು ವಿನಿಯೋಗಿಸುವುದಕ್ಕೆ ಬೇಕಾದ ಬುದ್ಧಿಸಾಮಥರ್ಯ್‌ಗಳೆರಡೂ ಎರಡೆರಡು ತೂಕ. ಪ್ರಭುತ್ವ ಬುದ್ಧಿ ಸಾಮಥರ್ಯ್‌ಗಳೆಲ್ಲವನ್ನೂ ಪಡೆದಿರುವವನು ನೀನು. ಇಂದ್ರನಾಗುವುದಕ್ಕೆ ಮಾತ್ರವಲ್ಲಾ ಅತೀಂದ್ರನಾಗಿ ಇಂದ್ರಗಣವನ್ನೂ ಆಳಲು ಬಲ್ಲವನು ನೀನು” ಎಂದು ಸಂತೋಷವಾಗಿ ಮುಕ್ತಕಂಠರಾಗಿ ಹೊಗಳಿದರು.

ದೇವರಾಜನು ಮತ್ತೆ ಕೇಳಿದನು. ಅದು ಶುಕ್ರರನ್ನು ಸಂಬೋಧಿಸಿ ಹೇಳಿದುದಾಗಿತ್ತು. “ದೇವ, ತಮ್ಮ ಶಿಷ್ಯರಲ್ಲಿ ಯಾರೂ ಬ್ರಹ್ಮವಿದ್ಯಾ ಸಂಪ್ರದಾಯಕರಿಲ್ಲವೆ ?”

ಶುಕ್ರನು ತಲೆದೂಗಿದನು : “ದೈತ್ಯದಾನವಾದಿಗಳಲ್ಲಿ ಬ್ರಹ್ಮಾನುಸಂಧಾನ ಮಾಡುವವರಿಲ್ಲ ಎಂದರೆ ತಪ್ಪಿಲ್ಲ. ಆದರೆ, ಪರಮವೈಷ್ಣವನಾದ ಪ್ರಹ್ಲಾದನ ಮಾತು ಬೇರೆ. ದೈತ್ಯದಾನವಾದಿಗಳೆಲ್ಲ ವೈರೋಚನಮತದವರು, ದೇಹ ಬ್ರಹ್ಮವಾದಿಗಳು.”

“ಸರಿ, ಹಾಗಾದರೆ, ಅಪ್ಪಣೆಯಾದರೆ, ದೇವಗುರುಗಳು ಯಮಧರ್ಮ ರಾಜನನ್ನು ಬರಮಾಡುವರು.”

“ಆಗಬಹುದು.”

ದೇವಾಚಾರ್ಯರು ಯಮಧರ್ಮನನ್ನು ಧ್ಯಾನಿಸಿದರು. ಯಮಧರ್ಮನು ಅಲ್ಲಿಯೇ ಪ್ರತ್ಯಕ್ಷನಾಗಿ ಆಚಾರ್ಯರನ್ನು ನಮಸ್ಕರಿಸಿದನು. ಆತನು ಇಂದ್ರನನ್ನು ತೋರಿಸಿ, “ಶಿಬಿಕಾರೋಹಣ ಕಾಲದಲ್ಲಿ ನಿರ್ವಿಕಲ್ಪ ಸಮಾಧಿಯಲ್ಲಿರಬೇಕು. ಅದಕ್ಕೆ ಉಪಷ್ಪಂಭಕವಾಗಿ ಬ್ರಹ್ಮವಿಚಾರವನ್ನು ಮಾಡಬೇಕೆಂದು ನಾನು ಕೋರಿದೆನು. ಅದಕ್ಕಾಗಿ ನಿನ್ನನ್ನು ಬರಮಾಡಿಕೊಂಡೆವು” ಎಂದನು.

ಯಮಧರ್ಮನು ನಕ್ಕು. “ದೇವರಾಜ. ನಿನ್ನನ್ನು ಇಂದ್ರಸಿಂಹಾಸನದಲ್ಲಿ ಕುಳ್ಳಿರಿಸಿ, ಇಂದ್ರಾಭಿಷೇಕ ಮಾಡಿದಾಗಲೇ, ನಾವೆಲ್ಲರೂ ಕಾಣಿಕೆಯಾಗಿ ನಮ್ಮ ನಮ್ಮಲ್ಲಿರುವ ವಿದ್ಯೆಗಳನ್ನು ಸಮರ್ಪಿಸಿರುವೆವು. ಅವೆಲ್ಲವೂ ನಿನ್ನಲ್ಲಿ ಸುಪ್ತವಾಗಿರುವುವು. ಅದು ಪ್ರಕಟವಾಗುವ ಕಾಲವು ಶಿಬಿಕೋತ್ಸವವು. ಅದರಿಂದಲೇ ದೇವಚಾರ್ಯನು ನಿನಗೆ ನೆನಪು ಕೊಟ್ಟನು. ನಾನು ಇಲ್ಲಿಗೆ ಹೊರಡುವಾಗಲೇ ನೀನು ಇದಕ್ಕಾಗಿಯೇ ನನ್ನನ್ನು ಕರೆಯುವೆಯೆಂದೂ ನನಗೆ ಗೊತ್ತಿತ್ತು. ಆಗಬಹುದು, ಯಾವಾಗ ಆರಂಭಿಸುವೆ ?” ಎಂದನು.

ದೇವೇಂದ್ರನು “ಯಾವಾಗಲೇಕೆ ? ಈಗಲೇ ಆಗಲಿ ? ಎಂದನು.

ಯಮನು ‘ಆಗಬಹುದು’ ಎಂದು ಆತನನ್ನು ಅಲ್ಲಿಯೇ ಕುಳ್ಳಿರಿಸಿ, ಆಚಾರ್ಯದ್ವಯಕ್ಕೆ ನಮಸ್ಕರಿಸಿ ಆರಂಭಿಸಿದನು : “ಅಯ್ಯಾ ಅನೇಕವನ್ನು ಕಂಡಾಗ ಇದರಲ್ಲಿ ಯಾವುದು ಹೆಚ್ಚು ಎಂದು ಹುಡುಕುತ್ತಾ ಎಲ್ಲದಕ್ಕಿಂತ ಹೆಚ್ಚಾಗಿ ಇನ್ನು ಅದಕ್ಕಿಂತ ಹೆಚ್ಚಾದುದು ಇಲ್ಲದುದು ಯಾವುದೋ ಅದನ್ನು ಹಿಡಿಯುವುದೇ ಬ್ರಹ್ಮವಿದ್ಯೆ. ಇಲ್ಲಿ ಗುರುಶಿಷ್ಯರೆಂಬ ಒಂದು ಭೇದವನ್ನಲ್ಲದೆ ಇನ್ನು ಯಾವ ಭೇದವನ್ನೂ ಹಿಡಿಯಬೇಡ. ಮುಂದೆ ಹೋಗುವವನು ಗುರು, ಹಿಂದೆ ಹೋಗುವವನು ಶಿಷ್ಯ. ಎಲ್ಲಿ ಕೊನೆಯಾಗುವುದೋ ಅಲ್ಲಿ ಗುರು-ಶಿಷ್ಯರು ಪರಸ್ಪರ ಐಕ್ಯರಾಗುವರು” ಎಂದು ಆರಂಭಿಸಿ ಹೇಳಿದನು.

“ದೇಹದಲ್ಲಿ ಕ್ಷರ ಅಕ್ಷರ ಎಂದು ಎರಡು ಇವೆ. ವಿಕಾರವಾಗುವುದೆಲ್ಲವೂ ಕ್ಷರ. ಅದೆಲ್ಲಾ ಪಂಚಭೂತಗಳ ಸಂಘಾತ. ಅವೆಲ್ಲರಲ್ಲೂ ಇದ್ದು ಅವೆಲ್ಲವನ್ನೂ ಆಡಿಸುವವನು ಅಕ್ಷರದಲ್ಲಿಯೂ ಅಂತಶ್ಚೇತನನಾಗಿರುವವನು ಪರಮ.ಈ ದೇಹವಿರುವವರೆಗೂ ಅಕ್ಷರನುಂಟು, ಪರಮನುಂಟು. ಈ ದೇಹವು ಪ್ರತ್ಯೇಕವಾಗಿದೆಯೆನ್ನುವುದೇ ಹೃದಯ ಗ್ರಂಥಿ. ಪರಮನನ್ನು ದರ್ಶನಮಾಡಿದ ಭಾಗ್ಯವಂತನಿಗೆ ಆ ಗ್ರಂಥಿಯಳಿಯುವುದು. ಅದು ಆಗಬೇಕಾದರೆ ಆ ಪರಮನು ಒಲಿಯಬೇಕು. ನಾವು ಏನು ಮಾಡಿದರೂ ಅದು ಸಾಧ್ಯವಿಲ್ಲ. ನಾವು ಧರ್ಮದಲ್ಲಿದ್ದರೆ ಎಂದಾದರೊಂದು ದಿನ ಆತನ ಕೃಪೆಯಾಗುವುದು. ಅದನ್ನು ಕಾದು ಕುಳಿತಿರುವುದೇ ಬ್ರಹ್ಮಾನುಸಂಧಾನ. ಅದು ಲಭಿಸಿದಾಗ ಅದೇ ತನ್ನನ್ನು ಪಡೆಯುವ ಮಾರ್ಗವನ್ನು ಹೇಳಿಕೊಡುವುದು. ಅದಕ್ಕಾಗಿ ನೀನು ಮಹಾವಿಷ್ಣುವನ್ನು ಆರಾಧಿಸು, ಕೃತಾರ್ಥನಾಗುವೆ. ನಿನಗೆ ನಂಬಿಕೆಯಾಗಲೆಂದು ನಾನು ನನಗೆ ಲಭಿಸಿರುವ ಸಿದ್ಧಿಯನ್ನು ಅಷ್ಟೂ ಕೊಡುವೆನು” ಎಂದು ಆತನ ತಲೆಯ ಮೇಲೆ ಕೈಯಿಟ್ಟನು.

ನಹುಷನಿಗೆ ಒಂದು ಕನಸಾದಂತೆ ಆಯಿತು. ಜಾಗ್ರತ್ತು ಎನ್ನುವುದಕ್ಕೆ ತಾನು ಯಾರು? ತನ್ನ ಸುತ್ತಲೂ ಇರುವವರು ಯಾರು? ಎನ್ನುವುದೆಲ್ಲ ಗೊತ್ತಿದೆ. ಆದರೆ ಸ್ವಪ್ನವೃತ್ತಿಯಲ್ಲಿರುವಂತೆ ತಾನು ವೃತ್ತಿವಶನಾಗಿದ್ದಾನೆ. ಮೊದಲು ನಹುಷನೆದುರಿಗೆ ಇಬ್ಬರು ಬಂದಿದ್ದಾರೆ. ಒಬ್ಬನು ಶ್ರೋತ್ರಿಯನಂತೆ ವೇಷ ಭಾಷೆಗಳನ್ನುಳ್ಳವನು. ಇನ್ನೊಬ್ಬನು ಚೆಲ್ಲುಚೆಲ್ಲಾದರೂ ಮೋಹಕವಾದ ವೇಷಭಾಷೆಗಳುಳ್ಳವನು. “ನಾವು ಶ್ರೇಯಃಪ್ರೇಯಗಳು. ಇವನೇ ಪ್ರೇಯ. ನಿನ್ನ ದೇಹವು ಬೇಕೆನ್ನುವವನು ಇವನು. ನಿನಗೆ ಬೇಕಾದವನು ನಾನು” ಎನ್ನುತ್ತಾರೆ. ನಹುಷನು ನೋಡಿಕೊಳ್ಳುತ್ತಾನೆ. ತಾನು ಬೇರೆ, ದೇಹ ಬೇರೆ ಎಂದು ತಿಳಿಯುತ್ತದೆ. ತಾನು ಅಧಿಕಾರಿ ಎಂದು ತನಗೆ ಬೇಕಾದ ಶ್ರೇಯಸ್ಸನ್ನು ವರಿಸುತ್ತಾನೆ. ದೇಹವು ಏನೋ ವ್ಯತ್ಯಾಸಗೊಂಡು ಕರಣಗಳು ಬಹಿರ್ಮುಖವಾಗಿದ್ದುದು ಅಂತರ್ಮುಖವಾಗುತ್ತದೆ. ಆಗ ತನ್ನೊಳಗೆ ತಾನು ನೋಡಿಕೊಳ್ಳಲು ಸಾಧ್ಯವಾಗಿ ಅತೀಂದ್ರಿಯವಾದರೂ ಸಿದ್ಧವಾದ ಯಾವುದೋ ಶಕ್ತಿಯೊಂದು ಇರುವುದು ತಿಳಿದು ತನಗಿಂತಲೂ ಅದು ನಿಜವೆಂದು ಯಾರೂ ಹೇಳದೆಯೇ ಅರಿವಾಗುತ್ತದೆ. ಏನೋ ಭಾರವು ತನ್ನನ್ನು ಹಿಡಿದಿರುವಂತೆ ತೋರುತ್ತದೆ. ಆ ಒಳಗಿನ ಶಕ್ತಿಯನ್ನು ‘ಕಾಪಾಡು’ ಎಂದು ಕೇಳಿಕೊಳ್ಳುತ್ತಾನೆ. ಅದು ನಿರ್ವಿಕಾರವಾಗಿ ಇರುವುದು ಗೋಚರವಾಗುತ್ತದೆ. ಆಗ ತನಗೆ ಆ ಭಾರವು ಬಿದ್ದು ಹೋದಂತಾಗುತ್ತದೆ. ಆಗ ತಾನು ಅರಳುತ್ತಾನೆ. ಕಟ್ಟಿರುವ ಕಟ್ಟುಗಳೆಲ್ಲಾ ಶಿಥಿಲವಾಗಿ ತಾನು ಅರಳಿ ಅರಳಿ ಕೊನೆಗೆ ತಾನು ಪ್ರತ್ಯೇಕ ಎಂಬ ಭಾವನೆಯೂ ಅಳಿಯುತ್ತದೆ. ಅಲ್ಲಿ ಏನೋ ಜ್ಞಾನ. ಅದು ಅಹಂ ಅಲ್ಲ; ಅಸ್ಮಿ ಅಲ್ಲ ; ಎರಡಕ್ಕೂ ಆಧಾರವಾದ ಇನ್ನೇನೋ ಒಂದು.

ಧರ್ಮರಾಜನು ಕೈ ತೆಗೆದನು. ಒಂದು ಗಳಿಗೆಯ ಮೇಲೆ ನಹುಷನು ಪ್ರಕೃತಿಸ್ಥಾನನಾದನು. ಆತನಿಗೆ ತಾನು ಪಟ್ಟ ಅನುಭವವು ಸರಿ ಎನ್ನಿಸಿತು. ಅದರಲ್ಲಿ ಸಂಶಯ ವಿಪರೀತಗಳೊಂದೂ ಬರಲಿಲ್ಲ. ಎದ್ದು ನಮಸ್ಕಾರ ಮಾಡಲು ಹೋದನು. ಯಮನು ಅದನ್ನು ಅಂಗೀಕರಿಸದೆ, “ನೀನು ಇಂದ್ರ, ನಾನು ಯಮ. ಅದಿರಲಿ. ಈಗ ಶಾಸ್ತ್ರ ಅನುಭವ ಎರಡೂ ಸರಿಹೊಂದಿದುವಷ್ಟೆ ? ಸಮಯ ಬಂದಾಗ ಇದನ್ನು ಉಪಯೋಗಿಸಿಕೋ” ಎಂದು ಹೇಳಿ ಬೀಳ್ಕೊಂಡನು.

ದೇವಾಚಾರ್ಯನು ಇಂದ್ರನನ್ನು ಎಚ್ಚರಿಸಿದನು. ಆತನ ಕೋರಿಕೆಯಂತೆ ವರುಣನನ್ನು ಬರಮಾಡಿಕೊಂಡನು. ಆತನೂ ಯಮನಂತೆಯೇ “ನೀನು ಇಂದ್ರನಾದಾಗ ಇದೆಲ್ಲವನ್ನೂ ಕೊಟ್ಟಿರುವೆವು. ಕಾಲವು ಸನ್ನಿಹಿತವಾಗಲಿಲ್ಲವೆಂದು ಅದು ಸುಪ್ತವಾಗಿತ್ತು. ಈಗ ಜಾಗ್ರತವಾಗುವುದು” ಎಂದು ಮೊದಲು ಶಾಸ್ತ್ರವನ್ನು ಬೋಧಿಸಿದನು. “ಈ ಜಗತ್ತಿನಲ್ಲಿ ಪ್ರಾಣಿ ಪ್ರಾಣಿಯೂ - ಸ್ಥಾವರವಾಗಲಿ, ಜಂಗಮವಾಗಲಿ-ಹುಡುಕುವುದು ಅನ್ನವನ್ನು ಪೂರ್ಣ ಅಪೂರ್ಣಗಳ ಸಂಮಿಶ್ರತೆಯೇ ಈ ಜಗತ್ತು. ಅಪೂರ್ಣವನ್ನು ತಿರಸ್ಕರಿಸಿ ಪೂರ್ಣವನ್ನು ಹಿಡಿಯುವುದೇ ಬ್ರಹ್ಮವಿದ್ಯೆ. ಅನ್ನದಲ್ಲಿ ಪ್ರೇರಿಸುವ ಮನಸ್ಸು ಇವುಗಳನ್ನೂ ಪೂರ್ಣದಲ್ಲಿಲ್ಲ ಎಂದು ತಿಳಿದಾಗ ಮನಸ್ಸು ಇಲ್ಲವಾಗುವುದು. ಆ ಮನಸ್ಸಿನ ಆಚೆ ನಿಂತು ತಾನು ಪ್ರತ್ಯೇಕವೆನ್ನುತ್ತಿರುವ ಅಹಂಕಾರದ ಅಪೂರ್ಣತೆಯನ್ನು ಕಂಡರೆ ಅದು ಮುಂದಕ್ಕೆ ಕಳುಹಿಸುವುದು. ಆಗ ತಾನು ಎನ್ನುತ್ತಿರುವ ಚೇತನವು ಸಚ್ಚಿದಾನಂದವೆಂದು ತಿಳಿಯುವುದೇ ಕೊನೆಯ ಅವಸ್ಥೆಯು. ಅಲ್ಲಿಂದ ಆಚೆಗೆ ಹೋಗುವುದೇ ನಿರ್ವಿಕಲ್ಪವು. ಅದನ್ನೇ ಆರೂಢವೆನ್ನುವರು. ಒಂದು ಗಳಿಗೆ ನನಗೆ ವಶನಾಗು. ಇದರ ಅನುಭವವನ್ನು ನೋಡಿಕೋ” ಎಂದು ವರುಣನು ನಹುಷನ ತಲೆಯ ಮೇಲೆ ಕೈಯಿಟ್ಟನು.

ನಹುಷನು ಕಣ್ಮುಚ್ಚಿ ಕುಳಿತನು. ಅನ್ನವಾಗಿ ಲೋಕದಲ್ಲೆಲ್ಲಾ ಇರುವುದು ಪ್ರಾಣ. ಬದುಕಿರುವಾಗ ಅನ್ನಾದನಾಗಿ, ಸತ್ತು ಇನ್ನೊಂದಕ್ಕೆ ಅನ್ನವಾಗುತ್ತಿರುವ ಪ್ರಾಣವೇ ಲೋಕವನ್ನೆಲ್ಲಾ ತುಂಬಿದೆ. ಅದೇ ಮತ್ತೆ ಮನಸ್ಸಾಗಿ ತನ್ನನ್ನು ತಾನೇ ಪ್ರೇರಿಸಿಕೊಳ್ಳುತ್ತಿದೆ. ಇವಿಷ್ಟೂ ಪೂರ್ಣವಾದಾಗ ಬ್ರಹ್ಮಬಿಂಬವನ್ನು ಧಾರಣ ಮಾಡುವ ಬುದ್ಧಿಯಾಗಿದೆ. ಆ ಪ್ರತಿಬಿಂಬವು ತನ್ನನ್ನು ಮಿತವೆಂದುಕೊಂಡು, ಪ್ರತ್ಯೇಕವೆಂದುಕೊಳ್ಳುತ್ತಿದೆ. ಅದು ಹಿಂತಿರುಗಿ ನೋಡಿದರೆ ತನ್ನ ಅಸ್ತಿತ್ವಕ್ಕೆ ಕಾರಣವಾದ ಆನಂದವನ್ನು ತಾನೆಂದುಕೊಳ್ಳುತ್ತದೆ. ಆ ಆನಂದವು ಬಹಿರ್ಮುಖವಾಗಿದ್ದುದು ಅಂತರ್ಮುಖವಾಗುತ್ತದೆ. ಆಗ ಕಾಲದೇಶಗಳನ್ನು ಮೀರಿ ತನ್ನ ಹೊರತು ಇನ್ನೇನೂ ಇಲ್ಲವೆಂದುಕೊಳ್ಳುತ್ತದೆ. ಅದು ಶಾಂತಿ. ಆ ಶಾಂತಿಯನ್ನು ನಹುಷನು ಅನುಭವಿಸುತ್ತಾನೆ.

ವರುಣನು ಕೈ ತೆಗೆದನು. ದೀಪವು ಆರಿದರೂ ಸೊಡರಿದ್ದ ಕಂಬವು ಬಿಸಿಯಾಗಿರುವಂತೆ, ಆ ಅವಸ್ಥೆಯು ನಹುಷನಿಗೆ ಅಷ್ಟು ಹೊತ್ತು ಇದ್ದು ಎಚ್ಚರವಾಯಿತು. ವರುಣನು ಹೇಳಿದನು : “ಇಂದ್ರ, ಸಂಶಯ ವಿಪರೀತ ಭಾವನೆಗಳೇನಾದರೂ ಇದ್ದರೆ ಅವನ್ನು ಅಭ್ಯಾಸಬಲದಿಂದ ಕಳೆದುಕೊ. ಶಾಸ್ತ್ರದ ಕಡೆಗೆ ಅನುಭವವನ್ನು ತಿದ್ದಿಕೊ. ಅನುಭವದಲ್ಲಿರುವ ಅಪೂರ್ಣತೆಯಿಂದ ಸಂಶಯ ವಿಪರೀತಗಳು ತಲೆದೋರುವುವು. ಆ ಅಪೂರ್ಣತೆಯನ್ನು ಕಳೆದರೆ, ಶಾಸ್ತ್ರವೇ ಅನುಭವವಾಗುವುವು” ಎಂದು ಹೇಳಿ ಎಲ್ಲರನ್ನೂ ಬೀಳ್ಕೊಂಡು ಹೊರಟು ಹೋದನು.

ದೇವಾಚಾರ್ಯನು “ಇದು ನಮಗೆ ಬಹು ಗಹನವಾದುದು ಅಷ್ಟೇನು? ಅಸಾಧ್ಯ” ಎಂದುಕೊಂಡನು. ಶುಕ್ರಾಚಾರ್ಯನು “ನಮ್ಮನ್ನು ಅಪೂರ್ಣತೆ ಬಿಟ್ಟಿರಲ್ಲವೆ? ಮದುವೆಯಾಗುವವರೆಗೂ ಹುಚ್ಚು ಬಿಡುವುದಿಲ್ಲ. ಹುಚ್ಚು ಬಿಡುವವರೆಗೂ ಮದುವೆಯಾಗುವುದಿಲ್ಲ” ಎಂದುಕೊಂಡನು.

ನಹುಷನು “ಇಂದ್ರನಾದುದು ಸಾರ್ಥಕವಾಯಿತು. ಏನು ತಿಳಿಯಬೇಕೋ ಅದನ್ನು ತಿಳಿದುದಾಯಿತು” ಎಂದು ಆನಂದಪಟ್ಟುಕೊಳ್ಳುತ್ತಿದ್ದನು.

ಹೊರಗೆ ಗದ್ದಲವಾಯಿತು. ಸಮುದ್ರವು ಉಕ್ಕಿ ಬಂದು ಮಾಡುತ್ತಿರುವಂತೆ ಆಗುವ ಆರ್ಭಟ. ಏನೆಂದು ಆಚಾರ್ಯರು ಎದ್ದು ಕಿಟಕಿಯಲ್ಲಿ ಬಗ್ಗಿ ನೋಡಿದರು. ಪ್ರಹರಿಯು ಬಂದು “ಅಗ್ನಿ ವಾಯುಗಳು....” ಎನ್ನುತ್ತಿರುವ ಹಾಗೆಯೇ ಅವರಿಬ್ಬರೂ ಬಂದು ಇಂದ್ರನಿಗೆ ಕೈಮುಗಿದು “ಮಹಾಪಾದದ ಆಜ್ಞೆಯು ಸಫಲವಾಯಿತು. ಹತ್ಯೆಯು ಉರಿದುಹೋಯಿತು. ಇಂದ್ರನನ್ನು ಕರೆತಂದಿರುವೆವು” ಎಂದರು. ನಹುಷನು ಸಂತೋಷದಿಂದ ಎದ್ದು ಅವರಿಬ್ಬರನ್ನು ಆಲಿಂಗಿಸಿದನು.

* * * *