ಮಹಾಕ್ಷತ್ರಿಯ/ಸೃಷ್ಟಿಯೆಂದರೆ ಅಂಕೆ

==ಸೃಷ್ಟಿಯೆಂದರೆ ಅಂಕೆ==

ಪ್ರಹರಿಯು ಬಂದು ಕೈಮುಗಿದು “ಯಾರೋ ಮಹಾಪಾದದ ದರ್ಶನಕ್ಕೆ ಆತುರವಾಗಿ ಬಂದಿರುವರು” ಎಂದು ಬಿನ್ನವಿಸಿದನು. ಅದು ಆಗಂತುಕರ ಕಾಲವಲ್ಲ. ಆದರೂ ನಹುಷನು ಬೇಸರಗೊಳ್ಳದೆ, “ಅವರನ್ನು ದರ್ಶನ ಮಂದಿರಕ್ಕೆ ಕರೆದುಕೊಂಡು ನಡೆ ಎಂದು ತಾನೂ ಹಿಂದೆಯೇ ಬಂದನು.

ಬಂದವರು ನಿಯತಿದೇವಿ. ಆಕೆಯು ಇಂದ್ರನನ್ನು ಕಂಡು ವಿನಯದಿಂದ ನಮಸ್ಕರಿಸಿ ತಾನು ಬಂದ ಕಾರ್ಯವನ್ನು ನಿವೇದಿಸಿದಳು : “ಮಹಾಪ್ರಭುಗಳು ಶಿಬಿಕೋತ್ಸವವು ಏಳು ದಿನ ನಡೆಯಬೇಕೆಂದು ಗೊತ್ತುಮಾಡಿರುವಿರಂತೆ. ಹಾಗಾದರೆ ಮನುಷ್ಯ ಲೋಕದಲ್ಲಿ ಎಲ್ಲವೂ ವ್ಯತ್ಯಾಸವಾಗಿ ಹೋಗಿ, ನಾನು ಮಾಡಬೇಕಾಗಿರುವುದು ಏನೂ ಉಳಿಯದೇ ಹೋಗುವುದು”

“ಹಾಗೆಂದರೇನು? ಅದನ್ನು ವಿಶದವಾಗಿ ಹೇಳು ದೇವಿ!”

“ದೇವ, ತಮ್ಮ ಏಳು ದಿನದ ಶಿಬಿಕೋತ್ಸವದಿಂದ ಮಧ್ಯಮಲೋಕದಲ್ಲಿ ಬಹು ಪತಿವರ್ತನಗಳಾಗುವುವು. ಅದು ರಜೋಗುಣಪೂರ್ಣವಾದ ಲೋಕ. ಅಲ್ಲಿ ಯಾವಾಗಲೂ ಒಳ್ಳೆಯದು ಕೆಟ್ಟುದು ಎರಡೂ ಇರಬೇಕು. ಅಂಥದರಲ್ಲಿ ತಮ್ಮ ಶಿಬಿಕೋತ್ಸವದಿಂದ ಎಲ್ಲವೂ ಒಳ್ಳೆಯದೇ ಆಗಿಹೋದರೆ, ಹಿಟ್ಟೂಬೂದಿ ಎಂಬ ಭೇದವೇ ಇಲ್ಲದೆ ಹೋದರೆ, ನಾನು ಅಲ್ಲಿ ಮಾಡಬೇಕಾದುದು ಏನೂ ಉಳಿಯುವುದಿಲ್ಲ. ಅಲ್ಲಿಗೆ ಸ್ಥಿತಿಯೇ ಲೋಪವಾಗುವುದು. ಅದನ್ನು ಬಿನ್ನವಿಸಲು ಬಂದಿದ್ದೇನೆ.”

“ಹಾಗಾದರೆ ಏನು ಮಾಡಬೇಕೆಂದಿರುವೆ?”

“ಆಜ್ಞಾಸ್ಥಾನವು ತಮ್ಮದು. ನಾವು ಏನಿದ್ದರೂ ಆಜ್ಞಾವಾಹಕರು. ಸ್ಥಿತಿಯು ಈಗಿರುವಂತೆ ಇರಬೇಕು ಎನ್ನುವುದಾದರೆ, ಸನ್ನಿಧಾನವು ಏಳು ದಿನ ಶಿಬಿಕೋತ್ಸವ ಮಾಡಿಕೊಳ್ಳಬಾರದು. ಮಾಡಿಕೊಳ್ಳುವುದಾದರೆ ಸ್ಥಿತಿ ಪರಿವರ್ತನಕ್ಕೆ ಒಪ್ಪಬೇಕು.”

ಇಂದ್ರನು ಯೋಚಿಸಿದನು. ಸ್ಥಿತಿಯನ್ನು ಬದಲಾಯಿಸುವುದು ಯಾರಿಗೂ ಸಾಧ್ಯವಿಲ್ಲ. ಏನು ಮಾಡಬೇಕು? ಕೊನೆಗೆ ಆಕೆಯನ್ನೇ ಕೇಳಿದನು : “ನೀನು ಸ್ಥಿತಿದೇವತೆ. ಈ ವಿಚಾರದಲ್ಲಿ ನೀನು ಹೇಳಿದಂತೆ ಕೇಳುವೆವು, ಹೇಳು.”

“ಹಾಗಾದರೆ ಸ್ಥಿತಿಯು ಈಗಿರುವಂತೆಯೇ ಇರಬೇಕು. ಅದಕ್ಕಾಗಿ ತಾವು ಶಿಬಿಕೋತ್ಸವವನ್ನು ಏಳು ದಿನ ನಡೆಸಬಾರದು. ಮೂರು ದಿನಕ್ಕೆ ನಿಲ್ಲಿಸಿ ಬಿಡಬೇಕು.”

“ಅದು ಸಾಧ್ಯವಿಲ್ಲ. ಶಿಬಿಕೋತ್ಸವವು ಒಂದುವಾರ ನಡೆದೇ ನಡೆಯುವುದು. ಅದು ಹಾಗೆಂದು ಇತ್ಯರ್ಥವಾಗಿರುವುದು ಇಲ್ಲಿ ; ಸಪ್ತರ್ಷಿಗಳ ಸನ್ನಿಧಿಯಲ್ಲಿ ಇಂದ್ರನು ಗೊತ್ತು ಮಾಡಿರುವುದನ್ನು ಬದಲಾಯಿಸಲು ಸಾಧ್ಯವಿಲ್ಲ.”

ನಿಯತಿಯು ಹೆದರಿ ಎದ್ದು ಕೈಮುಗಿದು ಹೇಳಿದಳು : “ಸ್ವಾಮಿ ಒಂದು ಆಜ್ಞೆಯು ಇನ್ನೊಂದು ಆಜ್ಞೆಯನ್ನು ಭಂಗಿಸಬಾರದು. ಹಾಗಾಗುವುದಾದರೆ, ಆಜ್ಞಾನಿರ್ವಾಹಕರು ಸ್ವಾಮಿಗೆ ಅದನ್ನು ಬಂದು ನಿವೇದಿಸಬೇಕು. ಅದನ್ನು ಸರಿಮಾಡುವುದು ಸ್ವಾಮಿಯ ಕೆಲಸ. ಅದರಿಂದ ಬಂದು ಬಿನ್ನವಿಸಿದ್ದೇನೆ.”

“ಏನಾದರೊಂದು ಉಪಾಯವನ್ನು ಹೇಳು. ನಮ್ಮ ಆಜ್ಞಾನಿರ್ವಾಹಕರು ಯಾಂತ್ರಿಕಪುರುಷರಲ್ಲ.”

“ದೇವ, ಶಿಬಿಕೋತ್ಸವವು ಏಳು ದಿನಗಳು ಪೂರ್ಣವಾಗಿ ನಡೆಯದಂತೆ ನಾವೊಂದು ಅಡ್ಡಿಯನ್ನು ತಂದೊಡ್ಡಲು ಅಪ್ಪಣೆಯಾಗಬೇಕು. ಯಾವುದೂ ಈ ಲೋಕದಲ್ಲಿ ಪೂರ್ಣವಾಗಬಾರದು. ಅಪೂರ್ಣವಾಗಿಯೇ ಉಳಿಯಬೇಕು. ಇದು ಬ್ರಹ್ಮನಿಯಮ. ಸನ್ನಿಧಾನವು ಅದಕ್ಕೆ ವಿರುದ್ಧವಾಗಿ ನಡೆಯಬಾರದು.”

“ಹಾಗಲ್ಲ. ತಮ್ಮನ್ನು ಅದಕ್ಕೆ ವಿರುದ್ಧವಾಗಿ ನಡೆಯಬಿಡುವುದಿಲ್ಲ ಎನ್ನು.”

“ಅದೇ ನಿಜವಾದರೂ ಈಗ ತಾವು ಆಜ್ಞಾಪಕರು. ನಾವು ನಿರ್ವಾಹಕರು. ಅದರಿಂದಾಗಿ ವರವಾಗಿ ಕೇಳುವೆವು.”

“ಕೊಡದಿದ್ದರೆ, ತುಂಟ ಹಸುವನ್ನು ಕಟ್ಟಿ ಕರೆಯುವಂತೆ ವರವನ್ನು ಕಿತ್ತುಕೊಳ್ಳುವೆವು. ಇಲ್ಲವೆ ?”

ನಿಯತಿಯು ಉತ್ತರ ಕೊಡಲಿಲ್ಲ. ನಕ್ಕು ತಲೆಯನ್ನು ಬಗ್ಗಿಸಿದಳು. ಅದೇ ಉತ್ತರವಾಯಿತು.

“ಹೌದು ನೀವು ಆಜ್ಞಾವಾಹಕರು. ಆದರೆ, ಸಲ್ಲುವ ಆಜ್ಞೆಯನ್ನು ಮಾತ್ರವೇ ಮಾಡಬೇಕಾದುದು ನಮ್ಮ ಗೌರವ. ಆಯಿತು. ಈಗೇನು ಮಾಡಬೇಕು, ನಿಯತಿ?”

“ಸ್ವಾಮಿಗೆ ಸಮ್ಮತವಾದರೆ ಏಳನೆಯ ದಿನ, ಶಿಬಿಕೆಯಲ್ಲಿರುವಾಗಲೇ ತಾವು ಸಮಾಧಿ ಭಂಗಮಾಡಿಕೊಳ್ಳಬೇಕು. ಅದರಿಂದ ತಮ್ಮ ಸನ್ನಿಧಿಗೆ ಕೊಂಚ ಶ್ರಮವಾಗಬಹುದು. ಆದರೂ ಲೋಕವು ಉಚ್ಛೃಂಖಲವಾಗುವುದಿಲ್ಲ. ಇಲ್ಲದಿದ್ದರೆ ತುಟಿ ಮೀರಿದ ಹಲ್ಲಾಗುವುದು. ಅದರಿಂದ, ನನಗೆ ಈ ವರವನ್ನು ಕೊಡಬೇಕು” ಎಂದು ನಿಯತಿದೇವಿಯು ಇಂದ್ರನಿಗೆ ನಮಸ್ಕಾರ ಮಾಡಿದಳು. ವರವೆನ್ನುತ್ತಲೂ ಇಂದ್ರನು ಮೆತ್ತಗಾಗಿ, ಮರುಮಾತಾಡದೆ, “ಆಗಬಹುದು” ಎಂದನು. ನಿಯತಿಯು ಹಸನ್ಮುಖಳಾಗಿ ಇಂದ್ರನಿಗೆ ಮತ್ತೆ ನಮಸ್ಕರಿಸಿ ಬೀಳ್ಕೊಂಡಳು. ಇಂದ್ರನು ಅಲ್ಲಿಯೇ ಶತಪಥ ತಿರುಗುತ್ತ. “ಹೌದು, ಸ್ವರ್ಗಮತರ್ಯ್‌ಪಾತಾಳಗಳಲ್ಲೆಲ್ಲಾ ಮೃತ್ಯುವಿನ ಮೆರವಣಿಗೆ. ಮೊದಲು ಕೊನೆಯೆರಡೂ ಇಲ್ಲವಾಗುವುದು ಕಲ್ಪಾಂತರದಲ್ಲಿ. ಮತರ್ಯ್‌ಲೋಕದಲ್ಲಿ ದಿನದಿನವೂ ಅಲ್ಲ. ಗಳಿಗೆ ಗಳಿಗೆಯೂ, ಹುಟ್ಟಿದುದೆಲ್ಲ ಹೆಜ್ಜೆಯನ್ನು ಸಾವಿನ ಕಡೆಗೆ ಇಡುತ್ತಿರುವಾಗ ಪೂರ್ಣವಾಗುವುದೆಲ್ಲಿ ಬಂತು ? ಇಷ್ಟಕ್ಕೂ ಏಳು ದಿನವಂತೂ ಶಿಬಿಕೋತ್ಸವವು ನಡೆದೇ ನಡೆಯುವುದು. ಕೊನೆಯಲ್ಲಿ ಅಷ್ಟು ಭಂಗವಾದರೆ ನಮಗೇನು ಹಾನಿ ?” ಎಂದು ಸಮಾಧಾನಪಟ್ಟುಕೊಂಡನು.

ಹಾಗೆಯೇ ಅದೇ ಚಿತ್ತವೃತ್ತಿಯಲ್ಲಿರುವಾಗ ವಿರಜಾದೇವಿಯು ಬಂದು ಕಾಣಿಸಿಕೊಂಡು, “ಶಚೀಂದ್ರರು ಬರುವ ಕಾಲವಾಯಿತು. ಅವರನ್ನೆಲ್ಲಿ ನೋಡುವಿರಿ?” ಎಂದಳು.

ನಹುಷನು ವಿರಜಾದೇವಿಯ ಭುಜದ ಮೇಲೆ ಸ್ನೇಹದಿಂದ ಕೈಯಿಟ್ಟು “ಆ ದಂಪತಿಗಳನ್ನು ಈ ದಂಪತಿಗಳು ನಿನ್ನ ಅಪ್ಪಣೆಯಾದರೆ ನಿನ್ನ ಅಂತಃಪುರದಲ್ಲಿ ಕಾಣುವರು” ಎಂದನು.

ವಿರಜಾದೇವಿಯು ಸಮೀಪಗತಳಾಗಿ ಆತನ ವಿಶಾಲವಾದ ಎದೆಯಲ್ಲಿ ಹುದುಗಿಕೊಳ್ಳುವಂತೆ ತನ್ನ ಮೊಗವನ್ನಿಟ್ಟು “ತಾವು ಅಪ್ಪಣೆ ಕೊಡಿಸಿದುದು ಸರ್ವಥಾ ಸರಿ. ಇಂದ್ರದಂಪತಿಗಳು ಈಗ ದೂರದವರಲ್ಲ. ಅವರನ್ನು ಅಂತಃಪುರದಲ್ಲಿ ಅಲ್ಲದೆ ಇನ್ನೆಲ್ಲಿ ಕಂಡರೂ ದೂರಮಾಡಿದರೆಂದು ನೊಂದುಕೊಂಡಾರು. ಸರಿ ದಯಮಾಡಿಸಿ” ಎಂದು ಗಂಡನನ್ನು ಅಂತಃಪುರಕ್ಕೆ ಕರೆದೊಯ್ದಳು.

ದಂಪತಿಗಳು ಇಬ್ಬರೂ ಮಾತನಾಡಿಕೊಂಡು ಇಂದ್ರದಂಪತಿಗಳನ್ನು ಸ್ವಾಗತಿಸಲು ಸಿದ್ಧರಾದರು. ಬಂದವರಿಗೆ ಮಂಗಳಾರತಿ ಮಾಡಲು ರತ್ನದ ಹರಿವಾಣವು ಸಿದ್ಧವಾಯಿತು. ಕಲ್ಪವೃಕ್ಷವು ಕೊಟ್ಟ ದುಂಡುಮೊಗ್ಗಿನ ಹಾರಗಳು ಸಿದ್ಧವಾದವು. ಕಾಣಿಕೆಯಾಗಿ ಚಿಂತಾಮಣಿಯು ಕೊಟ್ಟ ರತ್ನಾಭರಣಗಳು ಸಿದ್ಧವಾದವು. ದಂಪತಿಗಳು ಕುಳಿತುಕೊಳ್ಳಲು ರತ್ನಾಸನವು ಅಣಿಯಾಯಿತು. ಹೀಗೆ ಸರ್ವಸನ್ನದ್ಧರಾಗಿ ಕಾದರು.

ಸಕಾಲದಲ್ಲಿ ಶಚೀಂದ್ರರು ಬಂದರು. ಸಾಮಾನ್ಯವಾದ ವೇಷಭೂಷಣಗಳಿಂದ ಬಂದಿದ್ದಾರೆ. ಇಂದ್ರನು ಒಂದು ಪೀತಾಂಬರವನ್ನು ಉಟ್ಟಿದ್ದಾನೆ. ಇನ್ನೊಂದನ್ನು ಹೊದೆದಿದ್ದಾನೆ. ತಲೆಯ ಮೇಲೆ ಹೇಮಕಿರೀಟವೊಂದಿದೆ. ದೇವಸಹಜವಾದ ಗಂಧಮಾಲ್ಯಗಳು, ಜೊತೆಗೆ ಕಾಲಿನಲ್ಲಿ ರತ್ನಗಳು ಕೆತ್ತಿರುವ ಚಿನ್ನದ ಆಭರಣವೊಂದು, ಹಸ್ತಾಭರಣಗಳು, ಕರ್ಣಾಭರಣಗಳೂ ವಿನಾ ಇನ್ನೇನೂ ಇಲ್ಲ.

ಶಚಿಯೂ ಅಷ್ಟೇ ! ರತ್ನಖಚಿತವಾದ ಬೂಟಾ ಸೀರೆಯುಟ್ಟು ಬೂಟಾ ರವಿಕೆ ತೊಟ್ಟಿದ್ದಾಳೆ. ಹಸ್ತಾಭರಣ, ಕಂಠಾಭರಣ, ಪಾದಾಭರಣಗಳ ಜೊತೆಗೆ ಮೇಖಲೆಯೊಂದನ್ನು ಧರಿಸಿದ್ದಾಳೆ. ತಲೆಯ ಮೇಲೆ ಒಂದು ರತ್ನಕಿರೀಟವಿದೆ. ಇನ್ನು ಏನೂ ಇಲ್ಲ.

ಶಚೀಂದ್ರರು ವಿರಜಾ - ನಹುಷರಿಗೆ ನಮಸ್ಕಾರ ಮಾಡಲು ಬಂದರು. ಅವರನ್ನು ತಡೆದು ನಹುಷನು, “ನೀನು ನಿತ್ಯೇಂದ್ರ. ನಾನು ನೈಮಿತ್ತಿಕೇಂದ್ರ. ನನಗೆ ನೀನು ನಮಸ್ಕಾರ ಮಾಡುವುದೆ ?” ಎಂದನು. ಇಂದ್ರನು “ಆ ಮಾತು ನಿಜ. ಆದರೆ, ಬುದ್ಧಿಯಲ್ಲಿ ಪ್ರಭಾವದಲ್ಲಿ ಸಾಮಥರ್ಯ್‌ದಲ್ಲಿ, ಪ್ರತಿಯೊಂದರಲ್ಲೂ ನೀನು ನನಗಿಂತ ಹೆಚ್ಚು ಅಲ್ಲದೆ, ಹತ್ಯೆಗೆ ಸಿಕ್ಕಿ ಗೋಳಿಡುತ್ತಿದ್ದ ನನ್ನನ್ನು ಉದ್ಧರಿಸಿರುವೆ. ಇಂತಹ ಪರಮೋಪಕಾರಿಗೆ ನಾನೇನು ತಾನೆ ಉಪಚಾರಮಾಡಲಿ ?” ಎಂದು ತಾವು ತಂದಿದ್ದ ವಸ್ತ್ರಾಭರಣ ಗಂಧಮಾಲ್ಯಾದಿಗಳನ್ನು ಪತ್ನೀಸಮೇತನಾದ ಇಂದ್ರನು ಪತ್ನೀದ್ವಿತೀಯನಾದ ನಹುಷನಿಗೆ ಒಪ್ಪಿಸಿದನು.

ವಿರಜಾ - ನಹುಷರು ಬಲಾತ್ಕಾರದಿಂದ ಅದನ್ನೆಲ್ಲ ಸ್ವೀಕರಿಸಿ, ಶಚೀಂದ್ರರನ್ನು ರತ್ನಾಸನದಲ್ಲಿ ಕುಳ್ಳಿರಿಸಿ, ಆರತಿಯನ್ನೆತ್ತಿ ಹಾರಗಳನ್ನು ಹಾಕಿ ಕಾಣಿಕೆಗಳನ್ನು ಒಪ್ಪಿಸಿದರು. ಪರಸ್ಪರ ಸ್ವಾಗತದಿಂದ ಉಭಯ ದಂಪತಿಗಳೂ ಸಂತುಷ್ಟರಾಗಿ ಕುಶಲ ಪ್ರಶ್ನಾದಿಗಳಿಂದ ಒಬ್ಬರನ್ನೊಬ್ಬರು ಗೌರವಿಸಿದರು.

ನಹುಷನು ಹೇಳಿದನು : “ಇಂದ್ರ, ನೀನು ಬಂದುದು ಬಹು ಸಂತೋಷವಾಯಿತು. ಈ ಶಿಬಿಕೋತ್ಸವವನ್ನು ಪೂರೈಸಿಕೊಂಡು ನಾನೂ ವಿರಜಾದೇವಿಯೊಡನೆ ವಾನಪ್ರಸ್ಥಕ್ಕೆ ತೆರಳುವೆನು. ನೀನು ನಿನ್ನ ಇಂದ್ರಾಧಿಪತ್ಯವನ್ನು ನಿರಾತಂಕವಾಗಿ ವಹಿಸಿಕೊಳ್ಳಬಹುದು.”

ಇಂದ್ರನು ಸಂಕೋಚದಿಂದ ಹೇಳಿದನು : “ಅದು ಕೂಡದು ಎಂದು ಹೇಳುವುದಕ್ಕೆ ನಾನು ಬಂದುದು. ಅಷ್ಟೇ ಅಲ್ಲ ನಿನಗೆ ಶಚೀಪತಿತ್ವವು ಬೇಕೆಂದು ಅಪೇಕ್ಷಿಸಿದೆಯಂತೆ. ಶಚಿಯು ತನ್ನ ಶಚೀತ್ವವನ್ನೆಲ್ಲ ನಿನ್ನ ಅಪ್ಪಣೆಯಾದರೆ ವಿರಜಾದೇವಿಗೆ ಒಪ್ಪಿಸುವಳು. ನಾವು ತಮ್ಮ ಸಖರಾಗಿ ತಮ್ಮ ದಾಸರಾಗಿ ಕೊನೆಯವರೆಗೂ ಇದ್ದುಬಿಡುವೆವು.”

ಅರಸನೂ ವಿರಜೆಯೂ ಶಚೀದೇವಿಯ ಮುಖವನ್ನು ನೋಡಿದರು. “ಅರಸ, ಸಲುಗೆಯಿಂದ ನುಡಿಯುವಾಗ ಏಕವಚನವಲ್ಲದೆ ಬಹುವಚನವು ಶೋಭಿಸದು. ಮಹಾವಿಷ್ಣುವಲ್ಲದೆ ಇನ್ನು ಯಾರೂ ಮಾಡುವುದಕ್ಕಾಗದ ಉಪಕಾರ ಮಾಡಿ, ದೇಶಾಂತರಗತನಾಗಿದ್ದ ಪತಿಯನ್ನೂ ಕರೆಯಿಸಿಕೊಟ್ಟ ನಿನಗಿಂತ ಉಪಕಾರಿ ಯಾರು? ಅದರಿಂದ ನಿನ್ನಲ್ಲಿ ಏಕವಚನವನ್ನು ಉಪಯೋಗಿಸಿದರೆ ಸಹಿಸಿಕೊ. ನಾನು ಇಂದ್ರನೂ ಮಾತನಾಡಿಕೊಂಡೆವು. ನೀನು ಮಾಡಿದಂತೆ ಮಾಡಿ ಹತ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿತ್ತು. ನಮಗೆ ಬುದ್ಧಿಯು ಓಡಲಿಲ್ಲ. ಅದರಿಂದ ನೀನು ಬುದ್ಧಿಯಲ್ಲಿ ಜ್ಯೇಷ್ಠನಾದೆ. ಅದರಿಂದ ಹೇಗೂ ನೀನೇ ಇಂದ್ರಪದವಿಗೆ ಯೋಗ್ಯನು. ನೀನು ಶಚೀಪತ್ನಿತ್ವವನ್ನು ಬಯಸಿದೆಯೆಂದು ನೀನು ಈ ದೇಹವನ್ನು ಅಪೇಕ್ಷಿಸುವೇ ಎಂದು ಹೆದರಿ ನಾನು ನಿನ್ನನ್ನು ಸಾರಿದೆ. ಆದರೆ ಧೀರೋದಾತ್ತನಾದ ನಿನಗೆ ಬೇಕಾದುದು ಹೆಣ್ಣಲ್ಲವೆಂದು ತಿಳಿದು, ಹೆಣ್ಣಾದ ನಾನು ಎಷ್ಟು ಸಂತೋಷಪಟ್ಟೆ ಬಲ್ಲೆಯಾ? ಅಲ್ಲದೆ ದೇವ, ನಿಜವಾಗಿ ಹೇಳುವೆನು, ಹೆಣ್ಣಿಗೆ ಸರ್ವ ಸೌಭಾಗ್ಯವೂ ಒಂದು ತೂಕ. ತಾನೊಲಿದ ಪತಿಯೇ ಒಂದು ತೂಕ. ಹಾಗೆ ಸರ್ವಸೌಭಾಗ್ಯಗಳಿಗಿಂತ ಹೆಚ್ಚಾದ ಪತಿಭಾಗ್ಯವನ್ನೂ ಮಾಂಗಲ್ಯಭಾಗ್ಯವನ್ನೂ ಕರುಣಿಸಿದ ನಿನಗೆ ನಾನು ಏನು ತಾನೆ ಒಪ್ಪಿಸಲಿ? ಅದರಿಂದ ನನ್ನಲ್ಲಿದ್ದ ಇಂದ್ರಾಣೀತ್ವವನ್ನು ನಿನ್ನ ಅಪ್ಪಣೆಯಾದರೆ ವಿರಜಾದೇವಿಗೆ ಒಪ್ಪಿಸುವೆನು. ದೇವತೆಗಳೂ ಋಷಿಗಳೂ ಪಿತೃಗಳೂ ಸೇರಿ ನಿನಗೆ ಅನುಗ್ರಹಿಸಿರುವ ಈ ತ್ರೈಲೋಕ್ಯಾಧಿಪತ್ಯವನ್ನು ಕೊನೆಯವರೆಗೂ ಅನುಭವಿಸು. ಮೂರು ಲೋಕದವರೂ ನಿನ್ನನ್ನು ನಿನ್ನಂತಹ ಸರ್ವತಃ ಸರ್ವಥಾ ಜ್ಯೇಷ್ಠನಾದವನನ್ನು ಧರ್ಮ ಪರಾಯಣನನ್ನು ಅರಸಾಗಿ ಪಡೆದು ಸುಖಿಸುವ ಭಾಗ್ಯವನ್ನು ಹೊಂದಲಿ.”

ಬುಟ್ಟಿಯಿಂದ ಎತ್ತಿಸುರಿದ ಹೂವಿನಂತೆ, ನಿರರ್ಗಳವಾಗಿ ಸಹಜಸುಂದರವಾಗಿ ಹೃದಯದಿಂದ ಬಂದುದಾಗಿರುವ ಶಚೀದೇವಿಯ ಭಾಷಣಗಳನ್ನು ಕೇಳಿ ನಹುಷ ದಂಪತಿಗಳು ಆನಂದಾನಂದವನ್ನು ಪಡೆದರು. ಅದನ್ನು ಪೂರ್ಣವಾಗಿ ಅನುಭವಿಸುವವನಂತೆ ನಹುಷನು ಒಂದು ಗಳಿಗೆ ಸುಮ್ಮನಿದ್ದು ವಿರಜಾದೇವಿಯ ಸಮ್ಮತಿಯನ್ನು ಸನ್ನೆಯಿಂದ ಪಡೆದು ಹೇಳಿದನು: “ಶಚೀದೇವಿ, ನೀನು ಪತಿಭಕ್ತೆಯೆಂದು ನಿನ್ನ ಮೇಲೆ ಅಪಾರವಾದ ಗೌರವವು ಬಂದಿದೆ. ಹಿಂದೆ ನೀನು ಬಂದಾಗ ನಿನ್ನನ್ನು ನಾನು ‘ತಾವು’ ಎಂದು ಸಂಬೋಧಿಸಿದುದು ನಿನಗೆ ನೆನಪಿರಬಹುದು. ಈಗ ನೀನಾಗಿ ದೊಡ್ಡಮನಸ್ಸುಮಾಡಿ, ನಾನು ಅಧಿಕಾರಸ್ಥಾನದಲ್ಲಿ ಮಾಡಬೇಕಾಗಿದ್ದು ಮಾಡಿದ ಕೆಲಸವನ್ನು ಪರಮೋಪಕಾರವೆಂದು ಭಾವಿಸಿ ನನ್ನನ್ನು ನಿನ್ನ ಆಪ್ತೇಷ್ಟರಲ್ಲಿ ಪರಿಗಣಿಸಿ ಗೌರವಿಸಿರುವೆ. ಒಂದು ಗಳಿಗೆ ಮುಂಚೆ ಇಂದ್ರನಿಗೆ ನಾನು ಬಿನ್ನವಿಸಿದುದನ್ನು ಏಕೆ ಮರೆತೆ? ನಾವು ಭೋಗದ ಪರಾಕಾಷ್ಠತೆಯನ್ನು ಅನುಭವಿಸಿದೆವು. ಮನುಷ್ಯದೇಹದಲ್ಲಿ ದಿವ್ಯ ಮನಸ್ಸನ್ನು ಧಾರಣಮಾಡಿ ಮಾನುಷಾನಂದಕ್ಕಿಂತ ಕೋಟಿ ಕೋಟಿ ಹೆಚ್ಚಾದ ಆನಂದವನ್ನು ಅನುಭವಿಸಿದೆವು. ಈಗ ನಮಗೆ ಹೇಗಿರುವುದು ಬಲ್ಲೆಯಾ? ಬೃಹಸ್ಪತಿಯ ಆನಂದವು ಇಂದ್ರಾನಂದಕ್ಕಿಂತ ನೂರು ಮಡಿಯಂತೆ. ಅದು ನಿಜವೆಂದು ಯಮವರುಣರುಪದೇಶಿಸಿದ ಬ್ರಹ್ಮವಿದ್ಯಾನುಭವದಿಂದ ತಿಳಿದಿರಲು ಮತ್ತೆ ನಾನೇಕೆ ಈ ಪದವಿಗೆ ಅಂಟಿಕೊಳ್ಳಲಿ? ಅದರಿಂದ ನಾನು ಅರ್ಥಾತ್ ನಾವು ಮುಂದಿನ ಪಯಣಕ್ಕೆ ಸಿದ್ಧರಾಗಿರುವೆವು. ಈಗ ನಿಮ್ಮಿಂದ ನಮಗೆ ಆಗಬೇಕಾದ ಉಪಕಾರವೊಂದಿದೆ, ಅದು ದ್ವಿಮುಖವಾದುದು. ಅದನ್ನು ಮಾಡಿಕೊಟ್ಟರೆ ಸಾಕು.”

ಶಚೀಂದ್ರರಿಬ್ಬರೂ “ಅಪ್ಪಣೆ ಮಾಡು, ಏನು ಬೇಕಾದರೂ ನಾವು ಮಾಡುತ್ತೇವೆ, ಸಿದ್ಧವಾಗಿದ್ದೇವೆ” ಎಂದರು.

ನಹುಷನು ನಗುತ್ತಾ ಹೇಳಿದನು : “ಶಿಬಿಕೋತ್ಸವವು ಮುಗಿಯುತ್ತಲೂ ಈ ಇಂದ್ರಾಧಿಕಾರವನ್ನು ವಹಿಸಿಕೊಳ್ಳುವುದೊಂದು; ಹಾಗೆಯೇ ನಿನಗೆ ಪ್ರಜಾಪತಿಯು ಕೊಟ್ಟಿರುವ ಬ್ರಹ್ಮವಿದ್ಯೆಯನ್ನು ನನಗೆ ಅನುಗ್ರಹಿಸಿ ಬ್ರಹ್ಮವಿದ್ಯಾ ಸ್ವರೂಪಿಣಿಯಾದ ಉಮಾದೇವಿಯನ್ನು ಪ್ರತ್ಯಕ್ಷಮಾಡಿಕೊಡುವುದೊಂದು, ಈ ಎರಡು ಅಂಗಗಳ ಉಪಕಾರವನ್ನು ಮಾಡಿಕೊಡು.”

ಇಂದ್ರನು ನಗುತ್ತ ಹೇಳಿದನು : “ನಿನಗೆ ಇಂದ್ರಪದವಿಯು ಬಂದಾಗ ಇದೆಲ್ಲವೂ ಬಂದೇ ಇದೆ. ಅದರಿಂದ ಗುರುವಾಗಿ ಅಲ್ಲ. ಸಖನಾಗಿ ಮಿತ್ರನಿಗೆ ಮಿತ್ರನು ಕೊಡುವಂತೆ ಅಥವಾ ಉಪಕೃತನು ತನ್ನ ಉಪಕಾರಸ್ಮರಣದಿಂದ ಕೃತಜ್ಞತೆಯಿಂದ ಒಪ್ಪಿಸುವ ಕಾಣಿಕೆಯಂತೆ ನಿನ್ನಲ್ಲಿರುವುದನ್ನು ನಿನಗೆ ಗುರುತು ಮಾಡಿಕೊಡುವೆನು. ಅದು ಮೊದಲಾಗಲಿ. ಆಮೇಲೆ ಮತ್ತೊಂದನ್ನು ಕುರಿತು ಯೋಚಿಸೋಣ.”

“ಆಗಬಹುದು”

ಇಂದ್ರನು ಹೇಳಿದನು : “ಜಾಗ್ರತ್ ಸ್ವಪ್ನ ಸುಷುಪ್ತಿಗಳು ವೃತ್ತಿಗಳು. ದೇಹವಿರುವವರೆಗೂ ವೃತ್ತಿಗಳುಂಟು. ಆ ವೃತ್ತಿಗಳನ್ನು ಮೀರಿ ನಿರ್ವೃತ್ತಿಯಾಗಿರುವುದೇ ಬ್ರಹ್ಮ. ಅದನ್ನು ತಿಳಿಯುವುದೇ ಬ್ರಹ್ಮವಿದ್ಯೆ. ವೃತ್ತಿಗೆ ಮೀರಿದವನಿಗೂ ವೃತ್ತಿಗಳುಂಟು. ಸೂರ್ಯನನ್ನು ಕಂಡವನಿಗೆ ಸೂರ್ಯನ ಕಿರಣಗಳಲ್ಲೆಲ್ಲಾ ಸೂರ್ಯನೇ ಕಾಣುವಂತೆ ವೃತ್ತಿಸಾಕ್ಷಿಯನ್ನು ಅರಿತವನ ವೃತ್ತಿಗಳು ತಾವು ಹೋದೆಡೆಯಲ್ಲೆಲ್ಲಾ ಆ ಸಾಕ್ಷಿಯನ್ನು ತೋರಿಸುವುದು.ಆಗ ನಾಮರೂಪಗಳು ಹಾದಿ ಬಿಟ್ಟು ಸಚ್ಚಿದಾನಂದವನ್ನು ತೋರಿಸುವುದು. ನೋಡು, ನೋಡು. ನಾನು ಹೇಳುತ್ತಿದ್ದಂತೆಯೇ ನಿನಗೆ ಅನುಭವವು ಬಂತು. ಆ ಅನುಭವವನ್ನು ಸಾಕ್ಷಾತ್ಕರಿಸು. ಆಕೆಯು ದರ್ಶನ ಕೊಡುವಳು. ಅದೋ, ನಿನ್ನ ಕಣ್ಣೆದುರಾಗಿ ನಿಂತಿರುವವಳೇ ಬ್ರಹ್ಮವಿದ್ಯಾ ಸ್ವರೂಪಿಣಿಯಾದ ಉಮಾದೇವಿಯು.”

ಅರಸನು ಉಮಾದರ್ಶನದಿಂದ ಸಂತೃಪ್ತನಾಗಿ ಮಾನಸೋಪಚಾರಗಳಿಂದ ಆರಾಧಿಸಿದನು. ಆಕೆಯು ಪ್ರಸನ್ನಳಾಗಿ ‘ಅರಸಾ, ನಿನ್ನ ಇಂದ್ರಿಯ ವೃತ್ತಿಗಳು ಹರಿದೆಡೆಯಲ್ಲೆಲ್ಲಾ, ಅಷ್ಟೇನು ಪ್ರತಿಬೋಧದಲ್ಲೂ ನಿನಗೆ ನಾಮರೂಪರಹಿತವಾದ ಬ್ರಹ್ಮದ ಸಾಕ್ಷಾತ್ಕಾರವಾಗಲಿ. ಎಚ್ಚರಿಕೆ, ಆನಂದವನ್ನು ಅನುಭವಿಸುವವನು ನೀನಲ್ಲ. ಆನಂದವು ನೀನು. ನೀನು ಆನಂದವು ಪ್ರತ್ಯೇಕವೆಂದುಕೊಂಡಾಗ ಕಾಣುವವಳು ನಾನು” ಎಂದು ರಹಸ್ಯವನ್ನು ಬೋಧಿಸಿ ಕಣ್ಮರೆಯಾದಳು. ಅರಸನಿಗೆ ಕೂಡಲೇ ಎಚ್ಚರವಾಯಿತು.

ಮತ್ತೆ ಇಂದ್ರನು ಮಾತನಾಡಿದನು : “ದೇವ, ಇನ್ನು ಇಂದ್ರತ್ವವನ್ನು ಗ್ರಹಿಸುವ ಮಾತು. ಅದು ನನ್ನೊಬ್ಬನ ವಿಷಯವಲ್ಲ. ಅಗ್ನಿವಾಯುಗಳೂ ದೇವಗುರುವೂ ಗೊತ್ತು ಮಾಡಬೇಕಾದ ವಿಷಯ. ದಯವಿಟ್ಟು ಅವರನ್ನು ಕರೆಸಬೇಕು.”

ಅರಸನು ಆಗಲೆಂದನು. ಮತ್ತೊಂದು ಕ್ಷಣದೊಳಗಾಗಿ ಅವರೂ ಬಂದರು. ಅವರೆಲ್ಲರ ಸಮ್ಮುಖದಲ್ಲಿ ಇಂದ್ರನು ಮತ್ತೆ “ಸರ್ವರೀತಿಯಿಂದಲೂ ನನಗಿಂತ ಶ್ರೇಷ್ಠನಾಗಿರುವ ಈತನೇ ಈ ಕಲ್ಪಾಂತದವರೆಗೂ ಇಂದ್ರನಾಗಿರಲೆಂದು ನನ್ನ ಕೋರಿಕೆ. ಈತನು ಶಿಬಿಕೋತ್ಸವವಾದ ಮೇಲೆ ಇಂದ್ರತ್ವವನ್ನು ಬಿಟ್ಟುಬಿಡಬೇಕು ಎಂದಿರುವನು. ಇದನ್ನು ನೀವೆಲ್ಲ ವಿಮರ್ಶಿಸಬೇಕು” ಎಂದನು.

ಅಗ್ನಿ ವಾಯುಗಳು ಹೇಳಿದರು : “ನಿತ್ಯನೈಮಿತ್ತಿಕ ಸಂಬಂಧದಿಂದ ನೀನು ಜ್ಯೇಷ್ಠನು. ಆದರೆ ಈಗ ನೀನು ಉಪಕೃತನಾಗಿರುವುದರಿಂದ ನಿನ್ನ ಜ್ಯೇಷ್ಠತ್ವವು ಈತನಿಗೆ ಬಂದಿರುವುದು. ಅದರಿಂದ ನೀನು ಸೋಲಬೇಕು. ಆಯಿತು. ಈತನು ಇಂದ್ರನಾದರೆ ನೀನೇನು ಮಾಡುವೆ?”

“ಶಚಿಯು ತನ್ನ ಇಂದ್ರಾಣೀತ್ವವನ್ನು ವಿರಜಾದೇವಿಗೊಪ್ಪಿಸುವಳು. ನಾವಿಬ್ಬರೂ ಈತನ ಸೇವಕರಾಗಿ ಈತನ ಋಣವನ್ನು ತೀರಿಸಿಕೊಳ್ಳುವೆವು.”

“ಪ್ರಭುವಿನ ಅಭಿಮತವೇನು?”

“ನಾನು ಇಂದ್ರನಿಗೆ ಉಪಕಾರವಾಗಲೆಂದು ಯಾವ ಕಾರ್ಯವನ್ನೂ ಮಾಡಲಿಲ್ಲ ನಾನು ಬಿಟ್ಟಕೊಡುವ ಇಂದ್ರತ್ವವನ್ನು ವಹಿಸಿಕೊಳ್ಳಲು ಇನ್ನೊಬ್ಬನು ಸಿದ್ಧನಾಗಿರಬೇಕೆಂದು ಹಾಗೆ ಮಾಡಿದ್ದೇನೆ. ಅದರಿಂದ ಉಪಕಾರದ ಭಾರವೂ ಇಲ್ಲ. ಋಣವೂ ಇಲ್ಲ.”

ದೇವಗುರುವು ಯೋಚಿಸಿದನು : “ಈತನು ಬ್ರಹ್ಮವಿದ್ಯಾರ್ಥವಾಗಿ ಸರ್ವವನ್ನೂ ತ್ಯಾಗ ಮಾಡುವಾಗ, ನಾವು ಅಡ್ಡಿ ಬರುವುದು ಸರ್ವಥಾ ಸರಿಯಲ್ಲ. ಅದರಿಂದ ನಾನು ಹೀಗೆ ಹೇಳುವೆನು : ‘ಶಿಬಿಕೋತ್ಸವವಾಗುವವರೆಗೂ ಶಚೀಂದ್ರರು ಈ ಇಂದ್ರನು ಮಿತ್ರರೂ ಅನುಯಾಯಿಗಳೂ ಆಗಿರಲಿ.’

ಅಗ್ನಿ ವಾಯುಗಳು ‘ಆಗಬಹುದು’ ಎಂದರು. ಶಚಿಯು “ಅದುವರೆಗೂ ವಿರಜಾದೇವಿಯು ಇಂದ್ರಾಣಿಯಾಗಿರಲಿ” ಎಂದಳು. ಆಕೆಯು ಒಪ್ಪಲಿಲ್ಲ. ಆಜ್ಞಾಧಾರಿಗಳಾಗಿರುವ ವಿಚಾರದಲ್ಲಿ ಇನ್ನೂ ಅಷ್ಟು ಮಾತುಕಥೆ ನಡೆಯಿತು. ಕೊನೆಗೆ ಸುರಗುರುವು ಹೇಳಿದಂತೆ ಶಚೀಂದ್ರರು ಇಂದ್ರಮಿತ್ರರೂ ಅನುಯಾಯಿಗಳೂ ಆಗಿರುವುದೆಂದು ಗೊತ್ತಾಯಿತು.

* * * *