==೧೬.ಸೋಲೋ ಗೆಲುವೋ?==
ವೃತ್ರೇಂದ್ರನು ತ್ರೈಲೋಕ್ಯಾಧಿಪತ್ಯವನ್ನು ಪಡೆದ ದಿವಸ. ಇಂದು ಅಮರಾವತಿಯಲ್ಲಿ ಮಾತ್ರವಲ್ಲ. ಭೋಗವತಿಯಲ್ಲಿಯೂ ದೊಡ್ಡ ಹಬ್ಬ. ಹಬ್ಬವೆಂದರೆ ಇನ್ನೇನು? ಸ್ವಚ್ಛಂದ ಭೋಗ. ಎಲ್ಲರೂ ಹೊಸ ತೊಡಿಗೆ ತೊಟ್ಟು ಔತಣದ ಊಟ ಉಂಡು, ಅಮಿತವಾದ ಭೋಗವನ್ನು ನಿರೀಕ್ಷಿಸುತ್ತ ಸಂಜೆಯಾದೀತೆ ಎಂದು ಕಾದಿದ್ದಾರೆ. ಆವೊತ್ತಿನ ವಿಶೇಷವೆಂದರೆ, ಹಿಂದಿನಿಂದ್ರನು ಇವೊತ್ತಿನಿಂದ್ರನಿಗೆ ತನ್ನ ವಿಶ್ವಾಸದ ಕಾಣಿಕೆಯೆಂದು ಜೀವರತ್ನಗಳ ಮಾಲೆಯೊಂದನ್ನು ಒಪ್ಪಿಸಿದ್ದಾನೆ. ಇಂದ್ರನು ಅದನ್ನು ಮೆಚ್ಚಿಕೊಂಡು ಶಚೀಪತಿಯನ್ನು ಭೋಜನಕ್ಕೆ ಕರೆದು ತನ್ನ ಮಗ್ಗುಲಲ್ಲಿ ಕೂರಿಸಿಕೊಂಡು ಊಟ ಮಾಡಿದ್ದಾನೆ. ಇದುವರೆಗೆ ಅಸುರಾಚಾರ್ಯನಿಂದ ಹಿಡಿದು ದಾನವರೆಲ್ಲರಿಗೂ ಹಿಂದಿನ ಇಂದ್ರನು ಏನು ಸಂಚುಮಾಡುವನೋ ಎಂದು ಸಂಶಯವಿದ್ದುದು ಇಂದು ಮಾಯವಾಗಿದೆ. ಊಟದ ಸಮಯದಲ್ಲಿ ಎಲ್ಲರಿಗೂ ಆನಂದವೋ ಆನಂದ. ಶತ್ರುಗಳಾದ ದೇವದಾನವರು ಇಂದು ಪರಮಸ್ನೇಹಿತರಾಗಿದ್ದಾರೆ. ಇಂದಿನ ಆನಂದದಲ್ಲಿ ಹಿಂದಿನ ದ್ವೇಷವನ್ನೇ ಕೊಟ್ಟುಬಿಟ್ಟು ಶುದ್ಧವಾದ ಹೃದಯದಿಂದ, ಎರಡು ನದಿಗಳು ಬೆರೆಯುವಂತೆ ಬೆರೆತಿದ್ದಾರೆ. ಅಸುರಾಚಾರ್ಯನು “ಇದೇನು ಇಂದಿನ ವಿಶೇಷ? ದೇವತೆಗಳು ತಮ್ಮ ವೈಭವವನ್ನೇ ಮರೆತು ನಮಗೆ ದ್ವಿತೀಯರಾಗಿ ಇರಲು ಒಪ್ಪಿಕೊಂಡಂತೆ ಇದೆಯಲ್ಲ? ಅಥವ ವೃತ್ರಪ್ರಭಾವದ ಮೇಲೆ ತಮ್ಮದೇನೂ ಇನ್ನು ನಡೆಯುವುದಿಲ್ಲವೆಂದು ಮನಗಂಡು ಯತ್ನವಿಲ್ಲದೆ ಈ ಸೋಲಿಗೆ ಒಪ್ಪಿಕೊಂಡಿರುವರೋ?” ಎಂದು ಯೋಚಿಸುತ್ತಿದ್ದಾನೆ. ಆದರೂ ಆ ಅಮಲು ಎಲ್ಲೆಲ್ಲಿಗೋ ಎಳೆದುಕೊಂಡು ಹೋಗುವ ಮನಃಪ್ರವಾಹದಲ್ಲಿ ಕೊಚ್ಚಿಹೋಗುತ್ತಾನೆ.
ಸುರಾಚಾರ್ಯನೂ ಯೋಚಿಸುತ್ತಿದ್ದಾನೆ ; “ವೃತ್ರಪ್ರಭಾವವು ಇಳಿವೇಗವಾಗಿದೆ. ದಾನವೇಂದ್ರನ ತೇಜಸ್ಸು ಅಭಿಭೂತವಾಗುತ್ತಿದೆ. ಇಲ್ಲದಿದ್ದರೆ, ಇವರು ಇಂದು ಸೋತಿರುವ ದೇವತೆಗಳ ಅಂತಸ್ತಿಗೆ ಇಳಿಯುತ್ತಿದ್ದರೆ? ಇವೊತ್ತೇ ಏನು ವೃತ್ರನ ಕೊನೆಯ ದಿನ? ಅಬ್ಬಾ ! ಅಸುರರಿಗೆ ಇಂದು ಏನೂ ಬೇಕಾಗಿಲ್ಲ ಬೇಕಾಗಿರುವುದೆಲ್ಲ ಅನ್ನಪಾನಭೋಗ ! ಆಗಲಿ. ಅವರು ಬೇಕಾದುದನ್ನು ಅನುಭವಿಸಲಿ. ಅಯ್ಯೋ ! ದೇವಲೋಕದಲ್ಲಿ ದೇವತೆಗಳಲ್ಲದೆ, ಇನ್ನು ಯಾರೇ ಆಗಲಿ, ತಾವು ಅನುಭವಿಸಿದ ಭೋಗಕ್ಕೆ ಬೆಲೆಯನ್ನು ಕೊಡಬೇಕು ಎಂಬುದನ್ನು ಇವರು ತಿಳಿದಿದ್ದರೆ ಎಷ್ಟು ಚೆನ್ನಾಗಿತ್ತು !” ಎಂದು ಯೋಚಿಸುತ್ತ ವೃತ್ರನ ಕಡೆ ನೋಡುತ್ತಾನೆ. ಅಲ್ಲಿ ವಿಕಾರವಾಗಿ ರುಂಡವಿಲ್ಲದ ಕಬಂಧವೊಂದು ಕುಳಿತಂತೆ ಕಾಣುತ್ತಿದೆ. ಮತ್ತೊಮ್ಮೆ ನೋಡಿದನು. ಇನ್ನೂ ಒಮ್ಮೆ ನೋಡಿದನು. ಸುರಾಚಾರ್ಯನಿಗೆ ಹೇಗೆ ಹೇಗೋ ಆಯಿತು. “ಹಾಗಾದರೆ, ಇಂದೇ ಕೊನೆಯ ದಿನವೇನು? ಇಂದಿಗೆ ವೃತ್ರನ ಅವತಾರ ಪೂರ್ಣವಾಗುವುದೇನು?”
ಸುರಾಚಾರ್ಯನು ನಂಬಲಾರನು. ಆದರೆ ಸುಮ್ಮನಿರುವುದೆಂತು? ಕುಳಿತಿದ್ದ ಕಡೆಯಿಂದಲೇ, ಹಾಗೆಯೇ ಯಾರಿಗೂ ಗೊತ್ತಾಗದಂತೆ ಗುಟ್ಟಾಗಿ ದಿವ್ಯದೃಷ್ಟಿಯನ್ನು ಅವಲಂಬಿಸಿ ಸುತ್ತಲೂ ನೋಡಿದನು. ದಾನವೇಂದ್ರರು ಯಾರ ಮುಖದಲ್ಲೂ ತೇಜಸ್ಸಿಲ್ಲ. “ಹಾಗಾದರೆ ಇವರು ಇಲ್ಲಿ ಇರಲು ಇದೇ ಕೊನೆಯ ದಿನವೇನು” ಎಂದು ಅವನಿಗೆ ಆಶ್ಚರ್ಯವಾಯಿತು. ಹಾಗೆಯೇ ಶಚೀಪತಿಯನ್ನು ನೋಡಿದನು. ಆತನ ತೇಜಸ್ಸು ಒಂದು ಕಡೆ ಮಸುಳಿಸಿ, ಮೇಘಾವೃತವಾದ ಚಂದ್ರನಂತೆ ಡೊಂಕಾಗಿದ್ದರೆ, ಇನ್ನೊಂದುಕಡೆ ಮಧ್ಯಾಹ್ನದ ಸೂರ್ಯನಂತೆ ಪ್ರಚಂಡವಾಗಿದೆ. ಕೂಡಲೇ ಬ್ರಹ್ಮದೇವನ ಮಾತು ನೆನಪಾಯಿತು. “ಸರಿ, ಬ್ರಹ್ಮದೇವನು ಸೂಚಿಸಿದ ಕಾಲವು ಬಂದಂತಿದೆ. ಇನ್ನು ನಾನು ಮೈಯೆಲ್ಲ ಕಣ್ಣಾಗಿರಬೇಕಾದ ಕಾಲ ಬಂದಂತಿದೆ. ಏನಾದರೂ ಮಾಡಿ ಇಂದ್ರನಿಗೆ ಇದನ್ನು ಸೂಚಿಸಿದ್ದರೆ ಚೆನ್ನಾಗಿತ್ತಲ್ಲಾ ! ಅಥವಾ ಎಲ್ಲರ ಹೃದಯದಲ್ಲೂ ಕುಳಿತು, ಎಲ್ಲರನ್ನೂ ಪ್ರೇರೇಪಿಸುವ ಆ ಮಹಾವಿಷ್ಣುವಿಗೆ ನಮಸ್ಕಾರವು ಪ್ರಭುವೆ ! ನೀನು ದೇವತೆಗಳ ಬೆಂಬಲಿಗನು. ನಿನ್ನ ಅನುಗ್ರಹದಿಂದಲೇ ದೇವತೆಗಳು ಮೂರು ಲೋಕಗಳನ್ನೂ ಆಳುತ್ತಿರುವರು. ನಿನ್ನ ಕೃಪೆಯಿಂದಲೇ ವೃತ್ರನಂತಹ ಪರಮಪರಾಕ್ರಮಿಯ ಕೈಗೆ ಸಿಕ್ಕಿದರೂ ದೇವತೆಗಳು ಇನ್ನೂ ಬದುಕಿರುವರು. ಮತ್ತೆ ಕೃಪೆಮಾಡು. ನಿನ್ನ ಭಕ್ತರ ಅಳಿದ ಐಶ್ವರ್ಯವೆಲ್ಲವೂ ಮತ್ತೆ ಹಿಂದಕ್ಕೆ ಬರಲಿ. ಇಂದ್ರನು ಮತ್ತೆ ಇಂದ್ರನಾಗುವಂತೆ ಅನುಗ್ರಹಿಸು. ನಿನ್ನ ಪ್ರಚೋದನವಿಲ್ಲದೆ ಹುಲ್ಲುಕಡ್ಡಿಯೂ ಅಲ್ಲಾಡಲು ಸಾದ್ಯವಿಲ್ಲವೆಂದು ತಿಳಿದು, ಇಂದ್ರನನ್ನು ಕೈಬಿಡಬೇಡವೆಂದು ನಿನ್ನನ್ನು ಪ್ರಾರ್ಥಿಸುವೆನು” ಎಂದು ಕುಳಿತಲ್ಲಿಂದಲೇ ಪ್ರಾರ್ಥಿಸಿದನು. ಮನಸ್ಸು ಹರ್ಷಗೊಂಡು ತನ್ನ ಪ್ರಾರ್ಥನೆಯನ್ನು ದೇವನು ಕೇಳಿದನೆಂದು ಸೂಚಿಸಿತು.
ಭೋಜನವಾಗುತ್ತಿದ್ದ ಹಾಗೆಯೇ ವೃತ್ರನು ಇಂದ್ರನಿಗೆ ಹೇಳಿಕಳುಹಿಸಿದನು. ಆತನನ್ನು ಕರೆಯಿಸಿಕೊಂಡು ತನ್ನ ಸಂತೋಷದ ಆವೇಶದಲ್ಲಿ ದಾನವೇಂದ್ರರನ್ನೆಲ್ಲಾ ಕರೆದು, ‘ನಾಳಿನಿಂದ ಇಂದ್ರನನ್ನು ನನ್ನ ಪಕ್ಕದಲ್ಲಿ ಸಿಂಹಾಸನದಲ್ಲಿ ಕುಳ್ಳಿರಿಸಿಕೊಳ್ಳುವೆನು. ಯಾವ ಯಾವ ಮಾನ ಮರ್ಯಾದೆಗಳು ನನಗೆ ಆಗುತ್ತಿವೆಯೋ ಅವೆಲ್ಲವೂ ಈತನಿಗೆ ಆಗಬೇಕು ಎಂದು, ನನ್ನ ಅಪ್ಪಣೆ ಎಲ್ಲರಿಗೂ ತಿಳಿದಿರಲಿ” ಎಂದನು.
ಆತನಿಗೆ ಆಗಿರುವ ಅತಿ ಸಂತೋಷಕ್ಕೆ ಕಾರಣವನ್ನು ಊಹಿಸಲಾರದೆ, ಇಂದ್ರನು ‘ಈತನೇಕೆ ಹೀಗೆ ಮಾತನಾಡುತ್ತಿರುವನು ?’ ಎಂದು ಸುರಾಚಾರ್ಯನ ಮುಖವನ್ನು ನೋಡಿದನು. ಆತನು ಅದೇನು ಸನ್ನೆ ಮಾಡಿದನೋ, ಇಂದ್ರನು ಎಚ್ಚರಗೊಂಡು, “ಅಪ್ಪಣೆ, ಸನ್ನಿಧಾನವು ಏನು ಬೇಕಾದರೂ ಮಾಡಬಹುದು” ಎಂದು ವಿನಯದಿಂದ ಕೈಮುಗಿದನು.
ವೃತ್ರೇಂದ್ರನಿಗೆ ಆ ವೇಳೆಗೆ ಇನ್ನೂ ಎರಡು ಸಲ ಪಾನವಾಯಿತು. ಅದರ ಮತ್ತು ತಲೆಗೇರಿತು. ಆ ಅಮಲಿನಿಂದ ತೊದಲು ಮಾತನಾಡುತ್ತ. “ಭಲೆ ಇಂದ್ರ, ಇದೆಂತಹ ವಿನಯ ! ಈ ವಿನಯಕ್ಕೂ ಒಲಿಯದಿದ್ದರೆ, ನನ್ನ ಪ್ರಭುತ್ವವೆಂತಹುದು? ನಾಳಿನಿಂದ ನೀನೇ ಇಂದ್ರ ! ನಾನು ನಿನ್ನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ನೋಡುತ್ತ ಕುಳಿತುಕೊಳ್ಳುತ್ತೇನೆ. ನೀನೇನೋ ಚೆನ್ನಾಗಿ ರಾಜ್ಯವಾಳುತ್ತಿದ್ದೆಯಂತೆ ! ನಾಳಿನಿಂದ ನೀನು ಆಳು. ನಾನು ಅದನ್ನು ನೋಡಿಕೊಂಡಿರುತ್ತೇನೆ. ಇದುವರೆಗೆ ನಾನು ಇಂದ್ರನಾಗಿದ್ದೆ ! ನೀನು ಅನಿಂದ್ರನಾಗಿದ್ದೆ. ಅದಕ್ಕಾಗಿಯೇ ಅಲ್ಲ ನಾನು ಹುಟ್ಟಿದುದು? ನಾಳಿನಿಂದ ನೀನು ಇಂದ್ರ ! ನಾನು ಅತೀಂದ್ರ ! ಇಂದ್ರನ ಮೇಲೆ ಇರುವ ಇಂದ್ರ ನಾನು. ಏನು ಹೇಳುತ್ತೀಯೆ ಇಂದ್ರ ? ನಾಳಿನಿಂದ ನೀನು ಇಂದ್ರನಾಗಬೇಕು ತಿಳಿಯಿತೆ ? ಎಲ್ಲಿ ನಮ್ಮ ದಾನವಶಿಲ್ಪಿ ?” ಎಂದು ಮಯಾಸುರನನ್ನು ಕರೆದು “ಇಂದ್ರನ ಸಿಂಹಾಸನಕ್ಕಿಂತ ಒಂದು ಮೊಳ ಹೆಚ್ಚಿನ ಸಿಂಹಾಸನವನ್ನು ನಾಳೆ ಮಾಡಬೇಕು. ನಾಳಿನಿಂದ ನಾನು ಇಂದ್ರನ ಸಿಂಹಾಸನದಲ್ಲಿ ಕುಳಿತುಕೊಳ್ಳುವುದಿಲ್ಲ ತಿಳಿಯಿತೆ ?” ಎಂದು ಅಪ್ಪಣೆ ಮಾಡಿದನು. “ಇಂದ್ರ ! ನೀನು ಇಲ್ಲಿಯೇ ಇರು” ಎಂದು ಅಪ್ಪಣೆ ಮಾಡಿ ತಾನು ಅಮಲಿನಲ್ಲಿ ಹಾಗೆಯೇ ದಿಂಬಿನ ಮೇಲೆ ಒರಗಿದನು.
ಇಂದ್ರನಿಗೆ ಆಶ್ಚರ್ಯವಾಯಿತು. ವೃತ್ರನನ್ನು ಆತನು ಎಷ್ಟೋ ದಿನ ಅಮಲಿನಲ್ಲಿ ಕಂಡಿದ್ದನು. ಯಾವೊತ್ತೂ ಹೀಗೆ ಹೇಳಿರಲಿಲ್ಲ. ಇವೊತ್ತು “ನೀನೇ ಇಂದ್ರ ! ನಾಳಿನಿಂದ ನೀನೇ ಇಂದ್ರ” ಎನ್ನುತ್ತಿದ್ದಾನೆ. ಪ್ರಾರಬ್ಧವೇನಾದರೂ ಇದನ್ನು - ಇವನ ಬಾಯಲ್ಲಿ ನುಡಿದದ್ದನ್ನು ನಿಜ ಮಾಡಿಸುತ್ತದೆಯೋ ? ಏನಾದರೂ ಆಗಲಿ. ಇವನ ಬಾಯಲ್ಲಿ ಬಂದುದು ನಿಜವಾಗಲಿ. ಒಳಗೆ ಹೊರಗೆ ಎಲ್ಲಾ ತುಂಬಿ ಎಲ್ಲಾ ವಿಶ್ವವನ್ನೂ ಆಡಿಸುವ ಶ್ರೀಮನ್ನಾರಾಯಣನ ದಯೆಯಿಂದ ಇದು ನಿಜವಾಗಲಿ ಎಂದು ಮನಸ್ಸಿನಲ್ಲಿಯೇ ಮಹಾವಿಷ್ಣುವಿಗೆ ಪೂಜೆಮಾಡಿ ಕುಳಿತನು. ಬಲಗಣ್ಣೂ ಬಲಭುಜವೂ ಶುಭವಾಗಿ ಅದುರಿತು. ಅಡಗಿದ್ದ ಉತ್ಸಾಹವು ತಾನೇ ತಾನಾಯಿತು. ಮರೆಯಲ್ಲಿದ್ದ ಆಯುಧಗಳೆಲ್ಲ ಮನಸ್ಸಿಗೆ ಗೋಚರವಾಗಿ ತಾವು ಸಿದ್ಧವಾಗಿರುವುದನ್ನು ತೋರಿಸಿಕೊಂಡವು. ಇಂದ್ರನಿಗೆ ಏನು ಮಾಡುವುದು ಎಂಬುದು ಯೋಚನೆಯಾಗಿ ಮಹಾವಿಷ್ಣುವಿನ ಪ್ರೇರಣೆ ಏನಾಗುವುದೋ ಎಂದು ಮೈಯೆಲ್ಲಾ ಕಣ್ಣಾಗಿ ಕುಳಿತನು.
ದಾನವೇಂದ್ರರೂ ವೃತ್ರಾಸುರನು ಹೇಳಿದುದನ್ನು ಕೇಳಿದರು. ಆದರೂ ಅದನ್ನು ಯಾರು ಅಷ್ಟಾಗಿ ಗಮನಿಸಲಿಲ್ಲ. “ಇನ್ನು ನಾನು ಅತೀಂದ್ರನಾಗುವೆನು” ಎಂದು ವೃತ್ರನು ಹೇಳಿದುದನ್ನು ಕೇಳಿ, ಅವರು ಅತೀಂದ್ರಸಿಂಹಾಸನಕ್ಕೆ ಅಪ್ಪಣೆ ಮಾಡಿದುದನ್ನು ಕೇಳಿ ಅವರಿಗೆ ಸಂತೋಷವಾಯಿತು. “ಇಂದ್ರ-ಅತೀಂದ್ರ ! ಅದು ಸರಿ, ಅದೇ ಉಚ್ಛ್ರಾಯದ ಗುರುತು” ಎಂದು ಅವರೆಲ್ಲ ಸಂತೋಷಪಟ್ಟು ಪಾನದ ವೈಭವದ ವಿವಶರಾಗಿ ಎಲ್ಲಿಯವರು ಅಲ್ಲಿಯೇ ಒರಗಿದರು.
ಇಂದ್ರನೊಬ್ಬನೇ ಎಚ್ಚರನಾಗಿರುವವನು. ಮಿಕ್ಕವರೆಲ್ಲರೂ ಮೈ ಮರೆತಿದ್ದಾರೆ. ಆಯುಧಗಳೆಲ್ಲವೂ ತೇಜಸ್ವಿಗಳಾಗಿ ಬಂದು ಎದುರು ನಿಂತಿವೆ. ಆದರೆ, ಮಹಾ ವಿಷ್ಣುವಿನ ಅಪ್ಪಣೆಯಿನ್ನೂ ಬಂದಿಲ್ಲ. “ಸಪರಿವಾರನಾದ ವೃತ್ರನನ್ನು ಈಗ ತುಂಡು ತುಂಡು ಮಾಡಲು ಅವಕಾಶವು ಲಭಿಸಿದೆ. ಆದರೆ ಜಗತ್ಪಾಲಕನಾದ ಮಹಾವಿಷ್ಣುವಿನ ಅಪ್ಪಣೆಯಿಲ್ಲದೆ, ಆ ಕಾರ್ಯವನ್ನು ಮಾಡುವುದು ಹೇಗೆ? ಅಪ್ಪಣೆಯಿಲ್ಲದೆ ವಿಶ್ವರೂಪಾಚಾರ್ಯನನ್ನು ವಧಿಸಿದುದಕ್ಕೆ ಈ ಕೃತ್ಯದ ವಶದಲ್ಲಿ ಇಷ್ಟು ದಿನ ತೊಳಲಬೇಕಾಯಿತು. ಈಗ ಇದನ್ನು ವಧಿಸಿದರೆ ಇನ್ನು ಯಾವ ರೂಪದ ಕಷ್ಟವನ್ನು ಅನುಭವಿಸಬೇಕಾದೀತೋ? ಅದರಿಂದ ಎಲ್ಲರ ಹೃದಯದಲ್ಲೂ ನಿಂತು ಎಲ್ಲವನ್ನೂ ಪ್ರೇರಿಸುವ ಆತನ ಆಜ್ಞೆಯು ದೊರಕಲಿ, ಅಥವಾ ಯಾವ ಆಯುಧಕ್ಕೂ ಸಗ್ಗದ ಭೂತವಿದು. ಹಗಲಲ್ಲಿ ಇದು ಸಾಯುವುದಿಲ್ಲ; ರಾತ್ರಿಯಲ್ಲೂ ಸಾಯುವುದಿಲ್ಲ. ಹೀಗೆ ಆಯುಧಕ್ಕತೀತವಾಗಿ, ಕಾಲಕ್ಕತೀತವಾಗಿರುವ ಈ ಭೂತವನ್ನು ಕೊಲ್ಲುವುದಾದರೂ ಎಂತು ? ಅಲ್ಲದೆ ಕಾರ್ಯವನ್ನು ಆರಂಭಿಸಿದರೆ, ಅದು ಪೂರ್ಣವಾಗಬೇಕು. ಅದಿಲ್ಲದ ಅರೆಗಾಯ ಮಾಡಿ ಕೊಲ್ಲದೆ ಬಿಟ್ಟ ಬೇಟೆಯೇ ಬೇಟೆಗಾರನ ಮೇಲೆ ಬೀಳುವುದೆಂದ ಮೇಲೆ, ಈ ಭೂತಕ್ಕೆ ಅರೆಗಾಯ ಮಾಡಿಬಿಟ್ಟರೆ ಇದು ನನ್ನನ್ನು ಬಿಡುವುದುಂಟೆ?
“ಆಯಿತು. ದೇವಕಾರ್ಯಾರ್ಥವಾಗಿ ಈ ಕೆಲಸ ಮಾಡುವೆನಲ್ಲವೆ? ಆದರೆ ಕಾಲ ಪಕ್ವವಾಗಿಲ್ಲ. ಇದು ಹಗಲು, ಈ ಭೂತವನ್ನು ಸಾಯಿಸುವ ಆಯುಧವು ತಾನೇ ಯಾವುದು ನನ್ನಲ್ಲುಂಟು ? ಅದರಿಂದ ದೇವಕಾರ್ಯವೇ ಆದರೂ ದೇವಸಂರಕ್ಷಕನಾದ ಮಹಾವಿಷ್ಣುವಿಗೆ ಈ ಕೆಲಸವನ್ನು ಒಪ್ಪಿಸಿ, ಆತನ ಆಜ್ಞೆಯನ್ನು ಎದುರು ನೋಡುತ್ತಿರುವೆನು.”
ಅಂತೂ, ಭೂತಕ್ಕೆ ಕೊನೆಯ ಕಾಲ ಬಂದಿರಬೇಕು. ‘ನಾಳಿನಿಂದ ನೀನು ಇಂದ್ರ’ ಎಂದು ಮೂರು ಸಲ ಹೇಳಿದೆ. ಅದರಿಂದ, ಇಂದೇ ಇದರ ವಧವಾಗಬೇಕು. ಕಾಲವು ಯಾವುದು, ಆಯುಧವು ಯಾವುದು ಎಂಬುದನ್ನು ಮಹಾವಿಷ್ಣುವು ನಿರ್ಧರಿಸಲಿ. ಎಷ್ಟೇ ಆಗಲಿ ನಾನು ಹೊಡೆಯುವುದಕ್ಕೆ. ಹೊಡೆಸುವವನು ಮಹಾವಿಷ್ಣು !” ಎಂದು ಇಂದ್ರನು ಕೈಮುಗಿದನು.
ಇಂದ್ರನು ಆ ಮಾತನ್ನಾಡುತ್ತಿದ್ದ ಹಾಗೆಯೇ ವೃತ್ರನು ಕನವರಿಸಿಕೊಂಡನು. “ಸರಿ, ಇಂದ್ರ, ಭಲೇ ! ನಿನ್ನ ಮಾತು ಸರಿ” ; ಇಂದ್ರನು ಮೈಯೆಲ್ಲ ಕಣ್ಣಾಗಿ ವೃತ್ರನಿಂದ ಆ ಮಾತು ಆಡಿಸಿದವರು ಯಾರು ಎಂದು ನೋಡಿದನು. ಇನ್ನು ಯಾರು ! ಮಹಾವಿಷ್ಣು. ಸರಿ, ಎಂದು ಮಾನಸೋಪಚಾರ ಪೂಜೆ ಮಾಡಿ ಶಚೀಪತಿಯು ಇನ್ನೂ ಎಚ್ಚರವಾಗಿ ಕುಳಿತನು.
* * * *