ಮಹಾಕ್ಷತ್ರಿಯ/ಹಾಗಾದರೆ ಸ್ವತಂತ್ರರು ಯಾರು?

==೩೦.ಹಾಗಾದರೆ ಸ್ವತಂತ್ರರು ಯಾರು?==

`ಶಚಿದೇವಿಯು ತನ್ನ ಅರಮನೆಗೆ ಹಿಂತಿರುಗುವ ವೇಳೆಗೆ ಬೃಹಸ್ಪತಿಯು ಬಂದು ಕಾದಿದ್ದನು. ಶಚಿಯು ಆತನು ಬಂದಿರುವನೆಂದು ಅರಿತು ಆತನನ್ನು ಕಾಣಲು ಅವಸರವಸರವಾಗಿ ಹೋದಳು. ಆಕೆಯ ಪ್ರಸನ್ನವಾದ ಮುಖ, ಆಕೆಯ ನಡೆ, ಆಕೆಯ ಸಂತೋಷಗಳೇ ಆಕೆಯು ಗೆದ್ದು ಬಂದಿರುವಳು ಎಂಬುದನ್ನು ಹೇಳುತ್ತಿರಲು, ಗುರುವು ಆಕೆಯನ್ನು ಕೇಳಿದನು : “ಹೋದ ಕೆಲಸವೇನಾಯಿತು?”

`ಆಕೆಯು ಗುರುವಿಗೆ ವಂದನೆ ಮಾಡಿ ಹೇಳಿದಳು : “ನಾನು ಗೆಲುವು ಇಷ್ಟು ಸುಲಭವಾಗಿ ದೊರೆಯುವುದೆಂದುಕೊಂಡಿರಲಿಲ್ಲ. ಅಂತೂ ಸದ್ಯದಲ್ಲಿ ಬದುಕಿದೆ ಎಂದು ಸ್ತ್ರೀಸಹಜವಾದ ಮಾನಾಭಿಮಾನದಿಂದ ಹೇಳಿದಳು.

`ಆಚಾರ್ಯನಿಗೂ ಸಂತೋಷವಾಯಿತು. ಆ ಸಂತೋಷದ ಭರದಲ್ಲಿ “ಏನೇನು ನಡೆಯಿತು, ಹೇಳು” ಎಂದನು. ಆಕೆಗೂ ವಿವರಗಳನ್ನೆಲ್ಲ ಯಾರೊಡನೆಯಾದರೂ ಹೇಳಿಕೊಳ್ಳಬೇಕೆಂಬ ಆತುರವಿತ್ತು. ಹೇಳಿದಳು : “ನಾನೂ ಸಾಮಾನ್ಯಳಂತೆ ಪಲ್ಲಕ್ಕಿಯಲ್ಲಿ ಹೋದೆ. ದರ್ಶನಮಂದಿರದಲ್ಲಿ ರಾಜದಂಪತಿಗಳಿಬ್ಬರೂ ಇದ್ದರು. ನಾನು ವಿರಜಾದೇವಿಯೆಂದು ಕೇಳಿದ್ದೇ ಅಷ್ಟೇ, ನೋಡಿರಲಿಲ್ಲ. ಆಕೆ ನಿಜವಾಗಿಯೂ ಪುಣ್ಯವಂತೆ. ನನಗೆ ಆ ‘ರಾಜಪುಂಗವನೆಂಬ ಆ ಮದ್ದಾನೆಯನ್ನು ಹಿಡಿಯುವುದೆಂತು? ಎಂದು ಮನಸ್ಸು ಬಹಳ ಕಾತರಗೊಂಡಿತ್ತು. ಆದರೆ, ಮಗ್ಗುಲಲ್ಲಿದ್ದ ವಿರಜಾದೇವಿಯನ್ನು ಕಂಡು ‘ಚಿಂತೆಯಿಲ್ಲ. ಮದ್ದಾನೆಯನ್ನು ಬಗ್ಗಿಸುವ ಅಂಕುಶವಿದೆ” ಎಂದುಕೊಂಡೆ. ಹೋಗುತ್ತಿದ್ದ ಹಾಗೆಯೇ, ವಿರಜಾದೇವಿಯು ಆಲಿಂಗನದಿಂದ ಗೌರವಿಸಿ ಮಗ್ಗುಲಲ್ಲಿ ಕುಳ್ಳಿರಿಸಿಕೊಂಡಳು. ನಾನು ‘ದೇವೇಂದ್ರನಿಗೆ ಜಯವಾಗಲಿ !’ ಎಂದು ಗಂಡನಿಗೆ ಹರಕೆ ಹೊತ್ತೆ. ಆ ಹರಕೆಯು ಎಲ್ಲವನ್ನೂ ಸುಲಭ ಮಾಡಿತು.”

`“ಹಾಗಾದರೆ, ನೀನು ಆತನಲ್ಲಿಯೂ ಇಂದ್ರಪತ್ನಿಯೆಂದೇ ಸಾಧಿಸಿ ಬಂದೆ?”

`“ಇರುವುದನ್ನು ಹೇಳಿಕೊಳ್ಳುವುದಕ್ಕೆ ನಾಚಿಕೆಯೇನು? ಹಾಗೆಂದು ನಾನು ದೇವಸಭೆಗೂ ಅವಮರ್ಯಾದೆ ಮಾಡಲಿಲ್ಲ. ದೇವಸಭೆಯು ಶಚಿಯು ಇಂದ್ರನನ್ನು ತ್ರಿಕರಣಪೂರ್ವಕವಾಗಿ ಸೇವಿಸಬೇಕೆಂದು ಮಾಡಿರುವ ನಿರ್ಣಯವು ನಮ್ಮೆಲ್ಲರಿಗೂ ಶಿರೋಧಾರ್ಯವಾದುದು’ ಎಂದೇ ಆರಂಬಿಸಿದೆ.”

`“ಸರಿ, ಇಂದ್ರನನ್ನು ಆರಾಧಿಸಲು ನೀನು ಯಾವಾಗಲೂ ಸಿದ್ಧಳು. ಆದರೆ ತಾತ್ಕಾಲೀನನಾದ ಈ ಇಂದ್ರನನ್ನಲ್ಲ. ಶಾಶ್ವತನಾದ ಆ ಇಂದ್ರನನ್ನು ಸರಿ, ಮುಂದೆ?”

`“ನಾನು ಇಂದ್ರನನ್ನು ಪತಿಯೆಂದು ವರಿಸಿ, ಆತನಿಗೆ ನೆರಳಿನಂತೆ ಇದ್ದವಳು. ಆತನು ನನಗೂ ಹೇಳದೆ ಹೊರಟುಹೋಗಿರುವನು. ಅದರಿಂದ ಆತನನ್ನು ಧರ್ಮಶಾಸ್ತ್ರದಲ್ಲಿ ಹೇಳಿರುವಷ್ಟು ಕಾಲ ನಿರೀಕ್ಷಿಸಲು ಅಪ್ಪಣೆಕೊಡಬೇಕು, ಎಂದು ಪ್ರಾರ್ಥಿಸಿಕೊಂಡೆ. ಆತನ ಮುಖದಿಂದ ಇಂಗಿತವನ್ನು ನಿರ್ಣಯಿಸುವುದಾದರೆ ಆತನು ನಾನು ಪರಪತ್ನಿ ಎಂಬುದನ್ನು ಚೆನ್ನಾಗಿ ಮನಗಂಡಿರಬೇಕು. ಆತನು ಉದಾತ್ತನಾಗಿ, ಸಮಚಿತ್ತನಾಗಿ, ‘ಆಗಬಹುದು, ಅಷ್ಟೇ ಅಲ್ಲ, ಹುಡುಕು, ಹುಡುಕಿಸು' ಎಂದು ಅಪ್ಪಣೆಯನ್ನೂ ಕೊಟ್ಟು ನನ್ನನ್ನು ಬೀಳ್ಕೊಟ್ಟನು. ವಿರಜಾದೇವಿಯು ಮಂಗಳ ದ್ರವ್ಯಗಳನ್ನೂ ಫಲತಾಂಬೂಲವನ್ನು ಕೊಟ್ಟು ಕಳುಹಿಸಿಕೊಟ್ಟಳು.”

`“ಸರಿ, ಮೊದಲನೆಯ ಅಡ್ಡಿಯನ್ನು ದಾಟಿಯಾಯ್ತು.”

`“ಎಂದರೆ ?”

`“ಎಂದರೆ ಇಂದ್ರನನ್ನು ಹುಡುಕಿಸಿ ಕರೆತರುವುದು.”

`ಆಚಾರ್ಯನು ನಿಟ್ಟುಸಿರುಬಿಟ್ಟನು : “ದೇವಿ, ಇಂದ್ರನು ಹಿಂತಿರುಗಿ ಬಂದರೆ ನಿನಗೊಬ್ಬಳಿಗೇ ಸಂತೋಷವೆಂದುಕೊಂಡಿದ್ದೀಯಾ ? ನಿನ್ನಷ್ಟಲ್ಲವಾದರೂ, ಹೆಚ್ಚು ಸಂತೋಷವು ನನಗಾಗುವುದು, ಏಕಾಂತದಲ್ಲಿ ನನ್ನನ್ನು ನಾನು ಎಷ್ಟು ಹಳಿದುಕೊಂಡಿದ್ದೇನೆ ಬಲ್ಲೆಯಾ? ಆ ದಿನ ಇಂದ್ರಸಭೆಯಲ್ಲಿ ನಾನು ಒಂದು ರೆಪ್ಪೆ ಹೊಡೆಯುವಷ್ಟು ಕಾಲ ನಿರ್ವಿಕಾರನಾಗಿದ್ದಿದ್ದರೆ ಇದೊಂದು ಸಂಭವಿಸುತ್ತಿರಲಿಲ್ಲ. ಆ ದಿನ ನನಗೆ ಏನೋ ಆಗಿ ಇಂದ್ರನು ನನ್ನ ವಿಚಾರದಲ್ಲಿ ತಿರಸ್ಕಾರವನ್ನು ವಹಿಸಿರುವನು ಎನ್ನಿಸಿತು. ಅಗೋಚರವಾಗಿ ಹೊರಟುಹೋದೆ. ಅದರಿಂದ ಈ ಅನರ್ಥಪರಂಪರೆಯೆಲ್ಲ ಸಂಭವಿಸಿತು. ಈ ಅನರ್ಥಗಳನ್ನೆಲ್ಲ ತಿದ್ದುಕೊಳ್ಳಬೇಕು ಎಂದು ನಾನು ಎಷ್ಟು ಪ್ರಯತ್ನಿಸಿದ್ದೇನೆ ಬಲ್ಲೆಯಾ ? ಅಗ್ನಿ ವಾಯುಗಳನ್ನು ಕರೆದು ಕೇಳು. ಅಂದ ಹಾಗೆಯೇ ನನಗೆ ಮರೆತೇ ಹೋಗಿತ್ತು. ಅವರಿಬ್ಬರೂ ನನ್ನ ಹಾದಿಯನ್ನು ನೋಡುತ್ತ ಮಂದಿರದಲ್ಲಿ ಕುಳಿತಿದ್ದಾರೆ. ಅವರನ್ನು ಇಲ್ಲಿಗೇ ಕರೆಸಬಾರದೇಕೆ ?”

`“ಯಾರು ಬೇಡವೆಂದರು ? ಬರಮಾಡಿ.”

`ಆಚಾರ್ಯನು ಧ್ಯಾನಿಸಿದನು. ಅಗ್ನಿ ವಾಯುಗಳು ಬಂದಿರುವರೆಂದು ಪ್ರಹರಿಯು ತಿಳಿಸಿದಳು. ಮತ್ತೊಂದು ಗಳಿಗೆಯಲ್ಲಿ ಅವರೂ ಅಲ್ಲಿಗೆ ಬಂದರು. ಆಚಾರ್ಯನು ಅವರನ್ನು ಕಂಡು ಸಂತೋಷದಿಂದ “ಅಗ್ನಿ ವಾಯು, ಶಚಿಯು ಗೆದ್ದು ಬಂದಿರುವಳು. ಇನ್ನು ಇಂದ್ರನನ್ನು ಹುಡುಕುವುದು, ಬರಮಾಡುವುದು ನಮ್ಮ ಕೆಲಸ” ಎಂದನು. ಅಗ್ನಿ ವಾಯುಗಳು ಆತನ ಸಂತೋಷದಲ್ಲಿ ಭಾಗಿಗಳಾದರೂ ಆತನ ಉತ್ಸಾಹವು ಅವರಿಗಿರಲಿಲ್ಲ.

ಅವರು ಕೇಳಿದರು : ‘ಎಲ್ಲಕ್ಕಿಂತ ಮೊದಲು ಹೇಳಿ. ಈಕೆಯನ್ನು ಈಗಿನ ಇಂದ್ರನು ಹಿಂದಿನ ಇಂದ್ರನ ಪತ್ನಿಯೆಂದು ಒಪ್ಪಿಕೊಂಡನೋ?”

ಆಚಾರ್ಯನು ಹೇಳಿದನು. ಆ ನುಡಿಯಲ್ಲಿ ಸಂತೋಷವು ತುಂಬಿತ್ತು. “ಅಷ್ಟೇ ಅಲ್ಲ. ಆತನನ್ನು ಹುಡುಕು, ಹುಡುಕಿಸು, ಎಂದೂ ಅಪ್ಪಣೆ ಕೊಟ್ಟಿರುವನಂತೆ.”

“ನಿಜವೆ?”

“ಹೌದು”

“ಹಾಗಾದರೆ, ಆತನು ತನ್ನ ಹಾನಿಯನ್ನು ಮನಗಂಡಿರಬೇಕು.”

“ಸಂದೇಹವಿಲ್ಲ.”

“ಹಾಗಾದರೆ ಪೂರ್ವದ ಇಂದ್ರನು ಬಂದರೂ ಈತನಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕಾದುದು ನಮ್ಮ ಕಾರ್ಯ.”

“ಹೌದು, ಈ ಕಾರ್ಯವನ್ನು ನಾವು ತಪ್ಪದೆ ಮಾಡಬೇಕು. ಅದಿರಲಿ, ಈಗ ಇಂದ್ರನು ಇರುವ ಸ್ಥಳವನ್ನು ಕಂಡುಹಿಡಿಯಬೇಕಲ್ಲಾ”

‘ದೇವ, ನಾವಿಬ್ಬರೂ ತಮ್ಮ ಅಪ್ಪಣೆಯೆಂದಲ್ಲ, ನಮ್ಮ ಸ್ವಂತೇಚ್ಚೆಯಿಂದಲೂ ಹುಡುಕಿದ್ದೇವೆ. ಗಂಡನನ್ನು ಹುಡುಕುವ ಹೆಂಡತಿಯಂತೆ, ಮಕ್ಕಳನ್ನು ಹುಡುಕುವ ಮಾತೆಯಂತೆ, ಮೂರು ಲೋಕಗಳನ್ನು ಹುಡುಕಿದ್ದೇವೆ. ಇನ್ನು ಹೇಗೆ ಹುಡುಕಬೇಕೋ ಅದನ್ನು ತಿಳಿಯದೆ ಇದ್ದೇವೆ, ಏನು ಮಾಡೋಣ?”

ಆಗ ಶಚೀದೇವಿಯು ಹೇಳಿದಳು : “ಆಚಾರ್ಯ, ಇಂದ್ರನು ನನಗೆ ಒಂದು ಮಾರ್ಗವನ್ನು ಹೇಳಿದ್ದನು, ಅದನ್ನು ಈಗ ಮಾಡೋಣವೇ?”

“ಏನು ಹೇಳು ತಾಯಿ.”

“ಅಗ್ನಿ ವಾಯುಗಳಿಗೆ ಸಿಕ್ಕದವರನ್ನು ಉಪಶ್ರುತಿಯಿಂದ ಹಿಡಿಯಬೇಕು ಎಂದಿದ್ದನು.”

ಆಚಾರ್ಯನು ಅದನು ಕೇಳಿ ತಲೆದೂಗಿದನು ; “ಹಾಗಾದರೆ, ವಾಯುವು ನನ್ನ ಬಳಿಗೆ ಬಂದಾಗ ನಾನು ಇದ್ದ ಸ್ಥಳವನ್ನು ಆಕೆಯೇ ತಿಳುಹಿಸಿದಳೋ?

“ಏನೋ ನಾನು ಅದನ್ನು ಕಾಣೆ. ಅಂತೂ ವಾಯುವು ತಮ್ಮನ್ನು ಸಂಧಿಸಿ ಬಂದಾಗ, ನಾನೂ ಇದ್ದೆ. ಆಯಿತು, ಇದನ್ನು ಈಗ ಹೇಗೆ ಅನುಸಂಧಾನ ಮಾಡುವುದು?”

ಆಚಾರ್ಯನು “ನೋಡು, ಚತುರ್ಮುಖ ಬ್ರಹ್ಮನ ಬಳಿ ಇರುವ ಸರಸ್ವತೀ ದೇವಿಯ ಅನುಚರಳು ಉಪಶ್ರುತಿದೇವಿ. ನಾವು ದೇವತೆಗಳು ತೈಜಸದೇಹಿಗಳು. ನಾವು ತೈಜಸಪ್ರಪಂಚಗಳಲ್ಲಿ ಬೇಕಾದುದನ್ನು ಮಾಡಬಲ್ಲೆವು. ಆದರೆ, ವಾಯು ಆಕಾಶ ಪ್ರಪಂಚಗಳಲ್ಲಿ ಕುಂಠಿತಗತಿಗಳಾಗುವೆವು. ಉಪಶ್ರುತಿಯು ಆಕಾಶದಲ್ಲಿ ಅಪ್ರತಿಹತ ಗಮನವುಳ್ಳವಳು. ಸರಿ, ಆಕೆಯನ್ನು ಕರೆದು ಕೇಳೋಣ. ನಾನು ಬ್ರಹ್ಮದೇವನ ಬಳಿಗೇ ಹೋಗಿ ಕೇಳೋಣವೆಂದಿದ್ದೆ” ಎಂದು ಆಸನವನ್ನು ಬಲಿತು ಧ್ಯಾನಗ್ರಸ್ಥನಾದನು.

ಇನ್ನೊಂದು ಕ್ಷಣದಲ್ಲಿ ಉಪಶ್ರುತಿದೇವಿಯು ಆತನಿಗೆ ದರ್ಶನ ಕೊಟ್ಟು “ಆಚಾರ್ಯ, ನನ್ನಿಂದೇನಾಗಬೇಕು?” ಎಂದು ಕೇಳಿದಳು. ಆತನು “ದೇವಿ, ಮೊದಲು ನೀನು ಇಲ್ಲಿರುವವರೆಲ್ಲರಿಗೂ ದರ್ಶನವನ್ನು ಕೊಡಬೇಕು” ಎಂದು ಪ್ರಾರ್ಥಿಸಿದನು. ಆಕೆಯು ಪ್ರಸನ್ನೆಯಾಗಿ ಎಲ್ಲರಿಗೂ ದರ್ಶನವಿತ್ತಳು. ಎಲ್ಲರೂ ಆಕೆಯ ದರ್ಶನ ಮಾಡಿ, ಆಕೆಯ ಅಪ್ಪಣೆ ಪಡೆದು “ದೇವಿ, ಇಂದ್ರನು ಇರುವೆಡೆಯನ್ನು ತಿಳುಹಿಸಿಕೊಡಬೇಕು” ಎಂದು ಪ್ರಾರ್ಥಿಸಿದರು.

ಆಕೆಯು “ಆಗಲಿ ಆದರೆ, ನೀವು, ಆತನನ್ನು ಏನಿದ್ದರೂ ಕನಸಿನಲ್ಲಿ ಕಂಡಂತೆ ಕಾಣುವಿರಿ. ಆತನು ನಿಮ್ಮ ಸ್ಥೂಲಚಕ್ಷುವಿಗೂ ಗೋಚರನಾಗಬೇಕು ಎನ್ನುವುದಿದ್ದರೆ ಆತನನ್ನು ಉಪಬೃಂಹಣ ಮಾಡಬೇಕು” ಎಂದು ಹೇಳಿ, ತಾನು ವೀಣೆಯನ್ನು ತೆಗೆದುಕೊಂಡಳು. ವೀಣೆಯನ್ನು ಬಾರಿಸುತ್ತ ಒಂದು ಮನೆಯನ್ನು ಹಿಡಿದು ಮೀಟು ಹಾಕುತ್ತಾ “ಸರಿ, ಇಂದ್ರನು ಮಾನಸ ಸರೋವರದ ಪದ್ಮಲತೆಗಳಲ್ಲಿ ಒಂದನ್ನು ಆಶ್ರಯಿಸಿ, ಆ ಪದ್ಮನಾಳದಲ್ಲಿ ಕುಳಿತಿರುವನು. ಆತನನ್ನು ಹಿಂಬಾಲಿಸಿದ ಹತ್ಯೆಯು ಆ ಮಾನಸ ಸರೋವರದ ಮೇರೆಯಲ್ಲಿ ಕುಳಿತಿರುವುದು. ಅದು ಜೀರ್ಣವಾಗುವವರೆಗೂ ಆತನು ಈಚೆಗೆ ಬರುವುದಿಲ್ಲ. ನೀವೆಲ್ಲರೂ ದೆವದೇವನಾದ ಮಹಾವಿಷ್ಣುವಿನ ಬಳಿಗೈದು ಬೇಡಿಕೊಳ್ಳಿ. ಆತನು ಇಂದ್ರನಿಗೆ ಹತ್ಯೆ ಕಳೆಯುವ ಉಪಾಯವನ್ನು ಸೂಚಿಸುವನು. ಅದರಂತೆ ಮಾಡಿ ಕೃತಾರ್ಥರಾಗಿ” ಎಂದಳು.

ಎಲ್ಲರೂ “ಅಪ್ಪಣೆ”ಯೆಂದರು.

ಅಗ್ನಿ ವಾಯುಗಳು ಆಕೆಯನ್ನು ಕೇಳಿದರು : “ತಾಯೆ, ನಾವು ಮಾನಸಸರೋವರವನ್ನು ಹುಡುಕಿದೆವು. ನಮಗೆ ಇಂದ್ರನೇಕೆ ಅಲ್ಲಿ ಸಿಕ್ಕಲಿಲ್ಲ ?”

ಉಪಶ್ರುತಿಯು ಹೇಳಿದಳು : “ಅಗ್ನಿಯು ಮೊದಲನೆಯ ಸಲ ಹುಡುಕಲು ಹೋದಾಗ, ನೀರು ತನಗೆ ಮೃತ್ಯುಸ್ಥಾನವೆಂದು ಆತನು ಅಲ್ಲಿಗೆ ಹೋಗಲಿಲ್ಲ. ಮತ್ತೆ ದೇವಗುರುವು ಕಳುಹಿಸಿದಾಗ, ಅಲ್ಲಿ ಆತನು ಹತ್ಯೆಯನ್ನು ಕಾಣಲಿಲ್ಲ. ಇದನ್ನು ಇಂದ್ರನು ತಿಳಿದು, ‘ಈತನಿಗೆ ಸಿಕ್ಕಿದರೆ ಹತ್ಯೆಯನ್ನು ಎದುರಿಸಬೇಕಾಗುವುದು’ ಎಂದು ಈತನಿಗೆ ಸಿಕ್ಕಲಿಲ್ಲ. ವಾಯುವಿಗೂ ಹಾಗೆಯೇ ಆಯಿತು. ಈಗ ನಾನು ಕಂಡುಹಿಡಿದ ಕ್ರಮವನ್ನು ಹೇಳುವೆನು ಕೇಳಿ. ಪ್ರತಿಯೊಂದು ಪ್ರಾಣಿಯು ಹೃದಯದಿಂದಲೂ, ಆಯಾ ಪ್ರಾಣಿಗೆ ವಿಚಿತ್ರವಾದ ಒಂದು ಶಬ್ದತರಂಗವು ಯಾವಾಗಲೂ ಬರುತ್ತಿರುವುದು, ಅದನ್ನು ಮೊದಲು ಗೊತ್ತು ಮಾಡಬೇಕು. ಅನಂತರ ಅದೆಲ್ಲಿರುವುದು ಎಂಬುದನ್ನು ಹುಡುಕಿದರಾಯ್ತು ! ಹೀಗೆ ನಾನು ವೀಣೆಯನ್ನು ಬಾರಿಸುತ್ತಾ ಇಂದ್ರತರಂಗವನ್ನು ಸೃಷ್ಟಿಮಾಡಿದೆನು. ಅನಂತರ ಅದೆಲ್ಲಿರುವುದು ಎಂಬುದನ್ನು ನೋಡಿದೆನು. ಅದಕ್ಕೆ ಸಂವಾದಿಯಾದ ಶಬ್ದವು ಮಾನಸದ ಪದ್ಮನಾಳದಿಂದ ಬಂದಿತು. ಸರಿ, ಅಲ್ಲಿಯೇ ಇಂದ್ರನಿರುವನೆಂದು ಗೊತ್ತುಮಾಡಿದೆನು. ಆಯಿತು. ನಿಮ್ಮಲ್ಲಿ ಯಾರಾದರೂ ಆತನನ್ನು ಕಂಡು ಮಾತನಾಡಬೇಕಾದರೆ ನೆನಪಿರಲಿ. ಮಾನಸ ಸರೋವರವು ಆ ಹತ್ಯೆಯ ದೃಷ್ಟಿಗೆ ಬೀಳದಂತೆ ಅದರ ಸುತ್ತಲೂ ತಿರಸ್ಕರಿಣಿಯನ್ನು ಪ್ರಸಾರಮಾಡಿ, ಅನಂತರ ಉಪಬೃಂಹಣ ಮಾಡಿ, ಆಗ ಆತನ ದರ್ಶನವಾಗುವುದು.”

ಶಚೀದೇವಿಯು ಕೈಮುಗಿದುಕೊಂಡು ಕೇಳಿದಳು - “ತಾಯಿ, ಆತನು ಹಿಂದಿರುಗಿಬರಲು ಇನ್ನೆಷ್ಟು ದಿನವಾಗುವುದು ?”

“ಶಚಿ, ಹತ್ಯೆಯನ್ನು ಕಳೆಯುವವರೆಗೂ ಆತನು ಈಚೆಗೆ ಬರಲಾರನು. ಮಹಾವಿಷ್ಣುವಲ್ಲದೆ ಇನ್ನು ಯಾರೂ ಈ ಹತ್ಯೆಯನ್ನು ಕಳೆಯುವ ಉಪಾಯವನ್ನು ಅರಿಯರು. ಅದರಿಂದ ದೇವಾಚಾರ್ಯನನ್ನು ಮಹಾವಿಷ್ಣುವಿನ ಬಳಿಗೆ ಕಳುಹಿಸು. ನೀನು ಹೋಗಿ ಇಂದ್ರದರ್ಶನ ಮಾಡಿ ಬಾ. ನಿನ್ನ ಮನಸ್ಸಿನಲ್ಲಿರುವ ವ್ಯಥೆಯನ್ನು ನಾನು ಬಲ್ಲೆ. ನೀನೇ ತಿಳಿದರೂ ತಿಳಿಯದಂತಿರುವೆ. ನಹುಷನು ಪರನಾರೀ ಸಹೋದರನು. ಆತನಿಗೆ ನೀನು ಬೇಕಿಲ್ಲ. ಅತನು ಇಂದ್ರಪದವಿಯು ಬೇಡವೆಂದನು. ನೀವು ದುಡುಕಿದಿರಿ. ಇಂದ್ರನು ಅದೃಶ್ಯನಾದರೆ ಇಂದ್ರಾಣಿಯಿರಲಿಲ್ಲವೆ ? ಆಕೆಯೇ ಆತನು ಬರುವವರೆಗೂ ರಾಜ್ಯವಾಳಬೇಕಾಗಿತ್ತು. ಅಷ್ಟರಲ್ಲಿ ಅವಸರಪಟ್ಟು ದೇವಸಭೆಯನ್ನು ಕರೆದು ಮಾನವೇಂದ್ರನನ್ನು ಮಹೇಂದ್ರನನ್ನಾಗಿ ಮಾಡಿದಿರಿ. ಅದಕ್ಕಾಗಿ, ಆತನಿಗೆ ಪ್ರೇರಣೆಮಾಡಿ ಆತನಿಂದ ಅಧಿಕಾರ ಪೂರ್ಣವಾಗಿದೆಯೇ ಎಂದು ಕೇಳಿಸಿದೆವು. ಬೃಹಸ್ಪತಿಯು ಅಲ್ಲಿ ಒಂದು ಗಳಿಗೆ ಯೋಚಿಸಿ ಉತ್ತರ ಕೊಡದೆ ದುಡುಕುವಂತೆ ಮಾಡಿ ಶಚೀಪತಿತ್ವವು ಲಭಿಸುವವರೆಗೂ ಅಧಿಕಾರವು ಪೂರ್ಣವಾಗುವುದಿಲ್ಲ ಎನ್ನಿಸಿ, ಈ ಆಟಗಳನ್ನೆಲ್ಲ ಹೂಡಿದೆವು. ನೀನು ದಿಗಿಲುಪಡಬೇಡ. ಆತನಿಗೆ ಚ್ಯವನ ಮಹರ್ಷಿಯ ಅನುಗ್ರಹವಿದೆ. ಅದು ಆತನನ್ನು ಧರ್ಮಭ್ರಷ್ಟನನ್ನಾಗಿಸುವುದಿಲ್ಲ. ಅದರಿಂದ ನಿನ್ನ ಪಾತಿವ್ರತ್ಯಕ್ಕೆ ಚ್ಯುತಿಯಿಲ್ಲ. ಮುಂದಿನದೆಲ್ಲ ನಿಮ್ಮಿಂದಲೇ ನಡೆಯಬೇಕಾಗುವುದರಿಂದ ನಾನೇನೂ ಹೇಳುವುದಿಲ್ಲ. ತಿರಸ್ಕರಿಣಿಯನ್ನು ಮಾತ್ರ ಮರೆಯಬೇಡಿ. ಇನ್ನು ನಾನು ಬರುವೆನು” ಎಂದು ಉಪಶ್ರುತಿಯು ಎಲ್ಲರಿಗು ಆಶೀರ್ವಾದ ಮಾಡಿ ಅಂತರ್ಧಾನವಾದಳು.

ಬೃಹಸ್ಪತಿಯು ಮತ್ತೆಯೂ ತಾನೇ ಅನರ್ಥಕಾರಣನಾದೆನೆಂದು ಶಚೀದೇವಿಯ ಮುಖವನ್ನು ನೋಡಿದನು. ಅಗ್ನಿವಾಯುಗಳಿಗೆ ಅದು ತಿಳಿಯಿತು. ಆದರೆ ಪತಿ ದರ್ಶನ ಕುತೂಹಲಳಾಗಿದ್ದ ಶಚೀದೇವಿಗೆ ಮಾತ್ರ ಅದು ಗೊತ್ತಾಗಲಿಲ್ಲ.

ಒಂದು ಗಳಿಗೆ ಯಾರೂ ಮಾತನಾಡಲಿಲ್ಲ. ಪ್ರತಿಯೊಬ್ಬರೂ ತಮ್ಮತಮ್ಮ ಯೋಚನೆಯಲ್ಲಿದ್ದರು. ಆಚಾರ್ಯನಿಗೆ ‘ಹಾಗಾದರೆ ಈ ಅನರ್ಥವೂ ತನ್ನಿಂದಲೇ ಆಯಿತೋ? ಮೊದಲಿನಿಂದಲೂ ನಾನೇ ಅನರ್ಥಕಾರಿಯಾದಂತಾಯಿತಲ್ಲ?’ ಎಂದು ಯೋಚನೆ. ಅಗ್ನಿಗೆ ‘ನೋಡಿದೆಯೋ? ತನ್ನ ಪಾಡಿಗೆ ತಾನು ಸುಖವಾಗಿದ್ದ ಮಾನವೇಂದ್ರನಿಗೆ ಆಸೆ ತೋರಿಸಿ ಸ್ವರ್ಗಕ್ಕೆ ಕರೆತಂದು ತಪ್ಪು ದಾರಿ ಹಿಡಿಸಿದಂತಾಯಿತಲ್ಲಾ?’ ಎಂದು ಯೋಚನೆ. ವಾಯುವಿಗೆ, ‘ಉಪಶ್ರುತಿಯ ಮಾತಿನಂತೆ ನಾವು ಯಾರೂ ಸ್ವತಂತ್ರರಲ್ಲ. ನಮ್ಮನ್ನು ಕುಣಿಸುವವನು ಇನ್ನೊಬ್ಬನಿದ್ದಾನೆ ಎಂದ ಮೇಲೆ ನಾವು ನಾವು ಎಂದು ಕುಪ್ಪಳಿಸುವುದಕ್ಕಿಂತ ಇನ್ನೂ ಹುಚ್ಚುತನವು ಉಂಟೆ?’ ಎಂದು ಗಾಢಯೋಚನೆ. ಶಚಿದೇವಿಗೆ ‘ಮೂರು ಲೋಕವಾಳುವ ಇಂದ್ರನನ್ನೂ ಅಂಜಿಸುವ ಹತ್ಯೆಯೆಂದರೆ, ಅದರ ಬಲವಿನ್ನೆಷ್ಟು ಇರಬೇಕು? ಅದನ್ನು ಇಲ್ಲವೆನ್ನಿಸುವುದು ಹೇಗೆ?’ ಎಂದು ಅಗಾಧ ಯೋಚನೆ.

ಒಂದು ಗಳಿಗೆಯಾದ ಮೇಲೆ ಎಲ್ಲರೂ ಸೇರಿ ಇತ್ಯರ್ಥಮಾಡಿದರು: ‘ಅಗ್ನಿ ವಾಯುಗಳ ರಕ್ಷಣೆಯಲ್ಲಿ ತಿರಸ್ಕರಿಣಿಯೊಡನೆ ಶಚಿಯು ಇಂದ್ರನನ್ನು ನೋಡಿ ಬರುವುದು. ಬೃಹಸ್ಪತಿಯು ಬ್ರಹ್ಮಲೋಕಕ್ಕೆ ಹೋಗಿ ಪಿತಾಮಹನ ಅಪ್ಪಣೆ ಪಡೆದು ವೈಕುಂಠಕ್ಕೆ ಹೋಗಿ ಮಹಾವಿಷ್ಣುವಿನ ದರ್ಶನಮಾಡಿ ಇಂದ್ರಶುದ್ಧಿಯ ಉಪಾಯವನ್ನು ತಿಳಿದುಬರುವುದು” ಎಂದು.

* * * *