ಮುನಿಯದಿರಿ ಮುನಿಯದಿರಿ ನಿಮಗೊಂದು ಯುಕ್ತಿಯ ಹೇಳಿಹೆನು
ಅದೆಂತೆಂದಡೆ: ನೀವೆನ್ನ ವಂಶೀಭೂತರಾದ ಕಾರಣ ನಿಮ್ಮ ಹೆಚ್ಚು ಕುಂದು ಎನ್ನದಾಗಿ ನಿಮ್ಮ ಅಸ್ತಿ ನಾಸ್ತಿ ಎನ್ನದಾಗಿ
ನಿಮ್ಮ ಹಾನಿವೃದ್ಧಿ ಎನ್ನದಾಗಿ. ಹಾವ ಹಡದವರು ಬೇಲಿಯ ಹೊಗುವರೆ ಹೋಹುದೆ ಅಯ್ಯಾ ? ವ್ಯಾಧನು ಸೂಸಲ ಚೆಲ್ಲಿ ಜಂತ್ರವ ಹಣ್ಣಿ
ಅಡಿಗಲ್ಲನೊಡ್ಡಿ ಹೋದಬಳಿಕ ಸೂಸಲ ಕಂಪಿಗೆ ಹೆಗ್ಗಣ ಬಂದು ಬಿದ್ದಂತೆ ಬಿದ್ದಿರಲ್ಲಾ ಮಾಯದ ಬಲೆಯಲ್ಲಿ ! ಕೋಪವೆಂಬ ಅಡಗನೊಡ್ಡಿ ತಾಪವೆಂಬ ಅರೆಗಲ್ಲನಿರಿಸಿ ಹುಸಿಯೆಂಬ ಮೀಟುಗವಣೆಯ ಜಂತ್ರಿಸಿ
ಹೊನ್ನು ಹೆಣ್ಣು ಮಣ್ಣೆಂಬ ಅಡಿಗಲ್ಲನೊಡ್ಡಿ ಕೆಡಹಿದನಲ್ಲಾ ನಿಷ್ಕರುಣಿ ಮುಕ್ಕಣ್ಣ ವ್ಯಾಧನು ! ಅದೆಂತೆಂದಡೆ
ಶಿವರಹಸ್ಯದಲ್ಲಿ: "ನಿಸ್ಸಂಗತ್ವಂ ನಿರಾಭಾರೀ ನಿಸ್ಸೀಮಂ ನಿರುಪಾಧಿಕಂ ನಿರ್ದೇಹಂ ನಿರ್ಮಲಂ ನಿತ್ಯಂ ಸತ್ಯಂ ಜಂಗಮಲಕ್ಷಣಂ" ಇಂತೆಂಬ ಶ್ರುತ್ಯರ್ಥವ ಕೇಳದೆ
ಜಂಗಮವಾಗಿ ಸುಳಿವ ಮರುಳುಗಳಿರಾ ಕೇಳಿರೆ
ಇದಕ್ಕೆ ಮತ್ತೆಯೂ ಶ್ರುತಿ: "ಸುಖಂ ಚ ಬಿಂದುಮಾತ್ರೇಣ ದುಃಖಂ ಪರ್ವತ ಏವ ಚ ಹರಿಣೀಪಾದಮಾತ್ರೇಣ ಬಂಧನಂ ತು ಜಗತ್ರಯಂ" ಇಂತೆಂಬ ಶ್ರುತಿಗೊಳಗಾಗದೆ ಹೊನ್ನು ಹೆಣ್ಣು ಮಣ್ಣಿನಾಸೆಯಂ ಬಿಟ್ಟು ಕೋಪ ತಾಪಮಂ ಬಿಟ್ಟು
ಭ್ರಾಂತು ಭ್ರಮೆಯಂ ಬಿಟ್ಟು ಜಂಗಮವಾಗಬೇಕು ಕಾಣಿರೆ ಮರುಳುಗಳಿರಾ. ಇಂತೀ ಷಡುಲೋಭದ ರುಚಿ ಹಿಂಗಿ ಜಂಗಮವಾದಲ್ಲದೆ ಭವ ಹಿಂಗದು ಕಾಣಾ ಗುಹೇಶ್ವರಾ.