15'-30' ಎತ್ತರ ಬೆಳೆಯುವ ಗಿಡ. ಮೂಲತಃ ಭಾರತದ ಸಸ್ಯವಲ್ಲದಿದ್ದರೂ ಈಗ ಇಲ್ಲಿ ಎಷ್ಟೋ ಕಡೆ ಇದನ್ನು ಹಣ್ಣಿಗಾಗಿ ಬೆಳೆಸುತ್ತಾರೆ. ಉಷ್ಣವಾದ ಹವೆ, ಕಪ್ಪುಭೂಮಿ ಮತ್ತು ನೀರಿನ ಸೌಕರ್ಯವಿದ್ದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಅರ್ಧ ಅಂಗುಲ ದಪ್ಪವಾದ ಕಾಂಡದಿಂದ ಅಂಟನ್ನು ತಯಾರಿಸುವರು. ಹೊಸ ಗಿಡಗಳನ್ನು ಗೂಟನೆಟ್ಟು ಬೆಳೆಸುವುದೂ ಇದೆ. ಅಂಜೂರದ ಮರ ಜುಲೈ-ಅಕ್ಟೋಬರ್ ಮತ್ತು ಜನವರಿ-ಮೇ ತಿಂಗಳು ಹೀಗೆ ವರ್ಷದಲ್ಲಿ ಎರಡು ಸಲ ಹಣ್ಣು ಬಿಡುವುದು. ಮೈಸೂರುರಾಜ್ಯದಲ್ಲಿ ಒಂದು ಗಿಡಕ್ಕೆ ಸು. 180-300ರವರೆಗೆ ಹಣ್ಣುಗಳಾಗುತ್ತವೆ. ಗಿಡದ ಮೇಲೆಯೇ ಉಳಿದಿರುವ ಹಣ್ಣುಗಳನ್ನು ಕೊಯ್ಯುತ್ತಾರೆ; ಕೆಳಗೆ ಬಿದ್ದವನ್ನು ಸಂಗ್ರಹಿಸುತ್ತಾರೆ. ಬಿಸಿಲಿನಲ್ಲಿ ಒಣಗಿಸಿದ ಅಂಜೂರಗಳು ಮಾರಾಟಕ್ಕೆ ಸಿದ್ಧವಾಗುತ್ತವೆ. ಈ ಹಣ್ಣಿನಿಂದ ಜಾಮ್, ಮಾದಕಪೇಯ ಮುಂತಾದುವನ್ನು ತಯಾರಿಸುವರು. ಇದೊಂದು ಪೌಷ್ಟಿಕವಾದ ಹಣ್ಣು. ಇದರಲ್ಲಿ ಎ, ಬಿ, ಸಿ ಮತ್ತು ಡಿ ಅನ್ನಾಂಗಗಳು ಇವೆ. ಮಾಂಸವನ್ನು ಬೇಗ ಕುದಿಸಲಿಕ್ಕೆ ಇದರ ಕಾಯಿಯನ್ನು ಸೇರಿಸುವರು. ಇದೊಂದು ಔಷಧೀಯ ವಸ್ತುವೂ ಹೌದು.