ಅಂಟಿಕೆ - ಪಂಟಿಕೆ : ಮಲೆನಾಡಿನಲ್ಲಿ ಕಾಲಕಾಲವೂ ದೀಪಾವಳಿಯ ಬಲಿಪಾಡ್ಯಮಿ ದಿನದಿಂದ ಹಿಡಿದು ಮೂರು ದಿನಗಳವರೆಗೆ (ಪಾಡ್ಯ, ಕರಿ, ವರ್ಷತೊಡಕು) ಅಂಟಿಕೆ-ಪಂಟಿಕೆ ಎಂಬ ಜಾನಪದ ಗೀತಮೇಳಗಳು ಮನೆಮನೆಗೂ ದೀಪಾವಳಿಯ ಬೆಳಕಿನ ದಿವ್ಯಸಂದೇಶವನ್ನು ಒಯ್ಯುತ್ತವೆ. ಮೊದಲ ದಿನ ಹತ್ತಾರು ಜನ ಗುಂಪಾಗಿ ದೇವಾಲಯದಲ್ಲೊ ತುಳಸಿಕಟ್ಟೆಯ ಮುಂದೆಯೊ ಹಣತೆಯೊಂದರಲ್ಲಿ ಜ್ಯೋತಿ ಹಚ್ಚಿ, ಅದನ್ನು ಕುರಿತು ಹೀಗೆ ಹಾಡುತ್ತಾರೆ :ಮಣ್ಣಲ್ಲಿ ಹುಟ್ಟಿದೆ ಮಣ್ಣಲ್ಲಿ ಬೆಳೆದೆಎಣ್ಣೇಲಿ ಕಣ್ಣ ಬಿಟ್ಟಿsದೆಎಣ್ಣೇಲಿ ಕಣ್ಣ ಬಟ್ಟಿsದೆ ಜಗಜ್ಯೋತಿಸತ್ಯದಿಂದುರಿಯೇ ಜಗಜ್ಯೋತಿಹೀಗೆಂದು ಆ ಹಣತೆಗೆ ನಮಿಸಿ, ಅದನ್ನು ಕೈಗೆತ್ತಿಕೊಂಡು, ಆ ಬೆಳಕಿನ ಕುಡಿ ಆರದ ಹಾಗೆ ಅಡಕೆ ಹಾಳೆಯನ್ನು ಮರೆಮಾಡಿಕೊಂಡು, ದೀಪ್ ದೀಪೊಳ್ಗೆ ಎಂದು ಕಾಡು ಮರುದನಿಗೂಡುವಂತೆ ಒಕ್ಕೊರಲಿನಿಂದ ಕೂಗುತ್ತದೀಪ ಹೊಚ್ಚಿದ್ದು, ಧೂಪಾನೇ ಹಾಕ್ಕಿದ್ದುದೀಪಾವಳಿಗೆಂದು ಹೊರಟ್ಟಿದ್ದುಎಂದು ಹಾಡುತ್ತ ಮನೆಯ ಮುಂದೆ ನಿಲ್ಲುತ್ತಾರೆ. ಮಲೆನಾಡಿನ ಮನೆಗಳ ಹೆಬ್ಬಾಗಿಲು ಇನ್ನೂ ಮುಚ್ಚಿರುವಾಗಲೆ,ಬಾಗಿಲ ತೆಗಿರಮ್ಮಾ ಭಾಗ್ಯದ ಲಕ್ಷ್ಮಮ್ಮಜ್ಯೋತ್ಯಮ್ಮನೊಳಗೆ ಕರಕೊಳ್ಳಿಎಂದು ಹಾಡುತ್ತಿರುವಾಗ ಹೆಬ್ಬಾಗಿಲು ತೆರೆಯುತ್ತದೆ.ಅನಂತರ ಗುಂಪು ಮನೆಯ ಜಗುಲಿಯನ್ನೇರಿ ಅರ್ಜುನ ಸ್ವಾಮಿಯ ಹಾಡು, ಉತ್ತರೆ ದೇವಿ ಹಾಡು, ತೆರೆ ಅಳೆಯುವ ಹಾಡು, ಕರು ಅಗುಚುವ ಹಾಡು- ಇತ್ಯಾದಿ ದೀರ್ಘಗೀತೆಗಳನ್ನು ಒತ್ತಾಗಿ ನಿಂತುಕೊಂಡು ಒಕ್ಕೊರಲಿನಿಂದ ಹಾಡುತ್ತಾರೆ. ಹಾಡುಗಳು ಹೀಗೆ ಮಳೆಗಾಲದ ಹೊಳೆಯಂತೆ ತಡೆಯಿಲ್ಲದೆ ಸಾಗುತ್ತಿರಲು, ಮನೆಯಾಕೆ ಜ್ಯೋತಿಗೆ ಎಣ್ಣೆ ಎರೆದು, ಮನೆಯೊಳಗಿಂದ ತಂದ ಹಣತೆಗೆ ಈ ಜ್ಯೋತಿಯಿಂದ ದೀಪ ಹಚ್ಚಿ ದೇವರ ಮನೆಯಲ್ಲಿಟ್ಟು ಕೈಮುಗಿಯುತ್ತಾಳೆ. ಹಾಡುಗಾರರಿಗೆ ಬತ್ತ ಅಕ್ಕಿ ತಾಂಬೂಲ ದುಡ್ಡು ವಿನಿಯೋಗವಾಗುತ್ತದೆ. ಅವರು ಹೊರಡುವಾಗಹೋಗಿ ಬರ್ತೀನಿ ಹೊಸಲೇ ಹೋಗಿ ಬರ್ತೀನಿ ಬಾಗಿಲೆನಾಗಸಂಪಿಗೆಯ ನಡುಮನೆನಾಗಸಂಪಿಗೆಯ ನಡುಮನೆ ದೇವರ ಕೋಣೆಇಂದ್ಹೋಗಿ ಮುಂದೆ ಬರುತೀನಿಎಂದು ಹೇಳಿ ಹೊರಹೊರಡುತ್ತಾರೆ.ಮೂರು ದಿನವಾದ ಮೇಲೆ ಆ ಬತ್ತಿಯನ್ನು ಹಣತೆಯಿಂದ ತೆಗೆದು ಹಲಸಿನ ಮರದ ಕೊಂಬೆಯ ಮೇಲಿಟ್ಟು ಈ ಅಂಟಿಕೆ-ಪಂಟಿಕೆ ತಂಡದವರು ಅದಕ್ಕೆ ಕೈ ಮುಗಿಯುತ್ತಾರೆ.ವಸೂಲಿಯಿಂದ ಬಂದ ಹಣದಲ್ಲಿ ಇದರಲ್ಲಿ ಭಾಗವಹಿಸಿದವರೆಲ್ಲರೂ ಊರಿನವರನ್ನೂ ಆಹ್ವಾನಿಸಿ ಅಂಟಿಕೆ-ಪಂಟಿಕೆ ಔತಣ ಮಾಡಿಕೊಂಡು ವನಭೋಜನ ಮಾಡುತ್ತಾರೆ.(ಡಿ.ಟಿ.ಸಿ.)