ಅಂಟುವಾಳ - ಸ್ಯಾಪಿಂಡೇಸೀ ಕುಟುಂಬಕ್ಕೆ ಸೇರಿದ ಒಂದು ಆರ್ಥಿಕ ಪ್ರಾಮುಖ್ಯವುಳ್ಳ ಸಸ್ಯ (ಸೋಪ್ನಟ್). ಸ್ಯಾಪಿಂಡಸ್ ಜಾತಿಯ ಲಾರಿಫೋಲಿಯಸ್ ಮತ್ತು ಈಮಾರ್ಜಿನೇಟಸ್ ಎಂಬ ಎರಡು ಪ್ರಭೇದಗಳಿಗೆ ಈ ಹೆಸರು ಅನ್ವಯವಾಗುತ್ತದೆ. ಅಂಟುವಾಳ ಭಾರತ, ಶ್ರೀಲಂಕಗಳ ಪರ್ಣಪಾತಿಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಅಲ್ಲದೆ ಇದರ ಕಾಯಿಗಳಿಗಾಗಿ ಗ್ರಾಮಾಂತರ ಪ್ರದೇಶಗಳಲ್ಲಿ, ಮಲೆನಾಡ ತೋಟಗಳಲ್ಲಿ, ಬದುಗಳಲ್ಲಿ ಬೆಳೆಸಲಾಗುತ್ತದೆ.
ಇದು 10-12ಮೀ ಎತ್ತರಕ್ಕೆ ಬೆಳೆಯುವ ಮಧ್ಯಮ ಗಾತ್ರದ ಮರ. ಇದರ ಎಲೆಗಳು ಸಂಯುಕ್ತ ಮಾದರಿಯವು. ಒಂದು ಎಲೆಯಲ್ಲಿ 2-3 ಜೊತೆ ಒರಟಾದ ಅಂಡಾಕಾರದ ಉಪಪತ್ರಗಳಿರುವುವು. ಹೂಗೊಂಚಲುಗಳು ಕಿರುಎಲೆಗಳು ಕಾಂಡ, ಮುಖ್ಯ ಅಥವಾ ರೆಂಬೆಗಳ ತುದಿಯಲ್ಲಿ ಹುಟ್ಟುತ್ತವೆ. ಗೊಂಚಲಿನ ಕೆಲವು ಹೂಗಳು ದ್ವಿಲಿಂಗಿಗಳಾದರೆ ಇನ್ನು ಕೆಲವು ಏಕಲಿಂಗಳಾಗಿರುವುದು ಈ ಮರದ ವೈಶಿಷ್ಟ್ಯ. ಹೂಬಿಡುವ ಕಾಲ ಅಕ್ಟೋಬರ್- ನವೆಂಬರ್. ಫೆಬ್ರವರಿ ವೇಳೆಗೆ ಕಾಯಿ ಬಲಿಯುವುವು.
ಅಂಟುವಾಳ ಹಲವು ಬಗೆಯಲ್ಲಿ ಉಪಯುಕ್ತವಾಗಿದೆ. ಇದರ ಬೀಜದ ತಿರುಳನ್ನು ಶುಂಠಿ, ಬೆಲ್ಲ, ಎಲಚಿ ಬೀಜದೊಂದಿಗೆ ಸೇರಿಸಿ ದಮ್ಮು ರೋಗದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಕಾಯಿಯ ಲೇಪದಿಂದ ಗಂಡಮಾಲೆ ವಾಸಿಯಾಗುತ್ತದೆ. ಇದರ ಕಾಯಿಯನ್ನು ತೇದು ವಿನಿಗರ್ನೊಂದಿಗೆ ಸೇರಿಸಿ ತಲೆಗೆ ಹಚ್ಚಿ ಸ್ನಾನ ಮಾಡಿದರೆ ಹೇನು ನಾಶ. ಕಾಯಿಯ ನಯಚೂರ್ಣವನ್ನು ನಶ್ಯದ ರೀತಿ ಬಳಸಿದರೆ ಮೂರ್ಛೆರೋಗ ಹತೋಟಿಗೆ ಬರುತ್ತದೆ. ಅಂಟುವಾಳದ ಕಾಯಿಯಲ್ಲಿನ ಸಪೋನಿನ್ ಎಂಬ ರಾಸಾಯನಿಕ ಇದರ ನೊರೆಗೆ ಕಾರಣವಾಗಿದೆ. ಆದ್ದರಿಂದ ಕಾಯನ್ನು ನೀರಿಗೆ ಹಾಕಿ ನೆನೆಸಿ, ಲಭಿಸುವ ನೊರೆಯನ್ನು ಬೆಳ್ಳಿ ಆಭರಣ ವಸ್ತುಗಳನ್ನೂ, ತಲೆಗೂದಲನ್ನೂ, ರೇಷ್ಮೆ ಬಟ್ಟೆಗಳನ್ನೂ ಶುಚಿ ಮಾಡಲು ಸಾಬೂನಿನ ಬದಲು ಬಳಸುತ್ತಾರೆ.