ಅಂಟು ದಿಸ್ ಲಾಸ್ಟ್ : ಹತ್ತೊಂಬತ್ತನೆಯ ಶತಮಾನದ ಇಂಗ್ಲಿಷ್ ಗದ್ಯ ಬರಹಗಾರ ಜಾನ್ ರಸ್ಕಿನ್ನನು (1819-1900) ತನ್ನ ಈ ಕೃತಿಗೆ ಮೊದಲು `ಅರ್ಥಶಾಸ್ತ್ರದ ಪ್ರಥಮ ತತ್ವಗಳನ್ನು ಕುರಿತ ಪ್ರಬಂಧಗಳು' ಎನ್ನುವ ಹೆಸರನ್ನು ಕೊಟ್ಟ, ಅನಂತರ ಏಸುಕ್ರಿಸ್ತನ ಒಂದು ದೃಷ್ಟಾಂತಕಥೆಯಲ್ಲಿನ ಒಂದು ಪದವೃಂದವನ್ನು ಬಳಸಿ ಪುಸ್ತಕಕ್ಕೆ 'ಅಂಟು ದಿಸ್ ಲಾಸ್ಟ್' ಎಂದು ನಾಮಕರಣ ಮಾಡಿದನು.
1862ರಲ್ಲಿ ರಚಿತವಾದ ಈ ಕೃತಿಯಲ್ಲಿ ನಾಲ್ಕು ಭಾಗಗಳಿವೆ.
ಸಂಪತ್ತಿನ ನಿಜವಾದ ಅರ್ಥ, ಸಂಪತ್ತಿನ ಗಳಿಕೆಯಲ್ಲಿ ಪ್ರಾಮಾಣಿಕತೆಯ ಮಹತ್ವ-ಇವನ್ನು ವಿವರಿಸುವುದು ಅವನ ಉದ್ದೇಶ. ಅರ್ಥಶಾಸ್ತ್ರಕ್ಕೂ ಅಂತಃಕರಣಕ್ಕೂ ಸಂಬಂಧವಿಲ್ಲ ಎನ್ನುವ ವಾದವನ್ನು ವಿರೋಧಿಸಿ ಕೈಗಾರಿಕೆ ಮತ್ತು ವಾಣಿಜ್ಯಗಳಲ್ಲಿ ಸಹಾನುಭೂತಿ ಮತ್ತು ನ್ಯಾಯದೃಷ್ಟಿ ಅತ್ಯಗತ್ಯ ಎಂದು ಸಾರುತ್ತಾನೆ. ವಾಣಿಜ್ಯ ದೃಷ್ಟಿಯ ಆರ್ಥಿಕತೆಗೂ ರಾಜಕೀಯ ಆರ್ಥಿಕತೆಗೂ ಇರುವ ವ್ಯತ್ಯಾಸವನ್ನು ಒತ್ತಿ ಹೇಳುತ್ತಾ, ವಾಣಿಜ್ಯ ದೃಷ್ಟಿಯ ಆರ್ಥಿಕತೆಯ ಹಣ ಒಂದನ್ನೇ ಸಂಪತ್ತು ಎಂದು ಪರಿಗಣಿಸುತ್ತದೆ, ರಾಜಕೀಯ ಆರ್ಥಿಕತೆಯು ದೇಶದ ಎಲ್ಲರ ಆರ್ಥಿಕ ಕಲ್ಯಾಣಕ್ಕೆ ಮಹತ್ವವನ್ನು ನೀಡುತ್ತದೆ ಎಂದು ವಿವರಿಸುತ್ತಾನೆ.
'ಅತ್ಯಂತ ಅಗ್ಗವಾದ ಮಾರುಕಟ್ಟೆಯಲ್ಲಿ ಕೊಂಡುಕೊ, ಅತ್ಯಂತ ದುಬಾರಿಯಾದ ಮಾರಕುಟ್ಟೆಯಲ್ಲಿ ಮಾರು' ಎನ್ನುವ ವಾಣಿಜ್ಯ ಆರ್ಥಿಕತೆ ಹೃದಯಹೀನ, ಇದರಿಂದ ದೇಶಕ್ಕೆ ಹಾನಿಯೇ ಆಗುತ್ತದೆ ಎಂದು ಪ್ರತಿಪಾದಿಸುತ್ತಾನೆ. ರಸ್ಕಿನ್, ಅರ್ಥಶಾಸ್ತ್ರದ ನಿಜವಾದ ಗುರಿ ಎಲ್ಲರಿಗೂ ಪರಿಪೂರ್ಣವೂ ಸ್ವತಂತ್ರವೂ ಆದ ಜೀವನವನ್ನು ಕಲ್ಪಿಸುವುದು ಎಂದು ಸಾಧಿಸುತ್ತಾನೆ. ಈ ಕೃತಿಯು ಮೊದಲು, ಪ್ರಸಿದ್ಧ ಇಂಗ್ಲಿಷ್ ಕಾದಂಬರಿಕಾರ ಥ್ಯಾಕರೆ ನಡೆಸುತ್ತಿದ್ದ 'ಕಾಲ್ಮ್‍ಹಿಲ್ ಮ್ಯಾಗ್‍ಜಿóೀನ್'ನಲ್ಲಿ ಧಾರವಾಹಿಯಾಗಿ ಪ್ರಾರಂಭವಾಯಿತು; ಆದರೆ ರಸ್ಕಿನಿನ ದೃಷ್ಟಿಕೋನವು ಪತ್ರಿಕೆಯ ಮಧ್ಯಮವರ್ಗದ ಓದುಗರಿಗೆ ಒಪ್ಪಿಗೆಯಾಗಲಿಲ್ಲ. ಅವರ ಪ್ರತಿಭಟನೆಯಿಂದಾಗಿ ಥ್ಯಾಕರೆ ತನ್ನ ಪತ್ರಿಕೆಯಲ್ಲಿ ಇದರ ಪ್ರಕಟಣೆಯನ್ನು ನಿಲ್ಲಿಸಿದ.
ಭಾವನೆಯ ಪ್ರಾಮಾಣಿಕತೆ, ನಿರಾಡಂಬರತೆಯ ಸೊಗಸು, ಘನತೆ, ವಾಗ್ಮಿತೆಗಳು ಬೆರೆತ ಶೈಲಿ-ಇವು ಈ ಕೃತಿಗೆ ಇಂಗ್ಲಿಷ್ ಗದ್ಯ ಸಾಹಿತ್ಯದಲ್ಲಿ ಹಿರಿಯ ಸ್ಥಾನವನ್ನು ನೀಡಿವೆ. ಇದರ ಮುಕ್ತಾಯಭಾಗದ ಉದಾತ್ತ ಭಾವನೆ, ಘನವಾದ ಧೋರಣೆ ಮರೆಯಲಾಗದಂಥವು. ಆರ್ಥಿಕ ತತ್ವಗಳ ವಿಚಾರದಲ್ಲಿ ಕ್ರಾಂತಿಯನ್ನು ಉಂಟುಮಾಡಿ ನೀತಿಶಾಸ್ತ್ರ ಮತ್ತು ಅರ್ಥಶಾಸ್ತ್ರಗಳನ್ನು ಸಮೀಪಕ್ಕೆ ತಂದ ಕೃತಿ ಇದು.
ದಕ್ಷಿಣ ಆಫ್ರಿಕದಲ್ಲಿ ಪ್ರಯಾಣ ಮಾಡುತ್ತಿದ್ದಾಗ ಇದನ್ನು ಓದಿದ ಗಾಂಧೀಜಿಯವರ ಧ್ಯೇಯ ಧೋರಣೆಗಳ ಮೇಲೆ ಈ ಗ್ರಂಥ ಬೀರಿದ ಪ್ರಭಾವ ಸರ್ವವಿದಿತವಾಗಿದೆ. (ನೋಡಿ- ರಸ್ಕಿನ್,-ಜಾನ್)(ಎಲ್.ಎಸ್.ಎಸ್.)