ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತರಜಾಲ ಬ್ಯಾಂಕಿಂಗ್

ಅಂತರಜಾಲ ಬ್ಯಾಂಕಿಂಗ್

 ವಿದ್ಯುನ್ಮಾನ ಬ್ಯಾಂಕಿಂಗ್‍ನಲ್ಲಿ ನಾವು ಇಂದು ಸಾಮಾನ್ಯವಾಗಿ ಕಂಡು ಬರುತ್ತಿರುವುದು ಅಂತರಜಾಲ ಬ್ಯಾಂಕಿಂಗ್ ಸೇವೆಯಾಗಿದೆ. ವೆಬ್ ಬ್ಯಾಂಕಿಂಗ್, ವೈಯಕ್ತಿಕ ಕಂಪ್ಯೂಟರ್ ಬ್ಯಾಂಕಿಂಗ್, ಆನ್-ಲೈನ್ ಬ್ಯಾಂಕಿಂಗ್ ಪದಗುಚ್ಛಗಳೆಲ್ಲವೂ ಅಂತರಜಾಲ ಬ್ಯಾಂಕಿಂಗ್‍ಗೆ ಸಮಾನಾರ್ಥಕ ಪದಗಳಾಗಿವೆ.  ಈ ಸೇವೆ ನೀಡುವ ಬ್ಯಾಂಕುಗಳನ್ನು ವೆಬ್ ಬ್ಯಾಂಕುಗಳೆಂದೂ ಸಹ ಕರೆಯುತ್ತಾರೆ. ಇಂದು ಜಗತ್ತಿನ ಎಲ್ಲ ದೊಡ್ಡ ಬ್ಯಾಂಕುಗಳು ಅಂತರಜಾಲ ಬ್ಯಾಂಕಿಂಗ್ ನ್ನು ಪ್ರಾರಂಭಿಸಿವೆ. ಅಮೆರಿಕ ಹಾಗು ಪಾಶ್ಚಾತ್ಯ ದೇಶಗಳಲ್ಲಿ ಅಂತರಜಾಲ ಬ್ಯಾಂಕಿಂಗ್ ಸರ್ವೇಸಾಮಾನ್ಯವಾಗಿದೆ. ಭಾರತದಲ್ಲಿ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳು, ದೊಡ್ಡ ಖಾಸಗಿ ಬ್ಯಾಂಕುಗಳು, ವಿದೇಶೀ ಬ್ಯಾಂಕುಗಳು ಈ ಸೇವೆಯನ್ನು ನಿಡುತ್ತಿವೆ.

 ಅಂತರಜಾಲ ಎಂದರೆ ಒಂದಕ್ಕಿಂತ ಹೆಚ್ಚು ಕಂಪ್ಯೂಟರ್‍ಗಳಿಗೆ ನೇರ ಸಂಪರ್ಕ ಕಲ್ಪಿಸುವ ವ್ಯವಸ್ಥೆ. ಒಂದು ಕಂಪ್ಯೂಟರಿನಲ್ಲಿ ನಾವು ಮೂಡಿಸುವ ಮಾಹಿತಿಯನ್ನು ನೇರವಾಗಿ ನಾವೇ ಇನ್ನೊಂದು ಕಂಪ್ಯೂಟರಿಗೆ ರವಾನಿಸುವುದು.  ಇದರಲ್ಲಿ ಬರಹದ ಮಾಹಿತಿ, ಚಿತ್ರಗಳ ಮಾಹಿತಿ, ದಾಖಲಿಸಿದ ಹಾಡುಗಳು, ಚಲನ ಚಿತ್ರಗಳು, ಭಾವಚಿತ್ರಗಳು ಎಲ್ಲವನ್ನೂ ಅಂತರಜಾಲ ವ್ಯವಸ್ಥೆಯಲ್ಲಿ ಕುಳಿತಂತೆಯೇ ಕ್ಷಣ ಮಾತ್ರದಲ್ಲಿ ಇನ್ನೊಂದು ಕಂಪ್ಯೂಟರ್ (ಜಗತ್ತಿನಲ್ಲಿ ಅದು ಎಲ್ಲೇ ಇರಲಿ) ಗೆ ರವಾನಿಸಬಹುದು. ಈ ವ್ಯವಸ್ಥೆಯನ್ನು ಉಪಯೋಗಿಸಿಕೊಂಡು ಬ್ಯಾಂಕ್‍ಗಳು ತಮ್ಮ ಗ್ರಾಹಕರಿಗೆ ನಿತ್ಯ ಬ್ಯಾಂಕಿಂಗ್‍ನ ಹಲವಾರು ಸೇವೆಗಳನ್ನು ಈ ಅಂತರಜಾಲದಲ್ಲಿ ಮಾಡಿಕೊಡುತ್ತಿವೆ. ಹೀಗೆ ಎರಡು ಅಥವಾ ಅದಕ್ಕಿಂತ ಹೆಚ್ಚಿನ ವೈಯಕ್ತಿಕ ಕಂಪ್ಯೂಟರುಗಳನ್ನು ಸಂಪರ್ಕ ಜಾಲದ ಮೂಲಕ ಜೋಡಿಸಿ ಎಲ್ಲ ರೀತಿಯ ಮಾಹಿತಿಗಳನ್ನು ರವಾನಿಸಲು ಮಧ್ಯವರ್ತಿಯಾದ ಇನ್ನೊಂದು ಸಾಧನ ಬೇಕು. ಅದನ್ನು `ಸರ್ವರ್' ಎನ್ನುತ್ತಾರೆ. ಇಂಗ್ಲೀಷಿನ ವಲ್ರ್ಡ್‍ವೈಡ್‍ವೆಬ್ ಎಚಿದರೆ ಜಗತ್ತಿನಾದ್ಯಂತ ಸಂಪರ್ಕ ಇರುವ ಜಾಲಬಂಧ ಎಂದರ್ಥ.  ಅಂತರಜಾಲ ಬ್ಯಾಂಕಿಂಗ್ ಸ್ಥಾಪಿಸುವ ಎಲ್ಲ ಬ್ಯಾಂಕ್‍ಗಳು ಈ ಸರ್ವರ್‍ಗಳನ್ನು ತಮ್ಮ ಬ್ಯಾಂಕಿನಲ್ಲಿ ಸ್ಥಾಪಿಸಬೇಕಾಗುತ್ತದೆ. ಅದಕ್ಕೆ ಬೇಕಾದ ತಂತ್ರಾಂಶ ವನ್ನು ಬ್ಯಾಂಕುಗಳು ಹೊಂದಿರುತ್ತವೆ. ತಮ್ಮಲ್ಲಿ ಖಾತೆಯಿರುವ ಅಥವಾ ಖಾತೆ ತೆರೆಯುವ ಗ್ರಾಹಕರಿಗೆ ಬ್ಯಾಂಕುಗಳು ವಿಶಿಷ್ಟವಾದ ಗುರುತಿನ ಸಂಕೇತ ಹಾಗು ಪಾಸುಪದ ಗಳನ್ನು ನೀಡುತ್ತಾರೆ. ಇವುಗಳು ಬೇರೆಯವರಿಗೆ ಗೊತ್ತಾಗದ ಹಾಗೆ ಗ್ರಾಹಕನು ಎಚ್ಚರವಹಿಸಬೇಕು. ತಪ್ಪಿದಲ್ಲಿ ಹಲವಾರು ವಿಧಗಳಲ್ಲಿ ಮೋಸ, ವಂಚನೆ ಪ್ರಕರಣಗಳು ನಡೆಯುವ ಸಾಧ್ಯತೆಗಳಿವೆ.

 ಈ ಅಂತರಜಾಲ ಬ್ಯಾಂಕಿಂಗ್‍ನಿಂದ ಗ್ರಾಹಕನು ಹಲವಾರು ಬ್ಯಾಂಕಿಂಗ್ ಅವಶ್ಯಕತೆಗಳನ್ನು ಪೂರೈಸಿಕೊಳ್ಳಬಹುದು.

1. ತನ್ನ ಖಾತೆಯಲ್ಲಿನ ಶಿಲ್ಕು ಕಂಡುಕೊಳ್ಳಬಹುದು.

2. ಹಣವನ್ನು ರವಾನಿಸಬಹುದು.

3. ಹಲವಾರು ಪಾವತಿಗಳನ್ನು ಮಾಡಬಹುದು.

4. ಬಿಲ್‍ಗಳ ವಸೂಲಿ ಹಾಗು ಪಾವತಿಗಳ ಬಗ್ಗೆ ಪರಿಶೀಲಿಸಬಹುದು.

5. ಚೆಕ್ ಪುಸ್ತಕಗಳ ಬಗ್ಗೆ ಮನವಿ ಸಲ್ಲಿಸಬಹುದು.

6. ತನ್ನ ಖಾತೆಯಲ್ಲಿನ ವಹಿವಾಟನ್ನು ನೋಡಬಹುದು.

7. ಖಾತೆಯ ವಹಿವಾಟಿನ ಪ್ರತಿಯನ್ನು ತನ್ನ ಕಂಪ್ಯೂಟರಿಗೆ ಇಳಿಸಿಕೊಳ್ಳಬಹುದು.

8. ಸಾಲ-ಮುಂಗಡಗಳಿಗೆ ಪಾವತಿ ಮಾಡಬಹುದು.

9. ಬ್ಯಾಂಕ್ ಡ್ರಾಫ್ಟ್, ಬ್ಯಾಂಕ್ ಪೇ ಆರ್ಡರ್ (ಬ್ಯಾಂಕರ್ಸ್ ಚೆಕ್)ಗಳಿಗೆ ಮನವಿ ಸಲ್ಲಿಸಬಹುದು. ಅವರ ಖಾತೆಯಿಂದ ಖರ್ಚುಹಾಕಿ ಬ್ಯಾಂಕ್ ಇವುಗಳನ್ನು ಮನೆಗೆ ತಲುಪಿಸುತ್ತದೆ.

10.  ಹೂಡಿಕೆಗಳ ಬಗ್ಗೆಯೂ ಇದರಿಂದ ಬ್ಯಾಂಕಿಗೆ ಮನವಿ ಸಲ್ಲಿಸಬಹುದು. ಷೇರುಗಳ ಬಗ್ಗೆಯೂ ವ್ಯವಹರಿಸಬಹುದು.

11. ಧ್ವನಿ ಅಂಚೆಯ ವ್ಯವಸ್ಥೆ ಇದ್ದರೆ ನೇರ ನೇರವಾಗಿ ಬ್ಯಾಂಕಿನ ಅಧಿಕಾರಿಗಳೊಡನೆ ಮಾತನಾಡಿ ವ್ಯವಹಾರದ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು.

 

ಇದರಲ್ಲಿ ಭದ್ರತೆಯು ಬಹುಮುಖ್ಯವಾದ ಅಂಶವಾಗಿದೆ. ಗ್ರಾಹಕನು ಯಾವುದೇ ಕಾರಣದಿಂದಲೂ ತನ್ನ ಗುರುತಿನ ಪದ ಮತ್ತು ವಿಶೇಷವಾಗಿ ತನ್ನ ಗುಪ್ತ ಪದವನ್ನು ಬೇರೆಯವರಿಗೆ ತಿಳಿಯದಂತೆ ವ್ಯವಹರಿಸಬೇಕು.  ಅನುಮಾನ ಬಂದಲ್ಲಿ ಆಗಾಗ್ಗೆ ಗುಪ್ತ ಪದವನ್ನು ಬದಲಾಯಿಸಿಕೊಳ್ಳುವು ವ್ಯವಸ್ಥೆಯೂ ಗ್ರಾಹಕರಿಗಿದೆ.

 ಅಮೇರಿಕಾ ಮತ್ತು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಭೌತಿಕ ರೂಪದ ಅಂದರೆ ಕಟ್ಟಡದಲ್ಲಿನ ಬ್ಯಾಂಕೇ ಇಲ್ಲದೆ ಕೇವಲ ಅಂತರಜಾಲ ಬ್ಯಾಂಕುಗಳು ಮಾತ್ರ ಇರುವ ಬ್ಯಾಂಕುಗಳೂ ಇವೆ. ಒಟ್ಟಿನಲ್ಲಿ ಗ್ರಾಹಕರಿಗೆ ಅಂತರಜಾಲ ಬ್ಯಾಂಕಿಂಗ್ ಒಂದು ವಿಶಿಷ್ಟ ಅನುಕೂಲಕರವಾದ ಬ್ಯಾಂಕಿಂಗ್ ಆಗಿದೆ. ಇದು ಯಾವಾಗಲಾದರೂ, ಯಾವ ಸ್ಥಳದಿಂದಲಾದರೂ ಮಾಡಬಹುದಾದ ಬ್ಯಾಂಕಿಂಗ್ ವ್ಯವಹಾರವಾಗಿರುವುದರಿಂದ ಸಮಯದ ಅಭಾವವಿರುವ ಗ್ರಾಹಕರಿಗೆ ಬಹಳ ಪ್ರಯೋಜನಕರವಾಗಿದೆ.   j