ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತರರಾಷ್ಟ್ರೀಯ ಅರ್ಥಶಾಸ್ತ್ರ

ಅಂತರರಾಷ್ಟ್ರೀಯ ಅರ್ಥಶಾಸ್ತ್ರ

 ರಾಷ್ಟ್ರವೊಂದರ ರಾಜಕೀಯ ಎಲ್ಲೆಯನ್ನು ದಾಟುವ ಆರ್ಥಿಕ ವ್ಯವಹಾರಗಳ ಕಾರಣಗಳು, ಸ್ವರೂಪ ಹಾಗೂ ಪರಿಣಾಮಗಳನ್ನೂ ಅವುಗಳನ್ನು ನಡೆಸುವ ವ್ಯವಸ್ಥೆಯನ್ನೂ ಕುರಿತ ಅಧ್ಯಯನವೇ ಈ ಶಾಸ್ತ್ರದ ಉದ್ದೇಶ. ವಿದೇಶೀ ಸಂಚಾರ ಮತ್ತು ವಲಸೆ ಹೋಗುವುದು ಬಂಡವಾಳ ಹಾಗೂ ಇತರ ಉತ್ಪಾದನಾಂಗಗಳ (ಫ್ಯಾಕ್ಟರ್ಸ್ ಆಫ್ ಪ್ರೊಡಕ್ಷನ್) ಅಂತರರಾಷ್ಟ್ರೀಯ ಚಲನೆ, ಸರಕು ಸೇವೆಗಳಲ್ಲಿನ ಆಮದು-ರಫ್ತು ವ್ಯಾಪಾರ-ಇವು ಮುಖ್ಯವಾದ ಅಂತರರಾಷ್ಟ್ರೀಯ ಆರ್ಥಿಕ ವ್ಯವಹಾರಗಳಾಗಿವೆ.

 ಒಂದು ದೇಶದ ಜನ ಪ್ರಪಂಚದ ಬೇರೆ ಭಾಗಗಳಲ್ಲಿ ನೆಲೆಸುವ ದೃಷ್ಟಿಯಿಂದ ವಲಸೆ ಹೋಗುವುದು ಹಿಂದಿನ ಮೂರು ಶತಮಾನಗಳಲ್ಲಿದ್ದಂತೆ ಈ ಶತಮಾನದಲ್ಲಿ ಮುಖ್ಯವಾಗಿರುವುದಿಲ್ಲ. ಆದರೆ ಆರ್ಥಿಕ ಅಥವಾ ಇತರ ಕಾರಣಗಳಿಗಾಗಿ ಜನರ ವಿದೇಶ ಸಂಚಾರ ಬಹುಮಟ್ಟಿಗೆ ಹೆಚ್ಚಿದೆ. ರಾಷ್ಟ್ರಗಳ ಆಧುನಿಕ ಆರ್ಥಿಕಾಭಿವೃದ್ಧಿಯಲ್ಲಿ ವಿದೇಶೀ ಬಂಡವಾಳದ ಮತ್ತು ತಾಂತ್ರಿಕ ಸಹಾಯದ ಪಾತ್ರ ಯಾವತ್ತೂ ಮಹತ್ವಪೂರಿತವಾದುದಾಗಿದೆ. ಪ್ರಪಂಚದ ಒಟ್ಟು ಸರಕುಗಳ ವ್ಯಾಪಾರವೂ ಬೆಳೆದಿದೆ. 1960 ರಲ್ಲಿ ನಡೆದ ಅಂತರರಾಷ್ಟ್ರೀಯ ವ್ಯಾಪಾರದ ಒಟ್ಟು ಬೆಲೆ 12,719 ಕೋಟಿ ಡಾಲರುಗಳ ಬೆಲೆಗೆ ಸಮನಾಗುವಷ್ಟು ಇದ್ದಿತು. ಬ್ಯಾಂಕುಗಳು, ವಿಮಾ ಕಂಪೆನಿಗಳು, ಯಾನವಾಹನ ಕಂಪೆನಿಗಳು _ ಇವುಗಳು ವಿದೇಶೀಯರಿಗೂ ಸೇವೆ ಸಲ್ಲಿಸುತ್ತವೆ. ಹೀಗೆ ಅನೇಕ ರೀತಿಯ ಆರ್ಥಿಕ ವ್ಯವಹಾರಗಳ ಮೂಲಕ ಪ್ರಪಂಚದ ವಿವಿಧ ರಾಷ್ಟ್ರಗಳೊಳಗೆ ನಿಕಟ ಬಾಂಧವ್ಯವಿದೆ. ಈ ಆರ್ಥಿಕ ಬಾಂಧವ್ಯಗಳ ಸವಿವರ ಪರಿಶೀಲನೆಯೇ ಅಂತರರಾಷ್ಟ್ರೀಯ ಅರ್ಥಶಾಸ್ತ್ರದ ಅಧ್ಯಯನದ ವಿಷಯ.

 ರಾಷ್ಟ್ರ ರಾಷ್ಟ್ರಗಳಲ್ಲಿ ವ್ಯಾಪಾರ, ಬಂಡವಾಳ ಚಲನೆ ಇವುಗಳು ಏಕೆ ಉದ್ಭವಿಸುತ್ತವೆ, ರಾಷ್ಟ್ರವೊಂದು ಯಾವ ಸರಕುಗಳನ್ನು ಎಲ್ಲೆಲ್ಲಿಗೆ ಯಾವ ಪ್ರಮಾಣದಲ್ಲಿ, ಯಾವ ಬೆಲೆಗೆ ರಫ್ತು ಮಾಡುವುದು ಎಂಬ ವಿಷಯಗಳು, ವಿವಿಧ ರಾಷ್ಟ್ರಗಳ ಲೇಣೆದೇಣೆಗಳು ಸರಿತೂಗುವ ಬಗೆ: ವಿವಿಧ ರಾಷ್ಟ್ರಗಳ ಹಣಗಳ ಪರಸ್ಪರ ವಿನಿಮಯ, ವಿವಿಧ ಮಾದರಿ ವಾಣಿಜ್ಯ ನೀತಿಗಳು: ವಾಣಿಜ್ಯ ಹಾಗೂ ವಿನಿಯಮ ನಿಯಂತ್ರಣ; ಅಂತರರಾಷ್ಟ್ರೀಯ ಆರ್ಥಿಕ ಸಂಸ್ಥೆಗಳು - ಇವು ಅಂತರರಾಷ್ಟ್ರೀಯ ಅರ್ಥಶಾಸ್ತ್ರ ಪರಿಶೀಲಿಸುವ ಮುಖ್ಯ ವಿಷಯಗಳಾಗಿವೆ. ಈ ಪರಿಶೀಲನೆಯನ್ನು ತಾತ್ವಿಕಮಟ್ಟದಲ್ಲಾಗಲಿ, ವಾಸ್ತವಿಕ ದೃಷ್ಟಿಯಿಂದಾಗಲಿ ನಡೆಸಬಹುದು. ಇವು ಅಂತರರಾಷ್ಟ್ರೀಯ ಅರ್ಥಶಾಸ್ತ್ರದ ಎರಡು ಮುಖ್ಯ ಭಾಗಗಳಾಗಿವೆ.

 ಅರ್ಥಶಾಸ್ತ್ರದ ಸಾಮಾನ್ಯ ತತ್ವಗಳು ದೇಶದ ಆಂತರಿಕ ಆರ್ಥಿಕ ವ್ಯವಹಾರಗಳಿಗೆ ಅನ್ವಯಿಸುವಂತೆ ಅಂತರರಾಷ್ಟ್ರೀಯ ವ್ಯವಹಾರಗಳಿಗೂ ಎಷ್ಟು ಮಟ್ಟಿಗೆ ಅನ್ವಯಿಸುವುವು ಮತ್ತು ಅಚಿತರ ರಾಷ್ಟ್ರೀಯ ಅರ್ಥಶಾಸ್ತ್ರವೆಂದೇ ಪ್ರತ್ಯೇಕವಾದ ಆರ್ಥಿಕ ಮೀಮಾಂಸೆಗೆ ಇರುವ ಸ್ಥಾನಮಾನಗಳೇನು-ಎಂಬುವು ತಾತ್ವಿಕ ಅಧ್ಯಯನದ ಮುಖ್ಯ ಪ್ರಶ್ನೆಗಳಾಗಿವೆ.

ಸಂಪತ್ಸಾಧನಗಳ ಹಂಚಿಕೆಯ ಅಸಮಾನತೆ ಹಾಗೂ ಕೆಲವು ಸರಕುಗಳ ಬೇಡಿಕೆ ವ್ಯಾಪಕವಾಗಿರುವಂತೆ - ಇವು ದೇಶದೊಳಗಿನ ವಿವಿಧ ಭಾಗಗಳೊಳಗೆ ನಡೆಯುವ ಆರ್ಥಿಕ ವ್ಯವಹಾರಗಳಿಗೆ ಹೇಗೊ ಹಾಗೆಯೇ ವಿವಿಧ ರಾಷ್ಟ್ರಗಳೊಳಗೆ ನಡೆಯುವ ವ್ಯಾಪಾರ ಹಾಗೂ ಇತರ ಆರ್ಥಿಕ ವ್ಯವಹಾರಗಳಿಗೂ ತಳಹದಿಯಾಗಿದೆ. ಇವೆರಡರಲ್ಲಿ ಕಾಣಬರುವ ವ್ಯತ್ಯಾಸಗಳು ಗಾತ್ರ ಅಥವಾ ಪ್ರಮಾಣಕ್ಕೆ ಸಂಬಂಧಿಸಿವೆಯೇ ಹೊರತು ಬೇರೆಬೇರೆ ವಿಧಗಳಿಗಲ್ಲ. ಆದ್ದರಿಂದ ಅರ್ಥಶಾಸ್ತ್ರದ ಸಾಮಾನ್ಯ ನಿಯಮಗಳು ಅಂತರರಾಷ್ಟ್ರೀಯ ಆರ್ಥಿಕ ವ್ಯವಹಾರಗಳನ್ನೂ ಸ್ಪಷ್ಟಗೊಳಿಸಬಲ್ಲವು; ಇದಕ್ಕಾಗಿ ಪ್ರತ್ಯೇಕ ಆರ್ಥಿಕ ಮೀಮಾಂಸೆಯ ಅವಶ್ಯಕತೆ ಇಲ್ಲ ಎಂದು ಕೆಲವರ ವಾದವಾಗಿತ್ತು.

ಆದರೆ ಆಧುನಿಕ ಅರ್ಥಶಾಸ್ತ್ರದ ಬೆಳವಣಿಗೆಯಲ್ಲಿ ಅಂತರರಾಷ್ಟ್ರೀಯ ಅರ್ಥಶಾಸ್ತ್ರ ಪ್ರತ್ಯೇಕ ಶಾಖೆಯಾಗಿ ಬೆಳೆದು ಬಂದಿದೆ. ರಾಜಕೀಯ ಪ್ರತ್ಯೇಕತೆ ಮತ್ತು ಸಾಮಾಜಿಕ ಹಾಗೂ ಇತರ ಕಾರಣಗಳಿಂದಾಗಿ ಆಂತರಿಕ ಹಾಗೂ ಅಂತರರಾಷ್ಟ್ರೀಯ ಆರ್ಥಿಕ ವ್ಯವಹಾರಗಳಲ್ಲಿ ಸಾಕಷ್ಟು ಮುಖ್ಯ ಭೇದಗಳಿರುವುದೇ ಇದಕ್ಕೆ ಕಾರಣ. ಒಟ್ಟಿನಲ್ಲಿ ಹೇಳುವುದಾದರೆ, ನೀಡಿಕೆ_ ಬೇಡಿಕೆ ಶಕ್ತಿಗಳು (ಪೊóೀರ್ಸಸ್ ಆಫ್ ಸಪ್ಲೈ ಅಂಡ್ ಡಿಮಾಂಡ್) ಪರಸ್ಪರ ಪ್ರಭಾವಕ್ಕೆ ಅನುಸಾರವಾಗಿ ರಾಷ್ಟ್ರದೊಳಗೆ ಚಲಿಸುವಷ್ಟು ನಿರಾತಂಕವಾಗಿ ಅಂತರರಾಷ್ಟ್ರೀಯ ಕ್ಷೇತ್ರದಲ್ಲಿ ಪರಸ್ಪರ ಕ್ರಿಯಾತ್ಮಕವಾಗಿ ವರ್ತಿಸುವುದಿಲ್ಲ.

ಮೊದಲನೆಯದಾಗಿ ಹೊರದೇಶದ ಬೇಡಿಕೆಯ ಅಥವಾ ನೀಡಿಕೆಯ ಆಧಾರದ ಮೇಲೆ ದೇಶದ ಉತ್ಪನ್ನ ವ್ಯವಸ್ಥೆಯನ್ನು ರಚಿಸುವುದರಲ್ಲಿ ಒಂದು ದೇಶದ ಉದ್ಯಮಿಗಳು ವಿಶೇಷವಾದ ಹೊಣೆಗಾರಿಕೆ ವಹಿಸಬೇಕಾಗುವುದು. ಏಕೆಂದರೆ ಇತರ ದೇಶದ ಬೇಡಿಕೆ-ನೀಡಿಕೆಗಳಲ್ಲಿ ವ್ಯತ್ಯಾಸವುಂಟುಮಾಡುವ ಶಕ್ತಿಗಳು ಇವರ ಉದ್ಯಮಗಳ ಮೇಲೆ ಪ್ರಭಾವ ಹೊಂದಿವೆಯಾದರೂ ಈ ಶಕ್ತಿಗಳ ಮೇಲೆ ಇವರಿಗೆ ಹೆಚ್ಚು ಹತೋಟಿ ಇರುವುದಿಲ್ಲ. ಅಂತರರಾಷ್ಟ್ರೀಯ ಸಾರಿಗೆ, ಸಂಪರ್ಕ ಹಾಗೂ ವ್ಯಾಪಾರ ಸಮಾಚಾರ ವ್ಯವಸ್ಥೆ ಇವುಗಳ ಬಗ್ಗೆಯೂ ಭೌಗೋಳಿಕ ಹಾಗೂ ರಾಜಕೀಯ ಕಾರಣಗಳಿಂದ ವಿಶೇಷ ಏರ್ಪಾಡುಗಳು ಆವಶ್ಯಕ.

ಎರಡನೆಯದಾಗಿ ಭಾಷೆ, ಮತ, ಪದ್ಧತಿಗಳು ಇತ್ಯಾದಿ ಅಂಶಗಳ ಬಗ್ಗೆ ಇರುವ ವೈವಿಧ್ಯ ಮತ್ತು ಪ್ರತಿಯೊಂದು ರಾಷ್ಟ್ರವೂ ನಿರ್ಮಿಸಿರುವ ಕಾನೂನಿನ ನಿರ್ಬಂಧಗಳು-ಇಂಥ ಕಾರಣಗಳಿಂದ ಉತ್ಪಾದನಾಂಗವಾದ ಶ್ರಮ(ಲೇಬರ್) ದೇಶ-ದೇಶಗಳೊಳಗೆ ಸಲೀಸಾಗಿ ಚಲಿಸುವುದಿಲ್ಲ. ಇದರಿಂದ ಪ್ರಪಂಚ ಶ್ರಮ ವಿಭಜನೆ ಪರಿಪೂರ್ಣವಾಗಲು ಸಾಧ್ಯವಿಲ್ಲ. ಆಯಾ ದೇಶದ ಶ್ರಮಬಲ ಹೆಚ್ಚಾಗಿ ಅಲ್ಲಿನ ಸಂಪತ್ತನ್ನು ರೂಢಿಸುವುದರಲ್ಲಿ ತೊಡಗಬೇಕಾಗಿದೆ.

ಮೂರನೆಯದಾಗಿ ಬಂಡವಾಳ ಆಂತರಿಕವಾಗಿ ಒಂದು ದೇಶದೊಳಗೆ ಯಾವ ವಿಭಾಗಕ್ಕಾಗಲಿ, ಉದ್ಯಮಕ್ಕಾಗಲಿ ಚಲಿಸಲು ಇರುವಷ್ಟು ಅವಕಾಶ ಅಂತರರಾಷ್ಟ್ರೀಯ ಕ್ಷೇತ್ರದಲ್ಲಿ ಇರುವುದಿಲ್ಲ. ಈ ಬಗ್ಗೆ ಪ್ರತಿಯೊಂದು ರಾಷ್ಟ್ರಸರ್ಕಾರವೂ ವಿಶೇಷ ಕಾನೂನಿನ ಕಟ್ಟುಪಾಡುಗಳನ್ನು ನಿರ್ಮಿಸಿದೆ. ಅಲ್ಲದೆ, ವಿವಿಧ ಹಣಗಳ ವಿನಿಮಯ ಮತ್ತು ವಿವಿಧ ರಾಷ್ಟ್ರಗಳ ವಾಣಿಜ್ಯನೀತಿ-ಇವುಗಳು ಅಂತರರಾಷ್ಟ್ರೀಯ ಬಂಡವಾಳ ಸಮಸ್ಯೆಯನ್ನು ಒಂದು ವಿಶೇಷ ಸಮಸ್ಯೆಯಾಗಿ ಮಾಡಿವೆ. ಆದ್ದರಿಂದ ಅಂತರರಾಷ್ಟ್ರೀಯ ಬಂಡವಾಳ ಚಲನೆಗೆ ಸಂಬಂಧಿಸಿದಂತೆ ಒಂದು ವಿಶೇಷ ಮೀಮಾಂಸೆ ಅವಶ್ಯಕವಾಗಿ ಬೆಳೆದುಬಂದಿದೆ. ಅಂತರರಾಷ್ಟ್ರೀಯ ಬಂಡವಾಳ ಸಮಸ್ಯೆಯ ಪರಿಹಾರಕ್ಕಾಗಿ ಅನೇಕ ಅಂತರರಾಷ್ಟ್ರೀಯ ಸಂಸ್ಥೆಗಳೂ ಏರ್ಪಾಟಾಗಿವೆ.

ನಾಲ್ಕನೆಯದಾಗಿ, ಅಂತರರಾಷ್ಟ್ರೀಯ ವ್ಯಾಪಾರ ಆಯಾ ರಾಷ್ಟ್ರ ಅನುಸರಿಸುವ ವಾಣಿಜ್ಯ ನೀತಿಗೆ ಅನುಸಾರವಾಗಿ ನಡೆಯತಕ್ಕದ್ದಾಗಿದೆ. ಸುಂಕ ನೀತಿ, ಸುಂಕ ದರಗಳು, ಆಮದು ರಫ್ತುಗಳ ಬಗ್ಗೆ ಇತರ ನಿಯಂತ್ರಣ ಕ್ರಮಗಳು ಅಥವಾ ಒಪ್ಪಂದಗಳು - ಇತ್ಯಾದಿ ವಿಷಯಗಳ ಬಗ್ಗೆ ಪ್ರತಿಯೊಂದು ರಾಷ್ಟ್ರವೂ ಅದರ ಹಿತಕ್ಕೆ ಅನುಸಾರವಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಸ್ವಾತಂತ್ರ್ಯ ಪಡೆದಿದೆ. ಇದರಿಂದಾಗಿ ಉದ್ಭವಿಸುವ ಸಮಸ್ಯೆಗಳು ಆಂತರಿಕ ವ್ಯಾಪಾರದಲ್ಲಿ ಸಾಮಾನ್ಯವಾಗಿ ಏಳುವುದಿಲ್ಲ. ಹೀಗೆ ಅಂತರರಾಷ್ಟ್ರೀಯ ವಾಣಿಜ್ಯ ನೀತಿ ಮತ್ತು ಇದಕ್ಕೆ ಸಂಬಂಧಪಟ್ಟ ಸಂಸ್ಥೆಗಳ ಹಾಗೂ ಸಮಸ್ಯೆಗಳ ಪರಿಶೀಲನೆ ಅಂತರರಾಷ್ಟ್ರೀಯ ಅರ್ಥಶಾಸ್ತ್ರದ ಒಂದು ಮುಖ್ಯ ಭಾಗವಾಗಿದೆ.

ಐದನೆಯದಾಗಿ, ಅಂತರರಾಷ್ಟ್ರೀಯ ವ್ಯಾಪಾರ ವ್ಯವಹಾರಗಳು ಬೇರೆಬೇರೆ ಹಣಗಳ ಮಾಧ್ಯಮದ ಮೂಲಕ ನಡೆಯಬೇಕಾಗಿರುವುದರಿಂದ ಈ ವ್ಯವಹಾರಗಳಿಗೂ ಆಂತರಿಕ ಆರ್ಥಿಕ ವ್ಯವಹಾರಗಳಿಗೂ ಇನ್ನೊಂದು ಮುಖ್ಯವಾದ ವ್ಯತ್ಯಾಸ ಉಂಟಾಗಿದೆ. ಇದರಿಂದ ವಿವಿಧ ರಾಷ್ಟ್ರಗಳ ನಡುವಿನ ಲೇಣೆ-ದೇಣೆ ವ್ಯವಹಾರಗಳ ಸಾಗಣೆಗೆ ವಿಶೇಷ ಏರ್ಪಾಡುಗಳು ಆವಶ್ಯಕ. ಸರಿಯಾದ ವಿನಿಮಯ ದರ ನಿರ್ಣಯ, ಹಾಗೂ ವಿವಿಧ ಹಣಗಳ ಪರಸ್ಪರ ವಿನಿಮಯ ಸೌಕರ್ಯ ಮತ್ತು ವಿವಿಧ ರಾಷ್ಟ್ರಗಳ ಲೇಣೆ-ದೇಣೆ ಸರಿದೂಗಿಸುವ ಕ್ರಮಗಳು-ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ಸಮಸ್ಯೆಗಳು ಅಂತರರಾಷ್ಟ್ರೀಯ ಆರ್ಥಿಕ ವ್ಯವಹಾರಗಳನ್ನು ಆಂತರಿಕ ಆರ್ಥಿಕ ವ್ಯವಹಾರಗಳಿಂದ ಸ್ಪಷ್ಟವಾಗಿ ಪ್ರತ್ಯೇಕಿಸಿವೆ.

ಹೀಗೆ ಅನೇಕ ಕಾರಣಗಳಿಂದ ಅಂತರರಾಷ್ಟ್ರೀಯ ಕ್ಷೇತ್ರದಲ್ಲಿ ನಡೆಯುವ ಎಲ್ಲ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ರೀತಿ ನೀತಿಗಳ ಬಗ್ಗೆ ಮೀಮಾಂಸಾ ದೃಷ್ಟಿಯಿಂದಲೂ ಸಮಸ್ಯೆಗಳ ಪರಿಹಾರ ದೃಷ್ಟಿಯಂದಲೂ ವಿಶೇಷ ಅಧ್ಯಯನ ಆವಶ್ಯಕವಾಗಿದೆ. ಇಂಥ ಅಧ್ಯಯನವೇ ಅಂತರರಾಷ್ಟ್ರೀಯ ಅರ್ಥಶಾಸ್ತ್ರವೆನಿಸುವುದು.

ಪ್ರಪಂಚದ ಆರ್ಥಿಕಾಭಿವೃದ್ಧಿಗೆ ವಿಶೇಷ ಪ್ರಾಮುಖ್ಯ ನೀಡಲಾಗುತ್ತಿರುವ ಕಳೆದ ಎರಡು ದಶಕಗಳಲ್ಲಿ ಅಂತರರಾಷ್ಟ್ರೀಯ ಅರ್ಥಶಾಸ್ತ್ರಕ್ಕೆ ಹೊಸ ತೂಕ ಉಂಟಾಗಿದೆ. ವಿವಿಧ ರಾಷ್ಟ್ರಗಳು ಆರ್ಥಿಕ ಪ್ರಗತಿ ಪಥದಲ್ಲಿ ವಿವಿಧ ಹಂತಗಳಲ್ಲಿವೆ. ಮುಂದುವರಿದಿರುವ ರಾಷ್ಟ್ರಗಳು ಪೂರ್ಣೋದ್ಯೋಗ, ಜೀವನ ಮಟ್ಟದ ಸಾರ್ವತ್ರಿಕ ಏರಿಕೆ, ವಿಶ್ವಸಂಪರ್ಕ-ಇಂಥ ಘನ ಉದ್ದೇಶಗಳಿಗೆ ಅನುಗುಣವಾಗಿ ಅವುಗಳ ಆರ್ಥಿಕ ವ್ಯವಸ್ಥೆಯನ್ನು ರೂಪಿಸುತ್ತವೆ. ಹಿಂದುಳಿದಿರುವ ರಾಷ್ಟ್ರಗಳು, ಮುಂದುವರಿದಿರುವ ರಾಷ್ಟ್ರಗಳ ಆರ್ಥಿಕಮಟ್ಟಗಳನ್ನು ಸಾಧಿಸುವ ಹಂಬಲದಿಂದ ಆದಷ್ಟು ಶೀಘ್ರವಾಗಿ ಮುನ್ನುಗ್ಗುತ್ತಿವೆ. ಮೊದಲ ಬಾರಿಗೆ ಪ್ರಪಂಚದ ನಾನಾ ರಾಷ್ಟ್ರಗಳು ರಾಜಕೀಯ ಸ್ವಾತ್ರಂತ್ರ್ಯದ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಆರ್ಥಿಕ ಸಹಕಾರವೇರ್ಪಡಿಸಿಕೊಳ್ಳಲು ಉದ್ಯಮಿಸಿರುವ ಈ ಚಾರಿತ್ರಿಕ ಸನ್ನಿವೇಶದಲ್ಲಿ ದೇಶ-ದೇಶಗಳ ಪರಸ್ಪರ ಆರ್ಥಿಕ ಸಂಬಂಧಗಳು ತೀವ್ರ ಬದಲಾವಣೆಗಳಿಗೆ ಒಳಗಾಗುತ್ತಲಿವೆ. ಇವುಗಳ ಶಾಸ್ತ್ರೀಯ ಅಧ್ಯಯನದಿಂದ ಮಾತ್ರ ಜಾಗತಿಕ ಆರ್ಥಿಕಾಭಿವೃದ್ಧಿಗೆ ಆವಶ್ಯಕವಾದ ಸೂಕ್ತ ಮಾರ್ಗಗಳನ್ನು ಗುರುತಿಸುವುದು ಸಾಧ್ಯ.

ಅನೇಕ ರಾಷ್ಟ್ರಗಳು ಆರ್ಥಿಕಯೋಜನೆಗಳನ್ನು ಅನುಸರಿಸುತ್ತಲಿರುವುದು ಗಮನಿಸ ಬೇಕಾದ ಇನ್ನೊಂದು ಮುಖ್ಯ ಬೆಳವಣಿಗೆಯಾಗಿದೆ. ಅಂತರರಾಷ್ಟ್ರೀಯ ಆರ್ಥಿಕ ಸಂಬಂಧ, ಬೆಳೆವಣಿಗೆಯೊಡನೆ ಈ ವಿವಿಧ ರಾಷ್ಟ್ರೀಯ ಆರ್ಥಿಕ ಯೋಜನೆಗಳನ್ನು ಸಮನ್ವಯಗೊಳಿಸಬೇಕಾದರೆ ಆರ್ಥಿಕ ಯೋಜನೆ ಬರಿ ರಾಷ್ಟ್ರೀಯ ಮಟ್ಟದಲ್ಲಿಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯಬೇಕಾಗುವುದು. ಈ ಮುಖ್ಯ ಬೆಳೆವಣಿಗೆ ಅಂತರರಾಷ್ಟ್ರೀಯ ಅರ್ಥಶಾಸ್ತ್ರ ಅಧ್ಯಯನದಲ್ಲಿ ಒಂದು ಹೊಸ ಅಧ್ಯಾಯವನ್ನೇ ತೆರೆದಿದೆ.

ಪ್ರಪಂಚದ ನಾನಾ ರಾಷ್ಟ್ರಗಳು ಮೂಲಭೂತವಾಗಿ ಯಾವ ಆಧಾರ ಹಾಗೂ ತತ್ವಗಳ ಮೇಲೆ ಅವುಗಳ ಆರ್ಥಿಕ ಸಂಬಂಧಗಳನ್ನು ರೂಪಿಸಿಕೊಂಡರೆ ಪ್ರಪಂಚದಲ್ಲಿ ಶಾಂತಿ ಸ್ತಿಮಿತತೆ ಹಾಗೂ ಜೀವನಮಟ್ಟದ ಏರಿಕೆ ಸಾಧ್ಯವಾಗುವುದೆಂಬುದನ್ನು ಹುಡುಕುವುದೇ ಅಂತರರಾಷ್ಟ್ರೀಯ ಅರ್ಥಶಾಸ್ತ್ರದ ಹೆಗ್ಗುರಿ.      

   (ಎ.ಪಿ.ಎಸ್.)