ಅಂತರರಾಷ್ಟ್ರೀಯ ನ್ಯಾಯಾಲಯ
ರಾಷ್ಟ್ರರಾಷ್ಟ್ರಗಳ ಮಧ್ಯೆ ಉಂಟಾಗುವ ವಿವಾದಗಳನ್ನು ಯುದ್ಧ ಮತ್ತು ಪ್ರತಿಕಾರಗಳಿಂದಲ್ಲದೆ ನ್ಯಾಯಬದ್ಧವಾದ ರೀತಿಯಲ್ಲಿ ಪರಿಹರಿಸಿಕೊಳ್ಳುವ ಉದ್ದೇಶದಿಂದ 1927ರಲ್ಲಿ ಸ್ಥಾಪಿತವಾದ ರಾಷ್ಟ್ರಗಳ ಒಕ್ಕೂಟ (ಲೀಗ್ ಆಫ್ó ನೇಷನ್ಸ್) ಹೇಗ್ ಪಟ್ಟಣದಲ್ಲಿ ಒಂದು ವಿಶ್ವ ನ್ಯಾಯಾಲಯವನ್ನು (ವಲ್ರ್ಡ್ ಕೋರ್ಟ್) ಸ್ಥಾಪಿಸಿತು. 1946ನೆಯ ಜನವರಿಯಲ್ಲಿ ದ್ವಿತೀಯ ಜಾಗತಿಕ ಯುದ್ಧ ಮುಗಿದಮೇಲೆ ಆ ನ್ಯಾಯಾಲಯ ಪುನರ್ರಚನೆಗೊಂಡು ವಿಶ್ವಸಂಸ್ಥೆಯ ಒಂದು ಪ್ರಧಾನ ಅಂಗವಾಗಿ ಅಂತರರಾಷ್ಟ್ರೀಯ ನ್ಯಾಯಲಯ ಎಂಬ ಹೆಸರಿನಿಂದ ತನ್ನ ಕೆಲಸಕಾರ್ಯಗಳನ್ನಾರಂಭಿಸಿತು.
ನ್ಯಾಯಾಲಯದ ಕಚೇರಿ ಇರುವುದು ಹೇಗ್‍ನಲ್ಲೆ. ಕಚೇರಿಯ ಎಲ್ಲಾ ವೆಚ್ಚವನ್ನು ವಿಶ್ವಸಂಸ್ಥೆ ವಹಿಸುತ್ತದೆ. ಇದರ ಮುಖ್ಯ ಆಡಳಿತಾಧಿಕಾರಿಯನ್ನು ಮಹಾಕಾರ್ಯದರ್ಶಿ ಎನ್ನುತ್ತಾರೆ. ನ್ಯಾಯಾಲಯದಲ್ಲಿ 15 ಜನ ನ್ಯಾಯಾಧೀಶರಿದ್ದಾರೆ. ಅವರು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಂದ ಚುನಾಯಿಸಲ್ಪಡುತ್ತಾರೆ. ಯಾವ ದೇಶದಿಂದಲೂ ಒಬ್ಬರಿಗಿಂತ ಹೆಚ್ಚು ನ್ಯಾಯಾಧೀಶರನ್ನು ಆರಿಸುವಂತಿಲ್ಲ. ಅವರು ತಮ್ಮತಮ್ಮ ದೇಶದಲ್ಲಿ ಅತ್ಯುಚ್ಛ ನ್ಯಾಯಾಧೀಶ ಪದವಿಗೆ ಅರ್ಹರಾಗಿರಬೇಕು. ಇಲ್ಲವೆ ಅಂತರರಾಷ್ಟ್ರೀಯ ನ್ಯಾಯಶಾಸ್ತ್ರದಲ್ಲಿ ಪರಿಣತರೆಂದು ಖ್ಯಾತಿವೆತ್ತಿರಬೇಕು. ಅಂಥವರನ್ನು ಒಂಬತ್ತು ವರ್ಷಗಳ ಅವಧಿಯವರೆಗೆ ಚುನಾಯಿಸುವರು. ಪ್ರತಿ ಮೂರು ವರ್ಷಕ್ಕೆ ಐವರು ನಿವೃತ್ತಿ ಹೊಂದುವರು. ಅವರ ಸ್ಥಾನದಲ್ಲಿ ಮತ್ತೆ ಐವರನ್ನು ಆರಿಸುವರು. ಚುನಾಯಿಸಲ್ಪಟ್ಟ ನ್ಯಾಯಾಧೀಶ ಆ ಸ್ಥಾನಕ್ಕೆ ಅನರ್ಹನೆಂದು ಉಳಿದ ನ್ಯಾಯಾಧೀಶರಿಗೆ ಮನದಟ್ಟಾದರೆ ಆತನನ್ನು ಆ ಸ್ಥಾನದಿಂದ ತೆಗೆಯಬಹುದು. ಯಾವುದೇ ನ್ಯಾಯವನ್ನು ಇತ್ಯರ್ಥ ಮಾಡಬೇಕಾದರೂ ಒಂಬತ್ತು ಜನ ನ್ಯಾಯಾಧೀಶರು ಏಕಕಾಲಕ್ಕೆ ಕುಳಿತು ವಾದವಿವಾದವನ್ನು ಕೇಳಬೇಕು. ಅಧ್ಯಕ್ಷ ಉಪಾಧ್ಯಕ್ಷರನ್ನು ಮೂರು ವರ್ಷಗಳಿಗೊಮ್ಮೆ ಗುಪ್ತ ಮತದಾನದ ಪದ್ಧತಿಯಿಂದ ಚುನಾಯಿಸುವರು. ವಿಶ್ವಸಂಸ್ಥೇಯ 34ನೆಯ ವಿಧಿಯಂತೆ ಅಂತರರಾಷ್ಟ್ರೀಯ ನ್ಯಾಯಾಲಯದ ಮುಂದೆ ರಾಷ್ಟ್ರ ರಾಷ್ಟ್ರಗಳೇ ವಿವಾದಕ್ಕೆ ಪಕ್ಷಗಾರರಾಗಬೇಕು. ವೈಯಕ್ತಿಕವಾಗಿ, ಜಗತ್ತಿನ ಯಾವ ಪ್ರಜೆಯೂ ಆ ನ್ಯಾಯಾಲಯದಲ್ಲಿ ಪರಿಹಾರವನ್ನು ಬೇಡಿ ಮನವಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಬೇಕಾದರೆ ಆ ವ್ಯಕ್ತಿ ತನ್ನ ರಾಷ್ಟ್ರದ ಮೂಲಕವಾಗಿಯೇ ಇನ್ನೊಂದು ರಾಷ್ಟ್ರದ ಮೇಲೆ ಮೊಕದ್ದಮೆ ಹೂಡಬಹುದು. ವಿಶೇಷ ಸಂದರ್ಭಗಳಲ್ಲಿ ವಿಶ್ವಸಂಸ್ಥೆ ಅಥವಾ ಅದರ ಅಂಗ ಸಂಸ್ಥೆಗಳು ಅಂತರರಾಷ್ಟ್ರೀಯ ನ್ಯಾಯಾಲಯದ ಸಲಹೆಯನ್ನು, ಅಭಿಪ್ರಾಯವನ್ನು ಪಡೆದುಕೊಳ್ಳಬಹುದು. ಈ ನ್ಯಾಯಾಲಯದ ಅಧಿಕಾರ ವ್ಯಾಪ್ತಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಗೆ ಸೀಮಿತವಾಗಿದೆ. ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಸದಸ್ಯರಲ್ಲದ ರಾಷ್ಟ್ರಗಳೂ ಈ ನ್ಯಾಯಾಲಯದ ಮುಂದೆ ತಮ್ಮ ವಿವಾದಗಳನ್ನು ಹೂಡಿ ಬಗೆಹರಿಸಿಕೊಳ್ಳಬಹುದು.
ನ್ಯಾಯಾಲಯದ ತೀರ್ಪುಗಳು ಮನ್ನಣೆ ಪಡೆದು ಜಾರಿಯಲ್ಲಿ ಬರುವಂತೆ ಮಾಡುವ ಏರ್ಪಾಟು ಇದೆಯಾದರೂ ತೀರ್ಮಾನದಂತೆ ರಾಷ್ಟ್ರಗಳು ನಡೆಯದಿದ್ದರೆ ಅವುಗಳನ್ನು ನಡೆಯುವಂತೆ ಮಾಡುವ ಸಾಮಥ್ರ್ಯ ಈ ನ್ಯಾಯಾಲಯಕ್ಕಿಲ್ಲ. ಈ ನ್ಯಾಯಾಲಯ ನ್ಯಾಯಗಳನ್ನು ಇತ್ಯರ್ಥ ಪಡಿಸುವಾಗ ಅಂತರರಾಷ್ಟ್ರೀಯ ಲಿಖಿತ ಒಪ್ಪಂದಗಳನ್ನು ಅಲಿಖಿತ ಸಂಪ್ರದಾಯಗಳನ್ನು, ರೂಢಿಮೂಲ ನಡವಳಿಕೆಗಳನ್ನು ಹಾಗೂ ನಾಗರೀಕ ರಾಷ್ಟ್ರಗಳನ್ನು ಒಪ್ಪಿಕೊಂಡಿರುವ ನ್ಯಾಯಶಾಸ್ತ್ರ ಸೂತ್ರಗಳನ್ನು ಅನುಸರಿಸುತ್ತದೆ.
ಈ ನ್ಯಾಯಾಲಯದ ಅಧಿಕೃತ ಭಾಷೆ ಫ್ರೆಂಚ್ ಮತ್ತು ಇಂಗ್ಲೀಷ್. ಇವೆರಡರಲ್ಲೂ ಪರಿಣತಿಯಿಲ್ಲದ ರಾಷ್ಟ್ರ ತನ್ನ ಭಾಷೆ ಅಥವಾ ಮತ್ತಾವುದಾದರೂ ಭಾಷೆಯಲ್ಲಿ ವ್ಯವಹಾರ ನಡೆಸಬೇಕೆಂದು ಬೇಡಿ ಅನುಮತಿ ಪಡೆದುಕೊಂಡು ಅಂಥ ಅನ್ಯಭಾಷೆಯಲ್ಲಿ ವ್ಯವಹರಿಸಬಹುದು. ಪ್ರತಿಯೊಂದು ತೀರ್ಪು ಬಹುಮತದಿಂದ ನಿರ್ಣಯವಾಗತಕ್ಕದ್ದು. ನ್ಯಾಯಾಧೀಶರುಗಳಲ್ಲಿ ಸಮ್ಮತವಿದ್ದರೆ, ಅಧ್ಯಕ್ಷರಿಗೆ ಉಪರಿಮತ (ಕ್ಯಾಸ್ಟಿಂಗ್ ವೋಟ್) ಕೊಡುವ ಅಧಿಕಾರವಿದೆ. ಈ ನ್ಯಾಯಾಲಯ ಕೊಡುವ ತೀರ್ಪೆ ಆಖೈರು. ಅದರ ವಿರುದ್ಧ ಯಾವ ಮೇಲ್ಮನವಿಯೂ(ಅಪೀಲ್) ಇಲ್ಲ. ಆದರೆ, ತೀರ್ಪುಕೊಟ್ಟ 10 ವರ್ಷಗಳ ಒಳಗಾಗಿ, ಯಾವುದಾದರೂ ಹೊಸ ನಿರ್ಣಾಯಕ ಸಂಗತಿ ಬೆಳಕಿಗೆ ಬಂದರೆ ಮೊದಲಿನ ತೀರ್ಪನ್ನು ಪುನರ್ ವಿಮರ್ಶೆಮಾಡುವ ಅಧಿಕಾರ ಇದೇ ಕೋರ್ಟಿಗಿದೆ.
ಒಂದು ವಿವಾದ ಇತ್ಯರ್ಥ ಮಾಡುವಾಗ ಪ್ರತಿಪಕ್ಷದ ರಾಷ್ಟ್ರಗಳ ಒಬ್ಬೊಬ್ಬ ನ್ಯಾಯಾಧೀಶರು ವಿಚಾರಣೆಯ ಕಾಲಕ್ಕೆ ಇತರ ನ್ಯಾಯಾಧೀಶರೊಡನೆ ಕುಳಿತುಕೊಳ್ಳತಕ್ಕದ್ದು. ಒಂದುವೇಳೆ ಚುನಾಯಿಸಲ್ಪಟ್ಟ 15 ನ್ಯಾಯಾಧೀಶರಲ್ಲಿ ಪಕ್ಷಗಾರ ರಾಷ್ಟ್ರಗಳ ಪ್ರತಿನಿಧಿಗಳು ಇಲ್ಲದಿದ್ದರೆ ಅಂಥ ರಾಷ್ಟ್ರಗಳು ಒಬ್ಬೊಬ್ಬ ನ್ಯಾಯಾಧೀಶರನ್ನು ಚುನಾಯಿಸಿಕೊಳ್ಳುವ ಅಧಿಕಾರವಿದೆ. ಹಾಗೆ ಆರಿಸಲ್ಪಟ್ಟ ನ್ಯಾಯಾಧೀಶರಿಗೆ ಇತರ ನ್ಯಾಯಾಧೀಶರಂತೆ ಸಮಾನಾಧಿಕಾರ ಹೊಂದಿ ತೀರ್ಪುಕೊಡುವ ಹಕ್ಕಿದೆ.
(ಕೆ.ಸಿ.)