ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತಾರಾಷ್ಟ್ರೀಯ ಪತ್ರಿಕಾ ಸಂಸ್ಥೆ

ಅಂತಾರಾಷ್ಟ್ರೀಯ ಪತ್ರಿಕಾ ಸಂಸ್ಥೆ

ಸಂಪಾದಿಸಿ

ಸುದ್ದಿಯ ಪ್ರಸಾರ, ಅದರ ಬೆಳೆವಣಿಗೆ ಮತ್ತು ಸುದ್ದಿಯನ್ನು ತರುವ ಬಗೆ ಇವುಗಳ ವಿಚಾರದಲ್ಲಿ ಸಂಶೋಧನೆ ನಡೆಸಿ ಪ್ರಪಂಚದ ಪತ್ರಿಕಾಲೋಕಕ್ಕೆ ಮಾರ್ಗದರ್ಶನ ಮಾಡುವ ಮುಖ್ಯ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆ. ಇದರ ಕೇಂದ್ರ ಕಚೇರಿ ಸ್ವಿಟ್ಜರ್ಲೆಂಡಿನ ಜ಼Æರಿಟ್ ಪಟ್ಟಣದಲ್ಲಿದೆ. ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆದ ಈ ಸಂಸ್ಥೆ ಪ್ರಪಂಚದ ಯಾವ ಸರ್ಕಾರದ ಹಿಡಿತಕ್ಕೂ ಒಳಪಟ್ಟಿಲ್ಲ. ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಣೆ ಮಾಡುವುದು, ನಾನಾ ದೇಶದ ಪತ್ರಿಕೋದ್ಯಮಿಗಳಲ್ಲಿ ಪರಸ್ಪರ ಮಧುರ ಬಾಂಧವ್ಯವನ್ನು ಹುಟ್ಟಿಸುವುದು, ಸುದ್ದಿ ನಿಷ್ಪಕ್ಷಪಾತವಾಗಿ ಯಾರ ಭಯ ಮತ್ತು ದಯಾದಾಕ್ಷಿಣ್ಯಕ್ಕೊಳಗಾಗದೆ ಪ್ರಚುರವಾಗುವಂತೆ ಮಾಡುವುದು, ಪತ್ರಿಕೋದ್ಯಮದ ವಿವಿಧ ಸಾಧನೆಗಳನ್ನು ಬೆಳೆಸುವುದು -ಇವು ಈ ಸಂಸ್ಥೆ ಮಾಡುತ್ತಿರುವ ಇತರ ಮುಖ್ಯ ಕೆಲಸಗಳು. ಪ್ರಪಂಚದ 45 ದೇಶಗಳಲ್ಲಿರುವ ಪತ್ರಿಕೆಗಳ ಪೈಕಿ ಸುಮಾರು 600 ಪತ್ರಿಕೆಗಳ 1300 ಪ್ರತಿನಿಧಿಗಳು ಈ ಸಂಸ್ಥೆಯ ಸದಸ್ಯರು. ಇದರ ಅಂಗಸಂಸ್ಥೆಯೊಂದು ಭಾರತದಲ್ಲೂ ಇದೆ. ಇದು ಪ್ರತಿ ವರ್ಷವೂ ಪತ್ರಿಕೋದ್ಯಮಿಗಳ ಉಪಯೋಗಕ್ಕಾಗಿ ವಿಚಾರಗೋಷ್ಠಿಗಳನ್ನು, ತರಬೇತಿ ತರಗತಿಗಳನ್ನು, ಪರಸ್ಪರ ವಿನಿಮಯ ಚರ್ಚೆಗಳನ್ನು ಏರ್ಪಡಿಸುತ್ತದೆ.