ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತಾರಾಷ್ಟ್ರೀಯ ಸರಕು ಒಪ್ಪಂದಗಳು
ಅಂತಾರಾಷ್ಟ್ರೀಯ ಸರಕು ಒಪ್ಪಂದಗಳು
ಸಂಪಾದಿಸಿ1930ರ ದಶಕದಲ್ಲಿ ಗೋದಿ, ಸಕ್ಕರೆ, ತವರ ಮುಂತಾದ ವಸ್ತುಗಳಿಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಸರಕು ಒಪ್ಪಂದಗಳು ಜಾರಿಗೆ ಬಂದುವು. ಸರಕುಗಳ ನಿಯಂತ್ರಣ ಪ್ರಯತ್ನ ಈ ಮೊದಲೇ ಕಂಡು ಬಂದಿದ್ದರೂ ಇದು ಪ್ರಾಮುಖ್ಯ ಗಳಿಸಿ ನಿರ್ದಿಷ್ಟ ರೂಪವನ್ನು ಪಡೆದದ್ದು ಇದೇ ಅವಧಿಯಲ್ಲಿ.
ಮುಖ್ಯವಾದ ಕಚ್ಚಾವಸ್ತುಗಳ ಮತ್ತು ಕೆಲವು ವಿಶೇಷ ಆಹಾರ ವಸ್ತುಗಳ ಬೆಲೆ ಬಹಳವಾಗಿ ಏರಿಳಿತಕ್ಕೊಳಗಾಗಿ ಉತ್ಪಾದಕರಿಗೆ ಮತ್ತು ಗ್ರಾಹಕರಿಗೆ ಕಷ್ಟ ಪರಿಸ್ಥಿತಿಯನ್ನುಂಟು ಮಾಡುತ್ತಿದ್ದುದನ್ನು ತಪ್ಪಿಸುವುದಕ್ಕಾಗಿ ಸರಕು ಒಪ್ಪಂದಗಳನ್ನು ರೂಪಿಸಲಾಯಿತು. ಬೇಡಿಕೆ ಮತ್ತು ನೀಡಿಕೆಗಳಲ್ಲಿ ಆಗುವ ಬದಲಾವಣೆಗಳು ಬೆಲೆಗಳ ಏರಿಳಿತಕ್ಕೆ ಕಾರಣವಾಗುವುದರಿಂದ ಸರಕುಗಳ ಉತ್ಪಾದನೆ ಮತ್ತು ವ್ಯಾಪಾರದ ಮೇಲೆ ಅಂತಾರಾಷ್ಟ್ರೀಯ ಹತೋಟಿ ಅವಶ್ಯಕವೆಂಬುದನ್ನು ಮನಗಂಡು ಒಪ್ಪಂದಗಳ ಮೂಲಕ ಮುಖ್ಯವಾದ ಕಚ್ಚಾವಸ್ತುಗಳು ಮತ್ತು ಆಹಾರ ವಸ್ತುಗಳ ಉತ್ಪಾದನೆ ಮತ್ತು ವ್ಯಾಪಾರದ ಮೇಲೆ ಹತೋಟಿ ಇಡಲು ಯತ್ನಿಸಲಾಯಿತು. ಉತ್ಪಾದನೆಯನ್ನು ನಿಗದಿ ಮಾಡಿ ಅಧಿಕ ಉತ್ಪಾದನೆಯಿಂದ ಉದ್ಭವಿಸುವ ಸಮಸ್ಯೆಗಳನ್ನು ತಡೆಯಲು ಮತ್ತು ನಿಗಧಿಯಾದ ಬೆಲೆಗೆ ಕೊಳ್ಳಲು ಮತ್ತು ಮಾರಲು ಒಪ್ಪಂದ ಮಾಡಿಕೊಂಡು ಉತ್ಪಾದಕರಿಗೆ ಒದಗಬಹುದಾದ ನಷ್ಟವನ್ನು ತಪ್ಪಿಸುವುದು-ಇವೇ ಅಂತಾರಾಷ್ಟ್ರೀಯ ಸರಕು ಒಪ್ಪಂದಗಳ ಮೂಲಭೂತ ಉದ್ದೇಶಗಳು.
ಅಂತಾರಾಷ್ಟ್ರೀಯ ಗೋದಿ ಒಪ್ಪಂದ
ಸಂಪಾದಿಸಿಹಲವಾರು ವರ್ಷಗಳ ಪ್ರಯತ್ನದ ಫಲವಾಗಿ 1933ರಲ್ಲಿ ಪ್ರಥಮ ಬಾರಿಗೆ ಅಂತರರಾಷ್ಟ್ರೀಯ ಗೋದಿ ಒಪ್ಪಂದ ಜಾರಿಗೆ ಬಂದಿತು. ಕೆಲವು ವರ್ಷಗಳಿಗೆ ಮಾತ್ರ ಅನ್ವಯಿಸುವಂತೆ ಒಪ್ಪಂದವನ್ನು ಮಾಡಿಕೊಂಡು ಅದರ ಅವಧಿ ಮುಗಿದ ಕೂಡಲೆ ಸೂಕ್ತ ಮಾರ್ಪಾಡುಗಳೊಂದಿಗೆ ಮುಂದಿನ ಕೆಲವು ವರ್ಷಗಳಿಗೆ ಅನ್ವಯಿಸುವಂತೆ ಮತ್ತೆ ಒಪ್ಪಂದ ಮಾಡಿಕೊಳ್ಳಲಾಗುತ್ತಿತ್ತು. 1949ರ ಒಪ್ಪಂದ 1953ರ ವರೆಗೆ ಜಾರಿಯಲ್ಲಿದ್ದು, 1953ರಲ್ಲಿ ಅದನ್ನು 1957ರ ವರೆಗೂ ಅನಂತರ 1962ರ ವರೆಗೂ ಮುಂದುವರಿಸಲಾಯಿತು. ಈ ಒಪ್ಪಂದಗಳ ಪ್ರಕಾರ, ಸ್ಥಿರವಾದ ಬೆಲೆಯಲ್ಲಿ ಆಮದು ರಫ್ತು ವ್ಯಾಪಾರ ನಿರಾತಂಕವಾಗಿ ನಡೆಯುವಂತೆ ಭರವಸೆ ನೀಡಲಾಯಿತು. ಒಂದೊಂದು ಅವಧಿಯ ಒಪ್ಪಂದದಲ್ಲೂ ಸಣ್ಣಪುಟ್ಟ ವ್ಯತ್ಯಾಸಗಳು ಕಂಡು ಬಂದರೂ ಎಲ್ಲದರ ಸಾಮಾನ್ಯ ನಿಬಂಧನೆಗಳು ಈ ರೀತಿ ಇದ್ದುವು: 1. ರಫ್ತು ರಾಷ್ಟ್ರಗಳು ನಿಗದಿಯಾದ ಪ್ರಮಾಣದ ಗೋದಿಯನ್ನು ನಿಗದಿಯಾದ ಅಧಿಕತಮ ಬೆಲೆಯನ್ನು ಮೀರದಂತೆ ಖಾತರಿಯಾಗಿ ಒದಗಿಸಬೇಕು. 2. ಆಮದು ರಾಷ್ಟ್ರಗಳು ಗೊತ್ತಾದ ಪ್ರಮಾಣದ ಗೋದಿಯನ್ನು ನಿಗದಿಯಾದ ಕನಿಷ್ಠತಮ ಬೆಲೆಗೆ ಕಡಿಮೆ ಇಲ್ಲದಂತೆ ರಫ್ತುರಾಷ್ಟ್ರಗಳಿಂದ ಖಾತರಿಯಾಗಿ ಕೊಳ್ಳಬೇಕು. 3. ಒಪ್ಪಂದಕ್ಕೆ ಸಹಿಹಾಕಿದ ರಾಷ್ಟ್ರಗಳು ಗೋದಿಯ ಅಂತಾರಾಷ್ಟ್ರೀಯ ಬೆಲೆಯ ಕನಿಷ್ಠತಮ ಮತ್ತು ಅಧಿಕತಮ ಮಟ್ಟವನ್ನು ನಿಗದಿ ಮಾಡಬೇಕು ಆಂತರಿಕ ಬೆಲೆಗೆ ಈ ನಿಯಂತ್ರಣ ಅನ್ವಯಿಸಕೂಡದು.
ಗೋದಿ ಒಪ್ಪಂದದ ಆಡಳಿತವನ್ನು ನಿರ್ವಹಿಸಲು ಒಂದು ಅಂತಾರಾಷ್ಟ್ರೀಯ ಗೋದಿ ಸಭೆಯನ್ನು ನಿಯಮಿಸಲಾಯಿತು. ಗೋದಿಬೆಳೆ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ವಿವರಗಳನ್ನು ಸಂಗ್ರಹಿಸಿ ಸದಸ್ಯರಾಷ್ಟ್ರಗಳಿಗೆ ಒದಗಿಸುವುದು, ವಾರ್ಷಿಕ ವರದಿಗಳನ್ನು ಪ್ರಕಟಿಸುವುದು ಮತ್ತು ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸುವುದರಿಂದ ಸಂಭವಿಸುವ ವಿವಾದಗಳನ್ನು ಪರಿಹರಿಸುವುದು-ಮುಂತಾದುವು ಇದರ ಮುಖ್ಯ ಕರ್ತವ್ಯಗಳು. ಈ ಸಭೆಗೆ ಪ್ರತಿಸದಸ್ಯ ರಾಷ್ಟ್ರದಿಂದ ಒಬ್ಬೊಬ್ಬ ಪ್ರತಿನಿಧಿ ಇರಬೇಕೆಂದು ತೀರ್ಮಾನಿಸಲಾಯಿತು. ಸಭೆಯ ಕಾರ್ಯ ಚಟುವಟಿಕೆಗಳಲ್ಲಿ ನೆರವಾಗಲು ಒಂದು ಕಾರ್ಯಕಾರಿ ಸಮಿತಿ ಮತ್ತು ಒಂದು ಬೆಲೆ ಸಲಹಾ ಸಮಿತಿ ನೇಮಕವಾದುವು.
ಅಂತಾರಾಷ್ಟ್ರೀಯ ಸಕ್ಕರೆ ಒಪ್ಪಂದ
ಸಂಪಾದಿಸಿಇದರ ಉದ್ದೇಶವೂ ಬೆಲೆಯ ಸ್ತಿಮಿತತೆಯನ್ನು ಕಾಪಾಡುವುದೇ ಆಗಿದೆ. ಈ ದಿಶೆಯಲ್ಲಿ 1920ರಲ್ಲಿ ಪ್ರಥಮ ಪ್ರಯತ್ನ ನಡೆಯಿತು. 1931ರಲ್ಲಿ ರೂಪುಗೊಂಡ ಜಾಡ್ಬೋರ್ನ ಯೋಜನೆ ಈ ದಿಶೆಯಲ್ಲಿ ಮತ್ತೊಂದು ಪ್ರಯತ್ನ. ಆದರೆ ಇವು ಅಷ್ಟೇನೂ ಫಲಕಾರಿಯಾಗಲಿಲ್ಲ ಸಕ್ಕರೆಯ ಅಂತಾರಾಷ್ಟ್ರೀಯ ಬೆಲೆಯನ್ನು ಸ್ತಿಮಿತದಲ್ಲಿಡುವ ಪ್ರಯತ್ನಗಳಲ್ಲೆಲ್ಲ ಮಹತ್ತರವಾದುದು 1954ರಲ್ಲಿ ಜಾರಿಗೆ ಬಂದ ಅಂತಾರಾಷ್ಟ್ರೀಯ ಸಕ್ಕರೆ ಒಪ್ಪಂದ. 1953ರಲ್ಲಿ ವಿಶ್ವಸಂಸ್ಥೆಯ ಆಶ್ರಯದಲ್ಲಿ ಲಂಡನ್ನಿನಲ್ಲಿ ಐವತ್ತು ರಾಷ್ಟ್ರಗಳ ಪ್ರತಿನಿಧಿಗಳು ಸೇರಿದ್ದ ಸಭೆಯಲ್ಲಿ ಆದ ತೀರ್ಮಾನಕ್ಕನುಗುಣವಾಗಿ ಈ ಒಪ್ಪಂದ ಜಾರಿಗೆ ಬಂದಿತು. 22 ರಫ್ತುರಾಷ್ಟ್ರಗಳು ಮತ್ತು 16 ಆಮದುರಾಷ್ಟ್ರಗಳು ಈ ಒಪ್ಪಂದಕ್ಕೆ ಸಹಿ ಹಾಕಿದುವು. ಈ ಒಪ್ಪಂದದ ಆಡಳಿತವನ್ನು ನಿರ್ವಹಿಸಲು ಅಂತಾರಾಷ್ಟ್ರೀಯ ಸಕ್ಕರೆ ಸಭೆಯೊಂದು ನೇಮಕವಾಯಿತು. ಸಭೆಯಲ್ಲಿ ಪ್ರತಿಸದಸ್ಯರಾಷ್ಟ್ರದಿಂದ ಒಬ್ಬೊಬ್ಬ ಸದಸ್ಯನಿರುವನು. ಐವರು ಸದಸ್ಯರನ್ನುಳ್ಳ ಕಾರ್ಯಕಾರಿ ಸಮಿತಿಯೊಂದು ಸಭೆಯ ಕರ್ತವ್ಯನಿರ್ವಹಣೆಗೆ ಸಹಾಯಕವಾಗಿದೆ. ನ್ಯಾಯವಾದ ಬೆಲೆಯಲ್ಲಿ ಸಕ್ಕರೆಯ ಮಾರಾಟ ಮತ್ತು ಕೊಳ್ಳಾಟಕ್ಕೆ ಸೂಕ್ತ ಮಾರುಕಟ್ಟೆ ಯನ್ನು ಒದಗಿಸುವುದೇ ಈ ಒಪ್ಪಂದದ ಮುಖ್ಯ ಉದ್ದೇಶ. ಪ್ರತಿ ಸದಸ್ಯ ರಫ್ತುರಾಷ್ಟ್ರದ ರಫ್ತು ದೇಯಾಂಶವನ್ನು ನಿಗದಿ ಮಾಡಲಾಗಿದೆ. ಒಂದು ಪೌಂಡ್ ಸಕ್ಕರೆಗೆ ನ್ಯಾಯಬೆಲೆ 3.25-4.33 ಸೆಂಟ್ಗಳೆಂದು 1954ರ ಒಪ್ಪಂದದ ಪ್ರಕಾರ ತೀರ್ಮಾನಿಸಲಾಯಿತು. ಬೆಲೆ ಮಾರುಕಟ್ಟೆಯಲ್ಲಿ ಪೌಂಡಿಗೆ 4.33 ಸೆಂಟ್ಗಿಂತ ಹೆಚ್ಚಾದರೆ ಬೇಡಿಕೆ ಹೆಚ್ಚಿದೆ ಎಂಬ ಸೂಚನೆ ದೊರಕುವುದರಿಂದ, ಸದಸ್ಯರಾಷ್ಟ್ರಗಳ ರಫ್ತು ಪಾಲನ್ನು ಹೆಚ್ಚಿಸಿ ನೀಡಿಕೆಯನ್ನು ಹೆಚ್ಚಿಸುವುದರ ಮೂಲಕ ಬೆಲೆ ಮೇಲ್ಮಿತಿಯನ್ನು ಮೀರದಂತೆ ತಡೆಯಬೇಕೆಂದೂ ಬೆಲೆ ಮಾರುಕಟ್ಟೆಯಲ್ಲಿ 3.25 ಸೆಂಟ್ಗಿಂತ ಕಡಿಮೆ ಯಾದಾಗ ನೀಡಿಕೆ ಹೆಚ್ಚಿದೆ ಎಂಬ ಸೂಚನೆ ದೊರಕುವುದರಿಂದ ರಫ್ತು ಪಾಲನ್ನು ಕಡಿಮೆ ಮಾಡಿ ನೀಡಿಕೆಯನ್ನು ತಗ್ಗಿಸಿ ಬೆಲೆ ಕೆಳಮಿತಿಗಿಂತ ಕಡಿಮೆಯಾಗದಂತೆ ತಡೆಯಬೇಕೆಂದೂ ತೀರ್ಮಾನಿಸಿ ಬೆಲೆಯ ಸ್ತಿಮಿತತೆಯನ್ನು ಕಾಪಾಡಲು ಈ ಕ್ರಮವನ್ನು ಅನುಸರಿಸಲಾಯಿತು.
ಅಂತಾರಾಷ್ಟ್ರೀಯ ತವರ ಒಪ್ಪಂದ
ಸಂಪಾದಿಸಿಎರಡನೆಯ ಮಹಾಯುದ್ಧಪುರ್ವದಲ್ಲಿಯೂ ಒಪ್ಪಂದಗಳ ಮೂಲಕ ತವರದ ಬೆಲೆಯ ಸ್ತಿಮಿತತೆಯನ್ನು ಕಾಪಾಡಲು ಪರಯತ್ನಗಳು ನಡೆದುವು. 1921ರಲ್ಲಿ ಮಲಯ, ನೆದರ್ಲೆಂಡ್ಸ ಮತ್ತು ಈಸ್ಟ ಇಂಡೀಸ್ಗಳು ಸೇರಿ ಬಾಂಡೂಂಗ್ ಪುಲ್ ಎಂಬ ವ್ಯವಸ್ಥೆಯನ್ನು ಮಾಡಿದ್ದುವು. 1929ರಲ್ಲಿ ತವರ ತಯಾರಿಕೆಗಾರರ ಸಂಘವೊಂದನ್ನು ಬ್ರಿಟನ್, ನೆದರ್ಲೆಂಡ್ಸ ಮತ್ತು ಬೊಲಿವಿಯಗಳು ಸ್ಥಾಪಿಸಿದುವು. 1931ರಲ್ಲಿ ಒಂದು ಅಂತಾರಾಷ್ಟ್ರೀಯ ತವರ ಒಪ್ಪಂದವೇ ಜಾರಿಗೆ ಬಂದಿತು. 1937ರಲ್ಲಿ ಈ ಒಪ್ಪಂದಕ್ಕೆ ಪ್ರತಿಯಾಗಿ ಹೊಸ ಒಪ್ಪಂದವೊಂದು ಜಾರಿಗೆ ಬಂದಿತು. ಎರಡನೆಯ ಮಹಾಯುದ್ಧದ ಅನಂತರ ತವರದ ಬೇಡಿಕೆ-ನೀಡಿಕೆಯ ಮೇಲೆ ಹತೋಟಿಯನ್ನಿಟ್ಟು ಬೆಲೆಯನ್ನು ಸ್ತಿಮಿತದಲ್ಲಿಡಲು ಹೆಚ್ಚು ವ್ಯಾಪಕವಾದ ಪ್ರಯತ್ನ ನಡೆಯಿತು. ವಿಶ್ವಸಂಸ್ಥೆಯ ಆಶ್ರಯದಲ್ಲಿ ನಡೆದ ಸಮ್ಮೇಳನಗಳ ಫಲವಾಗಿ 1953ರಲ್ಲಿ ಅಂತಾರಾಷ್ಟ್ರೀಯ ತವರ ಒಪ್ಪಂದ ಜಾರಿಗೆ ಬಂದಿತು. ಇದರ ಆಡಳಿತ ನಿರ್ವಹಣೆಗಾಗಿ ಅಂತಾರಾಷ್ಟ್ರೀಯ ತವರ ಸಭೆಯೊಂದು ಲಂಡನ್ನಲ್ಲಿ ಸ್ಥಾಪಿತವಾಯಿತು.
ಯುದ್ಧಪುರ್ವ ವ್ಯವಸ್ಥೆ ಮತ್ತು ಯುದ್ಧೋತ್ತರ ವ್ಯವಸ್ಥೆಗಳೆರಡರಲ್ಲೂ ಬೆಲೆಗಳ ಸ್ತಿಮಿತತೆಯನ್ನು ಕಾಪಾಡಲು ಅನುಸರಿಸಿದ ಮುಖ್ಯ ಕ್ರಮಗಳು ಮೂರು ವಿಧವಾದುವು. 1. ಬಫರ್ ದಾಸ್ತಾನು; 2. ರಫ್ತುಪಾಲು ನಿಗದಿ ಮಾಡುವುದು; 3. ಬೆಲೆಯ ಮೇಲ್ಮಿತಿ ಮತ್ತು ಕೆಳಮಿತಿಯನ್ನು ನಿಗದಿ ಮಾಡುವುದು. ತವರದ ನೀಡಿಕೆ ಹೆಚ್ಚಿದಾಗ ಹೆಚ್ಚಳವನ್ನು ದಾಸ್ತಾನು ಮಾಡಿಕೊಂಡು ಬೆಲೆ ಇಳಿಯದಂತೆ ಮಾಡುವುದು ಬಫರ್ ದಾಸ್ತಾನುವ್ಯವಸ್ಥೆಯ ಉದ್ದೇಶ. ಪ್ರತಿ ಸದಸ್ಯ ರಾಷ್ಟ್ರದ ರಫ್ತು ಕೋಟಾವನ್ನು ನಿಗದಿ ಮಾಡಿ ಅದಕ್ಕೆ ಖಾತರಿಯಾದ ಮಾರುಕಟ್ಟೆ ದೊರಕುವಂತೆ ಮಾಡುವುದೇ ರಫ್ತುಪಾಲು ನಿಗದಿವ್ಯವಸ್ಥೆಯ ಉದ್ದೇಶ. ಬೆಲೆಯ ಮೇಲ್ಮಿತಿ ಮತ್ತು ಕೆಳಮಿತಿಯನ್ನು ನಿಗದಿ ಮಾಡುವ ವ್ಯವಸ್ಥೆಯೂ ಬೆಲೆಯ ಸ್ತಿಮಿತತೆಯನ್ನು ಕಾಪಾಡುವುದರಲ್ಲಿ ನೆರವು ನೀಡುತ್ತದೆ.
ಅಂತಾರಾಷ್ಟ್ರೀಯ ಸರಕುಒಪ್ಪಂದಗಳು ಮುಖ್ಯವಾದ ಸರಕುಗಳ ಉತ್ಪನ್ನ, ಬೇಡಿಕೆ, ನೀಡಿಕೆ, ಬೆಲೆ ಮುಂತಾದುವುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡುವ ಆದರ್ಶ ಧ್ಯೇಯಗಳನ್ನಿಟ್ಟುಕೊಂಡು ನಿಯೋಜಿಸಲ್ಪಟ್ಟಿವೆ. ಆದರೆ ಕೆಲವು ಸಮಸ್ಯೆಗಳಿಂದಾಗಿ ಇವು ಹೆಚ್ಚು ಫಲಪ್ರದವಾಗಿಲ್ಲ. ಅಂತಾರಾಷ್ಟ್ರೀಯ ಸರಕು ಒಪ್ಪಂದಗಳು ಸಾರ್ಥಕವಾಗಬೇಕಾದರೆ ಅವು ಹೆಚ್ಚು ವ್ಯಾಪಕವಾದ ಸದಸ್ಯತ್ವವನ್ನು ಹೊಂದಿರಬೇಕು. ಕೆಲವೇ ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಿ ಉಳಿದುವು ಒಪ್ಪಂದದ ವ್ಯಾಪ್ತಿಗೆ ಸೇರದಿದ್ದರೆ, ಇಂಥ ವ್ಯವಸ್ಥೆ ಪುರ್ಣವಾಗಿ ಯಶಸ್ವಿಯಾಗುವುದಿಲ್ಲ. ಅಷ್ಟೇ ಅಲ್ಲದೆ ಇದುವರೆಗೆ ರೂಪಿತವಾಗಿರುವ ಒಪ್ಪಂದಗಳು ಪ್ರತ್ಯೇಕ ಪ್ರತ್ಯೇಕವಾಗಿ ಒಂದೊಂದು ಸರಕಿಗೆ ಸಂಬಂಧಿಸಿದಂತಿದ್ದು ಸಮಗ್ರವಾದ ಸರಕು ಒಪ್ಪಂದ ವ್ಯವಸ್ಥೆಯ ಪ್ರಯತ್ನ ಇನ್ನೂ ನಡೆದಿಲ್ಲ. ಇಂಥ ಕೆಲವು ಕುಂದುಕೊರತೆಗಳಿಂದಾಗಿ ಅಂತಾರಾಷ್ಟ್ರೀಯ ಸರಕು ಒಪ್ಪಂದಗಳು ಅಷ್ಟಾಗಿ ಯಶಸ್ವಿಯಾಗಿಲ್ಲವೆಂಬ ಅಂಶ ಕಂಡುಬರುತ್ತಿದೆ.