ಅಂತೆ-ಕಂತೆ

ಸಂಪಾದಿಸಿ

ಅಂತೆ-ಕಂತೆ (ಫೋಕ್-ಸೇ) ಎಂಬ ಈ ಶಬ್ದವನ್ನು ಬಿ. ಏ ಬೋಟ್ಕಿನ್ ತಮ್ಮ ಜಾನಪದ ಸಂಗ್ರಹದ ವಾರ್ಷಿಕ ಸಂಕಲನದ (1929-32) ತಲೆಬರೆಹವಾಗಿ ರೂಢಿಗೆ ತಂದರು. ಜಾನಪದದ ಇಂದಿನ, ಪ್ರಾಚೀನ ಹಾಗೂ ಕಾಲವೈಪರೀತ್ಯರೀತಿಯುಳ್ಳ (ಅನಾಕ್ರೊನಿಸ್ಟಿಕ್ ಫೇóಸ್) ಬಾಯಿಮಾತಿನ, ಭಾಷಾವೈಜ್ಞಾನಿಕ, (ಲಾವಣಿ ಅಥವಾ ಕಥೆಯಾಗಲಿ ಇರುವ) ಕಥನಸ್ವರೂಪದ ಸಾಹಿತ್ಯವೆಂದು ಈ ಶಬ್ದಕ್ಕೆ ಅವರು ವ್ಯಾಖ್ಯೆ ಮಾಡಿರುವರು. ಜಾನಪದದ ಅರ್ಥವಿಸ್ತಾರಮಾಡಿ ಅದನ್ನು ಹೊಸ ಉಪಯೋಗಗಳಿಗೆ ಬಳಸುವುದು ಇದರ ಉದ್ದೇಶವೆಂದು ಅವರು ತಿಳಿಸಿದ್ದಾರೆ. ಇದು 1. ಇಂಥವರು ಹೇಳಿದ್ದು ಹಳೆಯ ನೆನಪುಗಳು, ಅಜ್ಜ ಅಜ್ಜಿಯ ಕಥೆಗಳು, ಜಾನಪದ ಇತಿಹಾಸ, ತಮ್ಮ ಮಾತಿನಲ್ಲಿಯೇ ಜನರು ತಮ್ಮನ್ನು ಕುರಿತು ಹೇಳಿದ ಸಂಗತಿಗಳು. 2. ಜಾನಪದ ಸಾಮಗ್ರಿಗಳನ್ನು ರಚನಾತ್ಮಕವಾಗಿ ಬಳಸುವುದು. 3. ಗಾದೆಗಳು, ಪಳೆಮಾತು, ಆಲಂಕಾರಿಕ ಭಾಷೆ, ದೇಸಿನುಡಿ-ಇತ್ಯಾದಿಗಳನ್ನೊಳಗೊಳ್ಳುತ್ತದೆ. ಗ್ರಂಥವಚನ (ಬುಕ್-ಸೇ) ಹಾಗೂ ಜನವಚನ (ಫೋಕ್-ಸೇ) ವಿರುದ್ಧಾರ್ಥಕಗಳೆಂದು ಬೆನ್.ಸಿ. ಕ್ಲೋ ಹೇಳುತ್ತಾರೆ.

ಜನರ ಸ್ಮರಣಕೋಶದಲ್ಲಿನ ಪವಾಡಕಥೆಗಳು, ಸ್ಥಳಕಥೆಗಳು, ಅನೇಕ ನಂಬಿಕೆ-ಮೂಢನಂಬಿಕೆಗಳು, ನಡೆದ ಸಂಗತಿಗಳಿಗೆ ಉಪ್ಪುಕಾರ ಹಚ್ಚಿ ಹೇಳಿದ ಸಂಗತಿಗಳು-ಇವೆಲ್ಲವೂ ಮಾತಿನ ರೂಪದಲ್ಲಿ ಹರಿದಾಡುತ್ತವೆ. ವೈಜ್ಞಾನಿಕ ಹಾಗೂ ಐತಿಹಾಸಿಕ ದೃಷ್ಟಿ ಕಡಿಮೆಯಿರುವ ಜನರು ಇರಬಹುದು, ದೇವರೇ ಬಲ್ಲ, ಯಾರೋ ಅಂದರು ಎಂಬ ರೀತಿಯಲ್ಲಿ ಇಂಥ ಮಾತುಗಳನ್ನು ಹೇಳುತ್ತಾರೆ; ಕೇಳುತ್ತಾರೆ. ಅನೇಕ ವಿಧಿನಿಷೇಧಗಳು ಇಂಥ ಅಂತೆ-ಕಂತೆಯ ಮೂಲಕವಾಗಿಯೇ ನಿರ್ಮಿತವಾಗಿವೆ-ಕೆಟ್ಟ ಸ್ವಪ್ನ ಬಿದ್ದರೆ ನಸುಕಿನಲ್ಲಿ ಕೊಟ್ಟಿಗೆಗೆ ಹೋಗಿ ಆಕಳ ಕಿವಿಯಲ್ಲಿ ಅದನ್ನು ಸುರಿದರೆ ದೋಷ ಪರಿಹಾರವಾಗುತ್ತದೆ. ಹೊಸದಾಗಿ ಮುಟ್ಟಾದ ಸ್ತ್ರೀಯರು ಬಾವಿಯನ್ನು ದಾಟಬಾರದು; ದಾಟಿದರೆ, ಬಾವಿಯ ನೀರು ಬತ್ತುತ್ತದೆ. ಮುಟ್ಟಾದವರು ಶಿಶುಗಳನ್ನು ಮುಟ್ಟಿದರೆ ಅವರ ದೇಹದ ಶಾಖದಿಂದ ಶಿಶುಗಳು ಬಾಡಿ ಸೊರಗುತ್ತವೆ ಇತ್ಯಾದಿ.

ಸ್ಥಳದ ಹೆಸರುಗಳಲ್ಲಿಯೂ ಮೂಢನಂಬಿಕೆಯ ಹಿನ್ನೆಲೆಯುಂಟು. ಹೊಲನಗದ್ದೆ ಎಂಬ ಊರಿನಲ್ಲಿ ಮಾಣಿಕಟ್ಟು ಎಂಬ ಗದ್ದೆಯಿದೆ (ಖಾರ್ ಲ್ಯಾಂಡ್). ಅದರ ದಂಡೆಯ ಕಟ್ಟನ್ನು ಎಷ್ಟು ಸಲ ಕಟ್ಟಿದರೂ ನೀರಿನ ಹೊಡೆತಕ್ಕೆ ನಿಲ್ಲದೆ ಅದು ಮುರಿದುಹೋಗುತ್ತಿತ್ತಂತೆ; ಒಬ್ಬ ಹುಡುಗನನ್ನು ಕಟ್ಟಿನ ಮಣ್ಣಿನ ಸಂಗಡ ಸೇರಿಸಿ ಜೀವಂತ ಸಮಾಧಿ ಮಾಡಿದ ಮೇಲೆ ಕಟ್ಟು ನಿಂತಿತಂತೆ. ಜನರು ಈ ಊರ ಹೆಸರಿನ ಬಗ್ಗೆ ಕೊಡುವ ಹೇಳಿಕೆ ನಿಜವೋ ಅಥವಾ ಮಾಣಿ ಎಂಬವನು ಕಟ್ಟಿದ್ದರಿಂದ ಮಾಣಿಕಟ್ಟು ಎಂಬ ಹೆಸರು ಬಂತೋ, ಹೇಳಲು ಬಾರದು. ಅನೇಕ ಸ್ಥಳಗಳ ಹೆಸರುಗಳ ಹಿಂದೆ ಇಂಥ ಕಥೆಗಳಿವೆ. ಯಲ್ಲಾಪುರ ತಾಲ್ಲೂಕಿನಲ್ಲಿ ಬಾರೆ, ಸೀರೆ, ಕಳಚೆ ಎಂಬ ಹತ್ತಿರ ಹತ್ತಿರ ಇರುವ ಊರುಗಳುಂಟು. ಒಬ್ಬ ದಾರಿಕಾರ ಒಬ್ಬ ಹೆಂಗಸಿನ ಹತ್ತಿರ ದಾರಿಯಲ್ಲಿ ಒಂದೊಂದರಂತೆ ಮೇಲ್ಕಂಡ ಮಾತುಗಳನ್ನು ಹೇಳಿದ್ದರಿಂದ ಈ ಊರುಗಳಿಗೆ ಈ ಹೆಸರುಗಳು ಬಂದವೆಂಬ ಹೇಳಿಕೆಯಿದೆ. ಶ್ರವಣಬೆಳಗೊಳದ ಗುಳ್ಳಕಾಯಜ್ಜಿಯ ಕಥೆ ಇನ್ನೊಂದು ಮಾದರಿಯ ಕಥೆ.

ಹಾನಗಲ್ಲು ವಿರಾಟನಗರವೆಂಬ ಹೇಳಿಕೆಯುಂಟು. ಅಲ್ಲಿನ ಒಂದು ದೊಡ್ಡ ಬಾವಿಗೆ ವರ್ತುಲಾಕಾರದ ಪಾತ್ರೆಯ ಮಾದರಿಯ ದೊಡ್ಡ ಕಲ್ಲಿನ ಮುಚ್ಚಳವಿದೆ. ಅದು ಭೀಮ ಊಟಮಾಡುತ್ತಿದ್ದ ತಾಟು ಎಂದು ಅಲ್ಲಿಯ ಜನ ಹೇಳುತ್ತಾರೆ. ಭೀಮನ ಮಲ್ಲಶಾಲೆಯನ್ನೂ ಭೀಮ ಉಪಯೋಗಿಸಿದನೆಂದು ಹೇಳಲಾಗುವ ದೊಡ್ಡ ಬೀಸುವ ಕಲ್ಲನ್ನೂ ಜನ ಈಗಲೂ ತೋರಿಸುತ್ತಾರೆ. ಇದು ಪಾಂಡವರ ಸಂಬಂಧದ ಐತಿಹ್ಯವನ್ನು ಸಿದ್ಧಮಾಡಲು ರಚಿಸಿದ ಸ್ಮಾರಕವಾಗಿರಬಹುದು. ಅಲ್ಲಿನ ಒಂದು ಕುಟುಂಬದವರಿಗೆ ಗಂಜಿಪೈಕದವರೆಂಬ ಹೆಸರು ಬಂದುದರ ಬಗ್ಗೆ ಹಿರಿಯರ ಹೇಳಿಕೆ ಹೀಗಿದೆ: ನಮ್ಮ ಕುಟುಂಬದವರು ಯಲ್ಲಾಪುರದ ಹೊನ್ನಗದ್ದೆಯಿಂದ ಮಾದನಗೇರಿಗೆ ಬಂದು ಉಳಿದಿದ್ದಾಗ ಬಿಜಾಪುರದ ಕಡೆಯ ಜನರು ಬರಗಾಲದಲ್ಲಿ ಗುಳೆಕಿತ್ತು ಬರುವಾಗ ದೊಡ್ಡ ಹಂಡೆಯಲ್ಲಿ ತೆಳ್ಳಗಿನ ಗಂಜಿಮಾಡಿ ಇವರು ಊಟಕ್ಕೆ ನೀಡುತ್ತಿದ್ದರಂತೆ, ಹೆಗಡೆಜಾತ್ರೆಯಲ್ಲಿ ತೆಂಗಿನಕಾಯಿಕಡಿ ಮರ್ಯಾದೆ ಸಲ್ಲಿಸುವಾಗ ಆ ಗಂಜಿಪೈಕದವರ ಮನ್ನಣೆಯ ಕಾಯಕಡಿಯನ್ನು ಆ ಕುಟುಂಬದವರೊಬ್ಬರು ಸ್ವೀಕರಿಸುತ್ತಾರೆ.

ಕೆಲವು ಚಿಕಿತ್ಸೆಯ ಕ್ರಮಗಳು ಅಂತೆ-ಕಂತೆಯ ಸ್ವರೂಪದವು. ಕೋಡಗ ಗೆಮ್ಮಿಗೆ ಹುಲಿದೇವರ ಗುತ್ತಿನ (ಸ್ಥಾನದ) ಮಣ್ಣು ತಿನ್ನಿಸಬೇಕಂತೆ. ದೇವಾಲಯಗಳ ಹರಕೆಗಳ ಹಾಗೂ ಗುರುಗಳ ಶಾಪಾನುಗ್ರಹಗಳ ವಿಷಯಗಳಲ್ಲಿಯೂ ಅನೇಕ ಹೇಳಿಕೆಗಳಿವೆ.

ಅಂತೆ-ಕಂತೆಯ ಕಂತೆಗೆ ತಕ್ಕ ಬೊಂತೆ, ಅಂಥವ, ಇಂಥವ, ಮೆಂತೆ ಕದ್ದವ’ ಹೊಟ್ಟೆಯ ತಮ್ಮ ಬಟ್ಟಲು ಬಾರಿಸುತ್ತಾನೆ (ಹಸಿವೆಯಾಗಿದೆ ಎನ್ನಲು ಹೇಳುವ ಒಗಟಿನಂಥ ಆಲಂಕಾರಿಕ ಭಾಷೆ ಇದು) ಎಂಬಂಥ ಹಾಸ್ಯದ ನುಡಿಗಳನ್ನೂ ಆದೆ ಭಟ್ಟ ಸೋದೆಗೆ ಹೋದ; ಬಂದ (ಹೋದ ಪುಟ್ಟ; ಬಂದ ಪುಟ್ಟ) ಎಂಬಂಥ ಗಾದೆಗಳನ್ನೂ ಕನ್ನಡಕ್ಕೆ ಮೂಗಿನ ಶಿಪಳ (ಮೂಗನ್ನೆತ್ತಿ ಹಿಡಿಯುವ ಸೂತ್ರ;) ಕಣ್ಣಕಂಗಲ ಎಂಬಂಥ ಜನರೇ ಹೊಸದಾಗಿ ಸೃಷ್ಟಿಸಿದ ಶಬ್ದಗಳನ್ನೂ ಸೇರಿಸಬಹುದು. ಈಗಾಗಲೇ ಕಣ್ಮರೆಯಾಗುತ್ತಿರುವ ಅಂತೆ-ಕಂತೆಯ ಒಂದು ಕೋಶವನ್ನು ಸಿದ್ಧಮಾಡುವ ಬಗ್ಗೆ ಪ್ರಯತ್ನ ಮಾಡಬೇಕಾದ ಅಗತ್ಯವಿದೆ.