ಅಕ್ಬರ್ ಸಂಪಾದಿಸಿ

1542-1605. ಮೊಗಲ್ ಸಂತತಿಯ ಸಾಮ್ರಾಟರಲ್ಲಿ ಮೂರನೆಯವ. ಭಾರತ ದೇಶದ ಚರಿತ್ರೆಯಲ್ಲಿ ಅತ್ಯಂತ ಪ್ರಸಿದ್ಧರಾದ ಸಾಮ್ರಾಟರಲ್ಲಿ ಒಬ್ಬ. ಹುಮಾಯೂನನ ಮಗ, ಷೇರ್ಷಹನಿಂದ ಸೋತು ರಾಜ್ಯಭ್ರಷ್ಟನಾಗಿ ಸಹಾಯವನ್ನರಸುತ್ತ ಹುಮಾಯೂನ್ ಅಲೆದಾಡುತ್ತಿದ್ದಾಗ ಅಮರಕೋಟೆಯಲ್ಲಿ 1542ರಲ್ಲಿ ಅಕ್ಬರನು ಜನಿಸಿದ. ಪಟ್ಟಕ್ಕೆ ಬಂದಾಗ ಅವನು ಹದಿನಾಲ್ಕು ವರ್ಷದ ಬಾಲಕ. ತಂದೆಯ ಕಾಲದಲ್ಲಾದ ರಾಜಕೀಯ ವಿಪ್ಲವಗಳ ಪರಿಣಾಮವಾಗಿ, ಸಾಮ್ರಾಜ್ಯದ ನಾನಾ ಕಡೆಗಳಲ್ಲಿ ವಿದ್ರೋಹಿಗಳು ಬಲಗೊಂಡಿದ್ದರು. ಅವರ ಹಾವಳಿಯನ್ನು ತಡೆಗಟ್ಟಿ ಪ್ರಾಂತ್ಯಗಳನ್ನು ತನ್ನ ಹತೋಟಿಗೆ ತಂದುಕೊಂಡು ಸುಭದ್ರ ಆಡಳಿತವನ್ನು ಸ್ಥಾಪಿಸುವುದಕ್ಕೆ ಬಹುಕಾಲ ಹಿಡಿಯಿತು. ಸ್ವತಂತ್ರರಾಗಲೆತ್ನಿಸುತ್ತಿದ್ದ ಸಾಮಂತರನ್ನು ಸೋಲಿಸಿ, ಹೊಸ ಪ್ರಾಂತ್ಯಗಳನ್ನು ಗೆದ್ದು, ದೇಶದಲ್ಲಿದ್ದ ಅರಾಜಕತೆಯನ್ನು ಕೊನೆಗಾಣಿಸಿ, ಬಹಳ ಕಾಲದಿಂದಲೂ ಇಲ್ಲದೇ ಇದ್ದ ರಾಜಕೀಯ ಏಕತೆಯನ್ನೂ ಆಡಳಿತ ಭದ್ರತೆಯನ್ನೂ ಏರ್ಪಡಿಸಿದ. ರಾಷ್ಟ್ರೀಯತೆ, ಏಕತೆ ಮತ್ತು ಹಿಂದೂ-ಮುಸಲ್ಮಾನರ ಪರಸ್ಪರ ಸ್ನೇಹ ಸೌಹಾರ್ದ, ಈ ಮೂರು ಮುಖ್ಯಾಂಶಗಳನ್ನು ಬೆಳೆಸುವ ಸಂಪ್ರದಾಯವನ್ನು ಹಾಕಿಕೊಟ್ಟ. ಅವನ ರಾಜಕೀಯ ಧೋರಣೆ ಮತೀಯ ಪ್ರಭಾವಕ್ಕೊಳಗಾಗಿರಲಿಲ್ಲ. ಆತ ರಾಜಪುತ್ರ ಕನ್ಯೆಯೊಬ್ಬಳನ್ನು ಮದುವೆಯಾದ. ಹಿಂದೂ ಯಾತ್ರಿಕರ ಮೇಲೆ ಈ ಹಿಂದೆ ಇದ್ದ ತೆರಿಗೆಯನ್ನೂ ತಲೆಗಂದಾಯವನ್ನೂ ರದ್ದುಗೊಳಿಸಿದ. ಮುಸಲ್ಮಾನ್ ಪ್ರಜೆಗಳಿಂದಲೇ ಕೂಡಿದ್ದ ಕಾಬೂಲ್ ಪ್ರಾಂತ್ಯಕ್ಕೆ ಮಾನಸಿಂಗನನ್ನು ಪ್ರಾಂತ್ಯಾಧಿಕಾರಿಯನ್ನಾಗಿ ಮಾಡಿದ. ಆವರೆಗೂ ಸೈನ್ಯಕ್ಕೆ ಸೇರಲು ಮುಸಲ್ಮಾನರು ಮಾತ್ರ ಅರ್ಹತೆ ಪಡೆದಿದ್ದರು. ಅಕ್ಬರನು ಅರ್ಹತೆಯ ಆಧಾರದ ಮೇಲೆ ಹಿಂದೂ ಮುಸಲ್ಮಾನರಲ್ಲಿ ಭೇದವನ್ನೆಣಿಸದೆ ಸೈನ್ಯದಲ್ಲಿ ಹುದ್ದೆಗಳನ್ನು ಕೊಟ್ಟ. ನ್ಯಾಯವಾದಿಯೂ ಗುಣಗ್ರಾಹಿಯೂ ಆಗಿದ್ದ ಅವನು ಪ್ರಜೆಗಳಲ್ಲಿ ಭೇದವನ್ನೆಣಿಸದೆ ಎಲ್ಲರಿಗೂ ನ್ಯಾಯವನ್ನು ದೊರಕಿಸಿಕೊಟ್ಟ. ಆತ ದೊಡ್ಡ ಹುದ್ದೆಗಳನ್ನು ಕೊಡುತ್ತಿದ್ದುದು ಕುಶಲತೆ ಮತ್ತು ಸಾಮಥರ್್ಯದ ಆಧಾರದಮೇಲೆ. ತನ್ನ ನೀತಿಯಿಂದ ಪ್ರಜೆಗಳ ಪ್ರೀತಿಯನ್ನು ಸಂಪಾದಿಸಿ ಆ ಮೂಲಕ ತಾವು ಪರಕೀಯರೆಂಬ ಭಾವನೆಯನ್ನು ಹೋಗಲಾಡಿಸಿ, ರಾಷ್ಟ್ರೀಯತೆಯನ್ನು ಮೂಡಿಸಿದ. ಹಿಂದೂಗಳಿಗೆ ಅವನ ಆಡಳಿತ ಪರಕೀಯವೆನಿಸಲಿಲ್ಲ. ಇದಲ್ಲದೇ ಅವನು ಹಿಂದೂಸಮಾಜದಲ್ಲಿ ಬೆಳೆದು ಬಂದಿದ್ದ ಸ್ತ್ರೀಶಿಶುಹತ್ಯೆ, ಸಹಗಮನ ಮತ್ತು ಪ್ರಾಣಿಬಲಿ ಮುಂತಾದ ಪದ್ಧತಿಗಳನ್ನು ತಪ್ಪಿಸಲು ಮತ್ತು ವಿಧವಾವಿವಾಹವನ್ನು ಜಾರಿಗೆ ತರಲು ಸಾಮಾಜಿಕ ಸುಧಾರಣೆಗಳನ್ನು ಕೈಗೊಂಡ. ಅವನು ಜಾರಿಗೆ ತಂದ ಆಡಳಿತ ಪದ್ಧತಿ ಮುಂದೆ ಬ್ರಿಟಿಷರೂ ಅನುಕರಿಸುವಂಥದಾಗಿತ್ತು. ಅಕ್ಬರನ ಆಡಳಿತದಲ್ಲಿ ಸರ್ಕಾರಕ್ಕೂ ರೈತರಿಗೂ ನೇರವಾದ ಸಂಪರ್ಕವಿದ್ದು ಮಧ್ಯಸ್ಥಗಾರರಿಗೆ ಅವಕಾಶವಿರಲಿಲ್ಲ.

ಅಕ್ಬರನ ಮತೀಯನೀತಿ ಇತಿಹಾಸದಲ್ಲಿ ಸ್ಮರಣೀಯ. ಉನ್ನತ ಧ್ಯೇಯಗಳನ್ನು ಹೊಂದಿ ಭಾವಜೀವಿಯಾಗಿದ್ದ ಆತ ಎಲ್ಲ ಮತಗಳ ತತ್ವ್ತಗಳನ್ನೂ ಗ್ರಹಿಸಿ ಮತೀಯ ಏಕತೆಯನ್ನು ಉಂಟುಮಾಡುವ ಗುರಿಯನ್ನು ಹೊಂದಿದ್ದ. ಈ ಗುರಿಯನ್ನು ಸಾಧಿಸಲು 1581ರಲ್ಲಿ ದೀನ್-ಏ-ಇಲಾಹಿ, ಎಂಬ ಹೊಸ ಮತವನ್ನು ಸ್ಥಾಪಿಸಿದ. ಅದು ಪ್ರಗತಿಪರ ವಿಚಾರಶೀಲರ ಸಂಘವಾಗಿತ್ತು; ಸರ್ವಧರ್ಮ ಸಹಿಷ್ಣುತೆಯ ಆದರ್ಶವಾಗಿತ್ತು. ಈ ಹೊಸ ಮತದ ಪ್ರಕಾರ ಸರ್ವಶಕ್ತನಾದ ದೇವರು ಒಬ್ಬನೇ. ಎಲ್ಲರೂ ದುರ್ಗುಣಗಳನ್ನು ತ್ಯಜಿಸಿ ಸದ್ಗುಣಗಳನ್ನು ಅನುಸರಿಸಿ ವಿವೇಚನೆಗೆ ತಲೆಬಾಗಬೇಕು. ಪುಜೆ-ಪುರಸ್ಕಾರ ಮತ್ತು ಪುರೋಹಿತರ ಆವಶ್ಯಕತೆ ಇಲ್ಲ. ದೀನ್-ಏ-ಇಲಾಹಿ ಸರ್ವ ಮತಗಳ ಆಧ್ಯಾತ್ಮಿಕ ಮತ್ತು ತಾತ್ವ್ತಿಕ ಸಂಪ್ರದಾಯಗಳ ಸಂಗ್ರಹವಾಗಿತ್ತು. ಧರ್ಮೋಪದೇಶಕರಿಗಾಗಲಿ ಮೌಢ್ಯ ಮತ್ತು ಕಂದಾಚಾರಗಳಿಗಾಗಲಿ ಈ ಮತದಲ್ಲಿ ಅವಕಾಶವಿರಲಿಲ್ಲ. ಈ ಮತಕ್ಕೆ ಸೇರಲು ಯಾರನ್ನೂ ಬಲಾತ್ಕರಿಸುತ್ತಿರಲಿಲ್ಲ. ವಿಚಾರಶೀಲರಾದ ಹದಿನೆಂಟು ಜನರು ಮಾತ್ರ ಅದನ್ನು ಅವಲಂಬಿಸಿದ್ದರು. ಅವರಲ್ಲಿ ರಾಜ ಬೀರಬಲ್ಲನೂ ಒಬ್ಬ. ಅಕ್ಬರ್ ವೈಯಕ್ತಿಕವಾಗಿ ಆಧ್ಯಾತ್ಮಿಕ ಜೀವನದ ರಹಸ್ಯಗಳನ್ನು ಅರಿಯಲು ಕುತೂಹಲಿಯಾಗಿದ್ದವನು. ಅವನು ಅನೇಕ ವೇಳೆ ಏಕಾಂಗಿಯಾಗಿ ತನ್ನ ಅರಮನೆಯ ಪ್ರಾಂಗಣದಲ್ಲಿ ಕುಳಿತು ಮಧ್ಯರಾತ್ರಿಯ ವರೆಗೂ ನಭೋಮಂಡಲವನ್ನು ವೀಕ್ಷಿಸುತ್ತ ಜೀವನದ ಸತ್ಯಾಸತ್ಯಗಳ ವಿಚಾರವಾಗಿ ದೀರ್ಘಾಲೋಚನೆಗಳಲ್ಲಿ ಮಗ್ನನಾಗುತ್ತಿದ್ದ. ಜನರ ಮತೀಯ ಮೌಢ್ಯಗಳನ್ನು ಕಂಡು ಮರುಗುತ್ತಿದ್ದ. ಸರ್ವಧರ್ಮಗಳ ಸಮನ್ವಯವಾದ ದೀನ್-ಇಲಾಹಿಯ ಮುಖಾಂತರ ಜನರ ಭಿನ್ನಭಾವಗಳನ್ನು ತೊಡೆದು ಹಾಕುವ ಗುರಿಯನ್ನು ಹೊಂದಿದ್ದ. ಈ ಪ್ರಯತ್ನದಲ್ಲಿ ಕೆಲವು ಅಂಶಗಳು ಅವನಿಗೆ ಸಹಕಾರಿಯಾದುವು. ಮೊದಲನೆಯದಾಗಿ ಆತನ ತಂದೆ ಮತ್ತು ತಾತ ಸಂಪ್ರದಾಯಶರಣರಾಗಿರದೆ ಉದಾರ ಪಂಥಿಗಳಾಗಿದ್ದರು. ಎರಡನೆಯದಾಗಿ ಆತನು ರಾಜಪುತ್ರ ರಾಜಕುಮಾರಿಯನ್ನು ವಿವಾಹವಾದದ್ದು ಅವನ ವಿಚಾರಧಾರೆಯನ್ನು ಬದಲಾಯಿಸಿತು. ಕೊನೆಯದಾಗಿ ನಿಕಟವರ್ತಿಗಳಾದ ಶೇಕ್ ಮುಬಾರಕ್, ಫೈಜಿ ಮತ್ತು ಅಬುಲ್ ಫಜ಼ಲ್ ಅವರ ಭಾವನೆಗಳು ಮತ್ತು ವಿಚಾರಧಾರೆಗಳು ಅಕ್ಬರನ ಮೇಲೆ ಪರಿಣಾಮ ಬೀರಿದುವು. ‘ಜೀವಾತ್ಮಗಳು ಪರಮಾತ್ಮನ ಅಂಶಗಳು ಮತ್ತು ಕೊನೆಗೆ ಪರಮಾತ್ಮನಲ್ಲೇ ಐಕ್ಯವಾಗುತ್ತವೆ', ಎಂಬ ಸೂಫಿó ತತ್ವ್ತದಲ್ಲಿ ಅವನಿಗೆ ಬಹಳ ನಂಬಿಕೆ. ಅಕ್ಬರ್ 1575ರಲ್ಲಿ ಸಿಕ್ರಿ ಎಂಬಲ್ಲಿ ಇಬದತ್ಖಾನವನ್ನು (ಪ್ರಾರ್ಥನಾಮಂದಿರ) ಕಟ್ಟಿಸಿದ. ಇಲ್ಲಿ ಸಾಮ್ರಾಜ್ಯದ ಎಲ್ಲ ಭಾಗಗಳಿಂದಲೂ ಹಿಂದೂ, ಜೈನ, ಪಾರಸಿ, ಕ್ರೈಸ್ತ ಮತ್ತು ಮಹಮದೀಯ ಮತದ ಪಂಡಿತರು ಸಭೆ ಸೇರಿ ಅಕ್ಬರನ ಸಂದೇಹಗಳನ್ನು ನಿವಾರಿಸ ಬೇಕಾಗಿದ್ದಿತು. ಆದರೆ ನಾನಾ ಪಂಥಗಳ ವಿದ್ವಾಂಸರು ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಮುಂದುಮಾಡಿಕೊಂಡು ವಾದ ವಿವಾದದಲ್ಲಿ ನಿರತರಾಗಿ ಸಮಸ್ಯೆಗಳನ್ನೇ ಸೃಷ್ಟಿಸಿದರು. ಆದ್ದರಿಂದ ಅಕ್ಬರ್ ತಾನೇ ಸರ್ವಧರ್ಮಗಳ ಮುಖಂಡತ್ವವನ್ನು ವಹಿಸಿಕೊಂಡು ಮತೀಯ ಕಚ್ಚಾಟಗಳನ್ನು ನಿಲ್ಲಿಸಿ ತನ್ನ ತೀರ್ಪನ್ನು ಅವರು ಒಪ್ಪುವಂತೆ ವಿಧೇಯಕ ಮಾಡಿದ. ಅಕ್ಬರ್ ತಾನೊಬ್ಬ ಪ್ರವಾದಿ ಎಂದು ನಂಬಿಯೂ ಇರಲಿಲ್ಲ. ಹಾಗೆ ಪ್ರಚಾರವನ್ನೂ ಮಾಡಲಿಲ್ಲ. ಆದರೆ ವಿಭಿನ್ನ ಮತೀಯರನ್ನು ಸಮತೆಯ ಆಧಾರದ ಮೇಲೆ ಒಂದುಗೂಡಿಸಲು ಸತತವಾಗಿ ಪ್ರಯತ್ನಪಟ್ಟ. ಅಲ್ಲದೆ ಅವನ ಆಳ್ವಿಕೆಯು ಮಹಾ ಘಟನಾವಳಿಗಳಿಂದ ಕೂಡಿದ ಉಜ್ವಲ, ಐತಿಹಾಸಿಕ ಕಾಲವಾಗಿತ್ತು. ಆದ್ದರಿಂದ ಚರಿತ್ರಕಾರರು ಅಕ್ಬರನನ್ನು ಮಹಾಶಯ ಎಂದು ಕರೆದರು.