ಅಕ್ಯಾಂಥೋಡಿಯೈ
ಸಂಪಾದಿಸಿಪೇಲಿಯೊಜೋಯಿಕ್ ಯುಗದಲ್ಲಿ ಬದುಕಿದ್ದ, ಈಗ ಗತವಂಶಿಗಳಾಗಿರುವ ಮೀನುಗಳ ಒಂದು ವರ್ಗ. ನಿಜವಾದ ದವಡೆಗಳುಳ್ಳ ಸರಳರಚನೆಯ ಕಶೇರುಕಗಳಲ್ಲಿ ಇವೇ ಅತಿ ಪ್ರಾಚೀನವಾದುವು. ಇವು ಸೈಲೂರಿಯನ್ ಯುಗದ ಉತ್ತರಾರ್ಧದಲ್ಲಿ ಕಾಣಿಸಿಕೊಂಡು ಪರ್ಮಿಯನ್ ಯುಗದ ಪಶ್ಚಿಮಾರ್ಧದವರೆಗೂ ಬದುಕಿದ್ದುವು. ಅನಂತರ ಕಣ್ಮರೆಯಾದುವು.
ಸಿಹಿನೀರಿನ ನದಿ ಮತ್ತು ಸರೋವರಗಳಲ್ಲಿ ವಾಸಿಸುತ್ತಿದ್ದ ಈ ಪ್ರಾಚೀನ ಮೀನುಗಳು ಕೆಲವು ಸೆಂಮೀ ಗಳಷ್ಟು ಮಾತ್ರ ಉದ್ದವಿದ್ದವು. ಆಕೃತಿಯಲ್ಲಿ ಕದಿರಿನಾಕಾರದ ಷಾರ್ಕ್ ಮೀನುಗಳನ್ನು ಹೋಲುತ್ತಿದ್ದವು. ತಲೆ ತುಂಬ ಚಿಕ್ಕದು; ಬಾಯಿ ತಲೆಯ ತುದಿಯಲ್ಲಿತ್ತು. ತಲೆಯ ಮುಂಭಾಗದಲ್ಲಿದ್ದ ಕಣ್ಣುಗಳು ದೊಡ್ಡವು; ಮೇಲಿನ ಮತ್ತು ಕೆಳಗಿನ ದವಡೆಗಳಿದ್ದು ಅನೇಕ ಜಾತಿಗಳಿಗೆ ಹಲ್ಲುಗಳಿರಲಿಲ್ಲ; ಇದ್ದಲ್ಲಿ ಮಾರ್ಪಟ್ಟ ಮೊನೆಗಳುಳ್ಳ ಹುರುಪೆಗಳಂತಿದ್ದವು.
ಮೂಳೆಯಂಥ ವಸ್ತುವಿನಿಂದಾದ ವಜ್ರಾಕಾರದ ಹುರುಪೆಗಳು ದೇಹವನ್ನು ರಕ್ಷಿಸುತ್ತಿದ್ದುವು. ತಲೆಯ ಮೇಲಿನ ಹುರುಪೆಗಳು ದೊಡ್ಡವಾಗಿದ್ದು ನಿರ್ದಿಷ್ಟ ರೀತಿಯಲ್ಲಿ ಹರಡಿದ್ದುವು. ಒಂದು ಅಥವಾ ಎರಡು ಬೆನ್ನಿನ ಈಜುರೆಕ್ಕೆಗಳು ಬಾಲದ ಈಜುರೆಕ್ಕೆ ಮತ್ತು ಗುದಭಾಗದ ಈಜುರೆಕ್ಕೆ-ಇವು ಒಂಟಿ ಈಜುರೆಕ್ಕೆಗಳು. ಇವು ಸಾಮಾನ್ಯವಾಗಿ ಅಲುಗಾಡುತ್ತಿರಲಿಲ್ಲ. ಮುಂಭಾಗದಲ್ಲಿ ಇವಕ್ಕೆ ಒಂದೊಂದು ದೃಢವಾದ ಮುಳ್ಳುಗಳಿದ್ದುವು. ಭುಜದ ಮತ್ತು ಸೊಂಟದ ಜೋಡಿ ಈಜುರೆಕ್ಕೆಗಳು ಸಾಮಾನ್ಯ ರೀತಿಯವು. ಕೆಲವು ಜಾತಿಗಳಲ್ಲಿ ಭುಜದ ಈಜುರೆಕ್ಕೆಗೂ ಸೊಂಟದ ಈಜುರೆಕ್ಕೆಗೂ ಮಧ್ಯೆ ಐದು ಈಜುರೆಕ್ಕೆಗಳ ಸಾಲು ಇತ್ತು. ಕೊನೆಕೊನೆಗೆ ಕಾಣಿಸಿಕೊಂಡವುಗಳಲ್ಲಿ ಅವುಗಳ ಸಂಖ್ಯೆ ಕ್ಷೀಣಿಸಿ ಒಂದೇ ಒಂದು ಈಜುರೆಕ್ಕೆಯಿತ್ತು. ಬಾಲದ ಈಜುರೆಕ್ಕೆ ವಿಷಮವೃತ್ತಾಕಾರದ್ದಾಗಿತ್ತು.
ಕಿವಿರುರಂಧ್ರಗಳು ಬಿಡಿಯಾಗಿ ಹೊರಕ್ಕೆ ತೆರೆಯುತ್ತಿದ್ದುವು. ಕೆಲವು ಜಾತಿಗಳಲ್ಲಿ ಸ್ವಲ್ಪಮಟ್ಟಿಗೆ ಕಿವಿರುಕವಚದಂತಿದ್ದು ಚರ್ಮದ ತುಣುಕಿನಿಂದ ಮುಚ್ಚಿದ್ದುವು. ವಿಸರಲ್ ಆರ್ಚ್ ಸಂಖ್ಯೆ ಒಂದೊಂದರಲ್ಲಿ ಒಂದೊಂದು ರೀತಿಯಿತ್ತು. 3, 4 ಮತ್ತು 5ನೆಯ ಕಿವಿರು ಕಮಾನುಗಳು ಒಂದೊಂದೂ ಪಕ್ಕದಲ್ಲಿದ್ದ ಕಿವಿರುಗಳಿಗೆ ಆಧಾರವಾಗಿದ್ದುವು. ಒಳಭಾಗದಲ್ಲಿ ಒಂದೊಂದರಿಂದಲೂ ಹೊರ ಚಾಚಿದ ಕಿವಿರು ಕಡ್ಡಿಗಳು ಆಹಾರವನ್ನು ಶೋಧಿಸಲು ಸಹಕಾರಿಯಾಗಿದ್ದುವು. ಮ್ಯಾಂಡಿಬ್ಯುಲರ್ ಆರ್ಚ್ ತಲೆಬುರುಡೆಗೆ ಆಟೊಸ್ಟೈಲಿಕ್ ರೀತಿಯಲ್ಲಿ ನೇರ ಸಂಪರ್ಕ ಹೊಂದಿತ್ತೆಂದು ತೋರುತ್ತದೆ. ಪೂರ್ವ ಡಿವೋನಿಯನ್ ಕಾಲದಲ್ಲಿ ಜೀವಿಸುತ್ತಿದ್ದ ಕ್ಲೈಮೇಟಿಯಸ್ ಮೀನಿನಲ್ಲಿ ಕೆಳದವಡೆ ಮೂಳೆ ತಲೆಬುರುಡೆಗೆ ನೇರವಾಗಿ ಕೂಡಿಕೊಂಡಿತ್ತು.