ಅಗಸ್ತ್ಯ

ಸಂಪಾದಿಸಿ

ವೇದೋಕ್ತನಾದ ಈ ಬ್ರಹ್ಮರ್ಷಿಗೆ ಕುಂಭಸಂಭವ, ಕಳಶಯೋನಿಜ ಎಂಬ ಹೆಸರುಗಳೂ ಉಂಟು. ತಂದೆ ಪುಲಸ್ತ್ಯ. ತಾಯಿ ಕರ್ದಮಬ್ರಹ್ಮನ ಮಗಳಾದ ಹವಿರ್ಭುಕ್. ಪಿತೃಗಳ ಕೋರಿಕೆಯ ಮೇಲೆ ಸಂತಾನಪ್ರಾಪ್ತಿಗಾಗಿ ಲೋಪಾಮುದ್ರೆ ಎಂಬ ಕನ್ನಿಕೆಯನ್ನು ಸೃಜಿಸಿ ಮದುವೆಯಾದ. ಇವನ ಮಗ ದೃಢಸ್ಯು ಅಥವಾ ಇಧ್ಮವಾಹ. ಇಲ್ವಲ ವಾತಾಪಿ ಎಂಬ ದೈತ್ಯರನ್ನು ಕೊಂದದ್ದು, ಇಂದ್ರಪದವಿ ದೊರಕಿತೆಂಬ ಕಾರಣದಿಂದ ಮತಾಂಧನಾಗಿ ಋಷಿಗಳಿಂದ ತನ್ನ ರಥವನ್ನೆಳೆಸಿದ ನಹುಷನ ಪದಚ್ಯುತಿ, ವಿಂಧ್ಯಪರ್ವತ ಮೇರುವಿನಷ್ಟಾಗಬೇಕೆಂಬ ಉದ್ದೇಶದಿಂದ ಬೆಳೆಯುತ್ತಿದ್ದುದನ್ನು ತಡೆಗಟ್ಟಿದ್ದು, ಸಮುದ್ರಗರ್ಭ ದಲ್ಲಿ ಅಡಗಿಕೊಂಡಿದ್ದ ಕಾಲೇಯರೆಂಬ ರಾಕ್ಷಸರನ್ನು ಹೊರಗೆಡಹುವುದಕ್ಕಾಗಿ ಸಮುದ್ರವನ್ನೇ ಆಪೋಶನಯ ಮಾಡಿದ್ದು-ಇವೆಲ್ಲ ಅಗಸ್ತ್ಯನಿಂದಾದ ಲೋಕರಕ್ಷಣಾಕಾರ್ಯಗಳು, ತಮಿಳು ನಾಡಿನ ಪೊದಿಯಲ್ ಬೆಟ್ಟದಲ್ಲಿ ನೆಲೆಸಿ ತಮಿಳುಭಾಷೆಗೆ ಜನ್ಮವಿತ್ತನೆಂದೂ ಅಗತ್ತಿಯಂ ಎಂಬ ಪ್ರಥಮ ತಮಿಳುವ್ಯಾಕರಣವನ್ನು ಬರೆದನೆಂದೂ ತಮಿಳು ಪ್ರಥಮ ಸಾಹಿತ್ಯ ಸಂಘದ ಅಧ್ಯಕ್ಷನಾಗಿದ್ದನೆಂದೂ ತಮಿಳು ಸಾಹಿತ್ಯದಲ್ಲಿ ವರ್ಣಿತವಾಗಿದೆ. ಮರಣಾನಂತರ ನಕ್ಷತ್ರಪದವಿ ಇವನಿಗೆ ದೊರಕಿತು.

ಮಹಾವ್ಯಾಧ (ಒರೈಯನ್) ನಕ್ಷತ್ರಪುಂಜದ ಪೂರ್ವ-ದಕ್ಷಿಣಕ್ಕೆ ಇರುವ ಲುಬ್ಧಕದ (ಸಿರಿಯಸ್) ದಕ್ಷಿಣದಲ್ಲಿರುವ ಸಮಾನಪ್ರಕಾಶದ ನಕ್ಷತ್ರವೇ ಅಗಸ್ತ್ಯ (ಕ್ಯಾನೊಪಸ್). ಇದು ಕರಿನಾ ಪುಂಜದ ಪ್ರಥಮ ನಕ್ಷತ್ರ. ಭೂಮಿಯಿಂದ ಇದರ ದೂರ 65೦ ಜ್ಯೋತಿರ್ವರ್ಷಗಳು. ಇದರ ಪ್ರಕಾಶ ಸೂರ್ಯಪ್ರಕಾಶದ ಸುಮಾರು 1,೦೦,೦೦೦ದಷ್ಟು. ಕಾಣುವ ಅತಿ ಪ್ರಕಾಶಮಾನ ನಕ್ಷತ್ರಗಳಲ್ಲಿ ಇದು ಎರಡನೆಯದು.