ಅಗಾಥಿಸ್

ಸಂಪಾದಿಸಿ

ಕೋನಿಫರೀ ಗುಂಪಿನ ಪೈನೇಸೀ ಕುಟುಂಬಕ್ಕೆ ಸೇರಿದ ನಿತ್ಯ ಹರಿದ್ವರ್ಣದ ವೃಕ್ಷ. ಡಾಮರ್ಪೈನ್ ಇದರ ಸಾಮಾನ್ಯ ಹೆಸರು. ಪ್ರಪಂಚದ ಶೀತಹವೆಯುಳ್ಳ ಪ್ರದೇಶಗಳಲ್ಲೆಲ್ಲ ಚೆನ್ನಾಗಿ ಬೆಳೆಯುತ್ತದೆ. ಎತ್ತರ 30-60ಮೀ. ಹುಲುಸಾಗಿ ಬೆಳೆದ ಮರದ ಬುಡ ಅಗಾಧವಾಗಿ ಹಿಗ್ಗಿ 6ಮೀ.ಗೂ ಹೆಚ್ಚು ಸುತ್ತಳತೆಯನ್ನು ಪಡೆದಿರುವ ನಿದರ್ಶನಗಳಿವೆ.


ಅದರ ಎಲೆಗಳು ಸೂಜಿಯಾಕಾರದಲ್ಲಿ ಇರುವುದಿಲ್ಲ. ಇದೇ ಈ ಗಿಡಕ್ಕೂ ಇತರ ಶಂಕುವೃಕ್ಷಗಳಿಗೂ ಇರುವ ವ್ಯತ್ಯಾಸ. ಅಭಿಮುಖ ಇಲ್ಲವೆ ಪರ್ಯಾಯ ಜೋಡಣೆ ಹೊಂದಿರುವ ಇದರ ಎಲೆಗಳು ಚಪ್ಪಟೆಯಾಗಿ, ಅಗಲವಾಗಿ ಒರಟಾಗಿರುತ್ತದೆ. ಎಲೆಗಳಿಗೆ ಸಮಾನಾಂತರ ನಾಳಗಳಿರುತ್ತವೆ. ಇರುವ 20 ಪ್ರಭೇದಗಳಲ್ಲಿ ಅಗಾಥಿಸ್ ಆಸ್ಟ್ರಾಲಿಸ್, ಅಗಾಥಿಸ್ ಬ್ರೌನಿಯೈ ಮತ್ತು ಅಗಾಥಿಸ್ ಅಲ್ಬ ಎಂಬ ಮೂರು ಮುಖ್ಯವಾದುವು. ಅಗಾಥಿಸ್ ಏಕಲಿಂಗ ಇಲ್ಲವೇ ದ್ವಿಲಿಂಗಸಸ್ಯ: ಅಂತೆಯೇ ಗಂಡು ಮತ್ತು ಹೆಣ್ಣು ಶಂಕುಗಳು (ಕೋನ್ಸ್) ಬೇರೆ ಬೇರೆ ಇಲ್ಲವೇ ಒಂದೇ ವೃಕ್ಷದಲ್ಲಿ ಬಿಡಬಹುದು. ಶಂಕುಗಳು ಸಾಮಾನ್ಯ ವಾಗಿ ಪಕ್ಕದ ಸಣ್ಣ ಟೊಂಗೆಗಳಲ್ಲಿ ಮಾತ್ರ ಬಿಡುತ್ತವೆ. ಗಂಡು ಶಂಕುಗಳು ದುಂಡಗೆ 5-8ಸೆಂ.ಮೀ ಉದ್ದ ವಾಗಿರುತ್ತವೆ. ಹೆಣ್ಣು ಶಂಕುಗಳು ದುಂಡಗೆ ದಪ್ಪವಾಗಿರುತ್ತವೆ.

ಮೆರುಗೆಣ್ಣೆಗಳ ತಯಾರಿಕೆಯಲ್ಲಿ ಉಪಯೋಗಿಸುವ ಕೌರಿ ಅಂಟು ಅಗಾಥಿಸ್ ಆಸ್ಟ್ರಾಲಿಸ್ ಪ್ರಭೇದದ ಪಳೆಯುಳಿಕೆಗಳಿಂದ ದೊರೆಯುವ ಪದಾರ್ಥ. ಪ್ರಾಚೀನಕಾಲದಲ್ಲಿ ಈ ಮರಗಳ ಒಂದು ದೊಡ್ಡ ಅರಣ್ಯವೇ ನ್ಯೂಜಿ಼ಲೆಂಡಿನಲ್ಲಿತ್ತು. ಆದ್ದರಿಂದಲೇ ಇಂದೂ ಅಲ್ಲಿ ಕೇವಲ 2ಮೀ ಗಳಷ್ಟು ಭೂಮಿಯನ್ನು ಅಗೆದರೆ ಸಾಕು, ಹೇರಳವಾಗಿ ಈ ಕೌರಿ ಅಂಟು ಸಿಕ್ಕುತ್ತದೆ. ತಂಪು ಹವೆಯುಳ್ಳ ಪ್ರದೇಶಗಳ ತೋಟಗಳಲ್ಲಿ ಒಂದು ವಿಶೇಷ ಆಕರ್ಷಣೆಯಾಗಿ ಈ ಮರವನ್ನು ಬೆಳೆಸುವರು.