ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಗ್ಗದ ಭಯಾನಕಗಳು

ಅಗ್ಗದ ಭಯಾನಕಗಳು

ಸಂಪಾದಿಸಿ

ಅಮೆರಿಕ, ಇಂಗ್ಲೆಂಡ್ ಮುಂತಾದ ದೇಶಗಳಲ್ಲಿ ಕಳೆದ ಶತಮಾನದ ಉತ್ತರಾರ್ಧದಲ್ಲಿ ಬಹಳ ಜನಪ್ರಿಯವಾಗಿದ್ದ ಒಂದು ರೀತಿಯ ರೋಮಾಂಚಕ, ಹಿಂಸಾತ್ಮಕ ಕಥಾವಸ್ತುವನ್ನುಳ್ಳ ಕೀಳು ಕಾದಂಬರಿಗಳು (ಪೆನಿ ಡ್ರೆಡ್ಫುಲ್ಸ್). ಮೊದಲು ಅಗ್ಗವಾದ ದಿನಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ ಸಾಕಷ್ಟು ಜನರ ಕುತೂಹಲ ಕೆರಳಿಸುತ್ತಿದ್ದ ಇವು ಅನಂತರ ನೀಲಿ ಕಾಗದ, ಹಳದಿರಕ್ಷಾಪತ್ರವನ್ನುಳ್ಳ ಪುಸ್ತಕದ ರೂಪದಲ್ಲಿ ಹೇರಳವಾಗಿ ಮಾರಾಟವಾಗುತ್ತಿದ್ದುವು. ಮೊಟ್ಟಮೊದಲು 1860ರಲ್ಲಿ ಈ ಭಯಂಕರ ಸಾಹಿತ್ಯವಿಶೇಷವನ್ನು ಸೃಷ್ಟಿಸಿದ ಕೀರ್ತಿ ಇ.ಎಫ್.ಬೀಡ್್ಲ ಎಂಬುವನಿಗೆ ಸಲ್ಲುತ್ತದೆ. 1895ರಲ್ಲಿ ಪ್ರಕಟವಾದ ಇನ್ನೂ ಅಗ್ಗವಾದ ನಿಕ್ಕಾರ್ಟರ್ ಮತ್ತು ಫ್ಯ್ರಾಂಕ್ ಮೆರಿವೆಲ್ ಪುಸ್ತಕಮಾಲೆಯನ್ನು ಅಸಂಖ್ಯಾತಮಂದಿ ಓದಿ ಮೈಮರೆತರು. ಪುಸ್ತಕದ ಬೆಲೆ ಒಂದು ಪೆನ್ನಿಗಿಂತ ಹೆಚ್ಚು ಇರುತ್ತಿರಲಿಲ್ಲವಾಗಿ ಅವುಗಳನ್ನು ಜನ ಧಾರಾಳವಾಗಿ ಕೊಳ್ಳುತ್ತಿದ್ದರು. ಮಾರಾಟದಿಂದ ಪ್ರಕಟಣಕಾರರಿಗೆ ಹೇರಳವಾಗಿ ಹಣ ಬರುತ್ತಿತ್ತು. ಕುತೂಹಲ ಕೆರಳಿಸಿ ಕೋಲಾಹಲವನ್ನುಂಟುಮಾಡುವಂಥ ಅಪಕ್ವಶೈಲಿಯಲ್ಲಿ ಬರೆದ ಈ ಪುಸ್ತಕಗಳು ಹುರುಳಿಲ್ಲದ ಸಾಂಪ್ರದಾಯಿಕ ಆದರ್ಶಗಳನ್ನೂ ಕುರುಡು ದೇಶಪ್ರೇಮವನ್ನೂ ಎತ್ತಿಹಿಡಿಯಲೆತ್ನಿಸಿದುವು. ಆಕ್ಷೇಪಣೀಯವಾದ ಯಾವ ತೆರನಾದ ಅನೀತಿಯನ್ನು ಪ್ರತಿರೂಪಿಸದಿದ್ದರೂ ಈ ಪುಸ್ತಕಗಳ ಆಡಂಬರದ ಶೈಲಿ, ಸಾಮಾನ್ಯ ಜನರ ಅಭಿರುಚಿಯನ್ನು ಇನ್ನೂ ಕೀಳುಮಟ್ಟಕ್ಕೊಯ್ಯಲು ಕಾರಣವಾಯಿತೆಂದು ಅನೇಕರ ಅಭಿಪ್ರಾಯ.