ಅನಾಮಧೇಯ ರಚಿಸಿದ ಗ್ರಂಥಕ್ಕೆ ತನ್ನ ಹೆಸರನ್ನು ಗ್ರಂಥಕರ್ತೃ ಹಾಕದಿರುವುದೇ ಅನಾಮಿಕತೆ. ನಾಚಿಕೆಯಿಂದಲೊ ವಿನಯದಿಂದಲೊ ಲೇಖಕರು ಅನಾಮಿಕರಾಗಿ ಉಳಿಯ ಬಯಸುವುದುಂಟು. ಕೆಲವು ವೇಳೆ ಯಾವುದೋ ಕಾರಣದಿಂದ ಕರ್ತೃವಿನ ಅಂಕಿತ ಕಣ್ಮರೆಯಾಗಿ ಕೃತಿ ಅಂಕಿತ ನಾಮವಾಗಿ ನಿಲ್ಲಬಹುದು. ಬರಹ ಇನ್ನೂ ಬಳಕೆಗೆ ಬಾರದಿದ್ದ ಕಾಲದಲ್ಲಿ ಕಾವ್ಯ ಅಥವಾ ಕಾವ್ಯಭಾಗಗಳು ಬಾಯಿಂದ ಬಾಯಿಗೆ ನಡೆದು ಬರುತ್ತಿದ್ದಾಗ ಜನ ಕಾವ್ಯವನ್ನು ಉಳಿಸಿಕೊಂಡರೇ ಹೊರತು ಕವಿಗಳ ಹೆಸರುಗಳನ್ನಲ್ಲ. ಹೀಗಾಗಿ ಅನೇಕ ಬರಹಗಳ ಕರ್ತೃಗಳು ಯಾರೆಂಬುದು ತಿಳಿಯದಾಗಿದೆ. ಎಷ್ಟೋ ಜಾನಪದ ಗೀತೆಗಳು ಉತ್ಕಷ್ಟವಾದ ಪದ್ಯಗಳಾಗಿ ನಮ್ಮ ಕುತೂಹಲ ಕೆರಳಿಸುತ್ತಿದ್ದರೂ ಅವನ್ನು ಕಟ್ಟಿದ ಕವಿಗಳಾರೊ ನಾವು ತಿಳಿಯುವಂತಿಲ್ಲ. ಕರ್ತೃವಿನ ಹೆಸರು ಗೊತ್ತಾದರೆ ಒಳ್ಳೆಯದು; ಆದರೆ ಗೊತ್ತಾಗದಿದ್ದರೆ ಕೆಟ್ಟದ್ದಲ್ಲ. ಏತಕ್ಕೆಂದರೆ ಕೃತಿ ಹೆಚ್ಚೇ ಹೊರತು ಕರ್ತೃವಲ್ಲ. ಒಂದು ಕಾವ್ಯದ ನಿಷ್ಪಕ್ಷಪಾತವಾದ ವಿಮರ್ಶೆ ನಡೆಯಬೇಕಾದರೆ ಕವಿಯನ್ನು ಹಿಂಬದಿಗೆ ಒತ್ತಬೇಕು ಅಥವಾ ಮರೆತುಬಿಡಬೇಕು. ಬೈರನ್, ಗಯಟೆ ಮೊದಲಾದವರ ಸುಂದರ ಕವಿತೆಯನ್ನು ಓದುವಾಗ ಅವರೆಂಥ ಮನುಷ್ಯರಾಗಿದ್ದರು ಎಂಬುದು ಲಕ್ಷ್ಯಕ್ಕೆ ಬಾರದಿದ್ದರೇ ಲೇಸು. ಅನಾಮಿಕತೆಯಿಂದ ಲೇಖಕನಿಗೂ ಓದುಗ ಸಮಾಜಕ್ಕೂ ಪ್ರಯೋಜನ ಇಲ್ಲದಿಲ್ಲ.

ಅನಾಮಿಕತೆಯನ್ನು ದುರುಪಯೋಗಕ್ಕೆ ಸೆಳೆದುಕೊಳ್ಳುವುದೂ ಸಾಧ್ಯ. ಬಿಡಿ ವ್ಯಕ್ತಿಗಳನ್ನೊ ಇಡೀ ಸಮಾಜವನ್ನೊ ಕಟುವಾಗಿ ನಿಂದಿಸಿ ಅವಹೇಳನಕ್ಕೆ ಗುರಿಯಾಗಿಸುವ ಪ್ರಸಂಗದಲ್ಲಿ ವಿಡಂಬನಕಾರ ಸ್ವಂತ ಹಿತಕ್ಕೋಸ್ಕರ ಮರೆಯಲ್ಲಿ ಅಡಗಿರುತ್ತಾನೆ. ಮೇಲಣವರ್ಗದವರನ್ನೂ ಬಲಿಷ್ಠರನ್ನೂ ಅಧಿಕಾರ ಪ್ರಮತ್ತರನ್ನೂ ಎದುರಿಗೆ ನಿಂತು ಆಕ್ಷೇಪಿಸಿದಲ್ಲಿ ಅಂಥವನಿಗೆ ಅಪಾಯದ ಸಂಭವ ಹೆಚ್ಚು. ವಿಮರ್ಶಕರಿಗೆ ಬಹಳ ಕಾಲ ಅನಾಮಿಕತೆ ಅಭೇಧ್ಯ ದುರ್ಗವಾಗಿತ್ತು. ನೂತನ ಲೇಖಕರನ್ನು ಸಿಕ್ಕಾಪಟ್ಟೆ ಹಳಿದು ಖಂಡನೆಮಾಡಿ ನೆಮ್ಮದಿಯಿಂದ ಇರುತ್ತಿದ್ದರು. ನೈಜಕವಿಗೆ ದುಷ್ಟಟೀಕೆಯಿಂದ ಹಾನಿಯೇನೂ ಇಲ್ಲದಿದ್ದರೂ ಮನುಷ್ಯಮಾತ್ರನಾದ್ದರಿಂದ ಕೊಂಚ ನೋವು ಅವನನ್ನು ತಟ್ಟಿಯೇ ತಟ್ಟುತ್ತದೆ; ಸಾಮಾನ್ಯ ಕವಿಗಂತೂ ತುಂಬ ನರಳಾಟ.

ಈಗ ಅನಾಮಿಕತೆ ಯಾರಿಗೂ ಬೇಕಾಗಿಲ್ಲ. ಪ್ರಾಮಾಣಿಕ ಅಭಿಪ್ರಾಯವನ್ನು ನೇರವಾಗಿ ಹೇಳುವುದಕ್ಕೆ ಹಿಂಜರಿಯುವುದು ಸಮರ್ಪಕ ನೀತಿಯಲ್ಲ. ಗ್ರಂಥಕರ್ತನಿಗೆ ತನ್ನ ಹೆಸರು ಪ್ರಕಟವಾಗಲೆಂಬ ಉತ್ಕಟಾಪೇಕ್ಷೆ ಇದ್ದೇ ಇರುತ್ತದೆ. ಕೃತಿ ಒಳ್ಳೆಯದಾದರೆ ನಾನು ಬರೆದೆ ತಾನು ಬರೆದೆ ಎಂದು ಇತರರು ಅದನ್ನು ಅಪಹರಿಸಬಹುದು. (ಎಸ್.ಎ.ಆರ್.)

ಆಧುನಿಕ ಕನ್ನಡ ಕಾವ್ಯದ ಸಂದರ್ಭದಲ್ಲಿನ ಒಂದು ಪ್ರಸಂಗವನ್ನು ಸ್ಮರಿಸಬಹುದು. ಬಿ.ಎಂ.ಶ್ರೀ ಅವರ ಇಂಗ್ಲಿಷ್ ಗೀತಗಳು ಸಂಕಲನದಲ್ಲಿ ಎರಡು ಮನಸ್ಸು ಎಂಬ ಕವನವಿದೆ. ಬಿ.ಎಂ.ಶ್ರೀ ಅವರು ಇದರ ವಿವರ ಕೊಡುವಾಗ... ಎಂದು ಕಾಣಿಸಿದರು. ಇದರ ಇಂಗ್ಲಿಷ್ ಮೂಲ ಸಿಕ್ಕಲೇ ಇಲ್ಲ. ಇತ್ತೀಚಿಗೆ ತಿಳಿದು ಬಂದಿರುವುದು ಇದು ಶ್ರೀ ಅವರದೇ ರಚನೆ. ಇಂಗ್ಲಿಷ್ ಮೂಲವಿಲ್ಲ ಎಂದು. ಕವನದಲ್ಲಿ ಎರಡು ಭಾಗಗಳಿವೆ. ಒಂದು ಅತಿ ನಿರಾಸೆಯದು. ಎರಡನೆಯದು ನಿರಾಸೆಯನ್ನು ಗೆದ್ದ ಮನಸ್ಸಿನ ಸ್ಥಿತಿ. ಕವನದ ಪ್ರಾರಂಭವು ಹೋಗಬಾರದ ನಾವು-ಅವನು ನಾನು! ಐದು ಆರನೆಯ ವ್ಯಕ್ತಿಗಳು ಕಣ್ಣಿಲ್ಲದವನವನು. ತಿಳಿಯದವನು ಶ್ರೀ ಅವರ ಒಬ್ಬನೇ ಮಗನಿಗೆ ಮನೆಯಲ್ಲಿ ಒಂದು ಅಚಾತುರ್ಯದಿಂದ ಕಣ್ಣು ಹೋಯಿತು. ಸ್ವಲ್ಪ ಕಾಲದಲ್ಲಿ ಶ್ರೀ ಅವರ ಪತ್ನಿಯೂ ನಿಧನರಾದರು. ಅಂಥ ಸಂದರ್ಭದಲ್ಲಿ ಶ್ರೀ ಅವರು ತಮ್ಮ ಯಾತನೆಯನ್ನು ತೋಡಿಕೊಂಡು ಧೈರ್ಯವನ್ನು ಪಡೆದುಕೊಂಡಿದ್ದರ ದಾಖಲೆ ಇದು. ಅನಾಮಿಕತೆಗೆ ಯಾವ ಯಾವ ಕಾರಣಗಳಿರಬಹುದೋ!

(ಪರಿಷ್ಕರಣೆ: ಪ್ರೊ.ಎಲ್.ಎಸ್.ಶೇಷಗಿರಿರಾವ್)