ಅನುವೃದ್ಧಿ
ಎಂದರೆ ಅಸ್ತಿವೃದ್ಧಿ (ಆ್ಯಕ್ಸೆಷನ್), ವಸ್ತುವಿನ ಸ್ವಾಮಿಯೇ ತನ್ನ ಆಸ್ತಿಯಿಂದ ಉದ್ಭವಿಸಿದ, ಅದರೊಡನೆ ಅಭೇದವಾಗಿರುವ, ಅದರಿಂದಲೇ ಸಿದ್ಧವಾದವುಗಳಿಗೆಲ್ಲ ಸ್ವಾಭಾವಿಕವಾಗಿಯೇ ಒಡೆಯನಾಗುವನು ಎಂಬ ತತ್ತ್ವ ನೈಸರ್ಗಿಕ ಕಾಯಿದೆ ಎನ್ನುವಂತೆ ಎಲ್ಲ ಕಾಯಿದೆಗಳಲ್ಲಿಯೂ ರೂಢವಾಗಿದೆ. ಅಂದರೆ ಆಸ್ತಿಯ ಮಾಲೀಕನೆ ಈ ಎಲ್ಲ ತರಹದ ಅನುವೃದ್ಧಿಗೂ ಮಾಲೀಕನಾಗುವನು. ರೋಮನ್ ಕಾಯಿದೆಯಂತೆ ನಿಸರ್ಗಜನ್ಯ ಅನುವೃದ್ಧಿ (ಗಿಡಮರ, ದವಸದಾನ್ಯ, ದನಕರುಗಳು) ಮಾಲೀಕನಿಗೆ ಸೇರುತ್ತದೆ. ಮನುಷ್ಯಪ್ರಯತ್ನದಿಂದಾದ ವಸ್ತುವಿನ ಮೌಲ್ಯವೃದ್ಧಿಯನ್ನು ಪ್ರಸ್ತಾಪಿಸಿ (ಮರದಿಂದ ಮಾಡಿದ ಹಲಗೆ, ಕಸೂತಿ ಹೊಂದಿದ ವಸ್ತ್ರ. ಧಾತುವಿನಿಂದ ಸಿದ್ಧಪಡಿಸಿದ ಪಾತ್ರೆಗಳು) - ಇಂಥವು ಆಸ್ತಿಯ ಅನುವೃದ್ಧಿಯೆಂದೇ ಪರಿಗಣಿಸಿ ಆ ಮೂಲವಸ್ತುವಿನ ಮಾಲೀಕನಿಗೆ ಸುಧಾರಿತ ವಸ್ತುವಿನ ಸ್ವಾಮ್ಯವನ್ನು ಕೊಟ್ಟಿರುವರು. (ಆದರೆ ಅದರಿಂದ ಹುಟ್ಟಿದ ವಸ್ತು ವ್ಯಾವಹಾರಿಕವಾಗಿ ಅದರಿಂದ ಸಂಪೂರ್ಣ ಭಿನ್ನವೆಂದು ಎಣಿಸಲ್ಪಟ್ಟಾಗ ಉದಾ: ದ್ರಾಕ್ಷಿಯಿಂದಾದ ಮದ್ಯ. ಕಾಳಿನಿಂದ ಬಂದ ಎಣ್ಣೆ, ಗೋದಿಯಿಂದಾದ ಬ್ರೆಡ್ಡು - ಇವುಗಳಿಗೆ ಈ ನಿಯಮ ಅನ್ವಯಿಸುತ್ತಿರಲಿಲ್ಲ). ಆದರೆ ಇಂಗ್ಲಿಷ್ ಕಾಯಿದೆ ಈ ತರದ ಮೌಲ್ಯವೃದ್ಧಿಯ ಪ್ರಸಂಗಗಳಲ್ಲಿ ಈ ಎಲ್ಲ ತತ್ತ್ವಗಳನ್ನೂ ಒಪ್ಪಿಕೊಂಡಿಲ್ಲ. ನೈಸರ್ಗಿಕಾನುವೃದ್ಧಿಯ ವಿಚಾರದಲ್ಲಿ ಈ ತತ್ತ್ವವನ್ನು ಅನುಸರಿಸಿದ್ದರೂ ಕೃತ್ರಿಮಾನುವೃದ್ಧಿಯ ವಿಚಾರದಲ್ಲಿ ಅನುಸರಿಸಿಲ್ಲ. ಮೂಲವಸ್ತುವಿನ ಬೆಲೆ, ಕೃತ್ರಿಮವಾಗಿ ಸುಧಾರಿತವಸ್ತುವಿನ ಬೆಲೆ ಇವೆರಡನ್ನೂ ವಿಮರ್ಶಿಸಿ ನೋಡಿ ಅವುಗಳ ಮೌಲ್ಯಮಾಪನದಿಂದ ಯಾವನು ಹೆಚ್ಚು ಅರ್ಹನೆಂದು ತೋರುವನೋ ಅವನಿಗೆ ಆ ಪೂರ್ಣವಸ್ತುವಿನ ಸ್ವಾಮ್ಯವನ್ನು ಕೊಟ್ಟು, ಮತ್ತೊಬ್ಬನಿಗೆ ಅವನು ಕಳೆದುಕೊಂಡ ಅಂಶಗಳಿಗೆ ಪರಿಹಾರವನ್ನು ಒದಗಿಸಲಾಗುತ್ತದೆ. ಭಾರತೀಯ ಕಾಯಿದೆಯೂ ಇದೇ ರೀತಿಯದು. ಸ್ಥಿರಾಸ್ತಿಯ ಅನುವೃದ್ಧಿ ಅನೇಕ ವಿಧವಾಗಿರುತ್ತದೆ. ಹೊಳೆ, ಹಳ್ಳ, ಸಮುದ್ರ ಇವುಗಳ ಪ್ರವಾಹದ ಪರಿಣಾಮವಾಗಿ ಅಲ್ಪಸ್ವಲ್ಪವಾಗಿ ಸಂಚಯಿಸುವ ನೆರೆಮಣ್ಣಿನಿಂದ ದಂಡೆಯ ಭೂಮಿ ಬೆಳೆಯುವುದು. ಹೀಗೆ ನೆರೆಮಣ್ಣಿನ ನೆಲ ದಂಡೆಯ ನೆಲದಿಂದ ಅಭಿನ್ನವಾಗಿ ಬೆಳೆದರೆ ಅದು ಸಾರ್ವಜನಿಕ ಹೊಳೆಯ ಭಾಗವನ್ನು ವ್ಯಾಪಿಸಿದರೂ ಅದರ ಸ್ವಾಮ್ಯ ದಂಡೆಯ ನೆಲದ ಒಡೆಯನಿಗೇ ಸೇರುವುದು. ಆದರೆ ದಂಡೆಯ ನೆಲದಿಂದ ಭಿನ್ನವಾಗಿ ತೋರುವಂತೆ ಬೇರ್ಪಡಿಸಲ್ಪಟ್ಟ ಭಾಗದಲ್ಲಿನ ಮಣ್ಣು, ಮರಳು ಮುಂತಾದವುಗಳ ಮೇಲೆ ನೆರೆಯ ತೀರದ ಭೂಮಿಯ ಒಡೆಯನಿಗೆ ಹಕ್ಕಿಲ್ಲ (ಸೆಕ್ರೆಟರಿ ಆಫ್ ಸ್ಟೇಟ್ ವರ್ಸನ್ ಆಫ್ ವಿಜಯನಗರಂ 40, ಇಂಡಿಯನ್ ಕೇಸಸ್ 897). ಅದರಂತೆ ಆಕಸ್ಮಿಕವಾಗಿ ಬಂದ ವಿಪರೀತ ಪ್ರವಾಹದ ಪ್ರಭಾವದಿಂದ ಒಂದು ಕಡೆಯ ಭೂಮಿ ಕತ್ತರಿಸಿ ಬಂದು ಇನ್ನೊಂದು ಕಡೆಯಲ್ಲಿ ಹೊಂದಿಸಲ್ಪಟ್ಟರೆ ಇಂಥವರದೇ, ಇಂಥದೇ ಭೂಮಿ ಎಂದು ಗುರುತಿಸಲ್ಪಡುವಂತಿದ್ದರೆ ಅದು ತನ್ನ ಮಾಲೀಕನ ಒಡೆತನವನ್ನು ಕಳೆದುಕೊಳ್ಳುವುದಿಲ್ಲ. ಈ ರೀತಿ ಹೊಸ ನೆಲವುಂಟಾಗುವ ರೀತಿಗಳು ಎರಡು ಬಗೆ, ಸಾವಕಾಶವಾಗಿ ಅದೃಶ್ಯ ರೀತಿಯಲ್ಲಿ ಯಾವಾಗ ಎಷ್ಟು ಎಂದು ಗೋಚರವಾಗದೆ ಕಾಲಕಳೆದಂತೆ ಸಾಕಷ್ಟು ದೊಡ್ಡದಾಗಿ ತೋರಿಬರುವ, ಮೇಲೆ ವಿವರಿಸಿದ ಮೆಕ್ಕಲು ನೆಲದ್ದು, ಒಂದು ರೀತಿ. ಪ್ರವಾಹ ಆಕಸ್ಮಿತವಾಗಿ ತಂದುಕೂಡಿಸಿದ್ದು ಎರಡನೆಯ ರೀತಿ. ಎರಡನೆಯ ರೀತಿಯಲ್ಲಿ ಸ್ಥಳಾಂತರ ಹೊಂದಿದ ಭೂಭಾಗದ ವಿಷಯದಲ್ಲಿ ಖಾಸಗಿ ಒಡೆತನ ಸಿದ್ಧವಾದರೆ ಅದು ಊರ್ಜಿತವಾಗುತ್ತದೆ. ಇಲ್ಲವಾದರೆ ಅದು ಸರ್ಕಾರಕ್ಕೆ ಸೇರುತ್ತದೆ (ಪ್ರಿವಿ ಕೌನ್ಸಿಲ್ ನಿರ್ಣಯ I.ಐ.ಖ. 47 ಮದ್ರಾಸ್ 207). ಈ ರೀತಿ ಸ್ಥಳಾಂತರವಾಗುವ ಅಥವಾ ಅದೃಶ್ಯ ಬೆಳೆವಣಿಗೆಯ ಅಳತೆಗೋಲು ಎಲ್ಲ ದೇಶಗಳಲ್ಲೂ ಒಂದೇ ಆಗಿರುವುದಿಲ್ಲ. ಇಂಗ್ಲೆಂಡ್‍ನಲ್ಲಿಯ ಮಂದಪ್ರವಾಹದ ನದಿಗಳಿಗೆ ಸಂಚಯಿಸಲು ತಲೆಮಾರುಗಳು ಬೇಕಾದಲ್ಲಿ ಭಾರತದ ದೃಪ್ತಪ್ರವಾಹದ ನದಿಗಳಲ್ಲಿ ಅಷ್ಟೇ ವಿಸ್ತಾರದ ನೆರೆಮಣ್ಣಿನ ನೆಲ ಮೂರು ನಾಲ್ಕು ವರ್ಷಗಳಲ್ಲಿ ಆಗಬಹುದು. ಕಾಲಾವಕಾಶ ತದನುಷಂಗಿಯಾದ ಅದೃಶ್ಯಾನುವೃದ್ಧಿ ಇವು ಆಕಸ್ಮಿತವಲ್ಲದ ಕ್ರಮವಾದ ಬೆಳೆವಣಿಗೆಯ ಛಾಯೆಗಳು ಮತ್ತು ಕಾಲದೇಶಾವಲಂಬಿಗಳು.
ಇದಲ್ಲದೆ ಒಮ್ಮೊಮ್ಮೆ ಪ್ರವಾಹದ ದಿಶೆ ಬದಲಾಗಿ ಖಾಸಗಿ ಭೂಮಿಯನ್ನು ಮುಳುಗಿಸಿ ಭಿನ್ನಪಾತ್ರವನ್ನು ಹೊಂದಿದಾಗ ಮೊದಲು ಅದರ ದಂಡೆಯ ಮೇಲೆ ಕಾಣದ ನೆಲಗಳು ಕಂಡು ಬಂದು ಅವೇ ದಂಡೆಯ ಹೊಸ ನೆಲಗಳಾಗುವುವು. ಆಗ ಮುಳುಗಿ ಹೋದ ನೆಲಗಳು ಪುನಃ ಕೆಲವು ಕಾಲದ ಮೇಲೆ ಕಾಣ ಬಂದರೆ ಅವು ತಮ್ಮ ಮೂಲ ಒಡೆತನವನ್ನು ಕಳೆದುಕೊಳ್ಳುವುದಿಲ್ಲ (ಸೆಕ್ರೆಟರಿ ಆಫ್ ಸ್ಟೇಟ್ ವರ್ಸಸ್ ಮಹಾರಾಜ ಆಫ್ ಪಿಥಾಪುರಂ ಂ. ಎ. ಖ. ಮದ್ರಾಸ್, 1938, 470 ಮತ್ತು ಋತ್‍ರಾಜ್ ವರ್ಸಸ್ ಸರ್ಫ್‍ರಾಜ್ 27 ಅಲಹಾಬಾದ್ 655; ಲೋಪೆಸ್ ವರ್ಸಸ್ ಮದನ್ ಮೋಹನ್ ಠಾಕೂರ್ 13 ಮೂರ್ಸ್ I.ಂ. 457). ಹೀಗೆ ಸ್ವಾಭಾವಿಕವಾಗಿ ಉಂಟಾದ ನಿರೆಮಣ್ಣಿನ ನೆಲ ತೀರದ ಭೂಸ್ವಾಮಿಗೆ ಸೇರುವುದಾದರೂ ತೀರದ ಭೂಮಿಯ ಮಾಲೀಕ ಕೃತ್ರಿಮೊಪಾಯಗಳನ್ನು ಕಲ್ಪಿಸಿ ನದಿಯ ಪಾತ್ರವನ್ನು ಆಕ್ರಮಿಸುವ ದುರುದ್ದೇಶವನ್ನು ಸಾಧಿಸಿದರೆ ಅಂಥ ಕೃತ್ರಿಮ ರೀತಿಯಿಂದ ಸಾಧಿಸಿದ ಮೆಕ್ಕಲುಭೂಮಿ ಸರಕಾರದ್ದೇ ಆಗುವುದು. ಆದರೆ ಭೂಮಿಯ ರಕ್ಷಣೆಗೆಂದು ಮಾಡಿದ ಉಪಾಯಗಳಿಂದ ಆದ ಅನುವೃದ್ಧಿ ಸ್ವಾಭಾವಿಕಾನುವೃದ್ಧಿಯಂತೆಯೇ ಪರಿಗಣಿಸಲ್ಪಡುತ್ತದೆ.
ಇದರಂತೆ ಗೇಣಿದಾರ ಅಥವಾ ಬಾಡಿಗೆದಾರ ಉಪಭೂಗ ಮಾಡುವಕಾಲದಲ್ಲಿ, ಆ ಆಸ್ತಿಗೆ ಏನಾದರೂ ಅನುವೃದ್ಧಿಯಾದರೆ ಅದು ಮೂಲ ಮಾಲೀಕನಿಗೇ ಸೇರುವುದು. ಆದರೆ ಗೇಣಿಯ ಅವಧಿಯಲ್ಲಿ ದಾಮಾಶಾಹಿ ಹೆಚ್ಚು ಗೇಣಿಕೊಟ್ಟು ಗೇಣಿದಾರ ಅನುಭೋಗಿಸಲು ಅಡ್ಡಿಯಿಲ್ಲ. ಗೇಣಿಯ ಅವಧಿಯ ಅನಂತರ ಮಾತ್ರ ಅನವೃದ್ಧಿಯನ್ನೂ ಮೂಲ ಭೂಮಿಯ ಒಡೆಯನಿಗೆ ಬಿಟ್ಟುಕೊಡತಕ್ಕದ್ದು (ಆಸ್ತಿ ಹಸ್ತಾಂತರ ಕಾಯ್ದೆ 108-ದಿ ಟ್ರಾನ್ಸ್‍ಫರ್ ಆಫ್ ಪ್ರಾಪರ್ಟಿ ಆಕ್ಟ್).
ಇದರಂತೆ ಭೂಗ್ಯದಾರನ (ಪೊಸೆಸಿಂಗ್ ಮಾರ್ಟ್‍ಗೇಜ್) ಉಪಭೂಗಕಾಲದಲ್ಲಿ ಅಡವಿಗೊಳಪಟ್ಟ ಭೂಮಿ ಅನುವೃದ್ಧಿ ಹೊಂದಿದರೆ ಅಡವನ್ನು ಸಾಲಗಾರ ಬಿಡಿಸಿಕೊಳ್ಳುವಾಗ ಅನುವೃದ್ಧಿಯನ್ನು ಸಹ ಸಾಲಗಾರನಿಗೇ ಕೊಡಬೇಕಾಗುವುದು. ಇಲ್ಲಿ ಕೇವಲ ಭೌತಿಕ ಅನುವೃದ್ಧಿಯೊಂದಲ್ಲದೆ ಆಸ್ತಿಯ ಸುಧಾರಣೆ ಅಥವಾ ಆಸ್ತಿಯ ಹಕ್ಕುಗಳ ವಿಸ್ತರಣೆಯನ್ನು ಸಹ ಅನುವೃದ್ಧಿ ಎಂದು ಗಣಿಸಿರುವರು. ಉದಾ : ಅಡವುದಾರ ಮಾಲೀಕತನದ ಹಕ್ಕಿನಿಂದ ಗೇಣಿ ಹೊರತಳ್ಳಿ ಕಬ್ಜಾ ಪಡೆದರೆ ಅಥವಾ ಆ ಮಾಲೀಕತ್ವದ ಹಕ್ಕಿನ ಬಲದಿಂದ ಬೇರೆ ಆಸ್ತಿಯನ್ನು ಪಡೆದರೆ ಇಂಥ ಮಾಲೀಕತ್ವದಿಂದ ಅನುಷಂಗಿಯಾಗಿ ಬಂದ ಕಬ್ಜಾ ಮತ್ತು ಇತರ ಹಕ್ಕುಗಳೂ ಮಾಲೀಕತ್ವದ ಅನುವೃದ್ಧಿ ಎಂದು ಗಣಿಸಲ್ಪಡುತ್ತವೆ (ಸೊರಬ್ಜಿ ವರ್ಸಸ್ ದ್ವಾರಕದಾಸ್, ಂ.ಎ.ಖ. 1932 ಪ್ರಿವಿ ಕೌನ್ಸಿಲ್ 199). ಹೀಗೆ ಆಸ್ತಿಯನ್ನು ಸುಧಾರಿಸುವಲ್ಲಿ ಹಕ್ಕುಗಳ ವಿಸ್ತರಣೆಯಲ್ಲಿ ಆದ ಖರ್ಚಿನ ಪ್ರಶ್ನೆಯ ಬಗ್ಗೆ ಆಸ್ತಿ ಹಸ್ತಾಂತರ, ಕಾಯಿದೆಯ 63ನೆಯ ಭಾಗ ವಿವರಗಳನ್ನು ಕೊಟ್ಟಿದೆ. ಇದರಂತೆಯೇ ಅಡವಿಗೆ ಕೊಟ್ಟ ಭೂಮಿಯಲ್ಲಿ ಅನುವೃದ್ಧಿಯಾದರೆ ಆ ಅನುವೃದ್ಧಿ ಅಡವಿಗೆ ಒಳಪಡುವುದು (ಇದೇ ಕಾಯಿದೆಯ ಸೆಕ್ಷನ್ 70).
ಆನಂತರ ಅನುವೃದ್ಧಿಯ ಪ್ರಶ್ನೆಯನ್ನು ದಂಡೆಗೆ ಲಗತ್ತಾದ ಭೂಮಿ ಖಾಸಗಿ ಒಡೆತನಕ್ಕೆ ಸೇರಿದ್ದೆಂಬ ತಳಹದಿಯ ಮೇಲೆ ವಿವರಿಸಲಾಗಿದೆ. ಇದು ಭಾರತದ ಸಾಧಾರಣ ಕಾಯಿದೆ, ಇದು ಮೊದಲಿಗೆ ಬಂಗಾಲದಲ್ಲಿ 1825ರ ರೆಗ್ಯುಲೇಷನ್ ಘಿIರಲ್ಲಿ ಶ್ರುತಗೊಳಿಸಲ್ಪಟ್ಟಿದ್ದು ಇಡೀ ಭಾರತಕ್ಕೆ ಅನ್ವಯಿಸುವ ತತ್ತ್ವವನ್ನೊಳಗೊಂಡಿದೆ. (ಂ.I.ಖ 1949 ಪ್ರಿವಿ ಕೌನ್ಸಿಲ್ 3: ಮಹಾರಾಜ ಆಫ್ ಪಿಥಾಪುರಂ ವರ್ಸಸ್ ಮದ್ರಾಸ್ ಪ್ರವಿನ್ಸ್). ಇಂಥ ಸಂಸ್ಥಾನಿಕರ ಅಥವಾ ದೊಡ್ಡ ಜಹಗೀರುದಾರರು ಭೂಮಿಗಳು ಅವರ ಒಡೆತನದ್ದಿರುತ್ತವೆ. ಅವುಗಳ ಸಂಬಂಧದಲ್ಲಿ ಮೈಸೂರು ಲ್ಯಾಂಡ್ ರೆವಿನ್ಯೂ ಆಕ್ಟ್ 1964, 67ನೆಯ ಸೆಕ್ಷನ್, ಬಾಂಬೆ ಲ್ಯಾಂಡ್ ರೆವಿನ್ಯೂ ಕೋಡ್, ಸಕ್ಷನ್ 37, ಇವುಗಳಲ್ಲಿ ಹೇಳಿದ ಎಲ್ಲಾ ಆಸ್ತಿಗಳು ಸರ್ಕಾರದ ಒಡೆತನದವು. ಎಂಬ ತತ್ತ್ವ ಅನ್ವಯಿಸುವುದಿಲ್ಲ. (ನಹನ್ಸಿಂಗ್‍ಜಿ ವರ್ಸಸ್ ಸೆಕ್ರೆಟರಿ ಆರ್ಫ ಸ್ಟೇಟ್ 43, ಬಾಂಬೆ ಲಾ ರಿಪೋರ್ಟರ್ 167). ಆದರೆ ಇಂಥ ಸಂಸ್ಥಾನಿಕರು ಜಹಗೀರುದಾರರನ್ನು ಬಿಟ್ಟರೆ ಸರ್ವಸಾಧಾರಣವಾಗಿ ಎಲ್ಲ ಆಸ್ತಿಗಳು ಸರ್ಕಾರದ ಒಡೆತನಕ್ಕೆ ಸೇರಿದುವು. ಅದನ್ನು ಭೋಗಿಸುವವನು ಕೇವಲ ಅನುಭವದಾರ (ಆ್ಯಕ್ಯುಪೆಂಟ್) ಅಥವಾ ಸರ್ಕಾರದ ಭೂಮಿಯನ್ನು ಹೊಂದಿದ ಭೂಧಾರಕ ಅವರ ವಿಷಯದಲ್ಲಿ ಮೈಸೂರು ಭೂಮಿ ಕಂದಾಯ ಕಾಯಿದೆ ಸೆಕ್ಷನ್ 81ರಲ್ಲಿ ಪ್ರಸ್ತಾವಿಸಿರುವಂತೆ ನೆರೆಮಣ್ಣಿನ ನೆಲಗಳು, ಹೊಸದಾಗಿ ಉದ್ಬವಿಸಿದ ದ್ವೀಪಗಳು, ಪರಿತ್ಯಕ್ತವಾದ ನದೀ ಪಾತ್ರಗಳು, ಸರ್ಕಾರೀ ಒಡೆತನಕ್ಕೆ ಸೇರಿದುವು; ಮತ್ತು ದಂಡೆಯ ಅನುಭವದಾರ ಇಲ್ಲವೆ ಭೂಧಾರಕ ಆ ಭಾಗದ ಕ್ಷೇತ್ರ ಒಂದು ಎಕರೆ ಮೀರುವವರೆಗೆ ಕಂದಾಯವಿಲ್ಲದೆ ತಾತ್ಕಾಲಿಕವಾಗಿ ಉಪಯೋಗ ಮಾಡಬಹುದು. ಹಾಗೂ ಒಂದು ಎಕರೆ ಮೀರಿದ ಅನಂತರ ಜಿಲ್ಲಾಧಿಕಾರಿ (ಅದೇ ಕಾಯಿದೆಯ 92 ಸೆಕ್ಷನ್) ಆ ಭೂಮಿಯನ್ನು ಸಾರ್ವಜನಿಕ ಕಂದಾಯದ ಹಿತದೃಷ್ಟಿಯನ್ನಿಟ್ಟುಕೊಂಡು ವಿಲೇವಾರಿ ಮಾಡಬಹುದು. ಆದರೆ ಆ ಭೂಮಿಯನ್ನು ಮೊದಲು ದಂಡೆ ಅಥವಾ ತೀರದ ಅನುಭವದಾರ ಅಥವಾ ಭೂಧಾರಕನಿಗೆ ವಾರ್ಷಿಕ ಕಂದಾಯದ ಮೂರು ಪಟ್ಟಿಗೂ ಮೀರದ ಬೆಲೆಗೆ ಕೊಡಬೇಕು. ಅವನು ಪಡೆದುಕೊಳ್ಳಲು ನಿರಾಕರಿಸಿದರೆ ಯುಕ್ತ ಕಂಡ ಕ್ರಯಕ್ಕೆ ಅನ್ಯರಿಗೆ ಆ ನೆರೆ ಭೂಮಿ, ಪರಿತ್ಯಕ್ತ ಪಾತ್ರ ಅಥವಾ ಹೊಸ ದ್ವೀಪವನ್ನು ಕೊಡಬಹುದು. (ವಿ.ಆರ್.ಬಿ.)