ಹಡಪದ ಅಪ್ಪಣ್ಣ
ಸಂಪಾದಿಸಿಭಕ್ತಿ ಭಂಡಾರಿ ಬಸವಣ್ಣನವರು ಕಾಯದ ನೆಳಲಾಗಿ ಅವರಲ್ಲಿ ಹಡಪದ ವೃತ್ತಿಯನ್ನು ಕೈಕೊಂಡು ಅವರ ಸತ್ಸಂಗದ ಫಲವಾಗಿ ಕಾಯದ ಶುದ್ಧಿಯನ್ನರಿತು ತನ್ನ ಸರ್ವಾಚಾರ ಸಂಪತ್ತುಗಳನ್ನು ಬಸವಣ್ಣನವರಲ್ಲಿ ಸಮರ್ಪಿಸಿ ನಿಜವಾಸಿಯಾಗಿದ್ದ ನಿಜಸುಖಿಶರಣ ಹಡಪದ ಅಪ್ಪಣ್ಣ. ಈತನಿಗೆ ಅನುರೂಪಳಾದ ಸಹಧರ್ಮಿಣಿ ಲಿಂಗಮ್ಮ. ಬಸವಣ್ಣನವರ ಆಪ್ತನಂತಿದ್ದು, ಉಚಿತ ಸಂದರ್ಬಗಳಲ್ಲಿ ಒಡೆಯರನ್ನು ಎಚ್ಚರಿಸುತ್ತಿದ್ದ ಸ್ವಾಮಿನಿಷ್ಠೆಯ ಭೃತ್ಯ ಈತ. ಸಿದ್ಧವೀರಣ್ಣೊಡೆಯರು ಸಂಗ್ರಹಿಸಿರುವ ಪ್ರಭುದೇವರ ಶೂನ್ಯಸಂಪಾದನೆಯ ಐದನೆಯ ಸಂಪಾದನೆಯಲ್ಲಿ ಇವನ ವ್ಯಕ್ತಿತ್ವ ಮಹೋನ್ನತವಾಗಿ ಮೂಡಿ ಬಂದಿದೆ. ಅನುಭವ ಮಂಟಪದ ಜ್ಞಾನಭಾಸ್ಕರನೆನಿಸಿದ 'ನಿಂದರೆ ನೆಳಲಿಲ್ಲದ ಸುಳಿದಿರೆ ಹೆಜ್ಜೆಯಿಲ್ಲದ ಪ್ರಭುದೇವ ಸಿದ್ಧರಾಮನೊಡಗೂಡಿ ಮೊದಲಬಾರಿಗೆ ಕಲ್ಯಾಣಕ್ಕೆ ಬಂದಾಗ ಭಕ್ತಿಯಲ್ಲಿ ಮೈಮರೆತಿದ್ದ ಬಸವಣ್ಣನವರನ್ನು ಎಚ್ಚರಿಸಿ, ಒಡೆಯನ ನೈಷ್ಠಿಕಭಕ್ತಿಗೆ ಭಂಗ ಬಾರದಂತೆ, ಬಂದ ಅಸಾಮಾನ್ಯ ಅತಿಥಿಗೆ ಅಪಚಾರವಾಗದಂತೆ ಬಸವಣ್ಣ-ಅಲ್ಲಮ ಪ್ರಭುಗಳ ಮಧ್ಯೆ ನಡೆಸಿದ ಶರಣ ಅಪ್ಪಣ್ಣನ ದೌತ್ಯ ಅವನ ಆಳವಾದ ಅರಿವು ಮತ್ತು ವಿಶಾಲವಾದ ಅನುಭವಕ್ಕೆ ಹಿಡಿದ ಕನ್ನಡಿಯಾಗಿದೆ.
ವಚನ ರಚನೆ
ಸಂಪಾದಿಸಿಇವನ ಸಂಸ್ಕøತಜ್ಞಾನ ಅಪಾರವೆಂಬುದಕ್ಕೆ ಇವನ ವಚನಗಳೇ ಸಾಕ್ಷಿ. ನುಡಿಯಂತೆ ನಡೆ, ವಿಚಾರದಂತೆ ಆಚಾರ ಇವುಗಳಿಂದ ಕೂಡಿ ನಿಷ್ಠೆಯ ಕೆಚ್ಚಿನಿಂದ ಮೂಡಿ ಬಂದಿರುವ ಇವನ ವಚನಗಳು, ಇವನ ಬಾಳಿನ ಬೆಳಕಿಂಡಿಗಳಂತಿವೆ. ಅವು ಅತ್ಯಂತ ಸರಳ, ನೇರ ಮತ್ತು ಹೃದಯತಲಸ್ಪರ್ಶಿ. ಬಸವಪ್ರಿಯ ಕೂಡಲಸಂಗಯ್ಯ ಎಂಬುದು ಈತನ ಅಂಕಿತ.
ಮರಣ
ಸಂಪಾದಿಸಿಬಸವಣ್ಣನವರ ಸಂಗಾತಿಯಾದ ಅಪ್ಪಣ್ಣನ ಶಿವಾನುಭಾವದ ಮಹತ್ವ ಅವನ ಅಂತ್ಯಕಾಲದಲ್ಲಿ ಗೋಚರವಾಗುತ್ತದೆ. ತಮ್ಮ ಅಂತ್ಯಕಾಲದಲ್ಲಿ ಕೂಡಲಸಂಗಮಕ್ಕೆ ಬಂದ ಬಸವಣ್ಣನವರು ತಾವು ಕೈಹಿಡಿದ ಧರ್ಮಪತ್ನಿ ನೀಲಾಂಬಿಕೆಯನ್ನು ಕರೆದು ತರುವಂತೆ ಒಡನಾಡಿಯಾದ ಅಪ್ಪಣ್ಣನನ್ನೇ ಕಳುಹಿಸಿದಾಗ, ಬರಿಕೈಲಿ ಹಿಂತಿರುಗಿ ಬಂದು ನಿಜೇಷ್ಟಲಿಂಗದಲ್ಲಿಯೇ ಗುರು ಹಾಗೂ ಪತಿ ಬಸವಣ್ಣನವರನ್ನು ಕಂಡು ಅದರಲ್ಲಿಯೇ ಸಮರಸಳಾದ ನೀಲಾಂಬಿಕೆಯ ರೀತಿಯನ್ನು ವರ್ಣಿಸುತ್ತಲೇ ತಾನೂ ನಿಜಲಿಂಗದಲ್ಲಿ ಐಕ್ಯನಾದ ನಿಜಸುಖಿ ಅಪ್ಪಣ್ಣನ ಜೀವನ ಶರಣರನ್ನು ಮರಣದಲ್ಲಿ ನೋಡು ಎಂಬ ಉಕ್ತಿಗೆ ಆದರ್ಶವಾಗಿದೆ. ನೀಲಾಂಬಿಕೆಯ ಸಮಾಧಿಯ ಬಳಿಯಲ್ಲೇ ಈತನ ಸಮಾಧಿಯೂ ಇದೆ.
(ಬಿ.ಎನ್.ಸಿ.)