ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯ

ಸರ್ ಸೈಯದ್ ಅಹಮದ್ ಖಾನ್ ಅವರಿಂದ ಸ್ಥಾಪಿತವಾದ ಮಹಮ್ಮಡನ್ ಆಂಗ್ಲೊ ಓರಿಯಂಟಲ್ ಕಾಲೇಜು ಬೆಳೆದು 1920ರಲ್ಲಿ ವಿಶ್ವವಿದ್ಯಾನಿಲಯದ ರೂಪ ಪಡೆಯಿತು. ಮುಸ್ಲಿಮರಿಗೆ ಪ್ರೌಢವಿದ್ಯಾವಕಾಶವನ್ನು ಕಲ್ಪಿಸುವುದೇ ಇದರ ಉದ್ದೇಶ. ಇದರ ಅಧಿಕಾರ ವ್ಯಾಪ್ತಿ ಇದರ ವಿಶ್ವವಿದ್ಯಾನಿಲಯದ ಮಸೀದಿಯಿಂದ 16ಕಿಮೀ ದೂರವಿರುವ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ. ಸ್ವಾತಂತ್ರ್ಯಾ ನಂತರ ಯುನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್ನಿನ ನಿಬಂಧನೆಗೆ ಮತ್ತು ರಾಜ್ಯಾಂಗದ ನಿಯಮಗಳಿಗೆ ಅನುಸಾರವಾಗಿರುವಂತೆ ಈ ವಿಶ್ವವಿದ್ಯಾನಿಲಯದ ವ್ಯವಸ್ಥೆಯನ್ನು ಹೊಸದಾಗಿ ರೂಪಿಸಲಾಯಿತು. ರಾಜ್ಯದ ನಾನಾ ಕಡೆಗಳಿಂದ, ಜಾತಿ ಮತ ಮುಂತಾದ ಭೇದವಿಲ್ಲದೆ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳು ಸ್ಥಳದಲ್ಲೇ ವಾಸಮಾಡಬೇಕೆಂಬ ನಿಯಮವಿದೆ. ಆದರೂ ಶೇಕಡ 25 ರಷ್ಟು ಹೊರಗಿನ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಲಾಗಿದೆ. ಸು. 5,000ಕ್ಕೂ ಹೆಚ್ಚು ವಿದ್ಯಾರ್ಥಿಗಳ ವಸತಿಗೆ ಏರ್ಪಾಟಿದೆ.

ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯ


ಇಲ್ಲಿ ಕಲೆ, ವಿಜ್ಞಾನಗಳಿಗೆ ಸಂಬಂಧಪಟ್ಟ ಎಲ್ಲ ವಿಭಾಗಗಳೂ ಇವೆ. ವಿಜ್ಞಾನಕ್ಕೆ ಸಂಬಂಧಿಸಿದ ಕಾಲೇಜುಗಳಲ್ಲಿ ಪಾಲಿಟೆಕ್ನಿಕ್, ಎಂಜಿನಿಯರಿಂಗ್ ಮತ್ತು ನೇತ್ರಶಾಸ್ತ್ರಕ್ಕೂ ಏಷ್ಯದಲ್ಲಿ ಅತ್ಯುತ್ತಮವಾದುದೆಂದು ಹೆಸರು ಪಡೆದಿದೆ. ಇತ್ತೀಚೆಗೆ ಗ್ರಂಥಾಲಯವಿಜ್ಞಾನ ಮುಂತಾದ ಅನೇಕ ಹೊಸಶಾಖೆಗಳನ್ನೂ ಸೇರಿಸಿದ್ದಾರೆ. ಇಲ್ಲಿನ ದೊಡ್ಡ ಗ್ರಂಥಾಲಯಕ್ಕೆ ಮೌಲಾನಾ ಅಬುಲ್ ಕಲಂ ಆಜ಼ಾದರ ಹೆಸರನ್ನು ಕೊಟ್ಟಿದ್ದಾರೆ.


ಪ್ರೌಢಶಾಲೆಗಳನ್ನೂ ತನ್ನ ವ್ಯಾಪ್ತಿಗೆ ಒಳಪಡಿಸಿಕೊಂಡಿರುವ ಏಕೈಕ ವಿಶ್ವವಿದ್ಯಾಲಯವಿದು. ಇದರ ವ್ಯಾಪ್ತಿಗೆ ಒಳಪಟ್ಟಿರುವ ಐದು ಶಾಲೆಗಳಲ್ಲಿ ಒಂದು ಅಂಧರಿಗಾಗಿ ಮೀಸಲಾದದ್ದು.


ಈ ವಿಶ್ವವಿದ್ಯಾನಿಲಯದಲ್ಲಿ ಸು. 30,000 ವಿದ್ಯಾರ್ಥಿಗಳು, 1400 ಶಿಕ್ಷಕರು ಮತ್ತು 6000 ಶಿಕ್ಷಕೇತರ ಸಿಬ್ಬಂದಿ ಇದ್ದಾರೆ. 95 ವಿಭಾಗಗಳು ಮತ್ತು 73 ಹಾಸ್ಟೆಲ್ಗಳು ಹಾಗೂ ವಿವಿಧ ಕೋರ್ಸುಗಳು ಇವೆ. ಈ ವಿ.ವಿ.ನಿಲಯಕ್ಕೆ ಸೇರಿದಂತೆ ಜೆಡ್.ಎಚ್.ಕಾಲೇಜ್ ಆರ್ಫ್ ಎಂಜಿನಿಯರಿಂಗ್ ಆ್ಯಂಡ್ ಟಿಕ್ನಾಲಜಿ, ಜವಾಹರ್ಲಾಲ್ ನೆಹರು ಮೆಡಿಕಲ್ ಕಾಲೇಜು, ಡಾ.ಜಿಯಾ ಉದ್ದೀನ್ ಡೆಂಟರ್ ಕಾಲೇಜು, ಇನ್ಸ್ಟಿಟ್ಯೂಟ್ ಆಫ್ ಆಫ್ತಾಲ್ಮಾಲಜಿ ಆ್ಯಂಡ್ ಫುಡ್ಕ್ರಾಫ್ಟ್ ಇನ್ಸ್ಟಿಟ್ಯೂಟ್, ಅಕ್ಯಾಡೆಮಿಕ್ ಸ್ಟಾಫ್ ಕಾಲೇಜು ಮೊದಲಾದವು ಇವೆ. ವಿ.ವಿ.ನಿಲಯದ ಕ್ಯಾಂಪಸ್ ಸು.468 ಹೆಕ್ಟೇರ್ ವ್ಯಾಪಿಸಿದೆ.


ಈ ವಿ.ವಿ.ನಿಲಯಕ್ಕೆ ಪ್ರಪಂಚದ ನಾನಾ ಕಡೆಗಳಿಂದ ಮುಖ್ಯವಾಗಿ ಆಫ್ರಿಕ, ಆಗ್ನೇಯ ಏಷ್ಯಗಳಿಂದ-ವಿದ್ಯಾರ್ಥಿಗಳು ಓದಲು ಬರುತ್ತಾರೆ. ಇಲ್ಲಿ ಇಂಗ್ಲಿಷ್, ಹಿಂದಿ, ಉರ್ದು, ಅರ್ಯಾಬಿಕ್, ಪರ್ಷಿಯನ್, ಸಂಸ್ಕೃತ, ತೆಲುಗು, ತಮಿಳು, ಬಂಗಾಳಿ, ಮಲಿಯಾಳಂ, ಮರಾಠಿ, ಪಂಜಾಬಿ, ಕಾಶ್ಮೀರಿ, ಫ್ರೆಂಚ್, ಟರ್ಕಿಷ್, ಜರ್ಮನ್ ಮತ್ತು ರಷ್ಯನ್ ಭಾಷೆಗಳನ್ನು ಕಲಿಯಲು ಅವಕಾಶವಿದೆ.