ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಲೆಗಳ ಉಬ್ಬರವಿಳಿತದ ಶಕ್ತಿ

ಸಮುದ್ರದ ಅಲೆಗಳು ಏಳುವಾಗ ಬೀಳುವಾಗ ಉತ್ಪನ್ನವಾಗುವ ಶಕ್ತಿ (ಟೈಡಲ್ ಪವರ್).

ಈ ಅಲೆಗಳಲ್ಲಿ ಮೂರು ವಿಧಗಳಿವೆ:

  1. ಗಾಳಿಯ ಅಲೆಗಳು;
  2. ತೆರೆನೊರೆ (ಸರ್ಫ್);
  3. ಅಲೆಗಳ ಉಬ್ಬರವಿಳಿತ ಅಥವಾ ಭರತವಿಳಿತ.


ಗಾಳಿಯ ಅಲೆಗಳು 10,000 ಟನ್ ತೂಕದ ಜಹಜುಗಳನ್ನು ನೂರಾರು ಸೆಂಮೀ ಎತ್ತರಕ್ಕೆ ಎತ್ತಬೇಕಾಗಿದ್ದರೆ ಅವುಗಳಲ್ಲಿ ಅಪಾರ ಶಕ್ತಿಯಿರಬೇಕು. ಆದರೆ ಈ ಶಕ್ತಿ ನಿರಂತರವಾಗಿ ದೊರಕುವುದಿಲ್ಲ. ತೆರೆನೊರೆಯಿಂದ ಶಕ್ತಿಕೇಂದ್ರಗಳನ್ನು ಸ್ಥಾಪಿಸಲು ಎಲ್ಲ ಕಡಲ ತೀರಗಳೂ ಒಂದೇ ಕ್ರಮದಲ್ಲಿ ನಡೆಯುವ ಖಗೋಳೀಯ ಘಟನೆಯಾದ್ದರಿಂದ ಅದು ಯಾವಾಗ ಬರುವುದೆಂದು ಮುಂಚೆಯೇ ಹೇಳಬಹುದು.


ಭರತದ ಮುಖ್ಯ ಕಾರಣ ಚಂದ್ರನ ಗುರುತ್ವಾಕರ್ಷಣ ಬಲ. ಚಂದ್ರ ಭೂಮಿಯನ್ನು ಆಕರ್ಷಿಸುತ್ತದೆ. ಭೂಮಿಯ ಮುಕ್ಕಾಲು ಭಾಗವನ್ನು ಆವರಿಸಿ ಚಲನೆಗೆ ಪ್ರತಿರೋಧವನ್ನು ಕೊಡದೆ ಇರುವ ನೀರಿನ ಮೇಲ್ಮೈ ಇದರಿಂದ ಕೊಂಚ ಉಬ್ಬುತ್ತದೆ. ಜೊತೆಗೆ ಸೂರ್ಯ ಹೀಗೆಯೇ ಸಮುದ್ರವನ್ನು ಉಬ್ಬಿಸುತ್ತದೆ. ಅಮಾವಾಸ್ಯೆ ಮತ್ತು ಹುಣ್ಣಿಮೆಗಳಲ್ಲಿ ಸೂರ್ಯ ಮತ್ತು ಚಂದ್ರರಿಂದ ಸಂಭವಿಸಿದ ಉಬ್ಬುಗಳು ಒಂದೇ ದಿಕ್ಕಿನಲ್ಲಿದ್ದು ಭರತಗಳು ಎತ್ತರವಾಗಿರುತ್ತವೆ. ಸೂರ್ಯ ತಗ್ಗನ್ನು ಮಾಡುವ ಕಡೆ ಚಂದ್ರ ಉಬ್ಬನ್ನು ಮಾಡಿದರೆ ಭರತ ಕೊಂಚ ತಗ್ಗುತ್ತದೆ. ತೆರೆದ ಕಡಲಿನಲ್ಲಿ ಇದು ಸೌಮ್ಯವಾಗಿರುತ್ತದೆ. ಸಮುದ್ರತೀರದಲ್ಲಿ ಒಳಚಾಚುಗಳಿದ್ದರೆ ಅದ್ಭುತವಾದ ದೃಶ್ಯಗಳು ಕಾಣಿಸುತ್ತವೆ. ಇಂಗ್ಲೆಂಡಿನಲ್ಲಿ ಸೆವರ್ನ್ ನದೀಮುಖದಲ್ಲಿ 7-15 ಮೀ ಎತ್ತರದ ಉಬ್ಬರ ಸಾಮಾನ್ಯ. ಲಂಡನ್ ನಗರಕ್ಕೆ ಮೊದಲು ಕುಡಿಯುವ ನೀರು ದೊರೆತದ್ದು ಥೇಮ್ಸ್ ನದಿಯ ಸೇತುವೆಯ ಮೇಲೆ ಸ್ಥಾಪಿತವಾದ ಹುಟ್ಟುಗಾಲಿಯಿಂದ (ಪ್ಯಾಡಲ್ ವೀಲ್).


ಉಬ್ಬರ ಶಕ್ತಿಯನ್ನು ಬಳಸಲು ಹಲವು ಮಾರ್ಗಗಳಿವೆ. ನದಿಯ ಅಳಿವೆಯಲ್ಲಿ ಸುಮಾರು 6 ಮೀ ಎತ್ತರದ ಭರತವಿದ್ದು ಕಟ್ಟೆಯನ್ನು ಕಟ್ಟಬಹುದಾದ ಹಳ್ಳವಿದ್ದರೆ ಕಟ್ಟೆಯಲ್ಲಿ ಬಾಗಿಲುಗಳನ್ನಿಟ್ಟು ಉಬ್ಬರದ ಕಾಲದಲ್ಲಿ ಎಲ್ಲ ಬಾಗಿಲುಗಳನ್ನೂ ತೆರೆದು ಹಳ್ಳವನ್ನು ತುಂಬಬಹುದು. ಉಬ್ಬರ ಎತ್ತರಕ್ಕೆ ಹೋದಾಗ ಬಾಗಿಲುಗಳನ್ನು ಮುಚ್ಚಿ ಕೂಡಿಟ್ಟ ನೀರನ್ನು ತಿರುಬಾನಿಗಳ ಮೂಲಕ ಬಿಡಬಹುದು. ಕಟ್ಟೆಯ ಎರಡು ಮುಖಗಳಲ್ಲಿಯೂ ನೀರು ಒಂದೇ ಮಟ್ಟಕ್ಕೆ ಬರುವವರೆಗೂ ಕೆಲವು ಗಂಟೆಗಳ ಕಾಲ ಈ ನೀರು ಒದಗುತ್ತದೆ.


ಎತ್ತರದ ಉಬ್ಬರದ ಮಟ್ಟದಲ್ಲಿ ಒಂದು, ತಗ್ಗಿನ ಮಟ್ಟದಲ್ಲಿ ಇನ್ನೊಂದು-ಹೀಗೆ ಎರಡು ಕೊಳಗಳಿದ್ದರೆ ಒಂದೇ ಸಮವಾಗಿ ವಿದ್ಯುತ್ತಿನ ಉತ್ಪಾದನೆಯಾಗುತ್ತದೆ. ಟರ್ಬೊ-ಜನರೇಟರುಗಳನ್ನು ಕೂರಿಸಿದ ಕಟ್ಟೆ ಈ ಕೊಳಗಳನ್ನು ಪ್ರತ್ಯೇಕಿಸುತ್ತದೆ. ಟರ್ಬೈನುಗಳಿಂದ (ತಿರುವಾನಿ) ನೀರು ತಗ್ಗಿನ ಕೊಳಕ್ಕಾದರೂ ಬೀಳಬಹುದು. ಇಲ್ಲವೆ ನೇರವಾಗಿ ಸಮುದ್ರವನ್ನಾದರೂ ಸೇರಬಹುದು. ಸಮುದ್ರದಿಂದ ಕೊಳಗಳಿಗೂ ಕೊಳದಿಂದ ಕೊಳಕ್ಕೂ ಬಾಗಿಲುಗಳನ್ನು ಸರಿಯಾದ ಕಾಲದಲ್ಲಿ ತೆರೆದರೆ ದಿನವೆಲ್ಲ ತಿರುಬಾನಿಗಳನ್ನು ನಡೆಸುವುದು ಸಾಧ್ಯ. ಇದರಲ್ಲಿ ಒಂದು ಕೊಳದ ಯೋಜನೆಯಿಂದ ಬರುವಷ್ಟು ಗರಿಷ್ಠ ವಿದ್ಯುತ್ ಉತ್ಪಾದನೆಯಾಗಲಾರದು. ಆದರೆ ಒಂದೇ ಕೊಳವಿದ್ದರೆ ದಿನಕ್ಕೆ ಎರಡು ಸಾರಿ ವಿದ್ಯುತ್ತಿನ ಉತ್ಪತ್ತಿಯೇ ಇರುವುದಿಲ್ಲ. ಪ್ರತಿಯಾಗಿ ಮತ್ತೆರಡು ಸಾರಿ ಗರಿಷ್ಠ ವಿದ್ಯುತ್ತೂ ಬರುತ್ತದೆ. ಅದು ನಮಗೆ ಆವಶ್ಯಕವಾದದ್ದಕ್ಕಿಂತ ಹೆಚ್ಚಾಗಬಹುದು. ಆಗ ಮತ್ತೊಂದು ಎರಡು ಕೊಳಗಳ ಯೋಜನೆಯನ್ನೂ ಇಡಬಹುದು. ಗರಿಷ್ಠ ಎತ್ತರದ ಉಬ್ಬರ ಬಂದಾಗ ನೀರನ್ನು ಎತ್ತರದಲ್ಲಿರುವ ಎರಡನೆಯ ಕೊಳಕ್ಕೆ ಪಂಪುಮಾಡಿ ಶೇಖರಿಸಿ ಬೇಕಾದಾಗ ಬಳಸಿಕೊಳ್ಳಬಹುದು.


ಇಂಗ್ಲೆಂಡಿನಲ್ಲಿ ಸೆವರ್ನ್ ನದೀಮುಖದಲ್ಲಿಯೂ ಫ್ರಾನ್ಸ್‌ನಲ್ಲಿ ರೋನ್ ನದಿಯಲ್ಲಿಯೂ ಕೆನಡದಲ್ಲಿ ಫಂಡಿ ಕೊಲ್ಲಿಯಲ್ಲಿಯೂ ಈ ಯೋಜನೆಗೆ ಸನ್ನಿವೇಶಗಳು ಅನುಕೂಲವಾಗಿವೆ. ಬೇರೆ ವಿಧಾನಗಳಲ್ಲಿ ತಗಲುವ ವೆಚ್ಚಕ್ಕಿಂತ ಈ ಕ್ರಮದಲ್ಲಿ ಉತ್ಪಾದನಾ ವೆಚ್ಚ ಕೊಂಚ ಹೆಚ್ಚಾಗಿರುವುದರಿಂದ ದೊಡ್ಡ ಯೋಜನೆಗಳಿಗೆ ಅವಕಾಶವಾಗಿಲ್ಲ. ಆದರೆ ಭೂಗರ್ಭದಲ್ಲಿ ಇಂಧನಗಳು ತೀರಿದಂತೆ ಇಂಗ್ಲೆಂಡಿನಂಥ ಪ್ರದೇಶಗಳಲ್ಲಿ ಈ ಯೋಜನೆ ಸಾಧ್ಯವಾಗುತ್ತದೆ. ಸೆವರ್ನ್ ನದಿಗೆ ಅಡ್ಡಲಾಗಿ 4 ಕಿಮೀ ಉದ್ದದ ಕಟ್ಟೆಯನ್ನು ಕಟ್ಟಿ ಒಂದು ಕೊಳದ ಯೋಜನೆಯನ್ನು ಪ್ರಾರಂಭಿಸಬಹುದು. ಸುಮಾರು ಹತ್ತು ಕೋಟಿ ಪೌಂಡು ಖರ್ಚಿನಿಂದ ವರ್ಷಕ್ಕೆ 200 ಕೋಟಿ ಕಿಲೊವಾಟ್ ಗಂಟೆಗಳ (ಕೆಡಬ್ಲೂಎಚ್) ವಿದ್ಯುತ್ತನ್ನು ಉತ್ಪತ್ತಿಮಾಡಿ 10 ಲಕ್ಷ ಟನ್ ಕಲ್ಲಿದ್ದಲನ್ನು ಪ್ರತಿ ವರ್ಷವೂ ಉಳಿಸಬಹುದು.


ನೋವಸ್ಕೋಷಿಯವನ್ನು ಕೆನಡದಿಂದ ಪ್ರತ್ಯೇಕಿಸುವ ಫಂಡಿ ಕೊಲ್ಲಿಯಲ್ಲಿ ಇಂಥ ಎರಡು ಯೋಜನೆಗಳು ಸಾಧ್ಯ. ಪೆಟಕೋಡಿಯಾಕ್ ನದಿಯ ಮೇಲಿನ ಯೋಜನೆಯಿಂದ ವರ್ಷಕ್ಕೆ 130 ಕೋಟಿ ಕಿಲೋವಾಟ್ ಗಂಟೆಗಳಷ್ಟು ವಿದ್ಯುತ್ತು ಬರಬಹುದು. ಪಾಸಮಕ್ವಾಡಿ ಯೋಜನೆಯಲ್ಲಿ ನಡುವೆ ದ್ವೀಪಗಳಿರುವುದರಿಂದ ಕಟ್ಟೆಯ ಖರ್ಚು ಕಡಿಮೆಯಾಗುತ್ತದೆ. ಇಲ್ಲಿ 60 ಕೋಟಿ ಕಿಲೊವಾಟ್ ಗಂಟೆಗಳ ಶಕ್ತಿಯನ್ನು ಒಂದೇ ಸಮವಾಗಿ ತೆಗೆಯುವುದು ಸಾಧ್ಯ. ಖರ್ಚು ಕಲ್ಲಿದ್ದಲಿನ ಯೋಜನೆಯ ಎರಡರಷ್ಟು ಆಗುತ್ತದೆ. ಆದರೆ ಇನ್ನೊಂದು ಶತಮಾನದ ಅನಂತರವೂ ಹೀಗೆಯೇ ಕಲ್ಲಿದ್ದಲು ಸಿಕ್ಕುತ್ತದೆಯೆ? ಉಬ್ಬರವಿಳಿತಗಳು ಮಾತ್ರ ನಿಲ್ಲುವುದಿಲ್ಲ. ಭಾರತದಲ್ಲಿಯೂ ನದೀ ಮುಖಜ ಭೂಮಿಯಲ್ಲಿ ಇಂತಹುದೇ ಯೋಜನೆಗಳು ಸಾಧ್ಯ. (ಉಬ್ಬರವಿಳಿತಗಳು)