ಒಂದು ವಸ್ತು ಅಥವಾ ಆಸ್ತಿ ಹಳೆಯದಾಗುವುದು, ನಶಿಸುವುದು, ಮಾರುಕಟ್ಟೆ ಬೆಲೆ ಕುಗ್ಗುವುದು ಆಸ್ತಿ ನಷ್ಟವಾಗುವುದು ಅಥವಾ ಅದರ ಮೌಲ್ಯ ಕುಗ್ಗುವುದು. ಇಂಥ ಕ್ರಿಯೆಗೆ ಅವಮೂಲ್ಯನ, ಮೌಲ್ಯಹ್ರಾಸ, ಅಪಮೌಲ್ಯ (ಡಿಪ್ರಿಷಿಯೇಷನ್) ಎಂಬ ಹೆಸರುಗಳಿವೆ.
ಲಾಭಗಳಿಕೆಯ ಸಾಮರ್ಥ್ಯ ಕುಗ್ಗಿದಾಗ ಎಲ್ಲ ಆಸ್ತಿಗಳೂ ಅವಮೂಲ್ಯನಕ್ಕೆ ಗುರಿಯಾಗುತ್ತವೆ. ಸಾಮಾನ್ಯವಾಗಿ ಆಸ್ತಿಯನ್ನು ಬಳಸಬಹುದಾದ ಕಾಲ, ರಿಪೇರಿ ಮತ್ತು ಹೊಸ ಸಾಧನಗಳ ಸೇರಿಕೆ, ಆಸ್ತಿಯ ಮೂಲಬೆಲೆ-ಇವುಗಳಂತೆಯೇ ಇದೂ ಉದ್ದಿಮೆ ವೆಚ್ಚಗಳಲ್ಲಿ ಒಂದಾಗಿದೆ.
ಪ್ರತಿವರ್ಷ ಮೂಲಬೆಲೆಯ ಗೊತ್ತಾದ ಸೇಕಡವಾರು ಭಾಗ ಹಣವನ್ನು ಅದು ನಶಿಸುವ ಲೆಕ್ಕದ ಮೇಲೆ ಕಳೆಯುವುದು ಇಲ್ಲವೇ ವರ್ಷಕ್ಕೆ ಇಷ್ಟೆಂದು ಎಣಿಕೆ ಹಾಕುವುದು. ಇಲ್ಲವೇ ವರ್ಷಂಪ್ರತಿ ಅವಮೂಲ್ಯನ ನಿಧಿಯನ್ನು ಕೂಡಿಸುವುದು - ಈ ರೀತಿ ಆಸ್ತಿಯ ಅವಮೂಲ್ಯನವನ್ನು ಎದುರಿಸಬೇಕಾಗುತ್ತದೆ.