ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅವಿಭಾಜ್ಯದಾಯ

ಏಕವಾರಸ ಪದ್ಧತಿಯ ದಾಯಕ್ಕೆ ಈ ಹೆಸರಿದೆ. ದಾಯವೆಂದರೆ ಪೂರ್ವಜರಿಂದ ವಾರಸು ಹಕ್ಕಾಗಿ ಬರುವ ಆಸ್ತಿ. ಭಾರತದ ಯಾವುದೇ ಜನದಲ್ಲಾಗಲಿ ಇದು ವಾರಸುದಾರರಲ್ಲಿ ಹಂಚಿ ಹೋಗುವಂಥದು. ಆದರೆ ಇಂಗ್ಲೆಂಡ್‌ನಂಥ ದೇಶಗಳಲ್ಲಿ ದೊಡ್ಡ ಆಸ್ತಿ ಸಂಬಂಧಗಳಲ್ಲಿ ಅರಸೊತ್ತಿಗೆಯ ವಿಷಯದಲ್ಲಿದ್ದಂತೆ ಏಕವಾರಸು ಪದ್ಧತಿಯೇ ಜಾರಿಯಲ್ಲಿದೆ. ಇಂಥ ಅವಿಭಾಜ್ಯದಾಯ ಯಾವುದೇ ಕುಟುಂಬದಲ್ಲಿ ಪೂರ್ವ ಸಂಪ್ರದಾಯ ಕ್ಕನುಗುಣವಾಗಿ ಬರಬಹುದು. ಇಲ್ಲವೆ ದೊಡ್ಡ ದೊಡ್ಡ ನವಾಬರ, ಜಹಗೀರುದಾರರ ಮನೆತನದಲ್ಲಿ ಆ ಸಂಬಂಧವಾಗಿ ಮಾಡಿದ ಕಾಯಿದೆಯ ಮೂಲಕ ಬರಬಹುದು. ಇದಲ್ಲದೆ ಹಿಂದೆ ಸರ್ಕಾರ ಅಥವಾ ರಾಜಮಹಾರಾಜರು ಕೆಲವು ವ್ಯಕ್ತಿಗಳಿಗೆ ಅವರು ಎಸಗಿದ ಘನತರ ರಾಜಸೇವೆಯನ್ನು ಮನ್ನಿಸಿ ಗೌರವದ ಸ್ಥಾನವನ್ನೂ ದೊಡ್ಡ ಆಸ್ತಿಯನ್ನೂ ಕೊಡುವಾಗ ಆ ಹುದ್ದೆಯ ಗೌರವಕ್ಕೆ ಧಕ್ಕೆ ಬರಬಾರದೆಂದು ಆ ಆಸ್ತಿಯನ್ನು ಏಕವಾರಸು ಪದ್ಧತಿಯ ಷರತ್ತಿನ ಮೇಲೆ ಕೊಡುತ್ತಿದ್ದರು. ಇವು ಷರತ್ತಿಗನುಸಾರವಾಗಿ ಏಕವಾರಸು ಪದ್ಧತಿಯಿಂದ ಅವಿಭಾಜ್ಯವಾಗಿ ವಂಶಪಾರಂಪರ್ಯವಾಗಿ ಅನುಭವಿಸಲ್ಪಡುತ್ತಿದ್ದುವು. ಈಗ ಪ್ರಜಾಪ್ರಭುತ್ವಕ್ಕನುಗುಣವಾಗಿ ಇಂಥ ದೊಡ್ಡ ದೊಡ್ಡ ಜಮೀನ್ದಾರಿಯನ್ನೂ ಇನಾಮು, ಸರಂಜಾಮು, ಜಹಗೀರು, ಪಾಳ್ಯಗಳನ್ನೂ ರದ್ದುಗೊಳಿಸುವ ಕಾಯಿದೆಗಳು ಜಾರಿಯಲ್ಲಿ ಬಂದಿವೆ.


ಪೂರ್ವದಿಂದಲೂ ಏಕವಾರಸು ಪದ್ಧತಿಯಿರುವ ಹಿಂದು ಕುಟುಂಬಗಳಲ್ಲಿ 1956ರಿಂದ ಆ ಪದ್ಧತಿ ನಿರ್ನಾಮಗೊಂಡು, ಎಲ್ಲ ಹಿಂದೂಗಳಿಗೆ ಏಕಸ್ವರೂಪದ ವಾರಸುಕಾಯಿದೆ ಜಾರಿಗೆ ಬಂತು. ಅವಿಭಾಜ್ಯ ಆಸ್ತಿಯ ಅನುಭವದಾರ ಮೃತಹೊಂದಿದೊಡನೆ ಅದು ಅವನ ಎಲ್ಲ ವಾರಸುದಾರರಿಗೆ ಹಂಚಿ ಹೋಗುವುದು. ಆ ಕಾಯಿದೆಗೆ ಅಪವಾದ ರೂಪವಾಗಿ 5ನೆಯ ಕಲಮಿನಲ್ಲಿ ಕೆಲವೊಂದು ಆಸ್ತಿಗಳಿಗೆ ಏಕವಾರಸು ಕಾಯಿದೆ ಅನ್ವಯಿಸುವುದಿಲ್ಲವೆಂದು ಸ್ಪಷ್ಟಗೊಳಿಸಿದ್ದಾರೆ. ಅವು ಹೀಗಿವೆ: ಯಾವುದೇ ಸಂಸ್ಥಾನದ ರಾಜರೊಡನೆ ಭಾರತ ಸರ್ಕಾರ ಮಾಡಿಕೊಂಡ ಒಪ್ಪಂದದ ಕರಾರಿನಂತೆ ಏಕವಾರಸು ಪದ್ಧತಿ ರದ್ದಾಗದ ಆಸ್ತಿಗಳು; ಈ ಕಾಯಿದೆಗಿಂತ ಪೂರ್ವದಲ್ಲಿ ಜಾರಿಗೆ ತಂದ ಕಾಯಿದೆ ಪ್ರಕಾರ ಏಕವಾರಸು ಪದ್ಧತಿಯುಳ್ಳ ಜಮೀನ್ದಾರಿಗಳು; ಮತ್ತು ಕೊಚ್ಚಿನ್ ಮಹಾರಾಜರ ಆಳ್ವಿಕೆಯಲ್ಲಿ ಮೊದಲು ಇದ್ದ ಜಮೀನ್ದಾರಿ ಮತ್ತು ಅರಮನೆಯ ಆಸ್ತಿಗಳು-ಇವು ಹಿಂದೂ ವಾರಸು ಕಾಯಿದೆಯ ಕಕ್ಷೆಯಿಂದ ಹೊರಗಿವೆ.


ಇದರಂತೆ ಜಮೀನ್ದಾರಿ ನಿರ್ಮೂಲನ ಕಾಯಿದೆಗಳಿಂದ ಅಬಾಧಿತವಾಗಿ ಉಳಿದ, ಹಿಂದಿನ ಕಾಯಿದೆಗಳಿಂದ ನಿಯಮಿಸಲ್ಪಟ್ಟ ನವಾಬರ ಜಮೀನ್ದಾರಿ ಮೊದಲಾದುವುಗಳೂ ಅವಿಭಾಜ್ಯದಾಯ ಆಸ್ತಿಗಳಾಗಿಯೇ ಉಳಿದಿವೆ. ಅವಿಭಾಜ್ಯದಾಯದ ಸ್ವರೂಪದ ಬಗ್ಗೆ ಹಿಂದೆ ಅನೇಕ ಪ್ರೀವೀ ಕೌನ್ಸಿಲ್ಲಿನ ನಿರ್ಣಯಗಳು ವಿವರವಾಗಿವೆ. ಅವುಗಳ ಸಾರಾಂಶವೆಂದರೆ ಅವಿಭಾಜ್ಯದಾಯ ಕುಟುಂಬದ ಪೂರ್ವ ಸಂಪ್ರದಾಯದಿಂದ ಉಂಟಾದದ್ದರಿಂದ ಅದರ ವೈಶಿಷ್ಟ್ಯಗಳು ಆ ಕಾಯಿದೆ ಮತ್ತು ಆ ಕೊಡುಗೆಯ ಷರತ್ತುಗಳಿಂದ ನಿರ್ಣಯಿಸಲ್ಪಡತಕ್ಕವು. ಅಂಥ ವಿಶೇಷ ನಿಯಮಗಳಿಲ್ಲವಾದಾಗ ಸಾಧಾರಣ ನಿಯಮಗಳು ಅನ್ವಯಿಸುವುವು. ಆ ಕುಟುಂಬದ ವಿಶಿಷ್ಟ ಸಂಪ್ರದಾಯದಿಂದ ಹಿಂದೂ ಸರ್ವಸಾಧಾರಣ ಕಾಯಿದೆ ಬದಲಾಗ ದಿದ್ದರೆ ಅವಿಭಾಜ್ಯ ಆಸ್ತಿಗಳಿಗೂ ಆ ಕಾಯಿದೆಯನ್ನು ಅವಿಭಾಜ್ಯತೆಗೆ ಸುಸಂಗತವಾಗುವಂತೆ ಅನ್ವಯಿಸತಕ್ಕದ್ದು. ಸರ್ ದೀನಷಾ ಮುಲ್ಲಾ ಅವರು (ಶಿವಪ್ರಸಾದಸಿಂಗ್‌ನ ವಿರುದ್ಧ ಪ್ರಯೋಗ ಕುಮಾರಿದೇವಿ ಕೇಸಿನಲ್ಲಿ) ಅವಿಭಾಜ್ಯ ಆಸ್ತಿಯ ಬಗೆಯ ಕಾಯಿದೆಯನ್ನು ಹಿಂದೂ ಅವಿಭಕ್ತಕುಟುಂಬದ ಕಾಯಿದೆಯೊಡನೆ ಹೋಲಿಸಿ ಈ ರೀತಿ ಹೇಳಿದ್ದಾರೆ. ಅವಿಭಾಜ್ಯತೆ ಮುಖ್ಯವಾಗಿ ಪುರಾತನ ಸಂಪ್ರದಾಯದಿಂದ ಬಂದುದು. ಸಾಧಾರಣ ಅವಿಭಕ್ತ ಕುಟುಂಬದ ಜನರಿಗೆ ಈ ಕೆಳಗಿನ ಹಕ್ಕುಗಳಿವೆ:

1. ಪಾಲು ಕೇಳುವ ಹಕ್ಕು.

2. ಕುಟುಂಬದ ಯಜಮಾನ ಕುಟುಂಬದ ಖರ್ಚಿಗಲ್ಲದೆ ಆ ಆಸ್ತಿಯನ್ನು ಪರಾಧೀನ ಮಾಡದಂತೆ ಅವನನ್ನು ನಿಯಂತ್ರಿಸುವ ಹಕ್ಕು.

3. ಅಶನ ವಸನದ ಹಕ್ಕು.

4. ಮೃತನ ಆಸ್ತಿಯನ್ನು ಉಳಿದವರು ಅವಿಭಕ್ತ ಒಡೆತನದ ಸಂಬಂಧದಿಂದ ಪಡೆಯುವ ಹಕ್ಕು .


ಅವಿಭಾಜ್ಯ ಆಸ್ತಿಗಳಲ್ಲಿ ಪಾಲು ಕೇಳುವ ಹಕ್ಕಾಗಲಿ, ಪರಾಧೀನಗೊಳಿಸುವುದನ್ನು ನಿಯಂತ್ರಿಸುವ ಹಕ್ಕಾಗಲಿ, ಅಶನ ವಸನಗಳ ಹಕ್ಕಾಗಲಿ ಉಳಿಯಲಾರವು. ಏಕೆಂದರೆ ಅವು ಪೂರ್ವಜರ ಆಸ್ತಿಯಿಂದ ಪ್ರಾಪ್ತವಾದುವು. ಅವಿಭಾಜ್ಯ ಆಸ್ತಿಯಲ್ಲಿ ಕುಟುಂಬದ ಉಳಿದವರಿಗೆ ಪಾಲು ಇಲ್ಲದ್ದರಿಂದ ಇವು ದೊರೆಯುವುದಿಲ್ಲ. ಆದರೆ ಹಿಂದೂ ಕಾಯಿದೆಯ ವಿಶಿಷ್ಟ ಸ್ವರೂಪವಾದ ಮೃತರ ಆಸ್ತಿಯನ್ನು ಅವಿಭಕ್ತ ಕುಟುಂಬದಲ್ಲಿ ಉಳಿದವರು ಪಡೆಯುವ ಸರ್ವಸಾಧಾರಣ ಹಕ್ಕು ಮಾತ್ರ ಅವಿಭಾಜ್ಯತೆಗೆ ವಿಸಂಗತವಲ್ಲದ್ದರಿಂದ ಉಳಿಯುವುದು.


ಈ ಮೇಲೆ ಹೇಳಿದ ವೈಶಿಷ್ಟ್ಯಗಳನ್ನು ಸಹ ಆ ಕುಟುಂಬದಲ್ಲಿನ ಪುರಾತನ ಸಂಪ್ರದಾಯ ದಂತೆ ಬದಲಿಸಬಹುದು. ಅವಿಭಾಜ್ಯ ಆಸ್ತಿಯ ಧಾರಕನ ಪುತ್ರ ಪೌತ್ರರಿಗೂ ಅಶನ ವಸನದ ಹಕ್ಕು ಸರ್ವಸಾಧಾರಣವಾಗಿ ಎಲ್ಲ ಕುಟುಂಬಗಳಲ್ಲಿಯೂ ಇದೆ ಎಂಬುದಾಗಿ ನಿರ್ಣಯವಾಗಿದೆ. ಕುಟುಂಬದ ಉಳಿದವರಿಗೆ ಆ ಹಕ್ಕು ಇದೆ. ಅಂಥ ಸಂಪ್ರದಾಯವನ್ನು ಸಿದ್ಧಮಾಡಿದರೆ ಮಾತ್ರ ದೊರೆಯುವುದು. ತದ್ಭಿನ್ನ ಪುರಾತನ ಸಂಪ್ರದಾಯಭಾವದಲ್ಲಿ, ಅವಿಭಾಜ್ಯ ಆಸ್ತಿಯ ವಾರಸು ವಿಷಯದಲ್ಲಿ ಸಹ ಹಿಂದೂಗಳಿಗೆ ಸರ್ವಸಾಧಾರಣ ಹಿಂದೂ ಕಾಯಿದೆಯೂ ಉಳಿದವರಿಗೆ ಅವರವರ ಜಾತೀಯ ಕಾಯಿದೆಯೂ ಅನ್ವಯಿಸು ವುದು. ಆದರೆ ಅವಿಭಾಜ್ಯತ್ವಕ್ಕೆ ಆನುಷಂಗಿಕವಾಗಿ ಒಂದಕ್ಕಿಂತ ಹೆಚ್ಚು ವಾರಸುದಾರರಿದ್ದರೂ ಒಬ್ಬನೇ ವಾರಸುದಾರನಿಗೆ ಅದು ಹೋಗುವುದು. ಹೆಚ್ಚಾಗಿ ಜ್ಯೇಷ್ಠಪುತ್ರನೇ ಆ ವಾರಸುದಾರ. ಜ್ಯೇಷ್ಠಶಾಖೆ ನಷ್ಟವಾದಲ್ಲಿ ಅದರ ಕೆಳಗಿನ ಹಿರಿಯ ಶಾಖೆ, ಅದೂ ನಷ್ಟವಾದಲ್ಲಿ ಅದಕ್ಕೂ ಕೆಳಗಿನ ಶಾಖೆಯ ಸಮೀಪದ ಒಬ್ಬನೇ ವಾರಸುದಾರನಿಗೆ ಆ ಆಸ್ತಿ ಅವಿಭಾಜ್ಯವಾಗಿ ಹೋಗುವುದು. ಅವಿಭಾಜ್ಯ ಆಸ್ತಿ ಪಿತ್ರಾರ್ಜಿತವಿದ್ದರೂ ಅದರ ಉತ್ಪನ್ನ ಆಸ್ತಿಧಾರಕನ ಸ್ವಯಾರ್ಜಿತವೆಂದು ಗಣಿಸಲ್ಪಡುವುದು. ಅಲ್ಲದೆ ಅವನ ಇತರ ಗಳಿಕೆಗಳು ಸ್ವಯಾರ್ಜಿತ. ಆದರೆ ಆತ ಆ ಗಳಿಕೆಗಳನ್ನು ಅವಿಭಾಜ್ಯ ಆಸ್ತಿಯೊಡನೆ ಅಭಿನ್ನವಾಗುವಂತೆ ಸೇರಿಸಿ ಏಕರೂಪದಲ್ಲಿ ಅನುಭವಿಸುತ್ತ ಬಂದರೆ, ಅವಿಭಾಜ್ಯ ಆಸ್ತಿಯಲ್ಲಿ ಏಕತ್ರಗೊಳಿಸುವಂಥ ಇಚ್ಛೆಯನ್ನು ಈ ರೀತಿ ಸ್ಪಷ್ಟಗೊಳಿಸಿದ್ದರೆ ಅವೂ ಅವಿಭಾಜ್ಯತೆಯನ್ನು ಹೊಂದುವುವು. ಇಲ್ಲವಾದರೆ ಸಾಧಾರಣ ಹಿಂದೂ ಕಾಯಿದೆಯ ವಾರಸು ಕ್ರಮದಂತೆ ಅವನ ಅನಂತರದ ವಾರಸುದಾರರಿಗೆ ಅವರ ಸ್ವಂತ ಗಳಿಕೆಗಳು ಹೋಗುವುವು.