ಅಹಲ್ಯೆ ಪ್ರಾತಃ ಸ್ಮರಣೀಯರಾದ ಪಂಚಕನ್ಯೆಯರಲ್ಲಿ ಒಬ್ಬಳು. ಗೌತಮನ ಸತಿ. ಮಹಾಪತಿವ್ರತೆಯೆಂದು ಪ್ರಸಿದ್ಧಳಾದವಳು. ತಂದೆ ಮುದ್ಗಲ ಮಹರ್ಷಿ. ಸೋದರ ದೀವೋದಾಸ. ಮಗ ಶತಾನಂದ. ತುಂಬ ರೂಪವತಿಯಾದ ಈಕೆಯನ್ನು ಇಂದ್ರ ಮೋಹಿಸಿ ಗಂಡ ಆಶ್ರಮದಲ್ಲಿಲ್ಲದ್ದಾಗ ಅವನ ವೇಷವನ್ನು ಧರಿಸಿ ಅವಳ ಸಂಗವನ್ನು ಬಯಸಿ ಬಂದ. ಈ ವೃತ್ತಾಂತ ಗೌತಮ ಋಷಿಗೆ ತಿಳಿದು ಆಕೆಯನ್ನು ಶಿಲೆಯಾಗೆಂದು ಶಪಿಸಿದ. ಶ್ರೀರಾಮನ ಪಾದಸ್ಪರ್ಶದಿಂದ ಶಾಪ ವಿಮೋಚನೆಯಾಗುವುದೆಂದು ತಿಳಿಸಿದ. ಅಲ್ಲಿನವರೆಗೂ ಯಾರ ಕಣ್ಣಿಗೂ ಬೀಳದೆ ಪರಿತಪಿಸುತ್ತಿರಬೇಕೆಂದು ಶಾಪವಿತ್ತಂತೆ ರಾಮಾಯಣದಲ್ಲಿ ಹೇಳಿದೆ. ರಾಮದರ್ಶನಾನಂತರ ಶಾಪಮುಕ್ತಳಾದ ಅಹಲ್ಯೆಯನ್ನು ಗೌತಮ ಸ್ವೀಕರಿಸಿದ. ಈ ಕಥೆ ಮಹಾಭಾರತದಲ್ಲೂ ರಾಮಾಯಣದಲ್ಲೂ ಬರುತ್ತದೆ. ಗೌತಮನ ಶಿಷ್ಯನಾದ ಉದಂಕ ಗುರುದಕ್ಷಿಣೆಗಾಗಿ ಅಹಲ್ಯೆಯ ಇಷ್ಟದಂತೆ ಸೌದಾಸರಾಜಪತ್ನಿಯ ಓಲೆಗಳನ್ನು ತಂದುಕೊಟ್ಟ ಕಥೆ ಪ್ರಸಿದ್ಧವಾಗಿದೆ.

ಕನ್ನಡದಲ್ಲಿ ಪು.ತಿ.ನ ಅವರ `ಅಹಲ್ಯೆ` ಎಂಬುದು ಬಹು ಸುಂದರವಾದ ನೀತಿನಾಟಕ. (ಎಸ್.ಕೆ.ಆರ್.)