ಆದರ್ಶರಾಜ್ಯ :- ಮಾನವಆಡಳಿತವ್ಯವಸ್ಥೆಯಿಂದುಂಟಾಗುವ ಯಾವ ವಿಧವಾದ ಲೋಪದೋಷವೂ ಇಲ್ಲದ ಸರ್ವಲಕ್ಷಣಸಂಪನ್ನವಾದ ಮಾದರಿ ರಾಜ್ಯ (ಯುಟೋಪಿಯ). ಈ ಲೋಕದಲ್ಲೇ ನಮ್ಮಿಂದ ದೂರ ಬೇರೊಂದೆಡೆಯಲ್ಲಿ ಅಂಥದೊಂದು ರಾಜ್ಯವಿದೆಯೆಂದು ಬಣ್ಣಿಸುವ ಗ್ರಂಥಗಳೂ ಲೇಖನಗಳೂ ಪ್ಲೇಟೊನ ಕಾಲದಿಂದಲೂ ಪ್ರಪಂಚ ಸಾಹಿತ್ಯದಲ್ಲಿ ಸಿಗುತ್ತವೆ. ಆದರ್ಶರಾಜ್ಯದ ಕನಸು ಕಂಡವರು ಬಹುಶಃ ಪ್ಲೇಟೊಗಿಂತ ಹಿಂದೆಯೂ ಇದ್ದಿರಬಹುದು. ಸುಪ್ರಸಿದ್ಧ ನಗರ ಶಿಲ್ಪಿಯಾಗಿದ್ದ ಗ್ರೀಸಿನ ಹಿಪ್ಪೊಡಾಮಸ್ ಎಂಬುವನು ಇಂಥ ಆದರ್ಶರಾಜ್ಯವನ್ನು ಚಿತ್ರಿಸುವ ಅನೇಕ ಪ್ರಬಂಧಗಳನ್ನು ರಚಿಸಿದ್ದನೆಂದು ಅರಿಸ್ಟಾಟಲ್ ತನ್ನ ರಾಜನೀತಿ ಶಾಸ್ತ್ರದಲ್ಲಿ ಹೇಳುತ್ತಾನೆ. ಆದರೆ ಈ ರೀತಿಯ ಗ್ರಂಥರಚನೆಗೆ ಹೆಚ್ಚು ಸ್ಫೂರ್ತಿ ನೀಡಿದವ ಪ್ಲೇಟೊ. ಅವನ ರಿಪಬ್ಲಿಕ್ ಎಂಬ ಉದ್ಗ್ರಂಥ ಇಂಥ ಗ್ರಂಥಗಳ ಸೃಷ್ಟಿಗೆ ನಾಂದಿಯಾಯಿತು. ಈ ಲೋಕದ ಪ್ರತಿಯೊಂದು ವಸ್ತುವಿಗೂ ಉದಾತ್ತವಾದ ಬೇರೊಂದು ಮೂಲವಸ್ತು ಬೇರೊಂದೆಡೆಯಲ್ಲಿದೆ ಎನ್ನುತ್ತಾನೆ. ಪ್ಲೇಟೊ ಪರಿಪೂರ್ಣವಾದ, ಉತ್ಕøಷ್ಟವಾದ ಸಮಾಜವೊಂದರ ಆದರ್ಶ ಚಿತ್ರವನ್ನು ರಚಿಸಿದಾಗ ಅದು ಈ ಲೋಕದ, ಈ ಸಮಾಜದ ರಚನೆ ಹೇಗಿರಬೇಕು ಎಂದು ತೋರಿಸಬಲ್ಲುದೆಂದು ಅವನ ಅಭಿಪ್ರಾಯ. ತನ್ನ ಮಹಾಗ್ರಂಥದಲ್ಲಿ ಪ್ಲೇಟೊ ಸಾಮಾನ್ಯ ಜೀವನದ ನಾನಾ ಮುಖಗಳನ್ನು ಚಿತ್ರಿಸುವುದಲ್ಲದೆ, ಧರ್ಮ ನೀತಿ ದರ್ಶನಗಳ ಪರಮಗುರಿಯನ್ನೂ ಚರ್ಚಿಸುತ್ತಾನೆ.
ಪ್ಲೇಟೊನಿಂದ ಸ್ಫೂರ್ತಿ ಪಡೆದವರಲ್ಲಿ 15ನೆಯ ಶತಮಾನದ ಇಂಗ್ಲೆಂಡಿನ ಸರ್ ಥಾಮಸ್ ಮೋರ್ ಮೊದಲನೆಯವ. ಆದರ್ಶರಾಜ್ಯಗಳನ್ನು ವರ್ಣಿಸುವ ಗ್ರಂಥಗಳಿಗೆ ಯುಟೋಪಿಯನ್ ಸಾಹಿತ್ಯವೆಂದು ಹೆಸರು ಬಂದುದು ಅವನ ಯುಟೋಪಿಯ ಎಂಬ ಗ್ರಂಥದಿಂದ. ಯುಟೋಪಿಯ ಎಂಬ ಪದ ಒಂದು ರೀತಿಯ ಶ್ಲೇಷೋಕ್ತಿ. ಔuಣoಠಿiಚಿ ಎಂದರೆ ಇಲ್ಲದ ರಾಜ್ಯವೆಂದೂ ಇuಣoಠಿiಚಿ ಎಂದರೆ ಒಳ್ಳೆಯ ರಾಜ್ಯವೆಂದೂ ಅರ್ಥವಾಗುತ್ತದೆ. ಅನೇಕ ಗ್ರಂಥಗಳಲ್ಲಿ ಈ ಎರಡೂ ಬಗೆಯ ರಾಜ್ಯದ ಕಲ್ಪನೆಯಿದೆ.
ಒಂದನೆಯದು, ಪಲಾಯನ ಸೂತ್ರವನ್ನು ಅನುಸರಿಸಿ ಬರೆದ ಆದರ್ಶರಾಜ್ಯದ ಚಿತ್ರ. ಇದರಲ್ಲಿ ಸಾಹಿತಿ ತಾನು ಕಾಣಬಯಸುವ, ಮೋಹಕವಾದ ಕನಸಿನ ಚಿತ್ರವನ್ನು ಕಲ್ಪಿಸುತ್ತಾನೆ. ಇದು ವಾಸ್ತವ ಪ್ರಪಂಚದಿಂದ ದೂರವಾಗಿದ್ದು, ಕೆಲವು ವೇಳೆ ಅಸಾಧ್ಯವಾದ ಆದರ್ಶಗಳಿಂದ ಕೂಡಿರುತ್ತದೆ. ಲೌಕಿಕ ಅನುಭವಕ್ಕೆ ಮೀರಿದ್ದರೂ ಇದು ಚೆಂದ. ಲೋಕ ಹೀಗಿದ್ದರೆ ಎಷ್ಟು ಸುಂದರ ಎನ್ನುವ ಭಾವನೆಯನ್ನು ಹುಟ್ಟಿಸುತ್ತದೆ. ಉದಾಹರಣೆಗೆ, 17ನೆಯ ಶತಮಾನದಲ್ಲಿ ಇಂಗ್ಲೆಂಡಿನ ಫ್ರಾನ್ಸಿಸ್ ಬೇಕನ್ ರಚಿಸಿದ ದಿ ನ್ಯೂ ಅಟ್ಲಾಂಟಿಸ್ ಎಂಬ ಗ್ರಂಥದಲ್ಲಿ ಆದರ್ಶರಾಜ್ಯದ ಸುಂದರ ಕಲ್ಪನೆಯಿದೆ. ಹೊಸ ಪ್ರಪಂಚವನ್ನು ಹುಡುಕಲು ಹೊರಟ ಪ್ರವಾಸಿಗರ ತಂಡ ದ್ವೀಪವೊಂದನ್ನು ತಲುಪಿ, ಅಲ್ಲಿನ ದೊರೆಯಾದ ಸಾಲಮನ್ ರಚಿಸಿರುವ ಸುವ್ಯವಸ್ಥಿತ ಅರಮನೆಯನ್ನು ಸೇರುವರು. ಇಲ್ಲಿ ರಾಜಕಾರಣಿಗಳ ಸುಳಿವಿಲ್ಲ, ಚುನಾವಣೆಗಳಲ್ಲಿ ಗೆದ್ದು ದರ್ಪದಿಂದ ಮೆರೆಯುವ ಜನನಾಯಕರ ಕೋಟಲೆಯಿಲ್ಲ, ರಾಜಕೀಯ ಪಕ್ಷಗಳಿಲ್ಲ, ಭಾಷಣಗಳ ರೋಗವಿಲ್ಲ, ಸುಳ್ಳು, ಅನ್ಯಾಯ ಮತದ್ವೇಷಗಳ ಹೆಸರೇ ಇಲ್ಲ. ಇಲ್ಲಿನ ಜನ ವಿಜ್ಞಾನದ ಪ್ರಗತಿಯನ್ನು ಸಾಧಿಸಬೇಕೆಂಬ ಒಂದೇ ಗುರಿಯತ್ತ ಸಾಗುತ್ತಿದ್ದಾರೆ. ತಾಂತ್ರಿಕರು, ಶಿಲ್ಪಿಗಳು, ವಿಜ್ಞಾನಿಗಳು, ದಾರ್ಶನಿಕರು - ಇವರುಗಳೇ ಈ ದ್ವೀಪದ ಆಡಳಿತಗಾರರು. ಇಲ್ಲಿನ ಸರ್ಕಾರ ಮಾನವನನ್ನು ಬಂಧಿಸುವಂಥ ಕಟ್ಟುಪಾಡುಗಳನ್ನು ರಚಿಸುವ ಹವ್ಯಾಸಕ್ಕೆ ಬೀಳದೆ, ಪ್ರಕೃತಿಯನ್ನು ಹೇಗೆ ಹತೋಟಿಯಲ್ಲಿಟ್ಟು ಮಾನವ ಪ್ರಗತಿಗಾಗಿ ಅಳವಡಿಸಬಹುದು ಎಂಬ ಜಿಜ್ಞಾಸೆಯಲ್ಲೇ ತೊಡಗಿದೆ. ಹೀಗೆ, ವಿಜ್ಞಾನದ ಮುನ್ನಡೆಯ ಮೂಲಕ ಮಾನವಸಮಾಜವನ್ನು ಪರಿಪೂರ್ಣಗೊಳಿಸಿ ಈ ಲೋಕದಲ್ಲೇ ದಿವ್ಯ ಸಮಾಜವೊಂದನ್ನು ಸೃಷ್ಟಿಸಬಹುದೆಂಬ ತನ್ನ ಕನಸನ್ನು ಬೇಕನ್ ಈ ಗ್ರಂಥದಲ್ಲಿ ಚಿತ್ರಿಸಿದ್ದಾನೆ. ಇಂಥ ಅನುಕರಣೀಯವಾದ ಆದರ್ಶಗಳನ್ನುಳ್ಳ ಸಮಾಜಗಳ ಚಿತ್ರಣವನ್ನು ನಾವು ಟೊಮಾಸೋ, ಕ್ಯಾಂಪೆನೆಲ್ಲೊನ ದಿ ಸಿಟಿ ಆಫ್ ದಿ ಸನ್ ಗಾಡ್, ಅರ್ಲ್ ಬುಲ್‍ವರ್ ಲಿಟ್ಟನ್‍ನ ದಿ ಕಮಿಂಗ್ ರೇಸ್ ಮುಂತಾದ ಗ್ರಂಥಗಳಲ್ಲಿ ಕಾಣಬಹುದು. ಈ ಗ್ರಂಥಗಳ ಹೆಸರುಗಳನ್ನು ಪರಿಶೀಲಿಸಿದರೆ ಇವುಗಳಲ್ಲಿ ಅಡಗಿರುವ ಆದರ್ಶರಾಜ್ಯದ ಕಲ್ಪನೆಯ ಅರಿವಾಗದಿರದು.
ಥಾಮಸ್ ಮೋರ್‍ನ ಗ್ರಂಥದ ಶೀರ್ಷಿಕೆಯಲ್ಲಿ (ಯುಟೋಪಿಯ) ಅಡಕವಾಗಿರುವ ಮತ್ತೊಂದು ಭಾವನೆಯೆಂದರೆ, ಸಮಾಜವನ್ನು ಸುವ್ಯವಸ್ಥಿತಗೊಳಿಸುವುದರ ಮೂಲಕ ಪುನರುಜ್ಜೀವನಗೊಳಿಸಬೇಕೆನ್ನುವ ಆದರ್ಶ. ಕೆಲವು ವೇಳೆ ಇಂಥ ಕಾಲ್ಪನಿಕ ಲೋಕದ ಚಿತ್ರದ ಮೂಲಕ ನಾವಿರುವ ಸಮಾಜದ ಲೋಪದೋಷಗಳನ್ನು ವಿಡಂಬನೆ ಮಾಡುವ ಗ್ರಂಥಗಳೂ ಇತ್ತೀಚೆಗೆ ವಿಪುಲವಾಗಿ ಬರುತ್ತಿವೆ. ಸಮಾಜವನ್ನು ಪುನರುಜ್ಜೀವನಗೊಳಿಸಬೇಕೆಂಬ ಆದರ್ಶದಿಂದ ಬರೆದ ಗ್ರಂಥಗಳು 16ನೆಯ ಮತ್ತು 17ನೆಯ ಶತಮಾನದಿಂದೀಚೆಗೆ ಹೆಚ್ಚಾಗಿ ರಚಿತವಾದವು. ಜನರು ಧಾರ್ಮಿಕ ಹಾಗೂ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಆ ಕಾಲದಲ್ಲಿ, ಹೊಸ ಹೊಸ ಭೂಭಾಗಗಳನ್ನು ಕಂಡುಹಿಡಿದ ಸಾಹಸಿಗಳು, ಹೊಸ ಖಂಡವೊಂದರಲ್ಲಿ ತಮಗೆ ಬೇಕಾದಂಥ ಸಮಾಜವನ್ನು ರಚಿಸಿಕೊಂಡು ಸುಖದಿಂದಿರಬಹುದೆಂಬ ಕನಸು ನನಸಾಗಲು ಸಾಧ್ಯವೆಂದು ತೋರಿಸಿಕೊಟ್ಟರು. 18ನೆಯ ಶತಮಾನದಲ್ಲಿ ರೂಸೊ, ವಾಲ್ಟೇರ್ ಮುಂತಾದವರ ಆದರ್ಶವಾದದಿಂದ ಚೇತನಗೊಂಡ ಅನೇಕ ಸಾಹಿತಿಗಳು ಇಂಥ ಗ್ರಂಥಗಳನ್ನು ರಚಿಸಿದರು. ಈ ಮಾದರಿಯವಕ್ಕೆ ಥಾಮಸ್ ಮೋರ್‍ನ ಗ್ರಂಥವೇ ಉತ್ತಮ ನಿದರ್ಶನ. ಥಾಮಸ್ ಮೋರ್ ಆ ಶತಮಾನದ ಉದ್ದಾಮ ಲ್ಯಾಟಿನ್ ಪಂಡಿತ, ಸುಪ್ರಸಿದ್ಧ ವಕೀಲ. ಒಂದು ಕಾಲದಲ್ಲಿ ಪಾರ್ಲಿಮೆಂಟಿನ ಸದಸ್ಯನಾಗಿದ್ದ. ತನ್ನ ಗ್ರಂಥವನ್ನು ಮಾತೃ ಭಾಷೆಯಾದ ಇಂಗ್ಲಿಷಿನಲ್ಲಿ ಬರೆಯದೆ, ಲ್ಯಾಟಿನ್ನಿನಲ್ಲಿ ಬರೆದ. ಪ್ಲೇಟೊನ ರಿಪಬ್ಲಿಕ್ ಗ್ರಂಥದಿಂದಲೂ ಆಗತಾನೇ ಪೋರ್ಚುಗೀಸ್ ಮತ್ತು ಸ್ಪೇನಿನ ನಾವಿಕರು ನಡೆಸಿದ್ದ ಭೂಗೋಳ ಯಾತ್ರೆಯ ಕಥೆಗಳಿಂದಲೂ ಇಟಲಿ ದೇಶದ ಅಮೆರಿಗೊ ವೆಸ್ಪೂಚಿಯ ಸಮುದ್ರಯಾನದ ಸಾಹಸ ಕಥೆಗಳಿಂದಲೂ ಸ್ಫೂರ್ತಿ ಪಡೆದು ಮೋರ್ ತನ್ನ ಗ್ರಂಥವನ್ನು ರಚಿಸಿದ. ಮೋರ್‍ನ ಇಲ್ಲದ ರಾಜ್ಯ ಒಂದು ರೀತಿಯ ಸುಖೀರಾಜ್ಯ. ಯುದ್ಧದಿಂದ ಮಾನವ ಸಮಸ್ಯೆಗಳ ಪರಿಹಾರ ಅಸಾಧ್ಯವೆಂದು ಹೇಳಿ, ಸೈನಿಕರನ್ನು ಕೊಲೆಗಡುಕರೆಂದು ಆತ ಕರೆಯುತ್ತಾನೆ. ಜನ ಚಿನ್ನವನ್ನಾಗಲಿ ಆಸ್ತಿಪಾಸ್ತಿಗಳನ್ನಾಗಲಿ ಕೂಡಿಡುವುದನ್ನು ನಿಷೇಧಿಸುತ್ತಾನೆ. ಪ್ರತಿಯೊಬ್ಬ ಪ್ರಜೆಗೂ ಕಡ್ಡಾಯವಾಗಿ ಕೆಲಸವನ್ನು ವಿಧಿಸಬೇಕು; ರಾಜ್ಯದ ಸುಖ ಸಂತೋಷಗಳಲ್ಲಿ ಪ್ರತಿಯೊಬ್ಬನೂ ಸಮಾನ ಹಕ್ಕುದಾರ; ಎಲ್ಲ ಜಾತಿ ಮತದವರಿಗೂ ಸರಿಸಮಾನವಾದ ಹಕ್ಕುಬಾಧ್ಯತೆಗಳಿರಬೇಕು; ಪರಮಸಹಿಷ್ಣುತೆ ರಾಜ್ಯದ ಪರಮ ಗುರಿಯಾಗಬೇಕು; ಕ್ರೈಸ್ತಮತದೊಡನೆ ಉಳಿದ ಧರ್ಮಗಳಿಗೂ ಸಮಾನ ಹಕ್ಕಿರಬೇಕು - ಎಂದು ಮೋರ್ ವಾದಿಸುತ್ತಾನೆ. ಹೀಗೆ ಆದರ್ಶಗಳ, ಬೇಕು ಬೇಡಗಳ, ಪಟ್ಟಿಯನ್ನೇ ತನ್ನ ಗ್ರಂಥದಲ್ಲಿ ಕೊಡುತ್ತಾನೆ. ಆದರೆ ಪರಮತಸಹಿಷ್ಣುತೆಯನ್ನೂ ಸರ್ವಧರ್ಮಗಳ ಸಮಾನತೆಯನ್ನೂ ಮುಕ್ತಕಂಠದಿಂದ ಹೊಗಳಿದ ಥಾಮಸ್ ಮೋರ್ ಹತ್ತು ವರ್ಷಗಳ ಅನಂತರ ಪ್ರಾಟೆಸ್ಟೆಂಟರನ್ನು ಪೀಡಿಸುವುದರಲ್ಲಿ ಅಗ್ರಗಾಮಿಯಾದುದೂ ತನ್ನ ಧರ್ಮದ ರಕ್ಷಣೆಗಾಗಿ ಉಗ್ರವಾಗಿ ಹೋರಾಡಿ ತನ್ನ ಪ್ರಾಣವನ್ನೇ ತೆತ್ತುದೂ ಒಂದು ರೀತಿಯ ವಿರೋಧಾಭಾಸವೇ ಸರಿ.
ಆದರ್ಶಗಳು, ತತ್ತ್ವಗಳು ಮತ್ತು ವಾಸ್ತವಿಕ ನಡೆವಳಿಕೆ - ಇವುಗಳ ನಡುವೆ ಉಂಟಾಗುವ ಇಂಥ ವಿರೋಧಾಭಾಸಗಳನ್ನೂ ಕೆಲವು ಗ್ರಂಥಗಳಲ್ಲಿ ಲೇಖಕರು ಚಿತ್ರಿಸಿದ್ದಾರೆ. ಪ್ರವಾಸಕಥನಗಳ ಮೂಲಕ ಸಮಾಜದ ವಿಡಂಬನೆ ಮಾಡುವ ಪ್ರಯತ್ನವೂ ನಡೆದಿದೆ. ಕೆಲವು ಲೇಖಕರು ತಾವು ಚಿತ್ರಿಸುವ ಆದರ್ಶರಾಜ್ಯದ ಚಿತ್ರ ಕೇವಲ ಕನಸಿನ ಚಿತ್ರವಾಗದೆ, ಅದರ ವಾಸ್ತವಿಕತೆ ಹೆಚ್ಚಲೆಂದು ತಮ್ಮ ಕಲ್ಪನಾರಾಜ್ಯಗಳನ್ನು ಶಿಸ್ತು ಸಂಯಮ ದರ್ಪಗಳಿಂದ ಕೂಡಿದ ಸರ್ವಾಧಿಕಾರ ಪ್ರಭುತ್ವಗಳನ್ನಾಗಿ ಪರಿವರ್ತಿಸಿದ್ದಾರೆ. ಪ್ಲೇಟೊ, ಲುಕಿಂಗ್ ಬ್ಯಾಕ್‍ವರ್ಡ್ (ಸಿಂಹಾವಲೋಕನ) ಎಂಬ ಗ್ರಂಥವನ್ನು ಬರೆದ ಬೆಲ್ಲೆಮಿ, ವಾಯೇಜ್ ಟು ಐಕೇರಿಯ ಎಂಬ ಗ್ರಂಥವನ್ನು ಬರೆದ ಕ್ಯಾಬೇಟ್ ಮುಂತಾದವರು ಚಿತ್ರಿಸಿರುವ ಆದರ್ಶಸಮಾಜಗಳು ಮಿಲಿಟರಿ ಸರ್ವಾಧಿಕಾರವುಳ್ಳ ಸ್ವರ್ಗಗಳು. ಇವು ನಮ್ಮ ಕಾಲದ ಫ್ಯಾಸಿಸ್ಟ್ ಸರ್ವಾಧಿಕಾರಗಳು ಬಲಪ್ರಯೋಗದಿಂದ ರಕ್ತಪಾತದಿಂದ ಜಾರಿಗೆ ತಂದ ಕೆಲವು ಸ್ವರ್ಗಲೋಕಗಳನ್ನು ಹೋಲುವುದಾದರೆ ಆಶ್ಚರ್ಯವಿಲ್ಲ. ಆದರ್ಶಗಳನ್ನು ಕಲ್ಪನೆಯ ಕನಸಿನ ಪ್ರಪಂಚದಿಂದ ವಾಸ್ತವ ಪ್ರಪಂಚಕ್ಕೆ ತಂದಾಗ ಉಂಟಾಗುವ ವಿರೋಧಾಭಾಸವನ್ನು ಜಾರ್ಜ್ ಆರ್ವೆಲ್‍ರಂಥ ವಾಸ್ತವವಾದಿಗಳೂ ವಿಡಂಬನಕಾರರೂ ತೋರಿಸಿದ್ದಾರೆ. ಆರ್ವೆಲ್‍ನ `ನೈನ್‍ಟೀನ್ ಎಯ್‍ಟಿಫೋರ್ ಮುಂತಾದ ವಿಡಂಬನಾತ್ಮಕ ಕಾದಂಬರಿಗಳಲ್ಲಿ ಆದರ್ಶ ರಾಜ್ಯದ ಕರಾಳ ವಾಸ್ತವಿಕತೆಯ ಪ್ರಜ್ಞೆಯಿದೆ; ಅದನ್ನು ಗೇಲಿ ಮಾಡುವ ಪ್ರಯತ್ನವಿದೆ.
ಆದರ್ಶರಾಜ್ಯದ ಕಲ್ಪನೆಯನ್ನು ವಿಡಂಬನೆಯ ಮಾಧ್ಯಮವಾಗಿ ಉಪಯೋಗಿಸಿದವರಲ್ಲಿ ಅರಿಸ್ಟೋಫೆನೀಸ್ ಬಹುಶಃ ಮೊಟ್ಟಮೊದಲನೆಯವ. ಅವನ ಸುಪ್ರಸಿದ್ಧ ಹರ್ಷನಾಟಕಗಳಾದ ದಿ ಬಡ್ರ್ಸ್, ದಿ ಕ್ಲೌಡ್ಸ್ ಮುಂತಾದ ಗ್ರಂಥಗಳಲ್ಲಿ ತನ್ನ ಕಾಲದ ರಾಜಕಾರಣಿಗಳನ್ನೂ, ತಾರ್ಕಿಕರನ್ನೂ, ಯುದ್ಧಪಿಪಾಸೆಯಿಂದ ಬಳಲುವ ನಾಯಕರನ್ನೂ ತಮಾಷೆ ಮಾಡುತ್ತಾನೆ. ಹಕ್ಕಿಗಳ ರಾಜ್ಯಕ್ಕೆ ಮುಗಿಲಿನ ರಾಜ್ಯವೆಂದು ಹೆಸರಿಟ್ಟಿರುವುದು ಉಚಿತವಾಗಿದೆ. ಅನಂತರ 18ನೆಯ ಶತಮಾನದಲ್ಲಿ ವಿಡಂಬನಸಾಹಿತ್ಯ ಯೂರೋಪಿನಲ್ಲಿ ಹೆಚ್ಚು ಜನಪ್ರಿಯವಾಯಿತು. ಇಂಗ್ಲೆಂಡಿನ ಜೊನಾಥನ್ ಸ್ವಿಫ್ಟ್ ತನ್ನ ಗಲಿವರ್ಸ್ ಟ್ರಾವಲ್ಸ್ ಎಂಬ ಗ್ರಂಥದಲ್ಲಿ ಸಮಕಾಲೀನ ರಾಜಕಾರಣಿಗಳನ್ನೂ, ಸಾಹಿತಿಗಳನ್ನೂ, ವಿಜ್ಞಾನಿಗಳನ್ನೂ ಟೀಕಿಸಿ ಕುಚೋದ್ಯ ಮಾಡುತ್ತಾನೆ. ಗಲಿವರ್ ತನ್ನ ಪ್ರವಾಸ ಕಾಲದಲ್ಲಿ ಆಕಸ್ಮಿಕವಾಗಿ ಭೇಟಿ ಕೊಡುವ ಲಿಲಿಪುಟ್ ನಗರ, ಬ್ರಾಂಬ್‍ಡಿಂಗ್‍ನಾಂಗ್ ನಗರ, ಲೊಗ್ಯಾಡೋ ಪಂಡಿತರ ಸಭೆ, ಹ್ಯೂನಿಮ್ಸ್ ಎಂಬ ಅತಿಮಾನವ ಕುದುರೆಗಳ ರಾಜ್ಯ, ಸ್ಟ್ರಲ್ಡ್‍ಬರ್ಗ್ ಎಂಬ ಕರಾಳ ಮಾನವಪಿಶಾಚಿಗಳ ರಾಜ್ಯ - ಇವೆಲ್ಲವೂ ಆದರ್ಶರಾಜ್ಯದ ಸರ್ವತೋಮುಖವಾದ ಚಿತ್ರಗಳು. ಇಂಥ ವಿಡಂಬನೆಯನ್ನು ನಾವು ಸ್ಯಾಮ್ಯುಯಲ್ ಬಟ್ಲರ್‍ನ ಎರವ್ಹಾನ್, ಆಲ್ಡಸ್ ಹಕ್ಸ್‍ಲೇಯ ಬ್ರೇವ್ ನ್ಯೂವರ್ಲ್ಡ್ ಮತ್ತು ಏಪ್ ಅಂಡ್ ಎಸೆನ್ಸ್ ಮುಂತಾದ ಗ್ರಂಥಗಳಲ್ಲೂ ಕಾಣಬಹುದು. ಎಚ್. ಬಿ. ವೆಲ್ಸ್ ಮುಂತಾದವರು ಬರೆದ ವಿಜ್ಞಾನಪ್ರಪಂಚದ ಕಟ್ಟುಕಥೆಗಳಲ್ಲೂ ಇಂಥ ಆದರ್ಶ ಲೋಕದ ಚಿತ್ರಣವಿದೆ.
ಪ್ರವಾಸಕಥೆ, ಕಟ್ಟುಕಥೆ, ಕಾದಂಬರಿಗಳಲ್ಲಿ ಮಾತ್ರವಲ್ಲದೆ, ರೂಸೊ, ರಾಬರ್ಟ್ ಓವೆನ್, ಏಂಜೆಲ್ಸ ಮುಂತಾದವರು ರಾಜನೀತಿ, ಶಿಕ್ಷಣ ಮತ್ತು ಸಮಾಜಶಾಸ್ತ್ರಗಳನ್ನು ಕುರಿತು ಬರೆದ ಗ್ರಂಥಗಳಲ್ಲೂ ಲೇಖನಗಳಲ್ಲೂ ಇಂಥ ರಾಜ್ಯದ ಆದರ್ಶಗಳ ವರ್ಣನೆ, ವಿಡಂಬನೆ, ಟೀಕೆ ಕಂಡುಬರುತ್ತವೆ. ಸೋಷಿಯಲಿಸಮ್ - ಯುಟೋಪಿಯನ್ ಅಂಡ್ ಸೈನ್ಟಿಫಿಕ್ ಎಂಬ ತನ್ನ ಗ್ರಂಥದಲ್ಲಿ ಏಂಜೆಲ್ಸ್ ಇಲ್ಲದ ರಾಜ್ಯವನ್ನು ಚಿತ್ರಿಸುವ ಆದರ್ಶವಾದಿಗಳನ್ನು ಕೇವಲ ಗಾಳಿಗೋಪುರ ಕಟ್ಟುವ ಮಾತಿನ ಮಲ್ಲರೆಂದು ತೆಗಳುತ್ತಾನೆ.
ಆದರೆ ಆದರ್ಶ ರಾಜ್ಯವನ್ನು ಚಿತ್ರಿಸುವ ಆದರ್ಶವಾದಿಗಳೆಲ್ಲರೂ ಕೇವಲ ಕೆಲಸಕ್ಕೆ ಬಾರದ ಕನಸುಗಾರರಲ್ಲ. ಅನೇಕರು ಮಾನವಸಮಾಜದ ಕುಂದುಕೊರತೆಗಳನ್ನು ಎತ್ತಿ ತೋರಿಸಿ, ಓರೆಕೋರೆಗಳನ್ನು ತಿದ್ದುವ ಸಮಾಜ ಸುಧಾರಕರಾಗಿದ್ದಾರೆ. ಮನುಷ್ಯನ ಜೀವನಕ್ಕೆ ಇಂದು ವ್ಯವಸ್ಥೆ, ಪ್ರಗತಿಯ ಸಾಧನೆಗಾಗಿ ಒಂದು ಕಾರ್ಯಕ್ರಮ ಇರಬೇಕೆಂದು ಬೆಲ್ಲೆಮಿಯ ವಾಯೇಜ್ ಟು ಐಕೇರಿಯ ಮುಂತಾದ ಗ್ರಂಥಗಳು ಸಾರಿವೆ. ವಿಲಿಯಮ್ ಮಾರಿಸ್ ರಚಿಸಿದ ನ್ಯೂಸ್ ಫ್ರಾಮ್ ನೊವೇರ್ ಎಂಬ ಗ್ರಂಥದಲ್ಲಿ ಹಳ್ಳಿಗಾಡಿನ ಸುಂದರ ಪ್ರಕೃತಿಯ ವರ್ಣನೆಯಿದೆ. ಈ ಗ್ರಂಥದಿಂದ ಸ್ಫೂರ್ತಿ ಹೊಂದಿ ಜೇಮ್ಸ್ ನಿಲ್ಕ್ ಬಕಿಂಗ್ ಹ್ಯಾಮ್ ಎಂಬಾತ ನ್ಯಾಷನಲ್ ಇವಿಲ್ಸ್ ಅಂಡ್ ಪ್ರಾಕ್ಟಿಕಲ್ ರೆಮೆಡೀಸ್ ಎಂಬ ಪುಸ್ತಕವನ್ನು ಬರೆದು ಆಧುನಿಕ ನಗರನಿರ್ಮಾಪಕರಿಗೊಂದು ಹೊಸ ದಾರಿ ತೋರಿಸಿದ. ಪ್ರತಿ ನಗರವನ್ನೂ ಶುಚಿಯಾಗಿಟ್ಟು, ಪ್ರತಿಯೊಂದು ಕಡೆಯೂ ಸುಂದರ ಉದ್ಯಾನವನಗಳನ್ನು ನಿರ್ಮಿಸಬೇಕೆಂದು ಘೋಷಿಸಿದ. ಇದರಿಂದ ಅಮೆರಿಕದಲ್ಲಿ ದೊಡ್ಡದೊಂದು ಉದ್ಯಾನನಗರಗಳ ಚಳವಳಿ ಪ್ರಾರಂಭವಾಯಿತು. ಹೀಗೆ ಇಲ್ಲದ ರಾಜ್ಯದ ಕನಸನ್ನು ಕಾಣುವ ಅನೇಕ ಆದರ್ಶವಾದಿಗಳು ಲೋಕಕಲ್ಯಾಣಕ್ಕೆ ಸಹಾಯಕರಾಗಿದ್ದಾರೆ. (ಎಚ್.ಕೆ.ಆರ್.; ಎನ್.ಎಸ್.ಎಚ್.)