ಆಮ್ರಪಾಲಿ- ಬುದ್ಧನ ಸಮಕಾಲೀನಳಾದ ವೇಶ್ಯೆ. ಅಪೂರ್ವ ಸುಂದರಿಯಾದ ಈಕೆಯ ಸ್ನೇಹವನ್ನು ಬಯಸಿ ಅನೇಕ ಶ್ರೀಮಂತರು ಇವಳ ಮನೆಯ ಬಾಗಿಲಲ್ಲಿ ಗುಂಪಾಗಿ ಕಾಯುತ್ತಿದ್ದರು ಎಂದು ಕಥೆಯಿದೆ. ಹಾಗಾಗಿ ಈಕೆ ಅಪಾರವಾದ ಐಶ್ವರ್ಯಕ್ಕೆ ಒಡತಿಯಾದಳು. ಅನಂತರ ಬುದ್ಧನ ಆಧ್ಯಾತ್ಮಿಕ ಪ್ರಭಾವಕ್ಕೆ ಒಳಗಾಗಿ ತನ್ನ ಪೂರ್ವ ಜೀವನವನ್ನು ಬಿಟ್ಟು ಗೃಹಿಭಕ್ತೆಯಾದಳು. ಬುದ್ಧ ಇವಳಿಂದ ಭಿಕ್ಷೆಯನ್ನು ಸ್ವೀಕರಿಸಿದ. ತನ್ನ ಒಂದು ಮಾವಿನ ತೋಪನ್ನು (ಆಮ್ರವನ) ಸಂಘದ ಉಪಯೊಗಕ್ಕೆ ದಾನ ಮಾಡಿದ್ದರಿಂದ ಇವಳಿಗೆ ಆಮ್ರಪಾಲಿ ಎಂದು ಹೆಸರು ಬಂತು ಎಂಬುದೂ ಒಂದು ಕಥೆ. (ಪಿ.)