ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆರ್ಟೀಸಿಯನ್ ಬಾವಿ

ಆರ್ಟೀಸಿಯನ್ ಚಿಲುಮೆ ಎಂದು ಕರೆಯುತ್ತಾರೆ. ಪ್ರಪಂಚದ ಅನೇಕ ಕಡೆ ಇವು ಜನರಿಗೆ ಮತ್ತು ಬೇಸಾಯಕ್ಕೆ ವರ್ಷದುದ್ದಕ್ಕೂ ನೀರನ್ನು ಒದಗಿಸುತ್ತ ಪ್ರಕೃತಿ ನಮಗೆ ದಯಪಾಲಿಸಿದ ಅಕ್ಷಯಪಾತ್ರೆಗಳೆನಿಸಿವೆ.

ಆರ್ಟೀಸಿಯನ್ ಬಾವಿ

ಪ್ರಖ್ಯಾತ ಅಂತರ್ಜಲ ವಿಜ್ಞಾನಿ ಮೆಯಿನ್ಜರ್ ಶಾಶ್ವತ ಜಲಮಟ್ಟಕ್ಕಿಂತ ಮೇಲ್ಭಾಗದಲ್ಲಿ ನೀರು ದೊರೆಯುವ ಬಾವಿಯನ್ನು ಆರ್ಟೀಸಿಯನ್ ಬಾವಿ ಎಂದು ಕರೆಯುತ್ತಾರೆ. ಆಳದಲ್ಲಿ ಹುದುಗಿರುವ ನೀರು ಈ ಬಾವಿಗಳ ಮೂಲಕ ನಮಗೆ ಒದಗುತ್ತದೆ. ಇವು ಉಂಟಾಗಲು ಭೂಭಾಗದಲ್ಲಿ ಅಡಕವಾಗಿರುವ ಶಿಲೆಗಳ ಒಂದು ವಿಶೇಷ ವಿನ್ಯಾಸವು ಮುಖ್ಯ ಕಾರಣ. ಹೀಗಾಗಿ ಎಲ್ಲೆಂದರಲ್ಲಿ ಆರ್ಟೀಸಿಯನ್ ಬಾವಿಯನ್ನು ತೋಡಲು ಸಾಧ್ಯವಾಗಲಾರದು. ಒಂದು ನಿರ್ದಿಷ್ಟವಾದ ಶಿಲಾವಿನ್ಯಾಸವಿದ್ದ ಕಡೆ ಮಾತ್ರ ಇವು ಸಾಧ್ಯ. ಶಿಲೆಗಳು ಪ್ರಸ್ತರೀ ಸ್ವರೂಪವನ್ನು ಹೊಂದಿದ್ದು ಅಷ್ಟು ಅಡಕವಲ್ಲದ ರಚನೆಯುಳ್ಳ ಜಲಜ ಶಿಲೆಗಳಾಗಿರಬೇಕು. ಮರಳು ಶಿಲೆ ಇದಕ್ಕೆ ಉತ್ತಮ ಉದಾಹರಣೆ. ಇದು ವಿವಿಧ ಗಾತ್ರದ ಮರಳಿನ ಕಣಗಳಿಂದ ಕೂಡಿ ಕಣಗಳ ಮಧ್ಯೆ ನೀರು ಸುಲಭವಾಗಿ ಜಿನುಗಲು ಅಥವಾ ಪ್ರವೇಶಿಸಲು ಅವಕಾಶವಿದೆ. ಈ ಬಗೆಯ ಸರಂಧ್ರ ಮತ್ತು ವ್ಯಾಪ್ಯಶಿಲೆಗಳು ಉತ್ತಮ ಜಲವಾಹಕಗಳೂ ಹೌದು. ಇವುಗಳ ಇಕ್ಕೆಲಗಳಲ್ಲೂ ಅವ್ಯಾಪ್ಯ ಶಿಲೆಗಳು ಹರಡಿದ್ದಲ್ಲಿ ಇವುಗಳಲ್ಲಿ ಜಿನುಗುವ ನೀರು ಪೋಲಾಗದೆ ಶೇಖರವಾಗುತ್ತ ಹೋಗುತ್ತದೆ. ಸುಣ್ಣಶಿಲೆ, ಜೇಡು ಶಿಲೆ ಇತ್ಯಾದಿ ಜಲಜ ಶಿಲೆಗಳು ಅವ್ಯಾಪ್ಯ ಶಿಲೆಗಳು ಅಂದರೆ ಮಧ್ಯದಲ್ಲಿನ ಪ್ರಸ್ತರ ಮರಳು ಶಿಲೆ ಅದರ ಕೆಳಗೆ ಜೇಡು ಅಥವಾ ಸುಣ್ಣಶಿಲೆ ಅಲ್ಲದೆ ಅದರ ಮೇಲುಗಡೆಯೂ ಅಂಥದೇ ಶಿಲೆ. ಆದರೆ ಕೇವಲ ಇಷ್ಟಾದರೆ ಸಾಲದು. ನೀರು ಜಿನುಗಿ ಶೇಖರವಾಗಬೇಕಾದರೆ ಈ ಶಿಲಾಪ್ರಸ್ತರಗಳು ಮಡಿಕೆ ಬಿದ್ದು ಬಾಣಲೆಯಂತಾದರೆ ಬಹು ಉತ್ತಮ. ಆಗ ನೆಲದ ಮೇಲಿನ ನೀರು ಮರಳು ಶಿಲಾಪ್ರಸ್ತರದ ಇಕ್ಕೆಲಗಳಲ್ಲೂ ಜಿನುಗಿ ತಗ್ಗಿದ್ದಲ್ಲಿ ಶೇಖರವಾಗುತ್ತ ಹೋಗುತ್ತದೆ. ನೀರಿನ ಶೇಖರಣೆ ಹೆಚ್ಚಿದಂತೆಲ್ಲ ದ್ರವ ಒತ್ತಡವೂ ಅಧಿಕವಾಗುತ್ತ ಹೋಗುತ್ತದೆ. ಅಂಥ ಸ್ಥಳದಲ್ಲಿ ಬಾವಿಯನ್ನು ತೋಡಿದಲ್ಲಿ ಶೇಖರವಾಗಿರುವ ನೀರು ಒತ್ತಡ ಕಡಿಮೆಯಾಗುವ ಕಾರಣ ಮೇಲಕ್ಕೆ ಚಿಮ್ಮಿ ಬರುತ್ತದೆ. ಈ ಬಗೆಯ ಆರ್ಟೀಸಿಯನ್ ಬಾವಿಗಳನ್ನು ಅಧಿಕ ಒತ್ತಡ ಬಾವಿಗಳೆಂದು ಕರೆಯುತ್ತಾರೆ.

ಘರ್ಷಣೆಯಿಲ್ಲದೆ ನೀರು ಮೇಲೇಳುವ ಮಟ್ಟ ಕೆಲವು ಪ್ರದೇಶಗಳಲ್ಲಿ ಇಂಥ ಶಿಲಾಪ್ರಸ್ತರಗಳು ಬಾಣಲೆಯಂತಿರುವ ತಗ್ಗನ್ನು ತೋರ್ಪಡಿಸದೆ ಕೇವಲ ಒಂದೇ ದಿಕ್ಕಿಗೆ ನೆಲಮಟ್ಟದಿಂದ ವಾಲಿರುವುದೂ ಉಂಟು. ಈ ಬಗೆಯ ಶಿಲಾವಿನ್ಯಾಸವೂ ಆರ್ಟೀಸಿಯನ್ ಬಾವಿಗೆ ಉತ್ತಮವಾದದ್ದೇ. ಒತ್ತಡ ಅಧಿಕವಾಗಿದ್ದಲ್ಲಿ ಈ ಸನ್ನಿವೇಶದಲ್ಲೂ ನೀರು ಮೇಲಕ್ಕೆ ಚಿಮ್ಮುತ್ತದೆ.

ಅಮೆರಿಕ ಸಂಯುಕ್ತಸಂಸ್ಥಾನದ ಡಕೋಟ ಪ್ರಾಂತ್ಯದಲ್ಲಿ ಕೆಲವು ಚಿಲುಮೆಗಳ ನೀರು ಇನ್ನೂರು ಅಡಿಗಳಿಗೂ ಹೆಚ್ಚು ಎತ್ತರಕ್ಕೆ ಚಿಮ್ಮುತ್ತದೆ. ಇದೇ ಪ್ರಾಂತ್ಯದ ವೂನ್ಸಾಕೆಟ್ ಎಂಬಲ್ಲಿನ ಆರ್ಟೀಸಿಯನ್ ಬಾವಿಯ ಮೂಲಕ ಚಿಮ್ಮುವ ನೀರು ಬಹು ರಭಸದಿಂದ ಹೊರಬರುತ್ತದೆ. ರಭಸದಲ್ಲಿನ ದ್ರವ ಒತ್ತಡವನ್ನು ರೂಢಿಸಿಕೊಂಡು ಜಲ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲಾಯಿತು. ಅಲ್ಲದೆ ಒಂದು ಹಿಟ್ಟಿನ ಗಿರಣಿಯನ್ನೂ ಈ ವಿದ್ಯುಚ್ಛಕ್ತಿಯ ಮೂಲಕ ನಡೆಸುತ್ತಿದ್ದರು. ಆದರೆ ಈ ತೆರನಾದ ಬಾವಿಗಳ ವಿಸ್ತೀರ್ಣ ಅಷ್ಟಾಗಿರುವುದಿಲ್ಲ. ದ್ರವ ಒತ್ತಡ ಕಡಿಮೆ ಇರುವ ಆರ್ಟೀಸಿಯನ್ ಬಾವಿಗಳನ್ನು ಕಡಿಮೆ ಒತ್ತಡದ ಆರ್ಟೀಸಿಯನ್ ಪ್ರವಾಹಗಳೆಂದೂ ಕರೆಯುತ್ತಾರೆ. ಇವುಗಳ ನೀರು ಎತ್ತರಕ್ಕೆ ಚಿಮ್ಮಲಾರದು; ಆದರೆ ವಿಸ್ತಾರವಾದ ಪ್ರದೇಶಗಳನ್ನು ಆಕ್ರಮಿಸುತ್ತದೆ. ಇವು ಹೆಚ್ಚು ನೀರನ್ನೂ ಒದಗಿಸುತ್ತವೆ. ಅಮೆರಿಕಾದ ನ್ಯೂ ಮೆಕ್ಸಿಕೊ ಪ್ರಾಂತ್ಯದ ಈ ಬಗೆಯ ಆರ್ಟೀಸಿಯನ್ ಬಾವಿಯಲ್ಲಿ ತಿಂಗಳಿಗೆ 6,000 ಗ್ಯಾಲನ್ಗಳಷ್ಟು ಹೆಚ್ಚಿನ ಪ್ರಮಾಣದಲ್ಲಿ ನೀರು ದೊರೆತ ದಾಖಲೆಗಳಿವೆ.


ಆರ್ಟೀಸಿಯನ್ ಬಾವಿಗಳನ್ನು ತೋಡುವ ಕ್ರಮ ಮತ್ತು ಅವುಗಳ ಬಳಕೆ ಪ್ರಾಚೀನ ಕಾಲದ (ಪ್ರ.ಶ.ಪು.೨೦೦೦ ವರ್ಷಕ್ಕೂ ಮುಂಚೆ) ಈಜಿಪ್ಟಿನವರಿಗೆ ತಿಳಿದಿತ್ತು. ಕ್ರೈಸ್ತಧರ್ಮದ ಇತಿಹಾಸದಲ್ಲಿ ಕೇಳಿಬರುವ ಮೋಸೆಸ್ ಇವರಿಂದಲೇ ಬಂಡೆಗಳಲ್ಲಿ ನೀರನ್ನು ಪಡೆಯುವ ವಿದ್ಯೆಯನ್ನು ಕಲಿತನೆಂದು ಪ್ರತೀತಿ. ಅದೇ ಕಾಲದ ಥೀಬನ್, ಷಾಬ್ ಮತ್ತು ಡಾಷೆಲ್ ಓಯಸಿಸ್ಗಳಿಗೆ ಅಸಂಖ್ಯಾತ ಆರ್ಟೀಸಿಯನ್ ಬಾವಿಗಳಿಂದ ನೀರು ಒದಗುತ್ತಿತ್ತೆಂಬ ಅಂಶವನ್ನೂ ಪತ್ತೆ ಹಚ್ಚಲಾಗುತ್ತದೆ. ಅಲ್ಲದೆ ಆ ಕಾಲದಲ್ಲೇ ಕೆಲವು ಆರ್ಟೀಸಿಯನ್ ಬಾವಿಗಳನ್ನು ೧೫೦ ಮೀ ಮೀರಿದ ಆಳಕ್ಕೆ ತೋಡಲಾಗಿತ್ತು.


ಯುರೋಪಿನಲ್ಲಿ ೧೨ನೆಯ ಶತಮಾನದಲ್ಲಿ ಆರ್ಟೀಸಿಯನ್ ಬಾವಿಗಳನ್ನು ತೋಡುವುದು ಮೊದಲಾಯಿತು. ಮೊತ್ತಮೊದಲನೆಯ ಬಾವಿಯನ್ನು ದಕ್ಷಿಣ ಫ್ರಾನ್್ಸನ ಆರ್ಟಾಯ್್ಸ ಪ್ರಾಂತ್ಯದ ಲಿಲಿಯರ್ಸ್ ಬಳಿ ೧೧೨೬ರಲ್ಲಿ ತೋಡಲಾಯಿತು. ಹೀಗಾಗಿ ಆ ಪ್ರಾಂತ್ಯದ ಹೆಸರಿನ ನಂಟು ಈ ಬಗೆಯ ಬಾವಿಗಳಿಗೆ ಅಂಟಿತು. ಮುಂದೆ ೧೭ನೆಯ ಶತಮಾನದಲ್ಲಿ ಇಟಲಿ ಮತ್ತು ಆಸ್ಟ್ರಿಯ ದೇಶಗಳಲ್ಲಿ ಅಸಂಖ್ಯಾತ ಬಾವಿಗಳನ್ನು ತೋಡಿದರು. ಇಂದಿಗೂ ಈ ಬಾವಿಗಳಿಂದ ಅಲ್ಲಿನ ಜನರಿಗೆ ಮಹೋಪಕಾರವಾಗುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಆಧುನಿಕ ವೈಜ್ಞಾನಿಕ ವಿಧಾನಗಳನ್ನನುಸರಿಸಿ ಹೊಸ ಹೊಸ ಭೂಭೌತ ಯಂತ್ರೋಪಕರಣಗಳ ಸಹಾಯದಿಂದ ಆಧುನಿಕ ಭಗೀರಥರು ಪಾತಾಳ ಗಂಗೆಯನ್ನು ಕರಗತ ಮಾಡಿಕೊಂಡಿದ್ದಾರೆ. ಈ ಮೂಲಕ ಪ್ರಪಂಚದ ಅನೇಕ ಭಾಗಗಳಲ್ಲಿ ಸಹಸ್ರಾರು ಆರ್ಟೀಸಿಯನ್ ಬಾವಿಗಳ ಜನಕರಾಗಿದ್ದಾರೆ. ಇದು ಸಾಲದೆ ಹಲವಾರು ಆರ್ಟೀಸಿಯನ್ ಪ್ರವಾಹಗಳನ್ನೇ (ಗುಪ್ತನದಿ) ಪತ್ತೆ ಹಚ್ಚಿದ್ದಾರೆ. ಉತ್ತರ ಅಮೆರಿಕ ಮತ್ತು ಕೆನಡ ದೇಶಗಳಲ್ಲಿ ಕಂಡುಬರುವ ಡಕೋಟ ಮರಳು ಶಿಲಾಪ್ರಸ್ತರ ಈ ದಿಸೆಯಲ್ಲಿ ಮಹತ್ತ್ವಪುರ್ಣವಾದುದು. ಇದು ಮಧ್ಯ ಅಮೆರಿಕ, ಪಶ್ಚಿಮ ಅಮೆರಿಕ ಮತ್ತು ಕೆನಡಗಳಲ್ಲೂ ಸಹಸ್ರಾರು ಮೈಲಿ ವಿಸ್ತೀರ್ಣವಾದ ಪ್ರದೇಶಗಳಲ್ಲಿ ವ್ಯಾಪಿಸಿದೆ. ಇದು ಎತ್ತರದ ರಾಕಿ ಪರ್ವತಶ್ರೇಣಿಗಳಲ್ಲಿ ಮೊದಲಾಗಿ ಪುರ್ವದ ಕಡೆಗೆ ಇಳಿವೋರೆಯನ್ನು ತೋರಿಸುತ್ತ ಸಾಸ್ಕಚವಾನ್, ಮಾಂಟಾನ, ಡಕೋಟ, ವ್ಯೋಮಿಂಗ್, ನೆಬ್ರಾಸ್ಕ ಮತ್ತು ಕಾನ್ಸಾಸ್ ಪ್ರಾಂತ್ಯಗಳಲ್ಲೆಲ್ಲ ನೆಲಮಟ್ಟದಿಂದ ಆಳಕ್ಕೆ ಹುದುಗಿದೆ. ಪರ್ವತ ಪ್ರದೇಶದಲ್ಲಿ ಬಿದ್ದ ಮಳೆಯ ನೀರು ಮರಳುಶಿಲೆಯಲ್ಲಿ ಸುಲಭವಾಗಿ ವ್ಯಾಪಿಸಿ ಆ ಮೂಲಕ ನಾನಾಕಡೆ ತೋಡಿರುವ ಸಹಸ್ರಾರು ಆರ್ಟೀಸಿಯನ್ ಬಾವಿಗಳಿಗೆ ಮೂಲಕಾರಣವಾಗಿದೆ. ಇದಲ್ಲದೆ ಆರ್ಜೆಂಟೀನ ಮತ್ತು ಆಸ್ಟ್ರೇಲಿಯದ ಅನೇಕ ಪ್ರಾಂತ್ಯಗಳಲ್ಲಿ ಇಂದಿಗೂ ಆರ್ಟೀಸಿಯನ್ ಬಾವಿಗಳೇ ಜನರಿಗೆ ಮತ್ತು ಬೇಸಾಯಕ್ಕೆ ಮುಖ್ಯ ಆಸರೆ. ನಮ್ಮ ದೇಶದ ಪಾಂಡಿಚೆರಿಯ ಸುತ್ತಮುತ್ತ ಹಲವಾರು ಆರ್ಟೀಸಿಯನ್ ಬಾವಿಗಳಿವೆ.